Beginning
ಪೌಲನು ಜೆರುಸಲೇಮಿಗೆ ಹೋಗುವನು
21 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. 2 ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.
3 ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. 4 ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. 5 ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. 6 ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.
7 ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. 8 ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ[a] ಅವನೂ ಒಬ್ಬನಾಗಿದ್ದನು. 9 ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.
10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’” ಎಂದು ಹೇಳಿದನು.
12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.
14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.
15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.
ಪೌಲನು ಯಾಕೋಬನನ್ನು ಸಂದರ್ಶಿಸುವನು
17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು. 18 ಮರುದಿನ ಯಾಕೋಬನನ್ನು ಸಂದರ್ಶಿಸಲು ಪೌಲನು ನಮ್ಮನ್ನು ಕರೆದುಕೊಂಡು ಹೋದನು. ಹಿರಿಯರೆಲ್ಲರು ಅಲ್ಲಿದ್ದರು. 19 ಪೌಲನು ಅವರೆಲ್ಲರನ್ನು ವಂದಿಸಿದನು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದಕ್ಕಾಗಿ ದೇವರು ತನ್ನನ್ನು ಉಪಯೋಗಿಸಿಕೊಂಡ ಬಗೆಯನ್ನೂ ತನ್ನ ಮೂಲಕವಾಗಿ ದೇವರು ಮಾಡಿದ ಎಲ್ಲಾ ಕಾರ್ಯಗಳ ಕುರಿತಾಗಿಯೂ ಅವನು ಅವರಿಗೆ ತಿಳಿಸಿದನು.
20 ಈ ಸಂಗತಿಗಳನ್ನು ಕೇಳಿದ ಹಿರಿಯರು ದೇವರನ್ನು ಕೊಂಡಾಡಿದರು. ಬಳಿಕ ಅವರು ಪೌಲನಿಗೆ, “ಸಹೋದರನೇ, ವಿಶ್ವಾಸಿಗಳಿಗಾಗಿ ಪರಿವರ್ತನೆಗೊಂಡಿರುವ ಸಾವಿರಾರು ಮಂದಿ ಯೆಹೂದ್ಯರನ್ನು ನೀನು ಇಲ್ಲಿ ಕಾಣಬಹುದು. ಆದರೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಬಹಳ ಮುಖ್ಯವೆಂಬುದು ಇವರ ಆಲೋಚನೆ. 21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ.
22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು. 23 ಆದರೆ ಈಗ ನೀನು ಏನು ಮಾಡಬೇಕೆಂಬುದನ್ನು ನಾವು ನಿನಗೆ ತಿಳಿಸುತ್ತೇವೆ: ನಮ್ಮ ಜನರಲ್ಲಿ ನಾಲ್ಕುಮಂದಿ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. 24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.
25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ.
ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ.
ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.
ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’
ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.
ಪೌಲನ ಬಂಧನ
26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.
27 ಆ ಏಳು ದಿನಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಏಷ್ಯಾದಿಂದ ಬಂದಿದ್ದ ಕೆಲವು ಯೆಹೂದ್ಯರು ಪೌಲನನ್ನು ಕಂಡು ಜನಸಮೂಹವನ್ನು ಉದ್ದೇಶಿಸಿ, 28 “ಯೆಹೂದ್ಯ ಜನರೇ, ನಮಗೆ ಸಹಾಯಮಾಡಿ! ಮೋಶೆಯ ಧರ್ಮಶಾಸ್ತ್ರಕ್ಕೂ ನಮ್ಮ ಜನರಿಗೂ ಮತ್ತು ಈ ಸ್ಥಳಕ್ಕೂ (ದೇವಾಲಯ) ವಿರೋಧವಾಗಿ ಎಲ್ಲಾ ಕಡೆಗಳಲ್ಲಿ ಜನರಿಗೆ ಉಪದೇಶಿಸುತ್ತಿದ್ದವನು ಇವನೇ. ಈಗ ಇವನು ಕೆಲವು ಗ್ರೀಕರನ್ನು ದೇವಾಲಯದೊಳಕ್ಕೆ ಕರೆದುಕೊಂಡು ಬಂದಿದ್ದಾನೆ! ಈ ಪವಿತ್ರ ಸ್ಥಳವನ್ನು ಇವನು ಅಶುದ್ಧಗೊಳಿಸಿದ್ದಾನೆ!” ಎಂದು ಕೂಗಿಹೇಳಿ ಗಲಿಬಿಲಿ ಮಾಡಿದರು. 29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)
30 ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. 31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು. 32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.
