Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 5:1-10

ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು

ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.

ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.

ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.

ದಾವೀದನು ಜೆರುಸಲೇಮ್ ಪಟ್ಟಣವನ್ನು ಗೆಲ್ಲುವನು

ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು.[a] ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.)

ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ[b] ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ[c] ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.

ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.

1 ಪೂರ್ವಕಾಲವೃತ್ತಾಂತ 11-12

ದಾವೀದನು ಇಸ್ರೇಲರ ಅರಸನಾದನು

11 ಎಲ್ಲಾ ಇಸ್ರೇಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವು ನಿನ್ನ ಸಂತತಿಯವರು. ಹಿಂದೆ ನೀನು ನಮ್ಮನ್ನು ಯುದ್ಧದಲ್ಲಿ ನಡೆಸಿರುವೆ. ಆಗ ಸೌಲನು ಅರಸನಾಗಿದ್ದರೂ ನೀನು ನಮ್ಮ ಯುದ್ಧದಲ್ಲಿ ನಾಯಕನಾಗಿದ್ದೆ. ಯೆಹೋವನು ನಿನಗೆ, ‘ದಾವೀದನೇ, ನೀನು ನಿನ್ನ ಜನರಾದ ಇಸ್ರೇಲರ ಪಾಲಕನಾಗಿರಬೇಕು. ನನ್ನ ಜನರಿಗೆ ನೀನು ನಾಯಕನಾಗಿರಬೇಕು’” ಎಂದು ಹೇಳಿದ್ದಾನಲ್ಲವೆ ಅಂದರು.

ಹೆಬ್ರೋನಿಗೆ ಬಂದ ಇಸ್ರೇಲರೆಲ್ಲಾ ಅಲ್ಲಿ ಯೆಹೋವನ ಮುಂದೆ ದಾವೀದನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಅಧಿಪತಿಗಳೆಲ್ಲಾ ದಾವೀದನನ್ನು ಅಭಿಷೇಕಿಸಿ ಅವನನ್ನು ಇಸ್ರೇಲರ ಅರಸನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನವಾಗಿತ್ತು. ಪ್ರವಾದಿಯಾದ ಸಮುವೇಲನ ಮೂಲಕ ಯೆಹೋವನು ಈ ವಾಗ್ದಾನವನ್ನು ಮಾಡಿದ್ದನು.

ದಾವೀದನು ಜೆರುಸಲೇಮನ್ನು ಆಕ್ರಮಿಸಿಕೊಂಡನು

ದಾವೀದನೂ ಎಲ್ಲಾ ಇಸ್ರೇಲರೂ ಜೆರುಸಲೇಮಿಗೆ ಹೊರಟರು. ಆ ಕಾಲದಲ್ಲಿ ಜೆರುಸಲೇಮನ್ನು ಯೆಬೂಸ್ ಎಂದು ಕರೆಯುತ್ತಿದ್ದರು. ಯಾಕೆಂದರೆ ಜೆರುಸಲೇಮ್ ಪಟ್ಟಣದಲ್ಲಿ ಯೆಬೂಸಿಯರು ವಾಸಿಸುತ್ತಿದ್ದರು. ಆ ಪಟ್ಟಣದಲ್ಲಿದ್ದ ಜನರು ದಾವೀದನಿಗೆ, “ನೀನು ನಮ್ಮ ಪಟ್ಟಣದೊಳಗೆ ಬರಲು ಸಾಧ್ಯವೇ ಇಲ್ಲ” ಎಂದು ಹೇಳಿದರು. ಆದರೆ ದಾವೀದನು ಅವರನ್ನು ಸೋಲಿಸಿ ಚೀಯೋನ್ ಕೋಟೆಯನ್ನು ಗೆದ್ದುಕೊಂಡನು. ಅಂದಿನಿಂದ ಆ ಸ್ಥಳವು ದಾವೀದನ ನಗರವೆಂದು ಕರೆಯಲ್ಪಟ್ಟಿತು.

“ಯೆಬೂಸಿಯರ ವಿರುದ್ಧವಾಗಿ ದಾಳಿಮಾಡಿ ಅವರನ್ನು ಸೋಲಿಸುವವನೇ ನನ್ನ ಸೇನಾಧಿಪತಿಯಾಗುವನು” ಎಂದು ದಾವೀದನು ಹೇಳಿದಾಗ ಚೆರೂಯಳ ಮಗನಾದ ಯೋವಾಬನು ಯೆಬೂಸಿಯರ ಮೇಲೆ ಯುದ್ಧಮಾಡಿ ಜಯಗಳಿಸಿದನು ಮತ್ತು ಇಸ್ರೇಲರ ಸೈನ್ಯಕ್ಕೆ ಅಧಿಪತಿಯಾದನು.

