Beginning
ಬಾಬಿಲೋನಿಗೆ ದೇವರ ಸಂದೇಶ
13 ಆಮೋಚನ ಮಗನಾದ ಯೆಶಾಯನಿಗೆ ಬಾಬಿಲೋನಿನ ಬಗ್ಗೆ ದೊರೆತ ದೈವಸಂದೇಶ:
2 “ಬೋಳುಗುಡ್ಡದ ಮೇಲೆ ಧ್ವಜವನ್ನೆತ್ತಿರಿ.
ಜನರನ್ನು ಕರೆಯಿರಿ;
ಕೈಸನ್ನೆ ಮಾಡಿರಿ;
ದ್ವಾರಗಳ ಮೂಲಕ ಪ್ರವೇಶಿಸಲು ಪ್ರಮುಖರಿಗೆ ಹೇಳಿರಿ.
3 “ನಾನು ಅವರನ್ನು ಆ ಜನರಿಂದ ಪ್ರತ್ಯೇಕಿಸಿದ್ದೇನೆ;
ನಾನೇ ಅವರಿಗೆ ಆಜ್ಞಾಪಿಸುವೆನು.
ನಾನು ಕೋಪಗೊಂಡಿರುವುದರಿಂದ ಆ ಜನರನ್ನು ಶಿಕ್ಷಿಸಲು ನನ್ನ ಉತ್ತಮವಾದ ಜನರನ್ನು ಒಟ್ಟಾಗಿ ಸೇರಿಸಿದ್ದೇನೆ.
ಉತ್ಸಾಹಶಾಲಿಗಳಾದ ನನ್ನ ಜನರ ಬಗ್ಗೆ ನಾನು ಹೆಮ್ಮೆಪಡುತ್ತೇನೆ.
4 “ಪರ್ವತಗಳಲ್ಲಿ ಒಂದು ದೊಡ್ಡ ಶಬ್ದ ಕೇಳಿಸುತ್ತದೆ. ಆ ಶಬ್ದಕ್ಕೆ ಕಿವಿಗೊಡಿರಿ.
ದೊಡ್ಡ ಜನಸಮೂಹದ ಶಬ್ದದಂತೆ ಕೇಳಿಸುತ್ತದೆ.
ಅನೇಕ ರಾಜ್ಯಗಳ ಜನರು ಒಟ್ಟಾಗಿ ಸೇರುತ್ತಿದ್ದಾರೆ.
ಸರ್ವಶಕ್ತನಾದ ಯೆಹೋವನು ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾನೆ.
5 ಯೆಹೋವನೂ ಆ ಸೈನ್ಯವೂ ದೂರದಿಂದ ಬರುತ್ತಿದ್ದಾರೆ.
ದಿಗಂತದ ಆಚೆಯಿಂದ ಅವರು ಬರುತ್ತಿದ್ದಾರೆ.
ತನ್ನ ಸಿಟ್ಟನ್ನು ಪ್ರದರ್ಶಿಸುವದಕೋಸ್ಕರ ಯೆಹೋವನು ಈ ಸೈನ್ಯವನ್ನು ಉಪಯೋಗಿಸುವನು.
ಈ ಸೈನ್ಯವು ಇಡೀ ಭೂಮಿಯನ್ನು ಹಾಳು ಮಾಡುವುದು.”
6 ಯೆಹೋವನ ದಿನವು ಹತ್ತಿರವಾಗಿದೆ. ಆದ್ದರಿಂದ ದುಃಖಿಸಿರಿ, ರೋಧಿಸಿರಿ. ವೈರಿಯು ಬಂದು ನಿಮ್ಮ ಐಶ್ವರ್ಯವನ್ನು ಸೂರೆಮಾಡುವ ಸಮಯವು ಬರುತ್ತದೆ. ಸರ್ವಶಕ್ತನಾದ ದೇವರು ಅದನ್ನು ನೆರವೇರಿಸುವನು. 7 ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಭಯದಿಂದ ಬಲಹೀನರಾಗುವರು. 8 ಪ್ರತಿಯೊಬ್ಬರೂ ಭಯಪೀಡಿತರಾಗುವರು. ಯಾತನೆವೇದನೆಗಳು ಅವರನ್ನು ಆಕ್ರಮಿಸುವವು. ಪ್ರಸವವೇದನೆಯಿಂದ ನರಳುವ ಹೆಂಗಸಿನಂತೆ ಅವರ ಹೊಟ್ಟೆಯಲ್ಲಿ ನೋವು ಉಂಟಾಗುವದು; ಅವರ ಮುಖಗಳು ಬೆಂಕಿಯಂತೆ ಕೆಂಪಗಾಗುವವು. ಭಯದ ಮುಖವು ತಮ್ಮ ನೆರೆಯವರಲ್ಲಿಯೂ ಇರುವದನ್ನು ನೋಡಿ ಜನರು ಆಶ್ಚರ್ಯಪಡುವರು.
