Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 21-23

ಯೋಬನ ಉತ್ತರ

21 ಬಳಿಕ ಯೋಬನು ಉತ್ತರಕೊಟ್ಟನು:

“ನಾನು ಹೇಳುವುದನ್ನು ಕೇಳಿ.
    ನಿಮ್ಮಿಂದ ನನಗಾಗಬೇಕಾದ ಆದರಣೆ ಇಷ್ಟೇ.
ನಾನು ಮಾತಾಡುವಾಗ ತಾಳ್ಮೆಯಿಂದಿರಿ.
    ನಾನು ಮಾತಾಡಿದ ಮೇಲೆ ನೀವು ನನ್ನನ್ನು ಗೇಲಿ ಮಾಡಿದರೂ ಮಾಡಿರಿ.

“ನಾನು ಮನುಷ್ಯನ ವಿರೋಧವಾಗಿ ದೂರು ಹೇಳುತ್ತಿಲ್ಲ.
    ನನ್ನಲ್ಲಿ ತಾಳ್ಮೆಯಿಲ್ಲದಿರುವುದಕ್ಕೆ ಒಂದು ಒಳ್ಳೆಯ ಕಾರಣವಿದೆ.
ನನ್ನನ್ನು ನೋಡಿ ಬೆರಗಾಗಿ
    ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ, ಗಾಬರಿಯಿಂದ ನನ್ನನ್ನೇ ದೃಷ್ಟಿಸಿ ನೋಡಿರಿ!
ನನಗೆ ಸಂಭವಿಸಿದ ಬಗ್ಗೆ ನಾನು ಯೋಚಿಸುವಾಗ
    ನನಗೆ ಭಯವಾಗುತ್ತದೆ; ನನ್ನ ದೇಹವು ನಡುಗುತ್ತದೆ.
ದುಷ್ಟರು ದೀರ್ಘಕಾಲ ಜೀವಿಸುವುದೇಕೆ?
    ಅವರು ವೃದ್ಧರಾಗುವವರೆಗೂ ಅಭಿವೃದ್ಧಿಯಾಗುತ್ತಾ ಬಾಳುವುದೇಕೆ?
ದುಷ್ಟರ ಮಕ್ಕಳು ತಮ್ಮ ತಂದೆತಾಯಿಗಳೊಂದಿಗಿದ್ದು ಬೆಳೆಯುವರು;
    ದುಷ್ಟರು ತಮ್ಮ ಮೊಮ್ಮಕ್ಕಳನ್ನೂ ನೋಡುವರು.
ಅವರ ಕುಟುಂಬಗಳು ಸುರಕ್ಷಿತವಾಗಿರುವುದರಿಂದ ಅವರಿಗೆ ಭಯವಿಲ್ಲ.
    ದೇವರು ದುಷ್ಟರನ್ನು ತನ್ನ ದೊಣ್ಣೆಯಿಂದ ದಂಡಿಸುವುದಿಲ್ಲ.
10 ಅವರ ಹೋರಿಗಳು ತಪ್ಪದೆ ಸಂಗಮಿಸುತ್ತವೆ.
    ಅವರ ಹಸುಗಳು ಕರುಗಳನ್ನು ಈಯುತ್ತವೆ.
11 ದುಷ್ಟರು ತಮ್ಮ ಮಕ್ಕಳನ್ನು ಕುರಿಮರಿಗಳಂತೆ ಆಟವಾಡಲು ಹೊರಗೆ ಕಳುಹಿಸುವರು.
    ಅವರ ಮಕ್ಕಳು ಸುತ್ತಮುತ್ತ ಕುಣಿದಾಡುವರು.
12 ಅವರು ತಂಬೂರಿಗಳನ್ನೂ ಹಾರ್ಪ್‌ವಾದ್ಯಗಳನ್ನೂ ಬಾರಿಸುತ್ತಾ ಹಾಡುವರು; ಕೊಳಲುಗಳ ಧ್ವನಿಗೆ ಉಲ್ಲಾಸಪಡುವರು.
13 ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು.
    ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.
14 ಆದರೆ ದುಷ್ಟರು ದೇವರಿಗೆ, ‘ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಕೊಡು!
    ನಿನ್ನ ಮಾರ್ಗದ ತಿಳುವಳಿಕೆಯೇ ನಮಗೆ ಬೇಡ’ ಎನ್ನುವರು.
15 ದುಷ್ಟರು, ‘ಸರ್ವಶಕ್ತನಾದ ದೇವರು ಯಾರು?
    ನಾವು ಆತನ ಸೇವೆಮಾಡುವ ಅಗತ್ಯವಿಲ್ಲ!
    ಆತನಿಗೆ ಪ್ರಾರ್ಥಿಸುವುದರಿಂದ ಪ್ರಯೋಜನವೇನೂ ಇಲ್ಲ’ ಎಂದು ಹೇಳುವರು.

