Beginning
ಐದನೆಯ ತುತೂರಿ—ಮೊದಲನೆ ವಿಪತ್ತು
9 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[a] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. 2 ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.
3 ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. 4 ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. 5 ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. 6 ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.
7 ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. 8 ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. 9 ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.
12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.
ಆರನೇ ತುತೂರಿಯ ಪ್ರಾರಂಭ
13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಸನ್ನಿಧಿಯಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲಿನ ಕೊಂಬುಗಳಿಂದ ಬರುತ್ತಿರುವ ಧ್ವನಿಯನ್ನು ನಾನು ಕೇಳಿದೆನು. 14 ಆ ಧ್ವನಿಯು ತುತೂರಿಯಿದ್ದ ಆರನೆಯ ದೇವದೂತನಿಗೆ, “ಯೂಫ್ರಟಿಸ್ ಎಂಬ ಮಹಾನದಿಯ ಬಳಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಈ ನಾಲ್ಕು ಮಂದಿ ದೇವದೂತರನ್ನು ಇದೇ ವರ್ಷ, ಇದೇ ತಿಂಗಳು, ಇದೇ ದಿನ, ಇದೇ ತಾಸಿಗಾಗಿ ಸಿದ್ಧಪಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಹರಿಸಲು ಇವರನ್ನು ಬಿಡುಗಡೆ ಮಾಡಲಾಯಿತು. 16 ಅವರಲ್ಲಿದ್ದ ಅಶ್ವದಳದ ಸೈನಿಕರ ಸಂಖ್ಯೆ ಇಪ್ಪತ್ತುಕೋಟಿ ಎಂದು ನನಗೆ ಕೇಳಿಸಿತು.
17 ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸವಾರರನ್ನೂ ನೋಡಿದೆನು. ಅವರು ಹೀಗೆ ಕಾಣುತ್ತಿದ್ದರು: ಅವರು ಬೆಂಕಿಯಂತೆ ಕೆಂಪಾದ, ಕಪ್ಪಾದ, ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಣುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕಗಳು ಬರುತ್ತಿದ್ದವು. 18 ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೊಗೆ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲ್ಪಟ್ಟಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ಜನರನ್ನು ಕಚ್ಚಬಲ್ಲ ಹೆಡೆಗಳುಳ್ಳ ಸರ್ಪಗಳಂತೆ ಇದ್ದವು.
20 ಈ ಉಪದ್ರವಗಳಿಂದ ಸಾಯದೆ ಉಳಿದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಕೈಗಳಿಂದ ನಿರ್ಮಿಸಿದ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಅವರು ದೆವ್ವಗಳ ಆರಾಧನೆಯನ್ನು ನಿಲ್ಲಿಸಲಿಲ್ಲ. ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಿಂದ ಮಾಡಲ್ಪಟ್ಟು, ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವುದನ್ನು ಅವರು ನಿಲ್ಲಿಸಲಿಲ್ಲ. 21 ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ ಮತ್ತು ಇತರರನ್ನು ಕೊಲ್ಲುವುದನ್ನು ಬಿಟ್ಟುಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟಮಂತ್ರಗಳನ್ನು, ಲೈಂಗಿಕ ಪಾಪಗಳನ್ನು ಮತ್ತು ಕಳ್ಳತನವನ್ನು ತೊರೆದುಬಿಡಲಿಲ್ಲ.
ದೇವದೂತನು ಮತ್ತು ಚಿಕ್ಕ ಸುರುಳಿ
10 ನಂತರ ಮತ್ತೊಬ್ಬ ಬಲಿಷ್ಠನಾದ ದೇವದೂತನೊಬ್ಬನು ಪರಲೋಕದಿಂದ ಇಳಿದುಬರುವುದನ್ನು ನಾನು ನೋಡಿದೆನು. ಆ ದೇವದೂತನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಸುತ್ತಲೂ ಕಾಮನಬಿಲ್ಲಿತ್ತು. ಆ ದೇವದೂತನ ಮುಖವು ಸೂರ್ಯನಂತೆಯೂ ಅವನ ಕಾಲುಗಳು ಬೆಂಕಿಯ ಕಂಬಗಳಂತೆಯೂ ಇದ್ದವು. 2 ಆ ದೇವದೂತನು ಒಂದು ಚಿಕ್ಕ ಸುರುಳಿಯನ್ನು ಹಿಡಿದಿದ್ದನು. ಅವನ ಕೈಯಲ್ಲಿದ್ದ ಸುರುಳಿಯು ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲೆಯೂ, ತನ್ನ ಎಡಪಾದವನ್ನು ಭೂಮಿಯ ಮೇಲೆಯೂ ಇಟ್ಟು, 3 ಸಿಂಹ ಗರ್ಜಿಸುವಂತೆ ಗಟ್ಟಿಯಾಗಿ ಆರ್ಭಟಿಸಿದನು. ಆ ಬಳಿಕ ಏಳು ಗುಡುಗುಗಳ ಧ್ವನಿಯು ಮಾತನಾಡಿತು.
4 ಅದನ್ನು ನಾನು ಬರೆಯಬೇಕೆಂದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯು ನನಗೆ, “ಏಳು ಗುಡುಗುಗಳು ಹೇಳಿದ್ದನ್ನು ನೀನು ಬರೆಯಬೇಡ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು ಹೇಳಿತು.
