Beginning
ಇಸ್ರೇಲು ದೇವರ ವಿಶೇಷವಾದ ತೋಟ
5 ನನ್ನ ಪ್ರಿಯನನ್ನೂ ಆತನ ತೋಟವನ್ನೂ ಕುರಿತು ಗೀತೆಯೊಂದನ್ನು ಹಾಡುವೆ.
ಫಲವತ್ತಾದ ಪ್ರದೇಶದಲ್ಲಿ
ನನ್ನ ಪ್ರಿಯನಿಗೆ ದ್ರಾಕ್ಷಿತೋಟವಿತ್ತು.
2 ಆತನು ಭೂಮಿಯನ್ನು ಅಗೆದು ಹಸನು ಮಾಡಿದನು;
ಅದರಲ್ಲಿ ಉತ್ತಮವಾದ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.
ತೋಟದ ಮಧ್ಯದಲ್ಲಿ ಒಂದು ಗೋಪುರವನ್ನು ಕಟ್ಟಿಸಿ
ದ್ರಾಕ್ಷಿಯ ತೊಟ್ಟಿಯನ್ನು ಮಾಡಿಸಿದನು.
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡತೊಡಗಿದನು.
ಆದರೆ ಅದು ಹೊಲಸು ಹಣ್ಣನ್ನು ಬಿಟ್ಟಿತು.
3 ಆಗ ಆತನು, “ಜೆರುಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ನನ್ನ ವಿಚಾರವಾಗಿಯೂ
ನನ್ನ ದ್ರಾಕ್ಷಿತೋಟದ ವಿಚಾರವಾಗಿಯೂ ಯೋಚಿಸಿರಿ.
4 ನನ್ನ ದ್ರಾಕ್ಷಿತೋಟಕ್ಕೆ ನಾನು ಇನ್ನೇನು ಮಾಡಬೇಕಿತ್ತು.
ನಾನು ಮಾಡಬೇಕಿದ್ದನ್ನೆಲ್ಲಾ ಮಾಡಿದೆನು.
ಒಳ್ಳೆಯ ದ್ರಾಕ್ಷಿಹಣ್ಣು ಬಿಡುವುದೆಂದು ಆಶಿಸಿದ್ದೆನು.
ಆದರೆ ಅದು ಹೊಲಸು ದ್ರಾಕ್ಷಿಗಳನ್ನೇ ಬಿಟ್ಟಿತು.
ಹೀಗೆ ಆದದ್ದೇಕೆ?
5 “ನಾನೀಗ ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡುವೆನೆಂದು ತಿಳಿಸುವೆನು:
ಅದರ ಸುತ್ತಲೂ ರಕ್ಷಣೆಗಾಗಿ ಹಾಕಿದ್ದ ಮುಳ್ಳಿನ ಬೇಲಿಯನ್ನು
ಕಿತ್ತು ಸುಟ್ಟುಬಿಡುವೆನು.
ಅದರ ಕಲ್ಲಿನ ಗೋಡೆಯನ್ನು ಕೆಡವಿ
ತುಳಿದಾಟಕ್ಕೆ ಈಡುಮಾಡುವೆನು.
6 ನಾನು ಅದನ್ನು ಬೆಂಗಾಡಾಗಿ ಮಾಡುವೆನು.
ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು.
ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ.
ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು.
ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”
7 ಸರ್ವಶಕ್ತನಾದ ಯೆಹೋವನ ದ್ರಾಕ್ಷಿತೋಟವೇ ಇಸ್ರೇಲ್ ದೇಶ. ಯೆಹೋವನು ಪ್ರೀತಿಸುವ ದ್ರಾಕ್ಷಿಬಳ್ಳಿಯೇ ಯೆಹೂದದ ಪ್ರಜೆ.
ಯೆಹೋವನು ನ್ಯಾಯವನ್ನು ಅಪೇಕ್ಷಿಸಿದರೂ
ಸಿಕ್ಕಿದ್ದು ನರಹತ್ಯವೇ.
ಯೆಹೋವನು ಧರ್ಮವನ್ನು ಅಪೇಕ್ಷಿಸಿದರೂ
ದೊರಕಿದ್ದು ಗೋಳಾಟವೇ.
8 ನೀವು ಒಬ್ಬರಿಗೊಬ್ಬರು ಸಮೀಪದಲ್ಲಿ ವಾಸಿಸುತ್ತೀರಿ. ಬೇರೆ ಯಾವುದಕ್ಕೂ ಸ್ಧಳ ಸಿಗದಂತೆ ನೀವು ಹತ್ತಿರಹತ್ತಿರವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತೀರಿ. ಆದರೆ ಯೆಹೋವನು ನಿಮ್ಮನ್ನು ಶಿಕ್ಷಿಸಿ ಇಡೀ ದೇಶದಲ್ಲಿಯೇ ನೀವು ಒಬ್ಬಂಟಿಗರಾಗಿ ವಾಸಿಸುವಂತೆ ಮಾಡುವನು. 9 ಸರ್ವಶಕ್ತನಾದ ಯೆಹೋವನ ನುಡಿಗಳಿವು. ನಾನು ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ಈಗ ಅನೇಕ ಮನೆಗಳಿವೆ, ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಎಲ್ಲಾ ಮನೆಗಳು ಕೆಡವಲ್ಪಡುವವು. ಈಗ ಭವ್ಯವಾದ ಬಂಗಲೆಗಳಿವೆ, ಆದರೆ ಅವುಗಳೆಲ್ಲಾ ಬರಿದಾಗುವವು. 10 ಆ ದಿವಸಗಳಲ್ಲಿ ಹತ್ತು ಎಕರೆ ವಿಶಾಲವಾದ ದ್ರಾಕ್ಷಿತೋಟದಲ್ಲಿ ಸ್ವಲ್ಪ ಮಾತ್ರವೇ ದ್ರಾಕ್ಷಾರಸವು ದೊರಕುವದು. ಅನೇಕ ಚೀಲ ಬೀಜವನ್ನು ಬಿತ್ತಿದರೆ ಸ್ವಲ್ಪ ಧಾನ್ಯ ಮಾತ್ರ ಸಿಗುವುದು.”
