Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 6-7

ಯೇಸು ಸಬ್ಬತ್‌ದಿನಕ್ಕೆ ಒಡೆಯನು

(ಮತ್ತಾಯ 12:1-8; ಮಾರ್ಕ 2:23-28)

ಒಂದಾನೊಂದು ಸಬ್ಬತ್‌ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದನು. ಆತನ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ಕಾಳನ್ನು ತಿಂದರು. ಕೆಲವು ಫರಿಸಾಯರು, “ನೀವು ಸಬ್ಬತ್‌ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.

ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಿದ್ದೀರಿ. ದಾವೀದನು ದೇವರ ಮಂದಿರದೊಳಕ್ಕೆ ಹೋಗಿ, ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ತೆಗೆದುಕೊಂಡು ತಿಂದನು. ತನ್ನ ಜೊತೆ ಇದ್ದ ಜನರಿಗೂ ಸ್ವಲ್ಪ ಕೊಟ್ಟನು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧ. ಯಾಜಕರು ಮಾತ್ರವೇ ಈ ರೊಟ್ಟಿಯನ್ನು ತಿನ್ನಬಹುದು ಎಂದು ಧರ್ಮಶಾಸ್ತ್ರ ಹೇಳುತ್ತದೆ” ಎಂದು ಉತ್ತರಿಸಿ, “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು.

ಸಬ್ಬತ್‌ದಿನದಲ್ಲಿ ಗುಣಹೊಂದಿದ ವ್ಯಕ್ತಿ

(ಮತ್ತಾಯ 12:9-14; ಮಾರ್ಕ 3:1-6)

ಮತ್ತೊಂದು ಸಬ್ಬತ್‌ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಿಸಿದನು. ಬಲಗೈ ಬತ್ತಿಹೋಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಯೇಸು ಅವನನ್ನು ವಾಸಿಮಾಡಿದರೆ, ಆತನ ಮೇಲೆ ತಪ್ಪು ಹೊರಿಸಬಹುದೆಂದು ಧರ್ಮೋಪದೇಶಕರು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಆದರೆ ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಯೇಸುವು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಬಂದು ಇಲ್ಲಿ ನಿಂತುಕೊ” ಎಂದು ಹೇಳಿದನು. ಅವನು ಎದ್ದುಬಂದು ನಿಂತನು. ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು.

10 ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು. 11 ಫರಿಸಾಯರು ಮತ್ತು ಧರ್ಮೋಪದೇಶಕರು ಬಹಳವಾಗಿ ಕೋಪಗೊಂಡರು. ಅವರು, “ನಾವು ಯೇಸುವಿಗೆ ಏನು ಮಾಡೋಣ?” ಎಂದು ತಮ್ಮತಮ್ಮೊಳಗೆ ಸಂಚುಮಾಡಿದರು.

ಯೇಸುವಿನ ಹನ್ನೆರಡು ಮಂದಿ ಅಪೊಸ್ತಲರು

(ಮತ್ತಾಯ 10:1-4; ಮಾರ್ಕ 3:13-19)

12 ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. 13 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರನ್ನು ಕರೆದನು. ಅವರಲ್ಲಿ ಹನ್ನೆರಡು ಮಂದಿಯನ್ನು ಆತನು ಆರಿಸಿಕೊಂಡನು. ಯೇಸು ಈ ಹನ್ನೆರಡು ಜನರಿಗೆ, “ಅಪೊಸ್ತಲರು” ಎಂದು ಹೆಸರಿಟ್ಟನು. ಅವರು ಯಾರೆಂದರೆ:

14 ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರಿಟ್ಟನು.)

ಮತ್ತು ಪೇತ್ರನ ಸಹೋದರನಾದ ಅಂದ್ರೆಯ,

ಯಾಕೋಬ

ಮತ್ತು ಯೋಹಾನ,

ಫಿಲಿಪ್ಪ

ಮತ್ತು ಬಾರ್ತೊಲೊಮಾಯ,

15 ಮತ್ತಾಯ,

ತೋಮ,

ಯಾಕೋಬ (ಅಲ್ಫಾಯನ ಮಗ)

ಮತ್ತು ದೇಶಾಭಿಮಾನಿ[a] ಎನಿಸಿಕೊಂಡಿದ್ದ ಸಿಮೋನ,

16 ಯೂದ (ಯಾಕೋಬನ ಮಗ)

ಮತ್ತು ಇಸ್ಕರಿಯೋತ ಯೂದ (ಯೇಸುವಿಗೆ ದ್ರೋಹ ಮಾಡಿದವನು ಇವನೇ.)