5 ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಒಬ್ಬ ದೇವದೂತನನ್ನು ಕಂಡೆನು. ಅವನು ತನ್ನ ಬಲಗೈಯನ್ನು ಪರಲೋಕದತ್ತ ಚಾಚಿದನು. 6 ಆ ದೇವದೂತನು ಯುಗ ಯುಗಾಂತರಗಳಲ್ಲಿಯೂ ನೆಲೆಸಿರುವಾತನ ಮತ್ತು ಆಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸ್ಟಿದಾತನ ಶಕ್ತಿಯಿಂದ ಹೀಗೆ ವಾಗ್ದಾನವನ್ನು ಮಾಡಿದನು: “ಇನ್ನು ಕಾಯುವ ಅಗತ್ಯವಿಲ್ಲ; 7 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.”
8 ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು ನನಗೆ, “ಹೋಗು, ದೇವದೂತನ ಕೈಯಲ್ಲಿರುವ ಬಿಚ್ಚಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದ್ದಾನೆ” ಎಂದು ಹೇಳಿತು.
9 ಆದ್ದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂದುಬಿಡು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10 ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಬಳಿಕ, ಅದು ನನ್ನ ಹೊಟ್ಟೆಯಲ್ಲಿ ಕಹಿಯಾಯಿತು. 11 ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.
ಇಬ್ಬರು ಸಾಕ್ಷಿಗಳು
11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. 2 ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. 3 ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”
4 ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. 5 ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. 6 ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.
7 ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. 8 ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[b] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. 9 ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.
11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.
13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.
14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.
ಏಳನೆಯ ತುತೂರಿ
15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:
“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”
16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”
19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.
ಸ್ತ್ರೀ ಮತ್ತು ಘಟಸರ್ಪ
12 ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. 2 ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು.
3 ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು. 4 ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು.
5 ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು. 6 ಆ ಸ್ತ್ರೀಯು ತನಗಾಗಿ ದೇವರು ಸಿದ್ಧಪಡಿಸಿದ್ದ ಮರುಳುಗಾಡಿನ ಒಂದು ಸ್ಥಳಕ್ಕೆ ಓಡಿಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪೋಷಿಸಲಾಗುವುದು.
7 ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು. 8 ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. 9 ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.
10 ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು. 11 ನಮ್ಮ ಸಹೋದರರು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಸೋಲಿಸಿದರು. ಅವರು ತಮ್ಮ ಜೀವಗಳನ್ನು ಪ್ರೀತಿಸಲಿಲ್ಲ. ಅವರು ಮರಣಕ್ಕೆ ಭಯಪಡಲಿಲ್ಲ. 12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.”
13 ಘಟಸರ್ಪಕ್ಕೆ ತನ್ನನ್ನು ಭೂಮಿಗೆ ತಳ್ಳಿಬಿಟ್ಟಿರುವುದು ತಿಳಿಯಿತು. ಆದ್ದರಿಂದ ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು. 14 ಆದರೆ ಆ ಸ್ತ್ರೀಗೆ ಮಹಾಗರುಡನ ಎರಡು ರೆಕ್ಕೆಗಳನ್ನು ಕೊಡಲ್ಪಟ್ಟದ್ದರಿಂದ, ತನಗಾಗಿ ಮರುಳುಗಾಡಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಹಾರಿ ಹೋಗಲು ಆಕೆಗೆ ಸಾಧ್ಯವಾಯಿತು. ಅಲ್ಲಿ ಅವಳು ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುತ್ತಾ ಸರ್ಪಕ್ಕೆ ಕಾಣದಂತೆ ಮರೆಯಾಗಿರುವಳು.
15 ಆಗ ಸರ್ಪವು ತನ್ನ ಬಾಯಿಂದ ನದಿಯಂತೆ ನೀರನ್ನು ಹೊರಚೆಲ್ಲಿತು. ಆ ಪ್ರವಾಹದ ನೀರು ಅವಳನ್ನು ಕೊಚ್ಚಿ ಕೊಂಡುಹೋಗಲಿ ಎಂಬುದೇ ಆ ಘಟಸರ್ಪದ ಉದ್ದೇಶವಾಗಿತ್ತು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಲು ತನ್ನ ಬಾಯನ್ನು ತೆರೆದು, ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು. 17 ಆಗ ಘಟ ಸರ್ಪವು ಆ ಸ್ತ್ರೀಯ ಮೇಲೆ ಬಹಳ ಕೋಪಗೊಂಡು ಆಕೆಯ ಇತರ ಮಕ್ಕಳೆಲ್ಲರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಅನುಸರಿಸುವವರ ಮತ್ತು ಯೇಸುವಿನ ಕುರಿತು ಸಾಕ್ಷಿ ಹೇಳುವವರ ಮೇಲೆ ಹೋರಾಟ ಮಾಡಲು ಹೋಯಿತು.
18 ಆ ಘಟಸರ್ಪವು ಸಮುದ್ರತೀರದಲ್ಲಿ ನಿಂತುಕೊಂಡಿತು.
Kannada Holy Bible: Easy-to-Read Version. All rights reserved. © 1997 Bible League International