Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 5-7

ತಿಳಿಯದೆ ಮಾಡುವ ಪಾಪಗಳು

“ನ್ಯಾಯಾಧಿಕಾರಿಯು ತಿಳಿಸಬೇಕೆಂದು ಕೇಳಿದರೂ ಒಬ್ಬನು ತಾನು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ತಿಳಿಸದೆ ಹೋದರೆ ಅವನು ಪಾಪಕ್ಕೆ ಗುರಿಯಾಗಿದ್ದಾನೆ.

“ಯಾವನಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವನ್ನಾಗಲಿ ಅಥವಾ ಬೇರೆ ಯಾವ ಅಶುದ್ಧ ವಸ್ತುವನ್ನಾಗಲಿ ಮುಟ್ಟಿದರೆ ತಾನು ಮುಟ್ಟಿದ್ದು ತಿಳಿಯದಿದ್ದರೂ ಅವನು ಅಶುದ್ಧನೂ ದೋಷಿಯೂ ಆಗಿರುವನು.

“ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.

“ಒಬ್ಬನು ಆಲೋಚಿಸದೆ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಮಾತುಕೊಟ್ಟು ಮರೆತುಬಿಟ್ಟರೆ, ಅದು ಅವನ ನೆನಪಿಗೆ ಬಂದಾಗ ಅವನು ದೋಷಿಯಾಗುವನು. ಈ ವಿಷಯಗಳಲ್ಲಿ ಯಾವುದಾದರೊಂದರಲ್ಲಿ ದೋಷಿಯಾದರೆ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡಬೇಕು. ಅವನು ದೋಷಪರಿಹಾರಕ್ಕಾಗಿ ಹೆಣ್ಣು ಕುರಿಮರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯಜ್ಞವಾಗಿ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.

“ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು. ಅವನು ಅವುಗಳನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಮೊದಲು ಒಂದು ಪಕ್ಷಿಯನ್ನು ದೋಷಪರಿಹಾರಕ ಯಜ್ಞವನ್ನಾಗಿ ಅರ್ಪಿಸುವನು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿಯುವನು. ಆದರೆ ಯಾಜಕನು ಪಕ್ಷಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದಿಲ್ಲ. ಯಾಜಕನು ದೋಷಪರಿಹಾರಕ ಯಜ್ಞದಿಂದ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬದಿಯಲ್ಲಿ ಚಿಮಿಕಿಸಬೇಕು. ಬಳಿಕ ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 10 ತರುವಾಯ ಯಾಜಕನು ಎರಡನೆಯ ಪಕ್ಷಿಯನ್ನು ಸರ್ವಾಂಗಹೋಮದ ವಿಧಿಗಳಿಗನುಸಾರವಾಗಿ ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಅವನನ್ನು ಕ್ಷಮಿಸುವನು.

11 “ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅವನು ಶಕ್ತನಾಗಿಲ್ಲದಿದ್ದರೆ, ಆಗ ಅವನು ಎಂಟು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನು ತರಬೇಕು. ಇದು ಅವನ ಪಾಪಪರಿಹಾರಕ ಯಜ್ಞವಾಗಿರುವುದು. ಅವನು ಹಿಟ್ಟಿಗೆ ಎಣ್ಣೆಯನ್ನು ಹಾಕಬಾರದು. ಅವನು ಅದರ ಮೇಲೆ ಸುಗಂಧ ಧೂಪವನ್ನು ಇಡಬಾರದು, ಯಾಕೆಂದರೆ ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 12 ಅವನು ಹಿಟ್ಟನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಒಂದು ಹಿಡಿಹಿಟ್ಟನ್ನು ಅದರಿಂದ ತೆಗೆದು ದೇವಾರ್ಪಿತವಾಯಿತೆಂದು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿರುವುದು. ಅದು ಪಾಪಪರಿಹಾರಕ ಸಮರ್ಪಣೆಯಾಗಿದೆ. 13 ಹೀಗೆ ಆ ವ್ಯಕ್ತಿಯನ್ನು ಅವನ ದೋಷಗಳಿಂದ ಶುದ್ಧೀಕರಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು. ಧಾನ್ಯನೈವೇದ್ಯದಲ್ಲಿರುವಂತೆಯೇ ಯಜ್ಞದಲ್ಲಿ ಉಳಿದ ಭಾಗವು ಯಾಜಕನಿಗೆ ಸೇರಿದೆ. ಧಾನ್ಯಸಮರ್ಪಣೆಯಲ್ಲಿಯೂ ಉಳಿದ ಭಾಗವು ಯಾಜಕನಿಗೆ ಸೇರಿದೆ.”

