Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ನಹೂಮ 1-3

ಎಲ್ಕೋಷ್ ಎಂಬ ಊರಿನವನಾದ ನಹೂಮನಿಗೆ ಆದ ದೇವದರ್ಶನದ ಪುಸ್ತಕ. ನಿನೆವೆ ಪಟ್ಟಣದ ವಿಷಯವಾಗಿ ದುಃಖಕರವಾದ ಸಂದೇಶ.

ನಿನೆವೆಯ ಮೇಲೆ ಯೆಹೋವನು ಕೋಪಗೊಂಡಿದ್ದಾನೆ

ಯೆಹೋವನು ಸ್ವಾಭಿಮಾನವುಳ್ಳ ದೇವರಾಗಿದ್ದಾನೆ.
    ಆತನು ಪಾಪಿಗಳ ಮೇಲೆ ಸೇಡನ್ನು ತೀರಿಸುವ ದೇವರು.
    ಆತನು ಬಹಳವಾಗಿ ಕೋಪಗೊಂಡಿದ್ದಾನೆ.
ಯೆಹೋವನು ಪಾಪಿಗಳನ್ನು ಶಿಕ್ಷಿಸುವ ದೇವರು.
    ಆತನು ವೈರಿಗಳನ್ನು ಶಿಕ್ಷಿಸುವನು.
    ಆತನ ವೈರಿಗಳ ಮೇಲೆ ಕೋಪವು ಸದಾಕಾಲವಿರುವುದು.
ಯೆಹೋವನು ತಾಳ್ಮೆಯುಳ್ಳ ದೇವರು
    ಮತ್ತು ಬಲಿಷ್ಠನಾದ ದೇವರಾಗಿದ್ದಾನೆ!
ಪಾಪಿಗಳನ್ನು ಆತನು ಶಿಕ್ಷಿಸುವನು.
ಆತನಿಂದ ಅವರು ತಪ್ಪಿಸಿಕೊಳ್ಳಲಾರರು.
    ದುಷ್ಟಜನರನ್ನು ಶಿಕ್ಷಿಸಲು ಯೆಹೋವನು ಬರುವನು.
ಆತನು ತನ್ನ ಸಾಮರ್ಥ್ಯವನ್ನು ಬಿರುಗಾಳಿಯಲ್ಲಿಯೂ ಸುಂಟರಗಾಳಿಯಲ್ಲಿಯೂ ತೋರ್ಪಡಿಸುವನು.
    ಮನುಷ್ಯನು ನೆಲದ ಧೂಳಿನ ಮೇಲೆ ನಡೆಯುತ್ತಾರೆ,
    ಯೆಹೋವನಾದರೋ ಮೋಡಗಳ ಮೇಲೆ ನಡೆಯುತ್ತಾನೆ.
ಯೆಹೋವನು ಸಮುದ್ರಕ್ಕೆ ಗದರಿಸಿದಾಗ ಅದು ಒಣಗಿಹೋಗುವುದು.
    ಆತನು ಎಲ್ಲಾ ನದಿಗಳನ್ನು ಬತ್ತಿಸಿಬಿಡುವನು.
ಕರ್ಮೆಲ್ ಮತ್ತು ಬಾಷಾನಿನ ಫಲವತ್ತಾದ ನೆಲಗಳು ಒಣಗಿ ಪಾಳುಬೀಳುವವು.
    ಲೆಬನೋನಿನ ಪುಷ್ಪವು ಬಾಡಿಹೋಗುವದು.
ಯೆಹೋವನು ಬರುತ್ತಾನೆ.
    ಪರ್ವತಗಳು ಭಯದಿಂದ ನಡುಗುವವು.
    ಬೆಟ್ಟಗಳು ಕರಗಿಹೋಗುವವು.
ಯೆಹೋವನು ಬರುತ್ತಾನೆ,
    ಮತ್ತು ಭೂಮಿಯು ಭಯದಿಂದ ನಡುಗುವುದು.
ಇಡೀ ಪ್ರಪಂಚ ಮತ್ತು ಅದರಲ್ಲಿರುವ
    ಜನರೆಲ್ಲಾ ಭಯದಿಂದ ನಡುಗುವರು.
ಯೆಹೋವನ ಮಹಾ ರೌದ್ರಕ್ಕೆದುರಾಗಿ ಯಾರೂ ನಿಲ್ಲಲಾರರು.
    ಯಾರೂ ಆ ಮಹಾ ಕೋಪವನ್ನು ಸಹಿಸಲು ಸಾಧ್ಯವಿಲ್ಲ.
ಆತನ ಕೋಪವು ಬೆಂಕಿಯಂತೆ ದಹಿಸುವದು.
    ಆತನು ಬರುವಾಗ ಬಂಡೆಯು ಪುಡಿಯಾಗುವುದು.
ಯೆಹೋವನು ಒಳ್ಳೆಯವನು.
    ಕಷ್ಟದ ಸಮಯದಲ್ಲಿ ಆತನು ಆಶ್ರಯಸ್ಥಾನ.
    ಆತನ ಮೇಲೆ ಭರವಸವಿಡುವವರನ್ನು ಸಂರಕ್ಷಿಸುತ್ತಾನೆ.
ಆದರೆ ಆತನು ತನ್ನ ವೈರಿಗಳನ್ನು ಪೂರ್ತಿಯಾಗಿ ನಾಶಮಾಡುತ್ತಾನೆ.
    ತೆರೆಯಂತೆ ಅವರನ್ನು ಕೊಚ್ಚಿಕೊಂಡು ಹೋಗುತ್ತಾನೆ.
    ಕತ್ತಲೆಯ ಕಡೆಗೆ ವೈರಿಗಳನ್ನು ಅಟ್ಟಿಬಿಡುವನು.
ಯೆಹೋವನಿಗೆ ವಿರುದ್ಧವಾಗಿ ಏಕೆ ಯೋಜನೆ ಹಾಕುತ್ತೀರಿ?
    ನೀವು ಯಾವ ಕುಯುಕ್ತಿಯನ್ನೂ ಮಾಡದ ಹಾಗೆ
    ಆತನು ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುತ್ತಾನೆ.
10 ಮಡಕೆಯ ಅಡಿಯಲ್ಲಿ ಉರಿಯುವ ಮುಳ್ಳುಕಡ್ಡಿಗಳಂತೆ
    ನೀವು ಸಂಪೂರ್ಣವಾಗಿ ನಾಶವಾಗುವಿರಿ.
ಜಂಬುಹುಲ್ಲಿನಂತೆ
    ನೀವು ಸುಟ್ಟು ಭಸ್ಮವಾಗುವಿರಿ.

