Chronological
ಇಸ್ಸಾಕಾರನ ಸಂತತಿಯವರು
7 ಇಸ್ಸಾಕಾರನಿಗೆ ನಾಲ್ಕು ಮಂದಿ ಗಂಡುಮಕ್ಕಳು: ತೋಲ, ಪೂವ, ಯಾಶೂಬ್ ಮತ್ತು ಶಿಮ್ರೋನ್.
2 ತೋಲನ ಗಂಡುಮಕ್ಕಳು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರೆಲ್ಲಾ ಕುಲಪ್ರಧಾನರಾಗಿದ್ದರು. ಇವರೂ ಇವರ ಸಂತತಿಯವರೂ ರಣವೀರರಾಗಿದ್ದರು. ಅವರ ಸಂತತಿಯು ವೃದ್ಧಿಯಾದ ಕಾರಣ ಅರಸನಾದ ದಾವೀದನ ಸಮಯದಲ್ಲಿ ಅವರಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಕಾಲಾಳುಗಳು ಯುದ್ಧಕ್ಕೆ ತಯಾರಾಗಿದ್ದರು.
3 ಉಜ್ಜೀಯ ಮಗನು ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು: ಮೀಕಾಯೇಲ್, ಓಬದ್ಯ, ಯೋವೇಲ್ ಮತ್ತು ಇಷ್ಷೀಯ. ಈ ಐದು ಮಂದಿಯೂ ತಮ್ಮ ಗೋತ್ರಗಳ ನಾಯಕರುಗಳಾಗಿದ್ದರು. 4 ಇವರ ಚರಿತ್ರೆಯ ಪ್ರಕಾರ ಇವರಲ್ಲಿ ಮೂವತ್ತಾರು ಸಾವಿರ ಮಂದಿ ಯುದ್ಧಕ್ಕೆ ಹೋಗಲು ಸಮರ್ಥರಾಗಿದ್ದರು. ಇವರಿಗೆಲ್ಲಾ ಅನೇಕ ಹೆಂಡತಿಯರು ಮತ್ತು ಮಕ್ಕಳು ಇದ್ದದ್ದರಿಂದ ಇವರ ಕುಲವು ದೊಡ್ಡದಾಗಿತ್ತು.
5 ಸಂತಾನದ ಚರಿತ್ರೆಯ ಪ್ರಕಾರ ಇಸ್ಸಾಕಾರ್ ಕುಲದವರಲ್ಲಿದ್ದ ಯುದ್ಧವೀರರು ಎಂಭತ್ತೇಳು ಸಾವಿರ ಮಂದಿ.
ಬೆನ್ಯಾಮೀನನ ಸಂತತಿಯವರು
6 ಬೆನ್ಯಾಮೀನನಿಗೆ ಮೂರು ಮಂದಿ ಗಂಡುಮಕ್ಕಳು: ಬೆಳ, ಬೆಕೆರ್ ಮತ್ತು ಯೆದೀಯಯೇಲ್.
7 ಬೆಳನಿಗೆ ಐದು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ. ಇವರೆಲ್ಲಾ ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರಲ್ಲಿ ಸಿದ್ಧರಾಗಿದ್ದ ಯುದ್ಧವೀರರು ಇಪ್ಪತ್ತೆರಡು ಸಾವಿರದ ಮೂವತ್ನಾಲ್ಕು ಮಂದಿ.
8 ಬೆಕೆರನ ಮಕ್ಕಳು ಯಾರೆಂದರೆ: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಅಲೆಮೆತ್. ಇವರೆಲ್ಲಾ ಬೆಕೆರನ ಮಕ್ಕಳು. 9 ಅವರ ಕುಲಚರಿತ್ರೆಯಲ್ಲಿ ಅವರ ನಾಯಕರುಗಳು ಯಾರೆಂಬುದನ್ನು ಬರೆಯಲಾಗಿದೆ. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಇಪ್ಪತ್ತು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
10 ಯೆದೀಯಯೇಲನ ಮಗನು ಬಿಲ್ಹಾನ್. ಇವನ ಮಕ್ಕಳು ಯಾರೆಂದರೆ: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ್, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ್. 11 ಯೆದೀಯಯೇಲನ ಎಲ್ಲಾ ಗಂಡುಮಕ್ಕಳು ತಮ್ಮ ಗೋತ್ರಗಳಿಗೆ ಪ್ರಧಾನರಾಗಿದ್ದರು. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಹದಿನೇಳು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
12 ಶುಪ್ಪೀಮರು ಮತ್ತು ಹುಪ್ಪೀಮರು ಈರನ ಸಂತತಿಯವರಾಗಿದ್ದರು. ಹುಶೀಮನು ಅಹೇರನ ಮಗ.
ನಫ್ತಾಲಿಯ ಸಂತತಿಯವರು
13 ನಫ್ತಾಲಿಯ ಗಂಡುಮಕ್ಕಳು: ಯಹಚಿಯೇಲ್, ಗೂನೀ, ಯೇಚೆರ್ ಮತ್ತು ಶಲ್ಲೂಮ್. ಇವರೆಲ್ಲಾ ಬಿಲ್ಹಳ ಸಂತತಿಯವರು.
