Beginning
ಮುನ್ನುಡಿ
1 ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಸೊಲೊಮೋನನು ಇಸ್ರೇಲರ ರಾಜನಾಗಿದ್ದನು. 2 ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೂ ಬುದ್ಧಿವಾದವನ್ನು ಗ್ರಹಿಸಿಕೊಳ್ಳುವುದಕ್ಕೂ ಈ ಜ್ಞಾನೋಕ್ತಿಗಳು ಸಹಾಯಕವಾಗಿವೆ. 3 ಈ ಜ್ಞಾನೋಕ್ತಿಗಳು ಯೋಗ್ಯವಾರ್ಗದಲ್ಲಿ ಜೀವಿಸಲು ಅಂದರೆ ಯಥಾರ್ಥವಾಗಿಯೂ ನ್ಯಾಯವಾಗಿಯೂ ಮತ್ತು ಒಳ್ಳೆಯವರಾಗಿಯೂ ಇರಲು ಉಪದೇಶಿಸುತ್ತವೆ. 4 ಈ ಜ್ಞಾನೋಕ್ತಿಗಳು ಸಾಮಾನ್ಯರಿಗೆ ಜಾಣತನವನ್ನು ಯೌವನಸ್ಥರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುತ್ತವೆ. 5 ಈ ಜ್ಞಾನೋಕ್ತಿಗಳಿಗೆ ಕಿವಿಗೊಡುವುದರ ಮೂಲಕ ಜ್ಞಾನಿಗಳು ತಮ್ಮ ಪಾಂಡಿತ್ಯವನ್ನೂ ವಿವೇಕಿಗಳು ತಮ್ಮ ಉಚಿತಾಲೋಚನೆಗಳನ್ನೂ ಹೆಚ್ಚಿಸಿಕೊಳ್ಳಲಿ. 6 ಆಗ ಅವರು ಗಾದೆಗಳನ್ನು, ಸಾಮತಿಗಳನ್ನು, ಜ್ಞಾನದ ನುಡಿಗಳನ್ನು ಮತ್ತು ಒಗಟುಗಳನ್ನು ಅರ್ಥಮಾಡಿಕೊಳ್ಳುವರು.
7 ಯೆಹೋವನಲ್ಲಿಟ್ಟಿರುವ ಭಯಭಕ್ತಿಯೇ ಜ್ಞಾನದ ಮೂಲ. ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ದ್ವೇಷಿಸುವರು.
ಸೊಲೊಮೋನನು ತನ್ನ ಮಗನಿಗೆ ಮಾಡಿದ ಉಪದೇಶ
8 ನನ್ನ ಮಗನೇ, ನಿನ್ನ ತಂದೆಯ ಬುದ್ಧಿಮಾತಿಗೆ ಕಿವಿಗೊಡು; ನಿನ್ನ ತಾಯಿಯ ಉಪದೇಶವನ್ನು ಅಲಕ್ಷಿಸಬೇಡ. 9 ನಿನ್ನ ತಂದೆತಾಯಿಗಳ ಮಾತುಗಳು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟದಂತೆಯೂ ನಿನ್ನ ಕೊರಳಿಗೆ ಸುಂದರವಾದ ಹಾರದಂತೆಯೂ ಇವೆ.
10 ನನ್ನ ಮಗನೇ, ಪಾಪ ಮಾಡಬಯಸುವವರು ನಿನಗೆ ದುಷ್ಪ್ರೇರಣೆ ಮಾಡಿದರೆ ಅವರನ್ನು ಹಿಂಬಾಲಿಸಕೂಡದು. 11 ನಿನಗೆ, “ನಮ್ಮ ಜೊತೆ ಬಾ! ನಾವು ಅಲ್ಲಿ ಅವಿತುಕೊಂಡಿದ್ದು ಯಾರನ್ನಾದರೂ ಕೊಲೆಮಾಡೋಣ; ಕೆಲವು ನಿರಪರಾಧಿಗಳ ಮೇಲೆ ನಿಷ್ಕಾರಣವಾಗಿ ಆಕ್ರಮಣ ಮಾಡಿ 12 ಅವರನ್ನು ಜೀವಂತವಾಗಿ ನುಂಗೋಣ; ಪಾತಾಳವು ನುಂಗುವಂತೆ ಸಂಪೂರ್ಣವಾಗಿ ನುಂಗಿಬಿಡೋಣ. 13 ಬೆಲೆಬಾಳುವ ಎಲ್ಲಾ ಬಗೆಯ ವಸ್ತುಗಳನ್ನು ಕದ್ದು ನಮ್ಮ ಮನೆಗಳಲ್ಲಿ ತುಂಬಿಸಿಕೊಳ್ಳೋಣ. 14 ಅವುಗಳಲ್ಲಿ ನಿನಗೆ ಸಮಪಾಲು ದೊರೆಯುವುದು, ಬಂದು ನಮ್ಮೊಂದಿಗೆ ಸೇರಿಕೊ” ಎಂದು ಆ ಪಾಪಿಗಳು ಹೇಳಬಹುದು.
