Beginning
ದೇವರ ಸಂದೇಶಕನು ಜೆರುಸಲೇಮ್‌ನ್ನು ದಂಡಿಸಿದ್ದು
9 ಆಮೇಲೆ ದೇವರು ಗಟ್ಟಿಯಾದ ಧ್ವನಿಯಿಂದ ಕರೆಯುವುದು ನನಗೆ ಕೇಳಿಸಿತು: “ಪಟ್ಟಣವನ್ನು ದಂಡಿಸಲು ನೇಮಕಗೊಂಡಿರುವವರೇ, ಇಲ್ಲಿಗೆ ಬನ್ನಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಾಶದ ಆಯುಧವನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಬನ್ನಿ.” 2 ಆಗ ಆರು ಮಂದಿ ಪುರುಷರು ಉತ್ತರದಿಕ್ಕಿನಲ್ಲಿದ್ದ ಮೇಲಿನ ದ್ವಾರದ ಮಾರ್ಗದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಪ್ರತಿಯೊಬ್ಬನ ಕೈಯಲ್ಲಿ ಮಾರಕಾಸ್ತ್ರವಿತ್ತು. ಅವರಲ್ಲೊಬ್ಬನು ನಾರುಮಡಿಯನ್ನು ಧರಿಸಿದ್ದನು. ಅವನ ಸೊಂಟದಲ್ಲಿ ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವಿತ್ತು. ಅವರು ಆಲಯದೊಳಗಿದ್ದ ತಾಮ್ರದ ವೇದಿಕೆಯ ಬಳಿ ಹೋಗಿ ನಿಂತುಕೊಂಡರು. 3 ಆಗ ಇಸ್ರೇಲರ ದೇವರ ಮಹಿಮೆಯು ತಾನು ಆಸನಾರೂಢನಾಗಿದ್ದ ಕೆರೂಬಿದೂತರ ಮೇಲಿನಿಂದ ಏರಿ ದೇವಾಲಯದ ಪ್ರವೇಶ ಸ್ಥಳಕ್ಕೆ ಹೋಯಿತು. ಆ ಮಹಿಮೆಯು ನಾರುಮಡಿಯನ್ನು ಧರಿಸಿದ್ದ, ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಹೊಂದಿದ್ದ ಪುರುಷನನ್ನು ಕರೆಯಿತು.
4 ಆಗ ಯೆಹೋವನು ಅವನಿಗೆ, “ಜೆರುಸಲೇಮ್ ನಗರದಲ್ಲೆಲ್ಲಾ ತಿರುಗಾಡು. ಜೆರುಸಲೇಮಿನಲ್ಲಿ ನಡೆಯುತ್ತಿರುವ ಅಸಹ್ಯವಾದ ದುಷ್ಕೃತ್ಯಗಳ ಬಗ್ಗೆ ನರಳಾಡುತ್ತಿರುವವರ ಮತ್ತು ನಿಟ್ಟುಸಿರುಬಿಡುತ್ತಿರುವವರ ಹಣೆಯ ಮೇಲ್ಗಡೆ ಒಂದು ಗುರುತನ್ನಿಡು” ಎಂದು ಹೇಳಿದನು.
5-6 ಬಳಿಕ ದೇವರು ಅಲ್ಲಿದ್ದ ಉಳಿದವರಿಗೆ, “ಮೊದಲನೆಯವನನ್ನು ಹಿಂಬಾಲಿಸಿರಿ. ಹಣೆಗಳ ಮೇಲೆ ಗುರುತಿಲ್ಲದ ಜನರನ್ನು ಕೊಂದು ನಾಶಪಡಿಸಿರಿ. ಯಾವ ಮರುಕವನ್ನಾಗಲಿ ಕನಿಕರವನ್ನಾಗಲಿ ತೋರದೆ ವೃದ್ಧರನ್ನೂ ಯೌವನಸ್ಥರನ್ನೂ ಯುವತಿಯರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಕೊಲ್ಲಿರಿ. ಆದರೆ ಹಣೆಯ ಮೇಲೆ ಗುರುತು ಹೊಂದಿರುವ ಯಾರನ್ನೂ ಮುಟ್ಟಬೇಡಿ. ಇದನ್ನು ನನ್ನ ಆಲಯದಿಂದಲೇ ಆರಂಭಿಸಿ” ಎಂದು ಹೇಳಿದನು. ಆದ್ದರಿಂದ ಅವರು ಆಲಯದ ಮುಂದೆ ಇದ್ದ ಹಿರಿಯರನ್ನು ಕೊಲ್ಲುವುದರ ಮೂಲಕ ಈ ಕೆಲಸವನ್ನು ಆರಂಭಿಸಿದರು.