ದಾವೀದನು ಕೋಟೆಯೊಳಗೆ ತನಗೆ ಮನೆ ಮಾಡಿಕೊಂಡನು. ಆದ್ದರಿಂದ ಅದಕ್ಕೆ ದಾವೀದನಗರ ಎಂಬ ಹೆಸರು ಬಂತು. ಪಟ್ಟಣದ ಸುತ್ತಲೂ ದಾವೀದನು ಕೋಟೆಯನ್ನು ಕಟ್ಟಿಸಿದನು. ಮಿಲ್ಲೋವಿನಿಂದ ಪ್ರಾರಂಭಿಸಿ ಕೋಟೆಯವರೆಗೆ ಪಟ್ಟಣವನ್ನು ಕಟ್ಟಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಸರಿಪಡಿಸಿದನು. ದಾವೀದನು ದಿನದಿಂದ ದಿನಕ್ಕೆ ಬಲಶಾಲಿಯಾದನು. ಸರ್ವಶಕ್ತನಾದ ದೇವರು ಅವನೊಂದಿಗಿದ್ದನು.

ಮೂರು ಮಂದಿ ವೀರರು

10 ದಾವೀದನ ಸೈನ್ಯದಲ್ಲಿ ಪರಾಕ್ರಮಿಗಳಿದ್ದರು. ಈ ಪರಾಕ್ರಮಿಗಳು ದಾವೀದನ ರಾಜ್ಯದಲ್ಲಿ ದಾವೀದನೊಂದಿಗೆ ಮಹಾಬಲಿಷ್ಠರಾದರು. ಅವರು ಮತ್ತು ಎಲ್ಲಾ ಇಸ್ರೇಲರು ದಾವೀದನಿಗೆ ಬೆಂಬಲ ನೀಡಿ ಅವನನ್ನು ರಾಜನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನದ ಪ್ರಕಾರವೇ ನಡೆಯಿತು.

11 ದಾವೀದನ ಸೈನ್ಯದಲ್ಲಿದ್ದ ಪರಾಕ್ರಮಿಗಳು ಯಾರೆಂದರೆ:

ಹೆಕ್ಮೋನಿಯನಾದ ಯಾಷೊಬ್ಬಾಮನು. ಇವನು ರಥಾಶ್ವಗಳ ಅಧಿಕಾರಿಗಳಿಗೆ ಅಧಿಪತಿಯಾಗಿದ್ದನು; ಒಂದೇ ಸಾರಿ ಮುನ್ನೂರು ಮಂದಿಯನ್ನು ತನ್ನ ಬರ್ಜಿಯಿಂದ ಕೊಂದಿದ್ದನು.

12 ಎರಡನೆಯವನು, ಅಹೋಹ್ಯನಾದ ದೋದೋವನ ಮಗನಾದ ಎಲ್ಲಾಜಾರ. ಇವನು ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಒಬ್ಬನು. 13 ಪಸ್ಥಮ್ಮೀಮ್ ಎಂಬ ಸ್ಥಳದಲ್ಲಿ ಇವನು ದಾವೀದನೊಂದಿಗಿದ್ದನು. ಅಲ್ಲಿಗೆ ಫಿಲಿಷ್ಟಿಯರು ಯುದ್ಧಮಾಡಲು ಬಂದಿದ್ದರು. ಆ ಸ್ಥಳದ ಒಂದು ಹೊಲದಲ್ಲಿ ಬಾರ್ಲಿಯ ಬೆಳೆಯು ಬೆಳೆದು ನಿಂತಿತ್ತು. ಫಿಲಿಷ್ಟಿಯರ ಎದುರಿನಿಂದ ಇಸ್ರೇಲರು ಓಡಿದರು. 14 ಆದರೆ ಆ ಮೂರು ಮಂದಿ ಪರಾಕ್ರಮಶಾಲಿಗಳು ಆ ಜವೆಗೋಧಿಯ ಹೊಲದಲ್ಲಿ ನಿಂತು ಕಾದಾಡಿದರು. ಫಿಲಿಷ್ಟಿಯರು ಸೋತುಹೋದರು. ಆ ದಿವಸ ಯೆಹೋವನು ಇಸ್ರೇಲರಿಗೆ ದೊಡ್ಡ ಜಯವನ್ನು ಉಂಟುಮಾಡಿದನು.

15 ಒಂದು ಸಲ ದಾವೀದನು ಅದುಲ್ಲಾಮ್ ಗವಿಯೊಳಗಿದ್ದಾಗ, ರೆಫಾಯಿಮ್ ತಗ್ಗಿನಲ್ಲಿ ಫಿಲಿಷ್ಟಿಯರು ಪಾಳೆಯಮಾಡಿದ್ದರು. ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಈ ಮೂರು ಮಂದಿ ಗುಹೆಯಲ್ಲಿದ್ದ ದಾವೀದನೊಂದಿಗೆ ಸೇರಿಕೊಳ್ಳಲು ಹೊಟ್ಟೆಯ ಮೇಲೆ ತೆವಳಿಕೊಂಡೇ ಅವನ ಬಳಿಗೆ ಬಂದರು.

