Chronological
ಜನಗಣತಿ ಮತ್ತು ಅದರ ಫಲ
24 ಯೆಹೋವನು ಇಸ್ರೇಲರ ಮೇಲೆ ಮತ್ತೆ ಕೋಪಗೊಂಡು ಇಸ್ರೇಲರ ವಿರುದ್ಧನಾಗುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು, “ಇಸ್ರೇಲಿನ ಮತ್ತು ಯೆಹೂದದ ಜನಗಣತಿ ಮಾಡಿರಿ” ಎಂದು ಆಜ್ಞಾಪಿಸಿದನು.
2 ರಾಜನಾದ ದಾವೀದನು ಸೈನ್ಯದ ಸೇನಾಧಿಪತಿಯಾದ ಯೋವಾಬನಿಗೆ, “ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಸಂಚರಿಸಿ ಜನರನ್ನು ಲೆಕ್ಕಹಾಕಿರಿ. ಆಗ ಅಲ್ಲಿ ಎಷ್ಟು ಜನರಿದ್ದಾರೆಂಬುದು ನನಗೆ ತಿಳಿಯುತ್ತದೆ” ಎಂದು ಹೇಳಿದನು.
3 ಆದರೆ ಯೋವಾಬನು ರಾಜನಿಗೆ, “ಅಲ್ಲಿ ಎಷ್ಟು ಜನರಿದ್ದಾರೆಂಬುದು ಅಗತ್ಯವಿಲ್ಲ. ನಿನ್ನ ದೇವರಾದ ಯೆಹೋವನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚು ಜನರನ್ನು ದಯಪಾಲಿಸಲಿ! ಈ ಕಾರ್ಯವು ಸಂಭವಿಸುವುದನ್ನು ನಿನ್ನ ಕಣ್ಣುಗಳಿಂದಲೇ ನೋಡು. ಆದರೆ ನೀನು ಈ ಕಾರ್ಯವನ್ನು ಮಾಡಬೇಕೆಂದಿರುವುದೇಕೆ?” ಎಂದು ಕೇಳಿದನು.
4 ಆದರೆ ರಾಜನಾದ ದಾವೀದನು ಯೋವಾಬನಿಗೆ ಮತ್ತು ಸೈನ್ಯದ ಸೇನಾಪತಿಗಳಿಗೆ ಜನರನ್ನು ಲೆಕ್ಕಹಾಕಲು ಆಜ್ಞಾಪಿಸಿದನು. ಆದ್ದರಿಂದ ಯೋವಾಬನು ಸೈನ್ಯದ ಸೇನಾಪತಿಗಳೊಡನೆ ಇಸ್ರೇಲಿನ ಜನರನ್ನು ಲೆಕ್ಕಹಾಕಲು ಹೊರಟನು. 5 ಅವರು ಜೋರ್ಡನ್ ನದಿಯನ್ನು ದಾಟಿ ಅರೋಯೇರಿನಲ್ಲಿ ಪಾಳೆಯ ಮಾಡಿಕೊಂಡರು. ಅವರ ಪಾಳೆಯವು ನಗರದ ಬಲ ಅಂಚಿನಲ್ಲಿತ್ತು. (ಆ ನಗರವು ಗಾದ್ ಕಣಿವೆಯ ಮಧ್ಯಭಾಗದಲ್ಲಿಯೂ ಯಗ್ಜೇರಿನ ಮಾರ್ಗದಲ್ಲಿಯೂ ಇತ್ತು.)
6 ಆಗ ಅವರು ಗಿಲ್ಯಾದಿಗೆ ಮತ್ತು ತಖ್ತೀಮ್ ಹೊಜೀ ಪ್ರದೇಶಕ್ಕೂ ಯಾನಿನದಾನಿಗೂ, ಚೀದೋನಿನ ಸುತ್ತಲೂ ಹೋದರು. 7 ಅವರು ತೂರ್ ಕೋಟೆಗೂ ಹಿವ್ವಿಯರ ಮತ್ತು ಕಾನಾನ್ಯರ ಎಲ್ಲಾ ನಗರಗಳಿಗೂ ಯೆಹೂದದ ದಕ್ಷಿಣಕ್ಕಿರುವ ಬೇರ್ಷೆಬಕ್ಕೂ ಹೋದರು. 8 ಅವರು ದೇಶದಲ್ಲೆಲ್ಲಾ ಸಂಚರಿಸಿ ಒಂಭತ್ತು ತಿಂಗಳು ಮತ್ತು ಇಪ್ಪತ್ತು ದಿನಗಳ ತರುವಾಯ ಜೆರುಸಲೇಮಿಗೆ ಬಂದರು.
