Chronological
ರಚನೆಗಾರ: ದಾವೀದ.
65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
2 ಪ್ರಾರ್ಥನೆಯನ್ನು ಕೇಳುವಾತನೇ,
ಜನರೆಲ್ಲರೂ ನಿನ್ನ ಬಳಿಗೆ ಬರುವರು.
3 ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
ನಮ್ಮನ್ನು ಆ ಪಾಪಗಳಿಂದ ಬಿಡಿಸು.
4 ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
ನಾವು ಉಲ್ಲಾಸಗೊಂಡಿದ್ದೇವೆ.
5 ನಮ್ಮ ರಕ್ಷಕನಾದ ದೇವರೇ,
ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
6 ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
7 ಭೋರ್ಗರೆಯುವ ಸಮುದ್ರಗಳನ್ನೂ
ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಸ್ತುತಿಗೀತೆ.
66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
2 ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
3 ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
4 ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
6 ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
7 ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
ಆತನು ಎಲ್ಲರನ್ನೂ ಗಮನಿಸುತ್ತಾನೆ.
ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15 ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
16 ದೇವಭಕ್ತರೆಲ್ಲರೂ ಬನ್ನಿರಿ,
ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
ಆತನು ನನಗೆ ವಿಮುಖನಾಗದೆ,
ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!
ಸ್ತುತಿಗೀತೆ.
67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
ಪ್ರಸನ್ನಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ.
ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
ರಚನೆಗಾರ: ದಾವೀದ.
69 ದೇವರೇ, ನನ್ನನ್ನು ರಕ್ಷಿಸು!
ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
2 ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
3 ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
ನನ್ನ ಕಣ್ಣುಗಳು ನೋಯುತ್ತಿವೆ.
4 ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ.
ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ;
ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು.
ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ
ನನ್ನಿಂದ ದಂಡ ವಸೂಲಿ ಮಾಡಿದರು.
5 ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ.
ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.
6 ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ.
ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ.
7 ನಾಚಿಕೆಯು ನನ್ನ ಮುಖವನ್ನು ಕವಿದಿದೆ.
ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
8 ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ.
ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
9 ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತಿದೆ.
ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು.
ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು
ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು.
ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ.
ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
19 ನನ್ನ ನಾಚಿಕೆ ನಿನಗೆ ಗೊತ್ತಿದೆ.
ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ.
ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ.
20 ಅವಮಾನವು ನನ್ನನ್ನು ಜಜ್ಜಿಹಾಕಿದೆ!
ನಾನು ನಾಚಿಕೆಯಿಂದ ಸಾಯುವಂತಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ,
ಆದರೆ ಯಾರೂ ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ,
ಆದರೆ ಯಾರೂ ಸಿಗಲಿಲ್ಲ.
21 ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ.
ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ.
22 ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ.
23 ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ.
24 ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ.
25 ಅವರ ಮನೆಗಳು ಬರಿದಾಗಲಿ;
ಅವುಗಳಲ್ಲಿ ಯಾರೂ ವಾಸಿಸದಂತಾಗಲಿ.
26 ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು.
ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು.
27 ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು.
ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು.
ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ.
29 ನಾನು ನೋವಿನಿಂದ ದುಃಖಗೊಂಡಿರುವೆ.
ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು!
30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36 ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.
ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
70 ದೇವರೇ, ನನ್ನನ್ನು ರಕ್ಷಿಸು!
ದೇವರೇ, ಬೇಗನೆ ನನಗೆ ಸಹಾಯಮಾಡು!
2 ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
ಅವಮಾನಗೊಂಡು ಓಡಿಹೋಗಲಿ.
3 ನನ್ನನ್ನು ಗೇಲಿಮಾಡುವವರು
ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
4 ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.
5 ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
ಯೆಹೋವನೇ ತಡಮಾಡಬೇಡ!
Kannada Holy Bible: Easy-to-Read Version. All rights reserved. © 1997 Bible League International