16 “ತಮ್ಮ ಏಳಿಗೆಗೆ ಕಾರಣ ತಾವೇ ಎಂದು ದುಷ್ಟರು ಯೋಚಿಸಿಕೊಂಡಿದ್ದಾರೆ.
    ಆದರೆ ಅವರ ಆಲೋಚನೆಗಳನ್ನು ನಾನು ತಿರಸ್ಕರಿಸುವೆ.
17 ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು?
    ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು?
    ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?
18 ಗಾಳಿಯು ಹುಲ್ಲನ್ನೂ ಬಿರುಗಾಳಿಯು ಹೊಟ್ಟನ್ನೂ ಬಡಿದುಕೊಂಡು ಹೋಗುವಂತೆ
    ದೇವರು ದುಷ್ಟರನ್ನು ಎಷ್ಟು ಸಲ ಬಡಿದುಕೊಂಡು ಹೋಗುವನು?
19 ‘ದುಷ್ಟನ ಮಕ್ಕಳಿಗೆ ದೇವರು ದಂಡನೆಯನ್ನು ಶೇಖರಿಸಿಡುತ್ತಾನೆ’ ಎಂದು ನೀವು ಹೇಳುತ್ತೀರಿ.
    ಇಲ್ಲ! ದೇವರು ದುಷ್ಟನನ್ನೇ ದಂಡಿಸಲಿ.
    ಆಗ, ತನ್ನ ಸ್ವಂತ ಪಾಪಗಳಿಗಾಗಿ ತನಗೆ ದಂಡನೆಯಾಯಿತೆಂದು
    ಅವನು ತಿಳಿದುಕೊಳ್ಳುವನು.
20 ದುಷ್ಟನು ತನ್ನ ಸ್ವಂತ ನಾಶನವನ್ನು ತಾನೇ ನೋಡಲಿ;
    ಸರ್ವಶಕ್ತನಾದ ದೇವರ ಕೋಪವನ್ನು ಅನುಭವಿಸಲಿ.
21 ದುಷ್ಟನ ಜೀವಿತವು ಮುಗಿದುಹೋದ ಮೇಲೆ,
    ತಾನು ಬಿಟ್ಟುಹೋಗಿರುವ ತನ್ನ ಕುಟುಂಬದ ಬಗ್ಗೆ ಅವನು ಚಿಂತಿಸುವುದಿಲ್ಲ.

22 “ದೇವರಿಗೆ ಜ್ಞಾನವನ್ನು ಉಪದೇಶಿಸಲು ಯಾರಿಂದಲೂ ಆಗದು.
    ಮೇಲಿನ ಲೋಕದಲ್ಲಿರುವ ಜನರಿಗೂ ಸಹ ದೇವರು ನ್ಯಾಯತೀರಿಸುವನು.
23 ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು.
    ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.
24 ಅವನ ದೇಹವು ಚೆನ್ನಾಗಿ ಪೋಷಿಸಲ್ಪಟ್ಟಿತು,
    ಅವನ ಎಲುಬುಗಳು ಮಜ್ಜೆಯಿಂದ ಇನ್ನೂ ಸಾರವಾಗಿರುವುದು.
25 ಆದರೆ ಮತ್ತೊಬ್ಬನು ಕಷ್ಟಕರವಾದ ಜೀವನದ ನಂತರ ಮನಗುಂದಿದವನಾಗಿ ಸಾಯುವನು.
    ಅವನು ಯಾವ ಸುಖವನ್ನೂ ಅನುಭವಿಸಲಿಲ್ಲ.
26 ಕೊನೆಯಲ್ಲಿ ಅವರಿಬ್ಬರೂ ಧೂಳಿನಲ್ಲಿ ಒಟ್ಟಿಗೆ ಮಲಗಿಕೊಳ್ಳುವರು.
    ಹುಳಗಳು ಅವರಿಬ್ಬರನ್ನೂ ಮುತ್ತಿಕೊಳ್ಳುವವು.

