Chronological
ದಾವೀದನ ಜನರಿಗೆ ಹಾನೂನನು ಅವಮಾನ ಮಾಡಿದ್ದು
10 ತರುವಾಯ, ಅಮ್ಮೋನಿಯರ ರಾಜನಾದ ನಾಹಾಷನು ಸತ್ತನು. ಅವನ ನಂತರ ಅವನ ಮಗನಾದ ಹಾನೂನನು ರಾಜನಾದನು. 2 ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದನು. ಆದ್ದರಿಂದ ಅವನ ಮಗನಿಗೆ ನಾನು ದಯೆತೋರಿಸುವೆನು” ಎಂದು ಹೇಳಿದನು. ಆದ್ದರಿಂದ ತಂದೆಯ ಸಾವಿನಿಂದ ಶೋಕತಪ್ತನಾಗಿರುವ ಹಾನೂನನನ್ನು ಸಂತೈಸಲು ದಾವೀದನು ತನ್ನ ಅಧಿಕಾರಿಗಳನ್ನು ಕಳುಹಿಸಿದನು.
ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಹೋದರು. 3 ಆದರೆ ಅಮ್ಮೋನಿಯರ ನಾಯಕರು ತಮ್ಮ ಪ್ರಭುವಾದ ಹಾನೂನನಿಗೆ, “ನಿನ್ನನ್ನು ಸಂತೈಸಲು ಕೆಲವು ಜನರನ್ನು ಕಳುಹಿಸುವುದರ ಮೂಲಕ ದಾವೀದನು ನಿನ್ನ ತಂದೆಯನ್ನು ಗೌರವಿಸಲು ಪ್ರಯತ್ನಿಸುತ್ತಿರುವನೆಂದು ನೀನು ಭಾವಿಸಿರುತ್ತಿಯಲ್ಲವೇ? ಇಲ್ಲ! ನಿನ್ನ ನಗರದ ಸಂಗತಿಗಳನ್ನು ರಹಸ್ಯವಾಗಿ ಕಂಡುಕೊಳ್ಳಲು ಮತ್ತು ತಿಳಿದುಕೊಳ್ಳಲು ದಾವೀದನು ಈ ಜನರನ್ನು ಕಳುಹಿಸಿದ್ದಾನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡಲು ಯೋಜನೆ ಮಾಡುತ್ತಿದ್ದಾರೆ” ಎಂದು ಹೇಳಿದರು.
4 ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ ಅವರ ಗಡ್ಡದ ಅರ್ಧಭಾಗವನ್ನು ಬೋಳಿಸಿದನು. ಅವರ ನಡುವಿನ ಕೆಳಭಾಗವು ಕಾಣುವಂತೆ ಅವರ ಬಟ್ಟೆಗಳನ್ನು ಮಧ್ಯಭಾಗದಲ್ಲಿ ಕತ್ತರಿಸಿದನು, ನಂತರ ಅವರನ್ನು ಕಳುಹಿಸಿದನು.
5 ಅವರು ದಾವೀದನಿಗೆ ಈ ಸುದ್ದಿಯನ್ನು ತಿಳಿಸಿದರು. ಆಗ ದಾವೀದನು ತನ್ನ ಬಳಿಗೆ ಬರಲು ಬಹಳ ನಾಚಿಕೆಯಿಂದಿದ್ದ ಅಧಿಕಾರಗಳ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಿಮ್ಮ ಗಡ್ಡಗಳು ಮತ್ತೆ ಬೆಳೆಯುವವರೆಗೆ ಜೆರಿಕೊವಿನಲ್ಲಿ ಇರಿ. ಅನಂತರ ಜೆರುಸಲೇಮಿಗೆ ಬನ್ನಿ” ಎಂದು ತಿಳಿಸಿದನು.
ಅಮ್ಮೋನಿಯರ ವಿರುದ್ಧ ಯುದ್ಧ
6 ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್‌ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್‌ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.
