Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 5-8

ಜೆರುಸಲೇಮಿನ ಜನರು ಚದುರಿಹೋಗುವ ಸೂಚನೆ

1-2 “ನರಪುತ್ರನೇ, ಈ ಕಾರ್ಯಗಳನ್ನು ಮುತ್ತಿಗೆಯ ಕಾಲ ಮುಗಿಯಿತೆಂದು ಸೂಚಿಸುವ ಅವಧಿಯ ನಂತರ ಮಾಡಬೇಕು. ನೀನು ಕ್ಷೌರಕನ ಹರಿತವಾದ ಕ್ಷೌರಕತ್ತಿಯನ್ನು ತೆಗೆದುಕೊಳ್ಳಬೇಕು. ನಿನ್ನ ತಲೆಯ ಕೂದಲನ್ನೂ ಗಡ್ಡವನ್ನೂ ಬೋಳಿಸು. ಕೂದಲನ್ನು ತ್ರಾಸಿನಲ್ಲಿ ಹಾಕಿ ಅದನ್ನು ತೂಕ ಮಾಡು. ಆ ಕೂದಲುಗಳನ್ನು ಮೂರು ಪಾಲಾಗಿ ಮಾಡು. ಅದರ ಒಂದು ಪಾಲನ್ನು ನೀನು ಚಿತ್ರಿಸಿದ್ದ ಇಟ್ಟಿಗೆಯ ಮೇಲೆ ಹಾಕು. ಆ ನಗರದ ಮೇಲೆ ಕೂದಲನ್ನು ಸುಟ್ಟುಬಿಡು. ಇದು, ಜನರಲ್ಲಿ ಕೆಲವು ಮಂದಿ ನಗರದಲ್ಲಿ ಸಾಯುವರು ಎಂಬುದಕ್ಕೆ ಗುರುತಾಗಿದೆ. ನೀನು ಕೂದಲಲ್ಲಿ ಮೂರನೆ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಪಟ್ಟಣದ ಹೊರಗೆ ಸುತ್ತಲೆಲ್ಲಾ ನಿನ್ನ ಕ್ಷೌರಕತ್ತಿಯಿಂದ ಕತ್ತರಿಸು. ಕೆಲವು ಜನರು ಪಟ್ಟಣದ ಹೊರಗೆ ಸಾಯುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಬಳಿಕ ನಿನ್ನ ಕೂದಲಿನ ಉಳಿದ ಮೂರನೆಯ ಒಂದು ಭಾಗವನ್ನು ಗಾಳಿಯಲ್ಲಿ ತೂರಿಬಿಡು. ಗಾಳಿಯು ಅದನ್ನು ಬಹುದೂರದವರೆಗೆ ಬಡಿದುಕೊಂಡು ಹೋಗಲಿ. ಇದೇ ರೀತಿಯಲ್ಲಿ ನಾನು ಖಡ್ಗವನ್ನು ಇರಿದು ಅವರನ್ನು ಬಹುದೂರದ ದೇಶಗಳಿಗೆ ಅಟ್ಟಿಸಿ ಬಿಡುವೆನು. ಆದರೆ ನೀನು ಅದರಿಂದ ಕೆಲವು ಕೂದಲನ್ನು ತೆಗೆದು ನಿನ್ನ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನ್ನ ಜನರಲ್ಲಿ ಕೆಲವರನ್ನು ರಕ್ಷಿಸುವೆನು ಎಂಬುದಕ್ಕೆ ಇದು ಗುರುತಾಗಿದೆ. ಬಳಿಕ ಕೂದಲಲ್ಲಿ ಸ್ವಲ್ಪವನ್ನು ಮತ್ತೆ ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಬೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನ್ನು ನಾಶಮಾಡುವುದು.”

ಆಮೇಲೆ ನನ್ನ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನ್ನು ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಬೇರೆ ದೇಶಗಳಿವೆ. ಜೆರುಸಲೇಮಿನ ನಿವಾಸಿಗಳು ನನ್ನ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಬೇರೆ ದೇಶಗಳಿಗಿಂತ ಹೆಚ್ಚಾಗಿ ನನ್ನ ಕಟ್ಟಳೆಗಳನ್ನು ಉಲ್ಲಂಬಿಸಿದ್ದಾರೆ. ಅವರು ನನ್ನ ಆಜ್ಞೆಗಳನ್ನು ತಿರಸ್ಕರಿಸಿದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ.”

ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನ್ನು ಮಾಡಿದ್ದೀರಿ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನ್ನೂ ಅನುಸರಿಸಲಿಲ್ಲ.” ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಬೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನ್ನು ದಂಡಿಸುವೆನು. ನಿಮ್ಮ ಎಲ್ಲಾ ಅಸಹ್ಯಕೃತ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನ್ನು ನಿಮಗೆ ಬರಮಾಡುವೆನು. 10 ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸ್ವಂತ ಮಕ್ಕಳನ್ನು ಕಬಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನ್ನೇ ತಿನ್ನುವರು. ಬೇರೆಬೇರೆ ರೀತಿಯಲ್ಲಿ ನಾನು ನಿಮ್ಮನ್ನು ಶಿಕ್ಷಿಸುವೆನು. ಜೀವದಿಂದುಳಿದವರನ್ನು ನಾನು ಗಾಳಿಗೆ ತೂರಿಬಿಡುವೆನು.”

