Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 11-12

ದಾವೀದನು ಬತ್ಷೆಬೆಳೊಂದಿಗೆ ಪಾಪ ಮಾಡಿದ್ದು

11 ವಸಂತಕಾಲದಲ್ಲಿ, ಎಲ್ಲಾ ರಾಜರೂ ಯುದ್ಧಕ್ಕೆ ಹೊರಡುವ ಸಮಯ ಬಂದಾಗ, ದಾವೀದನು ಯೋವಾಬನನ್ನೂ ಅವನ ಸೇವಕರನ್ನೂ ಮತ್ತು ಇಸ್ರೇಲರೆಲ್ಲರನ್ನೂ ಅಮ್ಮೋನಿಯರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಯೋವಾಬನ ಸೈನ್ಯವು ರಬ್ಬಕ್ಕೆ ಮುತ್ತಿಗೆ ಹಾಕಿತು.

ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅವನು ಸಾಯಂಕಾಲ ತನ್ನ ಹಾಸಿಗೆಯಿಂದ ಮೇಲೆದ್ದು ಅರಮನೆಯ ಮಾಳಿಗೆಯ ಮೇಲಕ್ಕೆ ಹೋಗಿ ತಿರುಗಾಡುತ್ತಿದ್ದನು. ದಾವೀದನು ಮಾಳಿಗೆಯ ಮೇಲಿರುವಾಗ, ಒಬ್ಬ ಹೆಂಗಸು ಸ್ನಾನ ಮಾಡುತ್ತಿರುವುದನ್ನು ನೋಡಿದನು. ಅವಳು ಅತ್ಯಂತ ಸುಂದರಳಾಗಿದ್ದಳು. ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.

ದಾವೀದನು ತನಗಾಗಿ ಬತ್ಷೆಬೆಳನ್ನು ಕರೆತರಲು ಸಂದೇಶಕರನ್ನು ಕಳುಹಿಸಿದನು. ಅವಳು ದಾವೀದನ ಬಳಿಗೆ ಬಂದಾಗ ಅವನು ಅವಳೊಡನೆ ಲೈಂಗಿಕ ಸಂಬಂಧವನ್ನು ಹೊಂದಿದನು. ತನ್ನ ಮಾಸಿಕ ಮುಟ್ಟು ನಿಂತಮೇಲೆ ತನ್ನನ್ನು ಶುದ್ಧಪಡಿಸಿಕೊಳ್ಳಲು ಆಕೆ ಸ್ನಾನಮಾಡಿಕೊಂಡ ಮೇಲೆ ಇದು ಸಂಭವಿಸಿತು.[a] ಬಳಿಕ ಬತ್ಷೆಬೆ ಗರ್ಭಿಣಿಯಾದಳು. ಅವಳು ದಾವೀದನಿಗೆ, “ನಾನು ಗರ್ಭಿಣಿಯಾಗಿದ್ದೇನೆ” ಎಂದು ಹೇಳಿ ಕಳುಹಿಸಿದಳು.

ದಾವೀದನು ತನ್ನ ಪಾಪವನ್ನು ಮುಚ್ಚಿಡಲು ಪ್ರಯತ್ನಿಸುವನು

ದಾವೀದನು ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂಬ ಸಂದೇಶವನ್ನು ಕಳುಹಿಸಿದನು.

ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು. ಊರೀಯನು ದಾವೀದನ ಬಳಿಗೆ ಬಂದನು. ದಾವೀದನು ಊರೀಯನ ಜೊತೆಯಲ್ಲಿ ಮಾತನಾಡಿ, ಯೋವಾಬನು ಹೇಗಿದ್ದಾನೆ? ಸೈನಿಕರು ಹೇಗಿದ್ದಾರೆ? ಯುದ್ಧವು ಹೇಗೆ ನಡೆಯುತ್ತಿದೆ? ಎಂದು ಕೇಳಿದನು. ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು.

ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು. ಆದರೆ ಊರೀಯನು ಮನೆಗೆ ಹೋಗದೆ ಅರಮನೆಯ ಹೊರಬಾಗಿಲಿನಲ್ಲಿ ರಾಜನ ಸೇವಕರೊಂದಿಗೆ ಮಲಗಿದನು. 10 ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು.

ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.