16 ಇನ್ನೊಂದು ಸಮಯದಲ್ಲಿ ದಾವೀದನು ಕೋಟೆಯೊಳಗಿದ್ದನು. ಫಿಲಿಷ್ಟಿಯರ ಸೈನ್ಯ ಬೆತ್ಲೆಹೇಮಿನಲ್ಲಿತ್ತು. 17 ದಾಹಗೊಂಡಿದ್ದ ದಾವೀದನು ತನ್ನ ಊರಿನ ನೀರು ಕುಡಿಯಲು ಬಯಸಿ, “ಬೆತ್ಲೆಹೇಮಿನ ನಗರದ್ವಾರದ ಬಳಿಯಲ್ಲಿರುವ ಬಾವಿಯಿಂದ ಯಾರಾದರೂ ನೀರು ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಅವನು ತಿಳಿಸಿದನು. 18 ಆಗ ಆ ಮೂವರು ಪರಾಕ್ರಮಿಗಳು ಫಿಲಿಷ್ಟಿಯರ ಸೈನ್ಯದೊಂದಿಗೆ ಹೋರಾಡುತ್ತಾ ಬೆತ್ಲೆಹೇಮಿನ ಬಾಗಿಲ ಬಳಿಯಲ್ಲಿದ್ದ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಯೆಹೋವನಿಗೆ ಸಮರ್ಪಿಸಿ ನೆಲದ ಮೇಲೆ ಹೊಯಿದುಬಿಟ್ಟನು. 19 “ದೇವರೇ, ನಾನು ಈ ನೀರನ್ನು ಕುಡಿಯಲಾರೆನು. ಯಾಕೆಂದರೆ ನನಗಾಗಿ ತಮ್ಮ ಪ್ರಾಣ ಕೊಡಲು ಹೆದರದೆ ನೀರನ್ನು ತಂದವರ ರಕ್ತವಿದು” ಎಂದು ದಾವೀದನು ಅರಿಕೆಮಾಡಿ ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ರೀತಿಯಾಗಿ ಅನೇಕ ಪರಾಕ್ರಮದ ಕಾರ್ಯಗಳನ್ನು ಈ ಮೂರು ಮಂದಿ ವೀರರು ಮಾಡಿದರು.

ಇತರ ಪರಾಕ್ರಮಶಾಲಿಗಳು

20 ಯೋವಾಬನ ತಮ್ಮನಾದ ಅಬ್ಷೈಯು ಬೇರೆ ಮೂರು ಮಂದಿ ಪರಾಕ್ರಮಿಗಳ ನಾಯಕನಾಗಿದ್ದನು. ಆ ಮೂವರು ಪರಾಕ್ರಮಿಗಳಷ್ಟೇ ಇವನೂ ಪ್ರಖ್ಯಾತನಾಗಿದ್ದನು. ಅವನು ತನ್ನ ಬರ್ಜಿಯಿಂದ ಮುನ್ನೂರು ಮಂದಿಯೊಂದಿಗೆ ಯುದ್ಧಮಾಡಿ ಅವರನ್ನು ಹತಮಾಡಿದನು. 21 ಅಬ್ಷೈಯು ಮೂವತ್ತು ಮಂದಿ ರಣವೀರರಿಗಿಂತಲೂ ಎರಡರಷ್ಟು ಪರಾಕ್ರಮಿಯಾಗಿದ್ದನು. ಅವನು ಅವರಿಗೆ ನಾಯಕನಾದನು.

22 ಬೆನಾಯನು ಯೆಹೋಯಾದನ ಮಗ. ಇವನು ಕಬ್ಜಯೇಲಿನಿಂದ ಬಂದವನು. ಇವನು ತುಂಬಾ ಶಕ್ತಿಶಾಲಿಯಾಗಿದ್ದನು. ಮೋವಾಬ್ಯರಲ್ಲಿ ಹೆಸರುವಾಸಿಯಾದ ಇಬ್ಬರು ಪರಾಕ್ರಮಶಾಲಿಗಳನ್ನು ಇವನು ಕೊಂದನು. ಒಂದು ದಿವಸ ಹಿಮ ಸುರಿಯುತ್ತಿರುವಾಗಲೇ ಗುಂಡಿಯೊಳಗೆ ಬಿದ್ದಿದ್ದ ಸಿಂಹವನ್ನು ಒಬ್ಬನೇ ಕೊಂದುಹಾಕಿದನು. 23 ಈಜಿಪ್ಟಿನಲ್ಲಿ ಅತ್ಯಂತ ಎತ್ತರವಾಗಿದ್ದ ಮಹಾಸೈನಿಕನೊಬ್ಬನನ್ನು ಬೆನಾಯನು ಕೊಂದುಹಾಕಿದನು. ಅವನು ಏಳೂವರೆ ಅಡಿ ಎತ್ತರವಾಗಿದ್ದನು. ಅವನ ಕೈಯಲ್ಲಿದ್ದ ಈಟಿಯು ದೊಡ್ಡ ಕಂಬದಂತೆ ಇತ್ತು. ಬೆನಾಯನ ಕೈಯಲ್ಲಿ ಒಂದು ದೊಣ್ಣೆಮಾತ್ರ ಇತ್ತು. ಬೆನಾಯನು ಅವನ ಹತ್ತಿರ ಹೋಗಿ ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಾಯಿಸಿದನು. 24 ಇಂಥಾ ಅನೇಕ ಪರಾಕ್ರಮದ ಕೃತ್ಯಗಳನ್ನು ಯೆಹೋಯಾದನ ಮಗನಾದ ಬೆನಾಯನು ಮಾಡಿದ್ದನು. ಆ ಮೂರು ಮಂದಿ ವೀರರಂತೆಯೇ ಇವನೂ ಹೆಸರುವಾಸಿಯಾಗಿದ್ದನು. 25 ಬೆನಾಯನು ಮೂವತ್ತು ಪರಾಕ್ರಮಿಗಳಿಗಿಂತಲೂ ಹೆಚ್ಚು ಹೆಸರುವಾಸಿಯಾಗಿದ್ದನು. ಆದರೆ ಇವನು ಆ ಮೂವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲಿಲ್ಲ. ದಾವೀದನು ಇವನನ್ನು ಅಂಗರಕ್ಷಕರಿಗೆ ನಾಯಕನನ್ನಾಗಿ ಮಾಡಿದನು.