9 ಯೋವಾಬನು ರಾಜನಿಗೆ ಜನರ ಪಟ್ಟಿಯನ್ನು ಕೊಟ್ಟನು. ಇಸ್ರೇಲಿನಲ್ಲಿ ಕತ್ತಿಯನ್ನು ಬಳಸಬಲ್ಲ ಎಂಟು ಲಕ್ಷ ಜನರಿದ್ದರು. ಯೆಹೂದದಲ್ಲಿ ಐದು ಲಕ್ಷ ಜನರಿದ್ದರು.
ಯೆಹೋವನು ದಾವೀದನನ್ನು ದಂಡಿಸಿದನು
10 ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.
11 ದಾವೀದನು ಹೊತ್ತಾರೆಯಲ್ಲಿ ಎದ್ದಾಗ, ಅವನ ದರ್ಶಿಯಾದ ಗಾದನಿಗೆ ಯೆಹೋವನ ಮಾತುಗಳು ಬಂದವು. 12 ಯೆಹೋವನು ಅವನಿಗೆ, “ನೀನು ಹೋಗಿ, ದಾವೀದನಿಗೆ ಹೋಗಿ ಹೇಳು, ‘ಯೆಹೋವನು ಹೀಗೆ ಹೇಳುತ್ತಾನೆ, ನಾನು ಮೂರು ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಒಂದನ್ನು ಆರಿಸಿಕೋ’” ಎಂದು ಹೇಳಿದನು.
13 ಗಾದನು ದಾವೀದನ ಬಳಿಗೆ ಹೋಗಿ, “ಈ ಮೂರು ಶಿಕ್ಷೆಗಳಲ್ಲಿ ಒಂದನ್ನು ಆರಿಸಿಕೊ: ನಿನಗೆ ಮತ್ತು ನಿನ್ನ ದೇಶಕ್ಕೆ ಏಳು ವರ್ಷಗಳ ಕಾಲ ಬರಗಾಲ ಬರಬೇಕೇ? ಅಥವಾ ನಿನ್ನ ಶತ್ರುಗಳು ನಿನ್ನನ್ನು ಮೂರು ತಿಂಗಳ ಕಾಲ ಅಟ್ಟಿಸಬೇಕೇ? ಅಥವಾ ಮೂರು ದಿನಗಳ ಕಾಲ ನಿನ್ನ ದೇಶದಲ್ಲಿ ರೋಗರುಜಿನಗಳು ವ್ಯಾಪಿಸಬೇಕೇ? ಇವುಗಳ ಬಗ್ಗೆ ಯೋಚಿಸು, ನನ್ನನ್ನು ಕಳುಹಿಸಿದ ಯೆಹೋವನಿಗೆ ನಾನು ಏನು ಹೇಳಬೇಕೆಂಬುದನ್ನು ನೀನು ತೀರ್ಮಾನಿಸು” ಎಂದು ಹೇಳಿದನು.
14 ದಾವೀದನು ಗಾದನಿಗೆ, “ನಾನು ನಿಜವಾಗಿಯೂ ತೊಂದರೆಗೆ ಒಳಗಾದೆ! ಆದರೆ ಯೆಹೋವನು ಕೃಪಾಪೂರ್ಣನಾಗಿದ್ದಾನೆ. ಆದ್ದರಿಂದ ಆತನು ನನ್ನನ್ನು ದಂಡಿಸಲಿ; ಆದರೆ ಅದು ಜನರಿಂದ ಬಾರದಿರಲಿ” ಎಂದು ಹೇಳಿದನು.