15 ನನ್ನ ಮಗನೇ, ಅವರ ಜೀವಿತವನ್ನು ಅನುಸರಿಸಬೇಡ. ಅವರ ಜೀವಿತಮಾರ್ಗದಲ್ಲಿ ಮೊದಲನೆ ಹೆಜ್ಜೆಯನ್ನೂ ಇಡಬೇಡ. 16 ಅವರು ಕೇಡುಮಾಡುವುದಕ್ಕೆ ಯಾವಾಗಲೂ ಸಿದ್ಧರಾಗಿದ್ದಾರೆ. ಜನರನ್ನು ಕೊಲ್ಲುವುದಕ್ಕೆ ಯಾವಾಗಲೂ ಆತುರಪಡುತ್ತಾರೆ.
17 ಪಕ್ಷಿಗಳ ಕಣ್ಣೆದುರಿನಲ್ಲಿ ಬಲೆಹಾಕುವುದರಿಂದ ಪ್ರಯೋಜನವೇನೂ ಇಲ್ಲ. 18 ಅವರಾದರೋ ಬೇರೊಬ್ಬನನ್ನು ಕೊಲ್ಲಲು ಅವಿತುಕೊಂಡು ಕಾಯುತ್ತಾರೆ; ಆದರೆ ಅವರು ತಮ್ಮ ಸಂಚಿನಿಂದ ತಮ್ಮನ್ನೇ ನಾಶಪಡಿಸಿಕೊಳ್ಳುತ್ತಾರೆ. 19 ದುರಾಶೆಯುಳ್ಳವರು ತಾವು ದೋಚಿಕೊಳ್ಳುವ ವಸ್ತುಗಳಿಂದಲೇ ನಾಶವಾಗುವರು.
ಜ್ಞಾನವೆಂಬಾಕೆ
20 ಜ್ಞಾನವು ಬೀದಿಗಳಲ್ಲಿ ಕೂಗುವ ಸ್ತ್ರೀಯಂತಿದೆ. ಆಕೆಯು ಬಹಿರಂಗ ಸ್ಥಳಗಳಲ್ಲಿ ಕೂಗಿ ಕರೆಯುತ್ತಾಳೆ. 21 ಆಕೆಯು ಜನಸಂದಣಿಯ ರಸ್ತೆಚೌಕಗಳಲ್ಲಿ ಕರೆಯುತ್ತಾಳೆ. ಪಟ್ಟಣದ ಬಾಗಿಲುಗಳ ಬಳಿಯಲ್ಲಿ ಆಕೆಯು ಜನರೊಂದಿಗೆ ಮಾತಾಡುತ್ತಾಳೆ:
22 “ನೀವು ಮೂಢಜನರು. ಇನ್ನೆಷ್ಟುಕಾಲ ನೀವು ನಿಮ್ಮ ಮೂಢತನದಲ್ಲಿ ಆನಂದಿಸುವಿರಿ? ಇನ್ನೆಷ್ಟುಕಾಲ ನೀವು ವಿವೇಕವನ್ನು ಹಾಸ್ಯಮಾಡಬೇಕೆಂದಿದ್ದೀರಿ? ಇನ್ನೆಷ್ಟುಕಾಲ ನೀವು ಜ್ಞಾನವನ್ನು ದ್ವೇಷ ಮಾಡಬೇಕೆಂದಿದ್ದೀರಿ? 23 ನೀವು ನನ್ನ ಗದರಿಕೆಗೆ ಕಿವಿಗೊಟ್ಟರೆ, ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ತಿಳಿಸುವೆನು; ನನ್ನ ಆಲೋಚನೆಗಳನ್ನು ನಿಮಗೆ ಗೊತ್ತುಪಡಿಸುವೆನು.