ಮೂವತ್ತು ಮಂದಿ ಯುದ್ಧವೀರರು

26 ಮೂವತ್ತು ಮಂದಿ ಯುದ್ಧವೀರರು ಯಾರೆಂದರೆ:

ಯೋವಾಬನ ತಮ್ಮನಾದ ಅಸಾಹೇಲನು;

ಬೆತ್ಲೆಹೇಮಿನವನಾದ ದೋದೋವಿನ ಮಗನಾದ ಎಲ್ಖಾನಾನನು;

27 ಹರೋರಿನವನಾದ ಶಮ್ಮೋತನು; ಪೆಲೋನ್ಯನಾದ ಹೆಲೆಚನು;

28 ತೆಕೋವದವನಾದ ಇಕ್ಕೇಷನ ಮಗನಾದ ಈರ;

ಅನತೋತಿನವನಾದ ಅಬೀಯೇಜರನು;

29 ಹುಷತ್ಯನಾದ ಸಿಬ್ಕ್ಯೆ,

ಅಹೋಹಿನವನಾದ ಈಲೈ;

30 ನೆಟೋಫದ ಮಹರೈ,

ನೆಟೋಫದ ಬಾಣನ ಮಗನಾದ ಹೇಲೆದನು.

31 ಬೆನ್ಯಾಮೀನ್ ಪ್ರಾಂತ್ಯದ ಗಿಬೆಯದಿಂದ ಬಂದ ರೀಬೈಯ ಮಗನಾದ ಈತೈ;

ಪಿರಾತೋನ್ಯನಾದ ಬೆನಾಯನು,

32 ನಹಲೇಗಾಷಿನವನಾದ ಹೂರೈ;

ಅರಾಬಾ ತಗ್ಗಿನವನಾದ ಅಬೀಯೇಲ;

33 ಬಹರೂಮ್ಯನಾದ ಅಜ್ಮಾವೆತ;

ಶಾಲ್ಬೋನ್ಯನಾದ ಎಲೆಯಖ್ಬ;

34 ಗಿಜೋನ್ಯನಾದ ಹಾಷೇಮನ ಗಂಡುಮಕ್ಕಳು;

ಹರಾರ್ಯನಾದ ಶಾಗಿಯ ಮಗ ಯೋನಾತಾನ;

35 ಹರಾರ್ಯನಾದ ಶಾಕಾರನ ಮಗನಾದ ಅಹೀಯಾಮ್;

ಊರನ ಮಗನಾದ ಎಲೀಫಲ್;

36 ಮೆಕೆರಾತ್ಯನಾದ ಹೇಫೆರನು;

ಪೆಲೋನ್ಯನಾದ ಅಹೀಯ;

37 ಕರ್ಮೆಲ್ಯನಾದ ಹೆಚ್ರೋ;

ಎಜ್ಬೈಯ ಮಗನಾದ ನಾರೈ;

38 ನಾತಾನನ ಸಹೋದರನಾದ ಯೋವೇಲ;

ಹಗ್ರೀಯ ಮಗನಾದ ಮಿಬ್ಹಾರ್;

39 ಅಮ್ಮೋನಿಯನಾದ ಚೆಲೆಕ;

ಬೇರೋತ್ ಊರಿನವನಾದ ನಹರೈ; (ಇವನು ಚೆರೂಯಳ ಮಗನಾದ ಯೋವಾಬನ ಆಯುಧವಾಹಕನಾಗಿದ್ದನು)

40 ಇತ್ರೀಯನಾದ ಈರ;

ಇತ್ರೀಯನಾದ ಗಾರೇಬ;

41 ಹಿತ್ತೀಯನಾದ ಊರೀಯ;

ಅಹ್ಲೈಯ ಮಗನಾದ ಜಾಬಾದ್;

42 ರೂಬೇನ್ ಕುಲದ ಶೀಜನ ಮಗನಾದ ಅದೀನ (ಇವನು ರೂಬೇನ್ ಕುಲದವರಿಗೆ ಅಧಿಪತಿಯಾಗಿದ್ದನು ಮತ್ತು ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾಗಿದ್ದನು);

43 ಮಾಕನ ಮಗನಾದ ಹಾನಾನ್;

ಮೆತನದವನಾದ ಯೋಷಾಫಾಟನು;

44 ಅಷ್ಯೆರಾತ್ಯನಾದ ಉಜ್ಜೀಯನು;