11 ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು.
    ದುರಾಲೋಚನೆಯನ್ನು ಕೊಟ್ಟನು.
12 ಯೆಹೋವನು ಯೆಹೂದನಿಗೆ ಇಂತೆಂದೆನು:
“ಅಶ್ಶೂರದ ಜನರು ಬಲಶಾಲಿಗಳು.
    ಅವರಲ್ಲಿ ಅಸಂಖ್ಯಾತ ಸೈನಿಕರಿದ್ದಾರೆ.
    ಆದರೆ ಅವರೆಲ್ಲಾ ತುಂಡರಿಸಲ್ಪಡುವರು.
    ಅವರೆಲ್ಲಾ ಹತರಾಗುವರು.
ನನ್ನ ಜನರೇ, ನೀವು ಕಷ್ಟ ಅನುಭವಿಸುವಂತೆ ಮಾಡಿದೆನು.
    ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
13 ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಬಿಟ್ಟಿದ್ದೇನೆ.
    ಅಶ್ಶೂರದವರ ಹಿಡಿತದಿಂದ ನಿಮ್ಮನ್ನು ಪಾರುಮಾಡಿದ್ದೇನೆ.
ನಿಮ್ಮ ಭುಜದಿಂದ ನೊಗವನ್ನು ತೆಗೆದುಹಾಕುವೆನು.
    ನಿಮ್ಮನ್ನು ಬಂಧಿಸಿದ್ದ ಸಂಕೋಲೆಯನ್ನು ಮುರಿದುಹಾಕುವೆನು.”