ಮನಸ್ಸೆ ಸಂತತಿಯವರು
14 ಮನಸ್ಸೆಯ ಸಂತತಿಯವರು ಯಾರೆಂದರೆ: ಮನಸ್ಸೆ ಮತ್ತು ಅವನ ಅರಾಮ್ಯದ ದಾಸಿಯಲ್ಲಿ ಹುಟ್ಟಿದ ಮಗ ಅಷ್ರೀಯೇಲ್; ಅವರಿಗೆ ಮಾಕೀರ್ ಎಂಬ ಇನ್ನೊಬ್ಬ ಮಗನಿದ್ದನು. ಇವನು ಗಿಲ್ಯಾದನ ತಂದೆ. 15 ಮಾಕೀರನು ಹುಪ್ಪೀಮನ ಮತ್ತು ಶುಪ್ಪೀಮನ ಸಹೋದರಿಯನ್ನು ಮದುವೆಯಾದನು. ಆಕೆಯ ಹೆಸರು ಮಾಕ. ಗಿಲ್ಯಾದನ ಮೊಮ್ಮಗನ ಹೆಸರು ಚೆಲೋಫಾದ್. ಇವನಿಗೆ ಹೆಣ್ಣುಮಕ್ಕಳೇ ಹುಟ್ಟಿದವು. 16 ಮಾಕೀರನ ಹೆಂಡತಿಯಾದ ಮಾಕಳು ಒಂದು ಗಂಡುಮಗುವನ್ನು ಹೆತ್ತು ಅವನಿಗೆ ಪೆರೆಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಇವನ ಗಂಡುಮಕ್ಕಳು ಯಾರೆಂದರೆ: ಊಲಾಮ್ ಮತ್ತು ರೆಕೆಮ್.
17 ಊಲಾಮನ ಮಗನು ಬೆದಾನ್.
ಇವರೆಲ್ಲಾ ಗಿಲ್ಯಾದನ ಸಂತತಿಯವರು: ಗಿಲ್ಯಾದನು ಮಾಕೀರನ ಮಗ. ಮಾಕೀರನು ಮನಸ್ಸೆಯ ಮಗ. 18 ಮಾಕೀರನ ತಂಗಿ ಹಮ್ಮೋಲೆಕೆತಳಿಗೆ ಈಜ್ಡೋದ್, ಅಬೀಯೆಜೆರ್ ಮತ್ತು ಮಹ್ಲ ಎಂಬ ಗಂಡುಮಕ್ಕಳಿದ್ದರು.
19 ಶೆಮೀದನ ಮಕ್ಕಳು ಯಾರೆಂದರೆ: ಅಹ್ಯಾನ್, ಶೆಕೆಮ್, ಲಕ್ಹೀ ಮತ್ತು ಅನೀಯಾಮ್.
ಎಫ್ರಾಯೀಮನ ಸಂತತಿಯವರು
20 ಎಫ್ರಾಯೀಮನ ಸಂತತಿಯವರು: ಎಫ್ರಾಯೀಮನ ಮಗನು ಶೂತೆಲಹ. ಶೂತೆಲಹನ ಮಗನು ಬೆರೆದ್; ಬೆರೆದನ ಮಗನು ತಹತ್. ತಹತನ ಮಗನು ಎಲ್ಲಾದ. ಎಲ್ಲಾದನ ಮಗನು ತಹತ್. 21 ತಹತನ ಮಗನು ಜಾಬಾದ್ ಮತ್ತು ಜಾಬಾದನ ಮಕ್ಕಳು ಶೂತೆಲಹ, ಎಜೆರ್, ಎಲ್ಲಾದ್ ಎಂಬುವರು.
ಗತ್ ನಗರದ ಮೂಲನಿವಾಸಿಗಳು ಎಜೆರನನ್ನು ಮತ್ತು ಎಲ್ಲಾದನನ್ನು ಕೊಂದುಹಾಕಿದರು. ಯಾಕೆಂದರೆ ಎಜೆರನು ಮತ್ತು ಎಲ್ಲಾದನು ಗತ್ ಊರಿನವರ ದನಕುರಿಗಳನ್ನು ಕದ್ದುಕೊಳ್ಳಲು ಹೋಗಿದ್ದರು. 22 ಎಜೆರನು ಮತ್ತು ಎಲ್ಲಾದನ ತಂದೆ ಎಫ್ರಾಯೀಮನು. ತನ್ನ ಮಕ್ಕಳು ಸತ್ತದ್ದಕ್ಕಾಗಿ ಬಹಳ ದಿನಗಳ ತನಕ ಅವನು ಗೋಳಾಡಿದನು. ಅವನ ಕುಟುಂಬದವರೆಲ್ಲಾ ಬಂದು ಅವನನ್ನು ಸಂತೈಸಿದರು. 23 ಅನಂತರ ಎಫ್ರಾಯೀಮನ ಹೆಂಡತಿಯು ಇನ್ನೊಂದು ಗಂಡುಮಗುವನ್ನು ಹೆತ್ತಳು. ತಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆಯ ನೆನಪಿಗಾಗಿ ಇವನಿಗೆ “ಬೆರೀಯ” ಎಂದು ಹೆಸರಿಟ್ಟರು. 24 ಎಫ್ರಾಯೀಮನ ಮಗಳ ಹೆಸರು ಶೇರ. ಅವಳು ಕೆಳಗಿನ ಬೇತ್‌ಹೋರೋನ್ ಮತ್ತು ಮೇಲಿನ ಬೇತ್‌ಹೋರೋನ್ ಮತ್ತು ಕೆಳಗಿನ ಉಜ್ಜೇನ್‌ಶೇರ ಮತ್ತು ಮೇಲಿನ ಉಜ್ಜೇನ್‌ಶೇರ ಪಟ್ಟಣಗಳನ್ನು ಕಟ್ಟಿಸಿದಳು.
25 ರೆಫಹನು ಬೆರೀಯನ ಮಗನು. ರೆಫಹನ ಮಗನು ರೆಷೆಫ್. ರೆಷೆಫನ ಮಗನು ತೆಲಹ. ತೆಲಹನ ಮಗನು ತಹನ್. 26 ಲದ್ದಾನನು ತಹನನ ಮಗ. ಅಮ್ಮೀಹೂದನು ಲದ್ದಾನನ ಮಗ. ಎಲೀಷಾಮನು ಅಮ್ಮೀಹೂದನ ಮಗ. 27 ನೋನನು ಎಲೀಷಾಮನ ಮಗ. ಯೆಹೋಶುವನು ನೋನನ ಮಗ.
