Chronological
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
5 ಹೀರಾಮನು ತೂರಿನ ರಾಜನಾಗಿದ್ದನು. ಹೀರಾಮನು ಯಾವಾಗಲೂ ದಾವೀದನ ಸ್ನೇಹಿತನಾಗಿದ್ದನು. ದಾವೀದನ ನಂತರ ಸೊಲೊಮೋನನು ನೂತನ ರಾಜನಾದನೆಂದು ಹೀರಾಮನು ಕೇಳಿ, ತನ್ನ ಸೇವಕರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. 2 ಸೊಲೊಮೋನನು ರಾಜನಾದ ಹೀರಾಮನಿಗೆ,
3 “ನನ್ನ ತಂದೆಯಾದ ದಾವೀದನು ತನ್ನ ಸುತ್ತಮುತ್ತಲಿನವರೊಂದಿಗೆ ಅನೇಕ ಯುದ್ಧಗಳನ್ನು ಮಾಡಬೇಕಾಯಿತು, ಆದ್ದರಿಂದ ಅವನು ತನ್ನ ದೇವರಾದ ಯೆಹೋವನ ಗೌರವಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ತನ್ನ ಎಲ್ಲಾ ಶತ್ರುಗಳನ್ನು ಸೋಲಿಸಲು ಯೆಹೋವನು ಅವಕಾಶ ಕೊಡುವ ತನಕ ರಾಜನಾದ ದಾವೀದನು ಕಾಯುತ್ತಿದ್ದನು. 4 ಆದರೆ ಈಗ ನನ್ನ ದೇವರಾದ ಯೆಹೋವನು ನನ್ನ ದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದ್ದಾನೆ. ಈಗ ನನಗೆ ಶತ್ರುಗಳೇ ಇಲ್ಲ. ನನ್ನ ಜನರಿಗೆ ಯಾವ ಅಪಾಯವೂ ಇಲ್ಲ.
5 “ನನ್ನ ತಂದೆಯಾದ ದಾವೀದನಿಗೆ ಯೆಹೋವನು, ‘ನಿನ್ನ ನಂತರ ನಿನ್ನ ಮಗನನ್ನು ನಾನು ರಾಜನನ್ನಾಗಿ ಮಾಡುತ್ತೇನೆ. ನನ್ನನ್ನು ಸನ್ಮಾನಿಸಲು ನಿನ್ನ ಮಗನು ನನಗೆ ಒಂದು ದೇವಾಲಯವನ್ನು ಕಟ್ಟುತ್ತಾನೆ’ ಎಂದು ವಾಗ್ದಾನ ಮಾಡಿದ್ದನು. ಈಗ, ನನ್ನ ದೇವರಾದ ಯೆಹೋವನ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಬೇಕೆಂದಿದ್ದೇನೆ. 6 ಆದ್ದರಿಂದ ನಿನ್ನ ಸಹಾಯವು ನನಗೆ ಬೇಕಾಗಿದೆ. ನಿನ್ನ ಜನರನ್ನು ಲೆಬನೋನಿಗೆ ಕಳುಹಿಸು. ಅಲ್ಲಿ ಅವರು ನನಗಾಗಿ ದೇವದಾರುಮರಗಳನ್ನು ಕಡಿದು ಬೀಳಿಸಲಿ. ನನ್ನ ಸೇವಕರೂ ನಿನ್ನವರೊಂದಿಗೆ ಕೆಲಸಮಾಡುತ್ತಾರೆ. ನಿನ್ನ ಸೇವಕರಿಗೆ ಗೊತ್ತುಪಡಿಸಿದ ವೇತನವನ್ನು ನಾನು ಕೊಡುತ್ತೇನೆ. ಆದರೆ ನಿನ್ನ ಸಹಾಯ ನನಗೆ ಬೇಕು. ನಮ್ಮ ಬಡಗಿಗಳು ಚೀದೋನ್ಯರ ಬಡಗಿಗಳಂತೆ ಕುಶಲಕರ್ಮಿಗಳಲ್ಲ” ಎಂದು ಹೇಳಿ ಕಳುಹಿಸಿದನು.