11 ಊರೀಯನು ದಾವೀದನಿಗೆ, “ಪವಿತ್ರ ಪೆಟ್ಟಿಗೆಯೂ ಇಸ್ರೇಲಿನ ಮತ್ತು ಯೆಹೂದದ ಸೈನಿಕರೂ ಗುಡಾರಗಳಲ್ಲಿ ನೆಲೆಸಿದ್ದಾರೆ. ನನ್ನ ಒಡೆಯನಾದ ಯೋವಾಬನು ಮತ್ತು ನನ್ನ ರಾಜನ ಸೇವಕರು ಹೊಲದಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಆದ್ದರಿಂದ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೂ ಪತ್ನಿಯ ಜೊತೆಯಲ್ಲಿ ಮಲಗುವುದಕ್ಕೂ ನಾನು ಮನೆಗೆ ಹೋಗುವುದು ಸರಿಯಲ್ಲ. ನಿನ್ನಾಣೆ, ನಿನ್ನ ಜೀವದಾಣೆ, ನಾನು ಇಂಥದನ್ನು ಮಾಡುವುದೇ ಇಲ್ಲ.” ಎಂದು ಹೇಳಿದನು.

12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು.

ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು. 13 ಆಗ ದಾವೀದನು ತನ್ನನ್ನು ಬಂದು ಕಾಣುವಂತೆ ಊರೀಯನಿಗೆ ಹೇಳಿ ಕಳುಹಿಸಿದನು; ಊರೀಯನು ದಾವೀದನೊಂದಿಗೆ ಕುಡಿದು ಊಟ ಮಾಡಿದನು. ದಾವೀದನು ಊರೀಯನನ್ನು ಮತ್ತನನ್ನಾಗಿ ಮಾಡಿದನು. ಆದರೂ ಊರೀಯನು ಮನೆಗೆ ಹೋಗಲಿಲ್ಲ. ಅಂದು ಸಂಜೆ ರಾಜನ ಮನೆಯ ಹೊರಬಾಗಿಲಿನಲ್ಲಿ ಸೇವಕರೊಂದಿಗೆ ಮಲಗಲು ಹೋದನು.

ಊರೀಯನನ್ನು ಕೊಲ್ಲಲು ದಾವೀದನ ಉಪಾಯ

14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು. 15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.

16 ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು. 17 ಯೋವಾಬನ ವಿರುದ್ಧ ಹೋರಾಡಲು ಆ ನಗರದ[b] ಜನರು ಹೊರಗೆ ಬಂದು ದಾವೀದನ ಕೆಲವು ಜನರನ್ನು ಕೊಂದರು. ಹಿತ್ತಿಯನಾದ ಊರೀಯನೂ ಅವರಲ್ಲೊಬ್ಬನಾಗಿದ್ದನು.

18 ಅನಂತರ ಯೋವಾಬನು ತನ್ನ ಸಂದೇಶಕರಲ್ಲಿ ಒಬ್ಬನನ್ನು ಕರೆದು, “ಯುದ್ಧದಲ್ಲಿ ಸಂಭವಿಸಿದ ಎಲ್ಲಾ ವಿವರಗಳನ್ನು ದಾವೀದನಿಗೆ ತಿಳಿಸು. 19 ನೀನು ಹೇಳಿ ಮುಗಿಸಿದ ಮೇಲೆ 20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ. 21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಯಾರು ಕೊಂದರೆಂಬುದು ನಿಮಗೆ ಗೊತ್ತಿಲ್ಲವೇ? ಅಬೀಮೆಲೆಕನ ಮೇಲೆ ಬೀಸುವ ಕಲ್ಲನ್ನು ನಗರದ ಗೋಡೆಯ ಮೇಲಿನಿಂದ ಎಸೆದವಳು ತೇಬೇಚಿನ ಒಬ್ಬ ಹೆಂಗಸಲ್ಲವೇ? ನೀವು ಗೋಡೆಯ ಹತ್ತಿರಕ್ಕೆ ಏಕೆ ಹೋದಿರಿ?’ ಎಂದು ಹೇಳಬಹುದು. ಆಗ ನೀನು, ‘ಹಿತ್ತಿಯನಾದ ನಿನ್ನ ಸೇವಕ ಊರೀಯನು ಸಹ ಸತ್ತುಹೋದನು’ ಎಂದು ಉತ್ತರಿಸಬೇಕು” ಎಂದು ಹೇಳಿ ಕಳುಹಿಸಿದನು.