7 ಇದು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಯೋವಾಬನನ್ನು ಎಲ್ಲಾ ಶೂರ ಸೈನಿಕರೊಂದಿಗೆ ಕಳುಹಿಸಿದನು. 8 ಅಮ್ಮೋನಿಯರು ಹೊರಗೆ ಬಂದು ಯುದ್ಧಕ್ಕೆ ಸಿದ್ಧರಾದರು. ಅವರು ನಗರದ ಬಾಗಿಲಿನಲ್ಲಿ ನಿಂತರು. ಚೋಬಾ ಮತ್ತು ರೆಹೋಬ್‌ಗಳ ಅರಾಮ್ಯರು, ಟೋಬ್ ಮತ್ತು ಮಾಕಾದ ಜನರು ಯುದ್ಧರಂಗದಲ್ಲಿ ಅಮ್ಮೋನಿಯರ ಜೊತೆಯಲ್ಲಿ ಒಟ್ಟಾಗಿ ನಿಲ್ಲಲಿಲ್ಲ.
9 ಅಮ್ಮೋನಿಯರು ತಮ್ಮ ವಿರುದ್ಧವಾಗಿ ಹಿಂದೆ ಮತ್ತು ಮುಂದೆ ನಿಂತಿರುವುದನ್ನು ನೋಡಿದ ಯೋವಾಬನು ಇಸ್ರೇಲರಲ್ಲಿ ಶ್ರೇಷ್ಠರಾದವರನ್ನು ಆರಿಸಿಕೊಂಡು ಅರಾಮ್ಯರ ವಿರುದ್ಧ ಯುದ್ಧಮಾಡಲು ಅವರನ್ನು ಸಾಲಾಗಿ ನಿಲ್ಲಿಸಿದನು. 10 ಬಳಿಕ ಯೋವಾಬನು ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅಮ್ಮೋನಿಯರ ವಿರುದ್ಧ ಹೋರಾಡಲು ಕಳುಹಿಸಿದನು. 11 ಯೋವಾಬನು ಅಬೀಷೈಗೆ, “ಅರಾಮ್ಯರು ನನಗಿಂತ ಬಲಶಾಲಿಗಳೆಂದು ಕಂಡುಬಂದರೆ ನೀನು ನನಗೆ ಸಹಾಯಮಾಡು. ಅಮ್ಮೋನಿಯರು ನಿನಗೆ ಬಲಶಾಲಿಗಳೆಂದು ಕಂಡು ಬಂದರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ. 12 ನೀನು ಶಕ್ತನಾಗಿರು. ನಮ್ಮ ಜನರಿಗಾಗಿ ಮತ್ತು ನಮ್ಮ ದೇವರ ನಗರಗಳಿಗಾಗಿ ಧೈರ್ಯದಿಂದ ಹೋರಾಡೋಣ. ಯೆಹೋವನು ತನಗೆ ಸರಿಯೆನಿಸುವುದನ್ನು ಮಾಡಲಿ” ಎಂದು ಹೇಳಿದನು.
13 ನಂತರ ಯೋವಾಬನು ಮತ್ತು ಅವನ ಜನರು ಅರಾಮ್ಯರ ಮೇಲೆ ಆಕ್ರಮಣ ಮಾಡಿದರು. ಯೋವಾಬ ಮತ್ತು ಅವನ ಜನರನ್ನು ಬಿಟ್ಟು ಅರಾಮ್ಯರು ಓಡಿಹೋದರು. 14 ಅರಾಮ್ಯರು ಓಡಿಹೋಗುತ್ತಿರುವುದನ್ನು ನೋಡಿದ ಅಮ್ಮೋನಿಯರು ಅಬೀಷೈಯನ್ನು ಬಿಟ್ಟು ಓಡಿಹೋದರು. ಅವರು ತಮ್ಮ ನಗರಕ್ಕೆ ಹಿಂದಿರುಗಿದರು.