7 ದೇವರು ಅವರಿಗೆ ಹೇಳಿದ್ದೇನೆಂದರೆ, “ಈ ಆಲಯವನ್ನು ಹೊಲೆ ಮಾಡಿರಿ. ಆಲಯದ ಅಂಗಳವನ್ನು ಹೆಣಗಳಿಂದ ತುಂಬಿಸಿರಿ. ಈಗ ಹೊರಡಿ.” ಅವರು ಹೊರಟುಹೋಗಿ ನಗರದ ಜನರನ್ನು ಕೊಂದರು.
8 ಅವರು ಜನರನ್ನು ಕೊಲ್ಲಲು ಹೊರಟಾಗ ನಾನೊಬ್ಬನೇ ಅಲ್ಲಿದ್ದೆನು. ನಾನು ಬಾಗಿ ನಮಸ್ಕರಿಸಿ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನೀನು ಜೆರುಸಲೇಮಿನ ಮೇಲೆ ನಿನ್ನ ಕೋಪವನ್ನು ಪ್ರದರ್ಶಿಸುವಾಗ ಉಳಿದ ಇಸ್ರೇಲರನ್ನು ನೀನು ನಿರ್ಮೂಲ ಮಾಡುವೆ!” ಎಂದು ಹೇಳಿದೆನು.
9 ಅದಕ್ಕೆ ದೇವರು, “ಇಸ್ರೇಲ್ ಮತ್ತು ಯೆಹೂದ ಜನರ ದೋಷವು ಬಹಳ ಹೆಚ್ಚಾಗಿದೆ. ಈ ದೇಶದಲ್ಲಿ ಎಲ್ಲೆಲ್ಲಿಯೂ ಕೊಲೆಗಳು ನಡೆಯುತ್ತಿವೆ. ಈ ನಗರವು ಅಪರಾಧಗಳಿಂದ ತುಂಬಿಹೋಗಿದೆ. ಯಾಕೆಂದರೆ ಜನರು ಹೀಗೆಂದುಕೊಳ್ಳುತ್ತಿದ್ದಾರೆ, ‘ಯೆಹೋವನು ಈ ದೇಶವನ್ನು ಬಿಟ್ಟುಹೋಗಿದ್ದಾನೆ. ನಾವು ಮಾಡುತ್ತಿರುವಂಥದ್ದನ್ನು ಅವನು ನೋಡುವುದಿಲ್ಲ.’ 10 ಅವರಿಗೆ ನಾನು ಕನಿಕರ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದಿಲ್ಲ. ಅವರು ತಾವೇ ಇದನ್ನು ತಮ್ಮ ಮೇಲೆ ಬರಮಾಡಿಕೊಂಡರು. ಅವರು ಹೊಂದಲು ಯೋಗ್ಯವಾದ ಶಿಕ್ಷೆಯನ್ನೇ ನಾನು ಕೊಡುತ್ತಿರುವುದು.”
11 ಆಗ ನಾರುಬಟ್ಟೆಯನ್ನು ಧರಿಸಿಕೊಂಡು ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದವನು, “ನೀನು ಆಜ್ಞಾಪಿಸಿದ ಮೇರೆಗೆ ನಾನು ಮಾಡಿದೆ” ಅಂದನು.
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟಿದ್ದು
10 ಕೆರೂಬಿಯರ ತಲೆಗಳ ಮೇಲಿದ್ದ ಗುಮಟದ ಕಡೆಗೆ ನೋಡಿದೆನು. ಆ ಗುಮಟದ ಮೇಲೆ ಇಂದ್ರನೀಲಮಣಿಯಿಂದ ಮಾಡಿದ ಸಿಂಹಾಸನದಂತೆ ಕಾಣುತ್ತಿದ್ದ ಏನೋ ಇತ್ತು. 2 ಆಗ ಸಿಂಹಾಸನದಲ್ಲಿ ಕೂತಿದ್ದಾತನು ನಾರುಮಡಿ ಧರಿಸಿದ್ದವನಿಗೆ, “ಕೆರೂಬಿದೂತರ ಕೆಳಗಿರುವ ಚಕ್ರಗಳ ನಡುವೆ ಹೋಗು. ಕೆರೂಬಿಗಳ ನಡುವೆ ಇರುವ ಉರಿಯುವ ಕೆಂಡಗಳನ್ನು ನಿನ್ನ ಅಂಗೈಗಳಲ್ಲಿ ತುಂಬಿಕೊಂಡು ಜೆರುಸಲೇಮ್ ನಗರದ ಮೇಲೆ ಹರಡು” ಎಂದು ಹೇಳಿದನು.