22 ಯೋವಾಬನು ತಿಳಿಸಲು ಹೇಳಿದ್ದನ್ನೆಲ್ಲವನ್ನೂ ಸಂದೇಶಕನು ದಾವೀದನಿಗೆ ತಿಳಿಸಿದನು. 23 ಸಂದೇಶಕನು ದಾವೀದನಿಗೆ, “ಅಮ್ಮೋನಿಯರು ಮೈದಾನದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿದರು. ಆದರೆ ನಾವು ಅವರೊಡನೆ ಹೋರಾಡಿ ನಗರದ ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋದೆವು. 24 ನಗರದ ಗೋಡೆಯ ಮೇಲಿದ್ದ ಜನರು ನಿಮ್ಮ ಸೈನಿಕರ ಮೇಲೆ ಬಾಣಗಳನ್ನು ಎಸೆದರು. ನಿಮ್ಮ ಸೈನಿಕರಲ್ಲಿ ಕೆಲವರನ್ನು ಕೊಂದರು. ಹಿತ್ತಿಯನಾದ ನಿನ್ನ ಸೈನಿಕ ಊರೀಯನೂ ಸಹ ಸತ್ತುಹೋದನು” ಎಂದು ಹೇಳಿದನು.

25 ದಾವೀದನು ಸಂದೇಶಕನಿಗೆ, “ನೀನು ಹೋಗಿ ಯೋವಾಬನಿಗೆ: ‘ಇದರಿಂದ ನೀನು ತಳಮಳಗೊಳ್ಳಬೇಡ. ಒಂದೇ ಖಡ್ಗವು ಈ ಹೊತ್ತು ಒಬ್ಬನನ್ನು ಕೊಂದರೆ, ಇನ್ನೊಂದು ದಿನ ಇನ್ನೊಬ್ಬನನ್ನು ಕೊಲ್ಲುವುದು. ರಬ್ಬ ನಗರದ ಮೇಲೆ ಧೈರ್ಯವಾಗಿ ಆಕ್ರಮಣಮಾಡು. ಆಗ ನೀನು ನಗರವನ್ನು ಗೆಲ್ಲುವೆ!’ ಈ ಮಾತುಗಳಿಂದ ಯೋವಾಬನನ್ನು ಹುರಿದುಂಬಿಸು” ಎಂಬುದಾಗಿ ಹೇಳಿದನು.

ದಾವೀದನು ಬತ್ಷೆಬೆಳನ್ನು ಮದುವೆಯಾದನು

26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.

ನಾತಾನನು ದಾವೀದನೊಂದಿಗೆ ಮಾತಾಡಿದ್ದು

12 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ. ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು. ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುರಿಮರಿಯನ್ನು ಬಹು ಪ್ರೀತಿಯಿಂದ ಆ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಈ ಕುರಿಮರಿಯೂ ಬೆಳೆಯಿತು. ಆ ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಆ ಕುರಿಮರಿಯು ಮಲಗುತ್ತಿತ್ತು. ಆ ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು.

“ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.

ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಈ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು! ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು.

ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು

ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ. ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು. ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ. 10 ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’

11 “ಯೆಹೋವನು ಹೇಳುವುದೇನೆಂದರೆ: ‘ನಾನು ನಿನಗೆ ತೊಂದರೆಯನ್ನುಂಟುಮಾಡುತ್ತೇನೆ. ನಿನ್ನ ಸ್ವಂತ ಕುಟುಂಬದಿಂದಲೇ ಈ ತೊಂದರೆಯು ಬರುತ್ತದೆ. ನಾನು ನಿನ್ನ ಪತ್ನಿಯರನ್ನು ತೆಗೆದುಕೊಂಡು ನಿನಗೆ ತೀರ ಹತ್ತಿರನಾಗಿರುವ ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನು ನಿನ್ನ ಪತ್ನಿಯರ ಜೊತೆಯಲ್ಲಿ ಮಲಗುತ್ತಾನೆ. ಇದು ಎಲ್ಲರಿಗೂ ತಿಳಿಯುತ್ತದೆ.[c] 12 ನೀನು ಬತ್ಷೆಬೆಳೊಂದಿಗೆ ಗುಟ್ಟಾಗಿ ಮಲಗಿದೆ. ಆದರೆ ನಾನು ಹೇಳುತ್ತಿರುವ ಮಾತೆಲ್ಲಾ ಇಸ್ರೇಲ್ ಜನರ ಕಣ್ಣೆದುರಿನಲ್ಲಿ ನಡೆಯುವುದು’”[d] ಎಂದು ಹೇಳಿದನು.