ಅರೋಯೇರಿನವನಾದ ಹೋತಾಮನ ಗಂಡುಮಕ್ಕಳು; ಶಾಮಾ ಮತ್ತು ಯೆಗೀಯೇಲ್;

45 ಶಿಮ್ರಿಯ ಮಗನಾದ ಎದೀಗಯೇಲ;

ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ;

46 ಮಹವೀಯನಾದ ಎಲೀಯೇಲ;

ಎಲ್ನಾಮನ ಗಂಡುಮಕ್ಕಳಾದ ಯೆರೀಬೈ ಮತ್ತು ಯೋಷವ್ಯನು;

ಮೋವಾಬ್ಯನಾದ ಇತ್ಮ;

47 ಎಲೀಯೇಲ್, ಓಬೇದ್, ಮೆಚೋಬಾಯನಾದ ಯಾಸೀಯೇಲ್.

ದಾವೀದನೊಂದಿಗೆ ಸೇರಿದ ಪರಾಕ್ರಮಶಾಲಿಗಳು

12 ದಾವೀದನು ಚಿಕ್ಲಗಿನಲ್ಲಿದ್ದಾಗ ಕೆಲವು ಪರಾಕ್ರಮಶಾಲಿಗಳು ಬಂದು ದಾವೀದನೊಂದಿಗೆ ಸೇರಿಕೊಂಡರು. ಕೀಷನ ಮಗನಾದ ಸೌಲನಿಂದ ತಪ್ಪಿಸಿಕೊಳ್ಳಲು ದಾವೀದನು ಚಿಕ್ಲಗಿನಲ್ಲಿ ಅಡಗಿಕೊಂಡಿದ್ದನು. ಇವರು ಯುದ್ಧದಲ್ಲಿ ದಾವೀದನಿಗೆ ನೆರವಾದರು. ಇವರು ತಮ್ಮ ಎಡಗೈಯಿಂದಲೂ ಬಲಗೈಯಿಂದಲೂ ಬಿಲ್ಲುಗಳಿಂದ ಬಾಣಗಳನ್ನೂ ಕವಣೆಗಳಿಂದ ಕಲ್ಲುಗಳನ್ನೂ ಗುರಿಯಿಟ್ಟು ಹೊಡೆಯಬಲ್ಲವರಾಗಿದ್ದರು. ಇವರೆಲ್ಲರೂ ಬೆನ್ಯಾಮೀನನ ಕುಲದವನಾದ ಸೌಲನ ಕುಟುಂಬದವರು. ಅವರ ಹೆಸರುಗಳು ಇಂತಿವೆ:

ಅವರ ನಾಯಕರು ಅಹೀಯೆಜೆರ್ ಮತ್ತು ಯೋವಾಷ್ (ಇವರಿಬ್ಬರೂ ಗಿಬೆಯದವನಾದ ಹಷ್ಷೆಮಾಹನ ಗಂಡುಮಕ್ಕಳು); ಅಜ್ಮಾವೆತನ ಗಂಡುಮಕ್ಕಳಾದ ಯೆಜೀಯೇಲ್ ಮತ್ತು ಪೆಲೆಟ; ಅನತೋತ್ ಊರಿನವರಾದ ಬೆರಾಕಾ ಮತ್ತು ಯೇಹು. ಗಿಬ್ಯೋನ್ ಊರಿನವನಾದ ಇಷ್ಮಾಯನು. (ಇವನು ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. ಅಲ್ಲದೆ ಅವರ ನಾಯಕನಾಗಿದ್ದನು.) ಯೆರೆಮೀಯ, ಯಹಜೀಯೇಲ್, ಯೋಹಾನಾನ್ ಮತ್ತು ಯೋಜಾಬಾದ್. ಇವರೆಲ್ಲಾ ಗೆದೆರಾಯರು, ಹರೀಫ್ಯದವರಾದ ಎಲ್ಲೂಜೈ, ಏಯೆರೀಮೋತ್, ಬೆಯಲ್ಯ, ಶೆಮರ್ಯ ಮತ್ತು ಶೆಫಟ್ಯ. ಕೋರಹನ ಗೋತ್ರದವರಾದ ಎಲ್ಕಾನ, ಇಷ್ಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಾಮ. ಗೆದೋರ್ ಊರಿನವನಾದ ಯೆರೋಹಾಮನ ಗಂಡುಮಕ್ಕಳಾದ ಯೋವೇಲ ಮತ್ತು ಜೆಬದ್ಯ.

ಗಾದ್ಯರು

ಅರಣ್ಯದಲ್ಲಿದ್ದ ಕೋಟೆಯಲ್ಲಿ ಗಾದ್ ಕುಲದ ಕೆಲವರು ದಾವೀದನನ್ನು ಸೇರಿಕೊಂಡರು. ಇವರು ಯುದ್ಧದಲ್ಲಿ ನುರಿತ ಸೈನಿಕರಾಗಿದ್ದರು. ಈಟಿ ಬರ್ಜಿಗಳಲ್ಲಿ ಪರಿಣಿತರು; ಸಿಂಹಗಳಂತೆ ಕ್ರೂರಿಗಳು; ಬೆಟ್ಟದ ಮೇಲೆ ಜಿಂಕೆಯ ತರಹ ವೇಗವಾಗಿ ಓಡಬಲ್ಲವರು.