24 “ಆದರೆ ನೀವು ನನಗೆ ಗಮನಕೊಡಲಿಲ್ಲ. ನಾನು ಸಹಾಯಮಾಡಲು ಪ್ರಯತ್ನಿಸಿದೆ. ನಾನು ಕೈಚಾಚಿದೆ; ಆದರೆ ನೀವು ನನ್ನ ಸಹಾಯವನ್ನು ತೆಗೆದುಕೊಳ್ಳದೆ ತಿರಸ್ಕರಿಸಿದಿರಿ. 25 ನೀವು ನನಗೆ ಮುಖ ತಿರುವಿಕೊಂಡಿರಿ; ನನ್ನ ಸಲಹೆಗಳನ್ನೆಲ್ಲ ಕಡೆಗಣಿಸಿದಿರಿ; ನನ್ನ ತಿದ್ದುಪಾಟನ್ನು ತಿರಸ್ಕರಿಸಿದಿರಿ. 26 ಆದ್ದರಿಂದ ನಿಮ್ಮ ಕಷ್ಟದಲ್ಲಿ ನಾನು ನಗುವೆನು; ಅಪಾಯವು ನಿಮಗೆ ಬಡಿಯುವಾಗ ನಿಮ್ಮನ್ನು ಗೇಲಿ ಮಾಡುವೆನು. 27 ಮಹಾ ಸಂಕಷ್ಟವು ಕೆಟ್ಟ ಬಿರುಗಾಳಿಯಂತೆ ನಿಮಗೆ ಬರುವುದು. ತೊಂದರೆಗಳು ಬಲವಾದ ಗಾಳಿಯಂತೆ ನಿಮಗೆ ಬಡಿಯುವುದು. ನಿಮ್ಮ ಕಷ್ಟಗಳು ಮತ್ತು ದುಃಖಗಳು ನಿಮ್ಮ ಮೇಲೆ ಬಹು ಭಾರವಾಗಿರುತ್ತವೆ.
28 “ಇವೆಲ್ಲಾ ನಿಮಗೆ ಸಂಭವಿಸುವಾಗ ನೀವು ಸಹಾಯಕ್ಕಾಗಿ ನನ್ನನ್ನು ಕೇಳುವಿರಿ; ಆದರೆ ನಾನು ನಿಮಗೆ ಸಹಾಯ ಮಾಡುವುದಿಲ್ಲ. ನೀವು ನನಗಾಗಿ ಹುಡುಕುವಿರಿ. ಆದರೆ ನಾನು ನಿಮಗೆ ಸಿಕ್ಕುವುದಿಲ್ಲ. 29 ನಾನು ನಿಮಗೆ ಸಹಾಯ ಮಾಡುವುದಿಲ್ಲ; ಏಕೆಂದರೆ ನೀವೆಂದೂ ನನ್ನ ಜ್ಞಾನವನ್ನು ಬಯಸಲಿಲ್ಲ. ನೀವು ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿರ್ಧರಿಸಲಿಲ್ಲ. 30 ನೀವು ನನ್ನ ಗದರಿಕೆಯ ಮಾತುಗಳನ್ನು ತಿರಸ್ಕರಿಸಿದಿರಿ. ನಾನು ನಿಮಗೆ ಸರಿಯಾದ ದಾರಿಯನ್ನು ತೋರಿಸಿದಾಗ ನೀವು ನನಗೆ ಕಿವಿಗೊಡಲಿಲ್ಲ. 31 ಆದ್ದರಿಂದ ನೀವು ನಿಮ್ಮ ದುರ್ನಡತೆಯ ಫಲಗಳನ್ನು ಅನುಭವಿಸುವಿರಿ. ನೀವು ಬೇರೆಯವರಿಗೆ ಮಾಡಿದ ಕುಯುಕ್ತಿಗಳನ್ನೇ ಹೊಂದುವಿರಿ.