14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 15 “ಒಬ್ಬನು ಯೆಹೋವನ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮೀರಿ ನಡೆದು ತಿಳಿಯದೆ ತಪ್ಪು ಮಾಡಿದರೆ ಅವನು ಅಂಗದೋಷವಿಲ್ಲದ ಟಗರನ್ನು ತರಬೇಕು. ಇದು ಅವನಿಗಾಗಿ ಯೆಹೋವನಿಗೆ ಸಮರ್ಪಣೆಯಾಗುವ ದೋಷಪರಿಹಾರಕ ಯಜ್ಞ. ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಟಗರಿನ ಬೆಲೆಯನ್ನು ಗೊತ್ತುಮಾಡಬೇಕು.” 16 ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.

17 “ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದಾದರೊಂದನ್ನು ಮಾಡಿ ದೋಷಕ್ಕೆ ಗುರಿಯಾಗಿದ್ದರೆ, ಅದು ಅವನಿಗೆ ತಿಳಿದಿಲ್ಲದಿದ್ದರೂ ಅವನು ಆ ಪಾಪಫಲವನ್ನು ಅನುಭವಿಸಬೇಕು. 18 ಅವನು ಅಂಗದೋಷವಿಲ್ಲದ ಮತ್ತು ಸರಿಯಾದ ಬೆಲೆಬಾಳುವ ಟಗರನ್ನು ಯಾಜಕನ ಬಳಿಗೆ ತರಬೇಕು. ಟಗರು ದೋಷಪರಿಹಾರಕ ಯಜ್ಞವಾಗಿರುವುದು. ಹೀಗೆ ಯಾಜಕನು ತಿಳಿಯದೆ ಮಾಡಿದ ಪಾಪದಿಂದ ಅವನನ್ನು ಶುದ್ಧಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು. 19 ಅವನು ದೋಷಿಯಾದ್ದರಿಂದ ಯೆಹೋವನಿಗೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಬೇಕು.”

ಬೇರೆ ಪಾಪಗಳಿಗಾಗಿ ದೋಷಪರಿಹಾರಕ ಯಜ್ಞಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ ಮತ್ತೊಬ್ಬನು ಕಳೆದುಕೊಂಡದ್ದನ್ನು ಕಂಡುಕೊಂಡು ಅದರ ಬಗ್ಗೆ ಸುಳ್ಳು ಹೇಳುವುದರಿಂದಾಗಲಿ ಮಾಡಿದ ಪ್ರಮಾಣವನ್ನು ಉಲ್ಲಂಘಿಸುವುದರಿಂದಾಗಲಿ ಪಾಪಮಾಡಿ ಯೆಹೋವನಿಗೆ ದ್ರೋಹಮಾಡಿದರೆ, ಅವನು ತಾನು ಕದ್ದದ್ದನ್ನಾಗಲಿ ಮೋಸದಿಂದ ತೆಗೆದುಕೊಂಡದ್ದನ್ನಾಗಲಿ ಅಡವು ಇಟ್ಟುಕೊಂಡದ್ದನ್ನಾಗಲಿ ಕಂಡುಕೊಂಡ ಅಥವಾ ಕಳೆದುಹೋದ ವಸ್ತುವನ್ನಾಗಲಿ ಸುಳ್ಳಾಣೆ ಇಟ್ಟುಕೊಂಡ ವಸ್ತುವನ್ನಾಗಲಿ ಸಂಪೂರ್ಣವಾಗಿ ತಂದುಕೊಡಬೇಕು. ಅದರೊಂದಿಗೆ ಅದರ ಐದನೆಯ ಒಂದಂಶವನ್ನು ಹೆಚ್ಚಾಗಿ ತಂದುಕೊಡಬೇಕು. ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ದಿನದಲ್ಲಿಯೇ ನಿಜವಾದ ಯಜಮಾನನಿಗೆ ಇದನ್ನು ತಂದುಕೊಡಬೇಕು. ಆ ವ್ಯಕ್ತಿ ದೋಷಪರಿಹಾರಕ ಯಜ್ಞವನ್ನು ಯಾಜಕನ ಬಳಿಗೆ ತರಬೇಕು. ಅದು ಮಂದೆಯಿಂದ ತಂದ ಟಗರಾಗಿರಬೇಕು. ಟಗರಿನಲ್ಲಿ ಯಾವ ದೋಷವೂ ಇರಬಾರದು. ಅದು ಯಾಜಕನು ಹೇಳುವ ಬೆಲೆಯುಳ್ಳದ್ದಾಗಿರಬೇಕು. ಅದು ಯೆಹೋವನಿಗೆ ಸಮರ್ಪಿಸುವ ದೋಷಪರಿಹಾರಕ ಯಜ್ಞವಾಗಿರುವುದು. ಬಳಿಕ ಯಾಜಕನು ಯೆಹೋವನ ಸನ್ನಿಧಿಗೆ ಹೋಗಿ ಅವನನ್ನು ಶುದ್ಧಿಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.”

ಸರ್ವಾಂಗಹೋಮಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ[b] ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು. 10 ಯಾಜಕನು ತನ್ನ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಳ್ಳಬೇಕು. ಯಾಜಕನು ಸರ್ವಾಂಗಹೋಮ ಮಾಡಿದಾಗ ಬೆಂಕಿಯಿಂದ ಉಂಟಾದ ಬೂದಿಯನ್ನು ತೆಗೆದು ವೇದಿಕೆಯ ಬಳಿಯಲ್ಲಿಡಬೇಕು. 11 ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ತೆಗೆದುಹಾಕಿ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಬೂದಿಯನ್ನು ಪಾಳೆಯದ ಹೊರಗೆ ಒಂದು ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 12 ಆದರೆ ವೇದಿಕೆಯ ಮೇಲೆ ಬೆಂಕಿ ಉರಿಯುತ್ತಲೇ ಇರಬೇಕು. ಅದನ್ನು ಆರಿ ಹೋಗುವುದಕ್ಕೆ ಬಿಡಬಾರದು, ಯಾಜಕನು ಪ್ರತಿ ಮುಂಜಾನೆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಸಿದ್ಧಪಡಿಸಿ, ಸಮಾಧಾನಯಜ್ಞದ ಕೊಬ್ಬನ್ನು ಸುಡಬೇಕು. 13 ಬೆಂಕಿಯು ವೇದಿಕೆಯ ಮೇಲೆ ಉರಿಯುತ್ತಲೇ ಇರಬೇಕು; ಆರಿಹೋಗಬಾರದು.

ಧಾನ್ಯಸಮರ್ಪಣೆಗಳು

14 “ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು. 15 ಯಾಜಕನು ಧಾನ್ಯನೈವೇದ್ಯದಿಂದ ಒಂದು ಹಿಡಿ ಶ್ರೇಷ್ಠ ಹಿಟ್ಟನ್ನು ಮತ್ತು ಎಣ್ಣೆಯನ್ನು ಮತ್ತು ಎಲ್ಲಾ ಧೂಪವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಅದನ್ನು ವೇದಿಕೆಯ ಮೇಲೆ ಸುಡಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

16 “ಆರೋನನ ಮತ್ತು ಅವನ ಪುತ್ರರು ಧಾನ್ಯನೈವೇದ್ಯದಲ್ಲಿ ಉಳಿದದ್ದನ್ನು ತಿನ್ನಬೇಕು. ಅವರು ಆ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 17 ಹುಳಿಕಲಸಿ ರೊಟ್ಟಿ ಸುಡಬಾರದು. ನನಗೆ ಅಗ್ನಿಯ ಮೂಲಕ ಹೋಮವಾಗಿ ಅರ್ಪಿಸಿದ ಸಮರ್ಪಣೆಗಳಲ್ಲಿ ನಾನು ಅದನ್ನು ಯಾಜಕರ ಪಾಲನ್ನಾಗಿ ಕೊಟ್ಟಿದ್ದೇನೆ. ಅದು ಪಾಪಪರಿಹಾರಕ ಯಜ್ಞದಂತೆಯೂ ದೋಷಪರಿಹಾರಕ ಯಜ್ಞದಂತೆಯೂ ಮಹಾ ಪವಿತ್ರವಾಗಿದೆ. 18 ಆರೋನನ ವಂಶದವರಾದ ಗಂಡಸರೆಲ್ಲರೂ ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳನ್ನು ತಿನ್ನಬಹುದು. ಇದು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿದೆ. ಈ ಕಾಣಿಕೆಗಳಿಗೆ ತಗಲಿದ್ದೆಲ್ಲಾ ಪವಿತ್ರವಾಗುತ್ತವೆ.”

