Chronological
ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು
8 ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು. 2 ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.
3 ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು. 4 ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.
5 ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಆ ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು. 6 ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.
7 ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು. 8 ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು.
9 ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು. 10 ಆಗ ತೋವಿಯು ತನ್ನ ಮಗನಾದ ಯೋರಾಮನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾಮನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾಮನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು. 11 ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು. 12 ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು. 13 ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು. 14 ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು.
ದಾವೀದನ ರಾಜ್ಯಾಡಳಿತ
15 ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. 18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಾಧಿಕಾರಿಗಳಾಗಿದ್ದರು.[a]
ಸೌಲನ ಕುಟುಂಬಕ್ಕೆ ದಾವೀದನು ತೋರಿದ ಅನುಕಂಪ
9 ದಾವೀದನು, “ಸೌಲನ ಕುಟುಂಬದಲ್ಲಿ ಇನ್ನೂ ಯಾರಾದರೂ ಉಳಿದಿರುವರೇ? ಯೋನಾತಾನನಿಗೋಸ್ಕರ ನಾನು ಆ ವ್ಯಕ್ತಿಗೆ ದಯೆ ತೋರಿಸಬೇಕಾಗಿದೆ” ಎಂದು ಕೇಳಿದನು.
2 ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು.
ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.
3 ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು.
ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.
4 ರಾಜನಾದ ದಾವೀದನು ಚೀಬನಿಗೆ, “ಅವನು ಎಲ್ಲಿದ್ದಾನೆ?” ಎಂದು ಕೇಳಿದನು.
ಚೀಬನು ರಾಜನಿಗೆ, “ಅವನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿದ್ದಾನೆ” ಎಂದನು.
5 ಆಗ ರಾಜನಾದ ದಾವೀದನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಯೋನಾತಾನನ ಮಗನನ್ನು ಕರೆತರಲು ಸೇವಕರನ್ನು ಕಳುಹಿಸಿದನು. 6 ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು.
ದಾವೀದನು, “ಮೆಫೀಬೋಶೆತನೇ” ಎಂದನು.
ಮೆಫೀಬೋಶೆತನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.
7 ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.
8 ಮೆಫೀಬೋಶೆತನು ದಾವೀದನಿಗೆ ಮತ್ತೆ ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನಿನ್ನ ಸೇವಕನಾದ ನನಗೆ ಬಹಳ ದಯಾಪರನಾಗಿರುವೆ, ನಾನು ಸತ್ತ ನಾಯಿಗಿಂತ ಉತ್ತಮನೇನಲ್ಲ!” ಎಂದು ಹೇಳಿದನು.
9 ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ. 10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು.
ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ. 11 ಚೀಬನು ರಾಜನಾದ ದಾವೀದನಿಗೆ, “ನಾನು ನಿನ್ನ ಸೇವಕ. ರಾಜನಾದ ಒಡೆಯನು ನನಗೆ ಆಜ್ಞಾಪಿಸಿದ್ದೆಲ್ಲವನ್ನೂ ನಾನು ಮಾಡುತ್ತೇನೆ” ಎಂದನು.
ಆದ್ದರಿಂದ ಮೆಫೀಬೋಶೆತನು, ರಾಜನ ಗಂಡುಮಕ್ಕಳಲ್ಲಿ ಒಬ್ಬನಂತೆ, ದಾವೀದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದನು. 12 ಮೆಫೀಬೋಶೆತನಿಗೆ ಮೀಕನೆಂಬ ಚಿಕ್ಕ ಮಗನಿದ್ದನು. ಚೀಬನ ಕುಟುಂಬದ ಜನರೆಲ್ಲರೂ ಮೆಫೀಬೋಶೆತನ ಸೇವಕರಾದರು. 13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.
ಅನ್ಯಜನಾಂಗಗಳ ಮೇಲೆ ದಾವೀದನ ಜಯ
18 ಅನಂತರ ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋದನು. ಅವರನ್ನು ಸೋಲಿಸಿ ಗತ್ ಪಟ್ಟಣ ಮತ್ತು ಅದರ ಸುತ್ತಮುತ್ತಲಿದ್ದ ಊರುಗಳನ್ನು ವಶಪಡಿಸಿಕೊಂಡನು.
2 ಅನಂತರ ದಾವೀದನು ಮೋವಾಬ್ಯರ ಸಂಗಡ ಯುದ್ಧಮಾಡಿ ಸೋಲಿಸಿದನು. ಅವರು ದಾವೀದನ ಸೇವಕರಾಗಿ ಕಪ್ಪ ಕೊಡಬೇಕಾಯಿತು.
3 ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯದೊಡನೆ ಕಾದಾಡಿ ಅವರನ್ನು ಹಮಾತಿನ ತನಕ ಹಿಂದಟ್ಟಿದನು. ಹದದೆಜರನು ತನ್ನ ರಾಜ್ಯವನ್ನು ಯೂಫ್ರೇಟೀಸ್ ನದಿಯ ತನಕ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು. 4 ಹದದೆಜರನಿಂದ ದಾವೀದನು ಒಂದು ಸಾವಿರ ರಥಗಳನ್ನೂ ಏಳು ಸಾವಿರ ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ಹದದೆಜರನ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ಆ ಕುದುರೆಗಳು ರಥಗಳನ್ನು ಎಳೆಯದಂತೆ ಮಾಡಿದನು. ಆದರೆ ನೂರು ರಥಗಳನ್ನು ಎಳೆಯಲು ಬೇಕಾಗುವಷ್ಟು ಕುದುರೆಗಳನ್ನು ಉಳಿಸಿದನು.