11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮೇ, ನನ್ನ ಜೀವದಾಣೆ! ನಾನು ನಿನ್ನನ್ನು ಶಿಕ್ಷಿಸುವೆನು. ಯಾಕೆಂದರೆ ನೀನು ನನ್ನ ಪವಿತ್ರ ಸ್ಥಳಕ್ಕೆ ಮಹತ್ವವನ್ನು ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಬರಿಗೊಳಿಸುವ ನಿನ್ನ ಎಲ್ಲಾ ಕಾರ್ಯಗಳಿಂದ ನೀನು ಅದನ್ನು ಅಶುದ್ಧಗೊಳಿಸಿರುವೆ. ನಾನು ನಿನಗೆ ಕನಿಕರತೋರಿಸದೆ ಶಿಕ್ಷಿಸುವೆನು. ನಿನ್ನ ಮೇಲೆ ನನಗೆ ದಯೆಯಿರದು. 12 ನಿನ್ನ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನ್ನೊಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನ್ನ ಖಡ್ಗವನ್ನು ಇರಿದು ಉಳಿದವರನ್ನು ಬಹುದೂರದ ದೇಶಕ್ಕೆ ಅಟ್ಟಿಬಿಡುವೆನು. 13 ಆಗಲೇ ನನ್ನ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನ್ನ ಕೋಪವನ್ನು ಬಳಸಿ ತೃಪ್ತನಾಗುವೆನು. ನನ್ನ ಕೋಪವನ್ನು ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”

14 ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನ್ನ ಸುತ್ತಲೂ ಇರುವ ಜನಾಂಗಗಳು ನಿನ್ನನ್ನು ಗೇಲಿ ಮಾಡುತ್ತವೆ. ನಿನ್ನನ್ನು ದಾಟಿಹೋಗುವ ಪ್ರತಿಯೊಬ್ಬನೂ ನಿನ್ನನ್ನು ಕಂಡು ಹಾಸ್ಯಮಾಡುವನು. 15 ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. 16 ಬರಗಾಲವೆಂಬ ಮರಣಕರವಾದ ಮತ್ತು ನಾಶಕರವಾದ ಬಾಣಗಳಿಂದ ನಾನು ನಿನ್ನನ್ನು ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನ್ನ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನ್ನು ಬರಮಾಡುವೆನು ಮತ್ತು ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”

ಇಸ್ರೇಲಿನ ವಿರುದ್ಧ ಪ್ರವಾದನೆ

ಮತ್ತೆ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲಿನ ಪರ್ವತಗಳ ಕಡೆಗೆ ಮುಖ ಮಾಡು. ಅವುಗಳ ವಿರುದ್ಧವಾಗಿ ನನಗೋಸ್ಕರ ಮಾತನಾಡಿ ಹೀಗೆ ಹೇಳು: ‘ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಸಂದೇಶಕ್ಕೆ ಕಿವಿಗೊಡಿರಿ. ಬೆಟ್ಟಗಳಿಗೂ ಪರ್ವತಗಳಿಗೂ ಕೊರಕಲುಗಳಿಗೂ ಕಣಿವೆಗಳಿಗೂ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಾನು ವೈರಿಯನ್ನು ನಿಮ್ಮ ವಿರುದ್ಧ ಯುದ್ಧ ಮಾಡಲು ಕಳುಹಿಸುವೆನು. ನಿಮ್ಮ ಎಲ್ಲಾ ಉನ್ನತ ಸ್ಥಳಗಳನ್ನು ನಾಶಮಾಡುವೆನು. ನಿಮ್ಮ ಯಜ್ಞವೇದಿಕೆಗಳು ನಾಶವಾಗುವವು. ನಿಮ್ಮ ಧೂಪವೇದಿಕೆಗಳು ಕೆಡವಲ್ಪಡುವವು. ನಿಮ್ಮ ಹೆಣಗಳನ್ನು ನಿಮ್ಮ ಹೊಲಸು ವಿಗ್ರಹಗಳ ಮುಂದೆ ಬಿಸಾಡುವೆನು. ಇಸ್ರೇಲ್ ಜನರ ಸತ್ತ ಹೆಣಗಳನ್ನು ಅವರ ಹೊಲಸು ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಎಲುಬುಗಳನ್ನು ನಿಮ್ಮ ಯಜ್ಞವೇದಿಗಳ ಸುತ್ತಲೂ ಹರಡುವೆನು. ನಿಮ್ಮ ಜನರು ವಾಸಮಾಡುವಲ್ಲೆಲ್ಲಾ ಕೆಟ್ಟಸಂಗತಿಗಳು ನಡೆಯುವವು; ಪಟ್ಟಣಗಳು ಕಲ್ಲಿನ ರಾಶಿಗಳಾಗುವವು; ಪೂಜಾಸ್ಥಳಗಳು ನಾಶಮಾಡಲ್ಪಡುವವು. ನಿಮ್ಮ ಯಜ್ಞವೇದಿಕೆಗಳು ಕೆಡವಲ್ಪಟ್ಟು ಹಾಳಾಗಿಹೋಗುವವು; ನಿಮ್ಮ ವಿಗ್ರಹಗಳು ಮುರಿಯಲ್ಪಟ್ಟು ನಾಶವಾಗುವವು. ಜನರು ಅವುಗಳನ್ನು ಇನ್ನು ಎಂದಿಗೂ ಪೂಜಿಸರು. ನಿಮ್ಮ ಧೂಪವೇದಿಕೆಗಳು ಕತ್ತರಿಸಲ್ಪಡುವವು. ನೀವು ಮಾಡಿಕೊಂಡ ವಿಗ್ರಹಗಳು ಅಳಿದುಹೋಗುವವು. ಜನರು ನಿಮ್ಮ ಮಧ್ಯದಲ್ಲಿ ಕೊಲ್ಲಲ್ಪಟ್ಟು ಬೀಳುವರು. ಆಗ ನೀನು, ನಾನು ಯೆಹೋವನೆಂದು ತಿಳಿಯುವಿ.’”