13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು.

ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ. 14 ನೀನು ನಿನ್ನ ಪಾಪಕೃತ್ಯಗಳಿಂದ ಯೆಹೋವನ ವೈರಿಗಳು ಯೆಹೋವನನ್ನು ಹೆಚ್ಚು ದ್ವೇಷಿಸುವಂತೆ ಮಾಡಿದೆ. ನಿನಗೆ ಹುಟ್ಟಿದ ಗಂಡುಮಗು ಈ ಕಾರಣಕ್ಕಾಗಿ ಸತ್ತುಹೋಗುವುದು” ಎಂದು ಹೇಳಿದನು.

ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ

15 ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು. 16 ದಾವೀದನು ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸಿದನು. ಅವನು ಉಪವಾಸ ಮಾಡಿದನು. ಅವನು ತನ್ನ ಮನೆಯೊಳಗೇ ಇದ್ದನು. ಅವನು ರಾತ್ರಿಯೆಲ್ಲ ನೆಲದ ಮೇಲೆಯೇ ಬಿದ್ದುಕೊಂಡಿದ್ದನು.

17 ದಾವೀದನ ಕುಟುಂಬದ ನಾಯಕರು ಬಂದು ಅವನನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ದಾವೀದನು ಮೇಲೇಳಲಿಲ್ಲ. ಅವನು ಈ ನಾಯಕರೊಂದಿಗೆ ಊಟ ಮಾಡಲಿಲ್ಲ. 18 ಏಳನೆಯ ದಿನ ಆ ಮಗು ಸತ್ತಿತು. ಮಗು ಸತ್ತದ್ದನ್ನು ದಾವೀದನಿಗೆ ತಿಳಿಸಲು ಅವನ ಸೇವಕರು ಅಂಜಿದರು. ಅವರು, “ನೋಡಿ, ಮಗು ಜೀವಂತವಾಗಿರುವಾಗ ನಾವು ದಾವೀದನೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ. ಮಗುವು ಸತ್ತಿತೆಂದು ನಾವು ದಾವೀದನಿಗೆ ತಿಳಿಸಿದರೆ, ಬಹುಶಃ ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುತ್ತಾನೆ” ಎಂಬುದಾಗಿ ಮಾತಾಡಿಕೊಂಡರು.

19 ಆದರೆ ದಾವೀದನು ತನ್ನ ಸೇವಕರು ಗುಸುಗುಸು ಮಾತನಾಡುವುದನ್ನು ಕೇಳಿ, ಮಗು ಸತ್ತಿದೆಯೆಂಬುದನ್ನು ಅರ್ಥಮಾಡಿಕೊಂಡನು. ಆದ್ದರಿಂದ ದಾವೀದನು ತನ್ನ ಸೇವಕರನ್ನು ಕರೆದು, “ಮಗು ಸತ್ತುಹೋಯಿತೇ?” ಎಂದು ಕೇಳಿದನು.

“ಹೌದು, ಸತ್ತುಹೋಯಿತು” ಎಂದು ಸೇವಕರು ಉತ್ತರಿಸಿದರು.

20 ಆಗ ದಾವೀದನು ನೆಲದಿಂದ ಮೇಲಕ್ಕೆದ್ದನು. ಅವನು ತನ್ನನ್ನು ಶುಚಿಗೊಳಿಸಿಕೊಂಡನು. ಅವನು ತನ್ನ ಬಟ್ಟೆಗಳನ್ನು ಬದಲಿಸಿ ಬೇರೆ ಬಟ್ಟೆಗಳನ್ನು ಧರಿಸಿದನು. ನಂತರ ಅವನು ಯೆಹೋವನನ್ನು ಆರಾಧಿಸುವುದಕ್ಕಾಗಿ ಆತನ ಆಲಯಕ್ಕೆ ಹೋದನು. ಅವನು ಮನೆಗೆ ಹೋಗಿ ತಿನ್ನಲು ಏನನ್ನಾದರೂ ಕೊಡುವಂತೆ ಕೇಳಿದನು. ಅವನ ಸೇವಕರು ಕೊಟ್ಟ ಸ್ವಲ್ಪ ಆಹಾರವನ್ನು ಅವನು ತಿಂದನು.