7 ಸೊಲೊಮೋನನು ಹೇಳಿದುದನ್ನು ಹೀರಾಮನು ಕೇಳಿದಾಗ ಬಹಳ ಸಂತೋಷಗೊಂಡು, “ಈ ಮಹಾ ಜನಾಂಗಕ್ಕೋಸ್ಕರ ದಾವೀದನಿಗೆ ವಿವೇಕಿಯಾದ ಮಗನನ್ನು ಕರುಣಿಸಿದ್ದಕ್ಕಾಗಿ ನಾನು ಯೆಹೋವನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದನು. 8 ನಂತರ ಹೀರಾಮನು ಸೊಲೊಮೋನನಿಗೆ ಈ ಸಂದೇಶವನ್ನು ಕಳುಹಿಸಿದನು:
“ನಿನ್ನ ಕೋರಿಕೆಯು ನನಗೆ ತಿಳಿಯಿತು. ನಾನು ನಿನಗೆ ಬೇಕಾದ ಎಲ್ಲ ದೇವದಾರು ಮರಗಳನ್ನು ಮತ್ತು ತುರಾಯಿ ಮರಗಳನ್ನು ಕೊಡುತ್ತೇನೆ. 9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರತೀರಕ್ಕೆ ತರುತ್ತಾರೆ. ನಂತರ ನಾನು ಅವುಗಳನ್ನು ಒಟ್ಟಾಗಿ ಕಟ್ಟಿ, ನೀನು ತಿಳಿಸಿದ ಸ್ಥಳಕ್ಕೆ ತೇಲಿಬಿಡುತ್ತೇನೆ. ಗೊತ್ತುಪಡಿಸಿದ ಸ್ಥಳದಲ್ಲಿ ದಿಮ್ಮಿಗಳನ್ನು ಬೇರ್ಪಡಿಸುತ್ತೇನೆ; ನೀನು ಅವುಗಳನ್ನು ತೆಗೆದುಕೊಳ್ಳಬಹುದು. ಅವುಗಳಿಗೆ ಬದಲಾಗಿ ನೀನು ನನ್ನ ಮನೆಯವರಿಗೆ ಆಹಾರಸಾಮಾಗ್ರಿಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.”
10-11 ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮತ್ತು ತುರಾಯಿ ಮರಗಳನ್ನು ಕೊಡುತ್ತಿದ್ದನು.
ಅದಕ್ಕೆ ಬದಲಾಗಿ ಸೊಲೊಮೋನನು ಪ್ರತಿವರ್ಷವೂ ಹೀರಾಮನಿಗೆ ಅವನ ಮನೆಯವರಿಗೋಸ್ಕರ ಒಂದು ಲಕ್ಷದ ಇಪ್ಪತ್ತು ಸಾವಿರ ಬುಷೆಲ್ ಗೋಧಿಯನ್ನು ಮತ್ತು ಒಂದು ಲಕ್ಷದ ಇಪ್ಪತ್ತು ಸಾವಿರ ಗ್ಯಾಲನ್ ಶುದ್ಧವಾದ ಆಲೀವ್ ಎಣ್ಣೆಯನ್ನು ಕೊಟ್ಟನು.
12 ಯೆಹೋವನು ತಾನು ವಾಗ್ದಾನ ಮಾಡಿದ್ದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಹೀರಾಮನ ಮತ್ತು ಸೊಲೊಮೋನನ ನಡುವೆ ಸಮಾಧಾನವಿತ್ತು. ಈ ಇಬ್ಬರು ರಾಜರುಗಳು ತಮ್ಮತಮ್ಮಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.
13 ರಾಜನಾದ ಸೊಲೊಮೋನನು ಇಸ್ರೇಲಿನ ಮೂವತ್ತು ಸಾವಿರ ಜನರನ್ನು ಬಲತ್ಕಾರದಿಂದ ಈ ಕಾರ್ಯಕ್ಕೆ ನೇಮಿಸಿದನು. 14 ರಾಜನಾದ ಸೊಲೊಮೋನನು ಅದೋನೀರಾಮ ಎಂಬವನನ್ನು ಇವರಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿದನು. ಸೊಲೊಮೋನನು ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಒಂದೊಂದು ಗುಂಪಿನಲ್ಲಿ ಹತ್ತು ಸಾವಿರ ಜನರಿದ್ದರು. ಪ್ರತಿಯೊಂದು ಗುಂಪಿನವರು ಲೆಬನೋನಿನಲ್ಲಿ ಒಂದು ತಿಂಗಳು ಕೆಲಸ ಮಾಡಿದ ನಂತರ ಎರಡು ತಿಂಗಳು ಮನೆಗೆ ಹಿಂತಿರುಗುತ್ತಿದ್ದರು. 15 ಸೊಲೊಮೋನನು ಎಂಭತ್ತು ಸಾವಿರ ಜನರನ್ನು ಬಲಾತ್ಕಾರದಿಂದ ಬೆಟ್ಟಪ್ರದೇಶದಲ್ಲಿ ಕೆಲಸ ಮಾಡಲು ನೇಮಿಸಿದನು. ಈ ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಎಪ್ಪತ್ತು ಸಾವಿರ ಜನರು ಕಲ್ಲುಗಳನ್ನು ಹೊರುತ್ತಿದ್ದರು. 16 ಅಲ್ಲಿ ಕೆಲಸ ಮಾಡುವ ಜನರ ಮೇಲ್ವಿಚಾರಕರಾಗಿ ಮೂರು ಸಾವಿರದ ಮುನ್ನೂರು ಜನರಿದ್ದರು. 17 ರಾಜನಾದ ಸೊಲೊಮೋನನು ದೇವಾಲಯದ ಅಡಿಪಾಯಕ್ಕಾಗಿ ದೊಡ್ಡದಾದ ಹಾಗೂ ಬೆಲೆಬಾಳುವ ಕಲ್ಲುಗಳನ್ನು ಕೊರೆದು ತೆಗೆಯಲು ಆಜ್ಞಾಪಿಸಿದನು. ಈ ಕಲ್ಲುಗಳನ್ನು ಬಹು ಜಾಗರೂಕತೆಯಿಂದ ಕತ್ತರಿಸಿ ತೆಗೆದರು. 18 ನಂತರ ಸೊಲೊಮೋನನ ಮತ್ತು ಹೀರಾಮನ ಕಟ್ಟಡ ಕಟ್ಟುವವರು ಮತ್ತು ಗೆಬಾಲ್ಯ ಜನರು ಈ ಕಲ್ಲುಗಳನ್ನು ಕೆತ್ತಿದರು. ಅವರು ಕಲ್ಲುಗಳನ್ನು ಮತ್ತು ತೊಲೆಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಸಿದ್ಧಗೊಳಿಸಿದರು.