14 ಅಶ್ಶೂರದ ಅರಸನೇ, ನಿನ್ನ ವಿಷಯವಾಗಿ ಯೆಹೋವನು ಕೊಟ್ಟ ಆಜ್ಞೆ ಏನೆಂದರೆ,
    “ನಿನ್ನ ಹೆಸರನ್ನು ಧರಿಸುವ ಸಂತತಿಯವರು ಯಾರೂ ಇರುವುದಿಲ್ಲ.
ನಿನ್ನ ಕೆತ್ತನೆಯ ವಿಗ್ರಹಗಳನ್ನು ನಾನು ನಾಶಮಾಡುವೆನು.
    ನಿನ್ನ ದೇವರುಗಳ ಆಲಯದಲ್ಲಿರುವ ಲೋಹದ ಬೊಂಬೆಗಳನ್ನು ಕೆಡವಿಬಿಡುವೆನು.
ನಿನ್ನ ಅಂತ್ಯವು ಬೇಗನೆ ಬರಲಿರುವುದರಿಂದ
    ನಿನಗೆ ಸಮಾಧಿಯನ್ನು ತಯಾರುಮಾಡುತ್ತಿದ್ದೇನೆ.”

15 ಯೆಹೂದವೇ, ನೋಡು!
    ಬೆಟ್ಟಗಳ ಮೇಲಿನಿಂದ ಬರುವವನನ್ನು ನೋಡು.
    ಅವನು ಶುಭಸಮಾಚಾರವನ್ನು ತರುವನು.
    ಸಮಾಧಾನ ಉಂಟೆಂದು ಅವನು ಸಾರುತ್ತಾನೆ.
ಯೆಹೂದವೇ, ನಿನ್ನ ವಿಶೇಷ ಹಬ್ಬಗಳನ್ನು ಆಚರಿಸು.
    ನೀನು ವಾಗ್ದಾನ ಮಾಡಿದ್ದನ್ನು ನೆರವೇರಿಸು.
ಕೆಲಸಕ್ಕೆ ಬಾರದ ಆ ಜನರು ನಿನ್ನ ಬಳಿಗೆ ಬಂದು ನಿನ್ನ ಮೇಲೆ ದಾಳಿ ಮಾಡುವದಿಲ್ಲ.
    ಯಾಕೆಂದರೆ ಆ ದುಷ್ಟ ಜನರೆಲ್ಲಾ ನಾಶವಾಗಿರುತ್ತಾರೆ.

ನಿನೆವೆಯು ನಾಶವಾಗುವದು

ವೈರಿಯು ನಿನ್ನ ಮೇಲೆ ಬರುವನು.
    ಆದ್ದರಿಂದ ನಿನ್ನ ಪಟ್ಟಣದ ಬುರುಜುಗಳನ್ನು ಕಾಯಿ.
    ಮಾರ್ಗದ ಮೇಲೆ ಕಣ್ಣಿಡು.
ಯುದ್ಧಕ್ಕೆ ತಯಾರಾಗು.
    ರಣರಂಗಕ್ಕೆ ಹೋಗಲು ಸಿದ್ಧನಾಗು.
ಹೌದು, ಯೆಹೋವನು ಯಾಕೋಬನ ವೈಭವವನ್ನು
    ಇಸ್ರೇಲಿನ ವೈಭವವಾಗಿ ಸ್ಥಾಪಿಸುವನು.
ವೈರಿಯು ಅವರನ್ನು ನಾಶಮಾಡಿ
    ಅವರ ದ್ರಾಕ್ಷಿಬಳ್ಳಿಯನ್ನು ಹಾಳುಮಾಡಿದ್ದನು.

ಆ ಸೈನಿಕರ ಗುರಾಣಿಗಳು ಕೆಂಪಗಿವೆ.
    ಅವರ ಸಮವಸ್ತ್ರಗಳು ಕೆಂಪುಬಣ್ಣದಿಂದ ಹೊಳೆಯುತ್ತಿವೆ.
ಅವರ ರಥಗಳು ಯುದ್ಧಕ್ಕಾಗಿ ಸಾಲುಗಟ್ಟಿ ನಿಂತಿವೆ
    ಮತ್ತು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿವೆ.
    ಅವರ ಭರ್ಜಿಗಳು ಎತ್ತಲ್ಪಟ್ಟಿವೆ.
ರಸ್ತೆಯ ಮೇಲೆ ರಥಗಳು ರಭಸದಿಂದ ಓಡುತ್ತಿವೆ.
    ನಗರದ ಚೌಕಕ್ಕೆ ಹಿಂದೆ ಮುಂದೆ ಓಡುತ್ತಿವೆ.
ಅವು ಉರಿಯುವ ಪಂಜಿನೋಪಾದಿಯಲ್ಲಿವೆ,
    ಒಂದೆಡೆಯಿಂದ ಇನ್ನೊಂದೆಡೆಗೆ ಹಾರುವ ಮಿಂಚಿನಂತಿವೆ.

