Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:89-176

89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು.
    ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ.
91 ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ.
    ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ.
92 ನಿನ್ನ ಉಪದೇಶಗಳು ನನಗೆ ಆನಂದಕರವಾಗಿವೆ;
    ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು.
93 ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ.
    ಯಾಕೆಂದರೆ ನಾನು ಬದುಕಿರುವುದು ಅವುಗಳಿಂದಲೇ.
94 ನಾನು ನಿನ್ನವನು, ನನ್ನನ್ನು ರಕ್ಷಿಸು!
    ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
95 ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು,
    ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು.
96 ನಿನ್ನ ಧರ್ಮಶಾಸ್ತ್ರದ ಹೊರತು
    ಬೇರೆಲ್ಲವುಗಳಿಗೂ ಮೇರೆಯಿದೆ.

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
    ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
    ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
    ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
    ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
    ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
    ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
    ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.

113 ನಿನಗೆ ಪೂರ್ಣವಾಗಿ ನಂಬಿಗಸ್ತರಾಗಿಲ್ಲದವರನ್ನು ದ್ವೇಷಿಸುವೆನು.
    ನಾನಾದರೋ ನಿನ್ನ ಉಪದೇಶಗಳನ್ನು ಪ್ರೀತಿಸುವೆನು.
114 ನನ್ನ ಆಶ್ರಯವೂ ಗುರಾಣಿಯೂ ನೀನೇ.
    ಯೆಹೋವನೇ, ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವೆ.
115 ಕೆಡುಕರನ್ನು ನನ್ನ ಬಳಿಗೆ ಬರಗೊಡಿಸಬೇಡ.
    ಆಗ ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
116 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಸಹಾಯಮಾಡು, ಆಗ ನಾನು ಬದುಕಿಕೊಳ್ಳುವೆ.
    ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ನನ್ನನ್ನು ನಿರಾಶೆಗೊಳಿಸಬೇಡ.
117 ನನಗೆ ಸಹಾಯಮಾಡು, ಆಗ ನಾನು ರಕ್ಷಿಸಲ್ಪಡುವೆನು.
    ನಾನು ನಿನ್ನ ಕಟ್ಟಳೆಗಳನ್ನು ಯಾವಾಗಲೂ ಕಲಿಯುತ್ತಿರುವೆನು.
118 ನಿನ್ನ ಕಟ್ಟಳೆಗಳನ್ನು ಅನುಸರಿಸದವರನ್ನು ನೀನು ತಳ್ಳಿಬಿಡುವೆ.
    ಯಾಕೆಂದರೆ, ಅವರು ನಿನಗೆ ದ್ರೋಹ ಮಾಡಿದರು.
119 ಭೂಮಿಯ ಮೇಲಿರುವ ದುಷ್ಟರನ್ನು ನೀನು ಕಸದಂತೆ ಕಾಣುವೆ.
    ಆದ್ದರಿಂದ ನಾನು ನಿನ್ನ ಒಡಂಬಡಿಕೆಯನ್ನು ಸದಾಕಾಲ ಪ್ರೀತಿಸುವೆನು.
120 ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ.
    ನಾನು ನಿನ್ನ ತೀರ್ಪುಗಳಿಗೆ ಅಂಜಿಕೊಂಡಿದ್ದೇನೆ.

121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
    ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
    ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
    ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
    ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
    ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
    ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
    ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.