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು
6 ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು. 2 ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು. 3 ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು. 4 ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು. 5 ನಂತರ ಸೊಲೊಮೋನನು ದೇವಾಲಯದ ಗೋಡೆಯ ಸುತ್ತಲೂ ಸಾಲಾಗಿ ಕೊಠಡಿಗಳನ್ನು ನಿರ್ಮಿಸಿದನು. ಈ ಕೊಠಡಿಗಳನ್ನು ಒಂದರ ಮೇಲೆ ಮತ್ತೊಂದನ್ನು ಕಟ್ಟಿಸಿದನು. ಈ ಸಾಲು ಕೊಠಡಿಗಳು ಮೂರು ಅಂತಸ್ತುಗಳನ್ನು ಹೊಂದಿದ್ದವು. 6 ಈ ಕೊಠಡಿಗಳು ದೇವಾಲಯದ ಗೋಡೆಯನ್ನು ಸ್ಪರ್ಶಿಸಿದರೂ, ಅವುಗಳ ತೊಲೆಗಳು ಗೋಡೆಯಲ್ಲಿ ಸೇರಿಕೊಂಡಿರಲಿಲ್ಲ. ಆ ದೇವಾಲಯದ ಗೋಡೆಯ ಮೇಲ್ಭಾಗವು ತೆಳುವಾಗಿತ್ತು. ಆ ಕೊಠಡಿಗಳ ಒಂದು ಕಡೆಯ ಗೋಡೆಯು, ಅದರ ಕೆಳಭಾಗದ ಗೋಡೆಗಿಂತ ತೆಳುವಾಗಿತ್ತು. ಕೆಳ ಅಂತಸ್ತಿನ ಕೊಠಡಿಗಳ ಅಗಲ ಏಳುವರೆ ಅಡಿಗಳು. ಮಧ್ಯದ ಅಂತಸ್ತಿನ ಕೊಠಡಿಗಳ ಅಗಲ ಒಂಭತ್ತು ಅಡಿಗಳು. ಅದರ ಮೇಲಿನ ಕೊಠಡಿಗಳ ಅಗಲ ಹತ್ತೂವರೆ ಅಡಿಗಳು. 7 ಈ ಗೋಡೆಗಳನ್ನು ಕಟ್ಟಲು ಕೆಲಸಗಾರರು ದೊಡ್ಡದೊಡ್ಡ ಕಲ್ಲುಗಳನ್ನು ಬಳಸಿದ್ದರು. ಕಲ್ಲುಗಣಿಯಿಂದ ಕಲ್ಲುಗಳನ್ನು ಹೊರಗೆ ತೆಗೆಯುವಾಗಲೇ ಕೆಲಸಗಾರರು ಈ ಕಲ್ಲುಗಳನ್ನು ಕೆತ್ತಿದ್ದರು. ಆದ್ದರಿಂದ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಉಪಕರಣಗಳ ಶಬ್ದವು ದೇವಾಲಯದಲ್ಲಿ ಕೇಳಿಸುತ್ತಿರಲಿಲ್ಲ.
8 ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು.
9 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು. 10 ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು.
11-12 ಯೆಹೋವನು ಸೊಲೊಮೋನನಿಗೆ, “ನನ್ನ ಎಲ್ಲಾ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ನೀನು ವಿಧೇಯನಾಗಿದ್ದರೆ, ನಿನ್ನ ತಂದೆಯಾದ ದಾವೀದನಿಗೆ ನಾನು ವಾಗ್ದಾನ ಮಾಡಿದವುಗಳನ್ನು ನಿನಗಾಗಿ ಈಡೇರಿಸುತ್ತೇನೆ. 13 ನೀನು ನಿರ್ಮಿಸುತ್ತಿರುವ ಈ ದೇವಾಲಯದಲ್ಲಿ ನಾನು ಇಸ್ರೇಲರೊಂದಿಗೆ ವಾಸಿಸುತ್ತೇನೆ. ನಾನು ಅವರನ್ನು ಎಂದೆಂದಿಗೂ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.