ವೈರಿಗಳು ತಮ್ಮ ಶೂರ ಯೋಧರನ್ನು ಕರೆಯುತ್ತಿದ್ದಾರೆ.
    ಅವರು ಮುನ್ನುಗ್ಗುವಾಗ ಎಡವಿಬೀಳುವರು,
ಗೋಡೆಗಳ ಕಡೆಗೆ ನುಗ್ಗಿ
    ತಮ್ಮ ಗುರಾಣಿಗಳನ್ನು ಇಡುವರು.
ಆದರೆ ಹೊಳೆಯ ಕದಗಳು ತೆರೆಯಲ್ಪಟ್ಟಿವೆ.
    ಅದರ ಮೂಲಕ ವೈರಿಗಳು ಮುನ್ನುಗ್ಗುತ್ತಿದ್ದಾರೆ.
    ಅರಸನ ಮನೆಯನ್ನು ನಾಶಮಾಡುತ್ತಿದ್ದಾರೆ.
ವೈರಿಗಳು ರಾಣಿಯನ್ನು ಎತ್ತಿಕೊಂಡು ಹೋಗುತ್ತಾರೆ.
    ಆಕೆಯ ಸೇವಕಿಯರು ಪಾರಿವಾಳಗಳಂತೆ ಗೋಳಾಡುತ್ತಿದ್ದಾರೆ.
    ತಮ್ಮ ದುಃಖವನ್ನು ಪ್ರದರ್ಶಿಸಲು ಎದೆಯನ್ನು ಬಡಕೊಳ್ಳುತ್ತಿದ್ದಾರೆ.

ನಿನೆವೆಯು ನೀರು ಬತ್ತುತ್ತಿರುವ ಕೊಳದಂತಿದೆ.
“ನಿಲ್ಲಿ, ನಿಲ್ಲಿ, ಓಡಿಹೋಗಬೇಡಿ” ಎಂದು ಜನರು ಬೊಬ್ಬಿಡುತ್ತಾರೆ.
    ಆದರೆ ಅದರಿಂದ ಪ್ರಯೋಜನವಿಲ್ಲ.

ನಿನೆವೆಯನ್ನು ನಾಶಮಾಡುವ ಸೈನಿಕರೇ,
    ಬೆಳ್ಳಿಬಂಗಾರಗಳನ್ನು ತೆಗೆದುಕೊಳ್ಳಿರಿ.
ತೆಗೆದುಕೊಳ್ಳಲು ಎಷ್ಟೋ ವಸ್ತುಗಳಿವೆ.
    ಎಷ್ಟೋ ನಿಕ್ಷೇಪಗಳಿವೆ.
10 ಈಗ ನಿನೆವೆಯು ಖಾಲಿಯಾಯಿತು.
    ಎಲ್ಲಾ ದೋಚಲ್ಪಟ್ಟಿತು.
    ನಗರವು ನಾಶವಾಯಿತು.
ಜನರು ತಮ್ಮ ಧೈರ್ಯ ಕಳೆದುಕೊಂಡಿದ್ದಾರೆ.
    ಭಯದಿಂದ ಅವರ ಹೃದಯವು ಕರಗುತ್ತಿದೆ.
ಮೊಣಕಾಲುಗಳು ನಡುಗುತ್ತಿದೆ.
    ಅವರ ದೇಹವು ಅಲ್ಲಾಡುತ್ತಿದೆ.
    ಭಯದಿಂದ ಅವರ ಮುಖವು ರಕ್ತಹೀನವಾಗಿದೆ.