ನಾನು ನೋಡುತ್ತಿರಲು ಆ ಮನುಷ್ಯನು ಒಳಗೆ ಹೋದನು. 3 ಆ ಮನುಷ್ಯನು ಚಕ್ರಗಳ ನಡುವೆ ಒಳಗೆ ಹೋದಾಗ ಕೆರೂಬಿದೂತರು ಆಲಯದ ದಕ್ಷಿಣಕ್ಕೆ ಇರುವ ಸ್ಥಳದಲ್ಲಿ ನಿಂತಿದ್ದರು. ಒಳಗಿನ ಅಂಗಳವು ಮೋಡದಿಂದ ತುಂಬಿತ್ತು. 4 ಯೆಹೋವನ ಮಹಿಮೆಯು ಕೆರೂಬಿದೂತರ ಮೇಲಿನಿಂದ ಹೊರಟು ಆಲಯದ ಹೊಸ್ತಿಲಿಗೆ ಬಂದಿತು. ಆಗ ಮೋಡವು ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ಮಹಿಮೆಯ ಪ್ರಕಾಶವು ಇಡೀ ಅಂಗಳವನ್ನು ತುಂಬಿಕೊಂಡಿತು. 5 ಕೆರೂಬಿದೂತರ ರೆಕ್ಕೆಗಳ ಬಡಿತದ ಶಬ್ದವು ಹೊರಗಿನ ಪ್ರಾಕಾರದ ತನಕ ಕೇಳುತ್ತಿತ್ತು. ಅದು ತುಂಬಾ ಗಟ್ಟಿಯಾದ ಶಬ್ದವಾಗಿತ್ತು. ಸರ್ವಶಕ್ತನಾದ ದೇವರು ಮಾತನಾಡುವಾಗ ಆಗುವ ಗುಡುಗಿನ ಶಬ್ದದಂತಿತ್ತು.
6 ನಾರುಮಡಿ ಧರಿಸಿಕೊಂಡಿದ್ದವನಿಗೆ ದೇವರು, “ಕೆರೂಬಿದೂತರ ಮಧ್ಯದೊಳಗಿಂದ, ಚಕ್ರಗಳ ಮಧ್ಯೆ ಪ್ರವೇಶಿಸಿ ಅಲ್ಲಿಂದ ಉರಿಯುವ ಕೆಂಡಗಳನ್ನು ತೆಗೆದುಕೊ” ಎಂದು ಆಜ್ಞಾಪಿಸಿದಾಗ, ಆ ಮನುಷ್ಯನು ಅಲ್ಲಿಗೆ ಹೋಗಿ ಚಕ್ರಗಳ ಸಮೀಪದಲ್ಲಿ ನಿಂತುಕೊಂಡನು. 7 ಕೆರೂಬಿದೂತರಲ್ಲೊಬ್ಬನು ಅವರ ಮಧ್ಯೆಯಿದ್ದ ಉರಿಯುವ ಕೆಂಡದಲ್ಲಿ ಸ್ವಲ್ಪವನ್ನು ಆ ಮನುಷ್ಯನ ಕೈಗೆ ಸುರಿದನು. ಆ ಮನುಷ್ಯನು ಅಲ್ಲಿಂದ ಹೊರಟನು. 8 ಕೆರೂಬಿದೂತರ ರೆಕ್ಕೆಯ ಕೆಳಗೆ ಮನುಷ್ಯರ ಕೈಗಳಂತೆ ಕಾಣುತ್ತಿದ್ದ ಕೈಗಳಿದ್ದವು.
9 ಆಗ ನಾನು ಅಲ್ಲಿ ನಾಲ್ಕು ಚಕ್ರಗಳಿರುವದನ್ನು ಕಂಡೆನು. ಪ್ರತಿಯೊಬ್ಬ ಕೆರೂಬಿದೂತನ ಬಳಿ ಒಂದು ಚಕ್ರವಿತ್ತು. ಆ ಚಕ್ರಗಳು ಹೊಳೆಯುವ ಹಳದಿ ರತ್ನದಂತೆ ಕಂಡವು. 10 ಅಲ್ಲಿದ್ದ ನಾಲ್ಕು ಚಕ್ರಗಳೂ ಒಂದೇ ಪ್ರಕಾರವಾಗಿದ್ದವು. ಅವು ಚಕ್ರದೊಳಗೆ ಚಕ್ರಗಳಿದ್ದಂತೆ ತೋರುತ್ತಿದ್ದವು. 11 ಅವು ಚಲಿಸುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗಾದರೂ ಅತ್ತಿತ್ತ ತಿರುಗದೆ ಚಲಿಸುತ್ತಿದ್ದವು. 12 ಅವರ ಶರೀರದ ಮೇಲೆಲ್ಲಾ ಕಣ್ಣುಗಳಿದ್ದವು. ಅವರ ಬೆನ್ನಿನ ಮೇಲೆ, ಕೈಗಳ ಮೇಲೆ, ರೆಕ್ಕೆಗಳ ಮೇಲೆ, ಅವರ ಚಕ್ರಗಳ ಮೇಲೆ ಕಣ್ಣುಗಳಿದ್ದವು. ಹೌದು, ಅವರ ನಾಲ್ಕು ಚಕ್ರಗಳ ಮೇಲೂ ಕಣ್ಣುಗಳಿದ್ದವು. 13 ಈ ಚಕ್ರಗಳಿಗೆ “ಚರಕ ಚಕ್ರ” ಎಂಬುದಾಗಿ ಕರೆಯುತ್ತಾರೆಂದು ನನಗೆ ಕೇಳಿಸಿತು.
