Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 18:9-19:37

ಸಮಾರ್ಯಕ್ಕೆ ಅಶ್ಶೂರದವರ ಮುತ್ತಿಗೆ

ಅಶ್ಶೂರದ ರಾಜನಾದ ಶಲ್ಮನೆಸರನು ಸಮಾರ್ಯದ ವಿರುದ್ಧ ಹೋರಾಡಲು ಹೋದನು. ಅವನ ಸೈನ್ಯವು ನಗರವನ್ನು ಸುತ್ತುವರಿಯಿತು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಇದು ಸಂಭವಿಸಿತು. (ಅದು ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಏಳನೆಯ ವರ್ಷದಲ್ಲಿ ಸಂಭವಿಸಿತು.) 10 ಮೂರು ವರ್ಷಗಳ ಕೊನೆಯಲ್ಲಿ ಶಲ್ಮನೆಸರನು ಸಮಾರ್ಯವನ್ನು ವಶಪಡಿಸಿಕೊಂಡನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ವಶಪಡಿಸಿಕೊಂಡನು. (ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಒಂಭತ್ತನೆಯ ವರ್ಷದಲ್ಲಿ ಇದು ಸಂಭವಿಸಿತು.) 11 ಅಶ್ಶೂರದ ರಾಜನು ಇಸ್ರೇಲರನ್ನು, ಸೆರೆಯಾಳುಗಳನ್ನಾಗಿ ಅಶ್ಶೂರಿಗೆ ಒಯ್ದನು. ಅವನು ಅವರನ್ನು ಹಲಹು ಎಂಬ ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ವಾಸಿಸುವಂತೆ ಮಾಡಿದನು. 12 ಇಸ್ರೇಲರು ತಮ್ಮ ದೇವರಾದ ಯೆಹೋವನಿಗೆ ಅವಿಧೇಯರಾದದ್ದೂ ಆತನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದೂ ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ಅವಿಧೇಯರಾದದ್ದೂ ಇದಕ್ಕೆ ಕಾರಣ.

ಯೆಹೂದವನ್ನು ವಶಪಡಿಸಿಕೊಳ್ಳಲು ಅಶ್ಶೂರದವರು ಸಿದ್ಧರಾದರು

13 ಹಿಜ್ಕೀಯನು ರಾಜನಾಗಿದ್ದ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಬಲಾಢ್ಯ ನಗರಗಳ ವಿರುದ್ಧವಾಗಿ ಹೋರಾಡಲು ಹೋದನು. ಸನ್ಹೇರೀಬನು ಆ ನಗರಗಳನ್ನೆಲ್ಲ ಸೋಲಿಸಿದನು. 14 ಆಗ ಯೆಹೂದದ ರಾಜನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು. ಹಿಜ್ಕೀಯನು, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಒಬ್ಬಂಟಿಗನನ್ನಾಗಿ ಬಿಡು. ನಂತರ ನೀನು ಅಪೇಕ್ಷಿಸಿದ್ದನ್ನೆಲ್ಲಾ ಕೊಡುತ್ತೇನೆ” ಎಂದು ಹೇಳಿದನು.

ಆಗ ಅಶ್ಶೂರದ ರಾಜನು ಯೆಹೂದದ ರಾಜನಾದ ಹಿಜ್ಕೀಯನಿಗೆ ಸುಮಾರು ಹನ್ನೊಂದು ಟನ್ ಬೆಳ್ಳಿಯನ್ನು ಮತ್ತು ಒಂದು ಟನ್ ಚಿನ್ನವನ್ನು ಕೊಡುವಂತೆ ಹೇಳಿದನು. 15 ಹಿಜ್ಕೀಯನು ದೇವಾಲಯದಲ್ಲಿದ್ದ ಮತ್ತು ರಾಜನ ಭಂಡಾರದಲ್ಲಿದ್ದ ಬೆಳ್ಳಿಯನ್ನೆಲ್ಲ ನೀಡಿದನು. 16 ಈ ಸಮಯದಲ್ಲಿ, ಹಿಜ್ಕೀಯನು ಯೆಹೋವನ ಆಲಯದ ಬಾಗಿಲುಗಳಿಗೆ ಮತ್ತು ಕದಗಳಿಗೆ ಹೊದಿಸಿದ್ದ ಬಂಗಾರವನ್ನು ಕತ್ತರಿಸಿಹಾಕಿದನು. ರಾಜನಾದ ಹಿಜ್ಕೀಯನು ಈ ಬಾಗಿಲುಗಳ ಮತ್ತು ಕದಗಳ ಮೇಲೆ ಬಂಗಾರವನ್ನು ಹೊದಿಸಿದ್ದನು. ಹಿಜ್ಕೀಯನು ಈ ಬಂಗಾರವನ್ನು ಅಶ್ಶೂರದ ರಾಜನಿಗೆ ನೀಡಿದನು.