129 ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ.
    ಪೂರ್ಣಹೃದಯದಿಂದ ಅವುಗಳನ್ನು ಅನುಸರಿಸುವೆನು.
130 ಜನರು ನಿನ್ನ ವಾಕ್ಯವನ್ನು ಅರ್ಥಮಾಡಿಕೊಂಡಾಗ ಅದು ಅವರಿಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿರುವುದು.
    ನಿನ್ನ ವಾಕ್ಯವು ಸಾಮಾನ್ಯರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
131 ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ನಿಜವಾಗಿಯೂ ಇಷ್ಟ.
    ನಾನು ಏದುಸಿರುಬಿಡುತ್ತಾ ಲವಲವಿಕೆಯಿಂದ ನಿನ್ನ ಆಜ್ಞೆಗಳಿಗಾಗಿ ಕಾಯುತ್ತಿದ್ದೇನೆ.
132 ನನ್ನನ್ನು ನೋಡಿ ಕರುಣಿಸು.
    ನಿನ್ನ ಹೆಸರನ್ನು ಪ್ರೀತಿಸುವವರಿಗೆ ಯೋಗ್ಯವಾದುವುಗಳನ್ನು ಮಾಡು.
133 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಮಾರ್ಗದರ್ಶನ ನೀಡು.
    ಯಾವ ಕೇಡೂ ನನಗೆ ಸಂಭವಿಸದಿರಲಿ.
134 ಕೆಡುಕರಿಂದ ನನ್ನನ್ನು ರಕ್ಷಿಸು.
    ಆಗ ನಾನು ನಿನ್ನ ನಿಯಮಗಳಿಗೆ ವಿಧೇಯನಾಗುವೆನು.
135 ನಿನ್ನ ಸೇವಕನ ಮೇಲೆ ಕರುಣೆಯಿರಲಿ,
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
136 ಜನರು ನಿನ್ನ ಉಪದೇಶಗಳಿಗೆ ವಿಧೇಯರಾಗದಿರುವುದರಿಂದ
    ನನ್ನ ಕಣ್ಣೀರು ಗೋಳಾಟದಿಂದ ನದಿಯಾಗಿ ಹರಿಯುತ್ತಿದೆ.

137 ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ.
    ನಿನ್ನ ತೀರ್ಪುಗಳು ನ್ಯಾಯವಾಗಿವೆ.
138 ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ.
    ಅವು ನಂಬಿಕೆಗೆ ಯೋಗ್ಯವಾಗಿವೆ.
139 ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ.
    ಯಾಕೆಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ.
140 ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ.
    ಅವು ನನಗೆ ಪ್ರಿಯವಾಗಿವೆ.
141 ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ.
    ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ಶಾಶ್ವತವಾದದ್ದು.
    ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ.
143 ಕಷ್ಟಸಂಕಟಗಳು ನನಗೆ ಬಂದಿದ್ದವು.
    ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ.
    ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು.

145 ಯೆಹೋವನೇ, ಪೂರ್ಣಹೃದಯದಿಂದ ನಿನಗೆ ಮೊರೆಯಿಟ್ಟಿದ್ದೇನೆ;
    ಸದುತ್ತರವನ್ನು ದಯಪಾಲಿಸು.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
146 ನಾನು ನಿನಗೇ ಮೊರೆಯಿಟ್ಟಿದ್ದೇನೆ.
    ನನ್ನನ್ನು ರಕ್ಷಿಸು! ನಿನ್ನ ಕಟ್ಟಳೆಗಳಿಗೆ ವಿಧೇಯನಾಗುತ್ತೇನೆ.
147 ಸೂರ್ಯೋದಯದಲ್ಲಿ ಎದ್ದು ನಿನಗೆ ಮೊರೆಯಿಟ್ಟೆನು.
    ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನೆ.
148 ನಿನ್ನ ವಾಕ್ಯವನ್ನು ಧ್ಯಾನಿಸುವುದಕ್ಕಾಗಿ
    ರಾತ್ರಿಯಲ್ಲಿ ಬಹು ಹೊತ್ತಿನವರೆಗೆ ಎಚ್ಚರವಾಗಿದ್ದೆನು.
149 ಯೆಹೋವನೇ, ನಿನ್ನ ಪೂರ್ಣ ಪ್ರೀತಿಯಿಂದ ನನಗೆ ಕಿವಿಗೊಡು.
    ನಿನ್ನ ನಿಯಮಗಳಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
150 ಜನರು ನನಗೆ ವಿರೋಧವಾಗಿ ಸಂಚುಗಳನ್ನು ಮಾಡುತ್ತಿದ್ದಾರೆ.
    ಅವರು ನಿನ್ನ ಉಪದೇಶಗಳನ್ನು ಅನುಸರಿಸುವುದಿಲ್ಲ.
151 ಯೆಹೋವನೇ, ನೀನು ನನಗೆ ಸಮೀಪವಾಗಿರುವೆ.
    ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
152 ನಿನ್ನ ಉಪದೇಶಗಳು ಶಾಶ್ವತವಾಗಿವೆ.
    ಅದನ್ನು ನಾನು ಬಹುಕಾಲದ ಹಿಂದೆಯೇ ನಿನ್ನ ಒಡಂಬಡಿಕೆಯ ಮೂಲಕ ಕಲಿತುಕೊಂಡೆ.