ದೇವರು ಹೇಳಿದ್ದೇನೆಂದರೆ: “ಆದರೆ ನಾನು ನಿಮ್ಮ ಜನರಲ್ಲಿ ಕೆಲವರನ್ನು ಉಳಿದುಕೊಳ್ಳುವಂತೆ ಮಾಡುವೆನು. ನೀವು ಬೇರೆ ದೇಶಗಳಲ್ಲಿ ಚದರಿಹೋಗಿರುವಾಗ ಜನಾಂಗಗಳ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಕೊಲ್ಲಲ್ಪಡುವುದಿಲ್ಲ. ಆಗ ಉಳಿದವರು ಸೆರೆಹಿಡಿಯಲ್ಪಡುವರು. ಅವರು ಪರದೇಶಕ್ಕೆ ಒಯ್ಯಲ್ಪಟ್ಟು ಅಲ್ಲಿ ವಾಸಿಸುವರು. ಅಲ್ಲಿ ಅಳಿದುಳಿದ ಜನರು ನನ್ನನ್ನು ಜ್ಞಾಪಿಸಿಕೊಳ್ಳುವರು ಮತ್ತು ಅವರ ಅಪನಂಬಿಗಸ್ತಿಕೆಯ ಹೃದಯವನ್ನು ನಾನು ಜಜ್ಜಿದೆನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ತಮ್ಮನ್ನು ತಾವೇ ದ್ವೇಷಿಸುವರು. ಹಿಂದಿನ ಕಾಲದಲ್ಲಿ ಅವರು ನನ್ನಿಂದ ದೂರವಾಗಿ ನನ್ನನ್ನು ತ್ಯಜಿಸಿದರು. ತಮ್ಮ ಹೊಲಸು ವಿಗ್ರಹಗಳ ಹಿಂದೆ ಹೋದರು. ಗಂಡನನ್ನು ಬಿಟ್ಟು ಬೇರೆ ಪುರುಷನ ಸಂಗಡ ಓಡುವ ಸ್ತ್ರೀಯಂತೆ ಅವರಿದ್ದರು. ಅವರು ಇನ್ನೂ ಅನೇಕ ಅಸಹ್ಯಕರವಾದ ಕಾರ್ಯಗಳನ್ನು ಮಾಡಿದರು. 10 ನಾನೇ ಯೆಹೋವನೆಂದು ಅವರಿಗೆ ತಿಳಿಯುವುದು. ಈ ಆಪತ್ತನ್ನು ಬರಮಾಡುವೆನು ಎಂದು ನಾನು ಹೇಳಿದ್ದಕ್ಕೆ ಸರಿಯಾದ ಕಾರಣವಿತ್ತೆಂದು ಅವರು ಗ್ರಹಿಸಿಕೊಳ್ಳುವರು.”