ಬಾಬಿಲೋನಿನ ವಿರುದ್ಧವಾಗಿ ದೇವರ ತೀರ್ಪು
9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು. 10 ಆಕಾಶವು ಕತ್ತಲಾಗುವದು; ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕಳೆದುಕೊಳ್ಳುವವು.
11 ದೇವರು ಹೇಳುವುದೇನೆಂದರೆ: “ಈ ಲೋಕಕ್ಕೆ ನಾನು ಕೆಡುಕನ್ನು ಉಂಟುಮಾಡುವೆನು. ದುಷ್ಟಜನರನ್ನು ಅವರ ಪಾಪಗಳಿಗಾಗಿ ನಾನು ಶಿಕ್ಷಿಸುವೆನು. ಅಹಂಕಾರಿಗಳು ಗರ್ವವನ್ನು ಕಳೆದುಕೊಳ್ಳುವಂತೆ ಮಾಡುವೆನು; ಕೀಳುಜನರ ಹೊಗಳಿಕೆಗಳನ್ನು ನಿಲ್ಲಿಸುವೆನು. 12 ಬಂಗಾರವು ಯಾವ ರೀತಿಯಲ್ಲಿ ಅಪರೂಪವಾಗಿ ದೊರಕುವದೋ, ಅದೇ ಪ್ರಕಾರ ದೇಶದಲ್ಲಿ ಬಹು ಸ್ವಲ್ಪವೇ ಜನರು ಉಳಿಯುವದರಿಂದ ಅವರು ನೋಡಸಿಗುವದೇ ಅಪರೂಪ. ಅಂಥವರು ಚೊಕ್ಕಬಂಗಾರಕ್ಕಿಂತಲೂ ಬೆಲೆಬಾಳುವರು. 13 ನನ್ನ ಕೋಪದಿಂದ ಆಕಾಶಮಂಡಲವನ್ನು ನಡುಗಿಸುವೆನು. ಭೂಮಿಯನ್ನು ಅದರ ಸ್ಥಳದಿಂದ ಕದಲಿಸುವೆನು.”
ಸರ್ವಶಕ್ತನಾದ ಯೆಹೋವನು ತನ್ನ ಮಹಾಕೋಪವನ್ನು ಪ್ರದರ್ಶಿಸುವ ದಿನದಲ್ಲಿ ಅದು ನೆರವೇರುವುದು. 14 ಆಗ ಗಾಯಗೊಂಡ ಜಿಂಕೆಯಂತೆ ಬಾಬಿಲೋನು ಓಡಿಹೋಗುವದು. ಅವರು ಕುರುಬನಿಲ್ಲದ ಕುರಿಗಳಂತೆ ಚದರಿ ಹೋಗುವರು. ಪ್ರತಿಯೊಬ್ಬನು ಹಿಂದಿರುಗಿ ತನ್ನ ದೇಶಕ್ಕೂ ತನ್ನ ಜನರ ಬಳಿಗೂ ಓಡುವನು. 15 ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು. 16 ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು.
17 ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ. 18 ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ. 19 ಬಾಬಿಲೋನು ಸೊದೋಮ್ ಗೊಮೋರಗಳಂತೆ ನಾಶವಾಗುವದು. ದೇವರೇ ಇದನ್ನು ಮಾಡುವನು. ಆಗ ಅಲ್ಲಿ ಏನೂ ಉಳಿಯದು.