27 “ಆದರೆ, ನಿಮ್ಮ ಆಲೋಚನೆಗಳನ್ನು ಬಲ್ಲೆ,
    ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ನಾನು ಬಲ್ಲೆ.
28 ‘ನೀತಿವಂತನ ಮನೆಯು ಎಲ್ಲಿದೆ?
    ದುಷ್ಟನು ವಾಸವಾಗಿರುವುದು ಎಲ್ಲಿ?’ ಎಂದು ನೀವು ಕೇಳಬಹುದು.

29 “ನೀವು ಖಂಡಿತವಾಗಿಯೂ ಪ್ರಯಾಣಿಕರನ್ನು ಕೇಳಿದ್ದೀರಿ.
    ನೀವು ಖಂಡಿತವಾಗಿಯೂ ಅವರ ವರದಿಯನ್ನು ಒಪ್ಪಿಕೊಳ್ಳುವಿರಿ.
30 ಅಪಾಯ ಬಂದಾಗ ದುಷ್ಟನು ಪಾರಾಗುವನು;
    ದೇವರ ಕೋಪವು ತೋರಿಬರುವ ದಿನದಲ್ಲಿ ಅವನು ತಪ್ಪಿಸಿಕೊಳ್ಳುವನು.
31 ದುಷ್ಟನ ಕೆಟ್ಟಕಾರ್ಯದ ಬಗ್ಗೆ ಅವನ ಮುಖದೆದುರಿನಲ್ಲಿ ಯಾರೂ ಟೀಕಿಸುವುದಿಲ್ಲ.
    ಅವನು ಮಾಡಿದ ಕೇಡಿಗಾಗಿ ಯಾರೂ ಅವನನ್ನು ದಂಡಿಸುವುದಿಲ್ಲ.
32 ದುಷ್ಟನನ್ನು ಸಮಾಧಿಗೆ ಹೊತ್ತುಕೊಂಡು ಹೋದಾಗ
    ಅವನ ಸಮಾಧಿಯ ಸಮೀಪದಲ್ಲಿ ಕಾವಲುಗಾರರು ನಿಂತುಕೊಳ್ಳುವರು.
33 ಆ ದುಷ್ಟನಿಗೆ ಕಣಿವೆಯ ಮಣ್ಣು ಸಿಹಿಯಾಗಿರುವುದು.
    ಅವನ ಶವಸಂಸ್ಕಾರದ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಳ್ಳುವರು.

34 “ಆದ್ದರಿಂದ ನೀವು ನಿಮ್ಮ ಬರಿದಾದ ಮಾತುಗಳಿಂದ ನನ್ನನ್ನು ಸಂತೈಸಲಾರಿರಿ.
    ನಿಮ್ಮ ಉತ್ತರಗಳು ಕೇವಲ ಸುಳ್ಳೇ ಆಗಿವೆ.”

