Beginning
19 ಸುಳ್ಳುಹೇಳುವ ಮತ್ತು ಮೋಸಮಾಡುವ ಮೂಢನಾಗಿರುವುದಕ್ಕಿಂತ, ಬಡವನಾಗಿಯೂ ಯಥಾರ್ಥನಾಗಿಯೂ ಇರುವುದು ಲೇಸು.
2 ಯಾವುದೇ ಕಾರ್ಯದಲ್ಲಿ ಉತ್ಸುಕತೆಯೊಂದೇ ಸಾಲದು, ತಿಳುವಳಿಕೆಯೂ ಬೇಕು. ಯಾವುದೇ ಕಾರ್ಯದಲ್ಲಿ ದುಡುಕದಿರಿ; ಇಲ್ಲವಾದರೆ, ತಪ್ಪಾದೀತು!
3 ಮೂಢನ ಮೂಢತನವು ಅವನ ಜೀವನವನ್ನೇ ನಾಶಪಡಿಸುತ್ತದೆ. ಆದರೆ ಅವನು ದೂಷಿಸುವುದು ಯೆಹೋವನನ್ನೇ.
4 ಐಶ್ವರ್ಯವಂತನಿಗೆ ಅನೇಕ ಸ್ನೇಹಿತರಿರುವರು; ಬಡವನಿಗೆ ಇದ್ದ ಸ್ನೇಹಿತರೂ ಬಿಟ್ಟುಹೋಗುವರು.
5 ಮತ್ತೊಬ್ಬನ ಮೇಲೆ ಸುಳ್ಳುಹೇಳುವವನು ದಂಡಿಸಲ್ಪಡುವನು. ಸುಳ್ಳುಸಾಕ್ಷಿಗೆ ಸುರಕ್ಷತೆಯಿಲ್ಲ.
6 ಉದಾರಿಯ ಸ್ನೇಹಿತರಾಗಿರಲು ಅನೇಕರಿಗೆ ಆಸೆ. ದಾನಶೂರನಿಗೆ ಸ್ನೇಹಿತರಾಗಿರಲು ಎಲ್ಲರಿಗೂ ಆಸೆ.
7 ಬಡವನಿಗೆ ಅವನ ಕುಟುಂಬವು ವಿರುದ್ಧವಾಗುವುದು; ಅವನ ಸ್ನೇಹಿತರೆಲ್ಲಾ ಮುಖತಿರುವಿಕೊಂಡು ಅವನಿಗೆ ದೂರವಾಗುವರು. ಆ ಬಡವನು ಸಹಾಯಕ್ಕಾಗಿ ಬೇಡಿಕೊಂಡರೂ ಅವನ ಸಮೀಪಕ್ಕೆ ಯಾರೂ ಹೋಗುವುದಿಲ್ಲ.
8 ತನ್ನನ್ನು ಪ್ರೀತಿಸುವ ಪ್ರತಿಯೊಬ್ಬನು ಜ್ಞಾನಿಯಾಗಲು ಪ್ರಯಾಸಪಡುವನು; ಅಭಿವೃದ್ಧಿಗಾಗಿ ಇಷ್ಟಪಡುವವನು ತಿಳುವಳಿಕೆಯನ್ನು ಹೊಂದಿಕೊಳ್ಳಲು ಪ್ರಯತ್ನಿಸುವನು.
9 ಸುಳ್ಳುಸಾಕ್ಷಿಯು ದಂಡಿಸಲ್ಪಡುವನು; ಸುಳ್ಳುಗಾರನು ನಾಶವಾಗುವನು.
10 ಮೂಢನಿಗೆ ಐಶ್ವರ್ಯವು ಸೂಕ್ತವಲ್ಲ; ರಾಜಕುಮಾರರ ಮೇಲೆ ದೊರೆತನ ಮಾಡುವುದು ಗುಲಾಮನಿಗೆ ಮತ್ತಷ್ಟು ಸೂಕ್ತವಲ್ಲ.