33 ಸೇನಾಧಿಪತಿಯು ಹೋಗಿ ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟಲು ಸೈನಿಕರಿಗೆ ಹೇಳಿದನು. ಬಳಿಕ ಸೇನಾಧಿಪತಿಯು, “ಈ ಮನುಷ್ಯನು ಯಾರು? ಇವನು ಏನು ತಪ್ಪು ಮಾಡಿದನು?” ಎಂದು ವಿಚಾರಿಸಿದನು. 34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು. 35-36 ಎಲ್ಲಾ ಜನರು ಅವರನ್ನು ಹಿಂಬಾಲಿಸಿದರು. ಸೈನಿಕರು ಮೆಟ್ಟಿಲುಗಳ ಬಳಿಗೆ ಬಂದಾಗ ಪೌಲನನ್ನು ರಕ್ಷಿಸಲು ಹೊತ್ತುಕೊಂಡು ಹೋದರು. ಯಾಕೆಂದರೆ ಅವನಿಗೆ ಕೇಡುಮಾಡಲು ಸಿದ್ಧರಾಗಿದ್ದ ಜನರು, “ಅವನನ್ನು ಕೊಲ್ಲಿರಿ!” ಎಂದು ಕೂಗುತ್ತಿದ್ದರು.
37 ಸೈನಿಕರು ಪೌಲನನ್ನು ಸೈನ್ಯದ ಕೋಟೆಯೊಳಗೆ ಕೊಂಡೊಯ್ಯುತ್ತಿದ್ದಾಗ, ಪೌಲನು ಸೇನಾಧಿಪತಿಗೆ, “ನಾನು ನಿನ್ನೊಂದಿಗೆ ಸ್ವಲ್ಪ ಮಾತಾಡಬಹುದೇ?” ಎಂದು ಕೇಳಿದನು.
ಸೇನಾಧಿಪತಿಯು, “ಓಹೋ, ನಿನಗೆ ಗ್ರೀಕ್ ಭಾಷೆ ಗೊತ್ತಿದೆಯಾ? 38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.
39 ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.
40 ಜನರೊಂದಿಗೆ ಮಾತಾಡಲು ಸೇನಾಧಿಪತಿ ಪೌಲನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡನು. ಬಳಿಕ, ಮೌನವಾಗಿರುವಂತೆ ಜನರಿಗೆ ಕೈಸನ್ನೆ ಮಾಡಿದನು. ಜನರು ಮೌನವಾದರು. ಆಗ ಪೌಲನು ಅವರೊಂದಿಗೆ ಯೆಹೂದ್ಯರ ಭಾಷೆಯಲ್ಲಿ ಮಾತಾಡಿದನು.
ಪೌಲನ ಜನರೊಂದಿಗೆ ಮಾತಾಡಿದ್ದು
22 ಪೌಲನು, “ನನ್ನ ಸಹೋದರರೇ, ನನ್ನ ತಂದೆಗಳೇ, ನನ್ನ ಪ್ರತಿವಾದವನ್ನು ಕೇಳಿರಿ!” ಎಂದನು.
2 ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು.
3 ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ. 4 ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು.
5 “ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ.
ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ
6 “ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು. 7 ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.
8 “ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು. 9 ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು.
10 “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು. 11 ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು.
12 “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು. 13 ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು.