15 ಆದ್ದರಿಂದ ಯೆಹೋವನು ಇಸ್ರೇಲಿಗೆ ರೋಗರುಜಿನಗಳನ್ನು ಬರಮಾಡಿದನು. ಇವು ಹೊತ್ತಾರೆಯಿಂದ ಆರಂಭವಾಗಿ ನಿಯಮಿತಕಾಲದವರೆಗೆ ಮುಂದುವರಿದವು. ದಾನ್‌ನಿಂದ ಬೇರ್ಷೆಬದವರೆಗೆ ಎಪ್ಪತ್ತುಸಾವಿರ ಜನರು ಸತ್ತರು. 16 ದೇವದೂತನು ಜೆರುಸಲೇಮನ್ನು ನಾಶಗೊಳಿಸಲು ಅದರತ್ತ ತನ್ನ ಕೈಯನ್ನು ಚಾಚಿದನು. ಆದರೆ ಸಂಭವಿಸಿದ ಕೆಟ್ಟಕಾರ್ಯಗಳ ಬಗ್ಗೆ ಯೆಹೋವನು ಪಶ್ಚಾತ್ತಾಪಪಟ್ಟನು. ಯೆಹೋವನು ಜನರನ್ನು ನಾಶಗೊಳಿಸಿದ ದೇವದೂತನಿಗೆ, “ಇಲ್ಲಿಗೆ ಸಾಕು! ನಿನ್ನ ಕೈಯನ್ನು ಕೆಳಗಿಳಿಸು” ಎಂದು ಹೇಳಿದನು. ಆಗ ಆ ಯೆಹೋವನ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
ದಾವೀದನು ಅರೌನನ ಕಣವನ್ನು ಕೊಂಡುಕೊಂಡನು
17 ಜನರನ್ನು ಕೊಂದ ದೂತನನ್ನು ದಾವೀದನು ನೋಡಿ ಯೆಹೋವನೊಂದಿಗೆ ಮಾತನಾಡಿದನು. ದಾವೀದನು ಯೆಹೋವನಿಗೆ, “ನಾನು ಪಾಪ ಮಾಡಿದೆನು. ನಾನು ತಪ್ಪು ಮಾಡಿದೆನು. ಆದರೆ ಈ ಜನರು ಕೇವಲ ಕುರಿಗಳಂತೆ ನಿರಪರಾಧಿಗಳು. ಅವರು ಯಾವ ತಪ್ಪನ್ನೂ ಮಾಡಲಿಲ್ಲ. ದಯಮಾಡಿ ನಿನ್ನ ದಂಡನೆಯು ನನಗೆ ಮತ್ತು ನನ್ನ ತಂದೆಯ ಕುಲದ ವಿರುದ್ಧವಾಗಿರಲಿ” ಎಂದು ಹೇಳಿದನು.
18 ಆ ದಿನ ಗಾದನು ದಾವೀದನ ಬಳಿಗೆ ಬಂದು, “ಹೋಗಿ, ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸು” ಎಂದು ಹೇಳಿದನು. 19 ಅಂತೆಯೇ ದಾವೀದನು ಯೆಹೋವನ ಆಜ್ಞೆಗೆ ವಿಧೇಯನಾಗಿ ಅರೌನನನ್ನು ನೋಡಲು ಹೋದನು. 20 ರಾಜನು ಅವನ ಸೇವಕರೊಂದಿಗೆ ತನ್ನ ಕಡೆ ಬರುತ್ತಿರುವುದನ್ನು ಅರೌನನು ನೋಡಿದನು. ಅರೌನನು ಹೊರಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. 21 ಅರೌನನು, “ರಾಜನಾದ ನನ್ನ ಒಡೆಯನೇ, ನನ್ನ ಬಳಿ ಬಂದದ್ದೇಕೆ?” ಎಂದು ಕೇಳಿದನು.
ದಾವೀದನು, “ನಿನ್ನಿಂದ ಕಣವನ್ನು ಕೊಂಡುಕೊಳ್ಳುವುದಕ್ಕಾಗಿ ಬಂದೆನು. ನಾನು ಯೆಹೋವನಿಗೆ ಒಂದು ಯಜ್ಞವೇದಿಕೆಯನ್ನು ನಿರ್ಮಿಸುತ್ತೇನೆ. ಆಗ ರೋಗರುಜಿನಗಳು ನಿಲ್ಲುತ್ತವೆ” ಎಂದನು.