11 ನೀವು ಮುಂಜಾನೆ ಎದ್ದು ಮದ್ಯಕ್ಕಾಗಿ ಹುಡುಕಾಡುವಿರಿ. ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಕುಡಿದು ಮತ್ತರಾಗುವಿರಿ. 12 ನೀವು ಕುಡಿಯುತ್ತಾ ಹಾರ್ಪ್ವಾದ್ಯಗಳನ್ನೂ ದಮ್ಮಡಿಗಳನ್ನೂ ಕೊಳಲುಗಳನ್ನೂ ಬಾರಿಸುತ್ತಾ ನೃತ್ಯಮಾಡುವಿರಿ. ಆದರೆ ಯೆಹೋವನು ಮಾಡಿದ ಕಾರ್ಯಗಳನ್ನು ನೀವು ಗಮನಿಸುವುದಿಲ್ಲ. ಯೆಹೋವನ ಹಸ್ತವು ಅನೇಕಾನೇಕ ಕಾರ್ಯಗಳನ್ನು ಮಾಡಿದೆ. ಆದರೆ ನೀವು ಅವುಗಳನ್ನು ಲಕ್ಷಿಸುವುದಿಲ್ಲ. ಆದ್ದರಿಂದ ನಿಮಗೆ ಕೇಡಾಗುವುದು.
13 ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. ಯಾಕೆಂದರೆ ಅವರು ನಿಜವಾಗಿಯೂ ನನ್ನನ್ನು ಅರಿತಿಲ್ಲ. ಇಸ್ರೇಲಿನಲ್ಲಿ ವಾಸಿಸುವ ಕೆಲವು ಜನರು ಈಗ ಪ್ರಮುಖರಾಗಿದ್ದಾರೆ. ತಮ್ಮ ಸುಖಜೀವಿತದಲ್ಲಿ ಆನಂದಿಸುತ್ತಾರೆ. ಆದರೆ ಆ ಗಣ್ಯವ್ಯಕ್ತಿಗಳೆಲ್ಲಾ ಬಾಯಾರಿಕೆಯಿಂದಲೂ ಹಸಿವೆಯಿಂದಲೂ ನರಳುವರು. 14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.”
15 ಆ ಜನರು ತಗ್ಗಿಸಲ್ಪಡುವರು. ಆ ಗಣ್ಯವ್ಯಕ್ತಿಗಳು ತಮ್ಮ ತಲೆಗಳನ್ನು ಕೆಳಗೆ ಮಾಡಿ ನೆಲದ ಕಡೆಗೆ ನೋಡುವರು. 16 ಸರ್ವಶಕ್ತನಾದ ಯೆಹೋವನು ನೀತಿಯಿಂದ ನ್ಯಾಯತೀರಿಸುವನು. ಯೆಹೋವನು ಉನ್ನತೋನ್ನತನೆಂದು ಜನರೆಲ್ಲರೂ ಅರಿತುಕೊಳ್ಳುವರು. ಪರಿಶುದ್ಧನಾದ ದೇವರು ನ್ಯಾಯವಾದದ್ದನ್ನೇ ಮಾಡುವನು. ಜನರು ಆತನನ್ನು ಗೌರವಿಸುವರು. 17 ಆತನು ಇಸ್ರೇಲ್ ದೇಶದ ಜನರನ್ನು ದೇಶಭ್ರಷ್ಟರನ್ನಾಗಿ ಮಾಡುವನು. ಆಗ ದೇಶವು ಬರಿದಾಗುವುದು. ಕುರಿಗಳು ತಮ್ಮ ಮನಸ್ಸು ಬಂದೆಡೆಗೆ ಹೋಗುವವು. ಐಶ್ವರ್ಯವಂತರಿಗೆ ಸೇರಿದ್ದ ಜಮೀನಿನ ಮೇಲೆ ಕುರಿಮರಿಗಳು ನಡೆದಾಡುವವು.
18 ಆ ಜನರನ್ನು ನೋಡಿರಿ. ಜನರು ಹಗ್ಗಗಳಿಂದ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಅವರು ತಮ್ಮ ಪಾಪಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ. 19 ಅವರು, “ದೇವರು ತಾನು ಮಾಡಲಿಕ್ಕಿರುವುದನ್ನು ಬೇಗನೇ ಮಾಡಿಮುಗಿಸಲಿ. ಆಗ ಏನಾಗುವದೋ ನೋಡೋಣ. ಆತನ ಯೋಜನೆ ಬೇಗನೆ ಕಾರ್ಯರೂಪಕ್ಕೆ ಬರಲಿ. ಆಗ ಆತನ ಯೋಜನೆ ಏನೆಂಬುದು ನಮಗೆ ತಿಳಿಯುವುದು” ಎಂದು ಹೇಳುತ್ತಿದ್ದಾರೆ.
