Chronological
ನಾದಾಬ ಇಸ್ರೇಲಿನ ರಾಜ
25 ಆಸನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ, ಯಾರೊಬ್ಬಾಮನ ಮಗನಾದ ನಾದಾಬನು ಇಸ್ರೇಲಿನ ರಾಜನಾದನು. ನಾದಾಬನು ಇಸ್ರೇಲನ್ನು ಎರಡು ವರ್ಷ ಆಳಿದನು. 26 ನಾದಾಬನು ಯೆಹೋವನ ವಿರುದ್ಧ ಕೆಟ್ಟಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
27 ಬಾಷನು ಅಹೀಯನ ಮಗ. ಅವನು ಇಸ್ಸಾಕಾರನ ಕುಲದವನಾಗಿದ್ದನು. ರಾಜನಾದ ನಾದಾಬನನ್ನು ಕೊಲ್ಲಲು ಬಾಷನು ಸಂಚು ಮಾಡಿದನು. ನಾದಾಬನು ಇಸ್ರೇಲರೊಡನೆ ಗಿಬ್ಬೆತೋನ್ ಪಟ್ಟಣದ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭವಿದು. ಇದು ಫಿಲಿಷ್ಟಿಯ ಪಟ್ಟಣ. ಆ ಸ್ಥಳದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿದನು. 28 ಆಸನು ಯೆಹೂದದ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಇದು ಸಂಭವಿಸಿತು. ಅನಂತರ ಬಾಷನು ಇಸ್ರೇಲಿಗೆ ರಾಜನಾದನು.
ಇಸ್ರೇಲಿನ ರಾಜನಾದ ಬಾಷನು
29 ಬಾಷನು ಹೊಸರಾಜನಾದ ಸಮಯದಲ್ಲಿ ಅವನು ಯಾರೊಬ್ಬಾಮನ ವಂಶದಲ್ಲಿ ಎಲ್ಲರನ್ನೂ ಕೊಂದುಹಾಕಿದನು. ಯಾರೊಬ್ಬಾಮನ ವಂಶದಲ್ಲಿ ಯಾರೂ ಜೀವಸಹಿತ ಉಳಿಯಲು ಬಾಷನು ಬಿಡಲಿಲ್ಲ. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನಾದ ಶೀಲೋವಿನ ಅಹೀಯನ ಮೂಲಕ ಇದನ್ನು ಹೇಳಿದ್ದನು. 30 ರಾಜನಾದ ಯಾರೊಬ್ಬಾಮನು ಅನೇಕ ಪಾಪಗಳನ್ನು ಮಾಡಿದ್ದರಿಂದ ಇದು ಸಂಭವಿಸಿತು. ಇಸ್ರೇಲಿನ ಜನರು ಅನೇಕ ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಇಸ್ರೇಲಿನ ದೇವರಾದ ಯೆಹೋವನು ಹೆಚ್ಚು ಕೋಪಗೊಳ್ಳುವಂತೆ ಯಾರೊಬ್ಬಾಮನು ಮಾಡಿದ್ದನು.
31 ನಾದಾಬನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 32 ಬಾಷನು ಇಸ್ರೇಲನ್ನು ಆಳುತ್ತಿದ್ದ ಕಾಲದಲ್ಲೆಲ್ಲಾ, ಯೆಹೂದದ ರಾಜನಾದ ಆಸನ ವಿರುದ್ಧವಾಗಿ ಯುದ್ಧ ಮಾಡುತ್ತಲೇ ಇದ್ದನು.