22 ಅರೌನನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ಯಜ್ಞವನ್ನು ಸಮರ್ಪಿಸಲು ನೀನು ಏನನ್ನು ಬೇಕಾದರೂ ತೆಗೆದುಕೊ. ಸರ್ವಾಂಗಹೋಮವನ್ನು ಅರ್ಪಿಸಲು ಇಲ್ಲಿ ಕೆಲವು ಹೋರಿಗಳಿವೆ, ನೊಗ ಮುಂತಾದ ಮರದ ಸಲಕರಣೆಗಳಿವೆ. 23 ರಾಜನೇ, ನಾನು ಎಲ್ಲವನ್ನೂ ನಿನಗೆ ಅರ್ಪಿಸುತ್ತೇನೆ” ಎಂದು ಹೇಳಿದನು. ಇದಲ್ಲದೆ ಅರೌನನು ರಾಜನಿಗೆ, “ನಿನ್ನ ದೇವರಾದ ಯೆಹೋವನು ನಿನ್ನನ್ನು ಮೆಚ್ಚಿಕೊಳ್ಳಲಿ” ಎಂದೂ ಹೇಳಿದನು.
24 ಆದರೆ ರಾಜನು ಅರೌನನಿಗೆ, “ಇಲ್ಲ, ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನಾನು ನಿನ್ನ ಭೂಮಿಗೆ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ನಾನು ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.
ಆದ್ದರಿಂದ ದಾವೀದನು ಕಣವನ್ನು ಮತ್ತು ಹೋರಿಗಳನ್ನು ಐವತ್ತು ಶೆಕೆಲ್‌ಗಳಿಗೆ ಕೊಂಡುಕೊಂಡನು. 25 ನಂತರ ದಾವೀದನು ಅಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು. ದಾವೀದನು ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದನು.
ಅವನು ದೇಶಕ್ಕಾಗಿ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಯೆಹೋವನು ಇಸ್ರೇಲಿನ ರೋಗರುಜಿನಗಳನ್ನು ನಿಲ್ಲಿಸಿದನು.
ಇಸ್ರೇಲರನ್ನು ಲೆಕ್ಕಿಸಿ ದಾವೀದನು ಪಾಪಮಾಡಿದನು
21 ಸೈತಾನನು ಇಸ್ರೇಲರಿಗೆ ವಿರುದ್ಧವಾಗಿದ್ದನು. ಅವನು ಇಸ್ರೇಲರನ್ನು ಲೆಕ್ಕಿಸುವಂತೆ ದಾವೀದನನ್ನು ಪ್ರೇರೇಪಿಸಿದನು. 2 ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು.
3 ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು.
4 ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು. 5 ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು. 6 ಯೋವಾಬನು ಲೇವಿ ಕುಲದವರನ್ನು ಮತ್ತು ಬೆನ್ಯಾಮೀನನ ಕುಲದವರನ್ನು ಜನಗಣತಿಯಲ್ಲಿ ಸೇರಿಸಲಿಲ್ಲ; ಯಾಕೆಂದರೆ ದಾವೀದನ ಆಜ್ಞೆಯು ಅವನಿಗೆ ಸರಿಕಾಣಲಿಲ್ಲ; 7 ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು.
ಇಸ್ರೇಲಿಗೆ ದೇವರ ದಂಡನೆ
8 ದಾವೀದನು ದೇವರಿಗೆ, “ನಾನು ಕೇವಲ ಹುಚ್ಚು ಕೆಲಸ ಮಾಡಿದೆನು. ಇಸ್ರೇಲರ ಜನಗಣತಿ ಮಾಡಿ ಪಾಪಮಾಡಿದೆನು. ಈಗ ನಿನ್ನ ಸೇವಕನಾದ ನನ್ನ ಪಾಪವನ್ನು ನಿರ್ಮೂಲ ಮಾಡು” ಎಂದು ಬೇಡಿಕೊಂಡನು.
9-10 ಗಾದನು ದಾವೀದನ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳು: ‘ಇದು ಯೆಹೋವನ ನುಡಿ. ನಾನು ನಿನಗೆ ಕೊಡಲಿರುವ ಮೂರು ಶಿಕ್ಷೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನೀನು ಆರಿಸಿಕೊಂಡ ಪ್ರಕಾರವೇ ನಾನು ನಿನ್ನನ್ನು ಶಿಕ್ಷಿಸುವೆನು’” ಅಂದನು.