32 “ಮೂಢರು ಜ್ಞಾನವನ್ನು ತಿರಸ್ಕರಿಸುವುದರಿಂದ ಸಾವಿಗೀಡಾಗುವರು; ಅವರ ಉದಾಸೀನತೆಯೇ ಅವರನ್ನು ನಾಶಪಡಿಸುವುದು. 33 ಆದರೆ ನನಗೆ ವಿಧೇಯನಾಗುವವನು ಕ್ಷೇಮವಾಗಿಯೂ ಸುಖವಾಗಿಯೂ ಬದುಕುವನು. ಅವನು ಅಪಾಯಕ್ಕೆ ಭಯಪಡುವ ಅವಶ್ಯವಿಲ್ಲ.”
ಜ್ಞಾನದ ಮೌಲ್ಯ
2 ನನ್ನ ಮಗನೇ, ನಾನು ಹೇಳುವ ಈ ಮಾತುಗಳನ್ನು ಸ್ವೀಕಾರಮಾಡಿಕೊ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೊ. 2 ಜ್ಞಾನಕ್ಕೆ ಕಿವಿಗೊಡು; ಅದನ್ನು ಅರ್ಥಮಾಡಿಕೊಳ್ಳಲು ನಿನ್ನಿಂದಾದಷ್ಟು ಪ್ರಯತ್ನಿಸು. 3 ಬುದ್ಧಿಗಾಗಿ ಮೊರೆಯಿಡು! ವಿವೇಕಕ್ಕಾಗಿ ಕೂಗಿಕೊ! 4 ಬೆಳ್ಳಿಯನ್ನು ಹುಡುಕುವಂತೆ ವಿವೇಕವನ್ನು ಹುಡುಕು. ಅಡಗಿರುವ ಭಂಡಾರದಂತೆ ಅದನ್ನು ಹುಡುಕು. 5 ಆಗ ನೀನು ಯೆಹೋವನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವೆ; ದೈವಜ್ಞಾನವನ್ನು ಹೊಂದಿಕೊಳ್ಳುವೆ.
6 ಜ್ಞಾನವನ್ನು ಕೊಡುವಾತನು ಯೆಹೋವನೇ. ವಿವೇಕ ಮತ್ತು ತಿಳುವಳಿಕೆ ಆತನ ಬಾಯಿಂದ ಬರುತ್ತವೆ. 7 ಆತನು ನೀತಿವಂತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು; ನಿರ್ದೋಷಿಗಳಿಗೆ ಗುರಾಣಿಯಂತಿರುವನು. 8 ಆತನು ನ್ಯಾಯವಂತರನ್ನು ಕಾಪಾಡುತ್ತಾನೆ; ತನ್ನ ಪವಿತ್ರ ಜನರಿಗೆ ಕಾವಲಾಗಿರುತ್ತಾನೆ.
9 ಆಗ ನೀನು ಒಳ್ಳೆಯದನ್ನೂ ನ್ಯಾಯನೀತಿಗಳನ್ನೂ ಸನ್ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವೆ. 10 ಆಗ ಜ್ಞಾನವು ನಿನ್ನ ಹೃದಯದ ಒಳಗೆ ಬರುವುದು; ನಿನ್ನ ಆತ್ಮವು ತಿಳುವಳಿಕೆಯೊಡನೆ ಸಂತೋಷವಾಗಿರುವುದು.
11 ವಿವೇಕವು ನಿನ್ನನ್ನು ಕಾಪಾಡುವುದು; ಬುದ್ಧಿಯು ನಿನಗೆ ಕಾವಲಾಗಿರುವುದು; 12 ಹೀಗೆ ನೀನು ದುರ್ಮಾರ್ಗಗಳಿಂದಲೂ ಸುಳ್ಳುಗಾರರಿಂದಲೂ ತಪ್ಪಿಸಿಕೊಳ್ಳುವೆ. 13 ಅವರಾದರೋ ನೀತಿಮಾರ್ಗವನ್ನು ಬಿಟ್ಟು ಪಾಪವೆಂಬ ಕತ್ತಲೆಯಲ್ಲಿ ಜೀವಿಸುತ್ತಿದ್ದಾರೆ. 14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ. 15 ಅವರ ಮಾರ್ಗಗಳು ವಕ್ರವಾಗಿವೆ; ಅವರ ನಡತೆಗಳು ದುರ್ನಡತೆಗಳಾಗಿವೆ.