20 ಆ ಜನರು ಒಳ್ಳೆಯವುಗಳನ್ನು ಕೆಟ್ಟವುಗಳೆಂದೂ ಕೆಟ್ಟವುಗಳನ್ನು ಒಳ್ಳೆಯವುಗಳೆಂದೂ ಹೇಳುತ್ತಾರೆ. ಅವರು ಬೆಳಕನ್ನು ಕತ್ತಲೆಯೆಂದೂ ಕತ್ತಲೆಯನ್ನು ಬೆಳಕೆಂದೂ ಅನ್ನುತ್ತಾರೆ. ಅವರು ಸಿಹಿಯನ್ನು ಕಹಿಯೆಂದೂ ಕಹಿಯನ್ನು ಸಿಹಿಯೆಂದೂ ಹೇಳುವರು. 21 ಅವರು ತಾವು ತುಂಬಾ ಬುದ್ಧಿವಂತರೆಂದೂ ಜ್ಞಾನಿಗಳೆಂದೂ ಹೇಳಿಕೊಳ್ಳುವರು. 22 ಅವರು ಮದ್ಯವನ್ನು ಬೆರೆಸುವುದರಲ್ಲಿ ಪರಿಣಿತರು; ಮದ್ಯಸೇವನೆ ಮಾಡುವದಕ್ಕೆ ಹೆಸರಾದವರು. 23 ಅವರಿಗೆ ಹಣಕೊಟ್ಟರೆ, ಅಪರಾಧಿಯನ್ನೂ ಬಿಟ್ಟುಬಿಡುವರು; ಆದರೆ ಒಳ್ಳೆಯವರಿಗೆ ಸರಿಯಾದ ನ್ಯಾಯತೀರ್ಪು ದೊರಕಲು ಅವರು ಅವಕಾಶ ಕೊಡುವುದಿಲ್ಲ. 24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು.
ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ. 25 ಆದ್ದರಿಂದ ಯೆಹೋವನು ತನ್ನ ಜನರ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ಯೆಹೋವನು ತನ್ನ ಕೈಗಳನ್ನೆತ್ತಿ ಅವರನ್ನು ಶಿಕ್ಷಿಸುವನು. ಆಗ ಪರ್ವತಗಳೂ ಹೆದರಿಕೊಳ್ಳುವವು; ಹೆಣಗಳು ಕಸದಂತೆ ರಸ್ತೆಗಳಲ್ಲಿ ಬಿದ್ದುಕೊಂಡಿರುವವು. ಆದರೆ ದೇವರು ಅವರ ಮೇಲೆ ಕೋಪಿಸಿಕೊಂಡೇ ಇರುವನು. ಜನರನ್ನು ಶಿಕ್ಷಿಸಲು ಆತನ ಕೈಗಳು ಮೇಲೆತ್ತಲ್ಪಟ್ಟಿರುವವು.
ಇಸ್ರೇಲರನ್ನು ಶಿಕ್ಷಿಸಲು ದೇವರು ಸೈನ್ಯವನ್ನು ತರುವನು
26 ಎದ್ದು ನೋಡು! ದೂರದೇಶದ ಜನಾಂಗಗಳಿಗೆ ದೇವರು ಗುರುತನ್ನು ಕೊಡುತ್ತಿದ್ದಾನೆ. ಆತನು ಧ್ವಜವನ್ನೆತ್ತಿ ಆ ಜನರನ್ನು ಸಿಳ್ಳುಹಾಕಿ ಕರೆಯುತ್ತಿದ್ದಾನೆ.
ಶತ್ರುಗಳು ದೂರದೇಶದಿಂದ ಬರುತ್ತಿದ್ದಾರೆ. ಅವರು ಬೇಗನೆ ನಿನ್ನ ದೇಶವನ್ನು ಪ್ರವೇಶಿಸುವರು. ಅವರು ಬಹುವೇಗವಾಗಿ ಬರುತ್ತಿದ್ದಾರೆ. 27 ಶತ್ರುಗಳು ಆಯಾಸಗೊಳ್ಳುವುದಿಲ್ಲ, ನೆಲಕ್ಕೆ ಬೀಳುವುದಿಲ್ಲ. ಅವರು ತೂಕಡಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ. ಅವರ ಸೊಂಟಪಟ್ಟಿಯು ಆಯುಧದೊಂದಿಗೆ ಯಾವಾಗಲೂ ಸಿದ್ಧವಾಗಿರುವುದು. ಅವರ ಪಾದರಕ್ಷೆಗಳ ದಾರವು ಎಂದಿಗೂ ತುಂಡಾಗುವದಿಲ್ಲ. 28 ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.
29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. 30 ಆದ್ದರಿಂದ ಸಮುದ್ರವು ಭೋರ್ಗರೆಯವಂತೆ ಆ ದಿನದಲ್ಲಿ ಗರ್ಜನೆಯಿರುವುದು. ಸೆರೆಹಿಡಿಯಲ್ಪಟ್ಟ ಜನರು ನೆಲದ ಕಡೆ ನೋಡುವರು. ಅಲ್ಲಿ ಬರೇ ಕತ್ತಲೆಯೇ. ಆ ದಟ್ಟವಾದ ಮೋಡಗಳಲ್ಲಿ ಎಲ್ಲವೂ ಕಪ್ಪಾಗಿಯೇ ಕಾಣುತ್ತದೆ.
ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ
6 ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. 2 ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. 3 ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. 4 ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.
5 ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.
6 ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು. 7 ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ”[a] ಎಂದು ಹೇಳಿದನು.
8 ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು.
ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.