ಯೇಸುವಿನ ಉಪದೇಶ ಮತ್ತು ಜನರಿಗೆ ಆರೋಗ್ಯದಾನ

(ಮತ್ತಾಯ 4:23-25; 5:1-12)

17 ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18 ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19 ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು!

20 ಯೇಸು ತನ್ನ ಶಿಷ್ಯರನ್ನು ನೋಡಿ ಹೇಳಿದ್ದೇನೆಂದರೆ,

“ಬಡವರಾದ ನೀವು ಧನ್ಯರು;
    ದೇವರ ರಾಜ್ಯವು ನಿಮ್ಮದೇ.
21 ಹಸಿವೆಗೊಂಡಿರುವ ನೀವು ಧನ್ಯರು;
    ನಿಮಗೆ ತೃಪ್ತಿಯಾಗುವುದು.
ಅಳುತ್ತಿರುವ ನೀವು ಧನ್ಯರು;
    ಆನಂದದಿಂದ ನೀವು ನಗುವಿರಿ.

22 “ನೀವು ಮನುಷ್ಯಕುಮಾರನಿಗೆ ಸೇರಿದವರಾಗಿರುವುದರಿಂದ ಜನರು ನಿಮ್ಮನ್ನು ದ್ವೇಷಿಸಿದರೆ, ತುಚ್ಛೀಕರಿಸಿದರೆ, ಅವಮಾನ ಮಾಡಿದರೆ, ನಿಮ್ಮನ್ನು ಕೆಟ್ಟವರೆಂದು ಹೇಳಿದರೆ ನೀವು ಧನ್ಯರು. 23 ಆ ಸಮಯದಲ್ಲಿ ಆನಂದಪಡಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. ಈ ಜನರು ನಿಮಗೆ ಮಾಡಿದಂತೆಯೇ ಅವರ ಪಿತೃಗಳು ಪ್ರವಾದಿಗಳಿಗೆ ಮಾಡಿದರು.

24 “ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ಸುಖಕರವಾದ ಜೀವನವನ್ನು ಅನುಭವಿಸಿದಿರಿ.
25 ಈಗ ಹೊಟ್ಟೆ ತುಂಬಿರುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ಹಸಿಯುವಿರಿ.
ನಗುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ದುಃಖಪಡುವಿರಿ ಮತ್ತು ಅಳುವಿರಿ.

26 “ಜನರಿಂದ ಯಾವಾಗಲೂ ಹೊಗಳಿಸಿಕೊಳ್ಳುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳು ಪ್ರವಾದಿಗಳನ್ನು ಯಾವಾಗಲೂ ಹೊಗಳುತ್ತಿದ್ದರು.

ನಿಮ್ಮ ವೈರಿಗಳನ್ನು ಪ್ರೀತಿಸಿರಿ

(ಮತ್ತಾಯ 5:38-48; 7:12)

27 “ನನ್ನ ಮಾತುಗಳನ್ನು ಆಲಿಸುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ: ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ಹೀನೈಸುವ ಜನರಿಗೋಸ್ಕರ ಪ್ರಾರ್ಥಿಸಿರಿ. 29 ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ. 30 ನಿಮ್ಮನ್ನು ಬೇಡುವ ಪ್ರತಿಯೊಬ್ಬನಿಗೆ ಕೊಡಿ. ಒಬ್ಬನು ನಿಮ್ಮಿಂದ ಏನಾದರೂ ತೆಗೆದುಕೊಂಡಾಗ ಅದನ್ನು ಹಿಂದಕ್ಕೆ ಕೊಡೆಂದು ಕೇಳಬೇಡಿ. 31 ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆಸೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.

32 “ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ನಿಮಗೆ ಹೊಗಳಿಕೆ ಏಕೆ ಬರಬೇಕು? ಇಲ್ಲ! ತಮ್ಮನ್ನು ಪ್ರೀತಿಸುವವರನ್ನು ಪಾಪಿಷ್ಠರು ಸಹ ಪ್ರೀತಿಸುತ್ತಾರೆ! 33 ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರೆ! 34 ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ!