11 ಸಿಂಹದ ಗುಹೆಯಂತಿದ್ದ ನಿನೆವೆಯು ಎಲ್ಲಿ?
ಗಂಡು ಹೆಣ್ಣು ಸಿಂಹಗಳು ಅದರೊಳಗೆ ವಾಸಿಸುತ್ತಿದ್ದವು.
    ಅದರ ಮರಿಗಳಿಗೆ ಭಯವಿಲ್ಲ.
12 ನಿನೆವೆಯು (ಅರಸನಾದ ಸಿಂಹವು) ಜನರನ್ನು ಕೊಂದಿತು.
    ತನ್ನ ಮರಿಗಳಿಗೂ ಸಿಂಹಿಣಿಗೂ ಆಹಾರವನ್ನು ಕೊಟ್ಟಿತು.
ತನ್ನ ಗುಹೆಯನ್ನು (ನಿನೆವೆ ರಾಜನು) ಮನುಷ್ಯರ ಶರೀರಗಳಿಂದಲೂ
    ತಾನು ಕೊಂದ ಹೆಂಗಸರಿಂದಲೂ ತುಂಬಿಸಿತು.

13 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
    “ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ.
ನಿನ್ನ ರಥಗಳನ್ನು ಸುಟ್ಟುಹಾಕುತ್ತೇನೆ.
    ನಿನ್ನ ಎಳೆ ಸಿಂಹಗಳನ್ನು ರಣರಂಗದಲ್ಲಿ ಸಾಯಿಸುತ್ತೇನೆ.
    ಈ ಭೂಮಿಯ ಮೇಲೆ ಇನ್ನು ಯಾರನ್ನೂ ಭೇಟಿ ಮಾಡದಿರುವೆ.
ನಿನ್ನ ಸಂದೇಶವಾಹಕರಿಂದ ಕೆಟ್ಟ ಸಮಾಚಾರವನ್ನು
    ಜನರು ಇನ್ನು ಎಂದಿಗೂ ಕೇಳರು.”

ನಿನೆವೆಗೊಂದು ಕೆಟ್ಟ ಸುದ್ಧಿ

ಕೊಲೆಗಡುಕರ ಆ ಪಟ್ಟಣಕ್ಕೆ ಬಹಳ ಕೆಡುಕು ಉಂಟಾಗುವದು.
    ನಿನೆವೆಯು ಸುಳ್ಳಿನಿಂದ ತುಂಬಿದ ನಗರ.
ಬೇರೆ ರಾಜ್ಯಗಳಿಂದ ದೋಚಿದ ವಸ್ತುಗಳಿಂದ ತುಂಬಿದ ನಗರ.
    ಆ ಪಟ್ಟಣವು ಕೊಲ್ಲುವುದನ್ನೂ ಲೂಟಿ ಮಾಡುವುದನ್ನೂ ನಿಲ್ಲಿಸುವುದೇ ಇಲ್ಲ.
ಚಾವಟಿಯ ಚಟಾರವೆಂಬ ಶಬ್ಧವನ್ನು ನೀನು ಕೇಳಬಹುದು.
    ಚಕ್ರಗಳ ತಿರುಗುವ ಶಬ್ಧ,
ಕುದುರೆಗಳ ನಾಗಾಲೋಟವನ್ನು ಮತ್ತು
    ರಥಗಳ ಹಾರಾಟವನ್ನು ನೀವು ನೋಡಬಹುದು.
ಕುದುರೆಗಳ ಮೇಲಿರುವ ಸೈನಿಕರು ಆಕ್ರಮಣವೆಸಗಿದ್ದಾರೆ.
    ಅವರ ಖಡ್ಗವು ಮಿಂಚುತ್ತದೆ.
    ಅವರ ಬರ್ಜಿಯು ಹೊಳೆಯುತ್ತದೆ,
ಬಹು ಮಂದಿ ಸತ್ತಿರುತ್ತಾರೆ.
    ಶವಗಳ ರಾಶಿ ಬಿದ್ದಿವೆ, ಅವು ಲೆಕ್ಕವಿಲ್ಲದಷ್ಟು ಇವೆ.
    ಅವುಗಳ ಮೇಲೆ ಜನರು ಎಡವಿಬೀಳುತ್ತಾರೆ.
ಇದಕ್ಕೆಲ್ಲಾ ಕಾರಣ ನಿನೆವೆ.
    ನಿನೆವೆಯು ಒಬ್ಬ ವೇಶ್ಯೆ. ಆಕೆಗೆ ತೃಪ್ತಿ ಇರದು.
    ಆಕೆಗೆ ಹೆಚ್ಚುಹೆಚ್ಚು ಬೇಕು.
ಅನೇಕ ದೇಶಗಳಿಗೆ ತನ್ನನ್ನು ಮಾರಿಬಿಟ್ಟಿದ್ದಾಳೆ.
    ಮಂತ್ರತಂತ್ರಗಳನ್ನು ಉಪಯೋಗಿಸಿ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿದ್ದಾಳೆ.