33 ಆಸನು ಯೆಹೂದದ ರಾಜನಾದ ಮೂರನೆಯ ವರ್ಷದಲ್ಲಿ, ಅಹೀಯನ ಮಗನಾದ ಬಾಷನು ಇಡೀ ಇಸ್ರೇಲಿಗೆ ರಾಜನಾದನು. ಅವನ ರಾಜಧಾನಿಯಾದ ತಿರ್ಚದಲ್ಲಿ, ಅವನು ಇಪ್ಪತ್ತನಾಲ್ಕು ವರ್ಷ ಆಳಿದನು. 34 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಬಾಷನು ಮಾಡಿದನು. ತನಗಿಂತ ಮುಂಚೆ ಆಳಿದ ಇಸ್ರೇಲಿನ ರಾಜನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
16 ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನೊಂದಿಗೆ ಮಾತನಾಡಿ ರಾಜನಾದ ಬಾಷನ ವಿರುದ್ಧವಾಗಿ ಹೀಗೆ ಹೇಳಿದನು: 2 “ನಾನು ನಿನ್ನನ್ನು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದೆ. ಇಸ್ರೇಲಿನ ಜನರಿಗೆ ನಿನ್ನನ್ನು ರಾಜನನ್ನಾಗಿ ನಾನು ಮಾಡಿದೆ. ಆದರೆ ನೀನು ಯಾರೊಬ್ಬಾಮನ ಮಾರ್ಗವನ್ನೇ ಅನುಸರಿಸಿದೆ. ಇಸ್ರೇಲಿನ ನನ್ನ ಜನರು ಪಾಪಮಾಡುವಂತೆ ನೀನು ಪ್ರೇರೇಪಿಸಿದೆ. ಅವರು ತಮ್ಮ ಪಾಪಗಳಿಂದ ನನ್ನನ್ನು ಕೋಪಗೊಳಿಸಿದರು. 3 ಆದ್ದರಿಂದ ಬಾಷನೇ, ನಿನ್ನನ್ನೂ ನಿನ್ನ ಕುಟುಂಬವನ್ನೂ ನಾನು ನಾಶಪಡಿಸುತ್ತೇನೆ. ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬಕ್ಕೆ ನಾನು ಮಾಡಿದಂತೆ ನಿನಗೂ ಮಾಡುತ್ತೇನೆ. 4 ನಿನ್ನ ಕುಟುಂಬದ ಜನರು ನಗರದ ಬೀದಿಗಳಲ್ಲಿ ಸಾಯುತ್ತಾರೆ; ಅವರ ದೇಹಗಳನ್ನು ನಾಯಿಗಳು ತಿನ್ನುತ್ತವೆ. ನಿನ್ನ ಕುಟುಂಬದ ಕೆಲವು ಜನರು ಹೊಲಗಳಲ್ಲಿ ಸಾಯುತ್ತಾರೆ. ಅವರ ದೇಹಗಳನ್ನು ಪಕ್ಷಿಗಳು ತಿನ್ನುತ್ತವೆ.”
5 ಬಾಷನು ಮಾಡಿದ ಎಲ್ಲ ಕಾರ್ಯಗಳ ಬಗ್ಗೆ ಮತ್ತು ಅವನ ಮಹಾಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 6 ಬಾಷನು ಸತ್ತುಹೋದನು. ಅವನನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಏಲನು ಅವನ ನಂತರ ಹೊಸ ರಾಜನಾದನು.
7 ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.
ಇಸ್ರೇಲಿನ ರಾಜನಾದ ಏಲ
8 ಆಸನು ಯೆಹೂದದ ರಾಜನಾದ ಇಪ್ಪತ್ತಾರನೆಯ ವರ್ಷದಲ್ಲಿ ಏಲನು ಇಸ್ರೇಲಿನ ರಾಜನಾದನು. ಏಲನು ಬಾಷನ ಮಗ. ಅವನು ತಿರ್ಚದಲ್ಲಿ ಎರಡು ವರ್ಷ ಆಳಿದನು.