11-12 ಗಾದನು ದಾವೀದನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ: ‘ನೀನು ಸಹಿಸಿಕೊಳ್ಳಬಲ್ಲ ಶಿಕ್ಷೆಯನ್ನು ಆರಿಸಿಕೊ. ಮೂರು ವರ್ಷಗಳ ಬರಗಾಲ; ಅಥವಾ ನಿನ್ನ ವೈರಿಗಳಿಗೆ ಮೂರು ತಿಂಗಳು ಶರಣಾಗುವಿಕೆ; ಅಥವಾ ಮೂರು ದಿವಸ ಕಾಲ ಭಯಂಕರ ಕಾಯಿಲೆಯು ನಿನ್ನ ರಾಜ್ಯವೆಲ್ಲಾ ಹಬ್ಬುವದು; ಯೆಹೋವನ ದೂತನು ಇಡೀ ಇಸ್ರೇಲನ್ನು ದಾಟಿ ಸಿಕ್ಕಿದವರನ್ನೆಲ್ಲಾ ಹತಿಸಿಬಿಡುವನು.’ ದಾವೀದನೇ, ನನ್ನನ್ನು ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.”
13 ಆಗ ಗಾದನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನೆ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಬಾರದು. ಯೆಹೋವನು ಕರುಣೆಯುಳ್ಳವನು. ಆದ್ದರಿಂದ ಆತನೇ ನಿರ್ಧರಿಸಲಿ.”
14 ಆಗ ಯೆಹೋವನು ಇಸ್ರೇಲರ ಮೇಲೆ ಬಹು ಘೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು. 15 ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು.
16 ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು. 17 ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.
18 ಆಗ ಯೆಹೋವನ ದೂತನು ಗಾದನೊಂದಿಗೆ ಮಾತನಾಡಿ, “ದಾವೀದನು ಒಂದು ಯಜ್ಞವೇದಿಕೆಯನ್ನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ಕಟ್ಟಿ ಯೆಹೋವನನ್ನು ಆರಾಧಿಸಲಿ” ಎಂದು ಹೇಳಿದನು. 19 ಗಾದನು ದಾವೀದನಿಗೆ ಇದನ್ನು ತಿಳಿಸಿದ ಕೂಡಲೇ ಅವನು ಒರ್ನಾನನ ಕಣಕ್ಕೆ ಹೋದನು.
20 ಒರ್ನಾನನು ಗೋಧಿಯನ್ನು ತನ್ನ ಕಣದಲ್ಲಿ ಬಡಿಯುತ್ತಾ ತಿರುಗಿನೋಡಿದಾಗ ದೇವದೂತನನ್ನು ಕಂಡನು. ಅವನ ನಾಲ್ಕು ಮಂದಿ ಗಂಡುಮಕ್ಕಳು ಓಡಿಹೋಗಿ ಅವಿತುಕೊಂಡರು. 21 ದಾವೀದನು ಒರ್ನಾನನ ಬಳಿಗೆ ಬೆಟ್ಟ ಹತ್ತಿಕೊಂಡು ಬರುತ್ತಿರುವುದನ್ನು ಒರ್ನಾನನು ಕಂಡು ಅವನನ್ನು ಎದುರುಗೊಂಡು ಬಗ್ಗಿ ನಮಸ್ಕರಿಸಿದನು.
22 ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು.
23 ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು.
24 ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.
25 ದಾವೀದನು ಒರ್ನಾನನಿಗೆ ಹದಿನೈದು ಪೌಂಡ್ ಬಂಗಾರವನ್ನು ಕೊಟ್ಟು ಆ ಸ್ಥಳವನ್ನು ಕೊಂಡುಕೊಂಡನು. 26 ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಪರಲೋಕದಿಂದ ಬೆಂಕಿಯನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿದುಬಂದಿತು. 27 ಆಗ ದೇವರು ತನ್ನ ದೂತನಿಗೆ ಖಡ್ಗವನ್ನು ಒರೆಯಲ್ಲಿ ಹಾಕಲು ಆಜ್ಞಾಪಿಸಿದನು.