11 ಜ್ಞಾನಿಗೆ ಅವನ ಜ್ಞಾನವೇ ಸನ್ಮಾನವನ್ನು ತರುತ್ತದೆ. ತನಗೆ ತಪ್ಪು ಮಾಡಿದವರನ್ನು ಕ್ಷಮಿಸುವುದು ಅವನ ಸದ್ಗುಣವಾಗಿದೆ.
12 ರಾಜನ ಕೋಪವು ಸಿಂಹ ಘರ್ಜನೆಯಂತಿರುತ್ತದೆ. ರಾಜನಿಗೆ ನಿನ್ನ ಮೇಲಿರುವ ಸಂತೋಷವು ತುಂತುರು ಮಳೆಯಂತಿರುತ್ತದೆ.
13 ಮೂಢನಾದ ಮಗನು ತಂದೆಗೆ ಹಾನಿ; ವಾದಿಸುವ ಹೆಂಡತಿಯು ಸೋರುವ ಮೇಲ್ಛಾವಣಿಯಂತಿದ್ದಾಳೆ.
14 ಮಕ್ಕಳು ತಂದೆಯಿಂದ ಮನೆಗಳನ್ನು ಮತ್ತು ಹಣವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವರು. ವಿವೇಕಿಯಾದ ಹೆಂಡತಿಯಾದರೋ ಯೆಹೋವನಿಂದ ಬಂದ ಉಡುಗೊರೆ.
15 ಸೋಮಾರಿಗೆ ಗಾಢವಾದ ನಿದ್ರೆ. ಮೈಗಳ್ಳನಿಗೆ ಹಸಿವೆ.
16 ಆಜ್ಞೆಗಳಿಗೆ ವಿಧೇಯನಾಗುವವನು ತನ್ನ ಪ್ರಾಣವನ್ನು ಸಂರಕ್ಷಿಸಿಕೊಳ್ಳುವನು. ಆದರೆ ತನ್ನ ನಡತೆಯ ಬಗ್ಗೆ ನಿರ್ಲಕ್ಷ್ಯದಿಂದಿರುವವನು ಸಾವಿಗೀಡಾಗುವನು.
17 ಬಡಜನರಿಗೆ ಉದಾರವಾಗಿ ಕೊಡುವವನು ಯೆಹೋವನಿಗೆ ಸಾಲಕೊಡುತ್ತಾನೆ; ಅವನ ಕರುಣೆಯ ಕಾರ್ಯಕ್ಕೆ ಯೆಹೋವನು ಅವನ ಗೆ ಮರುಪಾವತಿ ಮಾಡುವನು.
18 ನಿನ್ನ ಮಗನು ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬ ನಿರೀಕ್ಷೆ ಇನ್ನೂ ಇರುವಾಗಲೇ ಅವನನ್ನು ಶಿಸ್ತುಗೊಳಿಸು. ಅವನನ್ನು ಶಿಸ್ತುಗೊಳಿಸದಿದ್ದರೆ ಮರಣಕ್ಕೆ ಈಡು ಮಾಡಿದಂತಾಗುವುದು.
19 ಮುಂಗೋಪಿಯು ತನ್ನ ಕೋಪಕ್ಕೆ ದಂಡ ಕೊಡಲೇಬೇಕು. ಕೊಡಬೇಕಾದ ದಂಡದಿಂದ ತಪ್ಪಿಸಿದರೆ, ಅವನು ಅದೇ ಕಾರ್ಯಗಳನ್ನು ಮತ್ತೆ ಮಾಡುವನು.
20 ಉಪದೇಶಕ್ಕೆ ಕಿವಿಗೊಟ್ಟು ಸರಿಪಡಿಸಿಕೊ. ಆಗ ನೀನು ಜ್ಞಾನಿಯಾಗುವೆ.
21 ಜನರು ಅನೇಕ ಆಲೋಚನೆಗಳನ್ನು ಮಾಡಿಕೊಂಡರೂ ಯೆಹೋವನ ಇಚ್ಛೆಯೇ ನೆರವೇರುವುದು.
22 ದುರಾಶೆಯುಳ್ಳವನಿಗೆ ಅವನ ದುರಾಶೆಯೇ ಅವಮಾನಕರ. ಸುಳ್ಳು ಹೇಳುವುದಕ್ಕಿಂತ ಬಡವನಾಗಿರುವುದೇ ಮೇಲು.
