Chronological
ದೇವಾಲಯದಲ್ಲಿ ಲೇವಿಯರ ಸೇವಾಕಾರ್ಯ
23 ದಾವೀದನು ಬಹಳ ಮುದುಕನಾದಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರೇಲರ ಅರಸನನ್ನಾಗಿ ಮಾಡಿದನು. 2 ದಾವೀದನು ರಾಜ್ಯದ ಎಲ್ಲಾ ಮುಖಂಡರುಗಳನ್ನೂ ಯಾಜಕರನ್ನೂ ಲೇವಿಯರನ್ನೂ ಕರೆದನು. 3 ಅವನು ಮೂವತ್ತು ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಲೇವಿಯರನ್ನು ಲೆಕ್ಕಿಸಿದಾಗ ಒಟ್ಟು ಮೂವತ್ತೆಂಟು ಸಾವಿರ ಮಂದಿ ಪುರುಷರಿದ್ದರು. 4 ದಾವೀದನು, “ಇವರಲ್ಲಿ ಇಪ್ಪತ್ನಾಲ್ಕು ಸಾವಿರ ಮಂದಿ ಲೇವಿಯರು ದೇವಾಲಯದ ಕಟ್ಟಡದ ಮೇಲ್ವಿಚಾರಕರಾಗಿಯೂ ಆರು ಸಾವಿರ ಮಂದಿ ಲೇವಿಯರು ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ 5 ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.
6 ದಾವೀದನು ಲೇವಿಯರನ್ನು ಮೂರು ಗುಂಪುಗಳನ್ನಾಗಿ ಮಾಡಿದನು. ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು.
ಗೇರ್ಷೋನ್ ಕುಲದವರು
7 ಗೇರ್ಷೋಮ್ ಕುಲದಲ್ಲಿ ಲದ್ದಾನ್ ಮತ್ತು ಶಿಮ್ಮೀ ಎಂಬವರಿದ್ದರು. 8 ಲದ್ದಾನನಿಗೆ ಮೂವರು ಗಂಡುಮಕ್ಕಳು. ಮೊದಲನೆ ಮಗನು ಯೆಹೀಯೇಲ್. ಉಳಿದ ಇನ್ನಿಬ್ಬರು ಜೀತಾಮ್ ಮತ್ತು ಯೋವೇಲ್. 9 ಶಿಮ್ಮೀಯನ ಗಂಡುಮಕ್ಕಳು ಯಾರೆಂದರೆ: ಶೆಲೋಮೋತ್, ಹಜೀಯೇಲ್ ಮತ್ತು ಹಾರಾನ್. ಈ ಮೂವರು ಲದ್ದಾನನ ಸಂತತಿಯವರ ಮುಖಂಡರಾಗಿದ್ದರು.
10 ಶಿಮ್ಮೀಗೆ ನಾಲ್ಕು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಯಹತ್, ಜೀಜ, ಯೆಯೂಷ್ ಮತ್ತು ಬೆರೀಯ. 11 ಯಹತನು ಚೊಚ್ಚಲಮಗನು. ಜೀಜನು ಎರಡನೆಯವನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳಿರಲಿಲ್ಲ. ಆದ್ದರಿಂದ ಅವರಿಬ್ಬರನ್ನು ಒಂದೇ ಕುಟುಂಬವೆಂದು ಲೆಕ್ಕಿಸಲಾಯಿತು.
ಕೆಹಾತನ ಕುಲದವರು
12 ಕೆಹಾತನಿಗೆ ನಾಲ್ಕು ಮಂದಿ ಗಂಡುಮಕ್ಕಳು: ಅಮ್ರಾಮ್, ಇಚ್ಚಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. 13 ಅಮ್ರಾಮನ ಗಂಡುಮಕ್ಕಳು ಯಾರೆಂದರೆ: ಆರೋನ್ ಮತ್ತು ಮೋಶೆ. ಆರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುಡುವುದಕ್ಕಾಗಿಯೂ ಆತನ ಸೇವೆಮಾಡುವುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆಶೀರ್ವದಿಸುವುದಕ್ಕಾಗಿಯೂ ಆರಿಸಲ್ಪಟ್ಟರು.