ಅಶ್ಶೂರದ ರಾಜನು ಜೆರುಸಲೇಮಿಗೆ ಜನರನ್ನು ಕಳುಹಿಸಿದನು

17 ಅಶ್ಶೂರದ ರಾಜ ಜೆರುಸಲೇಮಿನಲ್ಲಿದ್ದ ರಾಜನಾದ ಹಿಜ್ಕೀಯನ ಬಳಿಗೆ ತನ್ನ ಮೂವರು ಮಹಾಸೇನಾಧಿಪತಿಗಳಾದ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬವರನ್ನು ಮಹಾಸೈನ್ಯದೊಂದಿಗೆ ಕಳುಹಿಸಿದನು. ಅವರು ಲಾಕೀಷಿನಿಂದ ಜೆರುಸಲೇಮಿಗೆ ಹೋದರು. ಅವರು ಮೇಲಿನ ಕೆರೆಯ ನೀರಿನ ಕೊಳವೆಯ ಬಳಿ ನಿಂತರು. (ಮೇಲಿನ ಕೆರೆಯು ರಸ್ತೆಯ ಮೇಲೆ ದೋಭಿಘಾಟ್ ಬಳಿಯಿತ್ತು.) 18 ಈ ಜನರು ರಾಜನನ್ನು ಕರೆದರು. ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಅವರನ್ನು ಭೇಟಿಮಾಡಲು ಹೊರಗೆ ಬಂದರು.

19 ಸೇನಾಧಿಪತಿಗಳಲ್ಲಿ ಒಬ್ಬನಾದ ರಬ್ಷಾಕೆಯು ಅವರಿಗೆ, “ಅಶ್ಶೂರದ ಮಹಾರಾಜನು ಹಿಜ್ಕೀಯನಿಗೆ ತಿಳಿಸುವುದೇನೆಂದರೆ:

‘ನಿನ್ನ ನಂಬಿಕೆಗೆ ಆಧಾರವು ಎಲ್ಲಿದೆ? 20 “ಯುದ್ಧದಲ್ಲಿ ನನಗೆ ಸಹಾಯಮಾಡಲು ನನ್ನಲ್ಲಿ ಬೇಕಾದಷ್ಟು ವಿವೇಕವೂ ಬಲವೂ ಇದೆ” ಎಂದು ನೀನು ಹೇಳುವೆ. ಆದರೆ ನೀನು ಯಾರನ್ನು ನಂಬಿಕೊಂಡು ನನಗೆ ವಿರುದ್ಧವಾಗಿ ದಂಗೆ ಎದ್ದಿರುವೆ? 21 ನೀನು ಮುರಿದುಬಿದ್ದಿರುವ ದಂಟನ್ನು ಊರುಗೋಲೆಂದು ನಂಬಿ ಭರವಸೆಯಿಟ್ಟಿರುವೆ! ಈಜಿಪ್ಟ್ ಊರುಗೋಲಾಗಿದೆ. ಒಬ್ಬ ಮನುಷ್ಯನು ಈ ಊರುಗೋಲಿನ ಮೇಲೆ ಭರವಸೆಯಿಟ್ಟರೆ ಅದು ಮುರಿದು ಬೀಳುತ್ತದೆ ಮತ್ತು ಅವನ ಕೈಯನ್ನೇ ಚುಚ್ಚಿ ಅವನಿಗೆ ನೋವನ್ನು ಉಂಟುಮಾಡುತ್ತದೆ! ಈಜಿಪ್ಟಿನ ರಾಜನು ತನ್ನನ್ನು ನಂಬಿದ ಜನರೆಲ್ಲರಿಗೂ ಇದೇ ರೀತಿಯಲ್ಲಿದ್ದಾನೆ. 22 ಬಹುಶಃ ನೀನು, “ನಾವು ನಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ” ಎಂದು ಹೇಳುವೆ. ಆದರೆ ಹಿಜ್ಕೀಯನು ಯೆಹೋವನ ಉನ್ನತಸ್ಥಳಗಳನ್ನು ಮತ್ತು ಯಜ್ಞವೇದಿಕೆಯನ್ನು ನಾಶಪಡಿಸಿ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯ ಸನ್ನಿಧಿಯಲ್ಲಿ ಮಾತ್ರ ಆರಾಧಿಸಬೇಕು” ಎಂದು ಹೇಳಿದನೆಂಬುದು ನನಗೆ ತಿಳಿದಿದೆ.

23 ‘ಈಗ ನಮ್ಮ ಒಡೆಯನಾದ ಅಶ್ಶೂರದ ರಾಜನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊ. ನಿನ್ನಲ್ಲಿ ಸವಾರಿಮಾಡಬಲ್ಲ ಸವಾರರು ಇದ್ದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆಂದು ನಾನು ಪ್ರಮಾಣ ಮಾಡುತ್ತೇನೆ. 24 ನನ್ನ ಒಡೆಯನ ಅಧಿಕಾರಿಗಳಲ್ಲಿ ಕನಿಷ್ಠನಾದ ಒಬ್ಬ ಅಧಿಕಾರಿಯನ್ನು ನೀನು ಸೋಲಿಸಲಾಗುವುದಿಲ್ಲ! ನಿನಗೆ ರಥಗಳನ್ನು ಮತ್ತು ಕುದುರೆಯ ಸವಾರರನ್ನು ಕೊಡಲು ನೀನು ಈಜಿಪ್ಟನ್ನು ಅವಲಂಬಿಸಿರುವೆ.

