Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 3-4

ಜ್ಞಾನಕ್ಕಾಗಿ ಸೊಲೊಮೋನನ ಬೇಡಿಕೆ

ಸೊಲೊಮೋನನು ಈಜಿಪ್ಟಿನ ರಾಜನಾದ ಫರೋಹನ ಮಗಳನ್ನು ಮದುವೆಯಾಗಿ ಅವನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಸೊಲೊಮೋನನು ಅವಳನ್ನು ದಾವೀದನಗರಕ್ಕೆ ಕರೆದು ತಂದನು. ಸೊಲೊಮೋನನು ಆ ಸಮಯದಲ್ಲಿ ತನ್ನ ಅರಮನೆಯನ್ನು ಮತ್ತು ಯೆಹೋವನ ದೇವಾಲಯಗಳನ್ನು ನಿರ್ಮಿಸುತ್ತಿದ್ದನು. ಜೆರುಸಲೇಮಿನ ಸುತ್ತಲೂ ಒಂದು ಗೋಡೆಯನ್ನು ಸಹ ಸೊಲೊಮೋನನು ನಿರ್ಮಿಸುತ್ತಿದ್ದನು. ದೇವಾಲಯದ ನಿರ್ಮಾಣವು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಜನರು ಅದುವರೆವಿಗೂ ಎತ್ತರವಾದ ಸ್ಥಳಗಳಲ್ಲಿ ಯಜ್ಞವೇದಿಕೆಯ ಮೇಲೆ ಪಶುಗಳ ಯಜ್ಞಗಳನ್ನು ಸಮರ್ಪಿಸುತ್ತಿದ್ದರು. ಸೊಲೊಮೋನನು ತನಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದನು. ಅವನ ತಂದೆಯಾದ ದಾವೀದನು ಅವನಿಗೆ ಮಾಡಬೇಕೆಂದು ಹೇಳಿದ್ದ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ವಿಧೇಯತೆಯನ್ನು ತೋರ್ಪಡಿಸಿದನು. ಆದರೆ ಸೊಲೊಮೋನನು ತನಗೆ ದಾವೀದನು ಹೇಳದೆ ಇದ್ದ ಕೆಲವು ಕಾರ್ಯಗಳನ್ನೂ ಮಾಡಿದನು. ಸೊಲೊಮೋನನು ಎತ್ತರವಾದ ಸ್ಥಳಗಳನ್ನು ಯಜ್ಞವನ್ನರ್ಪಿಸಲು ಮತ್ತು ಧೂಪಹಾಕಲು ಉಪಯೋಗಿಸುತ್ತಿದ್ದನು.

ರಾಜನಾದ ಸೊಲೊಮೋನನು ಯಜ್ಞವನ್ನು ಅರ್ಪಿಸಲು ಗಿಬ್ಯೋನಿಗೆ ಹೋದನು. ಅದು ಅತ್ಯಂತ ಮುಖ್ಯವಾದ ಎತ್ತರದ ಸ್ಥಳವಾದುದರಿಂದ ಅವನು ಅಲ್ಲಿಗೆ ಹೋದನು. ಸೊಲೊಮೋನನು ಒಂದು ಸಾವಿರ ಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸಿದನು. ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

ಸೊಲೊಮೋನನು, “ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಬಹಳ ದಯಾಪರನಾಗಿದ್ದೆ. ಅವನು ನಿನ್ನನ್ನು ಅನುಸರಿಸಿದನು. ಅವನು ಒಳ್ಳೆಯವನಾಗಿದ್ದು ನೀತಿವಂತನಾಗಿ ಬದುಕಿದನು. ಅವನ ನಂತರ ಅವನ ಮಗನನ್ನು ಅವನ ಸಿಂಹಾಸನದಲ್ಲಿ ಕುಳ್ಳಿರಿಸಿ ಆಳಲು ನೇಮಿಸಿ ನೀನು ಮಹಾಕೃಪೆಯನ್ನು ತೋರಿಸಿದೆ. ನನ್ನ ದೇವರಾದ ಯೆಹೋವನೇ, ನನ್ನ ತಂದೆಯ ಸ್ಥಾನದಲ್ಲಿ ನನ್ನನ್ನು ನೀನು ರಾಜನನ್ನಾಗಿ ಮಾಡಿದೆ. ಆದರೆ ನಾನೊಬ್ಬ ಚಿಕ್ಕ ಮಗುವಿನಂತಿದ್ದೇನೆ. ನಾನು ಮಾಡಬೇಕಾದ ಕಾರ್ಯಗಳನ್ನು ಮಾಡಲು ಇರಬೇಕಾದ ಬುದ್ದಿವಂತಿಕೆಯು ನನ್ನಲ್ಲಿಲ್ಲ. ನಿನ್ನ ಸೇವಕನಾದ ನಾನು, ನೀನೇ ಆರಿಸಿಕೊಂಡಿರುವ ಜನರ ನಡುವೆ ಇದ್ದೇನೆ. ಇಲ್ಲಿ ಅನೇಕಾನೇಕ ಜನರಿದ್ದಾರೆ. ಅವರನ್ನು ಎಣಿಸಲಾಗದು, ಒಬ್ಬ ಆಡಳಿತಗಾರನು ಅವರ ಮಧ್ಯದಲ್ಲಿದ್ದು ಅನೇಕ ತೀರ್ಪುಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಿನ್ನ ಜನರನ್ನು ಒಳ್ಳೆಯ ರೀತಿಯಲ್ಲಿ ಆಳಲು ಮತ್ತು ಅವರಿಗೆ ಸರಿಯಾದ ತೀರ್ಪುಗಳನ್ನು ನೀಡಲು ನನಗೆ ವಿವೇಕವನ್ನು ಕರುಣಿಸು. ಇದು ನನಗೆ ಸರಿ ಮತ್ತು ತಪ್ಪುಗಳ ನಡುವಿರುವ ಭೇದವನ್ನು ತಿಳಿಸಿಕೊಡುತ್ತದೆ. ನನಗೆ ಉತ್ತಮವಾದ ವಿವೇಕವಿಲ್ಲದಿದ್ದರೆ, ನಾನು ಈ ಮಹಾಜನಾಂಗವನ್ನು ಆಳುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದನು.