14 ಮೋಶೆಯು ದೇವರ ಮನುಷ್ಯನಾಗಿದ್ದನು. ಅವನ ಮಕ್ಕಳು ಲೇವಿಕುಲದಲ್ಲಿ ಸೇರಿಸಲ್ಪಟ್ಟಿದ್ದರು. 15 ಮೋಶೆಯ ಮಕ್ಕಳು ಯಾರೆಂದರೆ: ಗೇರ್ಷೋಮ್ ಮತ್ತು ಎಲೀಯೆಜೆರ್, 16 ಗೇರ್ಷೋಮನ ಚೊಚ್ಚಲ ಮಗನು ಶೆಬೂವೇಲ. 17 ಎಲೀಯೆಜರನ ಚೊಚ್ಚಲ ಮಗನು ರೆಹಬ್ಯ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.
18 ಇಚ್ಹಾರನ ಚೊಚ್ಚಲಮಗನು ಶೆಲೋಮೋತ್.
19 ಹೆಬ್ರೋನಿನ ಚೊಚ್ಚಲಮಗನು ಯೆರೀಯ. ಎರಡನೆಯ ಮಗನು ಅಮರ್ಯ. ಯಹಜೀಯೇಲನು ಮೂರನೆಯ ಮಗ. ಯೆಕಮ್ಮಾಮನು ನಾಲ್ಕನೆಯ ಮಗ.
20 ಉಜ್ಜೀಯೇಲನ ಚೊಚ್ಚಲಮಗನು ಮೀಕ; ಇಷ್ಷೀಯನು ಅವನ ಎರಡನೆಯ ಮಗ.
ಮೆರಾರೀಯ ಕುಲದವರು
21 ಮಹ್ಲೀ ಮತ್ತು ಮೂಷೀ ಮೆರಾರೀಯ ಗಂಡುಮಕ್ಕಳು. ಮಹ್ಲೀಯ ಮಕ್ಕಳು ಯಾರೆಂದರೆ: ಎಲ್ಲಾಜಾರ್ ಮತ್ತು ಕೀಷ್. 22 ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರವೇ ಇದ್ದರು. ಇವರು ತಮ್ಮ ಸಂಬಂಧಿಕರಲ್ಲಿಯೇ ಮದುವೆಯಾದರು. ಕೀಷನ ಗಂಡುಮಕ್ಕಳು ಅವರ ಸಂಬಂಧಿಕರಾಗಿದ್ದರು. 23 ಮೂಷಿಯ ಗಂಡುಮಕ್ಕಳು ಯಾರೆಂದರೆ: ಮಹ್ಲೀ, ಏದೆರ್ ಮತ್ತು ಯೆರೇಮೋತ್. ಅವನಿಗೆ ಮೂರು ಮಂದಿ ಗಂಡುಮಕ್ಕಳು.
ಲೇವಿಯರ ಕೆಲಸ
24 ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೆಕ್ಕಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.
25 ದಾವೀದನು, “ಇಸ್ರೇಲರ ದೇವರಾದ ಯೆಹೋವನು ತನ್ನ ಜನರಿಗೆ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ದೇವರು ನಿರಂತರವೂ ಜೆರುಸಲೇಮಿನಲ್ಲಿ ವಾಸಿಸಲು ಬಂದಿರುತ್ತಾನೆ. 26 ಆದ್ದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನ ಗುಡಾರವನ್ನಾಗಲಿ ಅದರ ಸಾಮಾಗ್ರಿಗಳನ್ನಾಗಲಿ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು.
27 ದಾವೀದನ ಕೊನೇ ಆಜ್ಞೆಯ ಪ್ರಕಾರ ಲೇವಿ ವಂಶದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಲೆಕ್ಕಿಸಲಾಯಿತು.