28 ದೇವರು ತನ್ನ ಪ್ರಾರ್ಥನೆಯನ್ನು ಕೇಳಿ ಉತ್ತರ ಕೊಟ್ಟದ್ದನ್ನು ಕಂಡು ದಾವೀದನು ಆತನಿಗೆ ಯಜ್ಞಗಳನ್ನು ಸಮರ್ಪಿಸಿದನು. 29 ಆಗ ಪವಿತ್ರ ಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ಯೋನ್ ಪಟ್ಟಣದ ಎತ್ತರದ ಪ್ರದೇಶದಲ್ಲಿತ್ತು. ಇಸ್ರೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದ್ದನು. 30 ದಾವೀದನು ದೇವರ ಸಂಗಡ ಮಾತನಾಡಲು ಭಯಪಟ್ಟದ್ದರಿಂದ ದೇವದರ್ಶನ ಗುಡಾರಕ್ಕೆ ಹೋಗಲಿಲ್ಲ. ಅವನು ಖಡ್ಗಧಾರಿಯಾಗಿದ್ದ ದೇವದೂತನಿಗೂ ಭಯಪಟ್ಟನು.
22 ಆಗ ದಾವೀದನು, “ದೇವರ ಆಲಯವೂ ಆತನ ಯಜ್ಞವೇದಿಕೆಯೂ ಇದೇ ಸ್ಥಳದಲ್ಲಿ ಕಟ್ಟಲ್ಪಡುವದು” ಅಂದನು.
ದೇವಾಲಯವನ್ನು ಕಟ್ಟಲು ದಾವೀದನ ಯೋಜನೆ
2 ಇಸ್ರೇಲಿನಲ್ಲಿ ವಾಸಿಸುತ್ತಿದ್ದ ಪರದೇಶಸ್ಥರನ್ನೆಲ್ಲಾ ದಾವೀದನು ಬರಹೇಳಿ ಅವರಲ್ಲಿಂದ ಕಲ್ಲುಕುಟಿಗರನ್ನು ಆರಿಸಿ ತೆಗೆದುಕೊಂಡನು. ದೇವಾಲಯವನ್ನು ಕಟ್ಟಲು ಕಲ್ಲುಗಳನ್ನು ಕೆತ್ತಿ ತಯಾರಿಸುವ ಕೆಲಸ ಅವರದಾಗಿತ್ತು. 3 ದೇವಾಲಯದ ಬಾಗಿಲುಗಳಿಗೆ ಬೇಕಾದ ಮೊಳೆಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಕಬ್ಬಿಣವನ್ನು ಶೇಖರಿಸಿಟ್ಟನು. ಅವನು ತನ್ನ ಬಳಿಯಲ್ಲಿ ತೂಕಮಾಡಲು ಸಾಧ್ಯವಾಗದಷ್ಟು ತಾಮ್ರವನ್ನು ಶೇಖರಿಸಿಟ್ಟಿದ್ದನು. 4 ಅಲ್ಲದೆ ಲೆಕ್ಕಮಾಡಲು ಅಸಾಧ್ಯವಾದಷ್ಟು ದೇವದಾರು ಮರಗಳ ದಿಮ್ಮಿಯನ್ನು ಕೂಡಿಸಿಟ್ಟಿದ್ದನು. ತೂರ್ಯರು ಮತ್ತು ಚೀದೋನಿನವರು ಆ ದಿಮ್ಮಿಗಳನ್ನು ದಾವೀದನಿಗೆ ತಂದು ಕೊಟ್ಟಿದ್ದರು.
5 ದಾವೀದನು, “ನಾವು ನಮ್ಮ ದೇವರಿಗೆ ಮಹಾದೊಡ್ಡ ಆಲಯವನ್ನು ಕಟ್ಟಿಸಬೇಕು. ಆದರೆ ನನ್ನ ಮಗನಾದ ಸೊಲೊಮೋನನು ಇನ್ನೂ ಎಳೆಪ್ರಾಯದವನು; ಅವನು ಕಲಿಯ ಬೇಕಾದದ್ದು ಇನ್ನೂ ಬೇಕಾದಷ್ಟಿದೆ. ದೇವಾಲಯವು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗಿದ್ದು ಅದರ ಸೌಂದರ್ಯ ಮತ್ತು ವಿನ್ಯಾಸವು ಹೆಸರುವಾಸಿಯಾಗಿರಬೇಕು. ಅದಕ್ಕಾಗಿಯೇ ನಾನು ಆ ದೇವಾಲಯಕ್ಕಾಗಿ ಸಮಸ್ತವನ್ನು ಸಿದ್ಧಪಡಿಸುತ್ತೇನೆ” ಅಂದುಕೊಂಡನು. ಅಲ್ಲದೆ ಅವನು ಸಾಯುವುದಕ್ಕಿಂತ ಮುಂಚೆ ದೇವಾಲಯವನ್ನು ಕಟ್ಟುವುದಕ್ಕೆ ಬೇಕಾಗಿರುವವುಗಳನ್ನೆಲ್ಲಾ ಕೂಡಿಸಿಟ್ಟನು.