14 ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. 15 ದೇವಾಲಯದ ಒಳಗಿನ ಗೋಡೆಗಳಿಗೆ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಕಲ್ಲಿನ ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಸಿದ್ದರು. 16 ದೇವಾಲಯದ ಹಿಂಭಾಗದಲ್ಲಿ ಅವರು ಮೂವತ್ತು ಅಡಿ ಉದ್ದವಾಗಿರುವ ಒಂದು ಕೊಠಡಿಯನ್ನು ನಿರ್ಮಿಸಿದ್ದರು. ಈ ಕೊಠಡಿಯ ಗೋಡೆಗಳಿಗೂ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಈ ಕೊಠಡಿಯನ್ನು ಮಹಾ ಪವಿತ್ರಸ್ಥಳವೆಂದು ಕರೆದರು. 17 ಈ ಮಹಾ ಪವಿತ್ರಸ್ಥಳದ ಎದುರಿನಲ್ಲಿ ದೇವಾಲಯದ ಮುಖ್ಯ ಭಾಗವಿದೆ. ಈ ಕೊಠಡಿಯ ಉದ್ದ ಅರವತ್ತು ಅಡಿ. 18 ಈ ಕೊಠಡಿಯ ಗೋಡೆಗಳಿಗೆ ದೇವದಾರು ಮರದ ಹೊದಿಕೆಗಳನ್ನು ಹೊದಿಸಲಾಗಿದ್ದು ಈ ಗೋಡೆಗಳಲ್ಲಿದ್ದ ಯಾವುದೇ ಕಲ್ಲುಗಳು ಕಂಡುಬರುತ್ತಿರಲಿಲ್ಲ. ಈ ದೇವದಾರು ಮರದ ಹಲಗೆಗಳ ಮೇಲೆ ಹೂಗಳ ಮತ್ತು ಬಳ್ಳಿಗಳ ಚಿತ್ರಗಳನ್ನು ಕೆತ್ತಲಾಗಿತ್ತು.
19 ಸೊಲೊಮೋನನು ದೇವಾಲಯದ ಹಿಂದಿನ ಭಾಗದಲ್ಲಿ ಒಳಗಡೆ ಒಂದು ಕೋಣೆಯನ್ನು ಸಿದ್ಧಪಡಿಸಿದನು. ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡುವುದಕ್ಕಾಗಿಯೇ ಈ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. 20 ಈ ಕೊಠಡಿಯು ಮೂವತ್ತು ಅಡಿ ಉದ್ದ ಮೂವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಎತ್ತರವಾಗಿತ್ತು. 21 ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. 22 ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
23 ಕೆಲಸಗಾರರು ರೆಕ್ಕೆಗಳಿರುವ ಎರಡು ಕೆರೂಬಿಗಳ ಪ್ರತಿಮೆಗಳನ್ನು ಆಲೀವ್ ಮರದಿಂದ ಮಾಡಿ ಅವುಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಒಂದೊಂದು ಪ್ರತಿಮೆಯು ಹದಿನೈದು ಅಡಿ ಎತ್ತರವಾಗಿತ್ತು. 24-26 ಈ ಎರಡು ಕೆರೂಬಿಗಳು ಅಳತೆಯಲ್ಲಿಯೂ ಆಕಾರದಲ್ಲಿಯೂ ಒಂದೇ ರೀತಿಯಾಗಿದ್ದವು. ಪ್ರತಿಯೊಂದು ಕೆರೂಬಿಗಳಿಗೆ ಎರಡು ರೆಕ್ಕೆಗಳಿದ್ದವು. ಪ್ರತಿಯೊಂದು ರೆಕ್ಕೆಯ ಉದ್ದ ಏಳುವರೆ ಅಡಿಗಳು. ಒಂದು ರೆಕ್ಕೆಯಿಂದ ಮತ್ತೊಂದು ರೆಕ್ಕೆಯ ಕೊನೆಗಿರುವ ಅಂತರ ಹದಿನೈದು ಅಡಿಗಳು. ಪ್ರತಿಯೊಂದು ಕೆರೂಬಿಯ ಎತ್ತರ ಹದಿನೈದು ಅಡಿಗಳು. 27 ಈ ಕೆರೂಬಿಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಅವುಗಳು ಒಂದಕ್ಕೊಂದು ಸಮೀಪದಲ್ಲಿದ್ದವು. ಅವುಗಳ ರೆಕ್ಕೆಗಳು ಕೊಠಡಿಯ ಮಧ್ಯಭಾಗದಲ್ಲಿ ಒಂದನ್ನೊಂದು ತಾಕುತ್ತಿದ್ದವು. ಉಳಿದೆರಡು ರೆಕ್ಕೆಗಳು ಎರಡು ಕಡೆಗಳಲ್ಲಿದ್ದ ಗೋಡೆಗಳನ್ನು ತಾಕುತ್ತಿದ್ದವು. 28 ಈ ಎರಡು ಕೆರೂಬಿಗಳಿಗೆ ಚಿನ್ನದ ತಗಡನ್ನು ಹೊದಿಸಲಾಗಿತ್ತು.