“ಎಲ್ಲಾ ರಾಜ್ಯಗಳಿಗಿಂತ ಬಾಬಿಲೋನ್ ಬಹಳ ಸುಂದರವಾಗಿದೆ. ಬಾಬಿಲೋನಿಯರು ತಮ್ಮ ನಗರದ ಬಗ್ಗೆ ತುಂಬಾ ಹೆಚ್ಚಳಪಡುತ್ತಾರೆ. 20 ಆದರೆ ಬಾಬಿಲೋನ್ ಇನ್ನು ಮುಂದೆ ಸುಂದರವಾಗಿರದು. ಮುಂದಿನ ದಿವಸಗಳಲ್ಲಿ, ಜನರು ಅಲ್ಲಿ ವಾಸಿಸರು. ಅರಬ್ಬಿಯರು ತಮ್ಮ ಗುಡಾರಗಳನ್ನು ಅಲ್ಲಿ ಹಾಕುವದಿಲ್ಲ. ಕುರುಬರು ತಮ್ಮ ಮಂದೆಯನ್ನು ಮೇಯಿಸಲು ಅಲ್ಲಿಗೆ ಬರುವದಿಲ್ಲ. 21 ಅಲ್ಲಿ ಮರುಭೂಮಿಯ ಕಾಡುಪ್ರಾಣಿಗಳು ಮಾತ್ರವೇ ವಾಸಿಸುವವು. ಜನರು ಬಾಬಿಲೋನಿನಲ್ಲಿರುವ ತಮ್ಮ ಮನೆಗಳಲ್ಲಿ ವಾಸಿಸುವದಿಲ್ಲ. ಅವರ ಮನೆಗಳಲ್ಲಿ ಗೂಬೆಗಳು ಮತ್ತು ಉಷ್ಟ್ರಪಕ್ಷಿಗಳು ವಾಸಮಾಡುವವು. ಕಾಡುಮೇಕೆಗಳು ಮನೆಯೊಳಗೆ ಆಡುವವು. 22 ಕಾಡುನಾಯಿ ಮತ್ತು ತೋಳಗಳು ಬಾಬಿಲೋನಿನ ಭವ್ಯಭವನಗಳೊಳಗಿಂದ ಅರಚುವವು. ಬಾಬಿಲೋನ್ ಕೊನೆಗೊಳ್ಳುವುದು. ಅದರ ಅಂತ್ಯವು ಸಮೀಪದಲ್ಲಿಯೇ ಇದೆ. ಅದರ ಪೂರ್ಣ ನಾಶನಕ್ಕಾಗಿ ನಾನು ಇನ್ನು ಹೆಚ್ಚು ಹೊತ್ತು ಕಾಯುವದಿಲ್ಲ.”
ಇಸ್ರೇಲರು ಸ್ವದೇಶಕ್ಕೆ ಹಿಂದಿರುಗುವರು
14 ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ. 2 ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು. 3 ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
ಬಾಬಿಲೋನಿನ ಅರಸನ ಕುರಿತು ಹಾಡು
4 ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ:
ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು.
ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.
5 ಯೆಹೋವನು ದುಷ್ಟರ ಕೋಲನ್ನೂ ಅರಸನ ರಾಜದಂಡವನ್ನೂ ಮುರಿದುಹಾಕಿದನು.
ಅವನ ಅಧಿಕಾರವನ್ನು ತೆಗೆದುಹಾಕಿದನು.
6 ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು.
ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ.
ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು.
ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
7 ಆದರೆ ಈಗ ಇಡೀ ರಾಜ್ಯದಲ್ಲಿ ವಿಶ್ರಾಂತಿ ಇದೆ.
ರಾಜ್ಯವು ಸಮಾಧಾನದಿಂದಿದೆ.
ಜನರು ಸಂತೋಷದಿಂದ ಇದನ್ನು ಆಚರಿಸುತ್ತಾರೆ.
8 ನೀನು ದುಷ್ಟ ಅರಸನಾಗಿದ್ದೆ,
ಈಗ ನಿನಗೆ ಅಂತ್ಯವು ಬಂತು.
ತುರಾಯಿ ಮರಗಳೂ
ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ.
ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು.
ಈಗ ಅರಸನೇ ಉರುಳಿಬಿದ್ದಿದ್ದಾನೆ.
ಅವನು ಮತ್ತೆಂದಿಗೂ ಏಳುವುದಿಲ್ಲ.
9 ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ.
ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ.
ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ.
ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
10 “ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ.
ಈಗ ನೀನು ನಮ್ಮಂತೆಯೇ ಆಗಿರುವೆ”
ಎಂದು ಅವರು ನಿನ್ನನ್ನು ಗೇಲಿ ಮಾಡುವರು.
11 ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ.
ನಿನ್ನ ಹಾರ್ಪ್‌ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ.
ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು.
ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ.
ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
12 ನೀನು ಉದಯ ನಕ್ಷತ್ರದಂತೆ ಇರುವೆ.
ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ.
ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು.
ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ.
13 ನೀನು ಯಾವಾಗಲೂ ನಿನ್ನೊಳಗೆ,
“ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು.
ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು.
ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು.
ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು.
14 ನಾನು ಉನ್ನತ ಮೇಘಮಂಡಲದ ಮೇಲೆ ಏರಿ
ಮಹೋನ್ನತನಿಗೆ ಸರಿಸಮಾನನಾಗುತ್ತೇನೆ” ಎಂದುಕೊಳ್ಳುತ್ತಿದ್ದೆ.
