Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 23-25

23 ಯೆಹೋವನ ಸಂದೇಶವಿದು: “ಯೆಹೂದದ ಕುರುಬರಿಗೆ ಒಳ್ಳೆಯದಾಗುವದಿಲ್ಲ. ಈ ಕುರುಬರು ಕುರಿಗಳನ್ನು ಹಾಳುಮಾಡುತ್ತಿದ್ದಾರೆ. ಅವರು ನನ್ನ ಹುಲ್ಲುಗಾವಲಿನಿಂದ ಕುರಿಗಳು ಎಲ್ಲಾ ದಿಕ್ಕುಗಳಿಗೂ ಓಡಿಹೋಗುವಂತೆ ಮಾಡುತ್ತಿದ್ದಾರೆ.”

ಆ ಕುರುಬರು ನನ್ನ ಜನರಿಗೆ ಹೊಣೆಗಾರರಾಗಿದ್ದಾರೆ. ಇಸ್ರೇಲಿನ ದೇವರಾದ ಯೆಹೋವನು ಆ ಕುರುಬರಿಗೆ ಹೀಗೆ ಹೇಳುತ್ತಾನೆ, “ನನ್ನ ಕುರಿಗಳು ಎಲ್ಲಾ ದಿಕ್ಕುಗಳಿಗೂ ಚದರುವಂತೆ ನೀವು ಮಾಡಿರುವಿರಿ. ನೀವು ಅವುಗಳನ್ನು ಓಡಿಸಿಬಿಟ್ಟಿದ್ದೀರಿ. ನೀವು ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳಲಿಲ್ಲ. ಈಗ ನಾನು ನಿಮ್ಮನ್ನು ವಿಚಾರಿಸಿಕೊಳ್ಳುತ್ತೇನೆ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮ್ಮನ್ನು ದಂಡಿಸುತ್ತೇನೆ.” ಯೆಹೋವನು ಹೀಗೆ ಹೇಳಿದನು. “ನಾನು ನನ್ನ ಕುರಿಗಳನ್ನು ಬೇರೆ ದೇಶಗಳಿಗೆ ಕಳುಹಿಸಿದೆ. ಆದರೆ ಉಳಿದ ನನ್ನ ಕುರಿಗಳನ್ನು ಒಂದೆಡೆ ಸೇರಿಸುವೆನು. ಅವುಗಳನ್ನು ಅವುಗಳ ಹುಲ್ಲುಗಾವಲಿಗೆ ತರುವೆನು. ಅವುಗಳಿಗೆ ಅನೇಕ ಮಕ್ಕಳಾಗಿ ಅವುಗಳ ಸಂಖ್ಯೆ ಬೆಳೆಯುವುದು. ನನ್ನ ಕುರಿಗಳನ್ನು ನೋಡಿಕೊಳ್ಳುವದಕ್ಕೆ ನಾನು ಹೊಸ ಕುರುಬರನ್ನು ನೇಮಿಸುವೆನು. ಆ ಕುರುಬರು ನನ್ನ ಕುರಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವರು. ನನ್ನ ಕುರಿಗಳು ಬೆದರುವದಿಲ್ಲ, ಭಯಪಡುವದಿಲ್ಲ. ನನ್ನ ಒಂದು ಕುರಿಯೂ ಕಳೆದುಹೋಗುವದಿಲ್ಲ.” ಇದು ಯೆಹೋವನ ಸಂದೇಶ.

ಸದ್ಧರ್ಮದ ಸಸಿ

ಇದು ಯೆಹೋವನ ಸಂದೇಶ:
“ನಾನು ಒಳ್ಳೆಯ ‘ಸಸಿಯನ್ನು’ ಚಿಗುರಿಸುವ ಕಾಲ ಬಂದಿದೆ.
    ಅವನು ಬುದ್ಧಿವಂತಿಕೆಯಿಂದ ಆಳುವ ರಾಜನಾಗಿರುವನು.
ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಬದ್ಧವಾದದ್ದನ್ನು ಮಾಡುವನು.
ಸದ್ಧರ್ಮದ ‘ಸಸಿಯ’ ಸಮಯದಲ್ಲಿ ಯೆಹೂದದ ಜನರು ರಕ್ಷಿಸಲ್ಪಡುವರು
    ಮತ್ತು ಇಸ್ರೇಲ್ ಸುರಕ್ಷಿತವಾಗಿರುವುದು.
ಯೆಹೋವನೇ, ನಮ್ಮ ಸದ್ಧರ್ಮ
    ಎಂಬ ಹೆಸರು ಅವನಿಗಾಗುವುದು.”

ಇದು ಯೆಹೋವನಿಂದ ಬಂದ ಸಂದೇಶ: “ಜನರು ಇನ್ನು ಮೇಲೆ ದೇವರ ಆಣೆಯನ್ನು ಹಳೆಯ ರೀತಿಯಲ್ಲಿ ಹೇಳಲಾರದ ಕಾಲ ಬರುತ್ತಿದೆ. ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಆಣೆ’ ಎಂಬುದು ದೇವರ ಆಣೆಯ ಹಳೆಯ ರೀತಿಯಾಗಿತ್ತು. ಆದರೆ ಹೊಸ ಕಾಲ ಬರಲಿದೆ. ಆಗ, ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಅವರನ್ನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದಲೂ ಹೊರತಂದ ಯೆಹೋವನಾಣೆ’ ಎಂದು ಹೇಳುವರು. ಆಗ ಇಸ್ರೇಲರು ಸ್ವದೇಶದಲ್ಲಿ ನೆಲಸುವರು.”