35 “ಆದ್ದರಿಂದ ನಿಮ್ಮ ವೈರಿಗಳನ್ನು ಪ್ರೀತಿಸಿರಿ. ಅವರಿಗೆ ಒಳ್ಳೆಯದನ್ನು ಮಾಡಿರಿ. ನೀವು ಅವರಿಗೆ ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತನಾದ ದೇವರ ಮಕ್ಕಳಾಗುವಿರಿ. ಏಕೆಂದರೆ ದೇವರು ಪಾಪಿಷ್ಠರಿಗೂ ಕೃತಜ್ಞತೆಯಿಲ್ಲದವರಿಗೂ ಒಳ್ಳೆಯವನಾಗಿದ್ದಾನೆ. 36 ನಿಮ್ಮ ಪರಲೋಕದ ತಂದೆಯು ಕರುಣಾಮಯನಾಗಿರುವಂತೆ ನೀವೂ ಕರುಣೆಯುಳ್ಳವರಾಗಿರಿ.

ನಿನ್ನನ್ನು ಪರೀಕ್ಷಿಸಿಕೊ

(ಮತ್ತಾಯ 7:1-5)

37 “ಬೇರೆಯವರಿಗೆ ತೀರ್ಪು ಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಬೇರೆಯವರನ್ನು ಅಪರಾಧಿಗಳೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಇತರರನ್ನು ಕ್ಷಮಿಸಿರಿ, ಆಗ ನಿಮಗೂ ಕ್ಷಮಾಪಣೆ ಆಗುವುದು. 38 ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.”

39 ಯೇಸು ಅವರಿಗೆ ಈ ಸಾಮ್ಯವನ್ನೂ ಹೇಳಿದನು: “ಒಬ್ಬ ಕುರುಡನು ಇನ್ನೊಬ್ಬ ಕುರುಡನನ್ನು ನಡಿಸುವುದಕ್ಕಾದೀತೇ? ಇಲ್ಲ! ಅವರಿಬ್ಬರೂ ಗುಂಡಿಯಲ್ಲಿ ಬೀಳುವರು. 40 ಶಿಷ್ಯನು ಗುರುವಿಗಿಂತ ಮೇಲಲ್ಲ. ಆದರೆ, ಶಿಷ್ಯನು ಪೂರ್ಣ ಕಲಿತಾಗ ಗುರುವಿನಂತೆ ಆಗುವನು.

41 “ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? 42 ನೀನು ಅವನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆಯುತ್ತೇನೆ’ ಎಂದು ನೀನು ಹೇಗೆ ಹೇಳಬಲ್ಲೆ? ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯೇ ನಿನಗೆ ಕಾಣಿಸದು! ನೀನು ಕಪಟಿ.[b] ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಿಸುವುದು.

ಎರಡು ವಿಧವಾದ ಫಲ

(ಮತ್ತಾಯ 7:17-20; 12:34-35)

43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.

ಎರಡು ವಿಧವಾದ ಜನರು

(ಮತ್ತಾಯ 7:24-27)

46 “ನನ್ನನ್ನು ಸ್ವಾಮೀ, ಸ್ವಾಮೀ, ಎಂದು ಕರೆದು ನಾನು ಹೇಳುವುದನ್ನು ನಡಿಸದೆ ಇರುವುದೇಕೆ? 47 ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ, ಅವುಗಳಿಗೆ ವಿಧೇಯನಾಗುವ ಪ್ರತಿಯೊಬ್ಬನು ಮನೆಯನ್ನು ಕಟ್ಟುವ ವ್ಯಕ್ತಿಯಂತಿರುವನು. 48 ಅವನು ಆಳವಾದ ಅಸ್ತಿವಾರ ಹಾಕಿ, ಬಲವಾದ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುತ್ತಾನೆ. ಪ್ರವಾಹವು ಏರಿಬಂದು ಆ ಮನೆಗೆ ಅಪ್ಪಳಿಸಿದರೂ ಆ ಮನೆಯನ್ನು ಕದಲಿಸಲಾರದು; ಏಕೆಂದರೆ ಆ ಮನೆಯು ಬಲವಾಗಿ ಕಟ್ಟಲ್ಪಟ್ಟಿದೆ.

