Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 14-16

14 ಯೋಬನು ಹೇಳಿದನು:

“ನಾವು ಮನುಷ್ಯರಷ್ಟೇ.
    ನಮ್ಮ ಅಲ್ಪಜೀವಿತವು ಕಷ್ಟಗಳಿಂದ ತುಂಬಿಕೊಂಡಿದೆ.
ಮನುಷ್ಯನ ಜೀವಿತವು ಹೂವಿನಂತೆ ಬೇಗನೆ ಬೆಳೆದು ಒಣಗಿಹೋಗುವುದು.
    ಮನುಷ್ಯನ ಜೀವಿತವು ನೆರಳಿನಂತೆ ಕ್ಷಣಿಕವಾದದ್ದು.
ದೇವರೇ, ಇಂಥವನಾದ ನನ್ನ ಮೇಲೆ ಕಣ್ಣಿಟ್ಟು
    ನ್ಯಾಯಾಲಯಕ್ಕೆ ಎಳೆದುಕೊಂಡು ಹೋಗುವಿಯಾ?

“ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
ಮನುಷ್ಯನ ದಿನಗಳು ಇಷ್ಟೇ ಎಂದು ನಿರ್ಣಯವಾಗಿದೆ;
    ಅವನ ತಿಂಗಳುಗಳನ್ನು ನೀನು ನಿರ್ಣಯಿಸಿರುವೆ.
    ಅವನ ಆಯುಷ್ಯಕ್ಕೆ ದಾಟಲಾರದ ಮೇರೆಯನ್ನು ಹಾಕಿರುವೆ.
ದೇವರೇ, ನಿನ್ನ ದೃಷ್ಟಿಯನ್ನು ಮನುಷ್ಯನ ಕಡೆಯಿಂದ ತಿರುಗಿಸು.
    ಅವನನ್ನು ಅವನ ಪಾಡಿಗೆ ಬಿಟ್ಟುಬಿಡು.
    ಅವನು ಕೂಲಿಯವನಂತಾದರೂ ಜೀವಿಸಲಿ.

“ಮರಕ್ಕೆ ನಿರೀಕ್ಷೆಯಿದೆ.
    ಕಡಿದುಹಾಕಲ್ಪಟ್ಟರೂ ಅದು ಮತ್ತೆ ಚಿಗುರಬಹುದು;
    ಹೊಸ ಕವಲುಗಳನ್ನು ಮೊಳೆಯಿಸುತ್ತಲೇ ಇರುವುದು.
ಅದರ ಬೇರುಗಳು ನೆಲದೊಳಗೆ ಮುದಿಯಾದರೂ
    ಅದರ ಬುಡವು ನೆಲದಲ್ಲಿ ಸತ್ತುಹೋದರೂ,
ಅದು ನೀರಿನಿಂದ ಮತ್ತೆ ಹೊಸದಾಗಿ ಬೆಳೆಯುವುದು;
    ಎಳೆ ಗಿಡದಂತೆ ಕವಲೊಡೆಯುವುದು.
10 ಮನುಷ್ಯನಾದರೋ ಸತ್ತು ಕೊನೆಗೊಳ್ಳುವನು.
    ಪ್ರಾಣ ಹೋದಾಗ ಇಲ್ಲವಾಗುವನು.
11 ಸರೋವರದಿಂದ ನೀರು ಕಾಣೆಯಾಗುವವರೆಗೂ
    ನದಿಯ ನೀರು ಒಣಗಿಹೋಗುವವರೆಗೂ
12 ಸತ್ತ ಮನುಷ್ಯನು ಮಲಗಿಕೊಂಡೇ ಇರುವನು.
    ಅವನು ಮತ್ತೆ ಮೇಲೇಳುವುದಿಲ್ಲ.
ಆಕಾಶವು ಅಳಿದುಹೋಗುವವರೆಗೆ
    ಅವನು ನಿದ್ರೆಯಿಂದ ಎಬ್ಬಿಸಲ್ಪಡುವುದಿಲ್ಲ.