16 ವ್ಯಭಿಚಾರಿಣಿಯು ನಿನ್ನೊಡನೆ ಸವಿಮಾತುಗಳನ್ನಾಡಿ ತನ್ನೊಡನೆ ಪಾಪ ಮಾಡುವಂತೆ ನಿನ್ನನ್ನು ಒತ್ತಾಯಿಸಬಹುದು. 17 ಯೌವನಪ್ರಾಯದಲ್ಲಿ ಮದುವೆಮಾಡಿಕೊಂಡ ಅವಳು ತನ್ನ ಗಂಡನನ್ನು ಬಿಟ್ಟುಬಿಟ್ಟಿದ್ದಾಳೆ; ಮದುವೆಯಲ್ಲಿ ದೇವರ ಮುಂದೆ ಮಾಡಿದ ವಾಗ್ದಾನಗಳನ್ನು ಮೀರಿದ್ದಾಳೆ. 18 ನೀನು ಅವಳ ಮನೆಯೊಳಗೆ ಹೋದರೆ, ನಾಶನದ ಕಡೆಗೆ ಮೊದಲನೆ ಹೆಜ್ಜೆ ಹಾಕುತ್ತಿರುವೆ. ನೀವು ಅವಳನ್ನು ಹಿಂಬಾಲಿಸಿದರೆ, ಅವಳು ನಿನ್ನನ್ನು ಸಮಾಧಿಗೆ ನಡೆಸುವಳು. 19 ಅವಳು ಸಮಾಧಿಯಂತೆ ಇದ್ದಾಳೆ. ಅವಳ ಬಳಿಗೆ ಹೋಗುವವನು ಎಂದಿಗೂ ಹಿಂತಿರುಗಿ ಬರುವುದಿಲ್ಲ; ಅವನ ಜೀವನವು ಮೊದಲಿನಂತಿರುವುದಿಲ್ಲ.
20 ಆದ್ದರಿಂದ ನೀನು ಒಳ್ಳೆಯವರ ಮಾದರಿಯನ್ನು ಅನುಸರಿಸಬೇಕು. ನೀತಿವಂತರ ಮಾರ್ಗದಲ್ಲಿ ಜೀವಿಸಬೇಕು. 21 ಯಥಾರ್ಥವಂತರು ಸ್ವದೇಶದಲ್ಲಿ ವಾಸಿಸುವರು. ನಿರ್ದೋಷಿಗಳು ಸ್ವದೇಶದಲ್ಲಿ ನೆಲೆಸುವರು. 22 ದುಷ್ಟರಾದರೋ ಸ್ವದೇಶದಿಂದ ತೆಗೆದುಹಾಕಲ್ಪಡುವರು; ದ್ರೋಹಿಗಳು ನಿರ್ಮೂಲವಾಗುವರು.
ಜ್ಞಾನದ ಆಶೀರ್ವಾದಗಳು
3 ನನ್ನ ಮಗನೇ, ನನ್ನ ಉಪದೇಶವನ್ನು ಮರೆಯಬೇಡ. ನನ್ನ ಆಜ್ಞೆಗಳನ್ನು ಜ್ಞಾಪಕದಲ್ಲಿಟ್ಟುಕೊ. 2 ಅವು ನಿನಗೆ ದೀರ್ಘಾಯುಷ್ಯವನ್ನು ನೀಡಿ ಸಂತೋಷ ಸಮಾಧಾನಗಳಿಂದ ಕೂಡಿದ ಜೀವಿತವನ್ನು ಕೊಡುತ್ತವೆ.
3 ಪ್ರೀತಿಯೂ ನಂಬಿಗಸ್ತಿಕೆಯೂ ನಿನ್ನನ್ನು ಬಿಟ್ಟು ಹೋಗದಿರಲಿ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ. 4 ಆಗ ನೀನು ದೇವರಿಂದಲೂ ಮನುಷ್ಯರಿಂದಲೂ ಮೆಚ್ಚಿಕೆಯನ್ನು ಮತ್ತು ಒಳ್ಳೆಯ ಹೆಸರನ್ನು ಸಂಪಾದಿಸಿಕೊಳ್ಳುವೆ.