9 ಆಗ ಯೆಹೋವನು, “ನೀನು ಹೋಗಿ ಇದನ್ನು ಜನರಿಗೆ ಸಾರು: ‘ಸರಿಯಾಗಿ ಕೇಳಿಸಿಕೊಳ್ಳಿ, ಆದರೆ ಅರ್ಥಮಾಡಿಕೊಳ್ಳಬೇಡಿ. ಸೂಕ್ಷ್ಮವಾಗಿ ನೋಡಿ, ಆದರೆ ಕಲಿತುಕೊಳ್ಳಬೇಡಿ.’ 10 ಜನರಲ್ಲಿ ಗಲಿಬಿಲಿಯನ್ನು ಉಂಟುಮಾಡು. ಜನರು ತಾವು ನೋಡಿದ್ದನ್ನು, ಕೇಳಿದ್ದನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡು. ನೀನು ಹೀಗೆ ಮಾಡದಿದ್ದಲ್ಲಿ ಜನರು ತಾವು ಕೇಳಿದ್ದನ್ನು ಅರ್ಥಮಾಡಿಕೊಳ್ಳುವರು; ಜನರು ತಮ್ಮ ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವರು. ಅವರು ಹಾಗೆ ಮಾಡಿದ್ದಲ್ಲಿ, ಅವರು ನನ್ನ ಬಳಿಗೆ ಹಿಂದಿರುಗಿ ಬಂದು ಗುಣಹೊಂದುವರು” ಎಂದು ಹೇಳಿದನು.
11 ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು.
ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.
12 ಜನರು ಬಹುದೂರ ಹೋಗುವಂತೆ ಯೆಹೋವನು ಮಾಡುವನು. ದೇಶದೊಳಗೆ ನಿರ್ಜನವಾದ ಸ್ಥಳಗಳು ಬೇಕಾದಷ್ಟು ಇರುವವು. 13 ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.
ಅರಾಮ್ಯರೊಂದಿಗೆ ವೈಮನಸ್ಸು
7 ಆಹಾಜನು ಯೋಥಾಮನ ಮಗನು. ಯೋಥಾಮನು ಉಜ್ಜೀಯನ ಮಗನು. ರೆಚೀನ್ ಎಂಬವನು ಅರಾಮ್ಯರ ಅರಸನಾಗಿದ್ದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ಅರಸನಾಗಿದ್ದನು. ಆಗ ಆಹಾಜನು ಯೆಹೂದದ ಅರಸನಾಗಿದ್ದನು. ರೆಚೀನ್ ಮತ್ತು ಪೆಕಹ ಇವರಿಬ್ಬರೂ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ಆದರೆ ಆ ನಗರವನ್ನು ಸೋಲಿಸಲು ಅವರಿಂದಾಗಲಿಲ್ಲ.
2 ದಾವೀದನ ವಂಶದವರಿಗೆ ಒಂದು ಸಂದೇಶವು ಕಳುಹಿಸಲ್ಪಟ್ಟಿತು, “ಅರಾಮ್ಯರ ಸೈನ್ಯ ಮತ್ತು ಎಫ್ರಾಯೀಮ್ಯರ ಸೈನ್ಯ (ಇಸ್ರೇಲ್) ಒಟ್ಟಾಗಿ ಶಿಬಿರ ಹೂಡಿದ್ದಾರೆ” ಎಂಬುದೇ ಆ ಸಂದೇಶ. ಅರಸನಾದ ಆಹಾಜನು ಈ ಸಂದೇಶವನ್ನು ಕೇಳಿದಾಗ, ಅವನೂ ಅವನ ಜನರೂ ಬಹಳವಾಗಿ ಭಯಹಿಡಿದವರಾದರು. ಅಡವಿಯ ಮರಗಳು ಬಿರುಗಾಳಿಗೆ ತತ್ತರಿಸುತ್ತವೋ ಎಂಬಂತೆ ಅವರು ತತ್ತರಿಸಿದರು.
3 ಆಗ ಯೆಹೋವನು ಯೆಶಾಯನಿಗೆ, “ನೀನೂ ನಿನ್ನ ಮಗನಾದ ಶೆಯಾರ್ ಯಾಶೂಬನೂ ಆಹಾಜನ ಬಳಿಗೆ ಹೋಗಿ ಮಾತನಾಡಬೇಕು. ನೀರು ಮೇಲಿನ ಕೊಳಕ್ಕೆ ಸೇರುವ ಸ್ಥಳಕ್ಕೆ ಹೋಗು. ಇದು ಅಗಸನ ಹೊಲಕ್ಕೆ ಹೋಗುವ ಮಾರ್ಗದಲ್ಲಿದೆ.
4 “ಆಹಾಜನಿಗೆ ಹೀಗೆ ಹೇಳು: ‘ಶಾಂತನಾಗಿದ್ದು ಜಾಗ್ರತೆಯಿಂದಿರು. ಭಯಪಡಬೇಡ. ರೆಚೀನ್ ಮತ್ತು ರೆಮಲ್ಯನ ಮಗ ಇವರಿಬ್ಬರೂ ಸೇರಿ ನಿನ್ನನ್ನು ಬೆದರಿಸದಂತೆ ನೋಡಿಕೋ. ಅವರಿಬ್ಬರೂ ಸುಟ್ಟುಹೋದ ಕೋಲಿನಂತಿದ್ದಾರೆ. ಹಿಂದೆ ಅವರು ಬೆಂಕಿಯಿಂದ ಉರಿಯುತ್ತಿದ್ದರು. ಆದರೆ ಈಗ ಅವರು ಕೇವಲ ಹೊಗೆಯಾಡುತ್ತಿದ್ದಾರೆ. ರೆಚೀನ್, ಅರಾಮ್ ಮತ್ತು ರೆಮಲ್ಯನ ಮಗ ಕೋಪಗೊಂಡಿದ್ದಾರೆ. 5 ಅವರು ನಿನ್ನ ವಿರುದ್ಧವಾಗಿ ಕುತಂತ್ರ ನಡಿಸಿದ್ದಾರೆ. 6 ಅವರು, “ನಾವು ಹೋಗಿ ಯೆಹೂದಕ್ಕೆ ವಿರುದ್ಧವಾಗಿ ಯುದ್ಧ ಮಾಡೋಣ. ಯೆಹೂದ ರಾಜ್ಯವನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳೋಣ ಮತ್ತು ಟಾಬೇಲನ ಮಗನನ್ನು ಯೆಹೂದದ ಹೊಸ ಅರಸನಾಗಿ ಮಾಡೋಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.”’”