49 “ಅದೇ ರೀತಿಯಲ್ಲಿ, ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದ ವ್ಯಕ್ತಿಯು ಅಸ್ತಿವಾರವಿಲ್ಲದೆ ನೆಲದಮೇಲೆ ಮನೆ ಕಟ್ಟಿದ ಮನುಷ್ಯನಂತಿರುವನು. ಪ್ರವಾಹ ಬಂದಾಗ, ಮನೆಯು ಬೇಗನೆ ಕುಸಿದುಹೋಗಿ ಸಂಪೂರ್ಣವಾಗಿ ನಾಶವಾಗುತ್ತದೆ.”

ಗುಣಹೊಂದಿದ ಸೇವಕ

(ಮತ್ತಾಯ 8:5-13; ಯೋಹಾನ 4:43-54)

ಯೇಸುವು ಜನರಿಗೆ ಈ ಸಂಗತಿಗಳೆಲ್ಲವನ್ನು ಹೇಳಿ ಮುಗಿಸಿದ ನಂತರ ಕಪೆರ್ನೌಮಿಗೆ ಹೋದನು. ಅಲ್ಲಿ ಒಬ್ಬ ಸೇನಾಧಿಪತಿ[c] ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು. ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು. ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿಪತಿ ನಿನ್ನ ಸಹಾಯ ಹೊಂದುವುದಕ್ಕೆ ಯೋಗ್ಯನಾಗಿದ್ದಾನೆ. ಅವನು ನಮ್ಮ ಜನರನ್ನು ಪ್ರೀತಿಸುತ್ತಾನೆ ಮತ್ತು ನಮಗೋಸ್ಕರ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿದ್ದಾನೆ” ಎಂದು ಹೇಳಿ ಬಹಳವಾಗಿ ಬೇಡಿಕೊಂಡರು.

ಆದ್ದರಿಂದ ಯೇಸು ಅವರ ಜೊತೆ ಹೊರಟನು. ಯೇಸು ಮನೆಯ ಹತ್ತಿರ ಬರುತ್ತಿರುವಾಗ, ಆ ಅಧಿಕಾರಿಯು ಸ್ನೇಹಿತರನ್ನು, “ಪ್ರಭುವೇ, ನೀನು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ. ನಿನ್ನ ಬಳಿಗೆ ಬರುವುದಕ್ಕೂ ನನಗೆ ಯೋಗ್ಯತೆ ಇಲ್ಲ. ನೀನು ಕೇವಲ ಒಂದು ಆಜ್ಞೆ ಕೊಟ್ಟರೆ ಸಾಕು, ನನ್ನ ಆಳು ಗುಣಹೊಂದುವನು. ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ‘ಹೋಗು’ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ‘ಬಾ’ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ‘ಇದನ್ನು ಮಾಡು’ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.

ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.

10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.

ಸತ್ತವನಿಗೆ ಜೀವದಾನ

11 ಮರುದಿನ ಯೇಸು ನಾಯಿನ್ ಎಂಬ ಊರಿಗೆ ಹೋದನು. ಯೇಸುವಿನೊಡನೆ ಆತನ ಶಿಷ್ಯರೂ ಹೋಗುತ್ತಿದ್ದರು. ಅವರೊಡನೆ ಅನೇಕ ಜನರು ದೊಡ್ಡ ಸಮೂಹವಾಗಿ ಹೋಗುತ್ತಿದ್ದರು. 12 ಯೇಸು ಊರಬಾಗಿಲಿನ ಬಳಿಗೆ ಬಂದಾಗ, ಸತ್ತುಹೋಗಿದ್ದ ಒಬ್ಬನನ್ನು ಸಮಾಧಿ ಮಾಡುವುದಕ್ಕಾಗಿ ಹೊತ್ತುಕೊಂಡು ಹೋಗುತ್ತಿದ್ದ ಜನರ ಗುಂಪನ್ನು ಕಂಡನು. ವಿಧವೆಯೊಬ್ಬಳ ಒಬ್ಬನೇ ಮಗನು ಸತ್ತುಹೋಗಿದ್ದನು. ಅವನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಊರಿನ ಅನೇಕ ಜನರು ಆಕೆಯೊಡನೆ ಇದ್ದರು. 13 ಪ್ರಭುವು (ಯೇಸು) ಆಕೆಯನ್ನು ಕಂಡು ತನ್ನ ಹೃದಯದಲ್ಲಿ ಮರುಕಗೊಂಡು, “ಅಳಬೇಡ” ಎಂದು ಹೇಳಿ 14 ಶವದ ಪೆಟ್ಟಿಗೆಯ ಬಳಿಹೋಗಿ ಅದನ್ನು ಮುಟ್ಟಿದನು. ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವವರು ನಿಂತುಕೊಂಡರು. ಯೇಸು ಸತ್ತುಹೋಗಿದ್ದವನಿಗೆ, “ಯೌವನಸ್ಥನೇ, ಎದ್ದೇಳು! ಎಂದು ನಾನು ನಿನಗೆ ಹೇಳುತ್ತೇನೆ” ಎಂದನು. 15 ಆಗ ಅವನು ಎದ್ದು ಕುಳಿತುಕೊಂಡು ಮಾತಾಡತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು.