29 ಮುಖ್ಯಕೊಠಡಿಯ ಮತ್ತು ಒಳಕೋಣೆಯ ಗೋಡೆಗಳ ಮೇಲೆ ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಕೆತ್ತಿದ್ದರು. 30 ಈ ಎರಡು ಕೊಠಡಿಗಳ ನೆಲಕ್ಕೆ ಚಿನ್ನದ ತಗಡನ್ನು ಹಾಸಿದ್ದರು.
31 ಕೆಲಸಗಾರರು ಆಲೀವ್ ಮರದ ಎರಡು ಬಾಗಿಲುಗಳನ್ನು ಮಾಡಿದರು. ಅವರು ಮಹಾಪವಿತ್ರ ಸ್ಥಳದ ಪ್ರವೇಶದ್ವಾರದಲ್ಲಿ ಈ ಎರಡು ಬಾಗಿಲುಗಳನ್ನು ಇಟ್ಟರು. ಬಾಗಿಲಿನ ಚೌಕಟ್ಟನ್ನು ಪಂಚಕೋಣಾಕೃತಿಯಲ್ಲಿ ಮಾಡಿದ್ದರು. 32 ಅವರು ಆಲೀವ್ ಮರದಿಂದ ಎರಡು ಬಾಗಿಲುಗಳನ್ನು ಮಾಡಿದರು. ಕೆಲಸಗಾರರು ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದರು. ನಂತರ ಬಾಗಿಲುಗಳಿಗೆ ಚಿನ್ನವನ್ನು ಹೊದಿಸಿದರು.
33 ಅವರು ಮುಖ್ಯ ಕೊಠಡಿಯ ಪ್ರವೇಶಕ್ಕೂ ಬಾಗಿಲುಗಳನ್ನು ಮಾಡಿದರು. ಅವರು ಚೌಕಾಕಾರದ ಬಾಗಿಲಿನ ಚೌಕಟ್ಟನ್ನು ಆಲೀವ್ ಮರದಿಂದ ಮಾಡಿದರು. 34 ನಂತರ ಅವರು ತುರಾಯಿ ಮರದ ಬಾಗಿಲುಗಳನ್ನು ಮಾಡಿದರು. ಅಲ್ಲಿ ಎರಡು ಬಾಗಿಲುಗಳಿದ್ದು, ಪ್ರತಿಯೊಂದೂ ಮಡಿಸುವಂತಹ ಎರಡು ಭಾಗಗಳನ್ನು ಹೊಂದಿದ್ದವು. 35 ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು.
36 ನಂತರ ಅವರು ಒಳಾಂಗಣವನ್ನು ನಿರ್ಮಿಸಿದರು. ಅವರು ಒಳಾಂಗಣದ ಸುತ್ತಲೂ ಗೋಡೆಗಳನ್ನು ನಿರ್ಮಿಸಿದರು. ಪ್ರತಿಯೊಂದು ಗೋಡೆಯು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನೂ ದೇವದಾರುಮರದ ತೊಲೆಗಳ ಒಂದು ಸಾಲನ್ನೂ ಹೊಂದಿತ್ತು.
37 ಅವರು ವರ್ಷದ ಎರಡನೆಯ ತಿಂಗಳಿನ ಜೀವ್ (ವೈಶಾಖ) ಮಾಸದಲ್ಲಿ ದೇವಾಲಯವನ್ನು ಕಟ್ಟಲಾರಂಭಿಸಿದರು. ಇಸ್ರೇಲನ್ನು ಸೊಲೊಮೋನನು ಆಳಲು ಆರಂಭಿಸಿದ ನಾಲ್ಕನೆಯ ವರ್ಷದಲ್ಲಿ ಇದು ನಡೆಯಿತು. 38 ಈ ದೇವಾಲಯದ ನಿರ್ಮಾಣವು ವರ್ಷದ ಎಂಟನೇ ತಿಂಗಳಾದ ಬುಲ್ (ಕಾರ್ತಿಕ) ತಿಂಗಳಲ್ಲಿ ಮುಗಿಯಿತು. ಅದು ಸೊಲೊಮೋನನ ಆಳ್ವಿಕೆಯ ಹನ್ನೊಂದನೆಯ ವರ್ಷವಾಗಿತ್ತು. ದೇವಾಲಯವನ್ನು ಕಟ್ಟಲು ಏಳು ವರ್ಷ ಹಿಡಿಯಿತು. ದೇವಾಲಯವನ್ನು ಅದರ ನಿಯಮಾನುಸಾರವಾಗಿ ಕಟ್ಟಿದರು.