28 ಎಫ್ರಾಯೀಮನ ಸಂತತಿಯವರು ವಾಸಿಸಿದ ಪಟ್ಟಣಗಳು ಯಾವುವೆಂದರೆ: ಬೇತೇಲ್ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಪೂರ್ವದಲ್ಲಿ ನಾರಾನ್; ಪಶ್ಚಿಮದಲ್ಲಿ ಗೆಜೆರ್ ಪಟ್ಟಣ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಶೆಕೆಮ್ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು, ಅಯ್ಯಾ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು; 29 ಮನಸ್ಸೆಯ ಗಡಿಗೆ ಸಮೀಪದಲ್ಲಿದ್ದ ಊರುಗಳಾದ ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಮತ್ತು ಅದರ ಹತ್ತಿರದಲ್ಲಿದ್ದ ಸಣ್ಣ ಊರುಗಳು. ಯೋಸೇಫನ ಸಂತತಿಯವರು ಈ ಊರುಗಳಲ್ಲಿ ವಾಸವಾಗಿದ್ದರು. ಯೋಸೇಫನು ಇಸ್ರೇಲನ ಮಗನಾಗಿದ್ದನು.
ಆಶೇರನ ಸಂತತಿಯವರು
30 ಆಶೇರನ ಗಂಡುಮಕ್ಕಳು ಯಾರೆಂದರೆ: ಇಮ್ನ, ಇಷ್ವ, ಇಷ್ವೀ ಮತ್ತು ಬೆರೀಯ. ಅವರ ತಂಗಿ ಸೆರಹ.
31 ಬೆರೀಯನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೇಲ್. ಮಲ್ಕೀಯೇಲನು ಬಿರ್ಜೈತನ ತಂದೆ.
32 ಹೆಬೆರನ ಗಂಡುಮಕ್ಕಳು ಯಾರೆಂದರೆ: ಯಫ್ಲೇಟ್, ಶೋಮೇರ್, ಹೋತಾಮ್ ಮತ್ತು ಅವರ ತಂಗಿ ಶೂವ.
33 ಯಫ್ಲೇಟನ ಗಂಡುಮಕ್ಕಳು ಯಾರೆಂದರೆ: ಪಾಸಾಕ್, ಬಿಮ್ಹಾಲ್ ಮತ್ತು ಅಶ್ವಾತ್.
34 ಶೆಮೆರನ ಗಂಡುಮಕ್ಕಳು ಯಾರೆಂದರೆ: ಅಹೀ, ರೊಹ್ಗ, ಹುಬ್ಬ ಮತ್ತು ಅರಾಮ್.
35 ಶೆಮೆರನ ತಮ್ಮನ ಹೆಸರು ಹೆಲೆಮ್. ಇವನ ಗಂಡುಮಕ್ಕಳು ಯಾರೆಂದರೆ: ಚೋಫಹ, ಇಮ್ನ, ಶೇಲೆಷ್ ಮತ್ತು ಆಮಾಲ್.
36 ಚೋಫಹನ ಗಂಡುಮಕ್ಕಳು ಯಾರೆಂದರೆ: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ, 37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್ ಮತ್ತು ಬೇರ.
38 ಯೆತೆರನ ಗಂಡುಮಕ್ಕಳು ಯಾರೆಂದರೆ: ಯೆಫುನ್ನೆ, ಪಿಸ್ಪ ಮತ್ತು ಅರಾ.
39 ಉಲ್ಲನ ಗಂಡುಮಕ್ಕಳು ಯಾರೆಂದರೆ: ಆರಹ, ಹನ್ನೀಯೇಲ್ ಮತ್ತು ರಿಚ್ಯ.
40 ಇವರೆಲ್ಲರೂ ಆಶೇರನ ಸಂತತಿಯವರು. ಇವರೆಲ್ಲರೂ ಕುಲಪ್ರಧಾನರಾಗಿದ್ದರು. ಅವರು ಸೈನಿಕರೂ ನಾಯಕರುಗಳೂ ಆಗಿದ್ದರು. ಅವರ ಕುಲದ ಇತಿಹಾಸದ ಪ್ರಕಾರ, ಒಟ್ಟು ಇಪ್ಪತ್ತಾರು ಸಾವಿರ ಮಂದಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಿದ್ದರು.
ಬೆನ್ಯಾಮೀನನ ಸಂತತಿಯವರು
8 ಬೆನ್ಯಾಮೀನನ ಮೊದಲನೆ ಮಗನು ಬೆಳ; ಎರಡನೆಯ ಮಗನು ಅಷ್ಬೇಲ್; ಮೂರನೆಯ ಮಗನು ಅಹ್ರಹ; 2 ನಾಲ್ಕನೆಯ ಮಗನು ನೋಹ; ಮತ್ತು ಐದನೆಯ ಮಗನು ರಾಫ.
3 ಬೆಳನ ಮಕ್ಕಳು ಯಾರೆಂದರೆ: ಅದ್ದಾರ್, ಗೇರ, ಅಬೀಹೂದ್, 4-5 ಅಬೀಷೂವ, ನಾಮಾನ್, ಅಹೋಹ, ಗೇರ ಶೆಫೂಫಾನ್ ಮತ್ತು ಹೂರಾಮ್.
6-7 ಇವರು ಏಹೂದನ ಸಂತತಿಯವರು. ಇವರು ಗೆಬ ಗೋತ್ರಗಳ ನಾಯಕರುಗಳಾಗಿದ್ದರು. ಇವರನ್ನು ಇವರ ಮನೆಗಳಿಂದ ಬಲವಂತದಿಂದ ಹೊರಡಿಸಿ ಮಾನಹತಿಗೆ ಕಳುಹಿಸಲಾಯಿತು. ಏಹೂದನ ಸಂತತಿಯವರು ಯಾರೆಂದರೆ: ನಾಮಾನ್, ಅಹೀಯ ಮತ್ತು ಗೇರ. ಗೇರನು ಉಚ್ಚನ ಮತ್ತು ಅಹೀಹುದನ ತಂದೆ.