ಗಾದ್ ಕುಲದ ಸೈನ್ಯಾಧಿಕಾರಿ ಏಜೆರ; ಎರಡನೆಯ ಅಧಿಕಾರಿ ಓಬದ್ಯ; ಎಲೀಯಾಬನು ಮೂರನೆಯ ಅಧಿಕಾರಿ; 10 ನಾಲ್ಕನೆಯ ಅಧಿಕಾರಿ ಮಷ್ಮನ್ನ; ಐದನೆಯ ಅಧಿಕಾರಿ ಯೆರೆಮೀಯ; 11 ಆರನೆಯ ಅಧಿಕಾರಿ ಅತ್ತೈ; ಏಳನೆಯ ಅಧಿಕಾರಿ ಎಲೀಯೇಲ; 12 ಎಂಟನೆಯ ಅಧಿಕಾರಿ ಯೋಹಾನಾನ; ಒಂಭತ್ತನೆಯ ಅಧಿಕಾರಿ ಎಲ್ಜಾಬಾದ; 13 ಹತ್ತನೆಯ ಅಧಿಕಾರಿ ಯೆರೆಮೀಯ; ಹನ್ನೊಂದನೆಯ ಅಧಿಕಾರಿ ಮಕ್ಬನ್ನೈ.

14 ಇವರೆಲ್ಲಾ ಗಾದ್ಯರ ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಅತಿಬಲಹೀನನಾದವನು ನೂರು ಮಂದಿ ವೈರಿಗಳೊಂದಿಗೆ ಕಾದಾಡಲು ಶಕ್ತನಾಗಿದ್ದನು. ಅವರಲ್ಲಿ ಎಲ್ಲರಿಗಿಂತ ಪರಾಕ್ರಮಿಯು ಒಂದು ಸಾವಿರ ವೈರಿಗಳೊಂದಿಗೆ ಕಾದಾಡಲು ಶಕ್ತನು. 15 ಜೋರ್ಡನ್ ನದಿಯು ದಡಮೀರಿ ಹರಿಯುತ್ತಿರುವಾಗ ಗಾದ್ ಕುಲದವರು ಅದನ್ನು ದಾಟಿ ಆಚೆಪ್ರದೇಶದಲ್ಲಿ ವಾಸವಾಗಿದ್ದ ಜನರನ್ನೆಲ್ಲಾ ಪೂರ್ವಕ್ಕೂ ಪಶ್ಚಿಮಕ್ಕೂ ಓಡಿಸಿ ಅವರ ಸ್ಥಳವನ್ನು ಆಕ್ರಮಿಸಿಕೊಂಡರು.

ದಾವೀದನೊಂದಿಗೆ ಸೇರಿದ ಇತರ ಸೈನಿಕರು

16 ಬೆನ್ಯಾಮೀನ್ ಮತ್ತು ಯೆಹೂದ ಕುಲದ ಇತರ ಜನರೂ ದಾವೀದನು ಕೋಟೆಯಲ್ಲಿ ದಾವೀದನೊಂದಿಗೆ ಸೇರಿಕೊಂಡರು. 17 ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚುಹಾಕಲು ಬಂದಿರುವುದಾದರೆ ನಾನು ನಿರಪರಾಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.

18 ಮೂವತ್ತು ಮಂದಿ ಶೂರರ ನಾಯಕನಾದ ಅಮಾಸೈಯು ಆತ್ಮನಿಂದ ತುಂಬಿದವನಾಗಿ ಹೇಳಿದ್ದೇನೆಂದರೆ:

“ದಾವೀದನೇ, ನಾವು ನಿನ್ನವರು.
    ಇಷಯನ ಮಗನೇ, ನಾವು ನಿನಗೆ ಸೇರಿದವರು;
ನಿನಗೆ ಸಮಾಧಾನ ಕೋರುವವರು;
    ನಿನಗೆ ಸಹಾಯ ಮಾಡುವವರಿಗೆ ಸಮಾಧಾನ ಕೋರುವೆವು;
    ಯಾಕೆಂದರೆ ನಿನ್ನ ದೇವರು ನಿನಗೆ ಸಹಾಯಮಾಡುತ್ತಿದ್ದಾನೆ.”

ದಾವೀದನು ಇವರನ್ನು ಸ್ವಾಗತಿಸಿ ತನ್ನ ಸೈನ್ಯಾಧಿಪತಿಗಳನ್ನಾಗಿ ಮಾಡಿದನು.