15 ಆದರೆ ಅದು ಸಂಭವಿಸಲಿಲ್ಲ.
ನೀನು ಆಕಾಶಕ್ಕೆ ದೇವರೊಂದಿಗೆ ಹೋಗಲಿಲ್ಲ.
ನೀನು ಆಳವಾದ ಗುಂಡಿಗೆ ದಬ್ಬಲ್ಪಟ್ಟೆ.
ಮರಣಸ್ಥಳವಾಗಿರುವ ಪಾತಾಳಕ್ಕೆ ನೀನು ದಬ್ಬಲ್ಪಟ್ಟೆ.
16 ನಿನ್ನನ್ನು ನೋಡುವ ಜನರು ನಿನ್ನ ಬಗ್ಗೆ ಯೋಚಿಸುವರು.
ನೀನು ಕೇವಲ ಸತ್ತ ಹೆಣವೆಂದು ತಿಳಿದು,
“ಭೂಮಿಯ ಮೇಲಿನ ರಾಜ್ಯಗಳಲ್ಲಿ ಮಹಾಭೀತಿಯನ್ನುಂಟು ಮಾಡಿದವನು ಇವನೋ?
17 ನಗರಗಳನ್ನು ನಾಶಮಾಡಿ ಭೂಮಿಯನ್ನು ಬೆಂಗಾಡನ್ನಾಗಿ ಮಾಡಿದವನು ಇವನೋ?
ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಅವರನ್ನು ಮನೆಗಳಿಗೆ ಬಿಡದೆ ಇದ್ದವನು ಇವನೋ?” ಎಂದು ಕೇಳುವರು.
18 ಭೂಲೋಕದ ಪ್ರತಿಯೊಬ್ಬ ಅರಸನು ವೈಭವದೊಂದಿಗೆ ಕಾಲವಾದನು.
ಪ್ರತಿಯೊಬ್ಬ ಅರಸನಿಗೆ ಸ್ವಂತ ಸಮಾಧಿ ಇರುವದು.
19 ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ.
ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ.
ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ.
ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು.
ಈಗ ನೀನು ಸಾಧಾರಣ ಹೆಣದಂತೆ ಇರುವೆ.
ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.
20 ಬೇರೆ ಅನೇಕ ಅರಸರು ಸತ್ತುಹೋದರು.
ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ.
ಆದರೆ ನೀನು ಅವರೊಂದಿಗೆ ಸೇರಲಾರೆ.
ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ.
ನೀನು ನಿನ್ನ ಜನರನ್ನೇ ಸಾಯಿಸಿರುವೆ.
ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
21 ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ.
ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ.
ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು.
ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು.
22 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ.
23 ಯೆಹೋವನು ಹೇಳುವುದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
ದೇವರು ಅಶ್ಶೂರವನ್ನು ಶಿಕ್ಷಿಸುವನು
24 ಸರ್ವಶಕ್ತನಾದ ಯೆಹೋವನು ಒಂದು ವಾಗ್ದಾನವನ್ನು ಮಾಡಿದ್ದಾನೆ. ಆತನು ಹೇಳುವುದೇನೆಂದರೆ: “ನಾನು ಯೋಚಿಸಿದಂತೆಯೇ ಇವೆಲ್ಲವೂ ನೆರವೇರುವುದು ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ. 25 ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು. 26 ಹೀಗೆ ಮಾಡಲು ನಾನೇ ಆಲೋಚಿಸಿದ್ದೇನೆ. ನನ್ನ ಯೋಜನೆಯಂತೆಯೇ ಘಟನೆಗಳು ಸಂಭವಿಸುತ್ತವೆ. ನನ್ನ ಭುಜಬಲದಿಂದ ಜನಾಂಗಗಳನ್ನು ಶಿಕ್ಷಿಸುವೆನು.”
27 ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು.
ಫಿಲಿಷ್ಟಿಯ ಕುರಿತು ದೈವಸಂದೇಶ
28 ಅರಸನಾದ ಆಹಾಜನು ಸತ್ತ ವರ್ಷದಲ್ಲಿ ಈ ದುಃಖದ ಸಂದೇಶವು ಕೊಡಲ್ಪಟ್ಟಿತು:
29 ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು. 30 ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು.
31 ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ!
ಪಟ್ಟಣದೊಳಗಿರುವ ಜನರೇ, ಕೂಗಾಡಿರಿ!
ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು.
ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು.
ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ.