23 ಭಯಭಕ್ತಿಯು ಒಳ್ಳೆಯ ಜೀವನಕ್ಕೆ ನಡೆಸುತ್ತದೆ. ಅದು ಅವನಿಗೆ ತೃಪ್ತಿಯನ್ನೂ ಕೊಡುವುದು; ಕೇಡಿನಿಂದಲೂ ತಪ್ಪಿಸಿ ಕಾಪಾಡುವುದು.
24 ಕೆಲವರಿಗೆ ಊಟಮಾಡುವುದಕ್ಕೂ ಸೋಮಾರಿತನ. ಅವರು ಕೈಯನ್ನು ತಟ್ಟೆಗೆ ಹಾಕಿದರೂ ಊಟವನ್ನು ಬಾಯಿಗೆ ಹಾಕಿಕೊಳ್ಳುವುದಿಲ್ಲ.
25 ದುರಾಭಿಮಾನಿಯನ್ನು ದಂಡಿಸಿದರೆ ಅವನು ಪಾಠವನ್ನು ಕಲಿತುಕೊಳ್ಳಬಹುದು. ವಿವೇಕಿಯನ್ನು ತಿದ್ದಿ ಸರಿಪಡಿಸಿದರೆ ಅವನು ಮತ್ತಷ್ಟು ಜ್ಞಾನವನ್ನು ಗಳಿಸಿಕೊಳ್ಳುವನು.
26 ತಂದೆಗೆ ಹೊಡೆಯುವವನೂ ತಾಯಿಯನ್ನು ಓಡಿಸುವವನೂ ತನಗೇ ನಾಚಿಕೆಯನ್ನು ಮತ್ತು ಅವಮಾನವನ್ನು ತಂದುಕೊಳ್ಳುವನು.
27 ನೀನು ಬುದ್ಧಿವಾದವನ್ನು ಕೇಳದಿದ್ದರೆ, ನಿನ್ನ ತಪ್ಪುಗಳಲ್ಲಿಯೇ ಮುಂದುವರಿಯುವೆ.
28 ದುಷ್ಟಸಾಕ್ಷಿಯು ನ್ಯಾಯವನ್ನು ಪರಿಹಾಸ್ಯ ಮಾಡುವನು; ಕೆಡುಕರ ಮಾತುಗಳು ಅನ್ಯಾಯವನ್ನು ಹರಡುತ್ತವೆ.
29 ದುರಾಭಿಮಾನಿಯು ಶಿಕ್ಷೆಗೆ ಗುರಿಯಾಗಿ ದಂಡಿಸಲ್ಪಡುವನು; ಮೂಢನು ತನಗಾಗಿ ಕಾದಿರುವ ದಂಡನೆಯನ್ನು ಅನುಭವಿಸುವನು.
20 ದ್ರಾಕ್ಷಾರಸವು ಪರಿಹಾಸ್ಯಕ್ಕೂ ಮದ್ಯವು ಕೂಗಾಟಕ್ಕೂ ನಡೆಸುತ್ತವೆ. ಅಮಲೇರಿಸಿಕೊಳ್ಳುವುದು ಮೂರ್ಖತನ.
2 ರಾಜನ ಕೋಪವು ಸಿಂಹದ ಘರ್ಜನೆಯಂತಿದೆ. ರಾಜನನ್ನು ಕೋಪಗೊಳಿಸಿದರೆ ಪ್ರಾಣಕ್ಕೆ ಹಾನಿ.
3 ವಾದದಿಂದ ದೂರವಿರುವವನು ಸನ್ಮಾನಕ್ಕೆ ಯೋಗ್ಯನು. ಮೂಢನಾದರೊ ಜಗಳಕ್ಕೇ ಆತುರ ಪಡುವನು.
4 ಸೋಮಾರಿಯು ಬಿತ್ತನೆಕಾಲದಲ್ಲಿ ಬೀಜ ಬಿತ್ತುವುದಿಲ್ಲ; ಸುಗ್ಗಿಕಾಲದಲ್ಲಿ ಅವನಿಗೆ ಬೆಳೆಯೂ ಇರುವುದಿಲ್ಲ.