8 ಶಹರಯಿಮನು ಮೋವಾಬಿನಲ್ಲಿ ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ ಬೇರೊಬ್ಬ ಹೆಂಡತಿಯಿಂದ ಇತರ ಮಕ್ಕಳನ್ನು ಪಡೆದನು. 9-10 ಶಹರಯಿಮನಿಗೆ ಯೋವಾಬ್, ಚೆಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ವಿರ್ಮ ಎಂಬ ಗಂಡುಮಕ್ಕಳನ್ನು ತನ್ನ ಹೆಂಡತಿಯಾದ ಹೋದೆಷಳಿಂದ ಪಡೆದುಕೊಂಡನು. ಇವರೆಲ್ಲರೂ ತಮ್ಮ ಕುಲ ಪ್ರಧಾನರಾಗಿದ್ದರು. 11 ಶಹರಯಿಮ್ ಮತ್ತು ಹೂಷೀಮಳಿಗೆ ಅಬೀಟೂಬ್ ಮತ್ತು ಎಲ್ಛಾಲ ಎಂಬ ಇಬ್ಬರು ಮಕ್ಕಳಿದ್ದರು.
12-13 ಎಲ್ಪಾಲನ ಮಕ್ಕಳು ಯಾರೆಂದರೆ: ಏಬೆರ್, ಮಿಷ್ಬಾಮ್, ಶೆಮೆದ್, ಬೆರೀಯ ಮತ್ತು ಶಮ. ಶೆಮೆದನು ಓನೋ ಮತ್ತು ಲೋದ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಊರುಗಳನ್ನೂ ಕಟ್ಟಿಸಿದನು. ಅಯ್ಯಾಲೋನಿನಲ್ಲಿ ವಾಸಿಸುತ್ತಿದ್ದ ಕುಲದವರಿಗೆ ಬೆರೀಯ ಮತ್ತು ಶಮ ಕುಲ ಪ್ರಧಾನರಾಗಿದ್ದರು. ಇವರು ಗತ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಓಡಿಸಿದರು.
14 ಬೆರೀಯನ ಗಂಡುಮಕ್ಕಳು ಯಾರೆಂದರೆ: ಅಹ್ಯೋ, ಶಾಷಕ್, ಯೆರೇಮೋತ್, ಜೆಬದ್ಯ, 15 ಅರಾದ್, ಎದೆರ್, 16 ಮಿಕಾಯೇಲ್, ಇಷ್ಪ ಮತ್ತು ಯೋಹ. 17 ಎಲ್ಪಾಲನ ಗಂಡುಮಕ್ಕಳು ಯಾರೆಂದರೆ: ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್, 18 ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.
19 ಶಿಮ್ಮಿಯ ಗಂಡುಮಕ್ಕಳು ಯಾರೆಂದರೆ: ಯಾಕೀಮ್, ಜಿಕ್ರೀ, ಜಬ್ದೀ. 20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್, 21 ಅದಾಯ, ಬೆರಾಯ ಮತ್ತು ಶಿಮ್ರಾತ್.
22 ಶಾಷಕನ ಮಕ್ಕಳು ಯಾರೆಂದರೆ: ಇಷ್ಪಾನ್, ಏಬೆರ್, ಎಲೀಯೇಲ್. 23 ಅಬ್ದೋನ್, ಜಿಕ್ರೀ, ಹಾನಾನ್, 24 ಹನನ್ಯ, ಏಲಾಮ್, ಅನೆತೋತೀಯ, 25 ಇಪ್ದೆಯಾಹ ಮತ್ತು ಪೆನೂವೇಲ್.
26 ಯೆರೋಹಾಮನ ಗಂಡುಮಕ್ಕಳು ಯಾರೆಂದರೆ: ಶಂಷೆರೈ, ಶೆಹರ್ಯ, ಅತಲ್ಯ, 27 ಯಾರೆಷ್ಯ, ಏಲೀಯ ಮತ್ತು ಜಿಕ್ರೀ.
28 ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.
29 ಯೆಗೂವೇಲನು ಗಿಬ್ಯೋನನ ತಂದೆ. ಇವನು ಗಿಬ್ಯೋನಿನಲ್ಲಿ ವಾಸಿಸುತ್ತಿದ್ದನು. ಯೆಗೂವೇಲನ ಹೆಂಡತಿಯ ಹೆಸರು ಮಾಕ. 30 ಯೆಗೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ: ಚೂರ್, ಕೀಷ್, ಬಾಳ್, ನಾದಾಬ್, 31 ಗೇದೋರ್, ಅಹ್ಯೋ, ಜೆಕೆರ್ ಮತ್ತು ಮಿಕ್ಲೋತ್. 32 ಮಿಕ್ಲೋತನು ಶಿಮಾಹನ ತಂದೆ. ಇವರೂ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸವಾಗಿದ್ದರು.
33 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳರ ತಂದೆ.
34 ಯೋನಾತಾನನ ಮಗ ಮೆರೀಬ್ಬಾಳ್. ಮೆರೀಬ್ಬಾಳನು ಮೀಕನ ತಂದೆ.
35 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತರೇಯ ಮತ್ತು ಅಹಾಜ್.
36 ಅಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಅಲೆಮೆತನ, ಅಜ್ಮಾವೆತನ ಮತ್ತು ಜಿಮ್ರೀಯ ತಂದೆ. ಜಿಮ್ರೀಯು ಮೋಚನ ತಂದೆ. 37 ಮೋಚನು ಬಿನ್ನನ ತಂದೆ. ರಾಫನು ಬಿನ್ನನ ಮಗ. ಎಲ್ಲಾಸನು ರಾಫನ ಮಗ. ಆಚೇಲನು ಎಲ್ಲಾಸನ ಮಗ.
38 ಆಚೇಲನಿಗೆ ಆರು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. ಇವರೆಲ್ಲರೂ ಆಚೇಲನ ಗಂಡುಮಕ್ಕಳು.