ಅಶ್ಶೂರದ ಸೈನ್ಯವು ಬರುತ್ತಿದೆ.
ಅವರೆಲ್ಲರೂ ಬಲಶಾಲಿಗಳಾದ ವೀರರು.
32 ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ.
ಆ ಸಂದೇಶವು ಏನಿರಬಹುದು?
“ಫಿಲಿಷ್ಟಿಯರು ಸೋತುಹೋದರು.
ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ.
ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ.
ಮೋವಾಬಿನ ಕುರಿತು ದೈವಸಂದೇಶ
15 ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ:
ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು.
ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು.
ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು.
ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.
2 ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ.
ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ.
ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.
3 ಮೋವಾಬಿನ ಎಲ್ಲಾ ಕಡೆಗಳಲ್ಲೂ ಮನೆಯ ಚಾವಣಿಯ ಮೇಲೂ ಬೀದಿಗಳಲ್ಲೂ
ಜನರು ಗೋಣಿತಟ್ಟುಗಳನ್ನು ಧರಿಸಿಕೊಂಡು ರೋಧಿಸುತ್ತಾರೆ.
4 ಹೆಷ್ಬೋನ್ ಮತ್ತು ಎಲೆಯಾಲೆಯಲ್ಲಿರುವ ಜನರು ಗಟ್ಟಿಯಾಗಿ ಅಳುತ್ತಿದ್ದಾರೆ.
ದೂರದಲ್ಲಿರುವ ಯಹಜ್ ಪಟ್ಟಣದವರಿಗೆ ಅವರ ರೋಧನವು ಕೇಳಿಸುತ್ತದೆ.
ಸೈನಿಕರೂ ಭಯಗೊಂಡಿದ್ದಾರೆ.
ಹೆದರಿಕೆಯಿಂದ ನಡುಗುತ್ತಿದ್ದಾರೆ.
5 ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ.
ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ.
ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ.
ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ.
ಪರ್ವತಮಾರ್ಗವಾಗಿ ಲೂಹೀಥ್ ಗೆ
ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ.
ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ
ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.
6 ಆದರೆ ನಿಮ್ರೀಮ್ ಹಳ್ಳವು ಒಣಗಿಹೋಗಿ ಮರುಭೂಮಿಗೆ ಸಮಾನವಾಗಿದೆ.
ಹಸಿಹುಲ್ಲುಗಳೆಲ್ಲಾ ಬಾಡಿವೆ;
ಸಸಿಗಳೆಲ್ಲಾ ಸತ್ತಿವೆ;
ಎಲ್ಲಿಯೂ ಹಸಿರು ಕಾಣಿಸುವದಿಲ್ಲ.
7 ಆದಕಾರಣ ಜನರು ತಮ್ಮ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಮೋವಾಬನ್ನು ಬಿಟ್ಟುಹೋಗುತ್ತಿದ್ದಾರೆ.
ಅವರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪೊಪ್ಲಾರ್ ಹೊಳೆಯ ಬದಿಯಲ್ಲಿ ಗಡಿದಾಟುವರು.
8 ಮೋವಾಬ್ ದೇಶದಲ್ಲೆಲ್ಲಾ ಅಳುವ ಸದ್ದು ಕೇಳಿಸುತ್ತದೆ.
ದೂರದಲ್ಲಿರುವ ಎಗ್ಲಯಿಮಿನಲ್ಲೂ ಜನರು ಅಳುತ್ತಿದ್ದಾರೆ.
ಬೆಯೇರ್ ಏಲೀಮ್ ಪಟ್ಟಣದಲ್ಲೂ ಜನರು ರೋಧಿಸುತ್ತಾರೆ.
9 ದೀಮೋನಿನ ನೀರು ರಕ್ತಮಯವಾಗಿದೆ.
ಮತ್ತು ಯೆಹೋವನಾದ ನಾನು ದೀಮೋನಿಗೆ ಇನ್ನೂ ಕೇಡುಗಳನ್ನು ಬರಮಾಡುವೆನು.
ಮೋವಾಬಿನಲ್ಲಿ ವಾಸಿಸುವ ಕೆಲವೇ ಜನರು ಶತ್ರುಗಳಿಂದ ಪಾರಾಗಿದ್ದಾರೆ.
ಆದರೆ ಅವರನ್ನು ಸಾಯಿಸಲು ನಾನು ಸಿಂಹಗಳನ್ನು ಕಳುಹಿಸುವೆನು.
16 ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
2 ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು.
ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು.
ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.
3 ಅವರು, “ನಮಗೆ ಸಹಾಯ ಮಾಡಿರಿ!