7 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ಅವರ ಕುತಂತ್ರವು ನಡೆಯದು. ಅದು ನೆರವೇರದು. 8 ದಮಸ್ಕದಲ್ಲಿ ರೆಚೀನನು ಅರಸನಾಗಿರುವಷ್ಟು ಸಮಯ ಅದು ನಡೆಯದು. ಎಫ್ರಾಯೀಮ್ (ಇಸ್ರೇಲ್) ಈಗ ಒಂದು ದೇಶವಾಗಿದೆ. ಆದರೆ ಇನ್ನು ಅರವತ್ತೈದು ವರ್ಷಗಳೊಳಗೆ ಎಫ್ರಾಯೀಮ್ ಒಂದು ದೇಶವಾಗಿರದು. 9 ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.”
ಇಮ್ಮಾನುವೇಲ್: ದೇವರು ನಮ್ಮೊಂದಿಗಿದ್ದಾನೆ
10 ಬಳಿಕ ಯೆಹೋವನು ಆಹಾಜನೊಡನೆ ಮಾತನ್ನು ಮುಂದುವರಿಸಿದನು. 11 ಯೆಹೋವನು ಅವನಿಗೆ, “ಇವೆಲ್ಲಾ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಒಂದು ಗುರುತನ್ನು ಕೇಳಿಕೊ. ನಿನಗೆ ಯಾವ ಗುರುತನ್ನು ಬೇಕಾದರೂ ಕೇಳಿಕೊ. ಆ ಗುರುತು ಆಳವಾದ ನರಕದಿಂದ ಬಂದ ಗುರುತಾದರೂ ಸರಿಯೇ ಅಥವಾ ಉನ್ನತವಾದ ಆಕಾಶದಿಂದ ಬಂದ ಗುರುತಾದರೂ ಸರಿಯೇ, ನಿನಗೆ ದಯಪಾಲಿಸುವೆನು” ಎಂದು ಹೇಳಿದನು.
12 ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು.
13 ಆಗ ಯೆಶಾಯನು ಹೇಳಿದ್ದೇನೆಂದರೆ, “ದಾವೀದನ ಮನೆತನದವರೇ, ಕಿವಿಗೊಟ್ಟು ಕೇಳಿರಿ. ನೀವು ಜನರ ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ಆದರೆ ಅದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ಈಗ ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. 14 ನನ್ನ ಒಡೆಯನಾದ ದೇವರು ನಿಮಗೊಂದು ಗುರುತನ್ನು ಕೊಡುವನು:
ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು.
ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.
15 ಆತನು ಒಳ್ಳೆಯದನ್ನು ಆರಿಸಿಕೊಳ್ಳಲು ಮತ್ತು ಕೆಟ್ಟದ್ದನ್ನು ನಿರಾಕರಿಸಲು ಕಲಿತುಕೊಳ್ಳುವವರೆಗೆ
ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು.
16 ಆ ಮಗುವು ಒಳ್ಳೆಯದರ ಬಗ್ಗೆ ಮತ್ತು ಕೆಟ್ಟದ್ದರ ಬಗ್ಗೆ ಕಲಿತುಕೊಳ್ಳುವಷ್ಟು ವಯಸ್ಸಾಗುವ ಮೊದಲೇ
ಎಫ್ರಾಯೀಮ್ ದೇಶ ಮತ್ತು ಅರಾಮ್ಯರ ದೇಶ ನಿರ್ಜನವಾಗುವುದು.
ನೀವೀಗ, ಆ ಇಬ್ಬರು ಅರಸರಿಗೆ ಭಯಪಡುತ್ತಿದ್ದೀರಿ.
17 “ಆದರೆ ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. ಯಾಕೆಂದರೆ ಆತನು ನಿಮಗೆ ಸಂಕಟದ ಕಾಲವನ್ನು ತಂದೊಡ್ಡುವನು. ಅದು ಎಫ್ರಾಯೀಮ್ ಯೆಹೂದದಿಂದ ಅಗಲಿಹೋದ ಸಮಯದಲ್ಲಾದ ಸಂಕಟದಂತಿರುವುದು. ಆ ಸಂಕಟವು ನಿಮ್ಮ ಜನಗಳಿಗೂ ನಿಮ್ಮ ಪೂರ್ವಿಕರ ಕುಟುಂಬಕ್ಕೂ ಬರುವದು. ದೇವರು ಏನು ಮಾಡುವನು? ಆತನು ಅಶ್ಶೂರದ ರಾಜನನ್ನು ನಿಮಗೆ ವಿರುದ್ಧವಾಗಿ ಯುದ್ಧಕ್ಕೆ ಬರಮಾಡುವನು.