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ.
    ನಿನ್ನ ಮೇಲಂಗಿಯನ್ನು ನಿನ್ನ ಮುಖದ ತನಕ ಎತ್ತುವೆನು.
ಜನಾಂಗಗಳು ನಿನ್ನ ಬೆತ್ತಲೆತನವನ್ನು ನೋಡಲಿ.
    ನಿನ್ನ ನಾಚಿಕೆಯನ್ನು ಅವರು ನೋಡಲಿ.
ನಿನ್ನ ಮೇಲೆ ಹೊಲಸನ್ನು ಬಿಸಾಡುವೆನು.
    ನಿನ್ನನ್ನು ದ್ವೇಷದಿಂದ ಕಾಣುವೆನು.
    ಜನರು ನಿನ್ನನ್ನು ನೋಡಿ ನಗಾಡುವರು.
ನಿನ್ನನ್ನು ನೋಡಿದವರೆಲ್ಲರು ದಂಗುಬಡಿಯಲ್ಪಡುವರು.
    ‘ನಿನೆವೆಯು ನಾಶವಾಯಿತು. ಆಕೆಗಾಗಿ ಯಾರು ಮರುಗುವರು?’
    ಎಂದು ಜನರು ಹೇಳುವರು.
ನಿನ್ನನ್ನು ಸಂತೈಸುವವರು ಯಾರೂ ಸಿಗುವುದಿಲ್ಲವಲ್ಲಾ?”

ನಿನೆವೆಯೇ, ನೀನು ನೈಲ್ ನದಿಯ ದಡದಲ್ಲಿರುವ ತೆಬೆಸ್ ಗಿಂತಲೂ ಉತ್ತಮಳೋ? ಇಲ್ಲ. ತೆಬೆಸಿನ ಸುತ್ತಲೂ ನೀರು ಇತ್ತು. ಆ ನೀರು ಆಕೆಯನ್ನು ತನ್ನ ವೈರಿಗಳಿಂದ ಕಾಪಾಡಲು ಶಕ್ತವಾಯಿತು. ಆ ನೀರನ್ನು ಆಕೆಯು ಗೋಡೆಯಂತೆ ಉಪಯೋಗಿಸಿದಳು. ಇಥಿಯೋಫಿಯಾ ಮತ್ತು ಈಜಿಪ್ಟ್ ತೆಬೆಸ್‌ಗೆ ಹೆಚ್ಚಿನ ಬಲವನ್ನು ಕೊಟ್ಟವು. ಸುದಾನ್ ಮತ್ತು ಲಿಬ್ಯ ಆಕೆಯನ್ನು ಸಹಕರಿಸಿದವು. 10 ಆದರೆ ತೆಬೆಸ್ ಸೋಲಿಸಲ್ಪಟ್ಟಿತು. ಆಕೆಯ ಪ್ರಜೆಗಳು ಬೇರೆ ದೇಶಕ್ಕೆ ಕೈದಿಗಳಾಗಿ ಒಯ್ಯಲ್ಪಟ್ಟರು. ಸೈನಿಕರು ಆಕೆಯ ಹಸುಗೂಸುಗಳನ್ನು ರಸ್ತೆಯ ಮೂಲೆಮೂಲೆಗಳಲ್ಲಿ ಹೊಡೆದು ಸಾಯಿಸಿದರು. ತಮ್ಮಲ್ಲಿ ಯಾರು ಉನ್ನತ ಅಧಿಕಾರಿಗಳನ್ನು ಗುಲಾಮರನ್ನಾಗಿ ಉಪಯೋಗಿಸಬೇಕೆಂಬದಾಗಿ ಚೀಟುಹಾಕಿದರು. ಅವರು ತೆಬೆಸಿನ ಮುಖ್ಯ ಅಧಿಕಾರಿಗಳನ್ನು ಸಂಕೋಲೆಗಳಿಂದ ಬಂಧಿಸಿದರು.