153 ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸು.
    ನಾನು ನಿನ್ನ ಉಪದೇಶಗಳನ್ನು ಮರೆತಿಲ್ಲ.
154 ವ್ಯಾಜ್ಯದಲ್ಲಿ ನನ್ನ ಪರವಾಗಿ ಹೋರಾಡಿ ನನ್ನನ್ನು ರಕ್ಷಿಸು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
155 ದುಷ್ಟರು ನಿನ್ನ ಕಟ್ಟಳೆಗಳನ್ನು ಅನುಸರಿಸದ ಕಾರಣ
    ಅವರಿಗೆ ಜಯವಾಗುವುದಿಲ್ಲ.
156 ಯೆಹೋವನೇ, ನೀನು ಎಷ್ಟೋ ಕರುಣೆಯುಳ್ಳವನು.
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ಉಜ್ಜೀವನಗೊಳಿಸು.
157 ಅನೇಕ ವೈರಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
    ನಾನಾದರೋ ನಿನ್ನ ಕಟ್ಟಳೆಗಳನ್ನು ಅನುಸರಿಸುತ್ತಲೇ ಇದ್ದೇನೆ.
158 ನಿನ್ನ ವಾಕ್ಯಕ್ಕೆ ವಿಧೇಯರಾಗದ ಆ ದ್ರೋಹಿಗಳನ್ನು ನೋಡಿದರೆ
    ನನಗೆ ಅಸಹ್ಯವಾಗುತ್ತದೆ.
159 ಯೆಹೋವನೇ, ನಿನ್ನ ನಿಯಮಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
    ನಿನ್ನ ಶಾಶ್ವತ ಪ್ರೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
160 ನಿನ್ನ ವಾಕ್ಯಗಳೆಲ್ಲಾ ಸತ್ಯವಾಗಿವೆ.
    ನಿನ್ನ ನೀತಿಯ ಕಟ್ಟಳೆಗಳು ಶಾಶ್ವತವಾಗಿವೆ.

161 ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು.
    ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು.
162 ಮಹಾಭಂಡಾರವನ್ನು ಕಂಡುಕೊಂಡವನಂತೆ
    ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು.
163 ನಾನು ಸುಳ್ಳುಗಳನ್ನು ದ್ವೇಷಿಸುವೆನು!
    ಅವು ನನಗೆ ಅಸಹ್ಯವಾಗಿವೆ.
    ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.
164 ನಿನ್ನ ನೀತಿಯ ವಿಧಿನಿಯಮಗಳಿಗಾಗಿ
    ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು.
    ಅವರನ್ನು ಯಾವುದೂ ಬೀಳಿಸಲಾರದು.
166 ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ.
167 ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು.
    ಅವು ನನಗೆ ಬಹು ಪ್ರಿಯವಾಗಿವೆ.
168 ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ.
    ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ.

169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
    ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
    ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
    ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
    ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
    ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
    ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
    ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International