18 “ಆ ಸಮಯದಲ್ಲಿ ಯೆಹೋವನು ನೊಣಗಳನ್ನು ಕರೆಯುವನು. ಆ ನೊಣಗಳು ಈಗ ಈಜಿಪ್ಟಿನ ನದಿಗಳ ಸಮೀಪದಲ್ಲಿವೆ. ಯೆಹೋವನು ದುಂಬಿಗಳನ್ನು ಕರೆಯುವನು. ಆ ದುಂಬಿಗಳು ಈಗ ಅಶ್ಶೂರ್ ದೇಶದಲ್ಲಿವೆ. ಈ ವೈರಿಗಳು ನಿಮ್ಮ ದೇಶಕ್ಕೆ ಬಂದು 19 ಮರುಭೂಮಿಯ ಹಳ್ಳಗಳ ಸಮೀಪದಲ್ಲಿರುವ ಬಂಡೆಯ ಸಂದುಗೊಂದುಗಳಲ್ಲಿಯೂ ನೀರಿನ ಬಾವಿಗಳ ಬಳಿಯಲ್ಲಿರುವ ಮುಳ್ಳುಪೊದೆಗಳಲ್ಲಿಯೂ ಶಿಬಿರ ಹಾಕಿಕೊಳ್ಳುವರು. 20 ಯೆಹೋವನು ಅಶ್ಶೂರದವರ ಮೂಲಕ ಯೆಹೂದವನ್ನು ಶಿಕ್ಷಿಸುವನು. ಆತನು ಅಶ್ಶೂರವನ್ನು ಬಾಡಿಗೆಗೆ ತೆಗೆದುಕೊಂಡ ಕ್ಷೌರಿಕನ ಕತ್ತಿಯಂತೆ ತೆಗೆದುಕೊಂಡು ಯೆಹೂದದ ತಲೆಕೂದಲನ್ನೂ ಕೈಕಾಲುಗಳ ಕೂದಲನ್ನೂ ಗಡ್ಡವನ್ನೂ ಬೋಳಿಸಿಬಿಡುವನು.
21 “ಆ ಕಾಲದಲ್ಲಿ ಯಾವನೇ ಆಗಲಿ ಹಸುವನ್ನೂ ಎರಡು ಕುರಿಗಳನ್ನೂ ಸಾಕಿ, 22 ಅವು ಕರೆಯುವ ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿರುವ ಪ್ರತಿಯೊಬ್ಬನೂ ಮೊಸರನ್ನೂ ಜೇನುತುಪ್ಪವನ್ನೂ ತಿಂದು ಜೀವಿಸುವನು. 23 ಒಂದುಸಾವಿರ ದ್ರಾಕ್ಷಾಲತೆಗಳಿರುವ ತೋಟಗಳಿರುತ್ತವೆ. ಪ್ರತಿಯೊಂದು ದ್ರಾಕ್ಷಾಲತೆಯು ಒಂದುಸಾವಿರ ಬೆಳ್ಳಿನಾಣ್ಯಗಳಷ್ಟು ಬೆಲೆಬಾಳುವಂಥದ್ದಾಗಿರುತ್ತದೆ. ಆದರೆ ಅಂಥ ತೋಟಗಳು ಹಣಜಿಗಳಿಂದಲೂ ಮುಳ್ಳುಗಿಡಗಳಿಂದಲೂ ತುಂಬಿಕೊಂಡಿರುವವು. 24 ದೇಶವು ಕಾಡಾಗುವುದರಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು. 25 ಒಂದು ಕಾಲದಲ್ಲಿ ಜನರು ಈ ಬೆಟ್ಟಗಳ ಮೇಲೆ ವ್ಯವಸಾಯ ಮಾಡಿ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಆ ಸಮಯದಲ್ಲಿ ಜನರು ಅಲ್ಲಿಗೆ ಹೋಗುವುದಿಲ್ಲ. ದೇಶವು ಹಣಜಿಯಿಂದಲೂ ಮುಳ್ಳುಗಿಡಗಳಿಂದಲೂ ತುಂಬಿರುವದು. ಆ ಸ್ಥಳಗಳಿಗೆ ದನಕುರಿಗಳು ಮಾತ್ರವೇ ಹೋಗುತ್ತವೆ.”
ಅಶ್ಶೂರವು ಬೇಗನೇ ಬರುವದು
8 ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್.’” (ಇದರರ್ಥ: “ಕೊಳ್ಳೆಗೆ ಅವಸರ, ಸೂರೆಗೆ ಆತುರ.”)
2 ನಾನು ನಂಬಿಗಸ್ತರಾದ ಕೆಲವು ಜನರನ್ನು ಸಾಕ್ಷಿಗೋಸ್ಕರವಾಗಿ ಆರಿಸಿಕೊಂಡೆನು. (ಅವರು ಯಾರೆಂದರೆ, ಯಾಜಕನಾದ ಊರೀಯ ಮತ್ತು ಯೆಬೆರೆಕ್ಯನ ಮಗನಾದ ಜೆಕರ್ಯ.) ನಾನು ಆ ವಾಕ್ಯವನ್ನು ಬರೆಯುವಾಗ ಇವರು ನೋಡುತ್ತಿದ್ದರು. 3 ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್’ ಎಂಬ ಹೆಸರನ್ನಿಡು. 4 ಯಾಕೆಂದರೆ ಆ ಮಗನು ಅಪ್ಪಾ, ಅಮ್ಮಾ ಎಂದು ಕರೆಯಲು ತೊಡಗುವ ಮೊದಲೇ ದೇವರು ದಮಸ್ಕ ಮತ್ತು ಸಮಾರ್ಯದ ಎಲ್ಲಾ ಐಶ್ವರ್ಯವನ್ನು ತೆಗೆದು ಅದನ್ನು ಅಶ್ಶೂರದ ಅರಸನಿಗೆ ಕೊಡುವನು” ಎಂದು ಹೇಳಿದನು.