39 ಆಚೇಲನ ತಮ್ಮನಾದ ಏಷೆಕನ ಗಂಡುಮಕ್ಕಳು ಯಾರೆಂದರೆ: ಊಲಾಮನು ಏಷೆಕನ ಚೊಚ್ಚಲಮಗ; ಯೆಯೂಷನು ಏಷೆಕನ ಎರಡನೆಯ ಮಗನು; ಮೂರನೆಯವನು ಎಲೀಫೆಲೆಟ್. 40 ಊಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲುಬಾಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರು. ಅವರಿಗೆ ಅನೇಕ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳಿದ್ದರು. ಅವರಿಗೆ ಒಟ್ಟು ನೂರೈವತ್ತು ಮಂದಿ ಗಂಡುಮಕ್ಕಳು ಮತ್ತು ಗಂಡುಮೊಮ್ಮಕ್ಕಳು ಇದ್ದರು.
ಇವರೆಲ್ಲಾ ಬೆನ್ಯಾಮೀನನ ಸಂತತಿಯವರು.
9 ಇಸ್ರೇಲ್ ಜನರ ಎಲ್ಲಾ ಹೆಸರುಗಳು ಅವರವರ ವಂಶಾವಳಿ ಪಟ್ಟಿಯಲ್ಲಿ ಬರೆಯಲ್ಪಟ್ಟಿದೆ. ಈ ವಂಶಾವಳಿಗಳು ಇಸ್ರೇಲ್ ರಾಜರ ಇತಿಹಾಸದಲ್ಲಿ ಸೇರಿಸಲ್ಪಟ್ಟಿದೆ.
ಜೆರುಸಲೇಮಿನ ಜನರು
ಯೆಹೂದ ಪ್ರಾಂತ್ಯದ ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ಯಲಾಯಿತು. ಅವರು ದೇವರಿಗೆ ಅವಿಧೇಯರಾದ್ದರಿಂದ ಅವರಿಗೆ ಇಂಥ ಸ್ಥಿತಿ ಬಂದೊದಗಿತು. 2 ಅಲ್ಲಿಂದ ಹಿಂತಿರುಗಿಬಂದು ತಮ್ಮ ಸ್ವನಾಡಿನಲ್ಲಿ ನೆಲೆಸಿದವರಲ್ಲಿ ಮೊದಲನೆಯವರು ಯಾರೆಂದರೆ: ಕೆಲವು ಇಸ್ರೇಲರು, ಯಾಜಕರು, ಲೇವಿಯರು ಮತ್ತು ದೇವಾಲಯದ ಸೇವಕರು.
3 ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಗೋತ್ರದವರಾದ ಇವರು ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರು ಯಾರೆಂದರೆ:
4 ಊತ್ಯೆ ಅಮ್ಮೀಹೂದನ ಮಗ, ಅಮ್ಮೀಹೂದನು ಒಮ್ರಿಯ ಮಗ, ಒಮ್ರಿಯು ಇಮ್ರಿಯ ಮಗ, ಇಮ್ರಿಯು ಬಾನೀಯ ಮಗ, ಬಾನೀಯು ಪೆರೆಚನ ಸಂತತಿಯವನು, ಪೆರೆಚನು ಯೆಹೂದನ ಮಗ.
5 ಜೆರುಸಲೇಮಿನಲ್ಲಿ ವಾಸಿಸಿದ ಶೇಲಾಹದವರು ಯಾರೆಂದರೆ: ಚೊಚ್ಚಲಮಗನಾದ ಅಸಾಯನು. ಅಸಾಯನಿಗೂ ಗಂಡುಮಕ್ಕಳಿದ್ದರು.
6 ಜೆರಹಳ ಸಂತತಿಯ ಯೆಯೂವೇಲ್ ಮತ್ತು ಅವನ ಆರುನೂರ ತೊಂಭತ್ತು ಮಂದಿ ಸಂಬಂಧಿಕರು ಜೆರುಸಲೇಮಿನಲ್ಲಿ ವಾಸಿಸಿದರು.
7 ಜೆರುಸಲೇಮಿನಲ್ಲಿ ವಾಸಿಸಿದ ಬೆನ್ಯಾಮೀನನ ಗೋತ್ರದವರು ಯಾರೆಂದರೆ: ಮೆಷುಲ್ಲಾಮನ ಮಗನಾದ ಸಲ್ಲೂ. ಮೆಷುಲ್ಲಾಮನು ಹೋದವ್ಯನ ಮಗ. ಹೋದವ್ಯನು ಹಸ್ಸೆನುವಾಹನ ಮಗ. 8 ಇಬ್ನೆಯಾಹನು ಯೆರೋಹಾಮನ ಮಗ. ಏಲಾನು ಉಜ್ಜೀಯ ಮಗ. ಉಜ್ಜೀಯನು ಮಿಕ್ರೀಯ ಮಗ ಮತ್ತು ಮೆಷುಲ್ಲಾಮನು ಶೆಫಟ್ಯನ ಮಗ. ಶೆಫಟ್ಯನು ರೆಯೂವೇಲನ ಮಗ. ರೆಯೂವೇಲನು ಇಬ್ನಿಯಾಹನ ಮಗ. 9 ಬೆನ್ಯಾಮೀನನ ಕುಲಚರಿತ್ರೆಯ ಪ್ರಕಾರ ಒಂಭೈನೂರ ಐವತ್ತಾರು ಮಂದಿ ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳ ನಾಯಕರಾಗಿದ್ದರು.