5 ಬೇರೊಬ್ಬನ ಆಲೋಚನೆಗಳನ್ನು ನೋಡಲು ಸಾಧ್ಯವಿಲ್ಲ; ಅವು ಆಳವಾದ ನೀರಿನಂತಿವೆ; ಆದರೆ ಅವುಗಳನ್ನು ವಿವೇಕಿಯು ಅರ್ಥಮಾಡಿಕೊಳ್ಳಬಲ್ಲನು.
6 ಅನೇಕರು ತಾವು ನಂಬಿಗಸ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ನಂಬಿಗಸ್ತನಾಗಿರುವ ಒಬ್ಬನನ್ನು ಕಂಡುಕೊಳ್ಳುವುದು ಬಹುಕಷ್ಟ.
7 ಸಧರ್ಮಿಯು ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾನೆ; ಅವನ ಮಕ್ಕಳಿಗೆ ಆಶೀರ್ವಾದವಾಗುವುದು.
8 ರಾಜನು ನ್ಯಾಯತೀರ್ಪು ಮಾಡುವಾಗ ತನ್ನ ಕಣ್ಣುಗಳಿಂದ ದುಷ್ಟತನವನ್ನು ಶೋಧಿಸುವನು.
9 ಯಾವನಾದರೂ, “ನನ್ನ ಹೃದಯವನ್ನು ಶುದ್ಧೀಕರಿಸಿರುವೆ. ನಾನು ಪಾಪರಹಿತನಾಗಿರುವೆ” ಎಂದು ಹೇಳಲು ಸಾಧ್ಯವೇ?
10 ಮೋಸದ ತಕ್ಕಡಿಗಳೂ ಮೋಸದ ಅಳತೆಮಾಪಕಗಳೂ ಯೆಹೋವನಿಗೆ ಅಸಹ್ಯ.
11 ಬಾಲಕನೊಬ್ಬನು ಒಳ್ಳೆಯವನೋ ಕೆಟ್ಟವನೋ ಎಂಬುದು ಅವನ ನಡತೆಯಿಂದಲೇ ತೋರಿಬರುವುದು.
12 ನಮಗೆ ನೋಡಲು ಕಣ್ಣುಗಳಿವೆ. ಕೇಳಲು ಕಿವಿಗಳಿವೆ. ಅವುಗಳನ್ನು ನಮಗೋಸ್ಕರ ಉಂಟುಮಾಡಿದವನು ಯೆಹೋವನೇ.
13 ನಿದ್ರಾನಿರತನಾಗಿರಬೇಡ, ಬಡವನಾಗುವೆ. ನಿನ್ನ ಸಮಯವನ್ನು ದುಡಿಯಲು ಉಪಯೋಗಿಸಿಕೊಂಡರೆ ನಿನಗೆ ಊಟಕ್ಕೆ ಬೇಕಾದಷ್ಟಿರುವುದು.
14 ನಿನ್ನ ವಸ್ತುವನ್ನು ಖರೀದಿಮಾಡುವವನು, “ಇದು ಚೆನ್ನಾಗಿಲ್ಲ! ಬೆಲೆಯೂ ಜಾಸ್ತಿ!” ಎಂದು ಹೇಳುವನು. ಬಳಿಕ ತನ್ನ ಚೌಕಾಸಿಯ ಬಗ್ಗೆ ಬೇರೆಯವರ ಮುಂದೆ ಹೊಗಳಿಕೊಳ್ಳುವನು.
15 ಬಂಗಾರಕ್ಕಿಂತಲೂ ಮಾಣಿಕ್ಯದ ಸಮೃದ್ಧಿಗಿಂತಲೂ ಜ್ಞಾನದ ಮಾತುಗಳನ್ನಾಡುವ ತುಟಿಗಳು ಅಮೂಲ್ಯವಾಗಿವೆ.
16 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನು ಕಳೆದುಕೊಳ್ಳುವೆ.