14 “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು. 15 ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ. 16 ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.
17 “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. 18 ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು.
19 “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ. 20 ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು.
21 “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.”
22 ಪೌಲನು ಈ ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು. 23 ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು. 24 ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು. 25 ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು.
26 ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು.
27 ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು.
ಪೌಲನು, “ಹೌದು” ಎಂದು ಉತ್ತರಕೊಟ್ಟನು.
28 ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು.
ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು.
29 ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು.
ಪೌಲನು ಯೆಹೂದ್ಯನಾಯಕರೊಂದಿಗೆ ಮಾತಾಡುವನು
30 ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು.
23 ಪೌಲನು ಯೆಹೂದ್ಯರ ನ್ಯಾಯಸಭೆಯನ್ನು ದೃಷ್ಟಿಸಿ ನೋಡಿ, “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿದನು. 2 ಪ್ರಧಾನಯಾಜಕನಾದ ಅನನೀಯನು ಅಲ್ಲಿದ್ದನು. ಪೌಲನು ಹೇಳಿದ್ದನ್ನು ಕೇಳಿದ ಅನನೀಯನು ಪೌಲನ ಪಕ್ಕದಲ್ಲಿ ನಿಂತಿದ್ದವರಿಗೆ ಪೌಲನ ಬಾಯಿಯ ಮೇಲೆ ಹೊಡೆಯಲು ಹೇಳಿದನು. 3 ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.
4 ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.
5 ಪೌಲನು, “ಸಹೋದರರೇ, ಈ ಮನುಷ್ಯನು ಪ್ರಧಾನಯಾಜಕನೆಂದು ನನಗೆ ಗೊತ್ತಿರಲ್ಲಿಲ್ಲ. ‘ನಿಮ್ಮ ಜನನಾಯಕರ ಬಗ್ಗೆ ಕೆಟ್ಟಮಾತುಗಳುನ್ನು ಆಡಬಾರದು’(A) ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ” ಎಂದು ಹೇಳಿದನು.
6 ಸಭೆಯಲ್ಲಿದ್ದ ಜನರಲ್ಲಿ ಕೆಲವರು ಸದ್ದುಕಾಯರಾಗಿದ್ದರು; ಮತ್ತೆ ಕೆಲವರು ಫರಿಸಾಯರಾಗಿದ್ದರು. ಆದ್ದರಿಂದ ಪೌಲನು, “ನನ್ನ ಸಹೋದರರೇ, ನಾನು ಫರಿಸಾಯನು! ನನ್ನ ತಂದೆಯೂ ಫರಿಸಾಯನಾಗಿದ್ದನು! ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!” ಎಂದು ಕೂಗಿ ಹೇಳಿದನು.
7 ಪೌಲನು ಹೀಗೆ ಹೇಳಿದಾಗ, ಫರಿಸಾಯರಿಗೂ ಸದ್ದುಕಾಯರಿಗೂ ದೊಡ್ಡ ವಾಗ್ವಾದವಾಯಿತು. ಸಭೆಯಲ್ಲಿ ಭೇದ ಉಂಟಾಯಿತು. 8 (ಸತ್ತವರಿಗೆ ಪುನರುತ್ಥಾನವಿಲ್ಲ; ದೇವದೂತರುಗಳಾಗಲಿ ಆತ್ಮಗಳಾಗಲಿ ಇಲ್ಲವೇ ಇಲ್ಲ ಎಂಬುದು ಸದ್ದುಕಾಯರ ನಂಬಿಕೆ. ಫರಿಸಾಯರ ನಂಬಿಕೆ ಇದಕ್ಕೆ ತದ್ವಿರುದ್ಧವಾಗಿದೆ.) 9 ಈ ಯೆಹೂದ್ಯರೆಲ್ಲರೂ ಹೆಚ್ಚುಹೆಚ್ಚು ಗಟ್ಟಿಯಾಗಿ ಆರ್ಭಟಿಸಿತೊಡಗಿದರು. ಫರಿಸಾಯರ ಗುಂಪಿಗೆ ಸೇರಿದ್ದ ಕೆಲವು ಮಂದಿ ಧರ್ಮೋಪದೇಶಕರು ಎದ್ದುನಿಂತುಕೊಂಡು, “ಈ ಮನುಷ್ಯನಲ್ಲಿ ನಮಗೇನೂ ತಪ್ಪು ಕಂಡುಬರುತ್ತಿಲ್ಲ! ದಮಸ್ಕಕ್ಕೆ ಹೋಗುವ ದಾರಿಯಲ್ಲಿ ದೇವದೂತನಾಗಲಿ ಆತ್ಮವಾಗಲಿ ಅವನೊಂದಿಗೆ ಮಾತಾಡಿದ್ದಿರಬೇಕು!” ಎಂದು ವಾದಿಸಿದರು.