ಎಲೀಫಜನ ಉತ್ತರ

22 ಬಳಿಕ ತೇಮಾನ್ ಪಟ್ಟಣದ ಎಲೀಫಜನು ಉತ್ತರಕೊಟ್ಟನು:

“ಯಾವನೂ ದೇವರಿಗೆ ಸಹಾಯಮಾಡಲಾರನು.
    ಮಹಾ ಜ್ಞಾನಿಯು ಸಹ ದೇವರಿಗೆ ಉಪಯುಕ್ತನಾಗಲಾರನು.
ನಿನ್ನ ನಡತೆಯು ಒಳ್ಳೆಯದಾಗಿದ್ದರೆ, ಅದರಿಂದ ದೇವರಿಗೆ ಸಹಾಯವಾಗುವುದೇ? ಇಲ್ಲ.
    ನೀನು ನೀತಿವಂತನಾಗಿದ್ದರೆ ಸರ್ವಶಕ್ತನಾದ ದೇವರಿಗೆ ಅದರಿಂದೇನಾದರೂ ಲಾಭವಾಗುವುದೇ?
ನಿನ್ನ ಆರಾಧನೆಯ ದೆಸೆಯಿಂದ
    ದೇವರು ನಿನ್ನ ಮೇಲೆ ಆರೋಪ ಹೊರಿಸಿ ದಂಡಿಸುವನೇ? ಇಲ್ಲ!
ನಿನ್ನ ಪಾಪವು ಅತಿಯಾಯಿತು!
    ಯೋಬನೇ, ನೀನು ಪಾಪಮಾಡುವುದನ್ನು ನಿಲ್ಲಿಸಲೇ ಇಲ್ಲ.
ಯೋಬನೇ, ನೀನು ನಿಷ್ಕಾರಣವಾಗಿ ನಿನ್ನ ಸಹೋದರರ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲ ಕೊಟ್ಟಿರಬಹುದು.
    ಜನರ ಬಟ್ಟೆಗಳನ್ನು ತೆಗೆದುಕೊಂಡು ಅವರನ್ನು ಬೆತ್ತಲೆ ಮಾಡಿರಬಹುದು.
ಆಯಾಸಗೊಂಡವರಿಗೆ ನೀರು ಕೊಡದೆ
    ಹಸಿದವರಿಗೆ ಊಟ ಕೊಡದೆಹೋಗಿರಬಹುದು.
ಯೋಬನೇ, ಬಲಿಷ್ಠನಾಗಿದ್ದ ನಿನ್ನಲ್ಲಿ ಬೇಸಾಯಕ್ಕೆ ಬಹಳ ಭೂಮಿಯಿದೆ.
    ಅಲ್ಲದೆ ಜನರು ಸಹ ನಿನ್ನನ್ನು ಗೌರವಿಸುತ್ತಿದ್ದರು.
ಆದರೆ ವಿಧವೆಯರಿಗೆ ದಾನಮಾಡದೆ ಅವರನ್ನು ನೀನು ಕಳುಹಿಸಿಬಿಟ್ಟಿರಬಹುದು.
    ಒಂದುವೇಳೆ ನೀನು ಅನಾಥರಿಗೆ ಮೋಸಮಾಡಿರಬಹುದು.
10 ಆದಕಾರಣ ನಿನ್ನ ಸುತ್ತಲೆಲ್ಲಾ ಉರುಲುಗಳಿವೆ;
    ಫಕ್ಕನೆ ಬರುವ ವಿಪತ್ತು ನಿನ್ನನ್ನು ಭಯಗೊಳಿಸುವುದು.
11 ಆದಕಾರಣ ನಿನಗೆ ಏನೂ ಕಾಣಲಾಗದಷ್ಟು ಕತ್ತಲಾಗಿದೆ,
    ಪ್ರವಾಹದ ನೀರು ನಿನ್ನನ್ನು ಆವರಿಸಿಕೊಂಡಿದೆ.

12 “ದೇವರು ಅತ್ಯುನ್ನತವಾದ ಪರಲೋಕದಲ್ಲಿ ವಾಸಿಸುತ್ತಾನೆ.
    ಆತನು ಅತ್ಯಂತ ಎತ್ತರದಲ್ಲಿರುವ ನಕ್ಷತ್ರಗಳನ್ನು ಬಗ್ಗಿ ನೋಡುವನು.
    ನಕ್ಷತ್ರಗಳು ಎಷ್ಟು ಎತ್ತರದಲ್ಲಿವೆ ಎಂಬುದನ್ನು ನೀನು ನೋಡಬಲ್ಲೆ.
13 ನೀನಾದರೋ, ‘ದೇವರಿಗೆ ಗೊತ್ತಿರುವುದೇನು?
    ಕಾರ್ಮೋಡಗಳ ಆಚೆಯಿಂದ ನಮಗೆ ನ್ಯಾಯತೀರಿಸಬಲ್ಲನೇ?
14 ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ.
    ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ.

