Beginning
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
33 ನೀತಿವಂತರೇ, ಯೆಹೋವನಲ್ಲಿ ಉಲ್ಲಾಸಪಡಿರಿ.
ಯಥಾರ್ಥವಂತರು ಆತನನ್ನು ಸ್ತುತಿಸುವುದು ಯೋಗ್ಯವಾಗಿದೆ.
2 ಲೈರ್[a] ವಾದ್ಯವನ್ನು ನುಡಿಸುತ್ತಾ ಯೆಹೋವನನ್ನು ಸ್ತುತಿಸಿರಿ!
ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ಆತನನ್ನು ಕೊಂಡಾಡಿರಿ.
3 ಆತನಿಗೆ ಹೊಸ ಹಾಡನ್ನು[b] ಹಾಡಿರಿ!
ಹಾರ್ಪ್‌ವಾದ್ಯಗಳನ್ನು ಇಂಪಾಗಿ ನುಡಿಸುತ್ತಾ ಆನಂದದಿಂದ ಆರ್ಭಟಿಸಿರಿ.
4 ಯೆಹೋವನ ವಾಕ್ಯವು ಸತ್ಯವಾದದ್ದು!
ಆತನ ಕಾರ್ಯಗಳೆಲ್ಲಾ ಭರವಸೆಗೆ ಯೋಗ್ಯವಾಗಿವೆ.
5 ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವನು.
ಯೆಹೋವನ ಶಾಶ್ವತವಾದ ಪ್ರೀತಿಯು ಭೂಲೋಕವನ್ನೆಲ್ಲಾ ತುಂಬಿಕೊಂಡಿದೆ.
6 ಯೆಹೋವನು ಆಜ್ಞಾಪಿಸಲು ಆಕಾಶವು ಸೃಷ್ಟಿಯಾಯಿತು!
ಆತನ ಉಸಿರು ಭೂಮಿಯ ಮೇಲಿರುವ ಸಮಸ್ತವನ್ನು ಸೃಷ್ಟಿಸಿತು.
7 ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು;
ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.[c]
8 ಭೂಲೋಕದವರೆಲ್ಲರೂ ಯೆಹೋವನಲ್ಲಿ ಭಯಭಕ್ತಿಯಿಂದಿರಲಿ.
ಭೂನಿವಾಸಿಗಳೆಲ್ಲರೂ ಆತನಿಗೆ ಭಯಪಡಲಿ.
9 ಯಾಕೆಂದರೆ ಆತನು ನುಡಿದಾಗ ಭೂಲೋಕವು ಸೃಷ್ಟಿಯಾಯಿತು;
ಆತನು ಆಜ್ಞಾಪಿಸಿದಾಗ ಸಮಸ್ತವು ಉಂಟಾಯಿತು.
10 ಯೆಹೋವನು ಜನಾಂಗಗಳ ಉದ್ದೇಶಗಳನ್ನು ವ್ಯರ್ಥಗೊಳಿಸಬಲ್ಲನು;
ಅವರ ಆಲೋಚನೆಗಳನ್ನು ನಿಷ್ಪಲ ಮಾಡಬಲ್ಲನು.
11 ಆದರೆ ಯೆಹೋವನ ಯೋಜನೆಗಳು ಶಾಶ್ವತವಾಗಿವೆ.
ಆತನ ಆಲೋಚನೆಗಳು ಸದಾಕಾಲಕ್ಕೂ ಒಳ್ಳೆಯದಾಗಿವೆ.
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.
ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
[d]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
2 ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
ಕೇಳಿ ಸಂತೋಷಪಡಿರಿ.
3 ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
4 ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
5 ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[e]
ಅವರಿಗೆ ಆಶಾಭಂಗವಾಗದು.
6 ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
7 ಯೆಹೋವನ ಭಕ್ತರ ಸುತ್ತಲೂ ಆತನ ದೂತನು
ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
8 ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
9 ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
15 ಯೆಹೋವನು ನೀತಿವಂತರನ್ನು ಕಾಪಾಡುವನು.
ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.
17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.
ರಚನೆಗಾರ: ದಾವೀದ.
35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
ನನ್ನ ಯುದ್ಧಗಳಲ್ಲಿ ಹೋರಾಡು!
2 ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
ನನಗೆ ಸಹಾಯಕನಾಗಿ ನಿಲ್ಲು.