10 ಸೊಲೊಮೋನನ ಈ ಕೋರಿಕೆಯನ್ನು ಕೇಳಿ ಯೆಹೋವನಿಗೆ ಸಂತೋಷವಾಯಿತು. 11 ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ಹೆಚ್ಚು ಆಯಸ್ಸನ್ನೂ ಕೇಳಲಿಲ್ಲ, ಶ್ರೀಮಂತಿಕೆಯನ್ನೂ ಕೇಳಲಿಲ್ಲ, ನಿನ್ನ ಶತ್ರುಗಳಿಗೆ ಮರಣವನ್ನು ದಯಪಾಲಿಸೆಂದೂ ಕೇಳಲಿಲ್ಲ, ನೀನು ನ್ಯಾಯವಾದ ತೀರ್ಪು ನೀಡಲು ವಿವೇಕವನ್ನು ಕೇಳಿದೆ. 12 ನಿನ್ನ ಕೋರಿಕೆಯನ್ನು ಅನುಗ್ರಹಿಸುವೆನು; ನಿನ್ನನ್ನು ಜ್ಞಾನಿಯನ್ನಾಗಿಯೂ ವಿವೇಕಿಯನ್ನಾಗಿಯೂ ಮಾಡುವೆನು. ಪೂರ್ವಕಾಲದಲ್ಲಿ ನಿನ್ನಂತವರು ಯಾರೊಬ್ಬರೂ ಇರಲಿಲ್ಲ ಎನ್ನುವಷ್ಟು ಜ್ಞಾನಿಯನ್ನಾಗಿ ನಿನ್ನನ್ನು ಮಾಡುತ್ತೇನೆ. ಮುಂದೆ ನಿನ್ನಂತವರು ಯಾರೊಬ್ಬರೂ ಇರುವುದಿಲ್ಲ. 13 ನೀನು ಕೇಳದೆಹೋದ ಬಿನ್ನಹಗಳನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ಜೀವವಿರುವವರೆಗೆ ನೀನು ಶ್ರೀಮಂತನಾಗಿದ್ದು ಘನಮಾನವನ್ನು ಹೊಂದುವಿ. ಪ್ರಪಂಚದಲ್ಲಿ ನಿನ್ನಂತಹ ಉನ್ನತವಾದ ಬೇರೊಬ್ಬ ರಾಜನು ಇರುವುದಿಲ್ಲ. 14 ನೀನು ನನ್ನ ಕಟ್ಟಳೆಗಳನ್ನು ಆಜ್ಞೆಗಳನ್ನು ಅನುಸರಿಸುವುದರ ಮೂಲಕ ನನಗೆ ವಿಧೇಯನಾಗಿರಬೇಕು ಎಂದು ಹೇಳುತ್ತೇನೆ. ನಿನ್ನ ತಂದೆಯಾದ ದಾವೀದನು ನಡೆದ ಮಾರ್ಗದಲ್ಲಿ ನೀನೂ ನಡೆ. ಆಗ ನಾನು ನಿನಗೆ ದೀರ್ಘಾಯುಷ್ಯವನ್ನು ಕೊಡುತ್ತೇನೆ” ಎಂದು ಹೇಳಿದನು.

15 ಸೊಲೊಮೋನನು ಎಚ್ಚರಗೊಂಡನು. ದೇವರು ಕನಸಿನಲ್ಲಿ ತನ್ನೊಡನೆ ಮಾತನಾಡಿದನೆಂಬುದು ಅವನಿಗೆ ತಿಳಿಯಿತು. ನಂತರ ಸೊಲೊಮೋನನು ಜೆರುಸಲೇಮಿಗೆ ಹೋಗಿ, ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಎದುರಿನಲ್ಲಿ ನಿಂತುಕೊಂಡನು. ಸೊಲೊಮೋನನು ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಅನಂತರ ಅವನು ತನ್ನ ಆಳ್ವಿಕೆಗೆ ಸಹಾಯ ಮಾಡಿದ ಎಲ್ಲ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಒಂದು ಔತಣವನ್ನೇರ್ಪಡಿಸಿದನು.