11 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಚಪ್ಪಾಳೆ ತಟ್ಟು, ನಿನ್ನ ಕಾಲುಗಳನ್ನು ನೆಲಕ್ಕೆ ಒದ್ದು, ‘ಅಯ್ಯೋ, ಬೇಡ!’ ಎಂದು ಹೇಳು. ಯಾಕೆಂದರೆ ಇಸ್ರೇಲ್ ಜನರು ಎಲ್ಲಾ ಅಸಹ್ಯಕರವಾದ ಮತ್ತು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಅವರು ಯುದ್ಧದಿಂದಲೂ ಕ್ಷಾಮದಿಂದಲೂ ಭಯಂಕರವಾದ ಕಾಯಿಲೆಗಳಿಂದಲೂ ಸಾಯುವರು. 12 ದೂರದಲ್ಲಿರುವ ಜನರು ರೋಗಗಳಿಂದ ಸಾಯುವರು. ಹತ್ತಿರದಲ್ಲಿರುವವರು ಕತ್ತಿಯಿಂದ ಸಾಯುವರು. ತಪ್ಪಿಸಿಕೊಂಡವರೂ ಉಳಿಸಲ್ಪಟ್ಟವರೂ ಹಸಿವೆಯಿಂದ ಸಾಯುವರು. ಆಗಲೇ ನನ್ನ ಕೋಪವು ಶಮನವಾಗುವದು. 13 ಆಗಲೇ ನಾನು ಯೆಹೋವನೆಂದು ನೀವು ಅರಿಯುವಿರಿ. ಅವರ ದೇಶದಲ್ಲಿರುವವರ ಹೆಣಗಳು ಅವರ ಹೊಲಸು ವಿಗ್ರಹಗಳ ಸುತ್ತಲೂ ಯಜ್ಞವೇದಿಗಳ ಸುತ್ತಲೂ ಎತ್ತರವಾದ ಸ್ಥಳಗಳ ಮೇಲೆಯೂ ಬೆಟ್ಟಗಳಲ್ಲಿಯೂ ಮತ್ತು ಪ್ರತಿಯೊಂದು ಹಸಿರು ಮರದ ಕೆಳಗೂ ಬೀಳುವಾಗ ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು. ಅವರು ಈ ಎಲ್ಲಾ ಸ್ಥಳಗಳಲ್ಲಿ ತಮ್ಮ ಎಲ್ಲಾ ಹೊಲಸು ವಿಗ್ರಹಗಳಿಗೆ ಪರಿಮಳಭರಿತವಾದ ಯಜ್ಞಗಳನ್ನು ಅರ್ಪಿಸಿದರು. 14 ನಾನು ಅವರ ಮೇಲೆ ನನ್ನ ಕೈಯೆತ್ತಿ ಅವರನ್ನು ದಂಡಿಸುವೆನು ಮತ್ತು ಮರುಭೂಮಿಯಿಂದ ದಿಬ್ಲದವರೆಗೆ ಅವರು ಯಾವುದೇ ದೇಶದಲ್ಲಿ ವಾಸವಾಗಿದ್ದರೂ ನಾಶಮಾಡುವೆನು. ಆಗ ನಾನೇ ಯೆಹೋವನೆಂಬುದು ಅವರಿಗೆ ತಿಳಿಯುವುದು.”

ಜೆರುಸಲೇಮಿಗೆ ಬರುವ ದುರ್ಗತಿ

ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು.

“ಅಂತ್ಯ,
    ಅಂತ್ಯವು ಬರುವುದು.
    ಇಡೀ ದೇಶವು ಹಾಳಾಗಿಹೋಗುವದು.
ನಿನ್ನ ಅಂತ್ಯವು ಈಗ ಬರುವುದು.
    ನಿನ್ನ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು.
ನಿನ್ನ ದುಷ್ಕೃತ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.
ನಿನ್ನ ಅಸಹ್ಯಕೃತ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.
ನಿನಗೆ ನಾನು ಇನ್ನು ಕರುಣೆಯನ್ನು ತೋರಿಸೆನು.
    ನಿನ್ನ ವಿಷಯದಲ್ಲಿ ನಾನು ದುಃಖಿಸುವದಿಲ್ಲ.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನಿನ್ನನ್ನು ಶಿಕ್ಷಿಸುವೆನು.
ನೀನು ಅಂಥಾ ಭಯಂಕರ ಕೃತ್ಯಗಳನ್ನು ಮಾಡಿದ್ದೀ.
    ಈಗ ನಾನೇ ಯೆಹೋವನೆಂದು ನೀನು ತಿಳಿಯುವಿ.”

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು. ಅಂತ್ಯವು ಬರುವುದು. ಅದು ಬೇಗನೆ ಬರುವದು. ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಬರುವುದು, ಸಮಯವು ಬರುತ್ತಿದೆ. ದಿನವು ಸಮೀಪಿಸಿದೆ. ಬೆಟ್ಟಗಳ ಮೇಲೆ ಆನಂದ ಬೋಷಗಳ ಬದಲು ಯುದ್ಧದ ಕೂಗಾಟಗಳು ಇರುತ್ತವೆ. ಇನ್ನು ಸ್ವಲ್ಪ ಸಮಯದಲ್ಲಿ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂದು ನಿಮಗೆ ತೋರಿಸುವೆನು. ನನ್ನ ಕೋಪವನ್ನೆಲ್ಲಾ ನಿಮಗೆ ತೋರಿಸುವೆನು. ನಿಮ್ಮ ದುಷ್ಕ್ರಿಯೆಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಅಸಹ್ಯಕೃತ್ಯಗಳಿಗಾಗಿ ನಾನು ಸೇಡನ್ನು ತೀರಿಸಿಕೊಳ್ಳುವೆನು. ನಾನು ನಿಮಗೆ ಕರುಣೆ ತೋರಿಸೆನು. ನಿಮಗಾಗಿ ನಾನು ದುಃಖಿಸುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ಅಂಥಾ ಭಯಂಕರವಾದ ಕೃತ್ಯಗಳನ್ನು ನೀವು ಮಾಡಿದ್ದೀರಿ. ನಿಮ್ಮನ್ನು ದಂಡಿಸಿದಾತನು ಯೆಹೋವನಾದ ನಾನೇ ಎಂಬುದು ಆಗ ನಿಮಗೆ ತಿಳಿಯುವುದು.