3 ಈಟಿಯನ್ನೂ ಭಲ್ಲೆಯನ್ನೂ[f] ತೆಗೆದುಕೊ.
ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.
4 ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
5 ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
6 ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7 ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
8 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
9 ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
“ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”
11 ಸುಳ್ಳುಸಾಕ್ಷಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
ನನಗೆ ತಿಳಿಯದ ವಿಷಯಗಳ ಮೇಲೆ ಅವರು ಪ್ರಶ್ನೆಗಳನ್ನು ಕೇಳುವರು.
12 ನಾನು ಅವರಿಗೆ ಉಪಕಾರಗಳನ್ನು ಮಾಡಿದ್ದರೂ ಅವರು ನನಗೆ ಅಪಕಾರಗಳನ್ನೇ ಮಾಡುತ್ತಾರೆ.
ಯೆಹೋವನೇ, ನನಗೆ ಯೋಗ್ಯವಾದವುಗಳನ್ನು ದಯಪಾಲಿಸು.
13 ಅವರು ಅಸ್ವಸ್ಥರಾಗಿದ್ದಾಗ ನಾನು ದುಃಖಪಟ್ಟೆನು; ಉಪವಾಸ ಮಾಡಿದೆನು.
ನಾನು ಅವರಿಗೋಸ್ಕರ ಪ್ರಾರ್ಥಿಸಿದ್ದಕ್ಕೆ ಇದು ನನಗೆ ಪ್ರತಿಫಲವೇ?
14 ಅವರು ಅಸ್ವಸ್ಥರಾಗಿದ್ದಾಗ ಶೋಕವಸ್ತ್ರಗಳನ್ನು ಧರಿಸುತ್ತಿದ್ದೆನು.
ಅವರನ್ನು ನನ್ನ ಸ್ನೇಹಿತರಂತೆಯೂ ಸಹೋದರರಂತೆಯೂ ಉಪಚರಿಸಿದೆನು;
ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅತ್ತೆನು.
15 ಆದರೆ ನಾನು ಆಪತ್ತಿನಲ್ಲಿದ್ದಾಗ ಅವರು ನನ್ನನ್ನು ಗೇಲಿಮಾಡಿದರು,
ಅವರು ನನ್ನ ನಿಜವಾದ ಸ್ನೇಹಿತರಲ್ಲ;
ಅವರ ಪರಿಚಯವೂ ನನಗಿರಲಿಲ್ಲ.
ಅವರು ನನ್ನ ಸುತ್ತಲೂ ಸೇರಿಬಂದು ನನ್ನ ಮೇಲೆ ಆಕ್ರಮಣ ಮಾಡಿದರು.
16 ಅವರು ಕೆಟ್ಟಮಾತಿನಿಂದ ನನ್ನನ್ನು ಹಾಸ್ಯಮಾಡಿದರು;
ನನ್ನ ಮೇಲಿನ ಕೋಪದಿಂದ ಹಲ್ಲುಕಡಿದರು.
17 ನನ್ನ ಒಡೆಯನೇ, ಇವುಗಳನ್ನು ಇನ್ನೆಷ್ಟುಕಾಲ ನೋಡುತ್ತಾ ಇರುವೆ?
ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ.
ನನ್ನ ಪ್ರಾಣವನ್ನು ರಕ್ಷಿಸು;
ಸಿಂಹಗಳಂತಿರುವ ಆ ದುಷ್ಟರಿಂದ ನನ್ನ ಪ್ರಿಯ ಪ್ರಾಣವನ್ನು ರಕ್ಷಿಸು.
18 ಆಗ ನಾನು ನಿನ್ನನ್ನು ಮಹಾಸಭೆಯಲ್ಲಿ ಸ್ತುತಿಸುವೆನು;
ಬಲಿಷ್ಠರ ಸಮೂಹದಲ್ಲಿ ನಿನ್ನನ್ನು ಕೊಂಡಾಡುವೆನು.
19 ಸುಳ್ಳುಗಾರರಾದ ನನ್ನ ವೈರಿಗಳು ಇನ್ನು ಮೇಲೆ ಹಿಗ್ಗಲಾರರು.