9 ಜಿಮ್ರಿಯು ಏಲನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. ಏಲನ ರಥಬಲದ ಅರ್ಧಭಾಗಕ್ಕೆ ಜಿಮ್ರಿಯು ಅಧಿಪತಿ. ಆದರೆ ಏಲನ ವಿರುದ್ಧ ಜಿಮ್ರಿಯು ಸಂಚುಮಾಡಿದನು. ರಾಜನಾದ ಏಲನು ತಿರ್ಚದಲ್ಲಿದ್ದನು. ಅವನು ಅರ್ಚನ ಮನೆಯಲ್ಲಿ ಕುಡಿದು ಮತ್ತನಾದನು. ಅರ್ಚನು ತಿರ್ಚದಲ್ಲಿದ್ದ ಅರಮನೆಯ ಮೇಲ್ವಿಚಾರಕ. 10 ಜಿಮ್ರಿಯು ಆ ಮನೆಯೊಳಕ್ಕೆ ಹೋಗಿ ರಾಜನಾದ ಏಲನನ್ನು ಕೊಂದುಹಾಕಿದನು. ಆಸನು ಯೆಹೂದದ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಇದು ನಡೆಯಿತು. ಏಲನ ನಂತರ ಜಿಮ್ರಿಯು ಇಸ್ರೇಲಿನ ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಜಿಮ್ರಿ
11 ಜಿಮ್ರಿಯು ಹೊಸ ರಾಜನಾದ ಮೇಲೆ ಬಾಷನ ಕುಟುಂಬದವರನ್ನೆಲ್ಲಾ ಕೊಂದುಹಾಕಿದನು. ಅವನು ಬಾಷನ ಕುಟುಂಬದಲ್ಲಿ ಯಾವ ಗಂಡಸನ್ನೂ ಬಿಡಲಿಲ್ಲ. ಬಾಷನ ಸ್ನೇಹಿತರನ್ನೂ ಜಿಮ್ರಿಯು ಕೊಂದುಹಾಕಿದನು. 12 ಹೀಗೆ ಜಿಮ್ರಿಯು ಬಾಷನ ಕುಟುಂಬವನ್ನು ನಾಶಗೊಳಿಸಿದನು. ಬಾಷನ ವಿರುದ್ಧವಾಗಿ ಯೆಹೋವನು ಪ್ರವಾದಿಯಾದ ಯೇಹುವಿನ ಮೂಲಕ ತಿಳಿಸಿದಂತೆ ಇದು ಸಂಭವಿಸಿತು. 13 ಬಾಷನ ಮತ್ತು ಅವನ ಮಗನಾದ ಏಲನ ಪಾಪಗಳೇ ಅದಕ್ಕೆ ಕಾರಣ. ಅವರು ಪಾಪಗಳನ್ನು ಮಾಡಿದರು ಮತ್ತು ಪಾಪಗಳನ್ನು ಮಾಡುವಂತೆ ಇಸ್ರೇಲಿನ ಜನರನ್ನು ಪ್ರೇರೇಪಿಸಿದರು. ಅವರಲ್ಲಿ ಅನೇಕ ವಿಗ್ರಹಗಳಿದ್ದುದರಿಂದ ಯೆಹೋವನು ಕೋಪಗೊಂಡನು.
14 ಏಲನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
15 ಆಸನು ಯೆಹೂದದ ರಾಜನಾದ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ಇಸ್ರೇಲಿನ ರಾಜನಾದನು. ಜಿಮ್ರಿಯು ತಿರ್ಚದಲ್ಲಿ ಏಳು ದಿನ ಆಳಿದನು. ಆಗ ಸಂಭವಿಸಿದ್ದೇನೆಂದರೆ: ಇಸ್ರೇಲಿನ ಸೈನ್ಯವು ಫಿಲಿಷ್ಟಿಯರಿಗೆ ಸೇರಿದ್ದ ಗಿಬ್ಬೆತೋನಿನ ವಿರುದ್ಧ ಮುತ್ತಿಗೆ ಹಾಕಿದ್ದರು. ಅವರು ಯುದ್ಧಕ್ಕೆ ಸಿದ್ಧರಾಗಿದ್ದರು. 16 ರಾಜನ ವಿರುದ್ಧ ಜಿಮ್ರಿಯು ರಹಸ್ಯಯೋಜನೆಗಳನ್ನು ಮಾಡಿದ್ದಾನೆಂಬುದು ಪಾಳೆಯದಲ್ಲಿದ್ದ ಜನರಿಗೆ ತಿಳಿಯಿತು. ಅವನು ರಾಜನನ್ನು ಕೊಂದುಹಾಕಿದನೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಇಸ್ರೇಲರೆಲ್ಲರೂ ಆ ದಿನವೇ ಪಾಳೆಯದಲ್ಲಿ ಒಮ್ರಿಯನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದರು. ಒಮ್ರಿಯು ಸೈನ್ಯದ ಅಧಿಪತಿಯಾಗಿದ್ದನು. 17 ಒಮ್ರಿಯು ಇಸ್ರೇಲರೆಲ್ಲರೊಡನೆ ಗಿಬ್ಬೆತೋನನ್ನು ಬಿಟ್ಟು ತಿರ್ಚಕ್ಕೆ ಮುತ್ತಿಗೆ ಹಾಕಿದನು. 18 ಆ ನಗರವು ವಶವಾದುದನ್ನು ಜಿಮ್ರಿಯು ಕಂಡು ಅರಮನೆಯೊಳಕ್ಕೆ ಹೋಗಿ ಬೆಂಕಿಯನ್ನು ಹತ್ತಿಸಿದನು. ಅವನು ಅರಮನೆಯನ್ನು ಸುಟ್ಟುಹಾಕಿ ತಾನೂ ಸುಟ್ಟುಕೊಂಡನು. 19 ಜಿಮ್ರಿಯು ತಾನು ಮಾಡಿದ ಪಾಪದ ಕಾರಣದಿಂದಲೇ ಸತ್ತುಹೋದನು. ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಜಿಮ್ರಿಯು ಮಾಡಿದನು. ಯಾರೊಬ್ಬಾಮನು ಪಾಪಮಾಡಿದಂತೆ ಅವನೂ ಪಾಪವನ್ನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