15 “ಯೋಬನೇ, ದುಷ್ಟರು ನಡೆಯುವ ಹಳೆದಾರಿಯ ಮೇಲೆ
    ನೀನು ನಡೆಯುತ್ತಲೇ ಇರುವಿಯೋ?
16 ಆ ದುಷ್ಟರಿಗೆ ಅಕಾಲಮರಣವು ಬಂದಿತು.
    ಪ್ರವಾಹದಲ್ಲಿನ ಕಟ್ಟಡದಂತೆ ಅವರು ಕೊಚ್ಚಿಕೊಂಡು ಹೋದರು.
17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು;
    ಸರ್ವಶಕ್ತನಾದ ದೇವರು ನಮಗೇನೂ ಮಾಡಲಾರನು!’ ಎಂದು ಹೇಳಿದ್ದರು.
18 ಆದರೆ ದೇವರು ಅವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದನು.
    ಅಬ್ಬಾ! ದುಷ್ಟರ ಆಲೋಚನೆಯನ್ನು ನಾನು ಅನುಸರಿಸಲಾರೆ.
19 ದುಷ್ಟರ ನಾಶನವನ್ನು ಕಂಡು ನೀತಿವಂತರು ಸಂತೋಷಪಡುವರು.
    ನಿರಪರಾಧಿಗಳು ದುಷ್ಟರನ್ನು ಕಂಡು ನಗುತ್ತಾ,
20 ‘ನಮ್ಮ ಶತ್ರುಗಳು ನಾಶವಾದರು!
    ಬೆಂಕಿಯು ಅವರ ಐಶ್ವರ್ಯವನ್ನು ಸುಟ್ಟುಹಾಕಿತು!’ ಎಂದು ಹೇಳುವರು.

21 “ಯೋಬನೇ, ಈಗಲಾದರೊ ನಿನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನೊಂದಿಗೆ ಸಮಾಧಾನ ಮಾಡಿಕೊ,
    ಆಗ ನೀನು ಆಶೀರ್ವಾದವನ್ನು ಹೊಂದಿಕೊಂಡು ಅಭಿವೃದ್ಧಿಯಾಗುವೆ.
22 ಆತನ ಉಪದೇಶವನ್ನು ಸ್ವೀಕರಿಸಿಕೊ.
    ಆತನ ವಾಕ್ಯಗಳನ್ನು ನಿನ್ನ ಹೃದಯದಲ್ಲಿಟ್ಟುಕೊ.
23 ಯೋಬನೇ, ನೀನು ಸರ್ವಶಕ್ತನಾದ ದೇವರಿಗೆ ಅಭಿಮುಖನಾಗಿ
    ನಿನ್ನ ಮನೆಯಲ್ಲಿರುವ ಪಾಪವನ್ನು ನಿರ್ಮೂಲಮಾಡಿದರೆ ಉದ್ಧಾರವಾಗುವೆ.
24 ನೀನು ಚಿನ್ನವನ್ನು ಧೂಳೆಂದು ಪರಿಗಣಿಸಬೇಕು.
    ನೀನು ಓಫೀರ್ ದೇಶದ ಚಿನ್ನವನ್ನು ನದಿಗಳ ದಂಡೆಯ ಮೇಲಿರುವ ಕಲ್ಲುಗಳಂತೆ ಪರಿಗಣಿಸಬೇಕು.
25 ಆಗ ಸರ್ವಶಕ್ತನಾದ ದೇವರು ನಿನ್ನ ಪಾಲಿಗೆ ಬಂಗಾರವಾಗಿಯೂ
    ಬೆಳ್ಳಿಯ ರಾಶಿಗಳಾಗಿಯೂ ಇರುವನು.
26 ನೀನು ಸರ್ವಶಕ್ತನಾದ ದೇವರಲ್ಲಿ ಆನಂದಿಸುವೆ.
    ದೇವರ ಕಡೆಗೆ ಕಣ್ಣೆತ್ತಿ ನೋಡುವೆ.
27 ನೀನು ಪ್ರಾರ್ಥಿಸುವೆ, ಆತನು ನಿನಗೆ ಕಿವಿಗೊಡುವನು;
    ಆತನಿಗೆ ನಿನ್ನ ಹರಕೆಗಳನ್ನು ಸಲ್ಲಿಸುವೆ.
28 ನಿನ್ನ ಕಾರ್ಯಗಳೆಲ್ಲಾ ಜಯಪ್ರಧವಾಗುವುದು;
    ನಿನ್ನ ಭವಿಷ್ಯತ್ತು ಪ್ರಕಾಶಮಾನವಾಗುವುದು;
29 ದೇವರು ಅಹಂಕಾರಿಗಳನ್ನು ನಾಚಿಕೆಗೀಡುಮಾಡುವನು,
    ದೀನರಿಗಾದರೋ ಸಹಾಯಮಾಡುವನು.
30 ನಿರಪರಾಧಿಗಳನ್ನು ರಕ್ಷಿಸುವನು.
    ನೀನು ಪರಿಶುದ್ಧನಾಗಿರುವುದರಿಂದ ನಿನ್ನ ಪ್ರಾರ್ಥನೆಗೆ ಉತ್ತರವಾಗಿ ಆತನು ಅವರನ್ನು ಕ್ಷಮಿಸುವನು.”