ನನ್ನ ವೈರಿಗಳು ತಮ್ಮ ಒಳಸಂಚುಗಳಿಗೆ ಖಂಡಿತವಾಗಿ ದಂಡಿಸಲ್ಪಡುವರು.
20 ನನ್ನ ವೈರಿಗಳು ಶಾಂತಿಸ್ಥಾಪನೆಗಾಗಿ ಯಾವ ಆಲೋಚನೆಗಳನ್ನೂ ಮಾಡುತ್ತಿಲ್ಲ.
ಈ ದೇಶದಲ್ಲಿ ಶಾಂತಿಯಿಂದಿರುವ ಜನರಿಗೆ ಕೇಡುಮಾಡಲು ಅವರು ಒಳಸಂಚುಗಳನ್ನು ಮಾಡುತ್ತಿದ್ದಾರೆ.
21 ನನ್ನ ವೈರಿಗಳು ನನ್ನನ್ನು ದೂಷಿಸುವರು.
“ಆಹಾ! ನೀನು ಮಾಡುತ್ತಿರುವುದು ನಮಗೆ ಗೊತ್ತು!” ಎನ್ನುವರು.
22 ಯೆಹೋವನೇ, ಇದೆಲ್ಲವನ್ನೂ ನೀನು ನೋಡಿರುವೆ,
ಆದ್ದರಿಂದ ಸುಮ್ಮನಿರಬೇಡ; ನನ್ನ ಕೈಬಿಡಬೇಡ.
23 ಎಚ್ಚರಗೊಳ್ಳು! ಎದ್ದೇಳು!
ನನ್ನ ದೇವರೇ, ಯೆಹೋವನೇ, ನನಗಾಗಿ ಹೋರಾಡು; ನನಗೆ ನ್ಯಾಯವನ್ನು ದೊರಕಿಸು.
24 ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗನುಸಾರವಾಗಿ ನನಗೆ ನ್ಯಾಯದೊರಕಿಸು.
ಅವರು ನನ್ನನ್ನು ನೋಡಿ ನಗಲು ಆಸ್ಪದ ಕೊಡಬೇಡ.
25 ಅವರು, “ಆಹಾ! ನಾವು ಬಯಸಿದ್ದನ್ನೇ ಪಡೆದೆವು!” ಎಂದು ಹೇಳಲು ಅವಕಾಶಕೊಡಬೇಡ.
“ನಾವು ಅವನನ್ನು ನಾಶಮಾಡಿದೆವು!” ಎಂದು ಹೇಳಲು ಅವರಿಗೆ ಆಸ್ಪದ ಕೊಡಬೇಡ.
26 ನನ್ನ ವೈರಿಗಳೆಲ್ಲಾ ಅವಮಾನಕ್ಕೂ ನಾಚಿಕೆಗೂ ಗುರಿಯಾಗಲಿ.
ನನಗೆ ಕೇಡಾದಾಗ ಅವರು ಸಂತೋಷಪಟ್ಟರು;
ತಮ್ಮನ್ನು ನನಗಿಂತಲೂ ಉತ್ತಮರೆಂದು ಭಾವಿಸಿಕೊಂಡರು!
ಆದ್ದರಿಂದ ಅವರನ್ನು ಅವಮಾನವೂ ನಾಚಿಕೆಯೂ ಆವರಿಸಿಕೊಳ್ಳಲಿ.
27 ನನಗೆ ನ್ಯಾಯ ದೊರೆಯಲೆಂದು ಅಪೇಕ್ಷಿಸುವವರು ಸಂತೋಷಪಡಲಿ.
“ಯೆಹೋವನು ಎಷ್ಟೋ ದೊಡ್ಡವನು!
ಆತನು ತನ್ನ ಸೇವಕನಿಗೆ ಅತ್ಯುತ್ತಮವಾದುದನ್ನೇ ಮಾಡಿದನು” ಎಂದು
ಅವರು ಹೇಳುತ್ತಲೇ ಇರಲಿ.
28 ನಿನ್ನ ನೀತಿಯ ಕುರಿತು ನಾನು ಜನರಿಗೆ ಹೇಳುವೆನು;
ಪ್ರತಿದಿನವೂ ನಿನ್ನನ್ನು ಸ್ತುತಿಸುವೆನು.
Kannada Holy Bible: Easy-to-Read Version. All rights reserved. © 1997 Bible League International