10 ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.
11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.
ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು
12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.
16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು. 17 ಆಗ ಪೌಲನು ಸೇನಾಧಿಕಾರಿಗಳಲ್ಲಿ ಒಬ್ಬನನ್ನು ಕರೆದು, “ಈ ಯೌವನಸ್ಥನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋಗು. ಇವನು ಒಂದು ಸಂದೇಶವನ್ನು ಅವನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. 18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.
19 ಸೇನಾಧಿಪತಿಯು ಆ ಯೌವನಸ್ಥನನ್ನು ಕೈಹಿಡಿದು ಏಕಾಂತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, “ನೀನು ಏನು ತಿಳಿಸಬೇಕೆಂದಿರುವೆ?” ಎಂದು ಕೇಳಿದನು.
20 ಆ ಯೌವನಸ್ಥನು, “ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಪೌಲನಿಗೆ ಕೇಳಬೇಕೆಂಬ ನೆವವನ್ನು ಹೇಳಿ ನಾಳೆಯ ಆಲೋಚನಾಸಭೆಗೆ ಪೌಲನನ್ನು ಕರೆದುಕೊಂಡುಬರಬೇಕೆಂದು ಯೆಹೂದ್ಯರು ನಿನ್ನನ್ನು ಕೇಳಿಕೊಳ್ಳಲು ನಿರ್ಧರಿಸಿದ್ದಾರೆ. 21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.
22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.
ಪೌಲನನ್ನು ಸೆಜರೇಯಕ್ಕೆ ಕಳುಹಿಸಲಾಯಿತು
23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು. 24 ಪೌಲನ ಪ್ರಯಾಣಕ್ಕಾಗಿ ಕೆಲವು ಕುದುರೆಗಳನ್ನು ತೆಗೆದುಕೊ. ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಅವನನ್ನು ಸುರಕ್ಷಿತವಾಗಿ ಕೊಂಡೊಯ್ಯಲೇಬೇಕು” ಎಂದು ಹೇಳಿದನು. 25 ಸೇನಾಧಿಪತಿಯು ಒಂದು ಪತ್ರವನ್ನೂ ಬರೆದನು. ಅದರಲ್ಲಿ ಹೀಗೆ ತಿಳಿಸಲಾಗಿತ್ತು:
26 ಕ್ಲಾಡಿಯ ಲೂಸಿಯನಿಂದ ಮಹಾರಾಜಶ್ರೀಗಳಾದ ರಾಜ್ಯಪಾಲ ಫೇಲಿಕ್ಸನಿಗೆ,
ವಂದನೆಗಳು.