10 “ಆ ಶಿಕ್ಷೆಯ ಸಮಯವು ಬಂದಿದೆ. ಆಪತ್ತು ಬರುತ್ತಿದೆ. ಹಿಂಸೆಯು ಅರಳಿದೆ. ದುರಹಂಕಾರವು ಮೊಗ್ಗು ಬಿಟ್ಟಿದೆ. 11 ದುಷ್ಟತನವನ್ನು ದಂಡಿಸಲು ಹಿಂಸೆಯು ಬೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಬ್ಬರೂ ಉಳಿಯುವುದಿಲ್ಲ. ಅವರ ಐಶ್ವರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.

12 “ಆ ಶಿಕ್ಷೆಯ ಸಮಯವು ಬಂತು. ಆ ದಿವಸವು ಇಲ್ಲಿಯೇ ಇದೆ. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಸಂತೋಷಪಡಕೂಡದು. ವಸ್ತುಗಳನ್ನು ಮಾರುವವರು ಮಾರುವದಕ್ಕೆ ದುಃಖಿಸಕೂಡದು. ಯಾಕೆಂದರೆ ಆ ಭಯಂಕರ ಶಿಕ್ಷೆಯು ಎಲ್ಲರಿಗೂ ಉಂಟಾಗುವುದು. 13 ತಮ್ಮ ಆಸ್ತಿಗಳನ್ನು ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಬ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನ್ನ ಆಸ್ತಿಗೆ ಹೋಗುವುದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಬದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಬ್ಬನಾದರೂ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದಿಲ್ಲ.

14 “ಅವರು ಜನರನ್ನು ಎಚ್ಚರಿಸುವುದಕ್ಕಾಗಿ ತುತ್ತೂರಿಯನ್ನು ಊದುವರು. ಜನರು ಯುದ್ಧಕ್ಕೆ ತಯಾರಾಗುವರು. ಆದರೆ ಅವರು ರಣರಂಗಕ್ಕೆ ಹೋಗುವುದಿಲ್ಲ. ಯಾಕೆಂದರೆ ಆ ಜನಸಮೂಹಕ್ಕೆ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ತೋರಿಸುತ್ತೇನೆ. 15 ಖಡ್ಗಧಾರಿಯಾದ ವೈರಿಯು ಪಟ್ಟಣದ ಹೊರಗಿದ್ದಾನೆ. ರೋಗ ಮತ್ತು ಹಸಿವೆ ಪಟ್ಟಣದೊಳಗಿವೆ. ಒಬ್ಬನು ಹೊರಗೆ ಹೊಲದ ಬಳಿ ಹೋದರೆ ವೈರಿಸೈನಿಕನು ಅವನನ್ನು ಕೊಲ್ಲುವನು. ಪಟ್ಟಣದೊಳಗೇ ಉಳಿದರೆ ರೋಗ ಮತ್ತು ಹಸಿವೆಯು ಅವನನ್ನು ಕೊಲ್ಲುವವು.

16 “ಆದರೂ ಕೆಲವರು ತಪ್ಪಿಸಿಕೊಳ್ಳುವರು. ಅವರು ಬೆಟ್ಟಕ್ಕೆ ಓಡುವರು. ಆದರೆ ಅವರು ಸಂತೋಷಪಡುವುದಿಲ್ಲ. ತಮ್ಮ ಪಾಪಗಳಿಗಾಗಿ ಅವರು ದುಃಖಿತರಾಗುವರು. ಪಾರಿವಾಳಗಳಂತೆ ಮೂಲುಗುವರು, ಅಳುವರು. 17 ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವಷ್ಟು ದುಃಖ ಮತ್ತು ಆಯಾಸ ಅವರಲ್ಲಿದೆ. ಅವರ ಕಾಲುಗಳು ನೀರಿನಂತಿರುತ್ತವೆ. 18 ಅವರು ಶೋಕಬಟ್ಟೆಗಳನ್ನು ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನ್ನು ಪ್ರದರ್ಶಿಸಲು ತಮ್ಮ ತಲೆಗಳನ್ನು ಬೋಳಿಸುವರು. 19 ಅವರು ತಮ್ಮ ಬೆಳ್ಳಿಯ ವಿಗ್ರಹಗಳನ್ನು ರಸ್ತೆಗೆ ಬಿಸಾಡುವರು, ಅವರು ಬಂಗಾರದ ವಿಗ್ರಹವನ್ನು ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರಗಳ ವಿಗ್ರಹಗಳು ಅವರನ್ನು ರಕ್ಷಿಸಲಾರವು. ಅವು ಅವರ ಹಸಿವನ್ನು ನೀಗಿಸಲಾರವು ಅಥವಾ ಅವರ ಹೊಟ್ಟೆಗಳನ್ನು ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.