20 ಜಿಮ್ರಿಯ ರಹಸ್ಯಯೋಜನೆಗಳ ಕುರಿತಾಗಿಯೂ ಅವನು ಮಾಡಿದ ಇತರ ಕಾರ್ಯಗಳ ಕುರಿತಾಗಿಯೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಜಿಮ್ರಿಯು ರಾಜನಾದ ಏಲಾಗೆ ವಿರುದ್ಧವಾಗಿ ತಿರುಗಿಬಿದ್ದಾಗ ಸಂಭವಿಸಿದ ಘಟನೆಗಳನ್ನೂ ಆ ಪುಸ್ತಕದಲ್ಲಿ ಬರೆಯಲಾಗಿದೆ.
ಇಸ್ರೇಲಿನ ರಾಜನಾದ ಒಮ್ರಿ
21 ಇಸ್ರೇಲಿನ ಜನರಲ್ಲಿ ಎರಡು ಪಕ್ಷಗಳಾದವು. ಗೀನತನ ಮಗನಾದ ತಿಬ್ನಿಯನ್ನು ಒಂದು ಪಕ್ಷದವರು ಅನುಸರಿಸಿ, ಅವನನ್ನು ತಮ್ಮ ರಾಜನನ್ನಾಗಿ ಮಾಡಲು ಅಪೇಕ್ಷೆಪಟ್ಟರು. ಮತ್ತೊಂದು ಪಕ್ಷದವರು ಒಮ್ರಿಯನ್ನು ಅನುಸರಿಸಿದರು. 22 ಆದರೆ ಗೀನತನ ಮಗ ತಿಬ್ನಿಯ ಹಿಂಬಾಲಕರಿಗಿಂತಲೂ ಒಮ್ರಿಯ ಹಿಂಬಾಲಕರು ಬಲಶಾಲಿಗಳಾಗಿದ್ದರು. ಆದ್ದರಿಂದ ತಿಬ್ನಿಯನ್ನು ಕೊಲ್ಲಲಾಯಿತು; ಒಮ್ರಿಯು ರಾಜನಾದನು.
23 ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು. 24 ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.
25 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೆಲ್ಲ ಒಮ್ರಿಯು ಮಾಡಿದನು. ಒಮ್ರಿಯು ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅತ್ಯಂತ ಕೆಟ್ಟವನು. 26 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅವನೂ ಮಾಡಿದನು, ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಆದ್ದರಿಂದ ಅವರು ಇಸ್ರೇಲಿನ ದೇವರಾದ ಯೆಹೋವನನ್ನು ಹೆಚ್ಚು ಕೋಪಗೊಳಿಸಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಆರಾಧಿಸಿದ್ದರಿಂದ ಯೆಹೋವನು ಕೋಪಗೊಂಡನು.
27 ಒಮ್ರಿಯ ಕುರಿತಾದ ಇತರ ಸಂಗತಿಗಳನ್ನೂ ಅವನ ಪರಾಕ್ರಮಗಳನ್ನೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 28 ಒಮ್ರಿಯು ಸತ್ತುಹೋದನು; ಅವನನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು, ಅವನ ನಂತರ ಅವನ ಮಗನಾದ ಅಹಾಬನು ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಅಹಾಬ
29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. 30 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಾಬನು ಮಾಡಿದನು. ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅಹಾಬನೇ ಅತ್ಯಂತ ಕೆಟ್ಟವನು. 31 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು. 32 ಬಾಳನನ್ನು ಪೂಜಿಸಲು ಅಹಾಬನು ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. 33 ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.