21 ದಾವೀದನ ಸೇವಕರು ಅವನಿಗೆ, “ನೀನು ಹೀಗೇಕೆ ಮಾಡುತ್ತಿರುವೆ? ಮಗುವು ಇನ್ನೂ ಜೀವಂತವಾಗಿದ್ದಾಗ ನೀನು ಊಟಮಾಡಲಿಲ್ಲ. ನೀನು ಗೋಳಾಡಿದೆ, ಆದರೆ ಮಗುವು ಸತ್ತಮೇಲೆ ನೀನು ಮೇಲಕ್ಕೆದ್ದು ಊಟ ಮಾಡಿದೆ?” ಎಂದು ಕೇಳಿದರು.

22 ದಾವೀದನು, “ಮಗು ಜೀವದಿಂದ ಇರುವಾಗ ನಾನು ಊಟಮಾಡದೆ ಗೋಳಾಡಿದೆ, ಏಕೆಂದರೆ ‘ಒಂದುವೇಳೆ ಯೆಹೋವನು ನನ್ನ ಬಗ್ಗೆ ಅನುಕಂಪವನ್ನು ತೋರಿ ಮಗುವನ್ನು ಬದುಕಿಸಬಹುದು’ ಎಂದು ನಾನು ಯೋಚಿಸಿಕೊಂಡಿದ್ದೆ. 23 ಆದರೆ ಈಗ ಮಗು ಸತ್ತುಹೋಗಿದೆ. ಆದ್ದರಿಂದ ಈಗ ನಾನೇಕೆ ಉಪವಾಸಮಾಡಬೇಕು? ಆ ಮಗುವಿಗೆ ಮತ್ತೆ ನಾನು ಜೀವವನ್ನು ಕೊಡಲು ಸಾಧ್ಯವೇ? ಇಲ್ಲ! ಎಂದಾದರೂ ಒಂದು ದಿನ ನಾನು ಅವನ ಬಳಿಗೆ ಹೋಗುತ್ತೇನೆ. ಆದರೆ ಅವನು ನನ್ನ ಬಳಿಗೆ ಹಿಂದಿರುಗುವುದಿಲ್ಲ” ಎಂದನು.

ಸೊಲೊಮೋನನು ಹುಟ್ಟಿದ್ದು

24 ನಂತರ ದಾವೀದನು ತನ್ನ ಪತ್ನಿಯಾದ ಬತ್ಷೆಬೆಳನ್ನು ಸಂತೈಸಿ ಅವಳೊಂದಿಗೆ ಮಲಗಿಕೊಂಡನು. ಬತ್ಷೆಬೆಳು ಮತ್ತೆ ಗರ್ಭಿಣಿಯಾದಳು. ಅವಳಿಗೆ ಮತ್ತೊಂದು ಗಂಡು ಮಗುವಾಯಿತು. ಆ ಮಗುವಿಗೆ ಸೊಲೊಮೋನ್ ಎಂದು ದಾವೀದನು ಹೆಸರಿಟ್ಟನು. ಯೆಹೋವನು ಸೊಲೊಮೋನನನ್ನು ಪ್ರೀತಿಸಿದನು. 25 ಯೆಹೋವನು ಪ್ರವಾದಿಯಾದ ನಾತಾನನ ಮೂಲಕವಾಗಿ ಸಂದೇಶವನ್ನು ಕಳುಹಿಸಿದನು. ಯೆಹೋವನು ಆಜ್ಞಾಪಿಸಿದಂತೆ ನಾತಾನನು ಸೊಲೊಮೋನನಿಗೆ ಯೆದೀದ್ಯನೆಂದು ಹೆಸರಿಟ್ಟನು.

