Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಯೋಹಾನ

ಸಭಾಹಿರಿಯನು, ದೇವರಿಂದ ಆಯ್ಕೆಯಾದ ಅಮ್ಮನವರಿಗೆ ಮತ್ತು ಆಕೆಯ ಮಕ್ಕಳಿಗೆ ಬರೆಯುವ ಪತ್ರ.

ನಾನು ನಿಮ್ಮೆಲ್ಲರನ್ನು ಸತ್ಯದಲ್ಲಿ ಪ್ರೀತಿಸುತ್ತೇನೆ. ಸತ್ಯವನ್ನು ತಿಳಿದಿರುವ ಜನರೆಲ್ಲರೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ನಿಮಿತ್ತ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಈ ಸತ್ಯವು ನಮ್ಮಲ್ಲಿ ಸದಾಕಾಲ ಇರುವುದು.

ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿ ನಮ್ಮೊಂದಿಗಿರುತ್ತವೆ. ನಾವು ಈ ಆಶೀರ್ವಾದಗಳನ್ನು ಸತ್ಯದ ಮತ್ತು ಪ್ರೀತಿಯ ಮೂಲಕ ಪಡೆಯುತ್ತೇವೆ.

ನಿಮ್ಮ ಮಕ್ಕಳಲ್ಲಿ ಕೆಲವರ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಯಿತು. ತಂದೆಯಾದ ದೇವರು ನಮಗೆ ಆಜ್ಞಾಪಿಸಿದ ಸತ್ಯಮಾರ್ಗವನ್ನು ಅವರು ಅನುಸರಿಸುತ್ತಿರುವುದರಿಂದ ನನಗೆ ಸಂತೋಷವಾಯಿತು. ಪ್ರಿಯ ಅಮ್ಮನವರೇ, ಈಗ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಹೊಸ ಆಜ್ಞೆಯಾಗಿರದೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ. ಆತನು ಆಜ್ಞಾಪಿಸಿದ ಮಾರ್ಗದಲ್ಲಿ ಜೀವಿಸುವುದೇ ಪ್ರೀತಿ. ನೀವು ಪ್ರೀತಿಯಿಂದ ಬಾಳಬೇಕೆಂಬುದೇ ದೇವರ ಆಜ್ಞೆ. ನೀವು ಆರಂಭದಿಂದಲೂ ಈ ಆಜ್ಞೆಯನ್ನು ಕೇಳಿರುವಿರಿ.

ಈಗ ಲೋಕದಲ್ಲಿ ಅನೇಕ ಸುಳ್ಳುಬೋಧಕರಿದ್ದಾರೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಮನುಷ್ಯನಾಗಿ ಬಂದನೆಂಬುದನ್ನು ಈ ಸುಳ್ಳುಬೋಧಕರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದವನು ಸುಳ್ಳುಬೋಧಕನಾಗಿದ್ದಾನೆ ಮತ್ತು ಯೇಸು ಕ್ರಿಸ್ತನ ವೈರಿಯಾಗಿದ್ದಾನೆ. ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.

ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ ಹೋಗುವವನು ದೇವರನ್ನು ಹೊಂದಿಲ್ಲ. ಆದರೆ ಆ ಉಪದೇಶದಲ್ಲಿ ನೆಲೆಗೊಂಡಿರುವವನು ತಂದೆಯನ್ನೂ ಮಗನನ್ನೂ ಹೊಂದಿದ್ದಾನೆ. 10 ನಿಮ್ಮ ಬಳಿಗೆ ಬರುವವನು ಈ ಉಪದೇಶವನ್ನು ಹೊಂದಿಲ್ಲದಿದ್ದರೆ ಅವನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಅವನನ್ನು ಸ್ವಾಗತಿಸಬೇಡಿ. 11 ನೀವು ಅವನನ್ನು ಸ್ವಾಗತಿಸಿದರೆ ಅವನ ಕೆಟ್ಟಕಾರ್ಯಕ್ಕೆ ನೀವೂ ಸಹಾಯ ಮಾಡಿದಂತಾಗುವುದು.

12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ. 13 ದೇವರಿಂದ ಆಯ್ಕೆಗೊಂಡವಳಾದ ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ.

3 ಯೋಹಾನ

ಸಭಾಹಿರಿಯನು, ತಾನು ಸತ್ಯವಾಗಿಯೂ ಪ್ರೀತಿಸುವ,

ತನ್ನ ಪ್ರಿಯ ಸ್ನೇಹಿತನಾದ ಗಾಯನಿಗೆ ಬರೆಯುವ ಪತ್ರ.

ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ. ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು. ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.

ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ! ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು. ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ. ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.

ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ. 10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.

11 ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.

12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.

13 ನಾನು ನಿನಗೆ ಹೇಳಲಿಚ್ಛಿಸುವ ಅನೇಕ ವಿಚಾರಗಳಿವೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲು ಇಚ್ಛಿಸುವುದಿಲ್ಲ. 14 ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು. 15 ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಅಲ್ಲಿರುವ ಸ್ನೇಹಿತರಿಗೆಲ್ಲ ದಯವಿಟ್ಟು ನಮ್ಮ ವಂದನೆಯನ್ನು ತಿಳಿಸು.

ಯೂದನು

ಯೇಸು ಕ್ರಿಸ್ತನ ಸೇವಕನೂ ಯಾಕೋಬನ ಸಹೋದರನೂ ಆಗಿರುವ ಯೂದನು ದೇವರಿಂದ ಕರೆಯಲ್ಪಟ್ಟವರಿಗೂ ತಂದೆಯಾದ ದೇವರಿಗೆ ಪ್ರಿಯರಾದವರಿಗೂ ಯೇಸು ಕ್ರಿಸ್ತನಲ್ಲಿ ಸುರಕ್ಷಿತವಾಗಿಡಲ್ಪಟ್ಟವರಿಗೂ ಬರೆಯವ ಪತ್ರ.

ನಿಮಗೆ ಕರುಣೆ, ಶಾಂತಿ ಮತ್ತು ಪ್ರೀತಿ ಹೆಚ್ಚಾಗಲಿ.

ತಪ್ಪು ಮಾಡಿದ ಜನರನ್ನು ದೇವರು ದಂಡಿಸುತ್ತಾನೆ

ಪ್ರಿಯ ಸ್ನೇಹಿತರೇ, ನಾವೆಲ್ಲರೂ ಹಂಚಿಕೊಳ್ಳುವ ರಕ್ಷಣೆಯನ್ನು ಕುರಿತು ನಿಮಗೆ ಬರೆಯಬೇಕೆಂದು ನಾನು ಬಹಳವಾಗಿ ಇಚ್ಛಿಸಿದ್ದೆನು. ಆದರೆ ಮತ್ತೊಂದು ವಿಷಯದ ಬಗ್ಗೆ ನಾನು ನಿಮಗೆ ಬರೆಯುವುದು ಅಗತ್ಯವೆನಿಸಿತು. ದೇವರು ತನ್ನ ಪರಿಶುದ್ಧ ಜನರಿಗೆ ದಯಪಾಲಿಸಿರುವ ನಂಬಿಕೆಗಾಗಿ ನೀವು ಪ್ರಯಾಸಪಟ್ಟು ಹೋರಾಡುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಚ್ಛಿಸುತ್ತೇನೆ. ದೇವರು ನಮಗೆ ಈ ನಂಬಿಕೆಯನ್ನು ಒಂದೇಸಲ ದಯಪಾಲಿಸಿದನು. ಅದು ಸರ್ವಕಾಲಗಳಲ್ಲಿಯೂ ಒಳ್ಳೆಯದಾಗಿದೆ. ಕೆಲವು ಜನರು ರಹಸ್ಯವಾಗಿ ನಿಮ್ಮ ಸಭೆಯಲ್ಲಿ ಪ್ರವೇಶಿಸಿದ್ದಾರೆ. ಇವರಿಗಾಗುವ ದಂಡನೆಯ ಕುರಿತು ಬಹುಕಾಲದ ಹಿಂದೆಯೇ ಪ್ರವಾದಿಗಳು ಬರೆದಿದ್ದಾರೆ. ಈ ಜನರು ದೇವರಿಗೆ ವಿರುದ್ಧವಾಗಿದ್ದಾರೆ. ಅವರು ಪಾಪಕೃತ್ಯಗಳನ್ನು ಮಾಡುವುದಕ್ಕಾಗಿ ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಅವರು ನಮ್ಮ ಒಬ್ಬನೇ ಒಡೆಯನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನನ್ನು ಹಿಂಬಾಲಿಸದವರಾಗಿದ್ದಾರೆ.