ಯೋಬನ ಉತ್ತರ

23 ಆಗ ಯೋಬನು ಹೀಗೆಂದನು:

“ನಾನಿನ್ನೂ ಸಂಕಟದಲ್ಲಿರುವುದರಿಂದ
    ಈ ಹೊತ್ತು ಸಹ ನಾನು ದೂರು ಹೇಳುವೆನು.
ಆಹಾ, ದೇವರ ದರ್ಶನವು ನನಗೆ ಎಲ್ಲಿ ಆಗುವುದು?
    ಆತನ ಬಳಿಗೆ ನಾನು ಹೇಗೆ ಹೋಗಬೇಕು? ನನಗೆ ಗೊತ್ತಾಗಿದ್ದರೆ ಎಷ್ಟೋ ಮೇಲು!
ಆಗ ನಾನು ದೇವರಿಗೆ ನನ್ನ ವ್ಯಾಜ್ಯದ ಬಗ್ಗೆ ವಿವರಿಸುತ್ತಿದ್ದೆನು;
    ನಾನು ನಿರಪರಾಧಿಯೆಂದು ನಿರೂಪಿಸಲು ನನ್ನ ಬಾಯನ್ನು ವಾದಗಳಿಂದ ತುಂಬಿಸಿಕೊಳ್ಳುತ್ತಿದ್ದೆನು.
ದೇವರ ಪ್ರತ್ಯುತ್ತರವನ್ನು ನಾನು ಕೇಳಬಯಸುವೆ.
    ಆತನ ಉತ್ತರಗಳನ್ನು ಅರ್ಥಮಾಡಿಕೊಳ್ಳಬಯಸುವೆ.
ದೇವರು ತನ್ನ ಮಹಾಶಕ್ತಿಯನ್ನು ನನಗೆ ವಿರೋಧವಾಗಿ ಬಳಸುವನೇ? ಇಲ್ಲ,
    ಆತನು ನನಗೆ ಕಿವಿಗೊಡುವನು!
ನಾನು ಯಥಾರ್ಥನಾಗಿರುವೆ. ದೇವರು ನನ್ನ ವಿಷಯವನ್ನು ಕೇಳುವನು;
    ನನ್ನ ನ್ಯಾಯಾಧಿಪತಿಯು ನನ್ನನ್ನು ಬಿಡುಗಡೆ ಮಾಡುವನು.