ನಾವು ಮಾಡಬೇಕಾದದ್ದನ್ನು ತಿಳಿಸಿರಿ!
ವೈರಿಗಳಿಂದ ನಮ್ಮನ್ನು ರಕ್ಷಿಸಿರಿ.
ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ.
ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ.
ನಮ್ಮನ್ನು ಅಡಗಿಸಿಡಿರಿ,
ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ.
4 ತಮ್ಮ ಮನೆಯನ್ನು ಬಿಟ್ಟುಹೋಗುವಂತೆ ಮೋವಾಬಿನ ಆ ಜನರನ್ನು ಬಲವಂತ ಮಾಡಲಾಯಿತು.
ಆದ್ದರಿಂದ ಅವರು ನಿಮ್ಮ ದೇಶದಲ್ಲಿ ವಾಸಿಸಲಿ.
ಶತ್ರುಗಳ ಕೈಗೆ ಸಿಗದಂತೆ ಅವರನ್ನು ಅಡಗಿಸಿಡಿರಿ” ಎಂದು ಹೇಳುವರು.
ದರೋಡೆಯು ನಿಂತುಹೋಗುವದು.
ಶತ್ರುಗಳು ಸೋಲಿಸಲ್ಪಡುವರು.
ಇತರರಿಗೆ ಕೇಡುಮಾಡುವವರು ದೇಶವನ್ನು ಬಿಟ್ಟುಹೋಗುವರು.
5 ಆಗ ಹೊಸ ಅರಸನು ಬರುವನು.
ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು.
ಆತನು ದಾವೀದನ ವಂಶದವನಾಗಿದ್ದಾನೆ.
ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು.
ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು.
6 ಮೋವಾಬಿನ ಜನರು ತುಂಬ ಹೆಚ್ಚಳಪಡುವವರೂ
ಜಂಬದವರೂ ಎಂದು ನಾವು ಕೇಳಿದ್ದೇವೆ.
ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ,
ಅವರ ಬಡಾಯಿ ಕೇವಲ ಮಾತುಗಳಷ್ಟೇ.
7 ಆ ಜಂಬದ ಪರಿಣಾಮವಾಗಿ ಇಡೀ ಮೋವಾಬ್ ಪ್ರದೇಶ ಸಂಕಟಕ್ಕೊಳಗಾಗುವದು.
ಮೋವಾಬಿನ ಜನರೆಲ್ಲಾ ಅಳುವರು.
ಜನರು ತಮಗೆ ಹಿಂದೆ ಇದ್ದದ್ದೆಲ್ಲಾ ಬೇಕು ಎನ್ನುತ್ತಾ ದುಃಖಿಸುವರು.
ಕೀರ್ ಹರೆಷೆಥಿನಲ್ಲಿ ತಯಾರಿಸಿದ ಅಂಜೂರದ ತಿಂಡಿ ಪದಾರ್ಥಗಳು ತಮಗೆ ಬೇಕು ಅನ್ನುವರು.
8 ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು
ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು.
ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
9 ದ್ರಾಕ್ಷಾಫಲವು ನಾಶವಾಗಿರುವದಕ್ಕಾಗಿ
ನಾನು ಯೆಜ್ಜೇರ್ ಮತ್ತು ಸಿಬ್ಮದವರೊಂದಿಗೆ ಅಳುವೆನು.
ಸುಗ್ಗಿ ಇಲ್ಲದಿರುವದಕ್ಕಾಗಿ
ನಾನು ಹೆಷ್ಬೋನ್ ಮತ್ತು ಎಲೆಯಾಲೆಯ ಜನರೊಂದಿಗೆ ಅಳುವೆನು.
ಬೇಸಿಗೆ ಕಾಲದ ಹಣ್ಣುಗಳಿರದು;
ಹರ್ಷಧ್ವನಿಯೂ ಇರದು.
10 ಕರ್ಮೆಲ್ ಬೆಟ್ಟದಲ್ಲಿ ಗಾಯನವಾಗಲಿ ಹರ್ಷಧ್ವನಿಯಾಗಲಿ ಇರದು.
ಸುಗ್ಗಿಕಾಲದ ಎಲ್ಲಾ ಸಂತಸಗಳನ್ನು ನಾನು ನಿಲ್ಲಿಸುವೆನು.
ದ್ರಾಕ್ಷಿಯ ಹಣ್ಣುಗಳು ರಸ ತೆಗೆಯಲು ಪಕ್ವವಾಗಿವೆ.
ಆದರೆ ಅವುಗಳೆಲ್ಲ ವ್ಯರ್ಥವಾಗುತ್ತವೆ.