ಯೋವಾಬನು ಯುದ್ಧರಂಗದಿಂದ ಹಿಂದಿರುಗಿ ಜೆರುಸಲೇಮಿಗೆ ಬಂದನು.
ಅರಾಮ್ಯರು ಮತ್ತೆ ಯುದ್ಧ ಮಾಡಲು ತೀರ್ಮಾನಿಸಿದರು
15 ಇಸ್ರೇಲರು ತಮ್ಮನ್ನು ಸೋಲಿಸಿದರೆಂಬುದನ್ನು ಅರಾಮ್ಯರು ತಿಳಿದುಕೊಂಡರು. ಆದ್ದರಿಂದ ಅವರೆಲ್ಲರೂ ಒಟ್ಟಾಗಿ ಸೇರಿ ಒಂದು ದೊಡ್ಡ ಸೈನ್ಯವನ್ನು ಕಟ್ಟಿದರು. 16 ಯೂಫ್ರೇಟೀಸ್ ನದಿಯ ಮತ್ತೊಂದು ತೀರದಲ್ಲಿ ವಾಸಿಸುತ್ತಿದ್ದ ಅರಾಮ್ಯರನ್ನು ಕರೆತರಲು ಹದದೆಜೆರನು ಸಂದೇಶಕರನ್ನು ಕಳುಹಿಸಿದನು. ಈ ಅರಾಮ್ಯರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.
17 ಈ ವಿಷಯವು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಇಸ್ರೇಲರೆಲ್ಲರನ್ನೂ ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಹೇಲಾಮಿಗೆ ಹೋದನು.
ಅಲ್ಲಿ ಅರಾಮ್ಯರು ಯುದ್ಧಕ್ಕೆ ಸಿದ್ಧರಾಗಿ ಆಕ್ರಮಣ ಮಾಡಿದರು. 18 ಆದರೆ ದಾವೀದನು ಅರಾಮ್ಯರನ್ನು ಸೋಲಿಸಿದನು. ಅರಾಮ್ಯರು ಇಸ್ರೇಲರನ್ನು ಬಿಟ್ಟು ಓಡಿಹೋದರು. ದಾವೀದನು ಅರಾಮ್ಯರ ಏಳು ನೂರು ಮಂದಿ ರಥದ ಸಾರಥಿಯರನ್ನೂ ನಲವತ್ತು ಸಾವಿರ ಮಂದಿ ರಾಹುತರನ್ನೂ ಕೊಂದುಹಾಕಿದನು. ಅರಾಮ್ಯರ ಸೇನಾಪತಿಯಾದ ಶೋಬಕನನ್ನು ಸಹ ದಾವೀದನು ಕೊಂದುಹಾಕಿದನು.
19 ಹದದೆಜೆರನ ಸೇವೆಯಲ್ಲಿದ್ದ ರಾಜರಿಗೆ ಇಸ್ರೇಲರು ತಮ್ಮನ್ನು ಸೋಲಿಸಿದುದು ತಿಳಿದುಬಂತು. ಆದುದರಿಂದ ಅವರು ಇಸ್ರೇಲರೊಂದಿಗೆ ಶಾಂತಿಸಂಧಾನ ಮಾಡಿಕೊಂಡು ಅವರ ಸೇವಕರಾದರು. ಅಂದಿನಿಂದ ಅಮ್ಮೋನಿಯರಿಗೆ ಮತ್ತೆ ಸಹಾಯಮಾಡಲು ಅರಾಮ್ಯರು ಭಯಗೊಂಡರು.