10 ಜೆರುಸಲೇಮಿನಲ್ಲಿ ವಾಸಿಸಿದ ಯಾಜಕರು ಯಾರೆಂದರೆ: ಯೆದಾಯ, ಯೆಹೋಯಾರೀಬ್, ಯಾಕೀನ್ ಮತ್ತು 11 ಅಜರ್ಯ. ಅಜರ್ಯನು ಹಿಲ್ಕೀಯನ ಮಗ; ಹಿಲ್ಕೀಯನು ಮೆಷುಲ್ಲಾಮನ ಮಗ; ಮೆಷುಲ್ಲಾಮನು ಚಾದೋಕನ ಮಗ; ಚಾದೋಕನು ಮೆರಾಯೋತನ ಮಗ; ಮೆರಾಯೋತನು ಅಹೀಟೂಬನ ಮಗ. ಅಹೀಟೂಬನು ದೇವಾಲಯದ ಒಬ್ಬ ವಿಶೇಷ ಅಧಿಕಾರಿಯಾಗಿದ್ದನು. 12 ಇವರಲ್ಲದೆ, ಯೆರೋಹಾಮನ ಮಗನಾದ ಅದಾಯನು ಸಹ ಇದ್ದನು. ಯೆರೋಹಾಮನು ಪಶ್ಹೂರನ ಮಗ; ಪಶ್ಹೂರನು ಮಲ್ಕೀಯನ ಮಗ; ಇವರಲ್ಲದೆ, ಅದೀಯೇಲನ ಮಗನಾದ ಮಾಸೈ ಸಹ ಇದ್ದನು. ಅದೀಯೇಲನು ಯಹ್ಜೇರನ ಮಗ. ಯಹ್ಜೇರನು ಮೆಷುಲ್ಲಾಮನ ಮಗ. ಮೆಷುಲ್ಲಾಮನು ಮೆಷಿಲ್ಲೇಮೋತನ ಮಗ. ಮೆಷಿಲ್ಲೇಮೋತನು ಇಮ್ಮೇರನ ಮಗ.
13 ಒಟ್ಟು ಒಂದು ಸಾವಿರದ ಏಳುನೂರ ಅರವತ್ತು ಮಂದಿ ಯಾಜಕರಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ದೇವಾಲಯದ ಕೆಲಸಕಾರ್ಯಗಳ ಜವಾಬ್ದಾರಿಕೆಯನ್ನು ಇವರು ಹೊತ್ತು ಕೊಂಡಿದ್ದರು.
14 ಜೆರುಸಲೇಮಿನಲ್ಲಿ ವಾಸಿಸಿದ ಲೇವಿ ಕುಲದ ಜನರು ಯಾರೆಂದರೆ: ಹಷ್ಷೂಬನ ಮಗನಾದ ಶೆಮಾಯ. ಹಷ್ಷೂಬನು ಅಜ್ರೀಕಾಮನ ಮಗ. ಅಜ್ರೀಕಾಮನು ಹಷಬ್ಯನ ಮಗ. ಹಷಬ್ಯನು ಮೆರಾರೀಯ ಸಂತತಿಯವನು. 15 ಜೆರುಸಲೇಮಿನಲ್ಲಿ ವಾಸಿಸಿದ ಇತರರು ಯಾರೆಂದರೆ: ಬಕ್ಬಕ್ಕರ್, ಹೆರೆಷ್, ಗಾಲಾಲ್ ಮತ್ತು ಮತ್ತನ್ಯ. ಮತ್ತನ್ಯನು ಮೀಕನ ಮಗ. ಮೀಕನು ಜಿಕ್ರೀಯ ಮಗ. ಜಿಕ್ರೀಯು ಆಸಾಫನ ಮಗ. 16 ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.
17 ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ದ್ವಾರಪಾಲಕರು ಯಾರೆಂದರೆ: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಮತ್ತು ಅವರ ಕುಟುಂಬದವರು. ಶಲ್ಲೂಮನು ಅವರ ನಾಯಕನಾಗಿದ್ದನು. 18 ಇವರೆಲ್ಲರೂ ಪೂರ್ವದಿಕ್ಕಿನಲ್ಲಿರುವ ರಾಜನ ಹೆಬ್ಬಾಗಿಲನ್ನು ಕಾಯುತ್ತಿರುತ್ತಾರೆ. ಇವರೆಲ್ಲಾ ಲೇವಿ ಕುಲಕ್ಕೆ ಸೇರಿದವರು. 19 ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು. 20 ಹಿಂದೆ ಫೀನೆಹಾಸನು ದ್ವಾರಪಾಲಕರ ನಾಯಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗ. ದೇವರು ಫೀನೆಹಾಸನೊಂದಿಗಿದ್ದನು. 21 ಮೆಷಲೆಮ್ಯೆನ ಮಗನಾದ ಜೆಕರ್ಯನು ಪವಿತ್ರಗುಡಾರದ ಪ್ರವೇಶದ್ವಾರಕ್ಕೆ ಪಾಲಕನಾಗಿದ್ದನು.
22 ಒಟ್ಟು ಇನ್ನೂರ ಹನ್ನೆರಡು ಮಂದಿ ಪವಿತ್ರಗುಡಾರದ ಬಾಗಿಲನ್ನು ಕಾಯುವುದಕ್ಕೆ ಆರಿಸಲ್ಪಟ್ಟಿದ್ದರು. ಅವರ ಹೆಸರುಗಳು ವಂಶದ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತವೆ. ದಾವೀದನೂ ದೇವರ ಮನುಷ್ಯನಾದ ಸಮುವೇಲನೂ ಇವರನ್ನು ಆರಿಸಿಕೊಂಡರು. ಯಾಕೆಂದರೆ ಇವರೆಲ್ಲರೂ ನಂಬಿಗಸ್ತರಾಗಿದ್ದರು. 23 ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲರಾಗಿದ್ದರು. 24 ಅದಕ್ಕೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿದ್ದವು. 25 ಗ್ರಾಮಗಳಲ್ಲಿ ನೆಲೆಸಿದ ದ್ವಾರಪಾಲಕರ ಕುಟುಂಬದವರು ತಮ್ಮ ಸರದಿಗನುಗುಣವಾಗಿ ಏಳು ದಿವಸದ ಕರ್ತವ್ಯ ಮುಗಿಸಿಹೋಗುತ್ತಿದ್ದರು.