25 ‘ನಾನು ಯೆಹೋವನ ಚಿತ್ತವಿಲ್ಲದೆ ಜೆರುಸಲೇಮನ್ನು ನಾಶಗೊಳಿಸಲು ಬಂದೆನೆಂದು ನೆನಸುತ್ತೀಯೋ? “ಈ ದೇಶದ ವಿರುದ್ಧವಾಗಿ ನುಗ್ಗಿ ನಾಶಗೊಳಿಸು” ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು”’ ಎಂದು ಹೇಳಿದನು.

26 ನಂತರ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬುವರು ಸೇನಾಧಿಪತಿಗೆ, “ದಯವಿಟ್ಟು ನಮ್ಮೊಂದಿಗೆ ಅರಾಮ್ಯರ ಭಾಷೆಯಲ್ಲಿ ಮಾತನಾಡು. ನಾವು ಆ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಗೋಡೆಯ ಮೇಲಿರುವ ಜನರಿಗೆ ನಮ್ಮ ಮಾತುಗಳು ಕೇಳುವುದರಿಂದ ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ” ಎಂದು ಹೇಳಿದರು.

27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಒಡೆಯನು ನನ್ನನ್ನು ಕಳುಹಿಸಿದ್ದು ನಾನು ನಿಮ್ಮೊಂದಿಗೆ ಮತ್ತು ನಿಮ್ಮ ರಾಜನೊಂದಿಗೆ ಮಾತ್ರ ಮಾತಾಡುವುದಕ್ಕಲ್ಲ. ಗೋಡೆಯ ಮೇಲೆ ಕುಳಿತಿರುವ ಇತರ ಜನರೊಂದಿಗೂ ನಾನು ಮಾತನಾಡುತ್ತೇನೆ! ಅವರು ನಿಮ್ಮೊಂದಿಗಿದ್ದರೆ ತಮ್ಮ ಮಲವನ್ನು ತಾವೇ ತಿನ್ನಬೇಕಾಗುತ್ತದೆ ಮತ್ತು ತಮ್ಮ ಮೂತ್ರವನ್ನು ತಾವೇ ಕುಡಿಯಬೇಕಾಗುತ್ತದೆ!” ಎಂದು ಹೇಳಿದನು.

28 ನಂತರ ಸೇನಾಧಿಪತಿಯು ಯೂದಾಯ ಭಾಷೆಯಲ್ಲಿ ಗಟ್ಟಿಯಾಗಿ,

“ಅಶ್ಶೂರದ ಮಹಾರಾಜನ ಈ ಸಂದೇಶವನ್ನು ಕೇಳಿರಿ! 29 ‘ನಿಮ್ಮನ್ನು ಮೂರ್ಖರನ್ನಾಗಿಸಲು ಹಿಜ್ಕೀಯನಿಗೆ ಅವಕಾಶ ಕೊಡಬೇಡಿ! ನನ್ನ ಶಕ್ತಿಯಿಂದ ಅವನು ನಿಮ್ಮನ್ನು ರಕ್ಷಿಸಲಾಗುವುದಿಲ್ಲ. 30 ಯೆಹೋವನನ್ನು ನೀವು ನಂಬುವಂತೆ ಮಾಡಲು ಹಿಜ್ಕೀಯನಿಗೆ ಅವಕಾಶ ನೀಡಬೇಡಿ! ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ! ಅಶ್ಶೂರದ ರಾಜನು ಈ ನಗರವನ್ನು ಸೋಲಿಸಲಾಗುವುದಿಲ್ಲ!’ ಎಂದು ಹಿಜ್ಕೀಯನು ಹೇಳುತ್ತಾನೆ. 31 ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಎಂದು ಹೇಳಿದನು. ಅಶ್ಶೂರದ ರಾಜ ಹೀಗೆ ಹೇಳುತ್ತಾನೆ:

“‘ನನ್ನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿರಿ. ನಂತರ ಪ್ರತಿಯೊಬ್ಬರೂ ತನ್ನ ಸ್ವಂತ ದ್ರಾಕ್ಷಿಯನ್ನು ತಿನ್ನಬಹುದು; ತನ್ನ ಸ್ವಂತ ಅಂಜೂರವನ್ನು ತಿನ್ನಬಹುದು; ತನ್ನ ಸ್ವಂತ ಬಾವಿಯಿಂದ ನೀರನ್ನು ಕುಡಿಯಬಹುದು. 32 ನಾನು ಬಂದು, ನಿಮ್ಮನ್ನು ಈ ದೇಶಕ್ಕೆ ಸಮಾನವಾದ ಬೇರೊಂದು ದೇಶಕ್ಕೆ ಕರೆದೊಯ್ಯುವವರೆಗೆ ನೀವು ಹೀಗೆ ಮಾಡಬಹುದು. ಆ ದೇಶವು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಆಲೀವ್ ಮರ ಮತ್ತು ಜೇನುತುಪ್ಪ ಮುಂತಾದವುಗಳಿಂದ ಸಮೃದ್ಧಿಯಾಗಿದೆ. ನೀವು ಅಲ್ಲಿ ಸಾಯದೆ ಜೀವಿಸಬಹುದು. ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಅವನು ನಿಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ. “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಅವನು ಹೇಳುತ್ತಾನೆ. 33 ಬೇರೆ ಜನಾಂಗಗಳ ದೇವರುಗಳು ಅವರ ದೇಶಗಳನ್ನು ಅಶ್ಶೂರದ ರಾಜನಿಗೆ ಸಿಗದಂತೆ ರಕ್ಷಿಸಿದನೇ? ಇಲ್ಲ! 34 ಹಮಾತ್ ಮತ್ತು ಅರ್ಪಾದ್ ದೇವರುಗಳು ಎಲ್ಲಿವೆ? ಸೆಫರ್ವಯಿಮ್, ಹೇನ, ಇವ್ವಾದ ದೇವರುಗಳು ಎಲ್ಲಿವೆ? ಸಮಾರ್ಯವನ್ನು ನನ್ನ ಕೈಗೆ ಸಿಗದಂತೆ ಅವು ರಕ್ಷಿಸಿದವೇ? ಇಲ್ಲ! 35 ಬೇರೆ ಜನಾಂಗಗಳ ದೇವತೆಗಳು ಯಾವುದಾದರೂ ತಮ್ಮ ದೇಶವನ್ನು ನನ್ನಿಂದ ರಕ್ಷಿಸುತ್ತವೆಯೇ? ಇಲ್ಲ! ಜೆರುಸಲೇಮನ್ನು ಯೆಹೋವನು ನನ್ನಿಂದ ರಕ್ಷಿಸುತ್ತಾನೆಯೇ ಇಲ್ಲ!’”

36 ಆದರೆ ಜನರೆಲ್ಲರೂ ಸುಮ್ಮನಿದ್ದರು, ರಾಜನಾದ ಹಿಜ್ಕೀಯನು ಜನರಿಗೆ ಆಜ್ಞಾಪಿಸಿದ್ದರಿಂದ ಅವರು ಸೇನಾಧಿಪತಿಯೊಂದಿಗೆ ಒಂದು ಮಾತನ್ನೂ ಆಡಲಿಲ್ಲ. “ಅವನಿಗೆ ಏನನ್ನೂ ಹೇಳಬೇಡಿ” ಎಂದು ಹಿಜ್ಕೀಯನು ಹೇಳಿದ್ದನು.

37 ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಹಿಜ್ಕೀಯನ ಬಳಿಗೆ ಬಂದರು. ಅವರು ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡಿದ್ದರು. ಅಶ್ಶೂರದ ಸೇನಾಧಿಪತಿಯಾದ ರಬ್ಷಾಕೆಯು ಹೇಳಿದ ಸಂಗತಿಗಳನ್ನು ಅವರು ಹಿಜ್ಕೀಯನಿಗೆ ತಿಳಿಸಿದರು.

ಹಿಜ್ಕೀಯನು ತನ್ನ ಅಧಿಕಾರಿಗಳನ್ನು ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು

19 ರಾಜನಾದ ಹಿಜ್ಕೀಯನು ಅವುಗಳನ್ನೆಲ್ಲ ಕೇಳಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯದೊಳಕ್ಕೆ ಹೋದನು.

ಹಿಜ್ಕೀಯನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಹಿರಿಯರಾದ ಯಾಜಕರನ್ನು ಆಮೋಚನ ಮಗನೂ ಪ್ರವಾದಿಯೂ ಆಗಿದ್ದ ಯೆಶಾಯನ ಬಳಿಗೆ ಕಳುಹಿಸಿದನು. ಅವರು ತಮ್ಮ ದುಃಖವನ್ನೂ ಕಳವಳವನ್ನೂ ತೋರ್ಪಡಿಸುವಂತೆ ಗೋಣಿತಟ್ಟನ್ನು ಧರಿಸಿದ್ದರು. ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ, ಇಂದು ಮಹಾಕಷ್ಟದ ದಿನವಾಗಿದೆ. ನಾವು ಶಿಕ್ಷೆಯನ್ನೂ ನಿಂದೆಯನ್ನೂ ಅನುಭವಿಸಬೇಕಾಯಿತು. ಇದು ಪ್ರಸವವೇದನೆಯ ದಿನದಂತಿದೆ. ಆದರೆ ಹೆರಲು ಶಕ್ತಿಯೇ ಇಲ್ಲವಾಗಿದೆ. ಸೇನಾಧಿಪತಿಯ ಒಡೆಯನಾದ ಅಶ್ಶೂರದ ರಾಜನು, ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟದ್ದನ್ನು ನುಡಿಯಲು ಅವನನ್ನು ಕಳುಹಿಸಿದನು. ನಿಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲ ಕೇಳಿರುತ್ತಾನೆ. ಯೆಹೋವನು ಶತ್ರುಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಬಹುದು! ಆದ್ದರಿಂದ ಇನ್ನೂ ಜೀವಸಹಿತ ಉಳಿದಿರುವ ಜನರಿಗಾಗಿ ಪ್ರಾರ್ಥಿಸಿ” ಎಂದು ಹೇಳಿದರು.