20 “ಆ ಜನರು ತಮ್ಮ ಬೆಳ್ಳಿಬಂಗಾರಗಳ ಆಭರಣಗಳನ್ನು ಅಲಂಕಾರದ ವಸ್ತುಗಳನ್ನಾಗಿ ಪರಿವರ್ತಿಸಿದರು. ಅವುಗಳಿಂದ ತಮ್ಮ ಕೊಳಕಾದ ಮತ್ತು ಅಸಹ್ಯಕರವಾದ ವಿಗ್ರಹಗಳನ್ನು ಮಾಡಿಕೊಂಡರು. ಆದ್ದರಿಂದ ಅವರ ಬೆಳ್ಳಿಬಂಗಾರಗಳನ್ನು ಅವರಿಗೆ ಕೊಳೆಯ ಬಟ್ಟೆಯನ್ನಾಗಿ ಮಾಡುವೆನು. 21 ಬೇರೆ ದೇಶದವರು ಅವರ ಐಶ್ವರ್ಯವನ್ನು ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನ್ನು ಕೊಳ್ಳೆಯನ್ನಾಗಿ ಕೊಡುವೆನು. ಅವರು ಅದನ್ನು ಹೊಲಸು ಮಾಡುವರು. 22 ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು. ಆ ಪರದೇಶಿಯರು ನನ್ನ ಅಮೂಲ್ಯವಾದ ಆಲಯವನ್ನು ಹೊಲಸು ಮಾಡುವರು. ದರೋಡೆಕೋರರು ಅದರೊಳಗೆ ನುಗ್ಗಿ ಅದಕ್ಕೆ ಅಪಮಾನ ಮಾಡುವರು.

23 “ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ. 24 ಇಸ್ರೇಲ್ ಜನರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅತೀ ದುಷ್ಟ ಜನಾಂಗಗಳನ್ನು ಬರಮಾಡುವೆನು. ನಾನು ಗರ್ವಿಷ್ಠರ ಸೊಕ್ಕನ್ನು ಮುರಿಯುವೆನು; ಅವರ ಆರಾಧನೆಯ ಸ್ಥಳಗಳು ಅಪರಿಶುದ್ಧಗೊಳ್ಳುವವು.

25 “ಜನರು ಭಯದಿಂದ ನಡುಗುವರು. ಅವರು ಶಾಂತಿಗಾಗಿ ಹುಡುಕುವರು, ಆದರೆ ಅವರಿಗೆ ಅದು ಸಿಗುವುದಿಲ್ಲ. 26 ಒಂದರ ಮೇಲೊಂದು ಆಪತ್ತು ಸಂಭವಿಸುವುದು. ಸುಳ್ಳುಸುದ್ದಿಗೊಂದು ಸುಳ್ಳುಸುದ್ದಿ ಸೇರಿಕೊಳ್ಳುವುದು. ಅವರು ಪ್ರವಾದಿಯಿಂದ ದರ್ಶನಕ್ಕಾಗಿ ಹುಡುಕುತ್ತಲೇ ಇರುವರು. ಆದರೆ ಯಾವ ದರ್ಶನಗಳೂ ಆಗುವದಿಲ್ಲ. ಜನರಿಗೆ ಉಪದೇಶಿಸಲು ಯಾಜಕರಲ್ಲಿ ಏನೂ ಇರುವುದಿಲ್ಲ. ಜನರಿಗೆ ಕೊಡಲು ಹಿರಿಯರಲ್ಲಿ ಯಾವ ಬುದ್ಧಿವಾದವೂ ಇರುವುದಿಲ್ಲ. 27 ಸತ್ತುಹೋದ ಜನರಿಗಾಗಿ ನಿಮ್ಮ ರಾಜನು ಗೋಳಾಡುವನು; ನಾಯಕನಿಗೆ ನಿರೀಕ್ಷೆಯು ಇಲ್ಲವಾಗುವುದು. ಸಾಮಾನ್ಯ ಜನರು ಭಯಗ್ರಸ್ತರಾಗುವರು. ಯಾಕೆಂದರೆ ನಾನು ಅವರ ನಡತೆಗೆ ತಕ್ಕಂತೆ ಅವರಿಗೆ ಮಾಡುವೆನು; ಅವರು ಬೇರೆಯವರಿಗೆ ನ್ಯಾಯ ತೀರಿಸಿದಂತೆ ನಾನು ಅವರಿಗೆ ನ್ಯಾಯತೀರಿಸುವೆನು. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ದೇವಾಲಯದಲ್ಲಿನ ಪಾಪಕೃತ್ಯಗಳು