ನೀವು ಈಗಾಗಲೇ ತಿಳಿದುಕೊಂಡಿರುವ ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳಲು ನಾನು ನಿಮಗೆ ಸಹಾಯ ಮಾಡಲಿಚ್ಛಿಸುತ್ತೇನೆ. ಪ್ರಭುವು ತನ್ನ ಜನರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ಅವರನ್ನು ರಕ್ಷಿಸಿದನೆಂಬುದನ್ನು ನೆನಪು ಮಾಡಿಕೊಳ್ಳಿರಿ. ತರುವಾಯ ಪ್ರಭುವು ನಂಬಿಕೆಯಿಲ್ಲದ ಜನರೆಲ್ಲರನ್ನೂ ನಾಶಪಡಿಸಿದನು. ದೇವದೂತರು ಅಧಿಕಾರವನ್ನು ಹೊಂದಿದ್ದರೂ ಅದನ್ನು ಉಳಿಸಿಕೊಳ್ಳಲಾರದೆ ಸ್ವಂತ ವಾಸಸ್ಥಾನವನ್ನು ಬಿಟ್ಟುಹೋದದ್ದನ್ನು ನೆನಸಿಕೊಳ್ಳಿರಿ. ಆದ್ದರಿಂದ ಪ್ರಭುವು ಈ ದೇವದೂತರನ್ನು ಅಂಧಕಾರದಲ್ಲಿಟ್ಟನು. ಅವರನ್ನು ಶಾಶ್ವತವಾದ ಬೇಡಿಗಳಿಂದ ಬಂಧಿಸಲಾಯಿತು. ಮಹಾದಿನದಂದು ಅವರಿಗೆ ತೀರ್ಪು ನೀಡುವುದಕ್ಕಾಗಿ ಆತನು ಅವರನ್ನು ಅಲ್ಲಿಟ್ಟಿದ್ದಾನೆ. ಸೊದೋಮ್ ಮತ್ತು ಗೊಮೋರ ನಗರಗಳನ್ನೂ ಅವುಗಳ ಸುತ್ತಲಿನ ಪಟ್ಟಣಗಳನ್ನೂ ನೆನಪು ಮಾಡಿಕೊಳ್ಳಿರಿ. ಅವುಗಳೂ ಆ ದೇವದೂತರಂತಾದವು. ಆ ಪಟ್ಟಣಗಳಲ್ಲಿ ಲೈಂಗಿಕ ಪಾಪಗಳು ಮತ್ತು ಕೆಟ್ಟಕಾರ್ಯಗಳು ತುಂಬಿಕೊಂಡಿದ್ದವು. ಅವರು ನಿತ್ಯವಾದ ಬೆಂಕಿಯ ದಂಡನೆಯಿಂದ ಸಂಕಟಪಡುವರು. ಅವರಿಗೆ ನೀಡಿದ ದಂಡನೆಯು ನಮಗೊಂದು ದೃಷ್ಟಾಂತವಾಗಿದೆ.

ನಿಮ್ಮ ಸಭೆಯಲ್ಲಿ ಪ್ರವೇಶಿಸಿರುವ ಜನರಿಗೂ ಇದೇ ರೀತಿಯಾಗುವುದು. ಅವರ ಕನಸುಗಳೇ ಅವರಿಗೆ ಮಾರ್ಗದರ್ಶಿಯಾಗಿವೆ. ಅವರು ಪಾಪಗಳಿಂದಲೇ ತಮ್ನನ್ನು ಮಲಿನ ಮಾಡಿಕೊಳ್ಳುತ್ತಾರೆ. ಅವರು ಪ್ರಭುವಿನ ಅಧಿಕಾರವನ್ನು ತಿರಸ್ಕರಿಸುತ್ತಾರೆ; ಪ್ರಭಾವದಿಂದ ಕೂಡಿದ ದೇವದೂತರ ವಿರುದ್ಧ ಕೆಟ್ಟದ್ದನ್ನು ಹೇಳುತ್ತಾರೆ. ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.