28 ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು. 29 ಮಾತ್ರವಲ್ಲದೆ ಅವರು ಗೋಧಿಹಿಟ್ಟನ್ನು ಅಳೆದು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ದೇವಾಲಯದೊಳಗಿರುವ ಮೇಜಿನ ಮೇಲೆ ಇಡುತ್ತಿದ್ದರು. 30 ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ದೇವಾಲಯದೊಳಗೆ ಸ್ತುತಿಗೀತೆಗಳನ್ನು ಹಾಡಿ ದೇವರನ್ನು ಮಹಿಮೆಪಡಿಸುತ್ತಿದ್ದರು. 31 ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಬೇರೆ ವಿಶೇಷ ದಿನಗಳಲ್ಲಿಯೂ ದೇವರಿಗೆ ಸಮರ್ಪಿಸುವ ಸರ್ವಾಂಗಹೋಮವನ್ನು ತಯಾರು ಮಾಡುತ್ತಿದ್ದರು. ಪ್ರತಿದಿನ ಎಷ್ಟು ಮಂದಿ ಲೇವಿಯರು ಸೇವೆಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಲಾಗಿತ್ತು. 32 ಹೀಗೆ ಲೇವಿಯರು ತಾವು ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿದರು. ಅವರು ಪವಿತ್ರ ಗುಡಾರವನ್ನು ಮತ್ತು ಪವಿತ್ರಸ್ಥಳವನ್ನು ನೋಡಿಕೊಂಡರು; ತಮ್ಮ ಸಂಬಂಧಿಕರೂ ಆರೋನನ ಕುಲದವರೂ ಆಗಿದ್ದ ಯಾಜಕರಿಗೆ ಸಹಾಯ ಮಾಡಿದರು.
ಯಾಜಕರ ವರ್ಗಗಳು
24 ಆರೋನನ ಸಂತಾನದವರು ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಗಂಡುಮಕ್ಕಳು: ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. 2 ನಾದಾಬ್ ಮತ್ತು ಅಬೀಹೂ ತಮ್ಮ ತಂದೆ ಸಾಯುವ ಮೊದಲೇ ತೀರಿಹೋದರು. ಅವರಿಗೆ ಮಕ್ಕಳಿರಲಿಲ್ಲ. ಅವರ ಬದಲಿಗೆ ಎಲ್ಲಾಜಾರ್ ಮತ್ತು ಈತಾಮಾರ್ ಯಾಜಕರಾಗಿ ಸೇವೆಮಾಡಿದರು. 3 ಎಲ್ಲಾಜಾರ್ ಮತ್ತು ಈತಾಮಾರ್ ಕುಲದ ಯಾಜಕರನ್ನು ದಾವೀದನು ಪ್ರತ್ಯೇಕಿಸಿ ಚಾದೋಕ್ ಮತ್ತು ಅಹೀಮೆಲೆಕ್ ಯಾಜಕರ ಸಹಾಯದಿಂದ ಎರಡು ವರ್ಗಗಳನ್ನಾಗಿ ಮಾಡಿದನು. ಚಾದೋಕನು ಎಲ್ಲಾಜಾರನ ವಂಶದವನಾಗಿದ್ದನು ಮತ್ತು ಅಹೀಮೆಲೆಕನು ಈತಾಮಾರನ ವಂಶದವನಾಗಿದ್ದನು. 4 ಈತಾಮಾರನ ಸಂತತಿಗಿಂತಲೂ ಎಲ್ಲಾಜಾರನ ಸಂತತಿಯವರಲ್ಲಿ ಹೆಚ್ಚು ಮಂದಿ ನಾಯಕರಿದ್ದರು. ಎಲ್ಲಾಜಾರನ ಸಂತತಿಯವರಲ್ಲಿ ಹದಿನಾರು ಮಂದಿ ಮತ್ತು ಈತಾಮಾರನ ಸಂತತಿಯವರಲ್ಲಿ ಎಂಟು ಮಂದಿ ನಾಯಕರಿದ್ದರು. 5 ಪ್ರತಿಯೊಂದು ಕುಲದಿಂದ ಚೀಟುಹಾಕುವುದರ ಮೂಲಕ ಜನರನ್ನು ಆರಿಸಿಕೊಳ್ಳಲಾಯಿತು. ಕೆಲವರನ್ನು ಪವಿತ್ರ ಸ್ಥಳದ ಸೇವೆಗಾಗಿ ಆರಿಸಿಕೊಳ್ಳಲಾಯಿತು; ಇನ್ನು ಕೆಲವರನ್ನು ಯಾಜಕರಾಗಿ ಸೇವೆಮಾಡಲು ಆರಿಸಿಕೊಳ್ಳಲಾಯಿತು; ಇವರೆಲ್ಲರೂ ಎಲ್ಲಾಜಾರ್ ಮತ್ತು ಈತಾಮಾರನ ಕುಲದವರಾಗಿದ್ದರು.