26 ಲೇವಿಕುಲದ ನಾಲ್ಕು ಮಂದಿ ಎಲ್ಲಾ ದ್ವಾರಪಾಲಕರಿಗೆ ನಾಯಕರಾಗಿದ್ದರು. ದೇವಾಲಯದ ಕೋಣೆಗಳನ್ನೂ ಅಲ್ಲಿಟ್ಟಿರುವ ಹಣದ ಪೆಟ್ಟಿಗೆಗಳನ್ನೂ ಅವರು ಕಾಯುತ್ತಿದ್ದರು. 27 ಅವರು ರಾತ್ರಿಯಲ್ಲಿ ಕಾವಲು ಕಾಯುತ್ತಿದ್ದರು ಮತ್ತು ಪ್ರತಿಮುಂಜಾನೆ ದೇವಾಲಯದ ಬಾಗಿಲನ್ನು ತೆರೆಯುತ್ತಿದ್ದರು.
28 ಅವರಲ್ಲಿ ಕೆಲವರು ದೇವಾಲಯದ ಪಾತ್ರೆಗಳಿಗೆ ಮೇಲ್ವಿಚಾರಕರಾಗಿದ್ದು ಅವುಗಳನ್ನು ಒಳಗೆ ತರುವಾಗಲೂ ಹೊರಗೆ ತೆಗೆದುಕೊಂಡು ಹೋಗುವಾಗಲೂ ಲೆಕ್ಕಮಾಡುತ್ತಿದ್ದರು. 29 ಇನ್ನು ಕೆಲವರು ಮರದ ಸಾಮಾನುಗಳಿಗೂ ವಿಶೇಷವಾದ ಪಾತ್ರೆಗಳಿಗೂ ಮೇಲ್ವಿಚಾರಕರಾಗಿದ್ದು ಗೋಧಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಮತ್ತು ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರಾಗಿದ್ದರು. 30 ಯಾಜಕರ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲಮಾಡುತ್ತಿದ್ದರು.
31 ಮತ್ತಿತ್ಯ ಎಂಬ ಲೇವಿಯು ದೇವರಿಗೆ ಸಮರ್ಪಿಸುವ ರೊಟ್ಟಿಯನ್ನು ತಯಾರು ಮಾಡುತ್ತಿದ್ದನು. ಇವನು ಶಲ್ಲೂಮನ ಚೊಚ್ಚಲಮಗ. ಶಲ್ಲೂಮನು ಕೋರಹನ ಕುಲದವನಾಗಿದ್ದನು. 32 ಕೋರಹನ ಕುಲದ ಕೆಲವರಿಗೆ, ಪ್ರತಿ ಸಬ್ಬತ್‌ದಿವಸ ದೇವರ ಸನ್ನಿಧಾನದಲ್ಲಿ ಇಡುವ ನೈವೇದ್ಯದ ರೊಟ್ಟಿಯನ್ನು ತಯಾರಿಸುವ ಕೆಲಸವಿತ್ತು.
33 ಗಾಯಕರು ಮತ್ತು ತಮ್ಮ ಕುಟುಂಬಗಳಿಗೆ ನಾಯಕರಾಗಿದ್ದ ಲೇವಿಯರು ದೇವಾಲಯದ ಕೋಣೆಗಳಲ್ಲಿ ಇರುತ್ತಿದ್ದರು. ಅವರು ಇತರ ಕೆಲಸಗಳನ್ನು ಮಾಡಬೇಕಾಗಿರಲಿಲ್ಲ; ಯಾಕೆಂದರೆ ದೇವಾಲಯದ ಹಗಲಿರುಳಿನ ಕೆಲಸಕಾರ್ಯಗಳ ಜವಾಬ್ದಾರಿಕೆ ಇವರದಾಗಿತ್ತು.
34 ಈ ಲೇವಿಯರೆಲ್ಲಾ ತಮ್ಮತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ಇವರ ಹೆಸರುಗಳು ಅವರ ಕುಟುಂಬ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವರು ಜೆರುಸಲೇಮಿನಲ್ಲಿ ವಾಸಿಸಿದರು.
ಅರಸನಾದ ಸೌಲನ ವಂಶಾವಳಿ
35 ಯೆಯೂವೇಲನು ಗಿಬ್ಯೋನನ ತಂದೆ. ಯೆಯೂವೇಲನು ಗಿಬ್ಯೋನ್ ಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಯೆಯೂವೇಲನ ಹೆಂಡತಿಯ ಹೆಸರು ಮಾಕ. 36 ಯೆಯೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ: 37 ಚೂರ್, ಕೀಷ್, ಬಾಳ್, ನೇರ್, ನಾದಾಬ್, ಗೆದೋರ್, ಅಹ್ಯೊ, ಜಕರ್ಯ ಮತ್ತು ಮಿಕ್ಲೋತ್. 38 ಮಿಕ್ಲೋತನು ಶಿಮಾಮನ ತಂದೆ. ಯೆಯೂವೇಲನ ಕುಟುಂಬದವರೆಲ್ಲಾ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು.
39 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ್.
40 ಯೋನಾತಾನನ ಮಗನಾದ ಮೆರೀಬ್ಬಾಳನು ಮೀಕನ ತಂದೆ.
41 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತಹ್ರೇಯ ಮತ್ತು ಆಹಾಜ್. 42 ಆಹಾಜನು ಯಗ್ರಾಹನ ತಂದೆ. ಯಗ್ರಾಹನು ಜಾರಹನ ತಂದೆ. ಜಾರಹನು ಆಲೆಮೆತ್, ಅಜ್ಮಾವೆತ್ ಮತ್ತು ಜಿಮ್ರೀ ಇವರ ತಂದೆ. ಜಿಮ್ರೀಯು ಮೋಚನ ತಂದೆ. 43 ಮೋಚನು ಬಿನ್ನನ ತಂದೆ. ರೆಫಾಯನು ಬಿನ್ನನ ಮಗ. ಎಲ್ಲಾಸನು ರೆಫಾಯನ ಮಗ. ಆಚೇಲನು ಎಲ್ಲಾಸನ ಮಗ.
44 ಆಚೇಲನಿಗೆ ಆರು ಮಂದಿ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.