16 ಒಂದು ದಿನ ಇಬ್ಬರು ವೇಶ್ಯೆಯರು ಸೊಲೊಮೋನನ ಹತ್ತಿರಕ್ಕೆ ಬಂದರು. ಅವರು ರಾಜನ ಎದುರಿನಲ್ಲಿ ನಿಂತರು. 17 ಒಬ್ಬ ಸ್ತ್ರೀಯು, “ಸ್ವಾಮಿ, ನಾನು ಮತ್ತು ಈ ಸ್ತ್ರೀಯು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವಿಬ್ಬರೂ ಗರ್ಭಿಣಿಯರಾಗಿದ್ದೆವು ಮತ್ತು ನಮ್ಮ ಮಕ್ಕಳಿಗೆ ಜನ್ಮಕೊಡಲು ಸಿದ್ಧರಾಗಿದ್ದೆವು. ಅವಳು ನನ್ನ ಹತ್ತಿರ ಇದ್ದಾಗ ನಾನು ನನ್ನ ಮಗುವಿಗೆ ಜನ್ಮನೀಡಿದೆ. 18 ಮೂರು ದಿನಗಳ ತರುವಾಯ, ಈ ಸ್ತ್ರೀಯೂ ತನ್ನ ಮಗುವಿಗೆ ಜನ್ಮನೀಡಿದಳು. ಮನೆಯಲ್ಲಿ ನಮ್ಮೊಡನೆ ಬೇರೆ ಯಾರೂ ಇರಲಿಲ್ಲ. ಅಲ್ಲಿ ನಾವಿಬ್ಬರೇ ಇದ್ದೆವು. 19 ಒಂದು ರಾತ್ರಿ, ಈ ಸ್ತ್ರೀಯು ಗಾಢನಿದ್ರೆಯಲ್ಲಿ ತನ್ನ ಮಗುವಿನ ಮೇಲೆ ಹೊರಳಿದ್ದರಿಂದ ಆ ಮಗು ಸತ್ತುಹೋಯಿತು. 20 ಅಂದು ರಾತ್ರಿ ನಾನು ಗಾಢನಿದ್ರೆಯಲ್ಲಿರುವಾಗ ಈಕೆಯು ನನ್ನ ಹಾಸಿಗೆಯಿಂದ ನನ್ನ ಮಗುವನ್ನು ತೆಗೆದುಕೊಂಡು ತನ್ನ ಹಾಸಿಗೆಗೆ ಹೋದಳು; ತನ್ನ ಸತ್ತ ಮಗುವನ್ನು ನನ್ನ ಹಾಸಿಗೆಯಲ್ಲಿಟ್ಟಳು. 21 ಮುಂಜಾನೆ ನಾನು ಎಚ್ಚರಗೊಂಡು ನನ್ನ ಮಗುವಿಗೆ ಹಾಲು ಕುಡಿಸಲು ಸಿದ್ಧಳಾದಾಗ ಮಗು ಸತ್ತುಹೋಗಿರುವುದನ್ನು ಕಂಡೆನು. ಆ ಮಗುವನ್ನು ನಾನು ಸೂಕ್ಷ್ಮವಾಗಿ ನೋಡಿದಾಗ ಆ ಮಗು ನನ್ನದಲ್ಲವೆಂಬುದು ನನಗೆ ತಿಳಿಯಿತು” ಎಂದು ಹೇಳಿದಳು.

22 ಆದರೆ ಇನ್ನೊಬ್ಬ ಸ್ತ್ರೀಯು, “ಇಲ್ಲ! ಜೀವಂತವಾಗಿರುವ ಮಗು ನನ್ನದು. ಸತ್ತಿರುವ ಮಗು ನಿನ್ನದು!” ಎಂದು ಹೇಳಿದಳು.

ಆದರೆ ಮೊದಲನೆಯ ಸ್ತ್ರೀಯು, “ಇಲ್ಲ! ನೀನು ಸುಳ್ಳು ಹೇಳುತ್ತಿರುವೆ! ಸತ್ತಿರುವ ಮಗು ನಿನ್ನದು. ಜೀವಂತವಾಗಿರುವ ಮಗು ನನ್ನದು!” ಎಂದು ಹೇಳಿದಳು. ಹೀಗೆ ಆ ಇಬ್ಬರು ಸ್ತ್ರೀಯರು ರಾಜನ ಎದುರಿನಲ್ಲಿ ವಾದಿಸಿದರು.

23 ಆಗ ರಾಜನಾದ ಸೊಲೊಮೋನನು, “ಜೀವಂತವಾಗಿರುವ ಮಗು ನನ್ನದೆಂದೂ ಸತ್ತಿರುವ ಮಗು ಅವಳದೆಂದೂ ನೀವಿಬ್ಬರೂ ಹೇಳುತ್ತಿದ್ದೀರಲ್ಲವೇ?” ಎಂದು ಹೇಳಿ, 24 ತನ್ನ ಸೇವಕರಿಗೆ, “ಒಂದು ಕತ್ತಿಯನ್ನು ತೆಗೆದುಕೊಂಡು ಬಂದು 25 ಜೀವಂತವಾಗಿರುವ ಮಗುವನ್ನು ಕತ್ತರಿಸಿ ಅವರಿಬ್ಬರಿಗೂ ಅರ್ಧರ್ಧ ಮಗುವನ್ನು ಕೊಟ್ಟುಬಿಡಿ” ಎಂದು ಆಜ್ಞಾಪಿಸಿದನು.

26 ಆಗ ಎರಡನೆಯ ಸ್ತ್ರೀಯು, “ಈಗ ಸರಿಹೋಯಿತು. ಮಗುವನ್ನು ಎರಡು ಹೋಳುಮಾಡಿ. ಆಗ ನಮ್ಮಿಬ್ಬರಿಗೂ ಅವನಿರುವುದಿಲ್ಲ” ಎಂದಳು. ಆದರೆ ಮೊದಲನೆಯ ಸ್ತ್ರೀಯು, ಅಂದರೆ, ತನ್ನ ಮಗುವಿನ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ ನಿಜವಾದ ತಾಯಿಯು ರಾಜನಿಗೆ, “ದಯವಿಟ್ಟು ಆ ಮಗುವನ್ನು ಕೊಲ್ಲಬೇಡಿ ಸ್ವಾಮಿ! ಅವಳಿಗೇ ಕೊಟ್ಟುಬಿಡಿ” ಎಂದು ಹೇಳಿದಳು.

27 ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು.

28 ಸೊಲೊಮೋನನ ತೀರ್ಪಿನ ವಿಚಾರವು ಇಸ್ರೇಲಿನ ಜನರಿಗೆ ತಿಳಿಯಿತು. ಅವನು ವಿವೇಕಿಯಾದುದರಿಂದ ಅವರು ಅವನನ್ನು ಗೌರವಿಸಿದರು ಮತ್ತು ಸನ್ಮಾನಿಸಿದರು. ಅವನು ದೇವರ ಜ್ಞಾನದಿಂದ ಸಮಂಜಸವಾದ ತೀರ್ಪು ನೀಡುತ್ತಾನೆಂದು ಅವರು ಕಂಡುಕೊಂಡರು.