6 ನೆತನೇಲನ ಮಗನಾದ ಶೆಮಾಯನು ಲೇಖಕನಾಗಿದ್ದನು. ಶೆಮಾಯನು ಲೇವಿ ಸಂತತಿಗೆ ಸೇರಿದವನಾಗಿದ್ದನು. ಇವನು ವಂಶಾವಳಿಯನ್ನು ಬರೆದಿಡುತ್ತಿದ್ದನು. ಅರಸನಾದ ದಾವೀದನ ಮತ್ತು ಯಾಜಕರಾದ ಚಾದೋಕನ, ಅಹೀಮೆಲೆಕನ ಮತ್ತು ಲೇವಿಯರ ನಾಯಕರ ಎದುರಿನಲ್ಲಿ ಸಂತತಿಯವರನ್ನು ಬರೆದನು. ಪ್ರತಿಸಲ ಚೀಟುಹಾಕಿ ಒಬ್ಬನನ್ನು ಒಂದು ಕೆಲಸಕ್ಕೆ ಆರಿಸಿದಾಗ ಅವನ ಹೆಸರನ್ನು ವಂಶಾವಳಿಯಲ್ಲಿ ಬರೆದನು. ಹೀಗೆ ಒಬ್ಬೊಬ್ಬನು ಯಾವಯಾವ ಕೆಲಸಗಳನ್ನು ಮಾಡಬೇಕೆಂದು ಎಲ್ಲರಿಗೂ ಗೊತ್ತುಪಡಿಸಿದರು. ಈ ರೀತಿಯಾಗಿ ಎಲ್ಲಾಜಾರ್ ಮತ್ತು ಈತಾಮಾರ್ ಕುಟುಂಬದವರಿಗೆ ಯಾಜಕೋದ್ಯೋಗವನ್ನು ಮಾಡುವಂತೆ ವರ್ಗಗಳಾಗಿ ಪ್ರತ್ಯೇಕಿಸಿ ಕೆಲಸಗಳನ್ನು ನೇಮಿಸಿದರು.
7 ಮೊದಲನೆಯ ವರ್ಗ ಯೆಹೋಯಾರೀಬನದು.
ಎರಡನೆಯ ವರ್ಗ ಯೆದಾಯನದು.
8 ಮೂರನೆಯ ವರ್ಗ ಹಾರೀಮನದು.
ನಾಲ್ಕನೆಯ ವರ್ಗ ಸೆಯೋರೀಮನದು.
9 ಐದನೆಯ ವರ್ಗ ಮಲ್ಕೀಯನದು.
ಆರನೆಯ ವರ್ಗ ಮಿಯ್ಯಾಮೀನನದು.
10 ಏಳನೆಯ ವರ್ಗ ಹಕ್ಕೋಚನದು.
ಎಂಟನೆಯ ವರ್ಗ ಅಬೀಯನದು.
11 ಒಂಭತ್ತನೆಯ ವರ್ಗ ಯೆಷೂವನದು.
ಹತ್ತನೆಯ ವರ್ಗ ಶೆಕನ್ಯನದು.
12 ಹನ್ನೊಂದನೆಯ ವರ್ಗ ಎಲ್ಯಾಷೀಬನದು.
ಹನ್ನೆರಡನೆಯ ವರ್ಗ ಯಾಕೀಮನದು.
13 ಹದಿಮೂರನೆಯ ವರ್ಗ ಹುಪ್ಪನದು.
ಹದಿನಾಲ್ಕನೆಯ ವರ್ಗ ಎಷೆಬಾಬನದು.