ಯಾಜಕರ ಧಾನ್ಯನೈವೇದ್ಯ

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 20 “ಆರೋನನು ಮಹಾಯಾಜಕನಾಗಿ ಅಭಿಷೇಕಿಸಲ್ಪಡುವ ದಿನದಂದು ಅವನು ಮತ್ತು ಅವನ ಪುತ್ರರು ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಎಂಟು ಬಟ್ಟಲು[c] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು. 21 ಶ್ರೇಷ್ಠವಾದ ಗೋಧಿಹಿಟ್ಟಿಗೆ ಎಣ್ಣೆಯನ್ನು ಬೆರೆಸಿ ಕಬ್ಬಿಣದ ಹಂಚಿನ ಮೇಲೆ ರೊಟ್ಟಿ ಸುಟ್ಟು ಅದನ್ನು ಒಳಗೆ ತರಬೇಕು. ನೀವು ಈ ಸಮರ್ಪಣೆಯನ್ನು ತುಂಡುತುಂಡಾಗಿ ಮುರಿದು ಸಮರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

22 “ಆರೋನನ ಸ್ಥಾನವನ್ನು ಹೊಂದುವುದಕ್ಕಾಗಿ ಆರೋನನ ಸಂತತಿಯವರಲ್ಲಿ ಆರಿಸಲ್ಪಟ್ಟು ಅಭಿಷೇಕಿಸಲ್ಪಟ್ಟ ಯಾಜಕನು ಯೆಹೋವನಿಗೆ ಈ ಧಾನ್ಯಸಮರ್ಪಣೆ ಮಾಡಬೇಕು. ಈ ನಿಯಮ ಶಾಶ್ವತವಾದದ್ದು. ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. 23 ಯಾಜಕನ ಪ್ರತಿಯೊಂದು ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. ಅದನ್ನು ತಿನ್ನಲೇಬಾರದು.”

ಪಾಪಪರಿಹಾರ ಯಜ್ಞದ ಕಟ್ಟಳೆ

24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 25 “ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಹೇಳು: ಪಾಪಪರಿಹಾರಕ ಯಜ್ಞದ ಕಟ್ಟಳೆ ಇದಾಗಿದೆ. ಸರ್ವಾಂಗಹೋಮ ಪಶುವು ವಧಿಸಲ್ಪಡುವ ಸ್ಥಳದಲ್ಲಿಯೇ ಪಾಪಪರಿಹಾರಕ ಯಜ್ಞಪಶುವು ಯೆಹೋವನ ಸನ್ನಿಧಿಯಲ್ಲಿ ವಧಿಸಲ್ಪಡಬೇಕು. ಅದು ಮಹಾ ಪವಿತ್ರವಾಗಿದೆ. 26 ಪಾಪಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದನ್ನು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 27 ಪಾಪಪರಿಹಾರಕ ಯಜ್ಞದ ಮಾಂಸವು ತಗಲಿದ ವಸ್ತುವೂ ಪವಿತ್ರವಾಗುತ್ತದೆ; ಮುಟ್ಟುವ ವ್ಯಕ್ತಿಯೂ ಪವಿತ್ರವಾಗುವನು.