10 ಆದರೆ ಈ ಜನರು ತಮಗೆ ಅರ್ಥವಾಗದ್ದನ್ನೂ ಟೀಕಿಸುತ್ತಾರೆ. ಅವರಿಗೂ ಸ್ವಲ್ಪ ಅರ್ಥವಾಗುತ್ತದೆ. ಆದರೆ ಅವರು ವಿವೇಕಶೂನ್ಯ ಪ್ರಾಣಿಗಳಂತೆ ಸಹಜಪ್ರವೃತ್ತಿಯಿಂದ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಹೊರತು ವಿವೇಚನೆಯಿಂದ ಅರ್ಥಮಾಡಿಕೊಳ್ಳುವುದಿಲ್ಲ. ಇವುಗಳೇ ಅವರನ್ನು ನಾಶಮಾಡುತ್ತವೆ. 11 ಅವರಿಗೆ ದುರ್ಗತಿಯಾಗುವುದು. ಈ ಜನರು ಕಾಯಿನನ ಮಾರ್ಗವನ್ನು ಅನುಸರಿಸುತ್ತಾರೆ. ಇವರು ದ್ರವ್ಯ ಸಂಪಾದನೆಗಾಗಿ, ಬಿಳಾಮನ ತಪ್ಪುಮಾರ್ಗದಲ್ಲಿ ನಡೆಯಲು ತಮ್ಮನ್ನೇ ಒಪ್ಪಿಸಿಕೊಟ್ಟಿದ್ದಾರೆ. ಕೋರಹನು ಮಾಡಿದಂತೆ ಈ ಜನರೂ ದೇವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಅವರು ಕೋರಹನಂತೆ ನಾಶವಾಗುತ್ತಾರೆ.

12 ನಿಮ್ಮ ಅನ್ಯೋನ್ಯತೆಯ ಭೋಜನದಲ್ಲಿ ಈ ಜನರು ಮುಳುಗಿಹೋದ ಬಂಡೆಗಳಂತಿದ್ದಾರೆ. ಅವರು ಭಯವಿಲ್ಲದೆ ನಿಮ್ಮ ಜೊತೆಯಲ್ಲಿ ತಿನ್ನುತ್ತಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಕುರುಬರಾಗಿದ್ದಾರೆ. ಅವರು ನೀರಿಲ್ಲದ ಮೋಡಗಳಂತಿದ್ದಾರೆ. ಗಾಳಿಯು ಆ ಮೋಡಗಳನ್ನು ಬಡಿದುಕೊಂಡು ಹೋಗುವುದು. ಅವರು ಕಾಲಕ್ಕೆ ತಕ್ಕಂತೆ ಫಲಬಿಡದ ಮತ್ತು ಬೇರುಸಹಿತ ಕಿತ್ತುಬಂದು ಉರುಳಿಹೋದ ಮರಗಳಿಂತಿದ್ದಾರೆ. 13 ಇವರು ಸಮುದ್ರದಲ್ಲಿನ ಭೀಕರವಾದ ಅಲೆಗಳಂತಿದ್ದಾರೆ. ಈ ಅಲೆಗಳು ನೊರೆಯನ್ನು ಕಾರುವಂತೆ ಇವರು ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುತ್ತಾರೆ. ಈ ಜನರು ಆಕಾಶದಲ್ಲಿ ಅಲೆಯುವ ನಕ್ಷತ್ರಗಳಂತಿದ್ದಾರೆ. ಇವರಿಗಾಗಿ ಶಾಶ್ವತವಾದ ಕಾರ್ಗತ್ತಲಿನ ಸ್ಥಳವನ್ನು ಕಾದಿರಿಸಲಾಗಿದೆ.

14 ಆದಾಮನ ಏಳನೆಯ ತಲೆಮಾರಿನವನಾದ ಹನೋಕನು ಈ ಜನರನ್ನು ಕುರಿತು ಹೀಗೆ ಹೇಳಿದ್ದಾನೆ: “ಇಗೋ, ಪ್ರಭುವು ತನ್ನ ಲಕ್ಷಾಂತರ ಪರಿಶುದ್ಧ ದೂತರೊಂದಿಗೆ ಬರುತ್ತಿದ್ದಾನೆ. 15 ಪ್ರಭುವು ಪ್ರತಿಯೊಬ್ಬರಿಗೂ ನ್ಯಾಯತೀರಿಸುತ್ತಾನೆ. ಭಕ್ತಿಹೀನರು ತನಗೆ ವಿರುದ್ಧವಾಗಿ ಮಾಡಿದ ಎಲ್ಲಾ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತನಗೆ ವಿರುದ್ಧವಾಗಿ ಆಡಿದ ಎಲ್ಲಾ ದೂಷಣೆಗಳನ್ನು ಖಂಡಿಸಲು ಆತನು ಬರುತ್ತಾನೆ.”

16 ಈ ದುರ್ಬೋಧಕರಾದರೋ ಗುಣುಗುಟ್ಟುವವರೂ ತಪ್ಪು ಹುಡುಕುವವರೂ ದುರಾಶೆಗಳಿಗೆ ಬಲಿಯಾದವರೂ ಬಡಾಯಿಕೊಚ್ಚುವವರೂ ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರೂ ಆಗಿದ್ದಾರೆ.