ದಾವೀದನು ರಬ್ಬವನ್ನು ವಶಪಡಿಸಿಕೊಂಡದ್ದು

26 ಯೋವಾಬನು ಅಮ್ಮೋನಿಯರ ರಾಜಧಾನಿಯಾದ ರಬ್ಬಕ್ಕೆ ವಿರುದ್ಧವಾಗಿ ಹೋರಾಡಿ ಆ ನಗರವನ್ನು ವಶಪಡಿಸಿಕೊಂಡನು. 27 ಯೋವಾಬನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಾನು ರಬ್ಬದ ವಿರುದ್ಧ ಹೋರಾಡಿ ನೀರಿರುವ ನಗರವನ್ನು ವಶಪಡಿಸಿಕೊಂಡಿದ್ದೇನೆ. 28 ಈಗ ಇತರ ಜನರನ್ನು ಒಟ್ಟುಗೂಡಿಸಿಕೊಂಡುಬಂದು ಈ ನಗರಕ್ಕೆ ಮುತ್ತಿಗೆ ಹಾಕು. ನಾನು ಈ ನಗರವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲೇ ಇದನ್ನು ವಶಪಡಿಸಿಕೋ. ಈ ನಗರವನ್ನು ನಾನು ವಶಪಡಿಸಿಕೊಂಡರೆ ಇದನ್ನು ನನ್ನ ಹೆಸರಿನಿಂದ ಕರೆಯಬೇಕಾಗುವುದು” ಎಂದು ಹೇಳಿ ಕಳುಹಿಸಿದನು.

29 ಆಗ ದಾವೀದನು ಜನರೆಲ್ಲರನ್ನು ಒಟ್ಟುಗೂಡಿಸಿಕೊಂಡು ರಬ್ಬಕ್ಕೆ ಹೋದನು. ಅವನು ರಬ್ಬದ ವಿರುದ್ಧ ಹೋರಾಡಿ ಆ ನಗರವನ್ನು ವಶಪಡಿಸಿಕೊಂಡನು. 30 ದಾವೀದನು ಅವರ ರಾಜನ ತಲೆಯ[e] ಮೇಲಿದ್ದ ಕಿರೀಟವನ್ನು ತೆಗೆದುಕೊಂಡನು. ಆ ಕೀರಿಟವು ಚಿನ್ನದ್ದೂ ಎಪ್ಪತ್ತೈದು ಪೌಂಡುಗಳಷ್ಟು ಭಾರವುಳ್ಳದ್ದೂ ಆಗಿತ್ತು. ಆ ಕಿರೀಟದಲ್ಲಿ ಬೆಲೆಬಾಳುವ ರತ್ನಗಳಿದ್ದವು. ಅವರು ಆ ಕೀರಿಟವನ್ನು ದಾವೀದನ ತಲೆಯ ಮೇಲೆ ಇಟ್ಟರು. ದಾವೀದನು ಆ ನಗರದಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು ತಂದನು.

31 ದಾವೀದನು ರಬ್ಬ ನಗರದ ಜನರನ್ನು ಹೊರದೂಡಿದನು. ದಾವೀದನು ಅವರನ್ನು ಗರಗಸ, ಕಬ್ಬಿಣದ ಗುದ್ದಲಿ ಮತ್ತು ಕೊಡಲಿಗಳಿಂದ ಕೆಲಸ ಮಾಡಿಸಿದನು. ಅವನು ಅವರಿಂದ ಬಲವಂತವಾಗಿ ಇಟ್ಟಿಗೆಗಳಿಂದ ಕಟ್ಟಡವನ್ನು ಕಟ್ಟಿಸಿದನು. ಅಮ್ಮೋನಿಯರ ನಗರಗಳಲ್ಲೆಲ್ಲಾ ದಾವೀದನು ಇದೇ ರೀತಿ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂದಿರುಗಿದನು.

1 ಪೂರ್ವಕಾಲವೃತ್ತಾಂತ 20

ಅಮ್ಮೋನಿಯರನ್ನು ಯೋವಾಬನು ನಾಶಮಾಡಿದ್ದು

20 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆಹಾಕಿ ಸಂಪೂರ್ಣವಾಗಿ ನಾಶಮಾಡಿದರು.

ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಆ ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಆ ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.

ಫಿಲಿಷ್ಟಿಯರ ದೈತ್ಯರನ್ನು ಕೊಂದದ್ದು

ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.

ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಷ್ಟಿತ್ತು.

ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು. ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.

ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International