14 ಹದಿನೈದನೆಯ ವರ್ಗ ಬಿಲ್ಗನದು.
ಹದಿನಾರನೆಯ ವರ್ಗ ಇಮ್ಮೇರನದು.
15 ಹದಿನೇಳನೆಯ ವರ್ಗ ಹೇಜೀರನದು.
ಹದಿನೆಂಟನೆಯ ವರ್ಗ ಹಪ್ಪಿಚ್ಚೇಚನದು.
16 ಹತ್ತೊಂಭತ್ತನೆಯ ವರ್ಗ ಪೆತಹ್ಯನದು.
ಇಪ್ಪತ್ತನೆಯ ವರ್ಗ ಯೆಹೆಜ್ಕೇಲನದು.
17 ಇಪ್ಪತ್ತೊಂದನೆಯ ವರ್ಗ ಯಾಕೀನನದು.
ಇಪ್ಪತ್ತೆರಡನೆಯ ವರ್ಗ ಗಾಮೂಲನದು.
18 ಇಪ್ಪತ್ತಮೂರನೆಯ ವರ್ಗ ದೆಲಾಯನದು.
ಇಪ್ಪತ್ತನಾಲ್ಕನೆಯ ವರ್ಗ ಮಾಜ್ಯನದು.
19 ಈ ವರ್ಗದವರನ್ನು ಕ್ರಮವಾಗಿ ದೇವಾಲಯದಲ್ಲಿ ಸೇವೆಮಾಡಲು ಆರಿಸಲಾಯಿತು. ಇವರು ಆರೋನನ ಆರಾಧನಾ ಪದ್ದತಿಯನ್ನು ಅನುಸರಿಸಿದರು. ಇಸ್ರೇಲರ ದೇವರಾದ ಯೆಹೋವನು ಆರಾಧನಾ ಕ್ರಮಗಳನ್ನು ಆರೋನನಿಗೆ ತಿಳಿಸಿದ್ದನು.
ಇತರ ಲೇವಿಯರು
20 ಲೇವಿಕುಲದ ಇತರ ಸಂತತಿಯವರು:
ಅಮ್ರಾಮನ ಸಂತತಿಯ ಶೂಬಾಯೇಲ.
ಶೂಬಾಯೇಲನ ಸಂತತಿಯ ಯೆಹ್ದೆಯಾಹ.
21 ರೆಹಬ್ಯನ ಸಂತತಿಯ ಇಷ್ಷೀಯ. (ಇಷ್ಷೀಯನು ಚೊಚ್ಚಲಮಗನು.)
22 ಇಚ್ಹಾರನ ಸಂತತಿಯ ಶೆಲೋಮೋತ್. ಶೆಲೋಮೋತನ ಕುಟುಂಬದ ಯಹತ.
23 ಹೆಬ್ರೋನನ ಗಂಡುಮಕ್ಕಳು: ಮೊದಲನೆಯವನು ಯೆರೀಯ;
ಎರಡನೆಯ ಮಗ ಅಮರ್ಯ;
ಮೂರನೆಯ ಮಗ ಯಹಜೀಯೇಲನು;
ನಾಲ್ಕನೆಯ ಮಗ ಯೆಕಮ್ಮಾಮ.
24 ಉಜ್ಜೀಯೇಲನ ಮಗನು ಮೀಕ.
ಮೀಕನ ಮಗ ಶಾಮೀರ್.
25 ಇಷ್ಷೀಯನು ಮೀಕನ ಸೋದರ.
ಇಷ್ಷೀಯನ ಮಗ ಜೆಕರ್ಯ.
26 ಮೆರಾರೀಯ ಸಂತತಿಯ ಮಹ್ಲೀ,
ಮೂಷೀ ಮತ್ತು ಯಾಜ್ಯ.
27 ಯಾಜ್ಯನ ಗಂಡುಮಕ್ಕಳಾದ ಬೆನೋ,
ಶೋಹಮ್, ಜಕ್ಕೂರ್ ಮತ್ತು ಇಬ್ರೀ.
28 ಮಹ್ಲೀಯ ಮಗ ಎಲ್ಲಾಜಾರ್.