ಅಮ್ಮೋನಿಯರು ದಾವೀದನ ಜನರನ್ನು ಅವಮಾನಪಡಿಸಿದ್ದು
19 ನಾಹಾಷನು ಅಮ್ಮೋನಿಯರ ಅರಸನಾಗಿದ್ದನು. ಅವನು ಸತ್ತ ಬಳಿಕ ಅವನ ಮಗನು ಪಟ್ಟಕ್ಕೆ ಬಂದನು. 2 ದಾವೀದನು, “ನಾಹಾಷನು ನನಗೆ ದಯೆ ತೋರಿಸಿದ್ದನು. ಅವನ ಮಗನಾದ ಹಾನೂನನಿಗೆ ನಾನೂ ದಯೆತೋರುವೆನು” ಎಂದು ಹೇಳಿ ಹಾನೂನನನ್ನು ಸಂತೈಸಲು ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನ್ ದೇಶಕ್ಕೆ ಹೋಗಿ ದುಃಖದಲ್ಲಿದ್ದ ಹಾನೂನನನ್ನು ಸಂತೈಸಿದರು.
3 ಆದರೆ ಅಮ್ಮೋನಿಯರ ನಾಯಕರು ಹಾನೂನನಿಗೆ, “ಮೋಸ ಹೋಗಬೇಡ, ದಾವೀದನು ನಿನ್ನ ತಂದೆಯನ್ನು ಗೌರವಿಸಿ ನಿನ್ನನ್ನು ಸಂತೈಸಲು ಸೇವಕರನ್ನು ಕಳುಹಿಸಿದನೆಂದು ಭಾವಿಸಿಕೊಂಡಿರುವೆಯಾ? ಇಲ್ಲ, ಅವನು ನಿನ್ನ ರಾಜ್ಯದಲ್ಲಿ ಹೊಂಚುಹಾಕಲೂ ವಿಷಯಗಳನ್ನು ಸಂಗ್ರಹಿಸಲೂ ಕಳುಹಿಸಿದ್ದಾನೆ” ಎಂದು ಹೇಳಿದರು. 4 ಆಗ ಹಾನೂನನು ದಾವೀದನ ಸೇವಕರನ್ನು ಬಂಧಿಸಿ ಅವರ ಗಡ್ಡಗಳನ್ನು ಬೋಳಿಸಿ ಅವರ ವಸ್ತ್ರಗಳನ್ನು ಸೊಂಟದಿಂದ ಕೆಳಭಾಗದವರೆಗೆ ಕತ್ತರಿಸಿಬಿಟ್ಟು ಅವರನ್ನು ಹಿಂದಕ್ಕೆ ಕಳುಹಿಸಿದನು.
5 ದಾವೀದನ ಸೇವಕರು ತಮ್ಮ ಮನೆಗೆ ಹಿಂದಿರುಗಲು ನಾಚಿಕೆಪಟ್ಟರು. ಇದನ್ನು ಅರಿತ ಕೆಲವರು ದಾವೀದನ ಬಳಿಗೆ ಹೋಗಿ ನಡೆದದ್ದನ್ನು ತಿಳಿಸಿದರು. ಆಗ ದಾವೀದನು, “ನೀವು ನಿಮ್ಮ ಗಡ್ಡ ಬೆಳೆಯುವ ತನಕ ಜೆರಿಕೊ ಪಟ್ಟಣದಲ್ಲಿಯೇ ಇರಿ. ಅನಂತರ ನೀವು ಮನೆಗೆ ಬರಬಹುದು” ಎಂದು ತನ್ನ ಸೇವಕರಿಗೆ ಹೇಳಿಕಳುಹಿಸಿದನು.