6 ದಾವೀದನು ತನ್ನ ಮಗನಾದ ಸೊಲೊಮೋನನನ್ನು ಕರೆದು ಇಸ್ರೇಲಿನ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟುವಂತೆ ಹೇಳಿದನು. 7 ದಾವೀದನು ಸೊಲೊಮೋನನಿಗೆ, “ನನ್ನ ಮಗನೇ, ನಾನು ನನ್ನ ದೇವರ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿದ್ದೆನು. 8 ಆದರೆ ಯೆಹೋವನು ನನಗೆ, ‘ದಾವೀದನೇ, ನೀನು ಅನೇಕ ಯುದ್ಧಗಳನ್ನು ಮಾಡಿ ಅನೇಕರನ್ನು ಕೊಂದಿರುತ್ತೀ. ಹೀಗಿರುವದರಿಂದ ನೀನು ನನಗೆ ಆಲಯವನ್ನು ಕಟ್ಟಬಾರದು. 9 ಆದರೆ ನಿನ್ನ ನಂತರ ಬರುವ ನಿನ್ನ ಮಗನು ಸಮಾಧಾನ ಪುರುಷನಾಗಿರುವನು. ಅವನ ರಾಜ್ಯದಲ್ಲಿ ನಾನು ಶಾಂತಿಯನ್ನು ನೆಲೆಗೊಳಿಸುವೆನು. ಅವನ ಸುತ್ತಮುತ್ತಲಿರುವ ವೈರಿಗಳಿಂದ ಅವನಿಗೆ ಯಾವ ಕೇಡೂ ಉಂಟಾಗದು. ಅವನೇ ಸೊಲೊಮೋನನು. ಅವನ ಕಾಲದಲ್ಲಿ ಇಸ್ರೇಲರು ಸಮಾಧಾನದಿಂದ ವಾಸಿಸುವರು. 10 ಅವನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು. ಅವನು ನನ್ನ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ನಾನು ಅವನ ರಾಜ್ಯವನ್ನು ಬಲಗೊಳಿಸುವೆನು; ಅವನ ಸಂತಾನದವರು ಇಸ್ರೇಲ್ ರಾಜ್ಯವನ್ನು ನಿರಂತರಕ್ಕೂ ಆಳುವರು’” ಎಂದು ಹೇಳಿದನು.
11 “ಮಗನೇ, ನೀನು ದೇವಾಲಯವನ್ನು ಕಟ್ಟುವಾಗ ಯೆಹೋವನು ನಿನ್ನ ಸಂಗಡವಿದ್ದು ನಿನಗೆ ಯಶಸ್ಸನ್ನು ದಯಪಾಲಿಸಲಿ. 12 ಯೆಹೋವನು ನಿನ್ನನ್ನು ಇಸ್ರೇಲರಿಗೆ ಅರಸನನ್ನಾಗಿ ಮಾಡುವನು. ನೀನು ಆತನ ಆಜ್ಞೆಗಳನ್ನು ಅನುಸರಿಸಿ, ದಕ್ಷತೆಯಿಂದ ರಾಜ್ಯಭಾರ ಮಾಡುವದಕ್ಕೆ ಬೇಕಾದ ಜ್ಞಾನವನ್ನು ನಿನಗೆ ದಯಪಾಲಿಸಲಿ. 13 ಯೆಹೋವನು ಮೋಶೆಗೆ ಕೊಟ್ಟಿರುವ ಕಟ್ಟಳೆಗಳನ್ನು ನೀನು ಜಾಗ್ರತೆಯಾಗಿ ಅನುಸರಿಸಿ ನಡೆದರೆ ನಿನಗೆ ಯಶಸ್ಸು ಪ್ರಾಪ್ತವಾಗುವುದು. ಸ್ಥಿರಚಿತ್ತನಾಗಿರು; ಧೈರ್ಯದಿಂದಿರು; ಹೆದರಬೇಡ; ಕಳವಳಪಡಬೇಡ.