ಸುಳ್ಳುಪ್ರವಾದಿಗಳ ಬಗ್ಗೆ ನ್ಯಾಯನಿರ್ಣಯ

ಪ್ರವಾದಿಗಳಿಗೊಂದು ಸಂದೇಶ.
ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ಹೃದಯ ಒಡೆದುಹೋಗಿದೆ.
    ನನ್ನ ಎಲುಬುಗಳೆಲ್ಲಾ ನಡುಗುತ್ತಿವೆ.
ನಾನು ಅಮಲೇರಿದವನಂತಿದ್ದೇನೆ.
    ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ.
10 ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ.
    ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ.
ಯೆಹೋವನು ನಾಡನ್ನು ಶಪಿಸಿದ್ದರಿಂದ
    ಅದು ಬರಡು ಭೂಮಿಯಾಯಿತು.
ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತುಹೋಗುತ್ತಲಿವೆ.
    ಹೊಲಗಳು ಮರುಭೂಮಿಯಂತಾಗಿವೆ.
ಪ್ರವಾದಿಗಳು ಸೆರೆ ಒಯ್ಯಲ್ಪಟ್ಟಿದ್ದಾರೆ.
    ಆ ಪ್ರವಾದಿಗಳು ತಮ್ಮ ಪ್ರಭಾವವನ್ನೂ ಶಕ್ತಿಯನ್ನೂ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
11 “ಪ್ರವಾದಿಗಳೂ ಯಾಜಕರೂ ದುಷ್ಟರಾಗಿದ್ದಾರೆ.
    ಅವರು ನನ್ನ ಪವಿತ್ರಾಲಯದಲ್ಲಿಯೇ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಇದು ಯೆಹೋವನಿಂದ ಬಂದ ಸಂದೇಶ.
12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ.
    ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು.
ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ.
    ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು.
ನಾನು ಅವರಿಗೆ ಕೇಡನ್ನು ಬರಮಾಡಿ
    ಅವರನ್ನು ದಂಡಿಸುವೆನು.”
ಇದು ಯೆಹೋವನಿಂದ ಬಂದ ಸಂದೇಶ.

13 “ಸಮಾರ್ಯದ ಪ್ರವಾದಿಗಳು ಕೆಟ್ಟದ್ದಾಗಿ ನಡೆದುಕೊಂಡದ್ದನ್ನು ನಾನು ನೋಡಿದ್ದೇನೆ.
ಅವರು ಬಾಳ್ ದೇವತೆಗೋಸ್ಕರ ಆವೇಶದಿಂದ ಪ್ರವಾದಿಸಿದ್ದನ್ನು ನಾನು ಕಂಡಿದ್ದೇನೆ.
    ಆ ಪ್ರವಾದಿಗಳು ಇಸ್ರೇಲಿನ ಜನರನ್ನು ಯೆಹೋವನಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
14 ಯೆಹೂದದ ಪ್ರವಾದಿಗಳು ಜೆರುಸಲೇಮಿನಲ್ಲಿ
    ಭಯಂಕರ ದುಷ್ಕೃತ್ಯಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ.
ಈ ಪ್ರವಾದಿಗಳು ವ್ಯಭಿಚಾರ ಮಾಡುತ್ತಾರೆ.
    ಅವರು ಸುಳ್ಳುಗಳನ್ನು ಕೇಳಿ, ಆ ಸುಳ್ಳುಬೋಧನೆಗಳನ್ನು ಪಾಲಿಸುತ್ತಾರೆ.
ಅವರು ದುಷ್ಟರಿಗೆ ಅವರ ದುಷ್ಟತನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ.
    ಆದ್ದರಿಂದ ಜನರು ಪಾಪಮಾಡುವುದನ್ನು ನಿಲ್ಲಿಸಲಿಲ್ಲ.
ಅವರೆಲ್ಲರು ನನಗೆ ಸೊದೋಮ್ ನಗರದಂತೆ ಇದ್ದಾರೆ.
    ಜೆರುಸಲೇಮಿನ ಜನರು ಗೊಮೋರ ನಗರದಂತೆ ಇದ್ದಾರೆ.”
15 ಸರ್ವಶಕ್ತನಾದ ಯೆಹೋವನು ಪ್ರವಾದಿಗಳ ಬಗ್ಗೆ ಹೀಗೆನ್ನುತ್ತಾನೆ,
“ನಾನು ಆ ಪ್ರವಾದಿಗಳನ್ನು ದಂಡಿಸುವೆನು.
    ಆ ಶಿಕ್ಷೆಯು ವಿಷಪೂರಿತ ಆಹಾರದಂತೆಯೂ ನೀರಿನಂತೆಯೂ ಇರುವುದು.
ಪ್ರವಾದಿಗಳು ಒಂದು ಆಧ್ಯಾತ್ಮಿಕ ವ್ಯಾಧಿಯನ್ನು ಪ್ರಾರಂಭಿಸಿದರು.
    ಆ ವ್ಯಾಧಿಯು ಇಡೀ ದೇಶದಲ್ಲೆಲ್ಲ ಪ್ರಸರಿಸಿತು.
ಆದ್ದರಿಂದ ನಾನು ಆ ಪ್ರವಾದಿಗಳನ್ನು ಶಿಕ್ಷಿಸುತ್ತೇನೆ.
    ಆ ವ್ಯಾಧಿಯು ಆ ಪ್ರವಾದಿಗಳಿಂದ ಜೆರುಸಲೇಮಿಗೆ ಬಂದಿತು.”