5 ಹದದೆಜರನಿಗೆ ದಮಸ್ಕದಲ್ಲಿರುವ ಅರಾಮ್ಯರು ಸಹಾಯಕ್ಕೆ ಬಂದರು. ಆದರೆ ದಾವೀದನು ಅರಾಮ್ಯರ ಸೈನ್ಯವನ್ನು ಸೋಲಿಸಿ ಅವರ ಇಪ್ಪತ್ತೆರಡು ಸಾವಿರ ಮಂದಿ ಸೈನಿಕರನ್ನು ಕೊಂದನು. 6 ನಂತರ ಅರಾಮ್ಯರ ದಮಸ್ಕದಲ್ಲಿ ತನ್ನ ಕೋಟೆಯನ್ನು ಸ್ಥಾಪಿಸಿದನು. ಅರಾಮ್ಯರು ದಾವೀದನ ಸೇವಕರಾಗಿ ಅವನಿಗೆ ಕಪ್ಪಕಾಣಿಕೆಯನ್ನು ತಂದೊಪ್ಪಿಸುತ್ತಿದ್ದರು. ಹೀಗೆ ದಾವೀದನು ಹೋದ ಕಡೆಯಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.
7 ಹದದೆಜರನ ಸೇನಾಧಿಪತಿಗಳು ಉಪಯೋಗಿಸುತ್ತಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಜೆರುಸಲೇಮಿಗೆ ತಂದನು. 8 ಅಲ್ಲದೆ ಟಿಭತ್ ಮತ್ತು ಕೂನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೊಲೊಮೋನನು ತಾಮ್ರದ ತೊಟ್ಟಿ, ತಾಮ್ರದ ಕಂಬ ಮತ್ತು ದೇವಾಲಯದ ಬೇರೆ ಸಾಮಾಗ್ರಿಗಳನ್ನು ಮಾಡಿಸಿದನು.
9 ದಾವೀದನು ಹದದೆಜರನನ್ನು ಸದೆಬಡಿದನೆಂದು ತಿಳಿದ ಹಮಾತಿನ ಅರಸನಾದ ತೋವನು 10 ತನ್ನ ಮಗನಾದ ಹದೋರಾಮನನ್ನು ದಾವೀದನ ಬಳಿಗೆ ಸಮಾಧಾನಕ್ಕಾಗಿಯೂ ಆಶೀರ್ವದಿಸುವುದಕ್ಕಾಗಿಯೂ ಕಳುಹಿಸಿದನು; ಯಾಕೆಂದರೆ ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದನು. ಹದದೆಜರನು ತೋವನೊಂದಿಗೆ ಯುದ್ಧ ಮಾಡಿದ್ದನು. ಹದೋರಾಮನು ಬೆಳ್ಳಿಬಂಗಾರಗಳ ಮತ್ತು ತಾಮ್ರಗಳ ವಸ್ತುಗಳನ್ನು ದಾವೀದನಿಗೆ ಕೊಟ್ಟನು. 11 ದಾವೀದ ರಾಜನು ಅವುಗಳನ್ನು ಶುದ್ಧೀಕರಿಸಿ ಯೆಹೋವನಿಗೆ ಪ್ರತಿಷ್ಠಿಸಿದನು. ಅದೇ ರೀತಿಯಾಗಿ ಎದೋಮ್ಯರಿಂದ, ಮೋವಾಬ್ಯರಿಂದ, ಫಿಲಿಷ್ಟಿಯರಿಂದ, ಅಮಾಲೇಕ್ಯರಿಂದ ಮತ್ತು ಅಮ್ಮೋನಿಯರಿಂದ ತೆಗೆದುಕೊಂಡಿದ್ದ ಬೆಳ್ಳಿಬಂಗಾರದ ವಸ್ತುಗಳನ್ನು ಶುದ್ಧಿಮಾಡಿ ದೇವರಿಗೆ ಪ್ರತಿಷ್ಠಿಸಿದನು.
12 ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಒಮ್ಮೆ ಹದಿನೆಂಟು ಸಾವಿರ ಮಂದಿ ಎದೋಮ್ಯರನ್ನು ಕೊಂದುಹಾಕಿದನು. 13 ಅಬ್ಷೈಯು ಎದೋಮಿನಲ್ಲಿ ಕೋಟೆಯನ್ನು ಕಟ್ಟಿ ಎದೋಮ್ಯರೆಲ್ಲರನ್ನು ದಾವೀದನ ಸೇವಕರನ್ನಾಗಿ ಮಾಡಿದನು. ದಾವೀದನು ಹೋದಕಡೆಗಳಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.
ದಾವೀದನ ಮುಖ್ಯಾಧಿಕಾರಿಗಳು
14 ಇಸ್ರೇಲರೆಲ್ಲರಿಗೆ ಅರಸನಾಗಿದ್ದ ದಾವೀದನು ಪಕ್ಷಪಾತವಿಲ್ಲದೆ ನ್ಯಾಯತೀರಿಸುತ್ತಿದ್ದನು. 15 ಚೆರೂಯಳ ಮಗನಾದ ಯೋವಾಬನು ಅವನ ಪ್ರಧಾನ ಸೇನಾಪತಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನಾಗಿದ್ದು ದಾವೀದನ ಚರಿತ್ರೆಯನ್ನು ಬರೆದಿಟ್ಟನು. 16 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಲೇಖಕನಾಗಿದ್ದನು. 17 ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳಿಗೆ ಬೆನಾಯನು ಅಧಿಕಾರಿಯಾಗಿದ್ದನು. ಬೆನಾಯನು ಯೆಹೋಯಾದನ ಮಗ. ದಾವೀದನ ಗಂಡುಮಕ್ಕಳು ಮುಖ್ಯ ಸ್ಥಾನಗಳಲ್ಲಿದ್ದು ದಾವೀದನ ಸೇವೆಮಾಡುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International