“ಚಿಮಿಕಿಸಲ್ಪಟ್ಟ ರಕ್ತದಲ್ಲಿ ಸ್ವಲ್ಪ ರಕ್ತವು ಯಾರ ಬಟ್ಟೆಯ ಮೇಲಾದರೂ ಬಿದ್ದರೆ, ನೀವು ಆ ಬಟ್ಟೆಗಳನ್ನು ಪವಿತ್ರಸ್ಥಳದಲ್ಲಿ ತೊಳೆಯಬೇಕು. 28 ಪಾಪಪರಿಹಾರಕ ಯಜ್ಞವನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಆ ಮಡಕೆಯನ್ನು ಒಡೆದುಹಾಕಬೇಕು. ಪಾಪಪರಿಹಾರಕ ಯಜ್ಞವನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಿದರೆ, ಆ ಪಾತ್ರೆಯನ್ನು ಉಜ್ಜಿ ನೀರಿನಲ್ಲಿ ತೊಳೆಯಬೇಕು.

29 “ಯಾಜಕನ ಕುಟುಂಬದಲ್ಲಿರುವ ಯಾವ ಪುರುಷನಾದರೂ ಪಾಪಪರಿಹಾರಕ ಯಜ್ಞದ ಮಾಂಸವನ್ನು ತಿನ್ನಬಹುದು. ಅದು ಬಹಳ ಪವಿತ್ರವಾಗಿದೆ. 30 ಆದರೆ ಪಾಪಪರಿಹಾರಕ ಯಜ್ಞದ ರಕ್ತವನ್ನು ದೇವದರ್ಶನಗುಡಾರದೊಳಗೆ ತೆಗೆದುಕೊಂಡು ಹೋಗಿ, ಜನರನ್ನು ಶುದ್ಧಿಗೊಳಿಸಲು ಪವಿತ್ರಸ್ಥಳದಲ್ಲಿ ಉಪಯೋಗಿಸಿದರೆ, ಆ ಪಾಪಪರಿಹಾರಕ ಯಜ್ಞವನ್ನು ಅಗ್ನಿಯಲ್ಲಿ ಸುಟ್ಟುಬಿಡಬೇಕು. ಯಾಜಕರು ಅದರ ಮಾಂಸವನ್ನು ತಿನ್ನಲೇಬಾರದು.

ದೋಷಪರಿಹಾರಕ ಯಜ್ಞಗಳು

“ದೋಷಪರಿಹಾರಕ ಯಜ್ಞದ ನಿಯಮಗಳು: ಅದು ಪವಿತ್ರವಾದದ್ದು. ಯಾಜಕನು ಸರ್ವಾಂಗಹೋಮ ಸಮರ್ಪಣೆಗಳ ಪಶುವನ್ನು ವಧಿಸುವ ಸ್ಥಳದಲ್ಲಿಯೇ ದೋಷಪರಿಹಾರಕ ಪಶುವನ್ನು ವಧಿಸಬೇಕು. ಬಳಿಕ ಯಾಜಕನು ದೋಷಪರಿಹಾರಕ ಯಜ್ಞದ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಬೇಕು.

“ಯಾಜಕನು ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನೆಲ್ಲಾ ಅರ್ಪಿಸಬೇಕು. ಅವನು ಬಾಲದ ಕೊಬ್ಬನ್ನು ಮತ್ತು ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೆಲ್ಲಾ ಸಮರ್ಪಿಸಬೇಕು. ಯಾಜಕನು ಅದರ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಅರ್ಪಿಸಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನು ಅರ್ಪಿಸಬೇಕು. ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮ ಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಹೋಮವಾಗಿರುವುದು. ಅದು ದೋಷಪರಿಹಾರಕ ಯಜ್ಞವಾಗಿದೆ.