16 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
    “ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಬೇಡಿರಿ.
ಅವರು ನಿಮ್ಮನ್ನು ಮರುಳುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
    ಅವರು ದರ್ಶನಗಳ ಬಗ್ಗೆ ಹೇಳುತ್ತಾರೆ.
    ಅವರ ದರ್ಶನಗಳು ಅವರ ಮನಸ್ಸಿನಿಂದ ಬಂದವುಗಳೇ ಹೊರತು ನನ್ನಿಂದ ಬಂದವುಗಳಲ್ಲ.
17 ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನ್ನು ದ್ವೇಷಿಸುತ್ತಾರೆ.
    ಆದ್ದರಿಂದ ಆ ಪ್ರವಾದಿಗಳು ಆ ಜನರಿಗೆ ಬೇರೆಯದನ್ನೇ ಹೇಳುತ್ತಾರೆ.
ಅವರು ‘ನಿಮಗೆ ಶುಭವಾಗುವುದು’ ಎನ್ನುತ್ತಾರೆ.
    ಕೆಲವು ಜನರು ಬಹಳ ಮೊಂಡರಾಗಿದ್ದಾರೆ.
ಅವರು ತಮ್ಮ ಮನಸ್ಸಿಗೆ ಬಂದುದನ್ನೇ ಮಾಡುತ್ತಾರೆ.
    ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.
18 ಈ ಪ್ರವಾದಿಗಳಲ್ಲಿ ಒಬ್ಬನಾದರೂ ಪರಲೋಕದ ಸಭೆಯಲ್ಲಿ ನಿಂತಿಲ್ಲ.
    ಒಬ್ಬನಾದರೂ ಯೆಹೋವನ ಸಂದೇಶವನ್ನು ಕೇಳಿಲ್ಲ, ಅಥವಾ ನೋಡಿಲ್ಲ.
    ಒಬ್ಬನಾದರೂ ಆತನ ಸಂದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿಲ್ಲ.
19 ಈಗ ಯೆಹೋವನಿಂದ ದಂಡನೆಯು ಬಿರುಗಾಳಿಯಂತೆ ಬರುವುದು.
ಯೆಹೋವನ ಕೋಪವು ತೂಫಾನಿನಂತೆ
    ದುಷ್ಟರ ತಲೆಯ ಮೇಲೆ ಆರ್ಭಟಿಸಿ ಬೀಳುವುದು.
20 ಆತನು ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿ ಮುಗಿಸುವವರೆಗೆ
    ಆತನ ಕೋಪವು ಕಡಿಮೆಯಾಗುವುದಿಲ್ಲ.
ಆ ದಿನವಾದ ಮೇಲೆ ನೀವು ಇದನ್ನು
    ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.
21 ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ.
    ಆದರೂ ಅವರು ತಮ್ಮ ಸಂದೇಶವನ್ನು ಕೊಡಲು ಆತುರಪಟ್ಟರು.
ನಾನು ಅವರೊಂದಿಗೆ ಮಾತನಾಡಲಿಲ್ಲ
    ಆದರೂ ಅವರು ನನ್ನ ಹೆಸರು ಹೇಳಿ ಉಪದೇಶ ಮಾಡಿದರು.
22 ಅವರು ನನ್ನ ಪರಲೋಕದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದಲ್ಲಿ
    ಅವರು ನನ್ನ ಸಂದೇಶಗಳನ್ನು ಯೆಹೂದದ ಜನರಿಗೆ ಹೇಳಬಹುದಾಗಿತ್ತು.
ಅವರ ಕೆಟ್ಟತನವನ್ನೂ
    ದುಷ್ಟತನವನ್ನೂ ತಡೆಯಬಹುದಾಗಿತ್ತು.”

23 ಈ ಸಂದೇಶ ಯೆಹೋವನಿಂದ ಬಂದಿತು:
“ನಾನೇ ಯೆಹೋವನು. ನಾನು ಯಾವಾಗಲೂ ಸಮೀಪವಾಗಿದ್ದೇನೆ.
    ನಾನು ಬಹಳ ದೂರವಿಲ್ಲ.
24 ಒಬ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ
ನಾನು ಅವನನ್ನು ಸರಾಗವಾಗಿ ನೋಡಬಲ್ಲೆನು.
    ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.”

ಯೆಹೋವನೇ ಇವುಗಳನ್ನು ಹೇಳಿದ್ದಾನೆ. 25 “ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುವ ಪ್ರವಾದಿಗಳಿದ್ದಾರೆ. ಅವರು ‘ನಾನೊಂದು ಕನಸು ಕಂಡೆ, ನಾನೊಂದು ಕನಸು ಕಂಡೆ’ ಎಂದು ಹೇಳುತ್ತಾರೆ. 26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನ್ನೇ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನ್ನೇ ಜನರಿಗೆ ಬೋಧಿಸುತ್ತಾರೆ. 27 ಯೆಹೂದದ ಜನರು ನನ್ನ ಹೆಸರನ್ನು ಮರೆಯುವಂತೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಈ ಸುಳ್ಳು ಕನಸುಗಳ ಬಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತಂತೆಯೇ ನನ್ನ ಜನರು ಸಹ ನನ್ನನ್ನು ಮರೆಯಲೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತು ಸುಳ್ಳುದೇವರಾದ ಬಾಳನನ್ನು ಪೂಜಿಸಿದರು. 28 ಹೊಟ್ಟು, ಗೋಧಿಯ ಕಾಳಲ್ಲ. ಅದೇ ರೀತಿ, ಆ ಪ್ರವಾದಿಗಳ ಕನಸುಗಳು ನನ್ನ ಸಂದೇಶಗಳಲ್ಲ. ಒಬ್ಬ ವ್ಯಕ್ತಿಗೆ ತನ್ನ ಕನಸಿನ ಬಗ್ಗೆ ಹೇಳಬೇಕೆನಿಸಿದರೆ, ಅವನು ಹೇಳಲಿ. ಆದರೆ ನನ್ನ ಸಂದೇಶವನ್ನು ಕೇಳಿದ ಮನುಷ್ಯನು ಆ ಸಂದೇಶವನ್ನು ಯಥಾರ್ಥವಾಗಿ ಹೇಳಲಿ. 29 ನನ್ನ ಸಂದೇಶವು ಬೆಂಕಿಯ ಜ್ವಾಲೆಯಂತಿದೆ. ಅದು ಕಲ್ಲುಬಂಡೆಯನ್ನು ಒಡೆದುಹಾಕುವ ಸುತ್ತಿಗೆಯಂತಿದೆ” ಇದು ಯೆಹೋವನ ನುಡಿ.

30 “ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.[a] 31 ನಾನು ಸುಳ್ಳುಪ್ರವಾದಿಗಳನ್ನು ವಿರೋಧಿಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನ್ನು ಹೇಳಿ ಅದು ನನ್ನ ಸಂದೇಶವೆಂಬುವಂತೆ ನಟನೆ ಮಾಡುತ್ತಾರೆ. 32 ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.