ದೇವಾಲಯವನ್ನು ಕಟ್ಟಲು ಸೊಲೊಮೋನನ ಸಿದ್ಧತೆ
2 ದೇವಾಲಯವನ್ನು ಕಟ್ಟಿ ದೇವರಿಗೆ ಘನತೆಯನ್ನು ಸಲ್ಲಿಸಲು ಸೊಲೊಮೋನನು ಯೋಜಿಸಿದನು. ಮಾತ್ರವಲ್ಲದೆ ತನಗೆ ವಾಸಿಸಲು ಒಂದು ಅರಮನೆಯನ್ನು ಕಟ್ಟಲೂ ಸಿದ್ಧತೆ ಮಾಡಿದನು. 2 ಅದಕ್ಕಾಗಿ ಎಪ್ಪತ್ತು ಸಾವಿರ ಮಂದಿ ಕೆಲಸಗಾರರನ್ನೂ ಬೆಟ್ಟದ ಮೇಲೆ ನಡಿಯುತ್ತಿರುವ ಕಲ್ಲಿನ ಕೆಲಸಕ್ಕಾಗಿ ಎಂಭತ್ತು ಸಾವಿರ ಮಂದಿ ಕಲ್ಲುಕುಟಿಕರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ನೇಮಿಸಿದನು.
3 ಸೊಲೊಮೋನನು ತನ್ನ ಸ್ನೇಹಿತನೂ ತೂರ್ ದೇಶದ ರಾಜನೂ ಆದ ಹೂರಾಮನಿಗೆ ಹೀಗೆ ಬರೆದು ಕಳುಹಿಸಿದನು:
“ನನ್ನ ತಂದೆಯಾದ ದಾವೀದನ ಅರಮನೆಗೆ ಬೇಕಾದ ದೇವದಾರುಮರಗಳನ್ನು ನೀನು ಒದಗಿಸಿದಂತೆಯೇ ನನಗೂ ನೀನು ಸಹಾಯ ಮಾಡಬೇಕು. 4 ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.
5 “ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನು. ಆದ್ದರಿಂದ ಆತನಿಗಾಗಿ ನಾನು ಮಹತ್ತಾದ ಆಲಯವನ್ನು ಕಟ್ಟುವೆನು. 6 ಯಾವನೂ ದೇವರಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲುವುದಿಲ್ಲ. ಆದ್ದರಿಂದ ನಾನು ಆತನಿಗೆ ಆಲಯವನ್ನು ಕಟ್ಟಲಾರೆ. ನಾನು ಆತನಿಗೆ ಆಲಯವನ್ನು ಕಟ್ಟುತ್ತಿರುವುದು ಧೂಪಹಾಕಿ ಆತನನ್ನು ಘನಪಡಿಸುವದಕ್ಕಾಗಿಯಷ್ಟೇ.
7 “ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಗಳಲ್ಲಿ ಪಳಗಿರುವ ಒಬ್ಬ ಕುಶಲಕರ್ಮಿಯನ್ನು ನೀನು ಕಳುಹಿಸಿಕೊಡಬೇಕು. ಅವನಿಗೆ ನೀಲಿ, ಕೆಂಪು, ನೇರಳೆ ವರ್ಣಗಳ ಬಟ್ಟೆಗಳನ್ನು ನೇಯುವುದೂ ಗೊತ್ತಿರಬೇಕು. ನನ್ನ ತಂದೆ ಆರಿಸಿಕೊಂಡಿರುವ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಜೆರುಸಲೇಮಿನಲ್ಲಿಯೂ ಯೆಹೂದದಲ್ಲಿಯೂ ಕೆಲಸ ಮಾಡಬೇಕು. 8 ಅಲ್ಲದೆ ನನಗೆ ಲೆಬನೋನಿನಿಂದ ದೇವದಾರು, ತುರಾಯಿ ಮತ್ತು ಸುಗಂಧಮರಗಳನ್ನು ಕಳುಹಿಸಿಕೊಡು. ನಿನ್ನ ಸೇವಕರು ಲೆಬನೋನಿನ ಮರಗಳನ್ನು ಕತ್ತರಿಸುವುದರಲ್ಲಿ ನಿಪುಣರೆಂಬುದು ನನಗೆ ಗೊತ್ತಿದೆ. ನಿನ್ನ ಅನುಭವಸ್ಥ ಸೇವಕರಿಗೆ ಸಹಾಯ ಮಾಡಲು ನನ್ನ ಸೇವಕರೂ ಬರುವರು. 9 ನಾನು ಕಟ್ಟುವ ಆಲಯವು ದೊಡ್ಡದಾಗಿಯೂ ಅಂದವಾಗಿಯೂ ಇರುವದರಿಂದ ನನಗೆ ಬಹಳ ಮರ ಬೇಕಾಗುತ್ತದೆ. 10 ನಿನ್ನ ಜನರು ಮರಗಳನ್ನು ಕಡಿದು ಸಾಗಿಸುವ ಕಾರ್ಯಕ್ಕೆ ನಾನು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಗೋಧಿಯನ್ನೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಜವೆಗೋಧಿಯನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ದ್ರಾಕ್ಷಾರಸವನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು.”