19 ಮನಸ್ಸೆಕುಲದಿಂದಲೂ ಕೆಲವರು ದಾವೀದನನ್ನು ಸೇರಿಕೊಂಡರು. ದಾವೀದನು ಸೌಲನೊಂದಿಗೆ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಸೇರಿಕೊಂಡಾಗ ಮನಸ್ಸೆಯವರು ದಾವೀದನ ಬಳಿಗೆ ಬಂದರು. ದಾವೀದನೂ ಅವನ ಜನರೂ ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಿರಲಿಲ್ಲ. ಫಿಲಿಷ್ಟಿಯ ಪ್ರಧಾನರು ದಾವೀದನು ಯುದ್ಧಕ್ಕೆ ಬರಬಾರದೆಂದು ಹೇಳಿ ಹಿಂದಕ್ಕೆ ಕಳುಹಿಸಿದರು. “ಇವನು ತನ್ನ ಅರಸನೊಟ್ಟಿಗೆ ಸೇರಿದರೆ ನಮ್ಮ ರುಂಡಗಳೇ ಕತ್ತರಿಸಲ್ಪಡುವವು” ಎಂದರು. 20 ದಾವೀದನು ಚಿಕ್ಲಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಲತೈ. ಇವರೆಲ್ಲರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು. 21 ದಾವೀದನು ದುಷ್ಟ ಜನರ ವಿರುದ್ಧವಾಗಿ ಮಾಡಿದ ಯುದ್ಧದಲ್ಲಿ ಅವರು ಸಹಾಯಮಾಡಿದರು. ಈ ದುಷ್ಟ ಜನರು ದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ದರೋಡೆ ಮಾಡುತ್ತಿದ್ದರು. ಮನಸ್ಸೆಕುಲದಿಂದ ಸೇರಿದ ಜನರೆಲ್ಲಾ ಧೈರ್ಯಶಾಲಿಗಳಾಗಿದ್ದರು. ಅವರು ದಾವೀದನ ಸೈನ್ಯದಲ್ಲಿ ಅಧಿಕಾರಿಗಳಾದರು.

22 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಬಂದು ದಾವೀದನನ್ನು ಸೇರಿಕೊಂಡಿದ್ದರಿಂದ ದಾವೀದನ ಸೈನ್ಯವು ಬಲಗೊಂಡಿತು.

ಹೆಬ್ರೋನಿನಲ್ಲಿ ಸೇರಿದ ಇತರ ಜನರು

23 ದಾವೀದನು ಹೆಬ್ರೋನಿನಲ್ಲಿದ್ದಾಗ ಯುದ್ಧಸನ್ನದ್ಧರಾಗಿದ್ದವರು ದಾವೀದನಿಗೆ ಸೌಲನ ರಾಜ್ಯವನ್ನು ಕೊಡಲು ಬಂದರು. ಇದು ಯೆಹೋವನು ಮುಂತಿಳಿಸಿದಂತೆ ಆಯಿತು. ಅವರ ಸಂಖ್ಯೆಯು ಹೀಗಿದೆ:

24 ಯೆಹೂದಕುಲದಿಂದ ಆರು ಸಾವಿರದ ಎಂಟನೂರು ಮಂದಿ. ಅವರು ಈಟಿ ಮತ್ತು ಗುರಾಣಿಗಳನ್ನು ಹಿಡಿದ ಸೈನಿಕರಾಗಿದ್ದರು.

25 ಸಿಮೆಯೋನ್ ಕುಲದಿಂದ ಏಳು ಸಾವಿರದ ನೂರು ಮಂದಿ.

26 ಲೇವಿಕುಲದಿಂದ ನಾಲ್ಕ ಸಾವಿರದ ಆರುನೂರು ಮಂದಿ. 27 ಯೆಹೋಯಾದಾವನು ಅವರಲ್ಲಿದ್ದನು. ಇವನು ಆರೋನನ ಕುಲಪ್ರಧಾನನಾಗಿದ್ದನು. ಇವನೊಂದಿಗೆ ಮೂರು ಸಾವಿರದ ಏಳುನೂರ ಮಂದಿ. 28 ಆ ಗುಂಪಿನಲ್ಲಿ ಚಾದೋಕನೂ ಇದ್ದನು. ಇವನೂ ಪರಾಕ್ರಮಶಾಲಿಯಾಗಿದ್ದನು. ಇವನು ತನ್ನ ಇಪ್ಪತ್ತೆರಡು ಮಂದಿ ಅಧಿಕಾರಿಗಳೊಂದಿಗೆ ಸೇರಿದನು.

29 ಬೆನ್ಯಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರೆಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.

30 ಎಫ್ರಾಯೀಮ್ ಕುಲದಿಂದ ಇಪ್ಪತ್ತು ಸಾವಿರದ ಎಂಟನೂರು ಮಂದಿ ಇದ್ದರು. ಇವರೆಲ್ಲರೂ ಧೈರ್ಯಶಾಲಿ ಸೈನಿಕರು ಮತ್ತು ತಮ್ಮ ಕುಲದವರಿಗೆ ನಾಯಕರಾಗಿದ್ದರು.

31 ಮನಸ್ಸೆಯ ಅರ್ಧಕುಲದಿಂದ ಹದಿನೆಂಟು ಸಾವಿರ ಮಂದಿ ಇದ್ದರು. ದಾವೀದನನ್ನು ಅರಸನನ್ನಾಗಿ ಮಾಡಲು ಇವರನ್ನು ಹೆಸರುಹೆಸರಾಗಿ ಕರೆಸಲಾಗಿತ್ತು.