14 ಪ್ರತೀ ಕೆರೂಬಿದೂತನಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯದು ಮನುಷ್ಯನ ಮುಖ, ಮೂರನೆಯ ಸಿಂಹದ ಮುಖ ಮತ್ತು ನಾಲ್ಕನೆಯ ಗರುಡನ ಮುಖ. 15 ಈ ಜೀವಿಗಳು ಮೊದಲು ನಾನು ಕೆಬಾರ್ ನದಿಯ ಬಳಿ ಕಂಡ ದರ್ಶನದಲ್ಲಿದ್ದ ಕೆರೂಬಿಯರೇ ಆಗಿರಬೇಕು ಎಂದು ಆಗ ನನಗೆ ಮನದಟ್ಟಾಯಿತು. ಬಳಿಕ ಕೆರೂಬಿಗಳು ಮೇಲಕ್ಕೆ ಏರಿದವು. 16 ಅವುಗಳೊಂದಿಗೆ ಚಕ್ರಗಳು ಎತ್ತಲ್ಪಟ್ಟವು. ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಗಾಳಿಯಲ್ಲಿ ಹಾರಿದಾಗ ಅವುಗಳ ಪಕ್ಕದಲ್ಲಿದ್ದ ಚಕ್ರಗಳು ತಮ್ಮ ಸ್ಥಳವನ್ನು ಬದಲಾಯಿಸಲಿಲ್ಲ. 17 ಕೆರೂಬಿದೂತರು ಗಾಳಿಯಲ್ಲಿ ಹಾರಾಡಿದಾಗ ಚಕ್ರಗಳೂ ಅವರೊಂದಿಗೆ ಹೋದವು. ಅವು ನಿಂತಾಗ ಚಕ್ರಗಳೂ ನಿಂತುಬಿಡುತ್ತಿದ್ದವು. ಯಾಕೆಂದರೆ ಜೀವಿಗಳನ್ನು ಹತೋಟಿಯಲ್ಲಿಡುವ ಆತ್ಮವು ಚಕ್ರಗಳಲ್ಲಿತ್ತು.
18 ಆಗ ಆಲಯದ ಹೊಸ್ತಿಲಿನ ಮೇಲಿನಿಂದ ಯೆಹೋವನ ಮಹಿಮೆಯು ಎದ್ದು ಕೆರೂಬಿದೂತರು ನಿಂತಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 19 ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.
20 ಆಗ ಕೆಬಾರ್ ನದಿಯ ಬಳಿ ನನಗಾದ ಇಸ್ರೇಲಿನ ದೇವರ ಮಹಿಮೆಯ ದರ್ಶನದಲ್ಲಿ ನಾನು ಕಂಡ ಜೀವಿಗಳು ಕೆರೂಬಿದೂತರೇ ಎಂದು ತಿಳಿಯಿತು. 21 ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ, ನಾಲ್ಕು ರೆಕ್ಕೆಗಳೂ ಮತ್ತು ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಂತಿದ್ದ ಕೈಗಳೂ ಇದ್ದವು. 22 ನಾನು ಕೆಬಾರ್ ಕಾಲುವೆಯ ಪಕ್ಕದಲ್ಲಿ ಕಂಡ ಜೀವಿಗಳ ಮುಖಗಳಂತೆಯೇ ಕೆರೂಬಿದೂತರ ಮುಖಗಳಿದ್ದವು. ಪ್ರತಿಯೊಂದು ನೇರವಾಗಿ ಮುಂದೆ ಸಾಗಿದವು.
ನಾಯಕರ ವಿರುದ್ಧ ಪ್ರವಾದನೆಗಳು
11 ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.