17 ಅನ್ಯಾಯವಾಗಿ ಗಳಿಸಿದ ಆಹಾರವು ಆರಂಭದಲ್ಲಿ ರುಚಿಕರವಾಗಿದ್ದರೂ ಕೊನೆಯಲ್ಲಿ ಬಾಯಿತುಂಬ ಮರಳಿನಂತಿರುವುದು.
18 ಒಳ್ಳೆಯ ಸಮಾಲೋಚನೆಗಳೊಡನೆ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ನೀನು ಯುದ್ಧವನ್ನು ಆರಂಭಿಸುವುದಾಗಿದ್ದರೆ, ಮಾರ್ಗದರ್ಶನಕ್ಕಾಗಿ ಒಳ್ಳೆಯವರನ್ನು ಹುಡುಕು.
19 ಬೇರೆಯವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವವನನ್ನು ನಂಬಬೇಡ; ಅತಿಯಾಗಿ ಮಾತಾಡುವವನ ಸ್ನೇಹಿತನೂ ಆಗಬೇಡ.
20 ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನ ಜೀವಿತವು ಕತ್ತಲೆಯಲ್ಲಿ ಆರಿಹೋದ ದೀಪದಂತೆ ಕೊನೆಗೊಳ್ಳುವುದು.
21 ಸುಲಭವಾಗಿ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಆರ್ಶೀವಾದದಾಯಕವಾಗಿರುವುದಿಲ್ಲ.
22 “ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡುತ್ತೇನೆ” ಎಂದು ಹೇಳಬೇಡ. ಯೆಹೋವನಿಗಾಗಿ ಕಾದುಕೊಂಡಿರು! ಆತನು ನಿನ್ನನ್ನು ಜಯಶಾಲಿಯನ್ನಾಗಿ ಮಾಡುವನು.
23 ಯೆಹೋವನಿಗೆ ಅನ್ಯಾಯದ ಅಳತೆಮಾಪಕವು ಅಸಹ್ಯ; ಮೋಸದ ತಕ್ಕಡಿಗಳು ಅಪರಾಧ.
24 ಭವಿಷ್ಯತ್ತನ್ನು ನಿರ್ಣಯಿಸುವವನು ಯೆಹೋವನೇ ಆಗಿರುವಾಗ, ತನ್ನ ಭವಿಷ್ಯತ್ತನ್ನು ಅರ್ಥಮಾಡಿಕೊಳ್ಳಲು ಯಾರಿಗೆ ಸಾಧ್ಯ?
25 ನೀನು ದೇವರಿಗೆ ಹರಕೆ ಮಾಡುವ ಮೊದಲೇ ಎಚ್ಚರಿಕೆಯಿಂದ ಯೋಚಿಸು. ಹರಕೆ ಮಾಡಿದ ಮೇಲೆ ಹರಕೆ ಮಾಡಬಾರದಾಗಿತ್ತು ಎಂದು ಹೇಳಬೇಡ.
26 ಜ್ಞಾನಿಯಾದ ರಾಜನಿಗೆ ಕೆಡುಕರು ಯಾರೆಂಬುದು ಗೊತ್ತಾಗುವುದು; ಅವನು ಅವರನ್ನು ದಂಡಿಸುವನು.
27 ಮನುಷ್ಯನ ಆತ್ಮ ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
28 ರಾಜನು ನಂಬಿಗಸ್ತನಾಗಿಯೂ ಪ್ರೀತಿಯುಳ್ಳವನಾಗಿಯೂ ಇದ್ದರೆ, ಅವನ ಅಧಿಕಾರ ಉಳಿದುಕೊಳ್ಳುವುದು; ಅವನ ಆಡಳಿತ ಮುಂದುವರಿಯುವುದು.
29 ಯುವಕನ ಶಕ್ತಿ ಪ್ರಶಂಸೆಗೆ ಯೋಗ್ಯ. ವೃದ್ಧನ ನರೆಕೂದಲು ಗೌರವಕ್ಕೆ ಪಾತ್ರ.
30 ದಂಡನೆಯು ತಪ್ಪನ್ನು ನಿಲ್ಲಿಸುತ್ತದೆ; ನೋವು ವ್ಯಕ್ತಿಯನ್ನು ಬದಲಾಯಿಸುತ್ತದೆ.