11 ನಾನು ಮೋವಾಬಿಗಾಗಿ ತುಂಬಾ ದುಃಖದಲ್ಲಿದ್ದೇನೆ.
ನಾನು ಕೀರ್‌ಹೆರೆಸಿಗಾಗಿಯೂ ತುಂಬಾ ದುಃಖದಲ್ಲಿದ್ದೇನೆ.
ಈ ನಗರಗಳಿಗಾಗಿ ನಾನು ಬಹಳವಾಗಿ ದುಃಖದಲ್ಲಿದ್ದೇನೆ.
12 ಮೋವಾಬಿನ ಜನರು ತಮ್ಮ ಪೂಜಾಸ್ಥಳಗಳಿಗೆ ಹೋಗಿ ಆರಾಧನೆ ಮಾಡುವರು.
ಸಂಭವಿಸುವ ಸಂಗತಿಗಳನ್ನು ನೋಡಿದಾಗ
ಪ್ರಾರ್ಥಿಸಲೂ ಅವರಲ್ಲಿ ಉತ್ಸಾಹವಿರುವುದಿಲ್ಲ.
13 ಮೋವಾಬಿನ ವಿಷಯವಾಗಿ ಯೆಹೋವನು ಅನೇಕ ಸಾರಿ ಇವುಗಳನ್ನು ಮುಂತಿಳಿಸಿದ್ದಾನೆ. 14 ಈಗ ಯೆಹೋವನು ಹೇಳುವುದೇನೆಂದರೆ: “ಇನ್ನು ಮೂರು ವರ್ಷದೊಳಗೆ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಎಲ್ಲಾ ಜನರು ಮತ್ತು ಅವರು ಹೆಮ್ಮೆಪಡುವ ವಸ್ತುಗಳು ಹೋಗಿಬಿಡುತ್ತವೆ. ಕೇವಲ ಸ್ವಲ್ಪ ಮಂದಿ ಮಾತ್ರ ಉಳಿಯುವರು. ದೇಶದಲ್ಲಿ ಹೆಚ್ಚುಮಂದಿ ಉಳಿಯರು.”
ಅರಾಮ್ಯರ ಕುರಿತು ದೇವರ ಸಂದೇಶ
17 ದಮಸ್ಕಕ್ಕೆ ಇದು ದುಃಖಕರವಾದ ಸಂದೇಶ. ಯೆಹೋವನು ಹೇಳುವುದೇನೆಂದರೆ,
“ದಮಸ್ಕವು ಈಗ ಒಂದು ದೊಡ್ಡ ನಗರವಾಗಿದೆ. ಆದರೆ ಅದು ನಾಶವಾಗುವದು.
ಕೆಡವಲ್ಪಟ್ಟ ಕಟ್ಟಡಗಳು ಮಾತ್ರವೇ ದಮಸ್ಕದಲ್ಲಿರುವವು.
2 ಅರೋಯೇರ್ ಪ್ರಾಂತ್ಯದ ನಗರಗಳನ್ನು ಜನರು ಬಿಟ್ಟುಹೋಗುವರು.
ಆ ಪಾಳುಬಿದ್ದ ನಗರಗಳಲ್ಲಿ ಕುರಿಮಂದೆಗಳು ತಿರುಗಾಡುವವು.
ಅವುಗಳಿಗೆ ತೊಂದರೆ ಕೊಡಲು ಯಾರೂ ಇರುವದಿಲ್ಲ.
3 ಕೋಟೆಗೋಡೆಯುಳ್ಳ ಎಫ್ರಾಯೀಮನ ಪಟ್ಟಣಗಳು ನಾಶವಾಗುವವು.
ದಮಸ್ಕದಲ್ಲಿರುವ ಸರ್ಕಾರವು ಕೊನೆಗೊಳ್ಳುವದು.
ಇಸ್ರೇಲರಿಗೆ ಆದಂತೆಯೇ ಅರಾಮ್ಯರಿಗೂ ಆಗುವದು.
ಪ್ರಮುಖ ನಗರವಾಸಿಗಳು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು” ಇದು ಸರ್ವಶಕ್ತನಾದ ಯೆಹೋವನ ನುಡಿ.
4 “ಆ ಸಮಯದಲ್ಲಿ ಯಾಕೋಬಿನ ಸಂಪತ್ತೆಲ್ಲಾ ಕೊಳ್ಳೆಹೊಡೆಯಲ್ಪಡುವದು.