2 ಆದ ದೇವರು ನನ್ನೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, “ನರಪುತ್ರನೇ, ಈ ಪಟ್ಟಣದಲ್ಲಿ ದುಷ್ಟಯೋಜನೆಗಳನ್ನು ಮಾಡುವವರೂ ಕೆಡುಕಿನ ಸಲಹೆಗಳನ್ನು ನೀಡುವವರೂ ಇವರೇ. 3 ‘ಮನೆಗಳನ್ನು ಕಟ್ಟುವ ಅಗತ್ಯ ಈಗಿಲ್ಲ. ಪಟ್ಟಣವು ಮಡಕೆಯಂತಿದೆ ಮತ್ತು ನಾವು ಮಾಂಸದಂತಿದ್ದೇವೆ’ ಎಂದು ಸುಳ್ಳು ಹೇಳುತ್ತಿದ್ದಾರೆ. 4 ಆದ್ದರಿಂದ ನೀನು ನನ್ನ ಪರವಾಗಿ ಅವರೊಂದಿಗೆ ಮಾತನಾಡಬೇಕು. ನರಪುತ್ರನೇ, ನೀನು ಹೋಗಿ ಅವರಿಗೆ ದೈವವಾಣಿ ನುಡಿ.”
5 ಆಗ ಯೆಹೋವನ ಆತ್ಮನು ನನ್ನ ಮೇಲೆ ಬಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನ್ನು ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದು ನಾನು ಬಲ್ಲೆನು. 6 ನೀನು ಈ ನಗರದಲ್ಲಿ ಅನೇಕ ಜನರನ್ನು ಕೊಲೆ ಮಾಡಿರುತ್ತೀ. ರಸ್ತೆಗಳನ್ನು ಹೆಣಗಳಿಂದ ತುಂಬಿಸಿರುತ್ತೀ. 7 ಈಗ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಆ ಹೆಣಗಳು ಮಾಂಸದಂತಿವೆ. ನಗರವು ಮಡಕೆಯಂತಿದೆ. ಆದರೆ ನಾನು ನಿಮ್ಮನ್ನು ಸುರಕ್ಷಿತವಾದ ಆ ಮಡಕೆಯಿಂದ ತೆಗೆದುಬಿಡುವೆನು. 8 ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನ್ನ ಮೇಲೆ ಖಡ್ಗವನ್ನು ತರುವೆನು. ನಮ್ಮ ಒಡೆಯನಾದ ಯೆಹೋವನು ಈ ಮಾತುಗಳನ್ನು ನುಡಿದಿರುವದರಿಂದ ಇದು ನಡೆಯುವುದು.’”
9 ದೇವರು ಮುಂದುವರಿಸುತ್ತಾ, “ಈ ನಗರದೊಳಗಿಂದ ನಿಮ್ಮನ್ನು ಹೊರಡಿಸಿ ನಿಮ್ಮನ್ನು ಪರದೇಶಿಯರಿಗೆ ವಶಪಡಿಸುತ್ತೇನೆ; ಮತ್ತು ನಿಮ್ಮನ್ನು ದಂಡಿಸುತ್ತೇನೆ. 10 ನೀವು ಕತ್ತಿಯಿಂದಲೇ ಸಾಯುವಿರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ದಂಡಿಸುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು. 11 ಹೌದು, ಈ ಸ್ಥಳವು ಬೇಯಿಸುವ ಪಾತ್ರೆ ಮತ್ತು ನೀವು ಆ ಪಾತ್ರೆಯಲ್ಲಿ ಬೇಯಿಸಲ್ಪಡುವ ಮಾಂಸವಾಗಿರುತ್ತೀರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ಶಿಕ್ಷಿಸುವೆನು. 12 ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನ್ನ ಆಜ್ಞೆಗೆ ನೀವು ಅವಿಧೇಯರಾದಿರಿ. ನನ್ನ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”
13 ನಾನು ದೇವರ ಪರವಾಗಿ ಮಾತನಾಡುವದನ್ನು ನಿಲ್ಲಿಸಿದ ಕೂಡಲೇ, ಬೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಬಗ್ಗಿ, “ನನ್ನ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನ್ನು ಸಂಪೂರ್ಣವಾಗಿ ನಾಶಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.
ಜೆರುಸಲೇಮಿನ ಚದರಿಸಲ್ಪಟ್ಟ ಜನರ ಕುರಿತು ಪ್ರವಾದನೆ
14 ಯೆಹೋವನ ಸಂದೇಶ ನನಗೆ ದೊರೆಯಿತು: 15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.
16 “ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು. 17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು. 18 ನನ್ನ ಜನರು ಹಿಂದಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನ್ನು ತೆಗೆದುಹಾಕುವರು. 19 ಅವರನ್ನು ಹಿಂದಕ್ಕೆ ಬರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನ್ನು ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನ್ನು ತೆಗೆದು ಮೃದುವಾದ ಹೃದಯವನ್ನಿಡುವೆನು. 20 ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’”
ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು
21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು. 22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನ್ನು ಚಾಚಿ ಆಕಾಶದಲ್ಲಿ ಹಾರಿಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು. 23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಬೆಟ್ಟದ ಮೇಲೆ ನಿಂತಿತು. 24 ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು. 25 ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.