ಎಲ್ಲಾಜಾರನಿಗೆ ಗಂಡುಮಕ್ಕಳಿರಲಿಲ್ಲ.
29 ಕೀಷನ ಮಗನಾದ ಯೆರಹ್ಮೇಲ.
30 ಮೂಷೀಯ ಗಂಡುಮಕ್ಕಳಾದ ಮಹ್ಲೀ,
ಏದೆರ್ ಮತ್ತು ಯೆರೀಮೋತ್.
ಇವರೆಲ್ಲರು ಲೇವಿಕುಲದವರ ನಾಯಕರುಗಳು. ಇವರನ್ನು ಆಯಾ ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಲಾಯಿತು. 31 ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.
ಗಾಯಕವೃಂದ
25 ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:
2 ಆಸಾಫನ ಸಂತತಿಯಲ್ಲಿ: ಜಕ್ಕೂರ್, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.
3 ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.
4 ಹೇಮಾನನ ಸಂತತಿಯವರಲ್ಲಿ ಗಾಯನವೃಂದದಲ್ಲಿ ಸೇವೆ ಮಾಡಿದವರು ಯಾರೆಂದರೆ: ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೂಬಾಯೇಲ್ ಮತ್ತು ಯೆರೀಮೋತ; ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ ಮತ್ತು ರೋಮಮ್ತಿ ಯೆಜೆರ್; ಯೊಷ್ಬೆಕಾಷ, ಮಲ್ಲೋತೀ, ಹೋತೀರ್ ಮತ್ತು ಮಹಜೀಯೋತ್. 5 ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು.
6 ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು. 7 ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಭತ್ತೆಂಟು ಮಂದಿ ಗಾಯಕರು ದೇವರಿಗೆ ಸ್ತುತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು. 8 ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.
9 ಮೊದಲನೆಯದಾಗಿ, ಆಸಾಫ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
ಎರಡನೆಯದಾಗಿ, ಗೆದಲ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
10 ಮೂರನೆಯದಾಗಿ, ಜಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
11 ನಾಲ್ಕನೆಯದಾಗಿ, ಇಚ್ರೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
12 ಐದನೆಯದಾಗಿ, ನೆತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
13 ಆರನೆಯದಾಗಿ, ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
14 ಏಳನೆಯದಾಗಿ, ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
15 ಎಂಟನೆಯದಾಗಿ, ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
16 ಒಂಭತ್ತನೆಯದಾಗಿ, ಮತ್ತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
17 ಹತ್ತನೆಯದಾಗಿ, ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
18 ಹನ್ನೊಂದನೆಯದಾಗಿ, ಅಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
19 ಹನ್ನೆರಡನೆಯದಾಗಿ, ಹಷಬ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
20 ಹದಿಮೂರನೆಯದಾಗಿ, ಶೂಬಾಯೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
21 ಹದಿನಾಲ್ಕನೆಯದಾಗಿ, ಮತ್ತಿತ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
22 ಹದಿನೈದನೆಯದಾಗಿ, ಯೆರೆಮೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
23 ಹದಿನಾರನೆಯದಾಗಿ, ಹನನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
24 ಹದಿನೇಳನೆಯದಾಗಿ, ಯೊಷ್ಬೆಕಾಷನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
25 ಹದಿನೆಂಟನೆಯದಾಗಿ, ಹನಾನೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
26 ಹತ್ತೊಂಭತ್ತನೆಯದಾಗಿ, ಮಲ್ಲೋತಿಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
27 ಇಪ್ಪತ್ತನೆಯದಾಗಿ, ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
28 ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
29 ಇಪ್ಪತ್ತೆರಡನೆಯದಾಗಿ, ಗಿದ್ದಲ್ತಿಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
30 ಇಪ್ಪತ್ತಮೂರನೆಯದಾಗಿ, ಮಹಜೀಯೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
31 ಇಪ್ಪತ್ತನಾಲ್ಕನೆಯದಾಗಿ, ರೋಮಮ್ತಿಯೆಜೆರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
Kannada Holy Bible: Easy-to-Read Version. All rights reserved. © 1997 Bible League International