11 ಆದ್ದರಿಂದ ನಿನೆವೆಯೇ, ನೀನು ಸಹ ಕುಡಿದು ಅಮಲೇರಿದವನಂತೆ ಕೆಳಗೆ ಬಿದ್ದುಬಿಡುವೆ. ನೀನು ಅಡಗಿಕೊಳ್ಳಲು ಪ್ರಯತ್ನಿಸುವೆ. ವೈರಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತವಾದ ಸ್ಥಳವನ್ನು ಹುಡುಕುವೆ. 12 ಆದರೆ ನಿನೆವೆಯೇ, ನಿನ್ನ ಎಲ್ಲಾ ಬಲವಾದ ಬುರುಜುಗಳು ಅಂಜೂರದ ಮರದಂತಿರುವವು. ಹೊಸ ಅಂಜೂರ ಹಣ್ಣುಗಳು ಮಾಗುವವು. ಒಬ್ಬನು ಬಂದು ಮರವನ್ನು ಅಲ್ಲಾಡಿಸಲು ಅಂಜೂರ ಹಣ್ಣುಗಳು ಅಲ್ಲಾಡಿಸುವವನ ಬಾಯಿಗೆ ಬೀಳುವವು. ಅವನು ಅವುಗಳನ್ನು ತಿಂದುಬಿಡುವನು; ಅವು ಇಲ್ಲವಾಗುವವು.

13 ನಿನೆವೆಯೇ, ನಿನ್ನ ಜನರೆಲ್ಲಾ ಹೆಂಗಸರಂತೆ, ವೈರಿ ಸೈನಿಕರು ಅವರನ್ನು ಹಿಡಿದುಕೊಳ್ಳಲು ತಯಾರಾಗಿದ್ದಾರೆ. ನಿನ್ನ ದೇಶದ ದ್ವಾರಗಳು, ವೈರಿಗಳು ಪ್ರವೇಶಿಸುವಂತೆ ಅಗಲವಾಗಿ ತೆರೆಯಲ್ಪಟ್ಟಿವೆ. ದ್ವಾರದ ಬಾಗಿಲಿನ ಅಡ್ಡಪಟ್ಟಿಯು ಬೆಂಕಿಯಿಂದ ಸುಟ್ಟಿರುತ್ತದೆ.

14 ನೀರನ್ನು ತಂದು ಪಟ್ಟಣದೊಳಗೆ ಶೇಖರಿಸಿಡು. ಯಾಕೆಂದರೆ ವೈರಿ ಸೈನ್ಯವು ನಿನ್ನ ನಗರವನ್ನು ಮುತ್ತುವವು. ನಗರದೊಳಗೆ ಅನ್ನ ನೀರನ್ನು ಯಾರಿಗೂ ತರಲು ಬಿಡುವುದಿಲ್ಲ. ನಿನ್ನ ಬುರುಜುಗಳನ್ನು ಬಲಪಡಿಸಿಕೊ. ಹೆಚ್ಚು ಇಟ್ಟಿಗೆಗಳನ್ನು ಮಾಡುವಂತೆ ಆವೆಮಣ್ಣನ್ನು ಶೇಖರಿಸು. ಗಾರೆಯನ್ನು ಕಲಸಿಕೊ. ಇಟ್ಟಿಗೆಗಳನ್ನು ಮಾಡುವ ಅಚ್ಚನ್ನು ತೆಗೆದುಕೊ. 15 ಇವೆಲ್ಲವನ್ನು ನೀನು ಮಾಡಬಹುದು. ಆದರೂ ಬೆಂಕಿಯು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವುದು. ಖಡ್ಗವು ನಿನ್ನನ್ನು ಸಾಯಿಸುವದು. ನಿನ್ನ ದೇಶವು ಮಿಡತೆಗಳ ಹಿಂಡಿನಿಂದ ತಿಂದುಹಾಕಲ್ಪಟ್ಟ ದೇಶದಂತೆ ಕಾಣುವುದು.