ಒಂದು ದಿವಸ ನಾನು ನನ್ನ ಮನೆಯಲ್ಲಿ ಕುಳಿತುಕೊಂಡಿದ್ದೆನು. ಯೆಹೂದದ ನಾಯಕರು ನನ್ನ ಮುಂದೆ ಕುಳಿತಿದ್ದರು. ಇದು ಸೆರೆಹಿಡಿದ ಆರನೇ ವರ್ಷದ, ಆರನೆಯ ತಿಂಗಳಿನ, ಐದನೇ ದಿವಸವಾಗಿತ್ತು. ಫಕ್ಕನೆ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಮನುಷ್ಯನಂತೆ ಕಾಣುತ್ತಿದ್ದ ರೂಪವೊಂದನ್ನು ನಾನು ನೋಡಿದೆನು. ಅದರ ಸೊಂಟದಿಂದಿಡಿದು ಕೆಳಭಾಗದವರೆಗೆ ಬೆಂಕಿಯಂತೆ ಕಾಣುತ್ತಿತ್ತು. ಸೊಂಟದಿಂದ ಮೇಲ್ಭಾಗದವರೆಗೆ ಕಾದಲೋಹದಂತೆ ಹೊಳೆಯುತ್ತಿತ್ತು. ಆಗ ಅದು ಕೈಯಂತಿದ್ದ ಒಂದನ್ನು ಚಾಚಿ ನನ್ನ ತಲೆಯ ಕೂದಲನ್ನು ಹಿಡಿದುಕೊಂಡಿತು. ಬಳಿಕ ಆತ್ಮವು ನನ್ನನ್ನು ಮೇಲಕ್ಕೆ ಎತ್ತಿ ದಿವ್ಯದರ್ಶನದಲ್ಲಿ ಜೆರುಸಲೇಮಿಗೆ ಕೊಂಡೊಯ್ಯಿತು. ಅದು ನನ್ನನ್ನು ಒಳದ್ವಾರಕ್ಕೆ ಕೊಂಡೊಯ್ಯಿತು. ಇದು ಉತ್ತರ ದಿಕ್ಕಿನಲ್ಲಿತ್ತು. ದೇವರನ್ನು ಸಿಟ್ಟಿಗೆಬ್ಬಿಸುವ ವಿಗ್ರಹವು ಈ ದ್ವಾರದ ಬಳಿ ಇತ್ತು. ಇಸ್ರೇಲಿನ ದೇವರ ಮಹಿಮೆಯು ಅಲ್ಲಿ ಇತ್ತು. ಆ ಮಹಿಮೆ ನಾನು ಕೆಬಾರ್ ಕಾಲುವೆಯ ಪಕ್ಕದ ಕಣಿವೆಯಲ್ಲಿ ಕಂಡ ದರ್ಶನದಂತಿತ್ತು.

ದೇವರು ನನ್ನೊಂದಿಗೆ ಮಾತನಾಡುತ್ತಾ, “ನರಪುತ್ರನೇ, ಉತ್ತರ ದಿಕ್ಕಿಗೆ ನೋಡು” ಎಂದು ಹೇಳಿದನು. ನಾನು ಉತ್ತರ ದಿಕ್ಕಿಗೆ ನೋಡಿದಾಗ, ದೇವರನ್ನು ರೋಷಗೊಳಿಸುವ ವಿಗ್ರಹವು ಯಜ್ಞವೇದಿಕೆಯ ದ್ವಾರದ ಉತ್ತರ ದಿಕ್ಕಿನಲ್ಲಿರುವ ಪ್ರವೇಶದ ಸ್ಥಳದಲ್ಲಿ ಇತ್ತು.

ಆಗ ದೇವರು ನನಗೆ, “ನರಪುತ್ರನೇ, ನನ್ನನ್ನು ನನ್ನ ಆಲಯದಿಂದ ಓಡಿಸಲು ಇಲ್ಲಿ ಇಸ್ರೇಲರು ಮಾಡುತ್ತಿರುವ ಭಯಂಕರವಾದ ಕೃತ್ಯಗಳು ನಿನಗೆ ಕಾಣುತ್ತಿಲ್ಲವೇ? ಆದರೆ ಇದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯಗಳನ್ನು ನೀನು ನೋಡುವೆ” ಎಂದು ಹೇಳಿದನು.

ಬಳಿಕ ಆತನು ನನ್ನನ್ನು ಅಂಗಳದ ದ್ವಾರಕ್ಕೆ ತಂದನು. ನಾನು ಗೋಡೆಯಲ್ಲಿದ್ದ ಒಂದು ರಂಧ್ರವನ್ನು ಕಂಡೆನು. ಆಗ ದೇವರು ನನಗೆ, “ನರಪುತ್ರನೇ, ಗೋಡೆಯ ರಂಧ್ರವನ್ನು ಅಗೆದು ದೊಡ್ಡದನ್ನಾಗಿ ಮಾಡು” ಎಂದು ಹೇಳಿದನು. ನಾನು ಗೋಡೆಯನ್ನು ಅಗೆದೆನು. ಆಗ ಬಾಗಿಲೊಂದು ನನಗೆ ಕಾಣಿಸಿತು.

ಆಗ ದೇವರು ನನಗೆ, “ಜನರು ಇಲ್ಲಿ ಮಾಡುತ್ತಿರುವ ಅಸಹ್ಯವಾದ ದುಷ್ಕೃತ್ಯಗಳನ್ನು ಹೋಗಿ ನೋಡು” ಎಂದು ಹೇಳಿದನು. 10 ನಾನು ಒಳಗೆ ಹೋದಾಗ, ಗೋಡೆಗಳ ಮೇಲೆಲ್ಲಾ ಕೆತ್ತಲ್ಪಟ್ಟಿದ್ದ ಎಲ್ಲಾ ಬಗೆಯ ಕ್ರಿಮಿಕೀಟಗಳನ್ನು ಮತ್ತು ಅಸಹ್ಯಕರವಾದ ಪ್ರಾಣಿಗಳ ವಿಗ್ರಹಗಳನ್ನು ಕಂಡೆನು.