5 ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆ ಇಡು. ನಿನ್ನ ಸ್ವಂತ ಜ್ಞಾನವನ್ನು ಅವಲಂಬಿಸಬೇಡ. 6 ನಿನ್ನ ಎಲ್ಲಾ ಕಾರ್ಯಗಳಲ್ಲಿ ಆತನನ್ನು ಜ್ಞಾಪಿಸಿಕೊ. ಆಗ ಆತನು ನಿನಗೆ ಸಹಾಯ ಮಾಡುವನು. 7 ನಿನ್ನನ್ನು ಜ್ಞಾನಿಯೆಂದು ಪರಿಗಣಿಸಿಕೊಳ್ಳದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದರಿಂದ ದೂರವಾಗಿರು. 8 ನೀನು ಹೀಗೆ ಮಾಡುವುದಾದರೆ, ಅದು ನಿನ್ನ ದೇಹಕ್ಕೆ ಒಳ್ಳೆಯ ಆರೋಗ್ಯವನ್ನೂ ನಿನ್ನ ಎಲುಬುಗಳಿಗೆ ಹೊಸ ಶಕ್ತಿಯನ್ನೂ ಕೊಡುವುದು.
9 ನಿನಗೆ ಬರುವ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು. 10 ಆಗ ನಿನ್ನ ಕಣಜಗಳು ದವಸಧಾನ್ಯಗಳಿಂದ ತುಂಬಿರುತ್ತವೆ. ನಿನ್ನ ದ್ರಾಕ್ಷಾರಸದ ತೊಟ್ಟಿಗಳು ತುಂಬಿತುಳುಕುತ್ತವೆ.
11 ನನ್ನ ಮಗನೇ, ಯೆಹೋವನು ನಿನ್ನನ್ನು ಶಿಕ್ಷಿಸುವಾಗ ಕೋಪಗೊಳ್ಳಬೇಡ. ಆತನು ಗದರಿಸುವಾಗ ಬೇಸರಪಡಬೇಡ. 12 ತಂದೆಯು ತನ್ನ ಮಗನನ್ನು ಗದರಿಸುವಂತೆಯೇ ಯೆಹೋವನು ತಾನು ಪ್ರೀತಿಸುವವರನ್ನು ಶಿಕ್ಷಿಸುತ್ತಾನೆ.
13 ಜ್ಞಾನವನ್ನು ಕಂಡುಕೊಂಡು ವಿವೇಕವನ್ನು ಸಂಪಾದಿಸಿಕೊಳ್ಳುವವನೇ ಭಾಗ್ಯವಂತನು. 14 ಜ್ಞಾನವು ಬೆಳ್ಳಿಗಿಂತಲೂ ಲಾಭದಾಯಕ. ಅದರ ಆದಾಯವು ಬಂಗಾರಕ್ಕಿಂತಲೂ ಅಧಿಕ. 15 ಜ್ಞಾನವು ರತ್ನಕ್ಕಿಂತಲೂ ಅಮೂಲ್ಯವಾದದ್ದು. ನಿನ್ನ ಇಷ್ಟ ವಸ್ತುಗಳಲ್ಲಿ ಯಾವುದೂ ಅದಕ್ಕೆ ಸಮವಿಲ್ಲ.
16 ಜ್ಞಾನವೆಂಬಾಕೆಯ ಬಲಗೈಯಿಂದ ದೀರ್ಘಾಯುಷ್ಯವೂ ಎಡಗೈಯಿಂದ ಐಶ್ವರ್ಯವೂ ಘನತೆಯೂ ಬರುವವು. 17 ಜ್ಞಾನವು ನಿನ್ನ ಜೀವನವನ್ನು ಸುಖಕರವನ್ನಾಗಿ ಮಾಡುತ್ತದೆ; ಸಮಾಧಾನವನ್ನು ಬರಮಾಡುತ್ತದೆ. 18 ಜ್ಞಾನವು ತನ್ನನ್ನು ಅವಲಂಬಿಸಿಕೊಳ್ಳುವವರಿಗೆ ಜೀವದಾಯಕ ಮರದಂತಿದೆ. ಅದನ್ನು ಹೊಂದಿರುವವರು ಧನ್ಯರಾಗಿದ್ದಾರೆ.
19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸೃಷ್ಟಿಸಿದನು. ಆತನು ವಿವೇಕದ ಮೂಲಕ ಆಕಾಶವನ್ನು ಸೃಷ್ಟಿಸಿದನು. 20 ಯೆಹೋವನು ತನ್ನ ತಿಳುವಳಿಕೆಯಿಂದ ಸಮುದ್ರಗಳನ್ನು ವಿಭಜಿಸಿದನು. ಮೋಡವು ಮಳೆಸುರಿಸುವುದಕ್ಕೆ ಆತನ ತಿಳುವಳಿಕೆಯೇ ಕಾರಣ.