ಸೊಲೊಮೋನನ ರಾಜ್ಯ

ರಾಜನಾದ ಸೊಲೊಮೋನನು ಇಸ್ರೇಲಿನ ಜನತೆಯನ್ನೆಲ್ಲ ಆಳಿದನು. ಅವನಿಗೆ ಆಳಲು ನೆರವಾದ ಅವನ ಮುಖ್ಯಾಧಿಕಾರಿಗಳ ಹೆಸರುಗಳು ಹೀಗಿವೆ:

ಚಾದೋಕನ ಮಗನಾದ ಅಜರ್ಯನು ಯಾಜಕನಾಗಿದ್ದನು.

ಶೀಷನ ಮಕ್ಕಳಾದ ಎಲೀಹೋರೆಫ್ ಮತ್ತು ಅಹೀಯಾಹು; ಇವರಿಬ್ಬರೂ ನ್ಯಾಯಾಲಯದಲ್ಲಿ ನಡೆದ ಸಂಗತಿಗಳ ಕುರಿತಾಗಿ ಟಿಪ್ಪಣಿ ಬರೆಯುವ ಉದ್ಯೋಗವನ್ನು ಹೊಂದಿದ್ದರು.

ಅಹೀಲೂದನ ಮಗನಾದ ಯೆಹೋಷಾಫಾಟನು ಜನರ ಇತಿಹಾಸದ ಕುರಿತು ಟಿಪ್ಪಣಿ ಬರೆದನು.

ಯೆಹೋಯಾದಾವನ ಮಗನಾದ ಬೆನಾಯ; ಬೆನಾಯನು ಸೇನಾಧಿಪತಿಯಾಗಿದ್ದನು.

ಚಾದೋಕ ಮತ್ತು ಎಬ್ಯಾತಾರರು; ಚಾದೋಕ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.

ನಾತಾನನ ಮಗನಾದ ಅಜರ್ಯ; ಅಜರ್ಯನು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಕನಾಗಿದ್ದನು.

ನಾತಾನನ ಮಗನಾದ ಚಾಬೂದ; ಚಾಬೂದನು ರಾಜನಾದ ಸೊಲೊಮೋನನಿಗೆ ಯಾಜಕನೂ ಸಲಹೆಗಾರನೂ ಆಗಿದ್ದನು.

ಅಹೀಷಾರ್; ಅಹೀಷಾರನು ರಾಜನ ಅರಮನೆಯ ಪ್ರತಿಯೊಂದರಲ್ಲೂ ಜವಾಬ್ದಾರನಾಗಿದ್ದನು.

ಅಬ್ದನ ಮಗನಾದ ಅದೋನೀರಾಮ; ಅದೋನೀರಾಮನು ಗುಲಾಮರ ಮೇಲ್ವಿಚಾರಕನಾಗಿದ್ದನು.

ಇಸ್ರೇಲರನ್ನು ಹನ್ನೆರಡು ವಿಭಾಗ ಮಾಡಿ ಅವುಗಳನ್ನು ಜಿಲ್ಲೆಗಳೆಂದು ಕರೆದರು. ಪ್ರತಿಯೊಂದು ಜಿಲ್ಲೆಯನ್ನು ಆಳಲು ಸೊಲೊಮೋನನು ರಾಜ್ಯಪಾಲರನ್ನು ನೇಮಿಸಿದನು. ಈ ರಾಜ್ಯಪಾಲರು ತಮ್ಮ ಜಿಲ್ಲೆಗಳಿಂದ ಆಹಾರಪದಾರ್ಥಗಳನ್ನು ಸಂಗ್ರಹಿಸಿ ರಾಜನಿಗೂ ಅವನ ಕುಟುಂಬಕ್ಕೂ ಕೊಡಬೇಕೆಂದು ಆಜ್ಞಾಪಿಸಿದನು. ಪ್ರತಿಯೊಬ್ಬ ರಾಜ್ಯಪಾಲನು ವರ್ಷಕ್ಕೆ ಒಂದು ತಿಂಗಳು ರಾಜನಿಗೆ ಆಹಾರಪದಾರ್ಥಗಳನ್ನು ಕೊಡುವ ಜವಾಬ್ದಾರಿಯನ್ನು ಹೊಂದಿದ್ದನು. ಹನ್ನೆರಡು ರಾಜ್ಯಪಾಲರುಗಳ ಹೆಸರುಗಳು ಹೀಗಿವೆ:

ಎಫ್ರಾಯೀಮ್ ಬೆಟ್ಟಪ್ರದೇಶಕ್ಕೆ ಬೆನ್-ಹೂರನು ರಾಜ್ಯಪಾಲನಾಗಿದ್ದನು.

ಮಾಕಚ್, ಶಾಲ್ಬೀಮ್, ಬೇತ್‌ಷೆಮೆಷ್, ಏಲೋನ್, ಬೇತ್‌ಹಾನಾನ್‌ಗಳಿಗೆ ಬೆನ್‌ದೆಕರನು ರಾಜ್ಯಪಾಲನಾಗಿದ್ದನು.

10 ಅರುಬ್ಬೋತ್, ಸೋಕೋ, ಹೇಫರ್‌ಗಳಿಗೆ ಬೆನ್‌ಹೆಸೆದನು ರಾಜ್ಯಪಾಲನಾಗಿದ್ದನು.

11 ನಾಫೋತ್ ದೋರ್‌ಗೆ ಬೆನ್‌ಅಬೀನಾದಾಬನು ರಾಜ್ಯಪಾಲನಾಗಿದ್ದನು. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.