21 ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.
2 ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.
3 ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
4 ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.
5 ಕಷ್ಟಪಟ್ಟು ದುಡಿಯುವವನ ಆಲೋಚನೆಗಳು ಲಾಭಕ್ಕೆ ನಡೆಸುತ್ತವೆ. ಆದರೆ ಆತುರತೆಯಲ್ಲೇ ಇರುವವನು ಬಡವನಾಗುವನು.
6 ನೀನು ಮೋಸದಿಂದ ಐಶ್ವರ್ಯವಂತನಾದರೆ, ಆ ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.
7 ಕೆಡುಕರು ಕೊಡುವ ಹಿಂಸೆಯು ಅವರನ್ನೇ ನಾಶಮಾಡುತ್ತದೆ; ಯಾಕೆಂದರೆ ಒಳ್ಳೆಯದನ್ನು ಮಾಡಲು ಅವರು ಒಪ್ಪುವುದೇ ಇಲ್ಲ.
8 ಕೆಟ್ಟವರು ಬೇರೆಯವರನ್ನು ಮೋಸಗೊಳಿಸುವುದಕ್ಕೇ ಪ್ರಯತ್ನಿಸುವರು. ಒಳ್ಳೆಯವರಾದರೋ ಯಥಾರ್ಥವಂತರೂ ನ್ಯಾಯವಂತರೂ ಆಗಿದ್ದಾರೆ.
9 ಮನೆಯೊಳಗೆ ವಾದಿಸುವ ಹೆಂಡತಿಯ ಜೊತೆಯಲ್ಲಿ ವಾಸಿಸುವುದಕ್ಕಿಂತ ಮನೆಯ ಮೇಲ್ಛಾವಣಿಗೆಯ ಮೂಲೆಯಲ್ಲಿ ವಾಸಿಸುವುದೇ ಮೇಲು.
10 ಕೆಡುಕರು ಕೇಡುಮಾಡುವುದಕ್ಕೇ ಇಷ್ಟಪಡುವರು; ಅವರು ತಮ್ಮ ಸುತ್ತಮುತ್ತಲಿರುವ ಜನರಿಗೆ ಕರುಣೆ ತೋರುವುದಿಲ್ಲ.
11 ದುರಾಭಿಮಾನಿಯು ದಂಡಿಸಲ್ಪಟ್ಟರೆ ದಡ್ಡನು ಜ್ಞಾನಿಯಾಗುವನು. ಜ್ಞಾನಿಗೆ ಉಪದೇಶಿಸಿದರೆ ತಾನೇ ತಿಳುವಳಿಕೆಯನ್ನು ಹೊಂದವನು.
12 ದೇವರು ನೀತಿಸ್ವರೂಪನು. ಆತನು ದುಷ್ಟರ ದುಷ್ಕೃತ್ಯಗಳನ್ನು ಬಲ್ಲವನಾಗಿದ್ದು ಅವರನ್ನು ದಂಡಿಸುವನು.
13 ಬಡವರಿಗೆ ಸಹಾಯಮಾಡದವನು ತಾನೇ ಕೊರತೆಯಲ್ಲಿರುವಾಗ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ.
14 ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು.
15 ನ್ಯಾಯವಾದ ತೀರ್ಪು ಒಳ್ಳೆಯವರಿಗೆ ಸಂತೋಷ; ಕೆಡುಕರಿಗೆ ಬಹುಭಯ.
16 ಜ್ಞಾನದ ಮಾರ್ಗವನ್ನು ತೊರೆದವನು ನಾಶನದ ಕಡೆಗೆ ಹೋಗುತ್ತಿರುವನು.
17 ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.
18 ಒಳ್ಳೆಯವರ ಬದಲಾಗಿ ಕೆಡುಕರು ಸಂಕಟಪಡುವರು. ನೀತಿವಂತರ ಬದಲಾಗಿ ದ್ರೋಹಿಗಳು ಸಂಕಟಪಡುವರು.