ಯೆಹೋವನಿಂದ ದುಃಖಕರ ಸಂದೇಶ

33 “ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನ್ನನ್ನು ಕೇಳಬಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ.[b] ನಾನು ಆ ಭಾರವನ್ನು ಕೆಳಗೆ ಎಸೆದುಬಿಡುತ್ತೇನೆ’” ಎಂದು ಉತ್ತರಿಸು. ಇದು ಯೆಹೋವನ ನುಡಿ.

34 “ಒಬ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದ್ದರಿಂದ ನಾನು ಆ ವ್ಯಕ್ತಿಯನ್ನು ಮತ್ತು ಅವರ ಇಡೀ ಕುಟುಂಬವನ್ನು ದಂಡಿಸುತ್ತೇನೆ. 35 ನೀವು ಪರಸ್ಪರ ‘ಯೆಹೋವನ ಉತ್ತರವೇನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಮಾತನಾಡಬೇಕು. 36 ನೀವು ಪುನಃ ಎಂದಿಗೂ ‘ಯೆಹೋವನ ಭಾರ’ ಎಂಬ ಮಾತನ್ನು ಉಪಯೋಗಿಸಕೂಡದು. ಏಕೆಂದರೆ ಯೆಹೋವನ ಸಂದೇಶವು ಯಾರಿಗೂ ಭಾರವಾಗಬೇಕಾಗಿಲ್ಲ. ಆದರೆ ನೀವು ನಿಮ್ಮ ದೇವರ ಮಾತುಗಳನ್ನು ತಲೆಕೆಳಗೆ ಮಾಡಿದ್ದೀರಿ. ಆತನು ಸರ್ವಶಕ್ತನಾಗಿದ್ದಾನೆ ಮತ್ತು ಜೀವಸ್ವರೂಪನಾದ ದೇವರಾಗಿದ್ದಾನೆ.

37 “ನೀವು ದೇವರ ಸಂದೇಶವನ್ನು ತಿಳಿದುಕೊಳ್ಳ ಬಯಸಿದರೆ ಪ್ರವಾದಿಯನ್ನು ಕುರಿತು ‘ಯೆಹೋವನು ನಿನಗೆ ಏನೆಂದು ಉತ್ತರವನ್ನು ಕೊಟ್ಟನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಕೇಳಿರಿ. 38 ಆದರೆ ‘ಯೆಹೋವನ ಭಾರವೇನು?’ ಎಂದು ಕೇಳಬೇಡಿರಿ. ನೀವು ಆ ಪದಗಳನ್ನು ಬಳಸಿದರೆ ಯೆಹೋವನು ನಿಮಗೆ ಹೀಗೆ ಹೇಳುವನು: ‘ನೀವು ನನ್ನ ಸಂದೇಶವನ್ನು “ಯೆಹೋವನ ಭಾರವೆಂದು” ಹೇಳಬಾರದಾಗಿತ್ತು. ಆ ಪದಗಳನ್ನು ಬಳಸಬಾರದೆಂದು ನಾನು ನಿಮಗೆ ಹೇಳಿದ್ದೇನೆ. 39 ಆದರೆ ನೀವು ನನ್ನ ಸಂದೇಶವನ್ನು ಭಾರವಾದ ಹೊರೆ ಎಂದು ಹೇಳಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಒಂದು ಭಾರವಾದ ಹೊರೆಯಂತೆ ಎತ್ತಿ ನನ್ನಿಂದ ದೂರ ಎಸೆಯುತ್ತೇನೆ. ನಾನು ನಿಮ್ಮ ಪೂರ್ವಿಕರಿಗೆ ಜೆರುಸಲೇಮ್ ನಗರವನ್ನು ಕೊಟ್ಟೆ. ಆದರೆ ನಾನು ನಿಮ್ಮನ್ನೂ ಆ ನಗರವನ್ನೂ ನನ್ನಿಂದ ದೂರ ಎಸೆಯುವೆನು. 40 ನಿಮಗೆ ಶಾಶ್ವತವಾದ ಅಪಕೀರ್ತಿಯನ್ನು ತರುವೆನು. ನೀವು ಈ ಅವಮಾನವನ್ನು ಎಂದಿಗೂ ಮರೆಯಲಾರಿರಿ.’”

ಒಳ್ಳೆಯ ಮತ್ತು ಕೆಟ್ಟ ಅಂಜೂರದ ಹಣ್ಣುಗಳು

24 ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.) ಒಂದು ಬುಟ್ಟಿಯಲ್ಲಿ ಬಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಬೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನ್ನೊಂದು ಬುಟ್ಟಿಯಲ್ಲಿ ತಿನ್ನಲಾಗದಷ್ಟು ಕೊಳೆತ ಅಂಜೂರಗಳಿದ್ದವು.

ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು.

“ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.

ಆಗ ನನಗೆ ಯೆಹೋವನಿಂದ ಸಂದೇಶ ಬಂದಿತು. ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನ್ನು ಬಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು. ನಾನು ಅವರನ್ನು ರಕ್ಷಿಸುವೆನು. ನಾನು ಅವರನ್ನು ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನ್ನು ಬೀಳಿಸುವದಿಲ್ಲ. ನಾನು ಅವರನ್ನು ಅಭಿವೃದ್ಧಿಪಡಿಸುತ್ತೇನೆ. ನಾನು ಅವರನ್ನು ಕೀಳುವದಿಲ್ಲ. ಅವರನ್ನು ನೆಟ್ಟು ಬೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು. ಅವರಲ್ಲಿ ನನ್ನನ್ನು ಅರಿತುಕೊಳ್ಳುವ ಬಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಬುದನ್ನು ಅವರು ತಿಳಿದುಕೊಳ್ಳುವರು. ಅವರು ನನ್ನ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಬಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗುತ್ತಾರೆ.

“ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನ್ನಲು ಬಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಧಿಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು. ನಾನು ಆ ಜನರನ್ನು ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನ್ನು ಉಂಟು ಮಾಡುವುದು. ಜನರು ಯೆಹೂದದ ಜನರನ್ನು ಗೇಲಿಮಾಡುವರು. ನಾನು ಅವರನ್ನು ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಬಗ್ಗೆ ಪರಿಹಾಸ್ಯದ ಮಾತುಗಳನ್ನು ಆಡುವರು; ಅವರನ್ನು ಶಪಿಸುವರು. 10 ನಾನು ಖಡ್ಗ, ಕ್ಷಾಮ, ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”

ಯೆರೆಮೀಯನ ಬೋಧನೆಯ ಸಾರಾಂಶ

25 ಯೆಹೂದದ ಎಲ್ಲಾ ಜನರ ಬಗ್ಗೆ ಯೆರೆಮೀಯನಿಗೆ ಈ ಸಂದೇಶವು ಬಂದಿತು. ಈ ಸಂದೇಶವು ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಂದಿತು. ಯೆಹೋಯಾಕೀಮನು ಯೋಷೀಯನ ಮಗ. ಅವನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಅಂದರೆ ಬಾಬಿಲೋನಿನಲ್ಲಿ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೇ ವರ್ಷದಲ್ಲಿ ಯೆರೆಮೀಯನು ಈ ಸಂದೇಶವನ್ನು ಯೆಹೂದದ ಜನರೆಲ್ಲರಿಗೂ ಜೆರುಸಲೇಮಿನ ಜನರೆಲ್ಲರಿಗೂ ಸಾರಿದನು.

ಕಳೆದ ಇಪ್ಪತ್ಮೂರು ವರ್ಷಗಳಿಂದ ನಾನು ನಿಮಗೆ ಮತ್ತೆಮತ್ತೆ ಯೆಹೋವನ ಸಂದೇಶವನ್ನು ಕೊಡುತ್ತಿದ್ದೇನೆ. ಅಮೋನನ ಮಗನಾದ ಯೋಷೀಯನು ಯೆಹೂದದ ರಾಜನಾದ ಹದಿಮೂರನೆ ವರ್ಷದಿಂದ ನಾನು ಪ್ರವಾದಿಯಾಗಿದ್ದೇನೆ. ಅಂದಿನಿಂದ ಇಂದಿನವರೆಗೆ ನಾನು ಯೆಹೋವನ ಸಂದೇಶಗಳನ್ನು ನಿಮಗೆ ತಿಳಿಸುತ್ತಾ ಬಂದಿದ್ದೇನೆ. ಆದರೆ ನೀವು ಕಿವಿಗೆ ಹಾಕಿಕೊಂಡಿಲ್ಲ. ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ಆದರೆ ನೀವು ಅವರ ಮಾತುಗಳನ್ನು ಕಿವಿಗೆ ಹಾಕಿಕೊಂಡಿಲ್ಲ. ನೀವು ಅವರ ಕಡೆಗೆ ಸ್ವಲ್ಪವೂ ಗಮನಕೊಟ್ಟಿಲ್ಲ.

ಆ ಪ್ರವಾದಿಗಳು, “ನಿಮ್ಮ ಜೀವನಕ್ರಮವನ್ನು ಬದಲಾಯಿಸಿಕೊಳ್ಳಿರಿ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿಬಿಡಿ. ನೀವು ಬದಲಾದರೆ, ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಬಹಳ ಹಿಂದೆ ಕೊಟ್ಟ ಭೂಮಿಯಲ್ಲಿ ನೀವು ನೆಲೆಸಬಹುದು. ನೀವು ಶಾಶ್ವತವಾಗಿ ವಾಸಿಸಬೇಕೆಂದು ಆತನು ಈ ಭೂಮಿಯನ್ನು ಕೊಟ್ಟಿದ್ದಾನೆ. ಬೇರೆ ದೇವರುಗಳನ್ನು ಅನುಸರಿಸಬೇಡಿರಿ; ಅವುಗಳ ಸೇವೆ ಮಾಡಬೇಡಿರಿ; ಅವುಗಳನ್ನು ಪೂಜಿಸಬೇಡಿರಿ. ಮನುಷ್ಯ ನಿರ್ಮಿತವಾದ ವಿಗ್ರಹಗಳನ್ನು ಪೂಜಿಸಬೇಡಿ. ನೀವು ಪೂಜಿಸಿದರೆ ನಿಮ್ಮ ಮೇಲೆ ನಾನು ಕೋಪಗೊಂಡು ನಿಮಗೆ ಕೇಡುಮಾಡುವೆನು” ಎಂದು ಹೇಳಿದರು.

“ನೀವು ನನ್ನ ಮಾತನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ. “ನೀವು ಮನುಷ್ಯನು ಮಾಡಿದ ವಿಗ್ರಹಗಳನ್ನು ಪೂಜಿಸಿದಿರಿ. ಅದೇ ನನಗೆ ಕೋಪ ತಂದಿತು. ಅದು ನಿಮಗೇ ಕೇಡನ್ನು ಉಂಟುಮಾಡಿತು.”