5 ಮತ್ತೆ ಯೆಹೋವನು ನನ್ನೊಂದಿಗೆ ಮಾತನಾಡಿದನು. 6 ನನ್ನ ಒಡೆಯನು ಹೀಗೆಂದನು: “ಈ ಜನರು ನಿಧಾನವಾಗಿ ಹರಿಯುವ ಸಿಲೋವ ಕೊಳದ ನೀರನ್ನು ಸ್ವೀಕರಿಸುವುದಿಲ್ಲ. ಇವರು ರೆಚೀನ್ ಮತ್ತು ರೆಮಲ್ಯನ ಮಗನೊಂದಿಗೆ ಸಂತೋಷದಲ್ಲಿದ್ದಾರೆ. 7 ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ಅಶ್ಶೂರದ ಅರಸನನ್ನೂ ಅವನ ಸಮಸ್ತ ಸೈನ್ಯವನ್ನೂ ತರುವೆನು. ಅವರು ಯೂಫ್ರೇಟೀಸ್ ನದಿಯ ರಭಸದ ಪ್ರವಾಹದ ನೀರಿನಂತೆ ಬರುವರು. ಅವರು ನದಿಯ ದಂಡೆಯ ಮೇಲೆ ಏರಿಬರುವ ನೀರಿನಂತಿರುವರು. 8 ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು.
“ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.”
9 ಸಮಸ್ತ ಜನಾಂಗಗಳೇ, ಯುದ್ಧಕ್ಕೆ ಸಿದ್ಧರಾಗಿ!
ನೀವು ಸೋಲುವಿರಿ.
ದೂರದೇಶದವರೇ, ಕೇಳಿರಿ,
ರಣರಂಗಕ್ಕಿಳಿಯಲು ಸಿದ್ಧರಾಗಿ!
ನೀವು ಸೋಲುವಿರಿ.
10 ಯುದ್ಧ ಮಾಡಲು ಯೋಜನೆ ಹಾಕಿರಿ.
ಆದರೆ ನಿಮ್ಮ ಯೋಜನೆಯೆಲ್ಲಾ ನಿಷ್ಫಲವಾಗುವುದು.
ನಿಮ್ಮ ಸೈನ್ಯಕ್ಕೆ ಆಜ್ಞೆಕೊಡಿರಿ.
ಆದರೆ ಅದು ನಿಷ್ಪ್ರಯೋಜಕವಾಗುವುದು.
ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ!
ಯೆಶಾಯನಿಗೆ ಎಚ್ಚರಿಕೆ
11 ಯೆಹೋವನು ತನ್ನ ಮಹಾಶಕ್ತಿಯಿಂದ ನನ್ನೊಡನೆ ಮಾತನಾಡಿದನು. ನಾನು ಇತರರಂತೆ ಇರಬಾರದೆಂದು ಯೆಹೋವನು ನನ್ನನ್ನು ಎಚ್ಚರಿಸಿದನು. ಆತನು ನನಗೆ, 12 “ಪ್ರತಿಯೊಬ್ಬನೂ ‘ಇನ್ನೊಬ್ಬನು ನಿನಗೆ ವಿರುದ್ಧವಾಗಿ ಕೇಡು ಬಗೆಯುತ್ತಾನೆ’ ಎಂದು ಹೇಳುವನು. ಅದನ್ನು ನೀನು ನಂಬಬೇಡ. ಆ ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ.
13 “ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು. ಆತನನ್ನೇ ನೀನು ಗೌರವಿಸಬೇಕು. ನೀನು ಭಯಪಡಬೇಕಾದದ್ದು ಆತನೊಬ್ಬನಿಗೇ. 14 ನೀನು ಯೆಹೋವನನ್ನು ಪರಿಶುದ್ಧನೆಂದು ಪರಿಗಣಿಸಿ ಗೌರವಿಸಿದರೆ, ಆತನು ನಿನಗೆ ಆಶ್ರಯನಾಗುವನು. ಆದರೆ ನೀನು ಆತನನ್ನು ಸನ್ಮಾನಿಸದೆ ಹೋದರೆ ಆತನು ನಿನಗೆ ಮುಗ್ಗರಿಸುವ ಕಲ್ಲಾಗಿ ಪರಿಣಮಿಸುವನು. ಆತನು ಇಸ್ರೇಲಿನ ಎರಡು ಕುಟುಂಬಗಳವರಿಗೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿರುವನು. ಯೆಹೋವನು ಜೆರುಸಲೇಮಿನ ಎಲ್ಲಾ ಜನರನ್ನು ಹಿಡಿಯುವ ಬಲೆಯಾಗಿರುವನು. 15 ಎಷ್ಟೋ ಜನರು ಈ ಬಂಡೆಯಿಂದ ಎಡವಿಬೀಳುವರು. ಅವರು ಬಿದ್ದು ಮುರಿಯಲ್ಪಡುವರು; ಬಲೆಗೆ ಸಿಕ್ಕಿಕೊಳ್ಳುವರು.”
16 ಯೆಹೋವನು, “ಒಡಂಬಡಿಕೆ ಮಾಡಿಕೊಂಡು ಅದಕ್ಕೆ ಮುದ್ರೆಹಾಕು. ಮುಂದಿನ ಪೀಳಿಗೆಗಾಗಿ ನನ್ನ ಬೋಧನೆಯನ್ನು ಜೋಪಾನವಾಗಿರಿಸು. ನನ್ನ ಹಿಂಬಾಲಕರ ಕಣ್ಣೆದುರಿನಲ್ಲೇ ಹೀಗೆ ಮಾಡು” ಎಂದು ಹೇಳಿದನು. 17 ಆ ಒಡಂಬಡಿಕೆಯು ಹೀಗಿತ್ತು:
ನನ್ನ ದೇವರಾದ ಯೆಹೋವನ ಸಹಾಯಕ್ಕಾಗಿ ನಾನು ಕಾಯುತ್ತಿರುವೆನು.