14 “ಸೊಲೊಮೋನನೇ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಮೂರು ಸಾವಿರದ ಏಳುನೂರೈವತ್ತು ಟನ್ ಬಂಗಾರ, ಮೂವತ್ತೇಳು ಸಾವಿರದ ಐನೂರು ಟನ್ ಬೆಳ್ಳಿ ಮತ್ತು ತೂಕ ಮಾಡಲಾಗದಷ್ಟು ತಾಮ್ರ ಮತ್ತು ಕಬ್ಬಿಣವನ್ನು ಕೂಡಿಸಿಟ್ಟಿದ್ದೇನೆ. ಅಲ್ಲದೆ ಮರಗಳನ್ನು ಮತ್ತು ಕಲ್ಲುಗಳನ್ನು ಕೊಟ್ಟಿರುತ್ತೇನೆ. ಸೊಲೊಮೋನನೇ, ನೀನು ಇವುಗಳಿಗೆ ಇನ್ನೂ ಕೂಡಿಸು. 15 ನಿನ್ನ ಬಳಿಯಲ್ಲಿ ಅನೇಕ ಬಡಗಿಗಳು ಮತ್ತು ಕಲ್ಲುಕುಟಿಗರು ಇದ್ದಾರೆ. ಬೇರೆ ಕೆಲಸಗಳ ಕುಶಲಕರ್ಮಿಗಳೂ 16 ಬಂಗಾರದ ಕೆಲಸಗಾರರೂ ಬೆಳ್ಳಿ, ತಾಮ್ರ, ಕಬ್ಬಿಣದ ಕೆಲಸಗಾರರೂ ಲೆಕ್ಕವಿಲ್ಲದಷ್ಟು ಇದ್ದಾರೆ. ಈಗ ನೀನು ಕೆಲಸ ಪ್ರಾರಂಭಿಸು. ದೇವರು ನಿನ್ನ ಸಂಗಡವಿರಲಿ” ಎಂದು ಹೇಳಿದನು.
17 ಬಳಿಕ ತನ್ನ ಮಗನಾದ ಸೊಲೊಮೋನನೊಂದಿಗೆ ಸಹಕರಿಸಲು ಇಸ್ರೇಲರ ಮುಖಂಡರಿಗೆ ಆಜ್ಞಾಪಿಸಿದನು. 18 ಬಳಿಕ ತನ್ನ ಮಾತನ್ನು ಮುಂದುವರಿಸಿ, “ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ನಿಮಗೆ ಸಮಾಧಾನವನ್ನು ಅನುಗ್ರಹಿಸಿರುತ್ತಾನೆ. ನಮ್ಮ ಸುತ್ತಮುತ್ತಲಿನ ಶತ್ರುಗಳನ್ನು ಸೋಲಿಸಲು ಆತನು ನಮಗೆ ಸಹಾಯಮಾಡಿದ್ದಾನೆ. ಈಗ ಯೆಹೋವನೂ ಆತನ ಜನರೂ ಈ ದೇಶವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. 19 ಈಗ ನಿಮ್ಮ ಹೃದಯಗಳನ್ನೂ ಆತ್ಮಗಳನ್ನೂ ನಿಮ್ಮ ದೇವರಾದ ಯೆಹೋವನಿಗೆ ಕೊಡಿರಿ. ಆತನಿಗೆ ಪರಿಶುದ್ಧ ನಿವಾಸವನ್ನು ಆತನ ಹೆಸರಿಗಾಗಿ ಕಟ್ಟಿರಿ; ಒಡಂಬಡಿಕೆಯ ಪೆಟ್ಟಿಗೆಯನ್ನೂ ಇತರ ಪವಿತ್ರ ಸಾಮಾಗ್ರಿಗಳನ್ನೂ ಆತನ ಆಲಯಕ್ಕೆ ತನ್ನಿರಿ” ಎಂದು ಹೇಳಿದನು.
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
Kannada Holy Bible: Easy-to-Read Version. All rights reserved. © 1997 Bible League International