32 ಇಸ್ಸಾಕಾರ್ ಕುಲದಿಂದ ಇನ್ನೂರು ಮಂದಿ ಜ್ಞಾನಿಗಳು ಬಂದಿದ್ದರು. ಇವರು ಸಮಯೋಚಿತ ಜ್ಞಾನವುಳ್ಳವರಾಗಿದ್ದರು ಮತ್ತು ಇಸ್ರೇಲರಿಗೆ ಯೋಗ್ಯವಾದದ್ದನ್ನು ತಿಳಿದವರಾಗಿದ್ದರು; ಇವರ ಸಂಬಂಧಿಕರೂ ಇವರೊಂದಿಗಿದ್ದರು ಮತ್ತು ಇವರ ಆಜ್ಞೆಗೆ ಒಳಪಟ್ಟವರೂ ಆಗಿದ್ದರು.

33 ಜೆಬುಲೂನ್ ಕುಲದಿಂದ ಐವತ್ತು ಸಾವಿರ ನುರಿತ ಸೈನಿಕರು ಬಂದರು. ಅವರು ಎಲ್ಲಾ ತರಹ ಆಯುಧಗಳನ್ನು ಉಪಯೋಗಿಸಲು ತರಬೇತಿ ಹೊಂದಿದವರು. ಇವರು ದಾವೀದನಿಗೆ ನಂಬಿಗಸ್ತರಾಗಿದ್ದರು.

34 ನಫ್ತಾಲಿಕುಲದಿಂದ ಒಂದು ಸಾವಿರ ಮಂದಿ ಅಧಿಪತಿಗಳು ಮತ್ತು ಮೂವತ್ತೇಳು ಸಾವಿರ ಮಂದಿ ಸೈನಿಕರು ಇದ್ದರು. ಇವರೆಲ್ಲಾ ಈಟಿ ಮತ್ತು ಗುರಾಣಿಗಳನ್ನು ಹಿಡಿದ ಸೈನಿಕರಾಗಿದ್ದರು.

35 ದಾನ್‌ಕುಲದಿಂದ ಇಪ್ಪತ್ತೆಂಟು ಸಾವಿರದ ಆರು ನೂರು ಮಂದಿ ಯುದ್ಧಕ್ಕೆ ತಯಾರಾದವರು ಇದ್ದರು.

36 ಅಶೇರ್‌ಕುಲದಿಂದ ನಲವತ್ತು ಸಾವಿರ ಮಂದಿ ಯುದ್ಧಕ್ಕೆ ತಯಾರಾದವರು ಇದ್ದರು.

37 ಜೋರ್ಡನ್ ಹೊಳೆಯ ಪೂರ್ವಪ್ರಾಂತ್ಯದಲ್ಲಿದ್ದ ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧಕುಲಗಳಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ. ಇವರು ಎಲ್ಲಾ ತರದ ಆಯುಧಗಳಲ್ಲಿ ಪರಿಣತರಾಗಿದ್ದರು.

38 ಇವರೆಲ್ಲರೂ ಧೈರ್ಯಶಾಲಿ ಯೋಧರಾಗಿದ್ದರು. ಇವರೆಲ್ಲಾ ದಾವೀದನನ್ನು ಅರಸನನ್ನಾಗಿ ಮಾಡುವ ಉದ್ದೇಶದಿಂದ ಹೆಬ್ರೋನಿಗೆ ಬಂದರು. ದಾವೀದನು ತಮ್ಮ ಅರಸನಾಗುವುದಕ್ಕೆ ಇಸ್ರೇಲಿನ ಬೇರೆ ಜನರೆಲ್ಲರೂ ಒಪ್ಪಿಗೆಕೊಟ್ಟರು. 39 ಈ ಜನರೆಲ್ಲಾ ದಾವೀದನೊಂದಿಗೆ ಮೂರು ದಿನಗಳನ್ನು ಕಳೆದರು. ಅವರ ಕುಟುಂಬದವರು ತಯಾರಿಸಿದ ಆಹಾರವನ್ನು ಅವರು ಊಟಮಾಡಿದರು. 40 ಇದಲ್ಲದೆ ಇವರ ನೆರೆಹೊರೆಯವರಾದ ಇಸ್ಸಾಕಾರ್, ನಫ್ತಾಲಿ, ಜೆಬುಲೂನ್ ಕುಲದವರು ಸಹ ಅಡಿಗೆ ಮಾಡಿಸಿ ಒಂಟೆಗಳ, ಹೇಸರಕತ್ತೆಗಳ, ಎತ್ತುಗಳ ಮತ್ತು ದನಕರುಗಳ ಮೇಲೆ ಹೇರಿಕೊಂಡು ಬಂದು ಒದಗಿಸಿದರು. ಅವರು ಬೇಕಾದಷ್ಟು ಗೋಧಿಹಿಟ್ಟನ್ನು, ಒಣಅಂಜೂರವನ್ನು, ದ್ರಾಕ್ಷಿಯನ್ನು, ದ್ರಾಕ್ಷಾರಸವನ್ನು, ಎಣ್ಣೆಯನ್ನು, ದನಕರುಗಳನ್ನು ಮತ್ತು ಕುರಿಗಳನ್ನು ಒದಗಿಸಿದರು. ಇಸ್ರೇಲರೆಲ್ಲರೂ ಹರ್ಷದಿಂದ ತುಂಬಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International