ಎಚ್ಚರಿಕೆ ಮತ್ತು ಮಾಡಬೇಕಾದ ಕಾರ್ಯಗಳು

17 ಪ್ರಿಯ ಸ್ನೇಹಿತರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಪೊಸ್ತಲರು ಮುಂಚೆ ಏನು ಹೇಳಿದರೆಂಬುದನ್ನು ನೆನಪು ಮಾಡಿಕೊಳ್ಳಿ. 18 ಅಪೊಸ್ತಲರು ನಿಮಗೆ, “ಅಂತ್ಯಕಾಲದಲ್ಲಿ ದೇವರನ್ನು ಕುರಿತು ನಗುವ ಜನರಿರುತ್ತಾರೆ” ಎಂದು ಹೇಳಿದರು. ಈ ಜನರು ತಮ್ಮ ಇಚ್ಛೆಗನುಸಾರವಾದ ಮತ್ತು ದೇವರಿಗೆ ವಿರುದ್ಧವಾದವುಗಳನ್ನು ಮಾತ್ರ ಮಾಡುವವರಾಗಿರುತ್ತಾರೆ. 19 ಈ ಜನರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾರೆ. ಈ ಜನರು ತಮ್ಮ ಪಾಪಸ್ವಭಾವದ ಅಪೇಕ್ಷೆಯಂತೆ ಮಾತ್ರ ಮಾಡುತ್ತಾರೆ. ಅವರಲ್ಲಿ ಪವಿತ್ರಾತ್ಮನಿಲ್ಲ.

20 ಆದರೆ ಪ್ರಿಯ ಸ್ನೇಹಿತರೇ, ನೀವು ನಿಮ್ಮ ಅತಿಪರಿಶುದ್ಧ ನಂಬಿಕೆಯ ಮೂಲಕ ದೃಢವಾಗಿರಿ. ಪವಿತ್ರಾತ್ಮಭರಿತರಾಗಿ ಪ್ರಾರ್ಥಿಸಿರಿ. 21 ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ. ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಭುವಾದ ಯೇಸು ಕ್ರಿಸ್ತನ ಕರುಣೆಯನ್ನೇ ಎದುರುನೋಡುತ್ತಿರಿ.

22 ಸಂದೇಹವಿರುವ ಜನರಿಗೆ ಕರುಣೆ ತೋರಿ. 23 ಇತರ ಜನರನ್ನು ರಕ್ಷಿಸಿ. ಆ ಜನರನ್ನು ಬೆಂಕಿಯಿಂದ ಹೊರಕ್ಕೆ ತನ್ನಿರಿ. ನೀವು ಕೆಲವು ಜನರಿಗೆ ಕರುಣೆ ತೋರುವಾಗ ಎಚ್ಚರದಿಂದಿರಿ. ಪಾಪಗಳಿಂದ ಹೊಲಸಾಗಿರುವ ಅವರ ಬಟ್ಟೆಗಳನ್ನು ಸಹ ದ್ವೇಷಿಸಿರಿ.

ದೇವರಿಗೆ ಸ್ತೋತ್ರ ಮಾಡಿರಿ

24 ಆತನು (ದೇವರು) ಬಲಶಾಲಿಯಾಗಿದ್ದಾನೆ. ನೀವು ಬೀಳದಂತೆ ಆತನು ನಿಮಗೆ ಸಹಾಯ ಮಾಡಬಲ್ಲನು. ಆತನು ನಿಮ್ಮಲ್ಲಿ ಯಾವ ತಪ್ಪೂ ಇಲ್ಲದಂತೆ ಮಾಡಿ, ತನ್ನ ಮಹಿಮಾ ಸನ್ನಿಧಿಗೆ ತರುವುದಕ್ಕೂ ನಿಮಗೆ ಮಹಾಸಂತೋಷವನ್ನು ಕೊಡುವುದಕ್ಕೂ ಶಕ್ತನಾಗಿದ್ದಾನೆ. 25 ಆತನೊಬ್ಬನೇ ದೇವರು. ನಮ್ಮನ್ನು ರಕ್ಷಿಸುವಾತನು ಆತನೊಬ್ಬನೇ. ಆದಿಯಿಂದ ಇದ್ದಹಾಗೆ ಈಗಲೂ ಯಾವಾಗಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನಿಗೆ ಪ್ರಭಾವ, ಮಹತ್ವ, ಆಧಿಪತ್ಯ ಮತ್ತು ಅಧಿಕಾರಗಳು ಇರಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International