19 ಮುಂಗೋಪಿಯೂ ವಾದಿಸುವವಳೂ ಆಗಿರುವ ಹೆಂಡತಿಯೊಡನೆ ಜೀವಿಸುವುದಕ್ಕಿಂತ ಮರಳುಗಾಡಿನಲ್ಲಿ ಜೀವಿಸುವುದೇ ಮೇಲು.
20 ಜ್ಞಾನಿಯ ಮನೆಯಲ್ಲಿ ಬೆಲೆಬಾಳುವ ಭಂಡಾರಗಳೂ ಪರಿಮಳದ್ರವ್ಯಗಳೂ ಇರುತ್ತವೆ. ಮೂಢನಾದರೋ ತನ್ನಲ್ಲಿರುವ ಪ್ರತಿಯೊಂದನ್ನೂ ಬೇಗನೆ ಹಾಳುಮಾಡಿಕೊಳ್ಳುವನು.
21 ನ್ಯಾಯವನ್ನು ಮತ್ತು ಕರುಣೆಯನ್ನು ಹುಡುಕುವವನಿಗೆ ಒಳ್ಳೆಯ ಜೀವಿತವೂ ನ್ಯಾಯವೂ ಸನ್ಮಾನವೂ ದೊರೆಯುವುದು.
22 ಜ್ಞಾನಿಯು ಯುದ್ಧವೀರರಿಂದ ತುಂಬಿರುವ ಪಟ್ಟಣದ ಮೇಲೆ ಆಕ್ರಮಣಮಾಡಿ ಅವರ ಆಶ್ರಯಕೋಟೆಯನ್ನು ನಾಶಮಾಡಬಲ್ಲನು.
23 ಎಚ್ಚರಿಕೆಯಿಂದ ಮಾತಾಡುವವನು ತೊಂದರೆಯಿಂದ ಪಾರಾಗುವನು.
24 ಗರ್ವಿಷ್ಠನೂ ದುರಾಭಿಮಾನಿಯೂ ಆಗಿರುವವನಿಗೆ ಗೇಲಿಗಾರನೆಂದು ಹೆಸರು. ಅವನ ನಡತೆಯು ಗರ್ವದ ಮದದಿಂದ ಕೂಡಿರುತ್ತದೆ.
25 ಸೋಮಾರಿಯ ಆಸೆ ಅವನನ್ನು ಉಪವಾಸದಿಂದ ಸಾಯಿಸುವುದು, ಯಾಕೆಂದರೆ ಅವನು ದುಡಿಯುವುದಿಲ್ಲ.
26 ದುರಾಶೆಯುಳ್ಳವನು ಹೆಚ್ಚುಹೆಚ್ಚು ಅಪೇಕ್ಷಿಸುತ್ತಲೇ ಇರುವನು, ಆದರೆ ನೀತಿವಂತನು ಉದಾರವಾಗಿ ಕೊಡುವನು.
27 ಕೆಡುಕನ ಯಜ್ಞಗಳು ಯೆಹೋವನಿಗೆ ಅಸಹ್ಯ. ಯಾಕೆಂದರೆ ಅವು ದುರುದ್ದೇಶದಿಂದ ಕೂಡಿವೆ.
28 ಸುಳ್ಳುಸಾಕ್ಷಿಯು ನಾಶವಾಗುವನು. ಆದರೆ ಎಚ್ಚರಿಕೆಯಿಂದ ಕೇಳುವವನು ಮಾತಾಡುತ್ತಲೇ ಇರುವನು.
29 ದುಷ್ಟರು ನಾಚಿಕೆಯಿಲ್ಲದೆ ವರ್ತಿಸುವರು; ಆದರೆ ಒಳ್ಳೆಯವನು ತನ್ನ ಮಾರ್ಗಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.
30 ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.
31 ಯುದ್ಧಕ್ಕಾಗಿ ಕುದುರೆಗಳನ್ನು ಸಿದ್ಧಪಡಿಸುತ್ತಾರೆ; ಆದರೆ ಜಯದ ನಿರ್ಧಾರ ಯೆಹೋವನಿಂದಲೇ.
Kannada Holy Bible: Easy-to-Read Version. All rights reserved. © 1997 Bible League International