11 ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು:
“ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ. 12 ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಆತನು ಭೂಪರಲೋಕಗಳನ್ನು ಉಂಟುಮಾಡಿದನು. ಅರಸನಾದ ದಾವೀದನಿಗೆ ಒಬ್ಬ ಜ್ಞಾನವುಳ್ಳ ಮಗನನ್ನು ಅನುಗ್ರಹಿಸಿದ್ದಾನೆ. ನಿನಗೆ ಜ್ಞಾನವೂ ತಿಳುವಳಿಕೆಯೂ ಇರುವದರಿಂದ ನೀನು ದೇವಾಲಯವನ್ನು ಕಟ್ಟುವೆ ಮತ್ತು ನಿನಗೂ ಒಂದು ಅರಮನೆಯನ್ನು ಕಟ್ಟುವೆ. 13 ನಾನು ಹೂರಾಮಾಬೀ ಎಂಬ ಹೆಸರಿನ ಅನುಭವಶಾಲಿಯಾದ ಕುಶಲಕರ್ಮಿಯನ್ನು ನಿನಗೋಸ್ಕರ ಕಳುಹಿಸುತ್ತೇನೆ. 14 ಅವನ ತಾಯಿಯು ದಾನ್ ಕುಟುಂಬದವಳು, ತಂದೆಯು ತೂರ್ ಪಟ್ಟಣದವನು. ಅವನು ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ ಇವುಗಳ ಕೆಲಸಗಳಲ್ಲಿ ತುಂಬ ಚತುರನು. ಅಲ್ಲದೆ ನೀಲಿ, ಕೆಂಪು ಧೂಮ್ರವರ್ಣದ ಬಟ್ಟೆಗಳನ್ನು ಮತ್ತು ಬೆಲೆಬಾಳುವ ಲಿನಿನ್ ಬಟ್ಟೆಗಳನ್ನು ನೇಯುವುದರಲ್ಲಿ ನಿಪುಣನಾಗಿದ್ದಾನೆ. ನೀನು ಏನೇ ಹೇಳಿದರೂ ಅವನು ಮಾಡಿಕೊಡುವನು. ನಿನ್ನ ಮತ್ತು ದಾವೀದನ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಕೆಲಸ ಮಾಡುವನು.
15 “ನೀನು ನನ್ನ ಸೇವಕರಿಗೆ ಆಹಾರವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೊಡುವ ಭರವಸೆ ನೀಡಿರುವೆ. ಆದ್ದರಿಂದ ದಯವಿಟ್ಟು ಇವುಗಳನ್ನು ಒದಗಿಸಿಕೊಡು. 16 ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ಅವುಗಳನ್ನು ಜೋಡಿಸಿ ತೆಪ್ಪಗಳನ್ನಾಗಿ ಮಾಡಿ ಸಮುದ್ರದಲ್ಲಿ ತೇಲಿಬಿಡುವೆವು. ಅವು ಯೊಪ್ಪಕ್ಕೆ ತಲುಪಿದಾಗ ನೀನು ಅವುಗಳನ್ನು ಶೇಖರಿಸಿ ಬೇಕಾದ ಕಡೆಗೆ ರವಾನಿಸು.”
17 ಆಮೇಲೆ ಸೊಲೊಮೋನನು ತನ್ನ ರಾಜ್ಯದಲ್ಲಿದ್ದ ಎಲ್ಲಾ ಪರದೇಶಸ್ಥರನ್ನು ಲೆಕ್ಕಿಸಿದನು. ಸೊಲೊಮೋನನ ತಂದೆಯಾದ ದಾವೀದನು ಮಾಡಿದ ಜನಗಣತಿಯ ನಂತರ ಈ ಜನಗಣತಿಯನ್ನು ಮಾಡಲಾಯಿತು. ಅವರಲ್ಲಿ ಒಂದು ಲಕ್ಷದ ಐವತ್ತ ಮೂರು ಸಾವಿರದ ಆರುನೂರು ಮಂದಿ ಪರದೇಶದವರಿದ್ದರು. 18 ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಸೊಲೊಮೋನನು ಹೊರೆಹೊರುವದಕ್ಕಾಗಿ ನೇಮಿಸಿದನು; ಎಂಭತ್ತುಸಾವಿರ ಮಂದಿಯನ್ನು ಬೆಟ್ಟಗಳಲ್ಲಿ ಕಲ್ಲಿನ ಕೆಲಸಮಾಡಲು ನೇಮಿಸಿದನು; ಮೂರು ಸಾವಿರದ ಆರುನೂರು ಮಂದಿಯನ್ನು ಕಾರ್ಮಿಕರ ಮೇಲ್ವಿಚಾರಣೆಗೋಸ್ಕರ ನೇಮಿಸಿದನು.
ಸೊಲೊಮೋನನು ದೇವಾಲಯವನ್ನು ಕಟ್ಟಿದನು
3 ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು. 2 ಸೊಲೊಮೋನನು ತನ್ನ ರಾಜ್ಯಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ದೇವಾಲಯದ ಕೆಲಸವನ್ನು ಪ್ರಾರಂಭಿಸಿದನು.