34 ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು.[a]
ಯೆಹೂದದ ಅರಸನಾದ ಯೆಹೋಷಾಫಾಟನು
17 ಆಸನ ಮಗನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದನು. ಅವನು ತನ್ನ ರಾಜ್ಯವನ್ನು ಬಲಪಡಿಸಿ ಇಸ್ರೇಲರಿಂದ ತನಗೆ ಅಪಾಯವಾಗದಂತೆ ಸುರಕ್ಷೆಯ ವ್ಯವಸ್ಥೆ ಮಾಡಿಕೊಂಡನು. 2 ಯೆಹೂದದ ಎಲ್ಲಾ ಕೋಟೆಗಳುಳ್ಳ ಪಟ್ಟಣಗಳಲ್ಲಿಯೂ ತನ್ನ ತಂದೆಯು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ಪ್ರಾಂತ್ಯದ ಪಟ್ಟಣಗಳಲ್ಲಿಯೂ ಸೈನ್ಯವನ್ನಿಟ್ಟನು.
3 ಯೆಹೋವನು ಯೆಹೋಷಾಫಾಟನೊಂದಿಗೆ ಇದ್ದನು; ಯಾಕೆಂದರೆ ಯೆಹೋಷಾಫಾಟನು ತನ್ನ ಯೌವನ ಕಾಲದಲ್ಲಿಯೇ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಜೀವಿಸಿದನು. ಅವನು ಬಾಳನ ಪೂಜೆಯನ್ನು ಮಾಡಲಿಲ್ಲ. 4 ತನ್ನ ಪೂರ್ವಿಕರು ಅನುಸರಿಸಿದ ದೇವರನ್ನು ನಿರೀಕ್ಷಿಸಿದನು. ಆತನ ಆಜ್ಞೆಗಳನ್ನು ಅನುಸರಿಸಿದನು. ಇಸ್ರೇಲಿ ಅರಸರು ನಡೆದಂತೆ ಇವನು ನಡೆಯಲಿಲ್ಲ. 5 ಯೆಹೋವನು ಯೆಹೋಷಾಫಾಟನಿಗಾಗಿ ರಾಜ್ಯದ ಅಧಿಕಾರವನ್ನು ಸ್ಥಿರಪಡಿಸಿದನು. ಯೆಹೂದದ ಜನರೆಲ್ಲರು ಅವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಆದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ದೊರಕಿತು. 6 ಅವನ ಹೃದಯವು ಯೆಹೋವನ ಮಾರ್ಗಗಳಲ್ಲಿ ಆನಂದವನ್ನು ಕಂಡುಕೊಂಡಿತು.[a] ಯೆಹೂದ ಪ್ರಾಂತ್ಯದಲ್ಲಿ ವಿಗ್ರಹಗಳ ಪೂಜಾಸ್ಥಳಗಳನ್ನೆಲ್ಲಾ ತೆಗೆದುಹಾಕಿಸಿ ಅಶೇರಸ್ತಂಭಗಳನ್ನು ಕಡಿದುಹಾಕಿಸಿ ಅವುಗಳನ್ನು ನಿರ್ಮೂಲ ಮಾಡಿದನು.
7 ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಎಲ್ಲಾ ಪಟ್ಟಣಗಳಿಗೆ ನಾಯಕರನ್ನು ಕಳುಹಿಸಿ ಜನರಿಗೆ ದೇವರ ವಿಧಿನಿಯಮಗಳು ಬೋಧಿಸಲ್ಪಡುವಂತೆ ಮಾಡಿದನು. ಆ ನಾಯಕರು ಯಾರೆಂದರೆ: ಬೆನ್ಹೈಲ್, ಓಬದ್ಯ, ಜೆಕರ್ಯನೆತನೇಲ್ ಮತ್ತು ಮೀಕಾಯ. 8 ಯೆಹೋಷಾಫಾಟನು ಅವರೊಂದಿಗೆ ಲೇವಿಯರನ್ನೂ ಕಳುಹಿಸಿದನು. ಅವರು ಯಾರೆಂದರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ ಮತ್ತು ಟೋಬೀಯ. ಅವರೊಂದಿಗೆ ಕಳುಹಿಸಲ್ಪಟ್ಟ ಯಾಜಕರು ಯಾರೆಂದರೆ: ಎಲೀಷಾಮಾ ಮತ್ತು ಯೆಹೋರಾಮ. 9 ಇವರೆಲ್ಲಾ ಯೆಹೂದದ ಜನರಿಗೆ ಯೆಹೋವನ ಧರ್ಮೋಪದೇಶ ಪುಸ್ತಕದಿಂದ ಆತನ ಕಟ್ಟಳೆ ವಿಧಿನಿಯಮಗಳನ್ನು ಯೆಹೂದದ ಪಟ್ಟಣಗಳಲ್ಲೆಲ್ಲಾ ಸಂಚರಿಸಿ ಕಲಿಸಿದರು.