“ಆದರೆ, ನಾನು ಪೂರ್ವಕ್ಕೆ ಹೋದರೂ ದೇವರು ಅಲ್ಲಿಲ್ಲ.
    ನಾನು ಪಶ್ಚಿಮಕ್ಕೆ ಹೋದರೂ ದೇವರು ಅಲ್ಲಿಯೂ ನನಗೆ ಕಾಣುವುದಿಲ್ಲ.
ದೇವರು ಉತ್ತರದಿಕ್ಕಿನಲ್ಲಿ ಕಾರ್ಯನಿರತನಾಗಿರುವಾಗಲೂ ನನಗೆ ಕಾಣುವುದಿಲ್ಲ.
    ದೇವರು ದಕ್ಷಿಣ ದಿಕ್ಕಿಗೆ ತಿರುಗಿಕೊಂಡಾಗಲೂ ನನಗೆ ಕಾಣುವುದಿಲ್ಲ.
10 ಆದರೆ ನನ್ನ ಪ್ರತಿಯೊಂದು ಹೆಜ್ಜೆಯನ್ನೂ ದೇವರು ಬಲ್ಲನು.
    ಆತನು ನನ್ನನ್ನು ಪರೀಕ್ಷಿಸಿ ನೋಡಿದಾಗ ನಾನು ಅಪ್ಪಟ ಬಂಗಾರದಂತಿರುವುದನ್ನು ಕಂಡುಕೊಳ್ಳುವನು.
11 ಆತನ ಮಾರ್ಗದಲ್ಲೇ ನಾನು ನಡೆದಿದ್ದೇನೆ.
    ನಾನು ಓರೆಯಾಗದೆ ಆತನ ಮಾರ್ಗವನ್ನೇ ಅನುಸರಿಸಿದ್ದೇನೆ.
12 ಆತನ ಆಜ್ಞೆಗಳನ್ನು ನಾನು ಮೀರಲೇ ಇಲ್ಲ,
    ಆತನ ಬಾಯಿಂದ ಬಂದ ಮಾತುಗಳನ್ನು ಮೃಷ್ಟಾನ್ನಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದೇನೆ.

13 “ದೇವರು ಎಂದಿಗೂ ಬದಲಾಗುವುದಿಲ್ಲ.
    ಯಾವನೂ ಆತನ ಮನಸ್ಸನ್ನು ಮಾರ್ಪಡಿಸಲಾರನು.
    ದೇವರು ತಾನು ಬಯಸಿದ್ದನ್ನೇ ಮಾಡುವನು.
14 ದೇವರು ತನ್ನ ಆಲೋಚನೆಗೆ ತಕ್ಕಂತೆ ನನಗೆ ಮಾಡುವನು.
    ಆತನಲ್ಲಿ ಇಂಥಾ ಸಂಕಲ್ಪಗಳು ಎಷ್ಟೋ ಇವೆ.
15 ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಭಯಭ್ರಾಂತನಾಗಿದ್ದೇನೆ.
    ಇದನ್ನೆಲ್ಲಾ ಯೋಚಿಸುವಾಗ ಹೆದರಿಕೊಳ್ಳುತ್ತೇನೆ.
16 ನನ್ನ ಹೃದಯವನ್ನು ಕುಂದಿಸಿದವನೂ ದೇವರೇ.
    ನನ್ನನ್ನು ಭಯಭ್ರಾಂತನನ್ನಾಗಿ ಮಾಡಿದವನೂ ಸರ್ವಶಕ್ತನಾದ ದೇವರೇ.
17 ಕಪ್ಪು ಮೋಡವು ನನ್ನ ಮುಖವನ್ನು ಕವಿದುಕೊಳ್ಳುವಂತೆ ಆಪತ್ತುಗಳು ನನಗೆ ಸಂಭವಿಸಿದವು.
    ಆದರೆ ಕಾರ್ಗತ್ತಲೆಯೂ ನನ್ನನ್ನು ಮೌನಗೊಳಿಸಲಾರದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International