3 ದೇವಾಲಯದ ಅಸ್ತಿವಾರದ ಉದ್ದಳತೆಯು ಹೀಗಿತ್ತು: ಉದ್ದ ಅರವತ್ತು ಮೊಳ, ಅಗಲ ಇಪ್ಪತ್ತು ಮೊಳ. ದೇವಾಲಯದ ಅಳತೆಗಾಗಿ ಸೊಲೊಮೋನನು ಹಳೆಯ ಮೊಳದ ಅಳತೆಯನ್ನು ಉಪಯೋಗಿಸಿದನು. 4 ದೇವಾಲಯದ ಮುಂದುಗಡೆಯಿದ್ದ ಮಂಟಪವು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಎತ್ತರವಿತ್ತು. ಮಂಟಪದ ಒಳಮೈಯನ್ನು ಸೊಲೊಮೋನನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. 5 ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು. 6 ದೇವಾಲಯವನ್ನು ಬೆಲೆಯುಳ್ಳ ರತ್ನಗಳಿಂದ ಅಲಂಕರಿಸಿದನು. ಸೊಲೊಮೋನನು ಪರ್ವಯಿಮ್ ದೇಶದ ಬಂಗಾರವನ್ನು ಉಪಯೋಗಿಸಿದನು. 7 ದೇವಾಲಯದ ಗೋಡೆಯ ಒಳಭಾಗವನ್ನು ಸೊಲೊಮೋನನು ಬಂಗಾರದಿಂದ ಹೊದಿಸಿದನು ಮತ್ತು ಆಲಯದ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
8 ಸೊಲೊಮೋನನು ಮಹಾಪವಿತ್ರ ಸ್ಥಳವನ್ನು ತಯಾರಿಸಿದನು. ಅದು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಅಗಲವಿತ್ತು. ದೇವಾಲಯದ ಅಗಲದಷ್ಟೇ ಅದು ಅಗಲವಿತ್ತು. ಅದರ ಗೋಡೆಗಳನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ಆ ಬಂಗಾರವು ಇಪ್ಪತ್ತಮೂರು ಟನ್ ತೂಕವಿತ್ತು. 9 ಬಂಗಾರದ ಮೊಳೆಗಳ ತೂಕ ಅರ್ಧ ಕಿಲೋಗ್ರಾಂ. ಸೊಲೊಮೋನನು ಮೇಲುಪ್ಪರಿಗೆಯ ಕೋಣೆಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು. 10 ಸೊಲೊಮೋನನು ಮಹಾಪವಿತ್ರ ಸ್ಥಾನದೊಳಗೆ ಇಡುವದಕ್ಕಾಗಿ ಎರಡು ಕೆರೂಬಿಗಳನ್ನು ಮಾಡಿಸಿ ಅವುಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು. 11 ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು. 12 ಅಂತೆಯೇ ಎರಡನೆಯ ಕೆರೂಬಿಯ ಇನ್ನೊಂದು ರೆಕ್ಕೆಯು ಮತ್ತೊಂದು ಗೋಡೆಗೆ ತಾಗಿತ್ತು. 13 ಹೀಗೆ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಸ್ಥಳವನ್ನು ಆವರಿಸಿಕೊಂಡಿದ್ದವು. ಅವು ಪವಿತ್ರಸ್ಥಳದ ಕಡೆಗೆ ಮುಖಮಾಡಿಕೊಂಡು ನಿಂತಿದ್ದವು.
14 ಸೊಲೊಮೋನನು ದೇವಾಲಯಕ್ಕೆ ನೀಲ, ಧೂಮ್ರ ಮತ್ತು ಕೆಂಪು ಬಟ್ಟೆ ಮತ್ತು ಬೆಲೆಬಾಳುವ ನಾರುಬಟ್ಟೆಗಳಿಂದ ಪರದೆಗಳನ್ನು ತಯಾರಿಸಿ ಅದರ ಮೇಲೆ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಿದನು.
15 ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು. 16 ಅವನು ಕೊರಳಿನ ಸರಗಳನ್ನು ಮಾಡಿಸಿ ಅವುಗಳನ್ನು ಕಂಬಗಳ ಮೇಲ್ಭಾಗದಲ್ಲಿ ಸಿಕ್ಕಿಸಿದನು. ಅವನು ನೂರು ದಾಳಿಂಬೆ ಹಣ್ಣುಗಳನ್ನು ಮಾಡಿಸಿ ತೂಗುಹಾಕಿದನು. 17 ಈ ಕಂಬಗಳನ್ನು ದೇವಾಲಯದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ ಯಾಕೀನ್ ಎಂತಲೂ ಎಡಗಡೆಯ ಕಂಬಕ್ಕೆ ಬೋವಜ್ ಎಂತಲೂ ಹೆಸರಿಟ್ಟನು.
Kannada Holy Bible: Easy-to-Read Version. All rights reserved. © 1997 Bible League International