ರಾಜನಾದ ಹಿಜ್ಕೀಯನ ಅಧಿಕಾರಿಗಳು ಯೆಶಾಯನ ಬಳಿಗೆ ಹೋದರು. ಯೆಶಾಯನು ಅವರಿಗೆ, “ನಿಮ್ಮ ಒಡೆಯನಾದ ಹಿಜ್ಕೀಯನಿಗೆ ಈ ಸಂದೇಶವನ್ನು ತಿಳಿಸಿ: ‘ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನ ಅಧಿಕಾರಿಗಳು ನನ್ನನ್ನು ಅಪಹಾಸ್ಯಮಾಡಲೆಂದು ಹೇಳಿದ ಸಂಗತಿಗಳಿಂದ ನೀವು ಹೆದರಬೇಡಿ. ನಾನು ಅವನಲ್ಲಿ ಒಂದು ಆತ್ಮವನ್ನಿರಿಸುತ್ತೇನೆ. ಅವನು ಒಂದು ಸುದ್ದಿಯನ್ನು ಕೇಳುತ್ತಾನೆ. ನಂತರ ಅವನು ತನ್ನ ಸ್ವಂತ ದೇಶಕ್ಕೆ ಹಿಂದಿರುಗಿ ಓಡಿಹೋಗುತ್ತಾನೆ. ನಾನು ಅವನನ್ನು ಅವನ ಸ್ವಂತ ದೇಶದಲ್ಲಿ ಖಡ್ಗದಿಂದ ಕೊಲ್ಲಲ್ಪಡುವಂತೆ ಮಾಡುತ್ತೇನೆ’” ಎಂದು ಹೇಳಿದನು.

ಅಶ್ಶೂರದ ರಾಜ ಹಿಜ್ಕೀಯನನ್ನು ಮತ್ತೆ ಎಚ್ಚರಿಸುವನು

ಅಶ್ಶೂರದ ರಾಜನು ಲಾಕೀಷನ್ನು ಬಿಟ್ಟುಹೋದನೆಂಬ ಸುದ್ದಿಯನ್ನು ಸೇನಾಧಿಪತಿಯು ಕೇಳಿ ಲಿಬ್ನಕ್ಕೆ ಹೋದಾಗ ರಾಜನು ಲಿಬ್ನದ ವಿರುದ್ಧ ಯುದ್ಧ ಮಾಡುತ್ತಿದ್ದನು. ಇಥಿಯೋಪಿಯದ ರಾಜ ತಿರ್ಹಾಕನ ಬಗ್ಗೆ ಅಶ್ಶೂರದ ರಾಜ ಒಂದು ಗಾಳಿ ಸುದ್ದಿಯನ್ನು ಕೇಳಿದನು. “ತಿರ್ಹಾಕನು ನಿನ್ನ ವಿರುದ್ಧ ಹೋರಾಡಲು ಬಂದಿದ್ದಾನೆ” ಎಂಬುದೇ ಆ ಗಾಳಿಸುದ್ದಿಯಾಗಿತ್ತು.

ಆದ್ದರಿಂದ ಅಶ್ಶೂರದ ರಾಜನು ಹಿಜ್ಕೀಯನ ಬಳಿಗೆ ಮತ್ತೆ ಸಂದೇಶಕರನ್ನು ಕಳುಹಿಸಿದನು. ಅಶ್ಶೂರದ ರಾಜನು ಈ ಸಂದೇಶಕರಿಗೆ ಒಂದು ಸಂದೇಶವನ್ನು ನೀಡಿದನು. 10 ಯೆಹೂದದ ರಾಜನಾದ ಹಿಜ್ಕೀಯನಿಗೆ ಇದನ್ನು ಹೇಳಿ:

“ನೀನು ನಂಬುವ ದೇವರು ನಿನ್ನನ್ನು ಮೋಸಗೊಳಿಸಲು ಅವಕಾಶ ನೀಡಬೇಡ. ಅಶ್ಶೂರದ ರಾಜ ಜೆರುಸಲೇಮನ್ನು ಸೋಲಿಸುವುದಿಲ್ಲ ಎಂಬ ನಿನ್ನ ದೇವರ ಮಾತನ್ನು ನಂಬಬೇಡ. 11 ಅಶ್ಶೂರದ ರಾಜನು ಇತರ ಎಲ್ಲಾ ಜನಾಂಗಗಳಿಗೆ ಮಾಡಿದವುಗಳನ್ನು ನೀನು ಕೇಳಿರುವೆ. ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು! ನೀನು ರಕ್ಷಿಸಲ್ಪಡುವೆಯಾ? ಇಲ್ಲ! 12 ಆ ರಾಜ್ಯಗಳ ದೇವರುಗಳು ತಮ್ಮ ಜನರನ್ನು ರಕ್ಷಿಸಲಾಗಲಿಲ್ಲ. ನನ್ನ ಪೂರ್ವಿಕರು ಅವರನ್ನೆಲ್ಲ ನಾಶಗೊಳಿಸಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಮತ್ತು ತೆಲಸ್ಸಾರ್‌ನ ಎದೆನಿನ ಜನರನ್ನು ನಾಶಗೊಳಿಸಿದರು! 13 ಹಮಾತಿನ ರಾಜನು ಎಲ್ಲಿದ್ದಾನೆ? ಅರ್ಪಾದ್‌ನ ರಾಜನೆಲ್ಲಿ? ಸೆಫರ್ವಯಿಮ್ ರಾಜನೆಲ್ಲಿ? ಹೇನ ಮತ್ತು ಇವ್ವಾಗಳ ರಾಜರೆಲ್ಲಿ?” (ಅವರೆಲ್ಲರೂ ಹತರಾದರು!)

ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುವನು

14 ಹಿಜ್ಕೀಯನು ಸಂದೇಶಕರಿಂದ ಬಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ನಂತರ ಹಿಜ್ಕೀಯನು ದೇವಾಲಯದವರೆಗೆ ಹೋಗಿ, ಯೆಹೋವನ ಸನ್ನಿಧಿಯಲ್ಲಿ ಆ ಪತ್ರಗಳನ್ನಿರಿಸಿದನು. 15 ಹಿಜ್ಕೀಯನು ಯೆಹೋವನ ಸನ್ನಿಧಿಯಲ್ಲಿ, “ಯೆಹೋವನೇ, ಕೆರೂಬಿಗಳ ಮೇಲೆ ರಾಜನಾಗಿ ಕುಳಿತುಕೊಳ್ಳುವ ಇಸ್ರೇಲರ ದೇವರೇ, ಲೋಕದ ರಾಜ್ಯಗಳಿಗೆಲ್ಲಾ ನೀನೊಬ್ಬನೇ ದೇವರಾಗಿರುವೆ. ನೀನು ಪರಲೋಕವನ್ನು ಮತ್ತು ಈ ಲೋಕವನ್ನು ಸೃಷ್ಟಿಸಿದೆ! 16 ಯೆಹೋವನೇ, ದಯವಿಟ್ಟು ನನ್ನ ಮಾತುಗಳನ್ನು ಆಲಿಸು! ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು, ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪನಾದ ದೇವರನ್ನು ನಿಂದಿಸಿ ಕಳುಹಿಸಿರುವ ಈ ವಾಕ್ಯವನ್ನು ಕೇಳು! 17 ಯೆಹೋವನೇ, ಅಶ್ಶೂರದ ರಾಜರು ಆ ರಾಜ್ಯಗಳನ್ನೆಲ್ಲ ನಾಶಗೊಳಿಸಿದ್ದು ನಿಜ! 18 ಅವರು ಆ ದೇಶಗಳ ದೇವರುಗಳನ್ನು ಬೆಂಕಿಯಲ್ಲಿ ಎಸೆದರು. ಆದರೆ ಅವು ನಿಜವಾದ ದೇವರುಗಳಲ್ಲ. ಅವುಗಳು ಮಾನವರಿಂದ ಮರ ಮತ್ತು ಕಲ್ಲುಗಳಿಂದ ನಿರ್ಮಿತವಾಗಿದ್ದವು. ಆದಕಾರಣವೇ ಅಶ್ಶೂರದ ರಾಜರುಗಳು ಅವುಗಳನ್ನು ನಾಶಗೊಳಿಸಿದರು. 19 ನಮ್ಮ ದೇವರಾದ ಯೆಹೋವನೇ, ಅಶ್ಶೂರದ ರಾಜನಿಂದ ನಮ್ಮನ್ನು ರಕ್ಷಿಸು. ಭೂಲೋಕದ ರಾಜ್ಯಗಳೆಲ್ಲ ನೀನೊಬ್ಬನೇ ದೇವರಾದ ಯೆಹೋವನೆಂದು ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.

20 ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನಾದ ಸನ್ಹೇರೀಬನ ವಿರುದ್ಧವಾಗಿ ನೀವು ನನ್ನಲ್ಲಿ ಪಾರ್ಥಿಸಿರುವಿರಿ. ನಾನು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದೇನೆ. 21 ಸನ್ಹೇರೀಬನನ್ನು ಕುರಿತು ಯೆಹೋವನು ಹೇಳುವುದೇನೆಂದರೆ:

“ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸುತ್ತಾಳೆ;
    ನಿನ್ನನ್ನು ಪರಿಹಾಸ್ಯ ಮಾಡುತ್ತಾಳೆ.
ಜೆರುಸಲೇಮಿನ ಕುವರಿಯು
    ನಿನ್ನ ಹಿಂದಿನಿಂದ ತಲೆಯಾಡಿಸುತ್ತಾಳೆ.
22 ನೀನು ಯಾರನ್ನು ನಿಂದಿಸಿ ಪರಿಹಾಸ್ಯ ಮಾಡಿದೆ?
    ನೀನು ಯಾರ ವಿರುದ್ಧ ಮಾತನಾಡಿದೆ?
ನೀನು ಇಸ್ರೇಲಿನ ಪವಿತ್ರನಿಗೆ ವಿರೋಧಿಯಲ್ಲವೆ!
    ನೀನು ಅವನಿಗಿಂತ ಉತ್ತಮನಂತೆ ನಟಿಸಿದೆ!
23 ನೀನು ಯೆಹೋವನನ್ನು ನಿಂದಿಸಲು ನಿನ್ನ ಸಂದೇಶಕರನ್ನು ಬಳಸಿದೆ,
    ‘ನಾನು ನನ್ನ ಅನೇಕ ರಥಗಳೊಂದಿಗೆ ಉನ್ನತಗಿರಿಗಳಿಗೆ ಬಂದೆನು.
    ನಾನು ಲೆಬನೋನಿನ ದುರ್ಗಮ ಸ್ಥಳಗಳಿಗೆ ಹೋದೆನು.
ನಾನು ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ
    ಲೆಬನೋನಿನ ಉತ್ತಮ ತುರಾಯಿಮರಗಳನ್ನೂ ಕಡಿದುರುಳಿಸಿದೆನು.
24 ನಾನು ಬಾವಿಗಳನ್ನು ತೋಡಿ ಹೊಸ ಸ್ಥಳಗಳಲ್ಲಿ ನೀರು ಕುಡಿದೆನು.
    ನಾನು ಈಜಿಪ್ಟಿನ ನದಿಗಳನ್ನು ಬತ್ತಿಸಿದ್ದೇನೆ;
    ಆ ದೇಶದ ಮೇಲೆಲ್ಲಾ ನಡೆದಾಡಿದ್ದೇನೆ’ ಎಂದು ನೀನು ಹೇಳಿದೆ.