ಸರ್ವಶಕ್ತನಾದ ಯೆಹೋವನು ಹೀಗೆಂದನು: “ನೀವು ನನ್ನ ಸಂದೇಶಗಳನ್ನು ಕೇಳಿ ಅದರಂತೆ ನಡೆಯಲಿಲ್ಲ. ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು. 10 ಆ ಸ್ಥಳಗಳಲ್ಲಿ ನಾನು ಸಂತೋಷದ ಮತ್ತು ಸಂಭ್ರಮದ ಧ್ವನಿಗಳು ಕೇಳಿಬರದಂತೆ ಮಾಡುವೆನು. ವಧುವರರ ಸಂತೋಷದ ಧ್ವನಿಗಳು ಇನ್ನು ಮೇಲೆ ಕೇಳಿಬರುವದಿಲ್ಲ. ನಾನು ಬೀಸುವಕಲ್ಲಿನ ಸದ್ದನ್ನು ತೆಗೆದುಕೊಳ್ಳುವೆನು. ನಾನು ದೀಪದ ಬೆಳಕನ್ನು ತೆಗೆದುಕೊಳ್ಳುವೆನು. 11 ಆ ಇಡೀ ಪ್ರದೇಶವು ಒಂದು ಮರುಭೂಮಿಯಾಗುವುದು. ಆ ಜನಾಂಗಗಳೆಲ್ಲ ಎಪ್ಪತ್ತು ವರ್ಷಗಳವರೆಗೆ ಬಾಬಿಲೋನಿನ ರಾಜನ ಗುಲಾಮರಾಗುವರು.

12 “ಆದರೆ ಎಪ್ಪತ್ತು ವರ್ಷಗಳಾದ ಮೇಲೆ ನಾನು ಬಾಬಿಲೋನಿನ ರಾಜನನ್ನೂ ಜನರನ್ನೂ ದಂಡಿಸುವೆನು.” ಇದು ಯೆಹೋವನಿಂದ ಬಂದ ಸಂದೇಶ. “ಅವರ ಪಾಪಗಳಿಗಾಗಿ ನಾನು ಬಾಬಿಲೋನ್ ದೇಶವನ್ನು ದಂಡಿಸುವೆನು. ನಾನು ಶಾಶ್ವತವಾಗಿ ಆ ಭೂಮಿಯನ್ನು ಮರುಭೂಮಿಯನ್ನಾಗಿ ಮಾಡುವೆನು. 13 ಬಾಬಿಲೋನಿಗೆ ಅನೇಕ ಕೇಡುಗಳು ಬರುವವೆಂದು ನಾನು ಹೇಳಿದ್ದೇನೆ. ಅದೆಲ್ಲ ನಡೆಯುವುದು. ಯೆರೆಮೀಯನು ಆ ಅನ್ಯಜನಾಂಗಗಳ ಬಗ್ಗೆ ಬೋಧಿಸಿದ್ದಾನೆ. ಆ ಮೂನ್ಸೂಚನೆಗಳೆಲ್ಲಾ ಈ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. 14 ಹೌದು, ಬಾಬಿಲೋನಿನ ಜನರು ಅನೇಕ ಜನಾಂಗಗಳ ಮತ್ತು ಅನೇಕ ಮಹಾರಾಜರ ಸೇವೆ ಮಾಡಬೇಕಾಗುವುದು. ಅವರು ಮಾಡಲಿರುವ ದುಷ್ಕೃತ್ಯಗಳಿಗೆಲ್ಲ ತಕ್ಕ ಶಿಕ್ಷೆಯನ್ನು ನಾನು ಅವರಿಗೆ ಕೊಡುವೆನು.”

ಜಗತ್ತಿನ ಎಲ್ಲಾ ಜನಾಂಗಗಳ ಬಗ್ಗೆ ನ್ಯಾಯನಿರ್ಣಯ

15 ಇಸ್ರೇಲಿನ ದೇವರಾದ ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಈ ಪಾನಪಾತ್ರೆಯನ್ನು ನನ್ನ ಕೈಯಿಂದ ತೆಗೆದುಕೋ. ಇದು ಕೋಪದ ದ್ರಾಕ್ಷಾರಸ. ನಾನು ನಿನ್ನನ್ನು ವಿವಿಧ ಜನಾಂಗಗಳಲ್ಲಿಗೆ ಕಳುಹಿಸುತ್ತಿದ್ದೇನೆ. ಆ ಜನಾಂಗಗಳಿಗೆಲ್ಲಾ ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಸು. 16 ಅವರು ಈ ದ್ರಾಕ್ಷಾರಸವನ್ನು ಕುಡಿಯುವರು. ಆಮೇಲೆ ಅವರು ವಾಂತಿ ಮಾಡಿಕೊಳ್ಳುವರು ಮತ್ತು ಹುಚ್ಚರಂತೆ ವರ್ತಿಸುವರು. ನಾನು ಬೇಗನೆ ಅವರ ವಿರುದ್ಧ ಖಡ್ಗವನ್ನು ಕಳುಹಿಸುತ್ತಿರುವುದರಿಂದ ಅವರು ಹೀಗೆ ಮಾಡುವರು.”

17 ನಾನು ಯೆಹೋವನ ಕೈಯಿಂದ ಪಾನಪಾತ್ರೆಯನ್ನು ತೆಗೆದುಕೊಂಡೆನು. ನಾನು ಆ ಜನಾಂಗಗಳ ಬಳಿಗೆ ಹೋದೆನು ಮತ್ತು ಆ ಜನರು ಈ ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. 18 ನಾನು ಈ ದ್ರಾಕ್ಷಾರಸವನ್ನು ಜೆರುಸಲೇಮಿನ ಮತ್ತು ಯೆಹೂದದ ಜನರಿಗೆ ಸುರಿದೆನು. ನಾನು ರಾಜನನ್ನು ಮತ್ತು ಯೆಹೂದದ ನಾಯಕರನ್ನು ಈ ಪಾತ್ರೆಯಲ್ಲಿಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು. ಅವರು ಬರಿದಾದ ಮರುಭೂಮಿಯಂತಾಗಲೆಂದು ಹೀಗೆ ಮಾಡಿದೆನು. ಆ ಸ್ಥಳವು ತುಂಬಾ ಹಾಳಾಗಲಿ, ಜನರು ಅದರ ಬಗ್ಗೆ ಸಿಳ್ಳುಹಾಕಲಿ, ಶಾಪಹಾಕಲಿ ಎಂಬ ಉದ್ದೇಶದಿಂದ ನಾನು ಹಾಗೆ ಮಾಡಿದೆನು. ಹಾಗೆಯೇ ಆಯಿತು. ಯೆಹೂದವು ಈಗ ಹಾಗೆಯೇ ಇದೆ.