ಯೆಹೆಜ್ಕೇಲನು ಸೆರೆಯಾಳಿನಂತೆ ಜೀವಿಸಿದ್ದು
12 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: 2 “ನರಪುತ್ರನೇ, ನೀನು ದಂಗೆಕೋರರ ಮಧ್ಯೆ ವಾಸಿಸುತ್ತೀ. ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ; ಅವರಿಗೆ ಕಿವಿಗಳಿದ್ದರೂ ಕೇಳುವದಿಲ್ಲ; ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. 3 ಆದ್ದರಿಂದ ನರಪುತ್ರನೇ, ನಿನ್ನ ಚೀಲಗಳನ್ನು ತುಂಬಿಸಿ ಸೆರೆಯಾಳಾಗಿ ಹೋಗುವವನಂತೆ ನಟಿಸು. ನೀನು ಹಗಲಲ್ಲಿ ಹೋಗುವುದನ್ನು ಜನರು ನೋಡಲಿ. ಸೆರೆಯಾಳಿನಂತೆ ಅವರ ಕಣ್ಣೆದುರಿನಲ್ಲೆ ನಿನ್ನ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗು. ಒಂದುವೇಳೆ ಅವರು ತಾವು ದಂಗೆಕೋರರೆಂದು ತಿಳಿದುಕೊಳ್ಳಬಹುದು.
4 “ಸೆರೆಯಾಳಾಗಿ ಹೋಗುವವನಂತೆ ಹಗಲಲ್ಲಿ ನಿನ್ನ ಚೀಲಗಳನ್ನು ಹೊರಗೆ ತೆಗೆದುಕೊಂಡು ಬಾ. ಸಾಯಂಕಾಲವಾದಾಗ ಅವರ ಕಣ್ಣೆದುರಿನಲ್ಲಿಯೇ ನೀನು ದೂರದೇಶಕ್ಕೆ ಸೆರೆಯವನಾಗಿ ಹೋಗುವವನಂತೆ ನಟನೆ ಮಾಡು. 5 ಜನರು ನಿನ್ನನ್ನು ನೋಡುತ್ತಿರುವಾಗ ಗೋಡೆಯಲ್ಲಿ ರಂಧ್ರ ಮಾಡಿ ಅದರಿಂದ ನುಸುಳಿ ಹೊರಗೆ ಹೋಗು. 6 ರಾತ್ರಿಕಾಲದಲ್ಲಿ ಚೀಲವನ್ನು ಹೆಗಲಿಗೇರಿಸಿ ಹೊರಗೆ ನಡಿ. ನೀನು ನೆಲವನ್ನು ನೋಡಲಾಗದಂತೆ ನಿನ್ನ ಮುಖವನ್ನು ಮುಚ್ಚಿಕೋ. ಇದೆಲ್ಲಾ ಮಾಡುವಾಗ ಜನರು ನಿನ್ನನ್ನು ನೋಡುತ್ತಿರಬೇಕು. ಯಾಕೆಂದರೆ ನಿನ್ನನ್ನು ನಾನು ಇಸ್ರೇಲರಿಗೆ ಒಂದು ನಿದರ್ಶನವಾಗಿ ಉಪಯೋಗಿಸುತ್ತಿದ್ದೇನೆ.”
7 ಹೀಗೆ ನನಗೆ ಆಜ್ಞಾಪಿಸಿದ ಪ್ರಕಾರ ಮಾಡಿದೆನು. ನಾನು ಸೆರೆಯಾಳಿನಂತೆ ಹಗಲಲ್ಲಿ ಚೀಲಗಳನ್ನು ತಂದು ಹೊರಗಿಟ್ಟೆನು. ಸಾಯಂಕಾಲ ನನ್ನ ಕೈಗಳಿಂದ ಗೋಡೆಯಲ್ಲಿ ರಂಧ್ರ ಮಾಡಿ, ರಾತ್ರಿಕಾಲದಲ್ಲಿ ಆ ಚೀಲಗಳನ್ನು ಹೆಗಲ ಮೇಲೆ ಹೊತ್ತು ಹೊರಟೆನು. ಜನರು ನನ್ನನ್ನು ಗಮನಿಸುತ್ತಿರುವಾಗಲೇ ನಾನೆಲ್ಲಾ ಮಾಡಿದೆನು.