12 ತಾಣಕ್, ಮೆಗಿದ್ದೋ ಮತ್ತು ಚಾರೆತಾನಿನ ಅಂಚಿನಲ್ಲಿದ್ದ ಬೇತ್‌ಷೆಯಾನಿನ ಎಲ್ಲ ಪ್ರದೇಶಕ್ಕೆ ಅಹೀಲೂದನ ಮಗನಾದ ಬಾಣಾ ರಾಜ್ಯಪಾಲನಾಗಿದ್ದನು. ಇದು ಇಜ್ರೇಲಿನ ತಳದಲ್ಲಿ ಬೇತ್‌ಷೆಯಾನಿನಿಂದ ಅಬೇಲ್ ಮೆಹೋಲವರೆಗಿರುವ, ಯೊಕ್ಮೆಯಾನಿನ ಆಚೆಗಿರುವ ಪ್ರದೇಶ.

13 ರಾಮೋತ್ ಗಿಲ್ಯಾದಿಗೆ ಬೆನ್‌ಗೆಬೆರನು ರಾಜ್ಯಪಾಲನಾಗಿದ್ದನು. ಗಿಲ್ಯಾದಿನ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ ಮತ್ತು ಪಟ್ಟಣಗಳೆಲ್ಲಕ್ಕೂ ಅವನು ರಾಜ್ಯಪಾಲನಾಗಿದ್ದನು. ಅವನು ಬಾಷಾನಿನ ಅರ್ಗೋಬ್ ಜಿಲ್ಲೆಗೂ ರಾಜ್ಯಪಾಲನಾಗಿದ್ದನು. ಈ ಪ್ರದೇಶದಲ್ಲಿ ಗೋಡೆಗಳಿಂದ ಸುತ್ತುವರಿದ ಅರವತ್ತು ನಗರಗಳಿದ್ದವು. ಈ ನಗರಗಳ ದ್ವಾರದಲ್ಲಿ ಹಿತ್ತಾಳೆಯ ಸಲಾಕೆಗಳುಳ್ಳ ಬಾಗಿಲುಗಳಿದ್ದವು.

14 ಮಹನಯಿಮಿಗೆ ಇದ್ದೋವಿನ ಮಗನಾದ ಅಹೀನಾದಾಬನು ರಾಜ್ಯಪಾಲನಾಗಿದ್ದನು.

15 ನಫ್ತಾಲಿಗೆ ಅಹೀಮಾಚನು ರಾಜ್ಯಪಾಲನಾಗಿದ್ದನು. ಸೊಲೊಮೋನನ ಮಗಳಾದ ಬಾಸೆಮತಳನ್ನು ಇವನು ಮದುವೆಯಾಗಿದ್ದನು.

16 ಆಶೇರಿಗೂ ಅಲೋತಿಗೂ ಹೂಷೈಯನ ಮಗ ಬಾಣನು ರಾಜ್ಯಪಾಲನಾಗಿದ್ದನು.

17 ಇಸ್ಸಾಕಾರಿಗೆ ಫಾರೂಹನ ಮಗನಾದ ಯೆಹೋಷಾಫಾಟನು ರಾಜ್ಯಪಾಲನಾಗಿದ್ದನು.

18 ಬೆನ್ಯಾಮೀನಿಗೆ ಏಲನ ಮಗನಾದ ಶಿಮ್ಮಿಯು ರಾಜ್ಯಪಾಲನಾಗಿದ್ದನು.

19 ಊರಿಯ ಮಗನಾದ ಗೆಬೆರನು ಗಿಲ್ಯಾದಿನ ರಾಜ್ಯಪಾಲನಾಗಿದ್ದನು. ಅಮೋರಿಯರ ರಾಜನಾದ ಸೀಹೋನನು ಮತ್ತು ಬಾಷಾನಿನ ರಾಜನಾದ ಓಗನು ವಾಸವಾಗಿದ್ದ ರಾಜ್ಯವೇ ಗಿಲ್ಯಾದ್. ಆದರೆ ಆ ಜಿಲ್ಲೆಗೆ ಗೆಬೆರ್ ಒಬ್ಬನೇ ರಾಜ್ಯಪಾಲನಾಗಿದ್ದನು.

20 ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಅನೇಕ ಜನರಿದ್ದರು. ಅಲ್ಲಿನ ಜನಸಂಖ್ಯೆಯು ಸಮುದ್ರತೀರದ ಮರಳಿನ ಕಣಗಳಷ್ಟಿತ್ತು. ಜನರು ಸಂತುಷ್ಟರಾಗಿ ಜೀವಿಸುತ್ತಿದ್ದರು. ಅವರು ತಿಂದು ಕುಡಿದು ಸಂತೋಷಿಸುತ್ತಿದ್ದರು.

21 ಸೊಲೊಮೋನನು ಯೂಫ್ರೇಟೀಸ್ ನದಿಯಿಂದ ಮೊದಲುಗೊಂಡು ಫಿಲಿಷ್ಟಿಯರ ದೇಶದವರೆಗಿನ ರಾಜ್ಯಗಳನ್ನೆಲ್ಲ ಆಳುತ್ತಿದ್ದನು. ಅವನ ರಾಜ್ಯಾಧಿಕಾರವು ಈಜಿಪ್ಟಿನ ಗಡಿಯವರೆಗೆ ವಿಸ್ತರಿಸಿತ್ತು. ಈ ದೇಶಗಳು ಸೊಲೊಮೋನನಿಗೆ ಕಪ್ಪಕಾಣಿಕೆಯನ್ನು ಕೊಡುತ್ತ ಅವನ ಜೀವಮಾನ ಪೂರ್ತಿ ಅವರು ಅವನಿಗೆ ಆಧೀನರಾಗಿದ್ದರು.