19 ಈಜಿಪ್ಟಿನ ರಾಜನಾದ ಫರೋಹನು ಸಹ ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆ. ಅವನ ಅಧಿಕಾರಿಗಳೂ ಪ್ರಮುಖ ನಾಯಕರೂ ಅವನ ಎಲ್ಲಾ ಜನರೂ ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ.

20 ಎಲ್ಲಾ ಅರಬೀಯರು ಮತ್ತು ಧಿಚ್ ದೇಶದ ಎಲ್ಲಾ ರಾಜರು ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆ.

ಫಿಲಿಷ್ಟಿಯ ದೇಶದ ಎಲ್ಲಾ ರಾಜರು ಅಂದರೆ ಅಷ್ಕೆಲೋನ್, ಗಾಜಾ, ಎಕ್ರೋನ್ ಮತ್ತು ಅಷ್ಡೋದಿನ ಶೇಷಭಾಗದ ರಾಜರು ಈ ಪಾನಪಾತ್ರೆಯಿಂದ ಕುಡಿಯುವಂತೆ ಮಾಡಿದೆನು.

21 ಆಮೇಲೆ ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು.

22 ತೂರಿನ ಮತ್ತು ಚೀದೋನಿನ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ.

ಬಹಳ ದೂರದೇಶದ ರಾಜರು ಸಹ ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. 23 ದೆದಾನ್ಯರು, ತೇಮಾದೇಶದವರು, ಬೂಜ್ ದೇಶದವರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. ತಮ್ಮ ತಲೆಕೂದಲನ್ನು ಕತ್ತರಿಸಿಕೊಳ್ಳುವ ಎಲ್ಲಾ ಜನರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. 24 ಅರಬೀಯರ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆ. ಈ ರಾಜರು ಮರುಭೂಮಿಯಲ್ಲಿ ವಾಸಮಾಡುತ್ತಾರೆ. 25 ನಾನು ಜಿಮ್ರಿಯ ಎಲ್ಲಾ ರಾಜರು, ಏಲಾಮಿನ ಎಲ್ಲಾ ರಾಜರು, ಮೇದ್ಯರ ಎಲ್ಲಾ ರಾಜರು ಈ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. 26 ಉತ್ತರದಲ್ಲಿ ಸಮೀಪದಲ್ಲಿದ್ದ ಮತ್ತು ದೂರದಲ್ಲಿದ್ದ ಎಲ್ಲಾ ರಾಜರನ್ನು ಈ ಪಾತ್ರೆಯಿಂದ ಒಬ್ಬರಾದ ಮೇಲೊಬ್ಬರು ಕುಡಿಯುವಂತೆ ಮಾಡಿದೆನು. ನಾನು ಭೂಮಿಯ ಮೇಲಿದ್ದ ಎಲ್ಲಾ ರಾಜ್ಯಗಳು ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. ಆದರೆ ಬಾಬಿಲೋನಿನ ರಾಜನು ಎಲ್ಲಾ ದೇಶಗಳವರು ಕುಡಿದ ತರುವಾಯ ಕುಡಿಯುವನು.

27 “ಯೆರೆಮೀಯನೇ, ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನಾಂಗಗಳಿಗೆ ಹೇಳು: ‘ನನ್ನ ರೋಷದ ಈ ಪಾತ್ರೆಯಿಂದ ಕುಡಿಯಿರಿ, ಕುಡಿದು ಅಮಲೇರಿ ವಾಂತಿಮಾಡಿಕೊಳ್ಳಿ, ಕೆಳಗೆ ಬಿದ್ದು ಮೇಲಕ್ಕೆ ಏಳದಿರಿ, ಏಕೆಂದರೆ ನಾನು ನಿಮ್ಮನ್ನು ಕೊಲ್ಲಲು ಒಂದು ಖಡ್ಗವನ್ನು ಕಳುಹಿಸುತ್ತಿದ್ದೇನೆ.’

28 “ಅವರು ನಿನ್ನ ಕೈಯಿಂದ ಪಾನಪಾತ್ರೆಯನ್ನು ತೆಗೆದುಕೊಳ್ಳಲು ಒಪ್ಪುವದಿಲ್ಲ. ಅವರು ಅದನ್ನು ಕುಡಿಯಲು ಒಪ್ಪುವದಿಲ್ಲ. ಆದರೆ ನೀನು ಅವರಿಗೆ ಹೀಗೆ ಹೇಳು: ‘ನೀವು ಈ ಪಾತ್ರೆಯಿಂದ ಕುಡಿಯಲೇಬೇಕಾಗುವುದೆಂದು ಸರ್ವಶಕ್ತನಾದ ದೇವರು ಹೇಳುತ್ತಾನೆ. 29 ಈಗಾಗಲೆ ನನ್ನ ಹೆಸರುಗೊಂಡಿರುವ ಜೆರುಸಲೇಮ್ ನಗರಕ್ಕೆ ಕೇಡಾಗುವಂತೆ ಮಾಡುತ್ತಿದ್ದೇನೆ. ನಿಮ್ಮನ್ನು ದಂಡನೆಗೆ ಗುರಿ ಮಾಡಲಾಗುವುದಿಲ್ಲವೆಂದು ನೀವು ಯೋಚಿಸುತ್ತಿರಬಹುದು. ಆದರೆ ನಿಮ್ಮ ಯೋಚನೆ ತಪ್ಪು. ನಿಮ್ಮನ್ನು ದಂಡಿಸಲಾಗುವುದು. ಈ ಭೂಮಿಯ ಮೇಲಿನ ಜನರೆಲ್ಲರ ಮೇಲೆ ಆಕ್ರಮಣಮಾಡಲು ನಾನು ಒಂದು ಖಡ್ಗವನ್ನು ಕರೆಯುತ್ತಿದ್ದೇನೆ.’” ಇದು ಯೆಹೋವನ ಸಂದೇಶ.