6 ದಾವೀದನು ತಮಗೆ ಶತ್ರುವಾದನೆಂದು ಅಮ್ಮೋನಿಯರಿಗೆ ತಿಳಿದಾಗ ಹಾನೂನನು ಮೂವತ್ನಾಲ್ಕು ಸಾವಿರ ಕಿಲೋಗ್ರಾಂ ತೂಕದ ಬೆಳ್ಳಿಯನ್ನು ಕೊಟ್ಟು ಮೆಸೊಪೊಟೆಮಿಯಾದಿಂದ ರಥಗಳನ್ನೂ ರಾಹುತರನ್ನೂ ಕೊಂಡುಕೊಂಡನು. ಅಲ್ಲದೆ ಅರಾಮದ ಮಾಕ ಮತ್ತು ಚೋಬಾ ಪಟ್ಟಣಗಳಿಂದ ರಥಗಳನ್ನು ಮತ್ತು ರಾಹುತರನ್ನು ಕೊಂಡುಕೊಂಡನು. 7 ಹೀಗೆ ಅಮ್ಮೋನಿಯರು ಮೂವತ್ತೆರಡು ಸಾವಿರ ರಥಗಳಿಂದ ಯುದ್ಧಕ್ಕೆ ಸಜ್ಜಾದರು. ಅಲ್ಲದೆ ಮಾಕಾದ ಅರಸನಿಗೆ ಹಣವನ್ನು ಕೊಟ್ಟು ಅವನ ಸೈನ್ಯವನ್ನೂ ತಮ್ಮ ಸಹಾಯಕ್ಕೆ ಬರಮಾಡಿದರು. ಮಾಕದ ಅರಸನೂ ಅವನ ಸೈನಿಕರೂ ಬಂದು ಮೇದೆಬ ಪಟ್ಟಣದ ಬಳಿ ಪಾಳೆಯ ಮಾಡಿಕೊಂಡರು. ಇತ್ತ ಅಮ್ಮೋನಿಯರೂ ಯುದ್ಧಸನ್ನದ್ಧರಾದರು.
8 ಇದನ್ನು ಕೇಳಿದ ದಾವೀದನು ಯೋವಾಬನನ್ನೂ ತನ್ನ ಸಮಸ್ತ ಸೈನ್ಯವನ್ನೂ ಅವರೊಂದಿಗೆ ಯುದ್ಧಮಾಡಲು ಕಳುಹಿಸಿದನು. 9 ಅಮ್ಮೋನಿಯರು ತಮ್ಮ ಪಟ್ಟಣದಿಂದ ಹೊರಬಂದರು. ಅವರ ಸಹಾಯಕ್ಕಾಗಿ ಬಂದಿದ್ದ ಅರಸರು ಪ್ರತ್ಯೇಕವಾಗಿಯೇ ಇದ್ದರು.
10 ಯೋವಾಬನು ರಣರಂಗವನ್ನು ವೀಕ್ಷಿಸಿದಾಗ ಎರಡು ಗುಂಪಿನ ಸೈನ್ಯಗಳಿದ್ದದ್ದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾಬನು ತನ್ನಲ್ಲಿದ್ದ ರಣವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. 11 ಉಳಿದ ಸೈನಿಕರನ್ನು ಅಬ್ಷೈಯನ ನಾಯಕತ್ವದಲ್ಲಿ ಇರಿಸಿದನು. ಅಬ್ಷೈಯು ಯೋವಾಬನ ತಮ್ಮನು. ಈ ಸೈನಿಕರು ಅಮ್ಮೋನಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. 12 ಯೋವಾಬನು ಅಬ್ಷೈಗೆ, “ಅರಾಮ್ಯರ ಸೈನ್ಯವು ನನಗಿಂತ ಬಲಿಷ್ಠವಾಗಿದ್ದರೆ, ನೀನು ನನ್ನ ಸಹಾಯಕ್ಕೆ ಬರಬೇಕು. ಅಮ್ಮೋನಿಯರ ಸೈನ್ಯವು ನಿನಗಿಂತ ಬಲಿಷ್ಠವಾಗಿದ್ದರೆ ನಾನು ನಿನ್ನ ಸಹಾಯಕ್ಕೆ ಬರುವೆನು. 13 ನಾವು ಧೈರ್ಯಶಾಲಿಗಳಾಗಿದ್ದು ಅಂಜದೆ ನಮ್ಮ ಜನರಿಗಾಗಿಯೂ ನಮ್ಮ ದೇವರ ಪಟ್ಟಣಗಳಿಗಾಗಿಯೂ ಯುದ್ಧಮಾಡೋಣ. ಯೆಹೋವನು ತನ್ನ ಚಿತ್ತದಂತೆ ನಮ್ಮನ್ನು ನಡೆಸಲಿ” ಎಂದು ಹೇಳಿದನು.