22-23 ಪ್ರತಿದಿನವೂ ಸೊಲೊಮೋನನಿಗೆ ಮತ್ತು ಅವನ ಪಂಕ್ತಿಯಲ್ಲಿ ಊಟಮಾಡುವವರಿಗೆ ಬೇಕಾದ ಆಹಾರಪದಾರ್ಥಗಳು ಹೀಗಿವೆ: ನೂರೈವತ್ತು ಬುಷೆಲ್ಸ್[a] ಉತ್ತಮವಾದ ಗೋಧಿಯ ಹಿಟ್ಟು; ಮುನ್ನೂರು ಬುಷೆಲ್ಸ್[b] ಹಿಟ್ಟು; ಚೆನ್ನಾಗಿ ಮೇಯಿಸಿದ ಹತ್ತು ಹಸುಗಳು; ಹೊಲಗಳಲ್ಲಿ ಮೇಯಿಸಿದ ಇಪ್ಪತ್ತು ಹಸುಗಳು; ನೂರು ಕುರಿಗಳು; ಇವುಗಳಲ್ಲದೆ ದುಪ್ಪಿ, ಜಿಂಕೆ, ಸಾರಂಗ ಮತ್ತು ಕೊಬ್ಬಿದ ಕೋಳಿಗಳು.

24 ಸೊಲೊಮೋನನು ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರದೇಶವನ್ನೆಲ್ಲ ಆಳಿದನು. ಈ ದೇಶವು ತಿಫ್ಸಹುದಿಂದ ಗಾಜದವರೆಗಿತ್ತು. ಸೊಲೊಮೋನನ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. 25 ಸೊಲೊಮೋನನ ಆಳ್ವಿಕೆಯಲ್ಲಿ ಯೆಹೂದದ ಮತ್ತು ಇಸ್ರೇಲಿನ ಜನರೆಲ್ಲರೂ ದಾನ್‌ನಿಂದ ಬೇರ್ಷೆಬದವರೆಗೆ ಸುರಕ್ಷಿತವಾಗಿದ್ದರು; ಶಾಂತಿಯಿಂದ ಜೀವಿಸುತ್ತಿದ್ದರು. ಜನರು ತಮ್ಮ ಅಂಜೂರ ಗಿಡಗಳ ಮತ್ತು ದ್ರಾಕ್ಷಾಲತೆಗಳ ನೆರಳಿನಲ್ಲಿ ಸಮಾಧಾನದಿಂದ ಕುಳಿತಿರುತ್ತಿದ್ದರು.

26 ಸೊಲೊಮೋನನು ತನ್ನ ರಥಗಳಿಗೆ ಬೇಕಾಗಿದ್ದ ನಾಲ್ಕು ಸಾವಿರ ಕುದುರೆಗಳಿಗೆ ಬೇಕಾಗುವಷ್ಟು ಸ್ಥಳ ಪಡೆದಿದ್ದನು. ಅವನಲ್ಲಿ ಹನ್ನೆರಡು ಸಾವಿರ ರಾಹುತರಿದ್ದರು. 27 ರಾಜನಾದ ಸೊಲೊಮೋನನಿಗೆ ಪ್ರತಿ ತಿಂಗಳಿಗೆ ಬೇಕಾದ ವಸ್ತುಗಳನ್ನು ಅವನ ಹನ್ನೆರಡು ಮಂದಿ ರಾಜ್ಯಪಾಲರಲ್ಲಿ ಒಬ್ಬರು ಸರದಿಯ ಪ್ರಕಾರ ಕೊಡುತ್ತಿದ್ದರು. ರಾಜನಿಗೂ ಅವನ ಪಂಕ್ತಿಯಲ್ಲಿ ಊಟಮಾಡುವ ಪ್ರತಿಯೊಬ್ಬರಿಗೂ ಆಹಾರಪದಾರ್ಥಗಳು ಯಥೇಚ್ಛವಾಗಿರುತ್ತಿದ್ದವು. 28 ರಾಜನ ರಥಗಳ ಕುದುರೆಗಳಿಗೆ ಮತ್ತು ಸವಾರಿಯ ಕುದುರೆಗಳಿಗೆ ಬೇಕಾದ ಹುಲ್ಲನ್ನು ಮತ್ತು ಬಾರ್ಲಿಯನ್ನು ಈ ರಾಜ್ಯಪಾಲರುಗಳು ಆಯಾಸ್ಥಳಗಳಿಂದ ತಂದುಕೊಡುತ್ತಿದ್ದರು.

ಸೊಲೊಮೋನನ ಜ್ಞಾನ

29 ದೇವರು ಸೊಲೊಮೋನನಿಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು. ಸೊಲೊಮೋನನು ಅನೇಕಾನೇಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರೂ ಊಹಿಸಿಕೊಳ್ಳಲಾರದಷ್ಟು ಜ್ಞಾನವನ್ನು ಅವನು ಹೊಂದಿದ್ದನು. 30 ಅವನ ಜ್ಞಾನವು ಈಜಿಪ್ಟಿನ ಗಂಡಸರೆಲ್ಲರ ಜ್ಞಾನಕ್ಕಿಂತಲೂ ಹೆಚ್ಚಿನದಾಗಿತ್ತು. ಸೊಲೊಮೋನನ ಜ್ಞಾನವು ಪೂರ್ವದಿಕ್ಕಿನ ಜನರೆಲ್ಲರ ಜ್ಞಾನಕ್ಕಿಂತ ವಿಶಾಲವಾಗಿತ್ತು. 31 ಪ್ರಪಂಚದಲ್ಲಿನ ಯಾವುದೇ ವ್ಯಕ್ತಿಯ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವು ಅವನಲ್ಲಿತ್ತು. ಅವನು ಜೆರಹನ ಮಗನಾದ ಏತಾನನಿಗಿಂತಲೂ ಜ್ಞಾನಿಯಾಗಿದ್ದನು. ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದರಿಗಿಂತ ಅವನು ಜ್ಞಾನಿಯಾಗಿದ್ದನು. ರಾಜನಾದ ಸೊಲೊಮೋನನು ಇಸ್ರೇಲ್ ಮತ್ತು ಯೆಹೂದಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧನಾಗಿದ್ದನು. 32 ರಾಜನಾದ ಸೊಲೊಮೋನನು ತನ್ನ ಜೀವಿತದ ಅವಧಿಯಲ್ಲಿ ಮೂರುಸಾವಿರ ಜ್ಞಾನೋಪದೇಶಗಳನ್ನೂ ಒಂದು ಸಾವಿರದ ಐದು ಹಾಡುಗಳನ್ನೂ ಬರೆದನು.