30 “ಯೆರೆಮೀಯನೇ, ನೀನು ಅವರಿಗೆ ಈ ಸಂದೇಶವನ್ನು ಕೊಡು:
‘ಉನ್ನತವಾದ ಮತ್ತು ಪವಿತ್ರವಾದ
    ಆಲಯದಿಂದ ಯೆಹೋವನು ಗರ್ಜಿಸುವನು.
ಯೆಹೋವನು ಗಟ್ಟಿಯಾಗಿ ಗರ್ಜಿಸಿ ತನ್ನ ಹುಲ್ಲುಗಾವಲಿನ ಮಂದೆಯನ್ನು ಬೆದರಿಸುವನು.
    ದ್ರಾಕ್ಷಾರಸವನ್ನು ತಯಾರಿಸುವಾಗ ದ್ರಾಕ್ಷೆಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭಯಂಕರವಾಗಿ ಕೂಗುವನು.
31 ಆ ಧ್ವನಿಯು ಭೂಲೋಕದ ಎಲ್ಲಾ ಕಡೆಗೂ ಹಬ್ಬುತ್ತದೆ.
    ಈ ಧ್ವನಿಯೆಲ್ಲಾ ಏತಕ್ಕೆ?
ಯೆಹೋವನು ಎಲ್ಲಾ ಜನಾಂಗದ ಜನರನ್ನು ದಂಡಿಸುತ್ತಿದ್ದಾನೆ.
    ಯೆಹೋವನು ಜನರ ವಿರುದ್ಧ ತನ್ನ ವಾದವನ್ನು ಹೇಳಿದನು.
ಜನರ ಬಗ್ಗೆ ತೀರ್ಪನ್ನು ಕೊಟ್ಟನು.
    ಆತನು ದುಷ್ಟರನ್ನು ಖಡ್ಗದಿಂದ ಕೊಲ್ಲುತ್ತಿದ್ದಾನೆ.’”
ಈ ಸಂದೇಶವು ಯೆಹೋವನಿಂದ ಬಂದದ್ದು.

32 “ವಿಪತ್ತುಗಳು ಬಹುಬೇಗ
    ದೇಶದಿಂದ ದೇಶಕ್ಕೆ ಹರಡುವವು.
ಅವು ಭೂಲೋಕದ ಎಲ್ಲಾ ದೂರದೂರದ ದೇಶಗಳಲ್ಲಿ
    ಭಯಂಕರವಾದ ಬಿರುಗಾಳಿಯಂತೆ ಬರುವವು.”

33 ಆ ಜನರ ಮೃತ ಶರೀರಗಳು ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಬಿದ್ದಿರುವವು. ಆ ಸತ್ತಜನರಿಗಾಗಿ ಯಾರೂ ಅಳುವದಿಲ್ಲ. ಯಾರೂ ಅವರ ಶವಗಳನ್ನು ಒಟ್ಟುಗೂಡಿಸಿ ಹೂಳುವದಿಲ್ಲ. ಅವುಗಳು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವವು.

34 ಕುರುಬರೇ, ನೀವು ಕುರಿಗಳಿಗೆ (ಜನಗಳಿಗೆ) ಮುಂದಾಳಾಗಿ ನಡೆಯಬೇಕು.
    ಮಹಾನಾಯಕರೇ, ನೀವು ಗೋಳಾಡಲು ಪ್ರಾರಂಭಿಸಿರಿ.
ಕುರಿಗಳ ಮುಂದಾಳುಗಳಾದ ನೀವು ನೋವಿನಿಂದ ನೆಲದ ಮೇಲೆ ಹೊರಳಾಡಿರಿ.
ಏಕೆಂದರೆ ಈಗ ನಿಮ್ಮನ್ನು ವಧಿಸುವ ಕಾಲ ಬಂದಿದೆ.
    ನಾನು ನಿಮ್ಮ ಕುರಿಗಳನ್ನು ದಿಕ್ಕಾಪಾಲು ಮಾಡಿಬಿಡುತ್ತೇನೆ.
    ಅವುಗಳು ಒಡೆದ ಪಾತ್ರೆಯ ಚೂರುಗಳಂತೆ ಚೆಲ್ಲಾಪಿಲ್ಲಿಯಾಗುತ್ತವೆ.
35 ಕುರುಬರಿಗೆ ಅಡಗಿಕೊಳ್ಳಲು ಸ್ಥಳ ಸಿಕ್ಕುವದಿಲ್ಲ.
    ಆ ನಾಯಕರುಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕುವದಿಲ್ಲ.
36 ಕುರುಬರ ಕೂಗಾಟ ನನಗೆ ಕೇಳುತ್ತಿದೆ.
    ಕುರಿಗಳ ಗೋಳಾಟ ನನಗೆ ಕೇಳಿಬರುತ್ತಿದೆ.
    ಯೆಹೋವನು ಅವರ ದೇಶವನ್ನು ನಾಶಮಾಡುತ್ತಿದ್ದಾನೆ.
37 ನೆಮ್ಮದಿಯಿಂದ ಕೂಡಿದ ಆ ಹುಲ್ಲುಗಾವಲುಗಳು ಬರಿದಾದ ಮರುಭೂಮಿಗಳಂತಾಗಿವೆ.
    ಏಕೆಂದರೆ ಯೆಹೋವನು ತುಂಬಾ ಕೋಪಗೊಂಡಿದ್ದಾನೆ.
38 ಯೆಹೋವನು, ತನ್ನ ಗುಹೆಯಿಂದ ಹೊರಬರುತ್ತಿರುವ ಭಯಂಕರವಾದ ಸಿಂಹದಂತಿದ್ದಾನೆ.
    ಯೆಹೋವನು ಕೋಪಗೊಂಡಿದ್ದಾನೆ.
ಯೆಹೋವನ ಕೋಪವು ಆ ಜನರನ್ನು ಪೀಡಿಸುವುದು.
    ಅವರ ದೇಶವು ಬರಿದಾದ ಮರುಭೂಮಿಯಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International