16 ಜನರೆಲ್ಲರೂ ವಿಸ್ಮಯಪಟ್ಟರು. ಅವರು ದೇವರನ್ನು ಸ್ತುತಿಸುತ್ತಾ, “ಒಬ್ಬ ಮಹಾಪ್ರವಾದಿ ನಮ್ಮ ಬಳಿಗೆ ಬಂದಿದ್ದಾನೆ! ದೇವರು ತನ್ನ ಜನರಿಗೆ ಸಹಾಯ ಮಾಡಲು ಬಂದಿದ್ದಾನೆ” ಎಂದು ಹೇಳಿದರು.

17 ಯೇಸುವಿನ ಕುರಿತಾದ ಈ ಸುದ್ದಿಯು ಜುದೇಯದಲ್ಲಿಯೂ ಅದರ ಸುತ್ತಮುತ್ತಲಿನ ಎಲ್ಲಾ ಸ್ಥಳಗಳಲ್ಲಿಯೂ ಹಬ್ಬಿಕೊಂಡಿತು.

ಯೋಹಾನನು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 11:2-19)

18 ಯೋಹಾನನ ಶಿಷ್ಯರು ಈ ಸಂಗತಿಗಳನ್ನೆಲ್ಲಾ ಯೋಹಾನನಿಗೆ ತಿಳಿಸಿದರು. ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 19 “ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?” ಎಂದು ಕೇಳುವುದಕ್ಕಾಗಿ ಅವರನ್ನು ಪ್ರಭುವಿನ (ಯೇಸುವಿನ) ಬಳಿಗೆ ಕಳುಹಿಸಿದನು.

20 ಆದ್ದರಿಂದ ಅವರು ಯೇಸುವಿನ ಬಳಿಗೆ ಬಂದು, “ಸ್ನಾನಿಕ ಯೋಹಾನನು ‘ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?’ ಎಂದು ನಿನ್ನನ್ನು ಕೇಳುವುದಕ್ಕಾಗಿ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂದು ಹೇಳಿದರು.

21 ಅದೇ ಸಮಯದಲ್ಲಿ, ಯೇಸು ಅನೇಕ ಜನರನ್ನು ಅವರವರ ಕಾಯಿಲೆಗಳಿಂದ, ರೋಗಗಳಿಂದ ಗುಣಪಡಿಸಿದನು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು. ಅನೇಕ ಕುರುಡರಿಗೆ ದೃಷ್ಟಿಯನ್ನು ಕೊಟ್ಟನು. 22 ಬಳಿಕ ಯೇಸು ಯೋಹಾನನ ಶಿಷ್ಯರಿಗೆ, “ನೀವು ಇಲ್ಲಿ ಕಂಡು ಕೇಳಿದ ಸಂಗತಿಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ದೃಷ್ಟಿ ಬರುತ್ತದೆ, ಕುಂಟರು ಕಾಲನ್ನು ಪಡೆದು ನಡೆಯುತ್ತಾರೆ. ಕುಷ್ಠರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳುತ್ತಾರೆ, ಸತ್ತವರಿಗೆ ಜೀವ ಬರುತ್ತದೆ ಮತ್ತು ದೇವರ ರಾಜ್ಯದ ಸುವಾರ್ತೆಯು ಬಡವರಿಗೆ ಕೊಡಲ್ಪಡುತ್ತದೆ. 23 ಸಂಶಯಪಡದೆ ನನ್ನನ್ನು ಸ್ವೀಕರಿಸಿಕೊಳ್ಳುವವನೇ ಧನ್ಯನು!” ಎಂದು ಹೇಳಿ ಕಳುಹಿಸಿದನು.