25 “ಆದರೆ ನೀನು ಕೇಳಿಲ್ಲವೇ?
    ನಾನು ಬಹುಕಾಲದ ಹಿಂದೆಯೇ ಅದನ್ನು ಯೋಜಿಸಿದ್ದೆನು.
ಪುರಾತನ ಕಾಲದಿಂದಲೇ ಅದನ್ನು ಆಲೋಚಿಸಿದ್ದೆನು,
    ಈಗ ನಾನು ಅದನ್ನು ನೆರವೇರಿಸಿದ್ದೇನೆ.
ನೀನು ಬಲಾಢ್ಯ ನಗರಗಳನ್ನು ಹಾಳುದಿಬ್ಬಗಳನ್ನಾಗಿ
    ಮಾಡಲು ಅವಕಾಶ ನೀಡಿದವನು ನಾನೇ.
26 ನಗರಗಳಲ್ಲಿ ವಾಸಿಸುವ ಜನರು ಬಲವಿಲ್ಲದವರಾಗಿ
    ನಿರಾಶೆಯಿಂದ ಗಲಿಬಿಲಿಗೊಂಡರು.
ಜನರು ಹೊಲಗಳಲ್ಲಿನ ಹುಲ್ಲಿನಂತೆಯೂ ಹಸಿರುಗಿಡಗಳಂತೆಯೂ
    ಮಾಳಿಗೆಯ ಮೇಲೆ ಒಣಗಿ ಹಾಳಾಗುವ ಹುಲ್ಲಿನಂತೆಯೂ ಇದ್ದರು.
27 ನೀನು ಮೇಲೇಳುವುದೂ ಕುಳಿತುಕೊಳ್ಳುವುದೂ ನನಗೆ ಗೊತ್ತಿದೆ.
    ನೀನು ಒಳಗೆ ಬರುವುದೂ ಹೊರಗೆ ಹೋಗುವುದೂ ನನಗೆ ತಿಳಿದಿದೆ.
ನೀನು ನನ್ನ ವಿರುದ್ಧ ಯಾವಾಗ ದಂಗೆಯೇಳುವೆ ಎಂಬುದೂ ನನಗೆ ತಿಳಿದಿದೆ.
28 ನೀನು ನನ್ನ ವಿರುದ್ಧ ದಂಗೆ ಎದ್ದಿರುವೆ.
    ನಿನ್ನ ಗರ್ವದ ನಿಂದನೆಯನ್ನು ನಾನು ಕೇಳಿರುವೆ.
ಆದ್ದರಿಂದ ನಾನು ನಿನ್ನ ಬಾಯಿಗೆ ಕಡಿವಾಣವನ್ನು ಹಾಕಿ
    ನೀನು ಬಂದ ದಾರಿಯಲ್ಲಿಯೇ ಹಿಂದಿರುಗುವಂತೆ ಮಾಡುತ್ತೇನೆ.”

ಹಿಜ್ಕೀಯನಿಗೆ ಯೆಹೋವನ ಸಂದೇಶ

29 “ನಾನು ನಿನಗೆ ಸಹಾಯ ಮಾಡುತ್ತೇನೆಂಬುದಕ್ಕೆ ಇದು ಸಾಕ್ಷಿಯ ಗುರುತಾಗಿದೆ: ಈ ವರ್ಷ ನೀವು ತಾನಾಗಿಯೇ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಮುಂದಿನ ವರ್ಷ ನೀವು ಬೀಜದಿಂದ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೆಳೆಸಿದ ಧಾನ್ಯವನ್ನು ಒಟ್ಟುಗೂಡಿಸುತ್ತೀರಿ. ನೀವು ದ್ರಾಕ್ಷಿತೋಟಗಳನ್ನು ಬೆಳೆಸುತ್ತೀರಿ; ಅವುಗಳ ದ್ರಾಕ್ಷಿಯನ್ನು ತಿನ್ನುತ್ತೀರಿ. 30 ತಪ್ಪಿಸಿಕೊಂಡು ಉಳಿದ ಯೆಹೂದ ಕುಲದವರು ಮತ್ತೆ ವೃದ್ಧಿಯಾಗುವರು. ಅವರು ಆಳವಾಗಿ ಬೇರೂರಿ ಫಲವನ್ನು ಫಲಿಸುವರು. 31 ಜೆರುಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು; ಚಿಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿ ಹೊಂದುವರು; ಯೆಹೋವನ ಸ್ವಾಭಿಮಾನವೇ ಇದನ್ನು ನೆರವೇರಿಸುವುದು.