ಅರಸನಾದ ಸೌಲನ ಮರಣ
10 ಫಿಲಿಷ್ಟಿಯರು ಇಸ್ರೇಲರ ವಿರೋಧವಾಗಿ ಕಾದಾಡಿದರು. ಆದರೆ ಇಸ್ರೇಲರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಬೇಕಾಯಿತು. ಇಸ್ರೇಲರಲ್ಲಿ ಬಹಳ ಮಂದಿ ಗಿಲ್ಬೋವ ಬೆಟ್ಟದ ಮೇಲೆ ಹತರಾದರು. 2 ಫಿಲಿಷ್ಟಿಯರು ಸೌಲನನ್ನು ಬೆನ್ನಟ್ಟುತ್ತಾ ಹೋಗಿ ಕೊನೆಗೆ ಸೌಲನನ್ನೂ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. 3 ಸೌಲನ ಸುತ್ತಲೂ ಯುದ್ಧವು ಬಹು ಘೋರವಾಗಿ ನಡೆಯಿತು. ಬಿಲ್ಲುಗಾರರು ತಮ್ಮ ಬಿಲ್ಲುಗಳಿಂದ ಸೌಲನ ಕಡೆಗೆ ಗುರಿಯಿಟ್ಟು ಹೊಡೆದು ಅವನನ್ನು ಗಾಯಪಡಿಸಿದರು.
4 ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಖಡ್ಗದಿಂದ ನನ್ನನ್ನು ಇರಿದು ಕೊಂದುಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯಪಡಿಸಿ ಹಾಸ್ಯಮಾಡಲು ಸಾಧ್ಯವಾಗುವುದಿಲ್ಲ” ಎಂದನು.
ಆದರೆ ಅವನ ಆಯುಧಹೊರುವವನು ಅದಕ್ಕೆ ಒಪ್ಪಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೆದರಿದನು. ಆಗ ಸೌಲನು ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸತ್ತನು. 5 ಅವನ ಆಯುಧ ಹೊರುವವನು ಸೌಲನು ಸತ್ತದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡನು. 6 ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಒಟ್ಟಿಗೆ ಸತ್ತರು.
7 ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರು ತಮ್ಮ ಸೈನ್ಯವು ವೈರಿಗಳಿಂದ ಓಡಿಸಲ್ಪಡುವದನ್ನು ನೋಡಿದರು. ಅರಸನಾದ ಸೌಲನು ಮತ್ತು ಅವನ ಗಂಡುಮಕ್ಕಳು ಸತ್ತುಹೋಗಿರುವುದು ಅವರಿಗೆ ತಿಳಿಯಿತು. ಆಗ ಅವರೂ ತಮ್ಮತಮ್ಮ ಮನೆಗಳನ್ನು ಬಿಟ್ಟು ಓಡಿದರು. ಫಿಲಿಷ್ಟಿಯರು ಅವರ ಮನೆಗಳಿಗೆ ಬಂದಾಗ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ವಾಸಿಸಿದರು.
8 ಮರುದಿವಸ ಫಿಲಿಷ್ಟಿಯರು ಹೆಣಗಳ ಮೇಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದರು. ಆಗ ಅವರಿಗೆ ಗಿಲ್ಬೋವ ಬೆಟ್ಟದ ಮೇಲೆ ಸೌಲ ಮತ್ತು ಅವನ ಗಂಡುಮಕ್ಕಳ ಶರೀರಗಳು ದೊರಕಿದವು. 9 ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನೂ ತೆಗೆದುಕೊಂಡು ತಮ್ಮ ಊರಿನಲ್ಲಿದ್ದ ಜನರಿಗೂ ಅವರ ಸುಳ್ಳುದೇವರುಗಳಿಗೂ ತಿಳಿಸಲು ಸಂದೇಶಕರನ್ನು ಕಳುಹಿಸಿದರು. 10 ಫಿಲಿಷ್ಟಿಯರು ಸೌಲನ ಆಯುಧಗಳನ್ನು ತಮ್ಮ ದೇವರ ಆಲಯದಲ್ಲಿಟ್ಟರು. ಸೌಲನ ತಲೆಯನ್ನು ದಾಗೋನನ ದೇವಸ್ಥಾನದಲ್ಲಿ ತೂಗುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದು ಯಾಬೇಷ್ ಗಿಲ್ಯಾದಿನ ಜನರಿಗೆ ತಿಳಿಯಿತು. 12 ಆಗ ಯಾಬೇಷ್ ಗಿಲ್ಯಾದಿನ ರಣವೀರರು ಹೊರಟು ಸೌಲನ ಮತ್ತು ಅವನ ಗಂಡುಮಕ್ಕಳ ಶವಗಳನ್ನು ಯಾಬೇಷ್ ಗಿಲ್ಯಾದಿಗೆ ತಂದರು. ಆ ರಣವೀರರು ಸೌಲನ ಮತ್ತು ಅವನ ಗಂಡುಮಕ್ಕಳ ಎಲುಬುಗಳನ್ನು ಯಾಬೇಷಿನಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಹೂಳಿಟ್ಟರು. ಅನಂತರ ಏಳು ದಿವಸಗಳ ತನಕ ಅವರು ಶೋಕಿಸಿದರು.
13 ಸೌಲನು ಯೆಹೋವನಿಗೆ ಅವಿಧೇಯನಾಗಿದ್ದರಿಂದ ಸತ್ತನು. ಅವನು ಯೆಹೋವನ ಮಾತನ್ನು ಕೇಳದೆ ಹೋದನು. 14 ಅಲ್ಲದೆ ಅವನು ಯೆಹೋವನ ಸಲಹೆಯನ್ನು ಪಡೆದುಕೊಳ್ಳುವ ಬದಲಾಗಿ ಮಾಟಮಂತ್ರ ಮಾಡುವ ಹೆಂಗಸಿನ ಬಳಿಗೆ ಹೋದನು. ಆದ್ದರಿಂದಲೇ ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಷಯನ ಮಗನಾದ ದಾವೀದನಿಗೆ ಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International