11 ನಾನು ಅಲ್ಲಿ ಶಾಫಾನನ ಮಗನಾದ ಯಾಜನ್ಯನು ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಈ ಚಿತ್ರಗಳ ಮತ್ತು ವಿಗ್ರಹಗಳ ಮುಂದೆ ನಿಂತಿರುವುದನ್ನು ಕಂಡೆನು. ಪ್ರತಿಯೊಬ್ಬನು ಒಂದು ಧೂಪಾರತಿಯನ್ನು ಹಿಡಿದುಕೊಂಡಿದ್ದನು. ಆ ಧೂಪದ ಹೊಗೆಯು ಆಕಾಶದವರೆಗೂ ಏರಿ ಹೋಗುತ್ತಿತ್ತು. 12 ಆಗ ದೇವರು ನನಗೆ, “ನರಪುತ್ರನೇ, ಇಸ್ರೇಲಿನ ಹಿರಿಯರು ಕತ್ತಲೆಯಲ್ಲಿ ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ವಿಶೇಷ ಕೋಣಿಯಿದೆ. ಅದರೊಳಗೆ ಅವರ ದೇವರ ವಿಗ್ರಹಗಳನ್ನಿಟ್ಟುಕೊಂಡಿದ್ದಾರೆ. ಅವರು, ‘ಯೆಹೋವನು ನಮ್ಮನ್ನು ನೋಡುವದಿಲ್ಲ. ಆತನು ಈ ದೇಶವನ್ನು ತೊರೆದುಬಿಟ್ಟಿದ್ದಾನೆ’ ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದಾರೆ” ಎಂದನು. 13 ಬಳಿಕ ದೇವರು ನನಗೆ, “ನೀನು ನನ್ನೊಂದಿಗೆ ಬಂದರೆ, ಜನರು ಮಾಡುವ ಇನ್ನೂ ಭಯಂಕರ ಸಂಗತಿಗಳನ್ನು ನೀನು ನೋಡುವೆ” ಎಂದು ಹೇಳಿದನು.

14 ಆಗ ದೇವರು ನನ್ನನ್ನು ಯೆಹೋವನಾಲಯದ ಉತ್ತರ ದ್ವಾರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಧಿಸುವುದನ್ನು ನೋಡಿದೆನು. ಅವರು ತಮ್ಮೂಜ್ ಎಂಬ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.

15 ದೇವರು ನನಗೆ, “ನರಪುತ್ರನೇ, ಈ ದುರಾಚಾರಗಳನ್ನು ನೋಡಿದ್ದೀಯಾ? ನನ್ನೊಂದಿಗೆ ಬಾ, ಇವುಗಳಿಗಿಂತ ಇನ್ನೂ ಹೆಚ್ಚಿನ ಭಯಂಕರ ಸಂಗತಿಗಳನ್ನು ನಿನಗೆ ತೋರಿಸುವೆನು” ಎಂದನು. 16 ದೇವರು ನನ್ನನ್ನು ಯೆಹೋವನಾಲಯದ ಒಳಗಿನ ಅಂಗಳಕ್ಕೆ ಕರಕೊಂಡು ಹೋದನು. ಯೆಹೋವನಾಲಯದ ಪ್ರವೇಶ ಸ್ಥಳದಲ್ಲಿ ಮಂಟಪಕ್ಕೂ ಯಜ್ಞವೇದಿಕೆಗೂ ನಡುವೆ ಪವಿತ್ರ ಸ್ಥಳದ ಕಡೆಗೆ ಬೆನ್ನು ಮಾಡಿಕೊಂಡಿದ್ದ ಇಪ್ಪತ್ತೈದು ಮಂದಿ ಇದ್ದರು. ಪೂರ್ವಕ್ಕೆ ಮುಖಮಾಡಿಕೊಂಡಿದ್ದ ಅವರು ಸೂರ್ಯನನ್ನು ಪೂಜಿಸುತ್ತಿದ್ದರು.

17 ಆಗ ದೇವರು ನನಗೆ, “ನರಪುತ್ರನೇ, ಅವರು ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಯೆಹೂದದ ಜನರಿಗೆ ತಾವು ಮಾಡುತ್ತಿರುವ ಈ ಭಯಂಕರ ಕೃತ್ಯಗಳು ಸಾಕಾಗಿಲ್ಲ. ಇಡೀ ದೇಶವು ದುಷ್ಟತನದಿಂದ ತುಂಬಿಹೋಗಿದೆ. ಅವರು ನನ್ನನ್ನು ಇನ್ನೂ ಹೆಚ್ಚಿಗೆ ಕೋಪಗೊಳಿಸುತ್ತಿದ್ದಾರೆ. ವಿಗ್ರಹಾರಾಧನೆಯ ಪ್ರತೀಕವಾಗಿ ತಮ್ಮ ಮೂಗುಗಳಿಗೆ ಎಳೆಯ ಕೊಂಬೆಗಳನ್ನು ಸೋಕಿಸುತ್ತಾರೆ. 18 ಅವರಿಗೆ ನಾನು ನನ್ನ ರೌದ್ರವನ್ನು ತೋರಿಸುವೆನು. ಅವರಿಗೆ ನಾನು ಕರುಣೆಯನ್ನು ಎಂದಿಗೂ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದೂ ಇಲ್ಲ. ಅವರು ನನ್ನನ್ನು ಕೂಗುವರು, ಆದರೆ ನಾನು ಅವರಿಗೆ ಕಿವಿಗೊಡುವುದಿಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International