ನಿನೆವೆಯೇ, ನೀನು ಬೆಳೆಯುತ್ತಾ ಬೆಳೆಯುತ್ತಾ ಮಿಡತೆಗಳ ಹಿಂಡಿನಂತಾದೆ. ನೀನು ಮಿಡತೆಗಳಂತಾದೆ. 16 ನಿನ್ನಲ್ಲಿ ಅನೇಕ ವ್ಯಾಪಾರಸ್ಥರು ಊರೂರಿಗೆ ತಿರುಗಿ ವ್ಯಾಪಾರ ಮಾಡುವವರಿದ್ದಾರೆ. ಅವರು ಆಕಾಶದಲ್ಲಿರುವ ನಕ್ಷತ್ರಗಳಷ್ಟು ಇದ್ದಾರೆ. ಅವರು ಮಿಡತೆಗಳಂತೆ ಬಂದು, ಎಲ್ಲವನ್ನು ತಿಂದು ಮುಗಿಸಿದ ಬಳಿಕ ಹೋಗುವಂಥವರಾಗಿದ್ದಾರೆ. 17 ನಿನ್ನ ಸರಕಾರದ ಅಧಿಕಾರಿಗಳು ಸಹ ಮಿಡತೆಗಳಂತಿದ್ದಾರೆ. ಅವರು ಚಳಿಯ ದಿವಸದಲ್ಲಿ ಕಲ್ಲಿನ ಗೋಡೆಯ ಮೇಲೆ ಬಂದು ಕುಳಿತುಕೊಳ್ಳುವ ಮಿಡತೆಯಂತಿದ್ದಾರೆ. ಆದರೆ ಸೂರ್ಯನು ಮೇಲೆ ಬಂದಾಗ ಬಿಸಿಲು ಏರಿ ಕಲ್ಲು ಬಿಸಿಯಾದಾಗ ಆ ಮಿಡತೆಗಳೆಲ್ಲಾ ಹಾರಿಹೋಗುವವು. ಅವು ಎಲ್ಲಿಗೆ ಹೋದವು ಎಂದು ಯಾರಿಗೂ ಗೊತ್ತಿಲ್ಲ. ನಿನ್ನ ಅಧಿಕಾರಿಗಳೂ ಅದೇ ರೀತಿಯಲ್ಲಿರುವರು.

18 ಅಶ್ಶೂರದ ಅರಸನೇ, ನಿನ್ನ ಕುರುಬರು ನಿದ್ರಿಸುತ್ತಿದ್ದಾರೆ. ಆ ಬಲಾಢ್ಯ ಕುರುಬರು ನಿದ್ರೆ ಮಾಡುತ್ತಿದ್ದಾರೆ. ನಿನ್ನ ಕುರಿಗಳು ಬೆಟ್ಟಗಳ ಮೇಲೆ ಚದರಿಹೋಗಿವೆ. ಅವುಗಳನ್ನು ಹಿಂತಿರುಗಿಸಿ ಒಟ್ಟುಗೂಡಿಸಲು ಯಾರೂ ಇಲ್ಲ. 19 ನಿನೆವೆಯೇ, ನೀನು ತೀವ್ರವಾದ ಗಾಯಹೊಂದಿರುವೆ. ಯಾವದೂ ನಿನ್ನನ್ನು ಗುಣಪಡಿಸಲಾರದು. ನಿನ್ನ ನಾಶನದ ಸುದ್ದಿ ಕೇಳಿದವರೆಲ್ಲರೂ ಚಪ್ಪಾಳೆ ತಟ್ಟುವರು. ಅವರು ಹರ್ಷಿಸುವರು. ಯಾಕೆಂದರೆ ನಿನಗಾದ ತೀವ್ರ ಗಾಯದ ನೋವನ್ನು ಅವರೆಲ್ಲರೂ ಅನುಭವಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International