10 ಯೆಹೂದದ ಸುತ್ತಮುತ್ತಲಿನ ದೇಶಗಳ ಜನಾಂಗಗಳು ಯೆಹೋವನಿಗೆ ಭಯಪಟ್ಟರು. ಆದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಕ್ಕೆ ಹೋಗಲಿಲ್ಲ. 11 ಫಿಲಿಷ್ಟಿಯರಲ್ಲಿ ಕೆಲವರು ಅವನಿಗೆ ಬೆಳ್ಳಿಬಂಗಾರಗಳ ಕಾಣಿಕೆಗಳನ್ನು ತಂದುಕೊಟ್ಟರು; ಅವನೊಬ್ಬ ಬಲಿಷ್ಠನಾದ ರಾಜನೆಂದು ಅವರು ತಿಳಿದುಕೊಂಡಿದ್ದರು. ಅರಬಿಯದ ಜನರು ಯೆಹೋಷಾಫಾಟನಿಗೆ ಪಶುಗಳ ಹಿಂಡುಗಳನ್ನು ತಂದುಕೊಟ್ಟರು. ಅವುಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳು ಮತ್ತು ಏಳು ಸಾವಿರದ ಏಳುನೂರು ಹೋತಗಳು ಇದ್ದವು.
12 ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ದೊಡ್ಡ ಅರಸನಾದನು. ಅವನು ಯೆಹೂದ ದೇಶದಲ್ಲೆಲ್ಲಾ ಕೋಟೆಗಳನ್ನು ಕಟ್ಟಿಸಿದನು. ಉಗ್ರಾಣ ನಗರಗಳನ್ನು ಕಟ್ಟಿಸಿದನು. 13 ಅವುಗಳಲ್ಲಿ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟನು. ಜೆರುಸಲೇಮಿನಲ್ಲಿ ನುರಿತ ಸೈನ್ಯವನ್ನು ಇರಿಸಿದನು. 14 ಅವರು ಬೇರೆಬೇರೆ ಕುಲಗಳಿಂದ ಬಂದವರಾಗಿದ್ದರು.
ಯೆಹೂದಕುಲದ ಅದ್ನನು ಮೂರುಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು.
15 ಯೆಹೋಹಾನಾನನು ಎರಡು ಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.
16 ಅಮಸ್ಯನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಅಮಸ್ಯನು ಜಿಕ್ರಿಯ ಮಗ. ಯೆಹೋವನ ಸೇವೆಮಾಡುವದಕ್ಕೆ ಅವನು ತನ್ನನ್ನು ಒಪ್ಪಿಸಿಕೊಟ್ಟಿದ್ದನು.
17 ಬೆನ್ಯಾಮೀನನ ಕುಲದ ಎಲ್ಯಾದನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಇವರು ಬಿಲ್ಲು, ಬಾಣ, ಗುರಾಣಿಗಳನ್ನು ಬಳಸಬಲ್ಲವರಾಗಿದ್ದರು. ಎಲ್ಯಾದನು ಶೂರನಾದ ಸೇನಾಪತಿ.
18 ಯೆಹೋಜಾಬಾದನು ಒಂದುಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.
19 ಈ ಸೈನಿಕರೆಲ್ಲಾ ಯೆಹೋಷಾಫಾಟನ ಸೇವೆಮಾಡಿದರು. ಇವರಲ್ಲದೆ ಯೆಹೂದ ದೇಶದಲ್ಲೆಲ್ಲಾ ಇದ್ದ ಕೋಟೆಗಳಲ್ಲಿಯೂ ಸೈನಿಕರಿದ್ದರು.
Kannada Holy Bible: Easy-to-Read Version. All rights reserved. © 1997 Bible League International