ಯಾಕೋಬನು ರೋಗಗ್ರಸ್ಥನಾದವನಂತೆ ಬಲಹೀನನಾಗಿಯೂ ತೆಳುವಾಗಿಯೂ ಇರುವನು.
5 “ಆ ಸಮಯದಲ್ಲಿ ರೆಫಾಯೀಮ್ ಕಣಿವೆಯಲ್ಲಿ ಧಾನ್ಯದ ಸುಗ್ಗಿಯಂತಿರುವದು. ಕೆಲಸಗಾರರು ಹೊಲಗಳಲ್ಲಿ ಬೆಳೆಯನ್ನು ಕೊಯ್ದು ಧಾನ್ಯವನ್ನು ಶೇಖರಿಸುವರು.
6 “ಆ ಸಮಯವು ಆಲೀವ್ ಬೀಜಗಳನ್ನು ಜನರು ಕೂಡಿಸಿಕೊಳ್ಳುವಂತೆ ಇರುವುದು. ಆಲೀವ್ ಮರಗಳಿಂದ ಜನರು ಕಾಯಿಗಳನ್ನು ಉದುರಿಸುವರು. ಆದರೆ ಕೆಲವು ಕಾಯಿಗಳು ಮರಗಳ ತುದಿಯಲ್ಲಿ ಉಳಿದುಕೊಳ್ಳುವವು. ಎತ್ತರದ ಕೊಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿಯುವವು. ಅದೇ ರೀತಿಯಲ್ಲಿ ಆ ನಗರಗಳ ಸ್ಥಿತಿಯೂ ಇರುವುದು” ಇದು ಸರ್ವಶಕ್ತನಾದ ಯೆಹೋವನ ನುಡಿಗಳು.
7 ಮಯಗಳಲ್ಲಿ ಜನರು ತಮ್ಮ ನಿರ್ಮಾಣಿಕನಾದ ದೇವರ ಕಡೆಗೆ ದೃಷ್ಟಿಸಿ ನೋಡುವರು. ಅವರ ಕಣ್ಣುಗಳು ಇಸ್ರೇಲಿನ ಪರಿಶುದ್ಧನನ್ನು ನೋಡುತ್ತವೆ. 8 ಜನರು ತಮ್ಮ ಮಹಾಕಾರ್ಯಗಳ ಮೇಲೆ ನಂಬಿಕೆ ಇಡುವದಿಲ್ಲ. ಸುಳ್ಳುದೇವರುಗಳಿಗೆ, ತಾವು ಮಾಡಿದ ಬಲಿಪೀಠಗಳಿಗೆ, ಪೂಜಾಸ್ಥಳಗಳಿಗೆ ಅವರು ಹೋಗುವದಿಲ್ಲ. 9 ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು. 10 ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ.
ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ. 11 ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು.
12 ಇಗೋ! ಸಮುದ್ರವು ಭೋರ್ಗರೆಯುವ ಶಬ್ದದಂತೆ
ಅನೇಕ ಜನಾಂಗಗಳು ರೋಧಿಸುವ ಶಬ್ದ ಕೇಳಿಸುತ್ತದೆ.
ಆ ಶಬ್ದವು ಸಮುದ್ರದ ತೆರೆಗಳು ದಡಕ್ಕೆ ಅಪ್ಪಳಿಸುವಂತಿದೆ.
13 ದೇವರು ಗದರಿಸಿದಾಗ
ಜನರು ಓಡಿಹೋಗುವರು.
ಆ ಜನರು ಗಾಳಿಯಲ್ಲಿ ಹಾರಿಹೋಗುವ ಹೊಟ್ಟಿನಂತಿರುವರು;
ಬಿರುಗಾಳಿಯು ಬಹುದೂರಕ್ಕೆ ಕೊಂಡೊಯ್ಯುವ ಬೇರಿಲ್ಲದ ಹಣಜಿಗಳಂತಿರುವರು.
14 ಆ ರಾತ್ರಿ ಜನರು ಭಯಗ್ರಸ್ತರಾಗುವರು.
ಬೆಳಗಾಗುವದರೊಳಗೆ ಏನೂ ಉಳಿಯುವದಿಲ್ಲ.
ಹಾಗೆಯೇ ನಮ್ಮ ವೈರಿಗಳಿಗೆ ಏನೂ ದೊರಕುವದಿಲ್ಲ.
ಅವರು ನಮ್ಮ ದೇಶಕ್ಕೆ ನುಗ್ಗಿದರೂ ಅವರಿಗೆ ಏನೂ ಸಿಗದು.
Kannada Holy Bible: Easy-to-Read Version. All rights reserved. © 1997 Bible League International