“ಯಾಜಕನಾಗಿರುವ ಪ್ರತಿಯೊಬ್ಬನು ದೋಷಪರಿಹಾರಕ ಯಜ್ಞಮಾಂಸವನ್ನು ತಿನ್ನಬಹುದು. ಅದು ಬಹು ಪವಿತ್ರವಾಗಿರುವುದರಿಂದ ಅದನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕು. ದೋಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಒಂದೇ ರೀತಿಯ ನಿಯಮಗಳು ಈ ಎರಡು ಸಮರ್ಪಣೆಗಳಿಗೆ ಅನ್ವಯಿಸುತ್ತವೆ. ಯಜ್ಞ ಸಮರ್ಪಿಸುವ ಯಾಜಕನು ಆಹಾರಕ್ಕಾಗಿ ಅದರ ಮಾಂಸವನ್ನು ಪಡೆಯುವನು. ಯಜ್ಞಮಾಡುವ ಯಾಜಕನು ಸರ್ವಾಂಗಹೋಮ ಪಶುವಿನ ಚರ್ಮವನ್ನು ಪಡೆಯಬಹುದು. ಪ್ರತಿ ಧಾನ್ಯಸಮರ್ಪಣೆಯು ಅದನ್ನು ಅರ್ಪಿಸುವ ಯಾಜಕನಿಗೆ ಸೇರುತ್ತದೆ. ಒಲೆಯಲ್ಲಾಗಲಿ ಕಬ್ಬಿಣದ ಹಂಚಿನಲ್ಲಾಗಲಿ ಬಾಂಡ್ಲೆಯಲ್ಲಾಗಲಿ ಬೇಯಿಸಿದ ಧಾನ್ಯಸಮರ್ಪಣೆಗಳನ್ನು ಯಾಜಕನು ಪಡೆಯುವನು. 10 ಧಾನ್ಯಸಮರ್ಪಣೆಗಳು ಆರೋನನ ಪುತ್ರರಿಗೆ ಸೇರುವವು. ಅದು ಒಣಗಿದ್ದರೂ ಎಣ್ಣೆಯಿಂದ ಬೆರೆತಿದ್ದರೂ ಅವರಿಗೆ ಸೇರುವವು. ಯಾಜಕರಾದ ಆರೋನನ ಪುತ್ರರೆಲ್ಲರೂ ಈ ಆಹಾರವನ್ನು ಸಮವಾಗಿ ಹಂಚಿಕೊಳ್ಳುವರು.

ಸಮಾಧಾನಯಜ್ಞ ಕಟ್ಟಳೆಗಳು

11 “ಸಮಾಧಾನಯಜ್ಞದ ಕಟ್ಟಳೆಗಳು ಇಂತಿವೆ: ಯಾರಾದರೂ ಯೆಹೋವನಿಗೆ ಕೃತಜ್ಞತೆಯಿಂದ ಸಮಾಧಾನಯಜ್ಞಗಳನ್ನು ಅರ್ಪಿಸಬೇಕೆಂದಿದ್ದರೆ, 12 ಅವನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆ ಹೊಯಿದು ಮಾಡಿದ ಕಡುಬುಗಳನ್ನೂ ಎಣ್ಣೆಬೆರೆಸಿದ ಹೋಳಿಗೆಗಳನ್ನೂ ತರಬೇಕು. 13 ಅವನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಅರ್ಪಿಸುವ ಯಜ್ಞವೇ ಸಮಾಧಾನಯಜ್ಞವಾಗಿದೆ. ಈ ಯಜ್ಞದೊಡನೆ ಅವನು ಹುಳಿಯಿರುವ ರೊಟ್ಟಿಗಳ ನೈವೇದ್ಯವನ್ನು ಅರ್ಪಿಸಬೇಕು. 14 ಸಮರ್ಪಿಸಲ್ಪಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಒಂದೊಂದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಸಮಾಧಾನಯಜ್ಞದ ರಕ್ತವನ್ನು ಚಿಮಿಕಿಸುವ ಯಾಜಕನಿಗೆ ಇದು ಸಲ್ಲತಕ್ಕದ್ದು. 15 ಸಮಾಧಾನಯಜ್ಞದ ಮಾಂಸವನ್ನು ಅದು ಸಮರ್ಪಣೆಯಾದ ದಿನದಲ್ಲಿಯೇ ತಿನ್ನಬೇಕು. ಒಬ್ಬನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಈ ಕಾಣಿಕೆಯನ್ನು ಅರ್ಪಿಸುತ್ತಾನೆ. ಅದರ ಮಾಂಸದಲ್ಲಿ ಮರುದಿನದ ಮುಂಜಾನೆಯವರೆಗೆ ಏನೂ ಉಳಿಸಬಾರದು.