21 ನನ್ನ ಮಗನೇ, ಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ. ನಿನ್ನ ದೃಷ್ಟಿಯು ಅವುಗಳ ಮೇಲೇ ಇರಲಿ. 22 ಜ್ಞಾನವಿವೇಕಗಳು ನಿನಗೆ ಜೀವವನ್ನೂ ನಿನ್ನ ಜೀವಿತಕ್ಕೆ ಸೌಂದರ್ಯವನ್ನೂ ನೀಡುತ್ತವೆ. 23 ಆಗ ನೀನು ಎಡವಿಬೀಳದೆ ಸುರಕ್ಷಿತವಾಗಿ ನಡೆಯುವೆ. 24 ಆಗ ನೀನು ನಿರ್ಭಯದಿಂದ ಮಲಗಿಕೊಂಡು ಸುಖವಾಗಿ ನಿದ್ರಿಸುವೆ. 25 ದುಷ್ಟರ ಮೇಲೆ ಇದ್ದಕ್ಕಿದ್ದಂತೆ ಬರುವ ಅಪಾಯಕ್ಕಾಗಲಿ ನಾಶನಕ್ಕಾಗಲಿ ಹೆದರಿಕೊಳ್ಳಬೇಡ. 26 ಯೆಹೋವನು ನಿನ್ನೊಂದಿಗಿದ್ದಾನೆ. ನೀನು ಬಲೆಗೆ ಸಿಕ್ಕಿಬೀಳದಂತೆ ಆತನು ನಿನ್ನನ್ನು ಕಾಪಾಡುತ್ತಾನೆ.
27 ನಿನಗೆ ಸಾಧ್ಯವಾದಾಗಲೆಲ್ಲಾ ಉಪಕಾರಮಾಡು. 28 ನಿನ್ನ ನೆರೆಯವನಿಗೆ ಕೊಡತಕ್ಕದ್ದು ನಿನ್ನಲ್ಲಿರುವಾಗ, “ನಾಳೆ ಬಾ, ಕೊಡುತ್ತೇನೆ” ಎಂದು ಹೇಳಬೇಡ.
29 ನಿನ್ನ ನೆರೆಯವನಿಗೆ ಕೇಡನ್ನು ಕಲ್ಪಿಸಬೇಡ. ನಿನ್ನ ಸುರಕ್ಷತೆಗಾಗಿಯೇ ನಿನ್ನ ನೆರೆಯವನ ಸಮೀಪದಲ್ಲಿ ವಾಸಿಸುತ್ತಿದ್ದೀಯಲ್ಲಾ!
30 ನಿನಗೆ ಕೇಡನ್ನು ಮಾಡಿಲ್ಲದಿರುವವನನ್ನು ನಿಷ್ಕಾರಣವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯಬೇಡ.
31 ಬಲಾತ್ಕಾರಿಯನ್ನು ಕಂಡು ಹೊಟ್ಟೆಕಿಚ್ಚುಪಡಬೇಡ; ಅವನ ನಡತೆಯನ್ನು ಅನುಸರಿಸಬೇಡ. 32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.
33 ದುಷ್ಟರ ಮನೆಯ ಮೇಲೆ ಯೆಹೋವನ ಶಾಪವಿರುವುದು; ಆದರೆ ನೀತಿವಂತರ ಮನೆಯ ಮೇಲೆ ಆತನ ಆಶೀರ್ವಾದವಿರುವುದು.
34 ಯಾರು ಗರ್ವದಿಂದ ಬೇರೆಯವರನ್ನು ಗೇಲಿಮಾಡುತ್ತಾರೋ ಅವರನ್ನು ಯೆಹೋವನೂ ಗೇಲಿಮಾಡುತ್ತಾನೆ. ದೀನರಿಗಾದರೋ ಆತನ ಕರುಣೆ ದೊರೆಯುವುದು.
35 ಜ್ಞಾನಿಗಳು ಸನ್ಮಾನ ಹೊಂದುವರು; ಮೂಢರಿಗೆ ಅವಮಾನವಾಗುವುದು.
Kannada Holy Bible: Easy-to-Read Version. All rights reserved. © 1997 Bible League International