24 ಯೋಹಾನನ ಶಿಷ್ಯರು ಹೊರಟುಹೋದಾಗ, ಯೇಸು ಜನರಿಗೆ ಯೋಹಾನನ ಕುರಿತು ಹೇಳತೊಡಗಿ, “ಏನನ್ನು ನೋಡುವುದಕ್ಕೆ ನೀವು ಮರಳುಗಾಡಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 25 ನೀವು ಏನನ್ನು ನೋಡಲು ಹೊರಗೆ ಹೋದಿರಿ? ನಯವಾದ ಉಡುಪನ್ನು ಧರಿಸಿರುವ ಮನುಷ್ಯನನ್ನೋ? ಇಲ್ಲ. ನಯವಾದ ಮತ್ತು ಚಂದವಾದ ಉಡುಪನ್ನು ಧರಿಸಿದವರು ಅರಮನೆಗಳಲ್ಲಿ ವಾಸಮಾಡುತ್ತಾರೆ. 26 ನಿಜವಾಗಿಯೂ, ನೀವು ಏನನ್ನು ನೋಡಲು ಹೊರಗೆ ಹೋದಿರಿ? ಪ್ರವಾದಿಯನ್ನೋ? ಹೌದು. ನಾನು ನಿಮಗೆ ಹೇಳುವುದೇನೆಂದರೆ, ಯೋಹಾನನು ಪ್ರವಾದಿಗಿಂತಲೂ ಶ್ರೇಷ್ಠನಾಗಿದ್ದಾನೆ.

27 ‘ಇಗೋ! ನಾನು (ದೇವರು) ನನ್ನ ದೂತನನ್ನು[d] ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗೋಸ್ಕರ ದಾರಿಯನ್ನು ಸಿದ್ಧಮಾಡುವನು’(A)

ಎಂದು ಯೋಹಾನನ ಕುರಿತು ಬರೆದಿದೆ. 28 ಈ ಲೋಕದಲ್ಲಿ ಹುಟ್ಟಿದ ಎಲ್ಲಾ ಮನುಷ್ಯರಲ್ಲಿ ಯೋಹಾನನೇ ದೊಡ್ಡವನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೂ ದೇವರ ರಾಜ್ಯದಲ್ಲಿರುವ ಕನಿಷ್ಠನು ಸಹ ಅವನಿಗಿಂತ ಶ್ರೇಷ್ಠನೇ ಸರಿ” ಎಂದನು.

29 ಯೋಹಾನನು ಉಪದೇಶಿಸಿದ ದೇವರ ವಾಕ್ಯವನ್ನು ಜನರೆಲ್ಲರೂ ಸ್ವೀಕರಿಸಿಕೊಂಡರು. ಸುಂಕವಸೂಲಿಗಾರರೂ ಸ್ವೀಕರಿಸಿಕೊಂಡರು. ಇವರೆಲ್ಲರೂ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು. 30 ಆದರೆ ಫರಿಸಾಯರು[e] ಮತ್ತು ಧರ್ಮೋಪದೇಶಕರು ದೇವರ ಯೋಜನೆಯನ್ನು ತಿರಸ್ಕರಿಸಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ.

31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,

‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
    ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
    ಆದರೆ ನೀವು ಅಳಲಿಲ್ಲ’

ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.

ಫರಿಸಾಯನಾದ ಸಿಮೋನನು

36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.

37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ[f] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. 38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.

39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.

40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು.

ಸಿಮೋನನು, “ಗುರುವೇ, ಹೇಳು!” ಎಂದನು.

41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು[g] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. 42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.

43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು.

ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು. 44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು. 45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ! 46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೋ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು. 47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.

48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.

50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International