32 “ಯೆಹೋವನು ಅಶ್ಶೂರದ ರಾಜನನ್ನು ಕುರಿತು ಹೀಗೆನ್ನುತ್ತಾನೆ:

‘ಅವನು ಈ ನಗರದೊಳಕ್ಕೆ ಬರುವುದಿಲ್ಲ.
    ಅವನು ಈ ನಗರದಲ್ಲಿ ಒಂದು ಬಾಣವನ್ನೂ ಎಸೆಯುವುದಿಲ್ಲ.
ಅವನು ಈ ನಗರದ ವಿರುದ್ಧ ಗುರಾಣಿಗಳೊಂದಿಗೆ ಬರುವುದಿಲ್ಲ.
    ಅವನು ಈ ನಗರವನ್ನು ಮುತ್ತಲು ಮಣ್ಣಿನ ದಿಬ್ಬವನ್ನು ನಿರ್ಮಿಸುವುದಿಲ್ಲ.
33 ಅವನು ತಾನು ಬಂದ ದಾರಿಯಲ್ಲೇ ಹಿಂದಕ್ಕೆ ಹೋಗುತ್ತಾನೆ.
    ಅವನು ಈ ನಗರದೊಳಕ್ಕೆ ಬರುವುದಿಲ್ಲ.
ಯೆಹೋವನೇ ಇದನ್ನು ನುಡಿದಿದ್ದಾನೆ.
34 ನಾನು ಈ ನಗರವನ್ನು ಕಾಪಾಡುತ್ತೇನೆ ಮತ್ತು ಇದನ್ನು ರಕ್ಷಿಸುತ್ತೇನೆ.
    ನನಗಾಗಿಯೂ ನನ್ನ ಸೇವಕನಾದ ದಾವೀದನಿಗಾಗಿಯೂ ನಾನು ಇದನ್ನು ಮಾಡುತ್ತೇನೆ.’”

ಅಶ್ಶೂರದ ಸೇನೆಯು ನಾಶಗೊಳಿಸಲ್ಪಟ್ಟಿತು

35 ಆ ರಾತ್ರಿ ಯೆಹೋವನ ದೂತನು ಹೊರಕ್ಕೆ ಹೋಗಿ, ಅಶ್ಶೂರದ ಶಿಬಿರದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಜನರನ್ನು ಕೊಂದುಹಾಕಿದನು. ಜನರು ಬೆಳಗಿನ ಜಾವದಲ್ಲಿ ಮೇಲಕ್ಕೆದ್ದಾಗ ಸತ್ತ ದೇಹಗಳನ್ನು ನೋಡಿದರು.

36 ಆಗ ಅಶ್ಶೂರದ ರಾಜನಾದ ಸನ್ಹೇರೀಬನು ತಾನು ವಾಸಿಸುತ್ತಿದ್ದ ನಿನವೆಗೆ ಹಿಂದಿರುಗಿಹೋದನು. 37 ಸನ್ಹೇರೀಬನು ಒಂದು ದಿನ ತನ್ನ ದೇವರಾದ ನಿಸ್ರೋಕನನ್ನು ಆಲಯದಲ್ಲಿ ಆರಾಧಿಸುತ್ತಿದ್ದನು. ಅವನ ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅವನನ್ನು ಖಡ್ಗದಿಂದ ಇರಿದುಕೊಂದರು. ನಂತರ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಸನ್ಹೇರೀಬನ ಮಗನಾದ ಏಸರ್‌ಹದ್ದೋನನು ಅವನ ನಂತರ ಹೊಸ ರಾಜನಾದನು.

ಕೀರ್ತನೆಗಳು 46

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ಕೀರ್ತನೆಗಳು 80

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
    ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
    ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
“ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
    ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
    ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
    ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11     ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
    ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
    ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
    ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
    ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
    ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
    ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಕೀರ್ತನೆಗಳು 135

135 ಯೆಹೋವನಿಗೆ ಸ್ತೋತ್ರವಾಗಲಿ!
    ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
    ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
    ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.

ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
    ಇಸ್ರೇಲ್, ಆತನಿಗೆ ಸೇರಿದ್ದು.
ಯೆಹೋವನು ಮಹೋನ್ನತನೆಂದೂ
    ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
    ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
    ಮಿಂಚನ್ನೂ ಮಳೆಯನ್ನೂ ಬರಮಾಡುವನು;
    ಗಾಳಿಯನ್ನು ಬೀಸಮಾಡುವನು.
ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
    ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
    ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
    ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.

13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
    ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
    ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
    ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
    ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
    ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
    ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.

19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
    ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
    ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
    ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!

ಯೆಹೋವನಿಗೆ ಸ್ತೋತ್ರವಾಗಲಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International