33 ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು. 34 ರಾಜನಾದ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳಲು ಎಲ್ಲಾ ದೇಶಗಳ ಜನರೂ ಬರುತ್ತಿದ್ದರು. ಎಲ್ಲಾ ದೇಶದ ರಾಜರುಗಳು ತಮ್ಮ ದೇಶದ ಜ್ಞಾನಿಗಳನ್ನು ರಾಜನಾದ ಸೊಲೊಮೋನನ ಬಳಿಗೆ ಕಳುಹಿಸುತ್ತಿದ್ದರು.

2 ಪೂರ್ವಕಾಲವೃತ್ತಾಂತ 1

ಸೊಲೊಮೋನನು ಜ್ಞಾನವನ್ನು ಕೇಳಿಕೊಂಡದ್ದು

ದೇವರಾದ ಯೆಹೋವನು ದಾವೀದನ ಮಗನಾದ ಸೊಲೊಮೋನನೊಂದಿಗೆ ಇದ್ದುದರಿಂದ ಸೊಲೊಮೋನನು ಬಹು ಬಲಿಷ್ಠನಾದ ಅರಸನಾಗಿ ಪ್ರಖ್ಯಾತನಾದನು.

2-3 ಸೊಲೊಮೋನನು ಇಸ್ರೇಲರನ್ನೂ ಅಂದರೆ ನ್ಯಾಯಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಸೇನಾಧಿಪತಿಗಳನ್ನೂ ಕುಲಪ್ರಧಾನರನ್ನೂ ಕರೆಯಿಸಿ ಅವರೊಂದಿಗೆ ಗಿಬ್ಯೋನಿನ ಉನ್ನತಸ್ಥಳಕ್ಕೆ ಹೋದನು. ದೇವದರ್ಶನಗುಡಾರವು ಅಲ್ಲಿತ್ತು. ಅರಣ್ಯದಲ್ಲಿ ಇಸ್ರೇಲರು ಪ್ರಯಾಣಿಸುತ್ತಿದ್ದಾಗ ಯೆಹೋವನ ಸೇವಕನಾದ ಮೋಶೆಯು ಗುಡಾರವನ್ನು ಮಾಡಿಸಿದ್ದನು. ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ತಂದು ಅಲ್ಲಿ ತಾನು ಅದಕ್ಕಾಗಿ ಏರ್ಪಡಿಸಿದ್ದ ಸ್ಥಳದಲ್ಲಿ ಪ್ರತಿಷ್ಠಿಸಿದನು; ಮತ್ತು ಅದಕ್ಕೆ ಗುಡಾರವನ್ನು ನಿರ್ಮಿಸಿದ್ದನು. ಊರೀಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಕೆಯು ಗಿಬ್ಯೋನಿನಲ್ಲಿದ್ದ ಪವಿತ್ರ ಗುಡಾರದ ಮುಂದೆ ಇಡಲ್ಪಟ್ಟಿತ್ತು. ಆದ್ದರಿಂದ ಸೊಲೊಮೋನನೂ ಇಸ್ರೇಲರೂ ಗಿಬ್ಯೋನಿಗೆ ಹೋದರು. ದೇವದರ್ಶನ ಗುಡಾರದ ಮುಂಭಾಗದಲ್ಲಿದ್ದ ತಾಮ್ರದ ಯಜ್ಞವೇದಿಕೆಯ ಬಳಿಗೆ ಸೊಲೊಮೋನನು ಹೋಗಿ ಅದರ ಮೇಲೆ ಒಂದು ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು.

ಆ ರಾತ್ರಿ ದೇವರು ಸೊಲೊಮೋನನಿಗೆ ದರ್ಶನ ನೀಡಿ, “ಸೊಲೊಮೋನನೇ, ನಿನ್ನ ಕೋರಿಕೆಯೇನು?” ಎಂದು ಕೇಳಿದನು.

ಆಗ ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನ ಮೇಲೆ ಮಹಾಕೃಪೆಯನ್ನು ತೋರಿ ಅವನ ಸ್ಥಾನದಲ್ಲಿ ಅರಸನಾಗುವದಕ್ಕೆ ನನ್ನನ್ನು ಆರಿಸಿಕೊಂಡಿರುವೆ. ದೇವರಾದ ಯೆಹೋವನೇ ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸು. ಒಂದು ದೊಡ್ಡ ರಾಜ್ಯಕ್ಕೆ ನನ್ನನ್ನು ಅರಸನನ್ನಾಗಿ ನೇಮಿಸಿರುತ್ತೀ. ಅದರಲ್ಲಿ ಭೂಮಿಯ ಧೂಳಿನೋಪಾದಿಯಲ್ಲಿ ಜನರು ತುಂಬಿದ್ದಾರೆ. 10 ಈ ಜನರನ್ನು ಸರಿಯಾದ ರೀತಿಯಲ್ಲಿ ಆಳುವ ಹಾಗೆ ನನಗೆ ಜ್ಞಾನವನ್ನೂ ವಿವೇಕವನ್ನೂ ದಯಪಾಲಿಸು. ನಿನ್ನ ಸಹಾಯವಿಲ್ಲದೆ ಈ ನಿನ್ನ ಜನರನ್ನು ಆಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದನು.