ಯಾಕೋಬನ ಕುಟುಂಬದ ಬಗ್ಗೆ ಯೆಹೋವನು ನಾಚಿಕೊಂಡಿದ್ದಾನೆ.
ಅವರ ಕಡೆ ನೋಡಲು ಆತನು ನಿರಾಕರಿಸುತ್ತಾನೆ.
ಆದರೆ ನಾನು ಯೆಹೋವನನ್ನು ನಿರೀಕ್ಷಿಸುವೆನು.
ಆತನು ನನ್ನನ್ನು ರಕ್ಷಿಸುವನು.
18 “ನಾನೂ ನನ್ನ ಮಕ್ಕಳೂ ಇಸ್ರೇಲ್ ಜನರಿಗೆ ಒಂದು ಗುರುತಾಗಿದ್ದೇವೆ. ಸರ್ವಶಕ್ತನಾದ ಯೆಹೋವನು ನಮ್ಮನ್ನು ಕಳುಹಿಸಿದ್ದಾನೆ. ಆತನು ಚೀಯೋನ್ ಬೆಟ್ಟದಲ್ಲಿ ವಾಸಿಸುತ್ತಾನೆ.”
19 ಕೆಲವರು, “ಏನು ಮಾಡಬೇಕೆಂದು ಕಣಿಹೇಳುವವರನ್ನೂ ಬೇತಾಳಿಕರನ್ನೂ ವಿಚಾರಿಸು” ಎಂದು ಹೇಳುತ್ತಾರೆ. (ಕಣಿಹೇಳುವವರು ತಾವು ಮಂತ್ರಶಕ್ತಿಯುಳ್ಳವರೆಂದು ಜನರಿಗೆ ತೋರಿಸಲು ಪಕ್ಷಿಗಳು ಮಾಡುವ ಶಬ್ದವನ್ನು ಬಾಯಿಂದ ಮಾಡಿ ತಮಗೆ ರಹಸ್ಯಗಳು ಗೊತ್ತಿವೆ ಎಂದು ತೋರಿಸಿಕೊಳ್ಳುತ್ತಾರೆ.) ನಾನು ಹೇಳುವುದೇನೆಂದರೆ, “ಜನರು ಸಹಾಯಕ್ಕಾಗಿ ದೇವರನ್ನೇ ಕೇಳಿಕೊಳ್ಳಬೇಕು. ಆ ಕಣಿಹೇಳುವವರೂ ಬೇತಾಳಿಕರೂ ತಾವು ಏನು ಮಾಡಬೇಕೆಂದು ಸತ್ತವರನ್ನು ವಿಚಾರಿಸುವರು. ಜೀವಿಸುವವರು ಸತ್ತವರನ್ನು ಯಾಕೆ ವಿಚಾರಿಸಬೇಕು?” 20 ನೀವು ಉಪದೇಶಗಳಿಗೂ ಒಡಂಬಡಿಕೆಗೂ ವಿಧೇಯರಾಗಿರಬೇಕು. ನೀವು ಈ ಆಜ್ಞೆಗಳನ್ನು ಅನುಸರಿಸದಿದ್ದರೆ, ತಪ್ಪು ಆಜ್ಞೆಗಳನ್ನು ಹಿಂಬಾಲಿಸುವಿರಿ. ಬೇತಾಳಿಕರಿಂದ, ಕಣಿಹೇಳುವವರಿಂದ ಬರುವ ಆಜ್ಞೆಗಳೇ ತಪ್ಪು ಆಜ್ಞೆಗಳು. ಅವುಗಳಿಗೆ ಯಾವ ಬೆಲೆಯೂ ಇಲ್ಲ. ಅವುಗಳನ್ನು ಅನುಸರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. 21 ನೀವು ಆ ತಪ್ಪಾದ ಆಜ್ಞೆಗಳನ್ನು ಅನುಸರಿಸಿದರೆ ನಿಮ್ಮ ದೇಶದಲ್ಲಿ ಸಂಕಟವೂ ಹಸಿವೆಯೂ ಉಂಟಾಗುತ್ತವೆ. ಜನರು ಹಸಿವಿನಿಂದ ಬಳಲುವರು. ಆಗ ಅವರಲ್ಲಿ ಸಿಟ್ಟು ಉಂಟಾಗಿ ತಮ್ಮ ಅರಸನನ್ನೂ ಅವನ ದೇವರುಗಳನ್ನೂ ಬೈಯುವರು ಮತ್ತು ಸಹಾಯಕ್ಕಾಗಿ ದೇವರಿಗೆ ಮೊರೆಯಿಡುವರು. 22 ತಮ್ಮ ದೇಶದಲ್ಲಿ ಸುತ್ತಲೂ ನೋಡುವಾಗ ಕೇವಲ ಸಂಕಟಗಳೇ ಕುಗ್ಗಿಸುವ ಕಾರ್ಗತ್ತಲೆಗಳೇ ಕಾಣಿಸುವವು. ಆ ದುಃಖವು ಅವರನ್ನು ದೇಶದಿಂದ ತೊಲಗಿಸಿಬಿಡುವುದು. ಕಾರ್ಗತ್ತಲೆಯಲ್ಲಿ ಸಿಕ್ಕಿಬಿದ್ದ ಜನರಿಗೆ ತಮ್ಮನ್ನು ಬಿಡಿಸಿಕೊಳ್ಳಲಾಗುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International