16 “ಯಾವನಾದರೂ ಸ್ವಇಚ್ಛೆಯ ಕಾಣಿಕೆಗಾಗಲಿ ಹರಕೆಯನ್ನು ಸಲ್ಲಿಸುವುದಕ್ಕಾಗಲಿ ಸಮಾಧಾನಯಜ್ಞ ಅರ್ಪಿಸಬಹುದು ಅಥವಾ ಆ ವ್ಯಕ್ತಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರೆ, ಅವನು ಅದರ ಯಜ್ಞಮಾಂಸವನ್ನು ಸಮರ್ಪಿಸಿದ ದಿನದಲ್ಲಿಯೇ ತಿನ್ನಬೇಕು. ಉಳಿದದ್ದನ್ನು ಮರುದಿನ ತಿನ್ನಬೇಕು. 17 ಆದರೆ ಈ ಯಜ್ಞಪಶುವು ಮೂರನೆಯ ದಿನದವರೆಗೆ ಉಳಿದರೆ, ಅದನ್ನು ಬೆಂಕಿಯಲ್ಲಿ ಸುಡಬೇಕು. 18 ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು.

19 “ಮಾತ್ರವಲ್ಲದೆ ಜನರು ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನಬಾರದು. ಅವರು ಈ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಶುದ್ಧನಾಗಿರುವ ಪ್ರತಿಯೊಬ್ಬನು ಸಮಾಧಾನ ಸಮರ್ಪಣೆಯ ಮಾಂಸವನ್ನು ತಿನ್ನಬಹುದು. 20 ಆದರೆ ಒಬ್ಬನು ಅಶುದ್ಧನಾಗಿದ್ದು ಯೆಹೋವನಿಗೆ ಸೇರಿದ ಸಮಾಧಾನ ಸಮರ್ಪಣೆಗಳ ಮಾಂಸವನ್ನು ತಿಂದರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.

21 “ಒಬ್ಬನಿಗೆ ಮನುಷ್ಯದೇಹದಿಂದ ಆಗಿರುವ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧ ವಸ್ತು ಇವುಗಳಲ್ಲಿ ಯಾವುದಾದರೂ ಸ್ಪರ್ಶವಾಗಿದ್ದರೆ ಅವನು ಅಶುದ್ಧನಾಗಿದ್ದಾನೆ. ಅವನು ಯೆಹೋವನಿಗೆ ಸೇರಿದ ಸಮಾಧಾನಯಜ್ಞಗಳ ಮಾಂಸವನ್ನು ತಿಂದರೆ, ಅವನನ್ನು ಕುಲದಿಂದ ತೆಗೆದುಹಾಕಬೇಕು.”

22 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ಇಸ್ರೇಲರಿಗೆ ಹೀಗೆ ಹೇಳು: ನೀವು ದನಗಳ, ಕುರಿಗಳ ಅಥವಾ ಹೋತಗಳ ಕೊಬ್ಬನ್ನು ತಿನ್ನಬಾರದು. 24 ನೀವು ತನ್ನಷ್ಟಕ್ಕೆ ತಾನೇ ಸತ್ತ ಪ್ರಾಣಿಯ ಅಥವಾ ಬೇರೆ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಂದಿಗೂ ತಿನ್ನಬಾರದು. 25 ಯಾವನಾದರೂ ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾದ ಪಶುವಿನ ಕೊಬ್ಬನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಬೇಕು.

26 “ನೀವು ಎಲ್ಲಿಯೇ ವಾಸಿಸಿದರೂ, ಯಾವುದೇ ಪಕ್ಷಿಯ ಅಥವಾ ಯಾವುದೇ ಪ್ರಾಣಿಯ ರಕ್ತವನ್ನು ನೀವು ಎಂದಿಗೂ ತಿನ್ನಬಾರದು. 27 ಯಾವನಾದರೂ ರಕ್ತವನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಲ್ಪಡಬೇಕು.”