8 ಮರುದಿನ ಬೆಳಿಗ್ಗೆ ಯೆಹೋವನ ಸಂದೇಶವು ನನಗೆ ಬಂತು. ಆತನು ಹೀಗೆ ಅಂದನು: 9 “ನರಪುತ್ರನೇ, ನೀನು ಏನು ಮಾಡುತ್ತಿರುವೆ ಎಂದು ಇಸ್ರೇಲಿನ ಈ ದಂಗೆಕೋರರು ನಿನ್ನನ್ನು ಕೇಳಲಿಲ್ಲವೇ? 10 ಅವರ ಒಡೆಯನಾದ ಯೆಹೋವನು ಇದನ್ನೆಲ್ಲಾ ಹೇಳಿದನು ಎಂದು ಅವರಿಗೆ ತಿಳಿಸು. ಈ ಸಂದೇಶವು ಜೆರುಸಲೇಮಿನ ನಾಯಕರ ಮತ್ತು ಅಲ್ಲಿ ವಾಸಿಸುವ ಇಸ್ರೇಲ್ ಜನರೆಲ್ಲರ ಕುರಿತಾಗಿದೆ. 11 ‘ನೀನು ಅವರಿಗೆ ಹೀಗೆ ಹೇಳು: ನಾನು ನಿಮಗೆ ಒಂದು ಸೂಚನೆಯಾಗಿದ್ದೇನೆ. ನಾನು ಮಾಡಿದ ಸೂಚಕಕಾರ್ಯ ಖಂಡಿತವಾಗಿ ನಿಮಗೆ ಸಂಭವಿಸುವುದು. ನೀವು ದೂರದೇಶಕ್ಕೆ ಸೆರೆಯಾಳುಗಳಾಗಿ ಹೋಗುವಿರಿ.’ 12 ನಿಮ್ಮ ನಾಯಕನು ಗೋಡೆಯಲ್ಲಿ ರಂಧ್ರ ಮಾಡಿ ರಾತ್ರಿ ಕಾಲದಲ್ಲಿ ಅದರಲ್ಲಿ ನುಸುಳಿ ಪಾರಾಗುವನು. ಜನರು ತನ್ನನ್ನು ಗುರುತಿಸದಂತೆ ತನ್ನ ಮುಖವನ್ನು ಮುಚ್ಚಿಕೊಳ್ಳುವನು. ಅವನು ಯಾವ ಕಡೆಗೆ ಹೋಗುತ್ತಿದ್ದಾನೆಂದು ಅವನ ಕಣ್ಣುಗಳಿಗೆ ಕಾಣಿಸದು. 13 ಅವನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವನು. ಆದರೆ, ನಾನು (ಯೆಹೋವನು) ಅವನನ್ನು ಹಿಡಿಯುವೆನು. ಅವನು ನನ್ನ ಬಲೆಯೊಳಗೆ ಬೀಳುವನು. ನಾನು ಅವನನ್ನು ಕಸ್ದೀಯರ ದೇಶವಾದ ಬಾಬಿಲೋನಿಗೆ ತರುವೆನು. ಅವನು ಆ ದೇಶವನ್ನು ನೋಡುವುದಿಲ್ಲ; ಅಲ್ಲದೆ ಅವನು ಅಲ್ಲಿ ಸಾಯುವನು. 14 ಅವನ ಸುತ್ತಲೂ ಇರುವವರನ್ನೆಲ್ಲ ನಾನು ಸುತ್ತಮುತ್ತಲಿನ ದೇಶಗಳಿಗೆ ಓಡಿಸಿಬಿಡುವೆನು. ಅವನ ಕೆಲಸಗಾರರನ್ನು ಮತ್ತು ಅವನ ಸೈನ್ಯವನ್ನು ಗಾಳಿಗೆ ತೂರಿಬಿಡುವೆನು. ಮತ್ತು ಅವರನ್ನು ಖಡ್ಗದೊಡನೆ ಬೆನ್ನಟ್ಟುವೆನು. 15 ನಾನೇ ಯೆಹೋವನೆಂದು ಆಗ ಜನರು ತಿಳಿದುಕೊಳ್ಳುವರು; ಯಾಕೆಂದರೆ ನಾನು ಅವರನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿದ್ದೇನೆ ಮತ್ತು ಬೇರೆ ದೇಶಗಳಿಗೆ ಓಡಿಸಿದ್ದೇನೆ.
