Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 108-110

ದಾವೀದನ ಕೀರ್ತನೆ.

108 ದೇವರೇ, ನನ್ನ ಹೃದಯವು ಸ್ಥಿರವಾಗಿದೆ;
    ನಾನು ಹೃದಯಪೂರ್ವಕವಾಗಿ ವಾದ್ಯ ನುಡಿಸುತ್ತಾ ಹಾಡುವೆನು.
    ಹಾರ್ಪ್‌ವಾದ್ಯಗಳೇ, ಲೈರ್‌ವಾದ್ಯಗಳೇ,
    ನಾವು ಸೂರ್ಯನನ್ನು ಎಚ್ಚರಗೊಳಿಸೋಣ!
ಯೆಹೋವನೇ, ಜನಾಂಗಗಳಲ್ಲಿಯೂ
    ವಿದೇಶಿಯರಲ್ಲಿಯೂ ನಿನ್ನನ್ನು ಕೊಂಡಾಡುವೆನು.
ಯಾಕೆಂದರೆ ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ;
    ನಿನ್ನ ನಂಬಿಗಸ್ತಿಕೆಯು ಮೋಡಗಳಿಗಿಂತಲೂ ಎತ್ತರವಾಗಿದೆ.
ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನಿನ್ನ ಸ್ನೇಹಿತರಾದ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ನಮ್ಮನ್ನು ರಕ್ಷಿಸು.
    ನಿನ್ನ ಬಲಗೈಯಿಂದ ನಮ್ಮನ್ನು ಕಾಪಾಡು.

ದೇವರು ತನ್ನ ಆಲಯದೊಳಗಿಂದ ಹೀಗೆಂದನು:
    “ನಾನು ಯುದ್ಧದಲ್ಲಿ ಗೆದ್ದು ಜಯಘೋಷ ಮಾಡುವೆನು;
    ಶೆಕೆಮ್ ಪ್ರದೇಶವನ್ನೂ ಸುಕ್ಕೋತ್ ಬಯಲನ್ನೂ ನನ್ನ ಜನರಿಗೆ ಕೊಡುವೆನು.
    ಗಿಲ್ಯಾದ್ ಪ್ರಾಂತವೂ ಮನಸ್ಸೆ ಪ್ರಾಂತವೂ ನನ್ನದಾಗಿರುತ್ತವೆ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣವಾಗಿರುತ್ತದೆ.
    ಯೆಹೂದವು ನನ್ನ ರಾಜದಂಡವಾಗಿರುತ್ತದೆ.
    ಮೋವಾಬ್ ನನ್ನ ಪಾದತೊಳೆಯುವ ಬೋಗುಣಿಯಂತಿರುತ್ತದೆ.
    ಎದೋಮ್ ನನ್ನ ಪಾದರಕ್ಷೆಗಳನ್ನು ಹೊತ್ತುಕೊಂಡು ಹೋಗುವ ಗುಲಾಮನಾಗಿರುತ್ತದೆ.
    ಫಿಲಿಷ್ಟಿಯರನ್ನು ಸೋಲಿಸಿದ ಮೇಲೆ ನಾನು ಜಯಘೋಷ ಮಾಡುವೆನು.”

10 ವೈರಿಗಳ ಆಶ್ರಯದುರ್ಗಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮನ್ನು ಸೋಲಿಸಲು ನನಗೆ ಸಹಾಯ ಮಾಡುವವರು ಯಾರು?
11 ದೇವರೇ, ನೀನು ನಮ್ಮನ್ನು ತ್ಯಜಿಸಿ,
    ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ?
12 ನಮ್ಮ ಶತ್ರುವನ್ನು ಸೋಲಿಸಲು ದಯವಿಟ್ಟು ನಮಗೆ ಸಹಾಯಮಾಡು.
    ಜನರು ನಮಗೆ ಸಹಾಯಮಾಡಲಾರರು!
13 ದೇವರು ಮಾತ್ರ ನಮ್ಮನ್ನು ಬಲಪಡಿಸಬಲ್ಲನು.
    ಆತನು ಮಾತ್ರ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು.

ಸ್ತುತಿಗೀತೆ. ರಚನೆಗಾರ: ದಾವೀದ.

109 ನಾನು ಸ್ತುತಿಸುವ ದೇವರೇ,
    ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
    ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
ಅವರು ನನ್ನನ್ನು ದ್ವೇಷಿಸುತ್ತಾರೆ;
    ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
    ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನಾನು ಉಪಕಾರವನ್ನು ಮಾಡಿದ್ದರೂ
    ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
    ಅವರು ನನ್ನನ್ನು ದ್ವೇಷಿಸುವರು.

ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
    ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
    ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
ನನ್ನ ಶತ್ರುವು ಬೇಗನೆ ಸಾಯಲಿ.
    ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
10 ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
    ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
11 ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
    ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರದಿರಲಿ;
    ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
13 ಅವನನ್ನು ಸಂಪೂರ್ಣವಾಗಿ ನಾಶಮಾಡು.
    ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
14 ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
    ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಆ ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
    ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
16 ಯಾಕೆಂದರೆ, ಆ ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
    ಯಾರನ್ನೂ ಪ್ರೀತಿಸಲಿಲ್ಲ.
    ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
17 ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
    ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
    ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
18 ಅವನು ಉಡುಪುಗಳನ್ನು ಧರಿಸುವಂತೆ
    ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
19 ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
    ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
    ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.

20 ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
    ಯೆಹೋವನು ಅವುಗಳನ್ನು ಮಾಡಲಿ.
21 ಯೆಹೋವನೇ, ನೀನೇ ನನ್ನ ಒಡೆಯನು.
    ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
    ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
    ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
    ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
    ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
    ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
    ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
    ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
    ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
    ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
    ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
    ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
    ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.

ಸ್ತುತಿಗೀತೆ. ರಚನೆಗಾರ: ದಾವೀದ.

110 ಯೆಹೋವನು ನನ್ನ ಒಡೆಯನಿಗೆ,
    “ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.

ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
    ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
    ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
    ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.

ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
    ಎಂದು ವಾಗ್ದಾನ ಮಾಡಿದ್ದಾನೆ.
    ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.

ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
    ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
ಆತನು ಜನಾಂಗಗಳಿಗೆ ತೀರ್ಪು ಮಾಡುವನು.
    ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
    ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.

ರಾಜನು ಮಾರ್ಗದಲ್ಲಿ
    ತೊರೆಯ ನೀರನ್ನು ಕುಡಿದು ಬಲ ಹೊಂದುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International