ನೈವೇದ್ಯಸಮರ್ಪಣೆಯ ನಿಯಮಗಳು

28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 29 “ಇಸ್ರೇಲರಿಗೆ ಹೇಳು. ಒಬ್ಬನು ಯೆಹೋವನಿಗೆ ಸಮಾಧಾನಯಜ್ಞಕ್ಕಾಗಿ ಪಶುವನ್ನು ತಂದರೆ, ಯೆಹೋವನಿಗೆ ಸಲ್ಲತಕ್ಕ ಭಾಗವನ್ನು ಆತನಿಗೆ ಕೊಡಬೇಕು. 30 ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು. 31 ಬಳಿಕ ಯಾಜಕನು ವೇದಿಕೆಯ ಮೇಲೆ ಕೊಬ್ಬನ್ನು ಹೋಮಮಾಡಬೇಕು. ಆದರೆ ಪಶುವಿನ ಎದೆಯ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿದೆ. 32 ನೀವು ಸಮಾಧಾನಯಜ್ಞದ ಪಶುವಿನ ಬಲತೊಡೆಯನ್ನು ಸಹ ಯಾಜಕನಿಗೆ ಕೊಡಬೇಕು. 33 ಪಶುವಿನ ಬಲ ತೊಡೆಯ ಭಾಗವು ಸಮಾಧಾನಯಜ್ಞದಲ್ಲಿ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುವ ಯಾಜಕನಿಗೆ ಸೇರುತ್ತವೆ. 34 ನೈವೇದ್ಯರೂಪವಾಗಿ ನಿವಾಳಿಸುವ ಸಮರ್ಪಣೆಯಲ್ಲಿ ಪಶುವಿನ ಎದೆಯ ಭಾಗವನ್ನು ಮತ್ತು ಸಮಾಧಾನಯಜ್ಞಗಳಲ್ಲಿ ಪಶುವಿನ ಬಲ ತೊಡೆಯನ್ನು ಯೆಹೋವನಾದ ನಾನು ಇಸ್ರೇಲರಿಂದ ತೆಗೆದುಕೊಂಡು ಆರೋನನಿಗೂ ಅವನ ಪುತ್ರರಿಗೂ ಕೊಡುತ್ತಿದ್ದೇನೆ. ಇಸ್ರೇಲರು ಈ ನಿಯಮಕ್ಕೆ ಎಂದೆಂದಿಗೂ ವಿಧೇಯರಾಗಬೇಕು.”

35 ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳಲ್ಲಿ ಇವೇ ಆರೋನನಿಗೂ ಅವನ ಪುತ್ರರಿಗೂ ಕೊಡಲ್ಪಟ್ಟ ಭಾಗಗಳಾಗಿವೆ. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ[d] ಸೇವೆ ಮಾಡುವಾಗಲೆಲ್ಲಾ ಯಜ್ಞಗಳಲ್ಲಿ ಆ ಪಾಲನ್ನು ಪಡೆಯುವರು. 36 ಯೆಹೋವನು ಯಾಜಕರನ್ನು ಅಭಿಷೇಕಿಸಿದ ಸಮಯದಲ್ಲಿ ಆತನು ಯಾಜಕರಿಗೆ ಆ ಭಾಗಗಳನ್ನು ಕೊಡಬೇಕೆಂಬುದಾಗಿ ಇಸ್ರೇಲರಿಗೆ ಆಜ್ಞಾಪಿಸಿದನು. ಜನರು ಯಾಜಕರಿಗೆ ಆ ಭಾಗಗಳನ್ನು ಎಂದೆಂದಿಗೂ ಕೊಡಬೇಕು.

37 ಅವುಗಳೇ ಸರ್ವಾಂಗಹೋಮಗಳ, ಧಾನ್ಯಸಮರ್ಪಣೆಗಳ, ಪಾಪಪರಿಹಾರಕ ಯಜ್ಞಗಳ, ದೋಷಪರಿಹಾರಕ ಯಜ್ಞಗಳ, ಸಮಾಧಾನಯಜ್ಞಗಳ ಮತ್ತು ಯಾಜಕರನ್ನು ಪ್ರತಿಷ್ಠಿಸುವ ನಿಯಮಗಳಾಗಿವೆ. 38 ಯೆಹೋವನು ಮೋಶೆಗೆ ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಕೊಟ್ಟನು. ಇಸ್ರೇಲರು ಯೆಹೋವನಿಗೆ ತಮ್ಮ ಯಜ್ಞಗಳನ್ನು ಅರ್ಪಿಸಬೇಕೆಂದು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸಿದ ದಿನದಲ್ಲಿ ಯೆಹೋವನು ಆ ನಿಯಮಗಳನ್ನು ಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International