16 “ಆದರೆ ನಾನು ಅವರಲ್ಲಿ ಕೆಲವರನ್ನು ಯುದ್ಧಗಳಿಂದ, ಬರಗಾಲಗಳಿಂದ ಮತ್ತು ರೋಗಗಳಿಂದ ಉಳಿಸುವೆನು. ಅವರು ತಾವು ಹೋಗುವ ದೇಶಗಳಲ್ಲಿನ ಜನರಿಗೆ ತಮ್ಮ ಅಸಹ್ಯವಾದ ಆಚರಣೆಗಳ ಕುರಿತು ಹೇಳಲಾಗುವಂತೆ ನಾನು ಇದನ್ನು ಮಾಡುತ್ತೇನೆ. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”
ಜನರು ಭಯಭೀತರಾಗಿ ನಡುಗುವರು
17 ಆಗ ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ನೀನು ಭೀತಿಯಲ್ಲಿರುವವನಂತೆ ನಟನೆ ಮಾಡಬೇಕು. ನೀನು ಆಹಾರ ತೆಗೆದುಕೊಳ್ಳುವಾಗ ನಡುಗಬೇಕು. ನೀರು ಕುಡಿಯುವಾಗ ಭಯಪಡಬೇಕು ಮತ್ತು ಚಿಂತಿಸಬೇಕು. 19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದ್ವೇಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ. 20 ಜನರು ವಾಸವಾಗಿರುವ ಪಟ್ಟಣಗಳು ನಾಶವಾಗುತ್ತವೆ; ಇಡೀ ದೇಶವೇ ನಾಶವಾಗುತ್ತದೆ. ನಾನೇ ಯೆಹೋವನೆಂದು ಆಗ ನಿಮಗೆ ತಿಳಿಯುವುದು.’”
ಇಸ್ರೇಲಿಗೆ ಬರುವ ದುರ್ಗತಿ
21 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 22 “ನರಪುತ್ರನೇ,
‘ಸಂಕಷ್ಟದ ದಿನಗಳು ಉರುಳುತ್ತಿವೆ;
ಎಲ್ಲಾ ದರ್ಶನಗಳು ನೆರವೇರುವುದಿಲ್ಲ’
ಎಂಬ ಈ ಗಾದೆಯನ್ನು ಇಸ್ರೇಲ್ ದೇಶದಲ್ಲಿರುವ ನೀವೆಲ್ಲರೂ ಹೇಗೆ ಅರ್ಥಮಾಡಿಕೊಳ್ಳುವಿರಿ?
23 “ಆ ಜನರಿಗೆ ಹೀಗೆ ಹೇಳು: ಅವರ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಈ ಗಾದೆಗೆ ಅಂತ್ಯವನ್ನು ಬರಮಾಡುವೆನು. ಇಸ್ರೇಲಿನಲ್ಲಿ ಆ ಗಾದೆಯನ್ನು ಅವರು ಇನ್ನೆಂದಿಗೂ ಬಳಸುವುದಿಲ್ಲ. ಅದರ ಬದಲಾಗಿ ಅವರಿಗೆ ಹೀಗೆ ಹೇಳು:
‘ಸಂಕಷ್ಟದ ದಿನಗಳು ಸಮೀಪಿಸಿವೆ;
ಪ್ರತಿಯೊಂದು ದರ್ಶನವೂ ನೆರವೇರುವುದು.’
24 “ಇಸ್ರೇಲಿನಲ್ಲಿ ಇನ್ನು ಮೇಲೆ ಸುಳ್ಳುದರ್ಶನಗಳಿರುವುದಿಲ್ಲ; ಮುಖಸ್ತುತಿಯ ಕಣಿಯೂ ಇರುವುದಿಲ್ಲ. 25 ಯಾಕೆಂದರೆ ನಾನೇ ಯೆಹೋವನು. ನನಗೆ ಇಷ್ಟಬಂದದ್ದನ್ನು ನಾನು ಹೇಳುವೆನು ಮತ್ತು ಆ ಸಂಗತಿಯು ನೆರವೇರುವುದು. ಅದಕ್ಕೆ ಹೆಚ್ಚು ಸಮಯಬೇಕಾಗದು. ಆ ಸಂಕಟಗಳು ಬೇಗನೇ ಬರುವವು; ನಿಮ್ಮ ಜೀವಮಾನ ಕಾಲದಲ್ಲಿಯೇ ಬರುವವು. ಓ ದಂಗೆಕೋರರಾದ ಜನರೇ, ನಾನು ಒಂದು ವಿಷಯದಲ್ಲಿ ಏನಾದರೂ ಹೇಳಿದರೆ ಆ ವಿಷಯವು ಸಂಭವಿಸುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.
26 ಆಗ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 27 “ನರಪುತ್ರನೇ, ನಿನಗೆ ನಾನು ಕೊಟ್ಟ ದರ್ಶನಗಳ ಕುರಿತು ಬಹಳ ಕಾಲದ ನಂತರ ಅದು ನೆರವೇರುವುದು ಎಂದು ಇಸ್ರೇಲರ ಜನರು ನೆನೆಸುತ್ತಿದ್ದಾರೆ. 28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
Kannada Holy Bible: Easy-to-Read Version. All rights reserved. © 1997 Bible League International