11 ಆಗ ದೇವರು ಸೊಲೊಮೋನನಿಗೆ, “ನಿನ್ನ ಕೋರಿಕೆ ಒಳ್ಳೆಯದಾಗಿದೆ. ನೀನು ಐಶ್ವರ್ಯವನ್ನಾಗಲಿ ಗೌರವವನ್ನಾಗಲಿ ಬೆಳ್ಳಿಬಂಗಾರಗಳನ್ನಾಗಲಿ ಕೇಳಲಿಲ್ಲ. ನಿನ್ನ ವೈರಿಗಳನ್ನು ನಿರ್ಮೂಲ ಮಾಡುವಂತಾಗಲಿ ಅಥವಾ ನಿನಗೆ ದೀರ್ಘಾಯುಷ್ಯವನ್ನು ಕೊಡು ಎಂದಾಗಲಿ ನೀನು ಕೇಳಿಕೊಳ್ಳದೆ ರಾಜ್ಯವನ್ನು ನ್ಯಾಯವಾಗಿ ಆಳಲು ಬೇಕಾದ ಜ್ಞಾನವಿವೇಕಗಳನ್ನು ಕೇಳಿಕೊಂಡೆ. ನಾನು ಆರಿಸಿಕೊಂಡಿರುವ ಜನಾಂಗದ ಮೇಲೆ ಆಡಳಿತ ನಡಿಸುವಾಗ ಯೋಗ್ಯವಾದ ಸಲಹೆ ಕೊಡುವಂತೆ ಜ್ಞಾನವನ್ನು ಕೇಳಿರುತ್ತೀ. 12 ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.

13 ಸೊಲೊಮೋನನು ಗಿಬ್ಯೋನಿನಲ್ಲಿ ಆರಾಧನಾಸ್ಥಳಕ್ಕೆ ಹೋದನು. ಬಳಿಕ ಅವನು ದೇವದರ್ಶನ ಗುಡಾರದಿಂದ ಜೆರುಸಲೇಮಿಗೆ ಹಿಂದಿರುಗಿ ಇಸ್ರೇಲಿನ ಮೇಲೆ ರಾಜ್ಯಭಾರವನ್ನು ಮಾಡತೊಡಗಿದನು.

ಸೊಲೊಮೋನನು ಸೈನ್ಯವನ್ನೂ ತನ್ನ ಐಶ್ವರ್ಯವನ್ನೂ ಹೆಚ್ಚಿಸಿಕೊಂಡದ್ದು

14 ಸೊಲೊಮೋನನು ಕುದುರೆಗಳನ್ನೂ ರಥಗಳನ್ನೂ ಸಂಗ್ರಹಿಸಲು ಪ್ರಾರಂಭಿಸಿ ಒಂದು ಸಾವಿರದ ನಾನೂರು ರಥಗಳನ್ನೂ ಹನ್ನೆರಡು ಸಾವಿರ ರಾಹುತರನ್ನೂ ತನ್ನ ಸೈನ್ಯಕ್ಕೆ ಕೂಡಿಸಿಕೊಂಡನು. ಅವುಗಳನ್ನು ರಥಗಳನ್ನಿಡುವ ನಗರಗಳಲ್ಲಿ ಇರಿಸಿದನು. ಅದರಲ್ಲಿ ಕೆಲವನ್ನು ತನ್ನ ಅರಮನೆಯಿರುವ ಜೆರುಸಲೇಮಿನಲ್ಲಿ ಇರಿಸಿದನು. 15 ಜೆರುಸಲೇಮಿನಲ್ಲಿ ಸೊಲೊಮೋನನು ಅಪಾರವಾದ ಬೆಳ್ಳಿಬಂಗಾರಗಳನ್ನು ಶೇಖರಿಸಿಟ್ಟಿದನು. ಭೂಮಿಯ ಮೇಲೆ ಕಲ್ಲುಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅವನಲ್ಲಿ ಬೆಳ್ಳಿಬಂಗಾರಗಳಿದ್ದವು. ದೇವದಾರು ಮರಗಳನ್ನೂ ಸೊಲೊಮೋನನು ಶೇಖರಿಸಿಟ್ಟನು. ಪಶ್ಚಿಮದ ಬೆಟ್ಟಪ್ರದೇಶಗಳಲ್ಲಿ ಜಾಲಿಮರಗಳು ಹೇರಳವಾಗಿರುವಂತೆ ದೇವದಾರುಮರಗಳೂ ಹೇರಳವಾಗಿದ್ದವು. 16 ಈಜಿಪ್ಟ್ ಮತ್ತು ಕ್ಯೂ ದೇಶಗಳಿಂದ ಸೊಲೊಮೋನನು ಕುದುರೆಗಳನ್ನು ತನ್ನ ವ್ಯಾಪಾರಸ್ಥರ ಮೂಲಕ ಖರೀದಿ ಮಾಡಿದನು. 17 ಸೊಲೊಮೋನನ ವ್ಯಾಪಾರಿಗಳು ಈಜಿಪ್ಟಿನಲ್ಲಿ ಒಂದೊಂದು ರಥಕ್ಕೆ ಏಳು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಒಂದೊಂದು ಕುದುರೆಗೆ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಕೊಟ್ಟು ಖರೀದಿಸಿ ಅವುಗಳನ್ನು ಹಿತ್ತಿಯರ ಅರಸರಿಗೂ ಅರಾಮ್ಯರ ಅರಸರಿಗೂ ಮಾರಿದರು.

ಕೀರ್ತನೆಗಳು 72

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
    ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
    ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
    ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
    ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
    ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
    ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
    ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
    ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
    ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
    ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
    ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
    ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
    ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International