27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲುವುದರಲ್ಲಿದ್ದರು. ಆದರೆ ಇವನು ರೋಮ್ನ ಪ್ರಜೆಯೆಂಬುದು ನನಗೆ ತಿಳಿಯಿತು. ಆದ್ದರಿಂದ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಕಾಪಾಡಿದೆನು. 28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ. 29 ಅಲ್ಲಿ ನನಗೆ ತಿಳಿದುಬಂದದ್ದೇನೆಂದರೆ, ಪೌಲನು ದುಷ್ಕೃತ್ಯಗಳನ್ನು ಮಾಡಿದ್ದಾನೆಂದು ಯೆಹೂದ್ಯರು ಹೇಳಿದರೂ ಅವರ ಆಪಾದನೆಗಳು ಅವರ ಸ್ವಂತ ಯೆಹೂದ್ಯ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟದ್ದಾಗಿದ್ದವು. ಅಲ್ಲದೆ ಇವನನ್ನು ಸೆರೆಮನೆಗಾಗಲಿ ಮರಣದಂಡನೆಗಾಗಲಿ ಗುರಿಪಡಿಸಬಹುದಾದ ಯಾವ ಅಪರಾಧವೂ ಇರಲಿಲ್ಲ. 30 ಆದರೆ ಯೆಹೂದ್ಯರಲ್ಲಿ ಕೆಲವರು ಪೌಲನನ್ನು ಕೊಲ್ಲಲು ಯೋಜನೆ ಮಾಡುತ್ತಿರುವುದು ನನಗೆ ತಿಳಿಯಿತು. ಆದ್ದರಿಂದ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ. ಅಲ್ಲದೆ ಅವನ ಮೇಲಿರುವ ದೂರುಗಳನ್ನು ನಿನಗೆ ತಿಳಿಸಬೇಕೆಂದು ನಾನು ಆಪಾದಕರಿಗೂ ಸಹ ತಿಳಿಸಿದ್ದೇನೆ.
31 ಸೇನಾಧಿಪತಿಯ ಆಜ್ಞೆಗನುಸಾರವಾಗಿ ಸೈನಿಕರು ಕಾರ್ಯವೆಸಗಿದರು. ಆ ರಾತ್ರಿ ಸೈನಿಕರು ಪೌಲನನ್ನು ಅಂತಿಪತ್ರಿಯ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋದರು. 32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು. 33 ಅಶ್ವದಳದವರು ಸೆಜರೇಯ ಪಟ್ಟಣವನ್ನು ಪ್ರವೇಶಿಸಿ, ರಾಜ್ಯಪಾಲನಾದ ಫೇಲಿಕ್ಸನಿಗೆ ಪತ್ರವನ್ನು ಕೊಟ್ಟರು. ಬಳಿಕ ಅವರು ಪೌಲನನ್ನು ಅವನಿಗೆ ಒಪ್ಪಿಸಿದರು.
34 ರಾಜ್ಯಪಾಲನು ಪತ್ರವನ್ನು ಓದಿದನು. ಬಳಿಕ ಅವನು ಪೌಲನಿಗೆ, “ನೀನು ಯಾವ ದೇಶದವನು?” ಎಂದು ಕೇಳಿದಾಗ, ಸಿಲಿಸಿಯದವನೆಂಬುದು ತಿಳಿಯಿತು. 35 ರಾಜ್ಯಪಾಲನು, “ನಿನಗೆ ವಿರೋಧವಾಗಿರುವ ಯೆಹೂದ್ಯರು ಇಲ್ಲಿಗೆ ಬಂದಾಗ, ನಾನು ನಿನ್ನ ವಿಚಾರಣೆ ಮಾಡುತ್ತೇನೆ” ಎಂದು ಹೇಳಿದನು. ಬಳಿಕ ರಾಜ್ಯಪಾಲನು ಪೌಲನನ್ನು ಅರಮನೆಯೊಳಗೆ ಇರಿಸಬೇಕೆಂದು ಆಜ್ಞಾಪಿಸಿದನು. (ಈ ಕಟ್ಟಡವನ್ನು ಹೆರೋದನು ಕಟ್ಟಿಸಿದ್ದನು.)
Kannada Holy Bible: Easy-to-Read Version. All rights reserved. © 1997 Bible League International