14 ಯೋವಾಬನು ತನ್ನ ಸೈನ್ಯದೊಡನೆ ಅರಾಮ್ಯರ ಸೈನ್ಯದ ಮೇಲೆ ದಾಳಿ ಮಾಡಿದನು. ಅರಾಮ್ಯರ ಸೈನ್ಯವು ಅವನೆದುರಿನಿಂದ ಓಡಿಹೋಯಿತು. 15 ಅರಾಮ್ಯರ ಸೈನ್ಯವು ಓಡಿಹೋಗುವುದನ್ನು ನೋಡಿದ ಅಮ್ಮೋನಿಯರು ಸಹ ಇಸ್ರೇಲರ ಎದುರಿನಿಂದ ಹಿಂತಿರಿಗಿ ಓಡಿದರು. ಅಬ್ಷೈ ಮತ್ತು ಅವನ ಸೈನಿಕರಿಂದ ಅವರು ಪಲಾಯನಗೈದು ತಮ್ಮ ಪಟ್ಟಣದೊಳಗೆ ಸೇರಿಕೊಂಡರು. ಯೋವಾಬನು ಜೆರುಸಲೇಮಿಗೆ ಹೋದನು.
16 ಅರಾಮ್ಯರು ತಾವು ಇಸ್ರೇಲರಿಂದ ಸೋತುಹೋದದ್ದನ್ನು ನೋಡಿ ಯೂಫ್ರೇಟೀಸ್ ನದಿಯ ಪೂರ್ವದಲ್ಲಿದ್ದ ಅರಾಮ್ಯರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೋಫಕನು ಹದದೆಜರನ ಸೇನಾಧಿಪತಿಯಾಗಿದ್ದನು.
17 ಅರಾಮ್ಯರು ಯುದ್ಧಕ್ಕೆ ಜನಕೂಡಿಸುತ್ತಾರೆಂಬ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರೇಲ್ ಸೈನ್ಯವನ್ನು ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಅರಾಮ್ಯರೊಂದಿಗೆ ಯುದ್ಧಮಾಡಿದನು. ಯುದ್ಧಸನ್ನದ್ಧರಾಗಿ ಕಾಳಗವನ್ನು ಆರಂಭಿಸಿಯೇ ಬಿಟ್ಟರು. 18 ಅರಾಮ್ಯರು ಇಸ್ರೇಲರ ಎದುರು ನಿಲ್ಲಲಾರದೆ ಬೆನ್ನುಹಾಕಿ ಓಡಿದರು. ಆ ದಿವಸ ದಾವೀದನೂ ಅವನ ಸೈನಿಕರೂ ಅರಾಮ್ಯರ ಏಳು ಸಾವಿರ ಮಂದಿ ರಾಹುತರನ್ನೂ ನಲವತ್ತು ಸಾವಿರ ಮಂದಿ ಕಾಲಾಳುಗಳನ್ನೂ ಕೊಂದರು. ಇವರಲ್ಲಿ ಅರಾಮ್ಯರ ಸೇನಾಪತಿಯಾದ ಶೋಫಕನೂ ಕೊಲ್ಲಲ್ಪಟ್ಟನು.
19 ಹದದೆಜರನು ತಾನು ದಾವೀದನ ಸೈನ್ಯದಿಂದ ಸೋಲಿಸಲ್ಪಟ್ಟನೆಂದು ಗೊತ್ತಾದಾಗ ದಾವೀದನೊಂದಿಗೆ ಸಂಧಾನ ಮಾಡಿ ಅವನ ಸೇವಕನಾದನು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯ ಮಾಡುವುದನ್ನು ನಿರಾಕರಿಸಿದರು.
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
Kannada Holy Bible: Easy-to-Read Version. All rights reserved. © 1997 Bible League International