13 “ನಿನ್ನ ಕೋಪವು ಇಳಿಯುವ ತನಕ ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟಿದ್ದು,
    ನೀನು ಗೊತ್ತುಪಡಿಸಿದ ಸಮಯದಲ್ಲಿ ನನ್ನನ್ನು ಜ್ಞಾಪಿಸಿಕೊಂಡಿದ್ದರೆ
    ಎಷ್ಟೋ ಒಳ್ಳೆಯದಾಗುತ್ತಿತ್ತು.
14 ಸತ್ತ ಮನುಷ್ಯನು ಮತ್ತೆ ಬದುಕುವನೇ?
    ಬದುಕುವುದಾಗಿದ್ದರೆ, ನನಗೆ ಬಿಡುಗಡೆಯಾಗುವ ತನಕ ನನ್ನ ಎಲ್ಲಾ ಕಷ್ಟದ ದಿನಗಳಲ್ಲಿಯೂ ಕಾದುಕೊಂಡಿರುವೆ.
15 ದೇವರೇ, ನೀನು ನನ್ನನ್ನು ಕರೆದರೆ,
    ಉತ್ತರ ಕೊಡುವೆನು.
ಆಗ ನಿನ್ನ ಸೃಷ್ಟಿಯಾದ ನನ್ನನ್ನು
    ನೀನು ಇಷ್ಟಪಡುವೆ.
16 ನಾನಿಡುವ ಪ್ರತಿ ಹೆಜ್ಜೆಯನ್ನೂ ನೀನು ಗಮನಿಸುವೆ.
    ಆದರೆ ನೀನು ನನ್ನ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
17 ನನ್ನ ಪಾಪಗಳನ್ನು ಚೀಲದಲ್ಲಿಟ್ಟು ಮುದ್ರಿಸಿ
    ದೂರಕ್ಕೆ ಎಸೆದುಬಿಡುವೆ.

18 “ಪರ್ವತವು ಬಿದ್ದು ಕರಗಿಹೋಗುವಂತೆ
    ಬಂಡೆಯು ತನ್ನ ಸ್ಥಳದಿಂದ ಚಲಿಸುವುದು.
19 ಹರಿಯುವ ನೀರು ಕಲ್ಲುಗಳನ್ನು ಸವೆಯಿಸುವಂತೆಯೂ
    ನೆಲದ ಮೇಲಿನ ಧೂಳನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋಗುವಂತೆಯೂ
    ದೇವರೇ, ನೀನು ಮನುಷ್ಯನ ನಿರೀಕ್ಷೆಯನ್ನು ನಾಶಮಾಡುವೆ.
20 ನೀನು ಮನುಷ್ಯನನ್ನು ಶಾಶ್ವತವಾಗಿ ಸೋಲಿಸಿಬಿಡುವೆ.
    ಆಗ ಮನುಷ್ಯನು ಇಲ್ಲವಾಗುವನು.
ನೀನು ಅವನ ಮುಖವನ್ನು ವಿಕಾರಗೊಳಿಸಿ
    ಶಾಶ್ವತವಾಗಿ ಕಳುಹಿಸಿಬಿಡುವೆ.
21 ಅವನ ಮಕ್ಕಳಿಗೆ ಸನ್ಮಾನವಾದರೂ ಅವನಿಗೆ ತಿಳಿಯುವುದಿಲ್ಲ;
    ಅವರಿಗೆ ಅವಮಾನವಾದರೂ ಅವನಿಗೆ ಅದರ ಅರಿವೇ ಇರುವುದಿಲ್ಲ.
22 ಅವನು ತನ್ನ ದೇಹದಲ್ಲಿ ನೋವನ್ನೇ ಅನುಭವಿಸುತ್ತಾ
    ತನಗೋಸ್ಕರ ಗೋಳಾಡುವನು.”

ಯೋಬನಿಗೆ ಎಲೀಫಜನ ಉತ್ತರ

15 ಬಳಿಕ ತೇಮಾನಿನ ಎಲೀಫಜನು ಯೋಬನಿಗೆ ಉತ್ತರಿಸಿದನು:

“ಯೋಬನೇ, ನೀನು ನಿಜವಾಗಿಯೂ ಜ್ಞಾನಿಯಾಗಿದ್ದರೆ,
    ಬರಿದಾದ ನಿನ್ನ ವೈಯಕ್ತಿಕ ಮಾತುಗಳಿಂದ ಉತ್ತರಿಸುವುದಿಲ್ಲ.
    ಜ್ಞಾನಿಯು ಬಿಸಿಗಾಳಿಯಂತೆ ಉತ್ತರಿಸುವನೇ?
ಜ್ಞಾನಿಯು ನಿಷ್ಪ್ರಯೋಜಕವಾದ ಮಾತುಗಳಿಂದ ವಾದಿಸುತ್ತಾನೆಂದು
    ಭಾವಿಸಿಕೊಂಡಿರುವೆಯಾ?
ನೀನು ನಿನ್ನ ಮಾರ್ಗದಲ್ಲಿ ಹೋಗುವುದಾದರೆ,
    ದೇವರಲ್ಲಿ ಯಾರೂ ಭಯಭಕ್ತಿಯಿಡುವುದಿಲ್ಲ; ಆತನಿಗೆ ಯಾರೂ ಪ್ರಾರ್ಥಿಸುವುದಿಲ್ಲ.
ನಿನ್ನ ಪಾಪವೇ ನಿನ್ನ ಮಾತುಗಳಿಗೆ ಪ್ರೇರಕವಾಗಿವೆ.
    ನೀನು ಮೋಸಕರವಾದ ಮಾತುಗಳನ್ನು ಬಳಸುತ್ತಿರುವೆ.
ನೀನು ತಪ್ಪಿತಸ್ಥನೆಂದು ನಾನು ನಿರೂಪಿಸುವ ಅಗತ್ಯವಿಲ್ಲ.
    ಯಾಕೆಂದರೆ ನಿನ್ನ ಬಾಯ ಮಾತುಗಳೇ ನಿನ್ನನ್ನು ತಪ್ಪಿತಸ್ಥನೆಂದು ತೋರಿಸುತ್ತವೆ.
    ನಿನ್ನ ಸ್ವಂತ ತುಟಿಗಳೇ ನಿನ್ನ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ.

“ಯೋಬನೇ, ಎಲ್ಲರಿಗಿಂತ ಮೊದಲು ನೀನೇ ಹುಟ್ಟಿರುವುದಾಗಿ ಭಾವಿಸಿಕೊಂಡಿರುವಿಯಾ?
    ಬೆಟ್ಟಗಳಿಗಿಂತ ಮೊದಲೇ ನೀನು ಹುಟ್ಟಿದಿಯಾ?
ದೇವರ ರಹಸ್ಯ ಯೋಜನೆಗಳನ್ನು ಆಲಿಸಿರುವೆಯಾ?
    ನೀನೊಬ್ಬನೇ ಜ್ಞಾನಿಯೆಂದು ಭಾವಿಸಿಕೊಂಡಿರುವಿಯಾ?
ಯೋಬನೇ, ನಿನಗೆ ಗೊತ್ತಿರುವುದೆಲ್ಲಾ ನಮಗೂ ಗೊತ್ತಿದೆ.
    ನಿನಗೆ ಅರ್ಥವಾಗುವುದೆಲ್ಲಾ ನಮಗೂ ಅರ್ಥವಾಗುತ್ತದೆ.
10 ನಿನ್ನ ತಂದೆಗಿಂತಲೂ ವಯಸ್ಸಾಗಿರುವ,
    ಕೂದಲು ಬೆಳ್ಳಗಾಗಿರುವ ವೃದ್ಧನು ನಮ್ಮಲ್ಲಿದ್ದಾನೆ.
11 ದೇವರ ಆಧರಣೆಯ ಮಾತುಗಳೂ ನಮ್ಮ ನಯವಾದ ಮಾತುಗಳೂ
    ನಿನಗೆ ಸಾಲುವುದಿಲ್ಲವೇ?
12 ಯೋಬನೇ, ನಿನ್ನ ಆಲೋಚನೆಗಳು ನಿನ್ನನ್ನು ಸೆಳೆದುಕೊಂಡು ಹೋಗುವುದೇಕೆ?
    ನಿನ್ನ ಕಣ್ಣುಗಳು ನಮ್ಮ ಮೇಲೆ ಕಿಡಿಕಿಡಿಯಾಗುವುದೇಕೆ?
13 ನೀನು ದೇವರ ಮೇಲೆ ಕೋಪಗೊಂಡು
    ನಿನ್ನ ಬಾಯಿಂದ ಅಂತಹ ಮಾತುಗಳನ್ನು ಸುರಿಸುತ್ತಿರುವೆ!

14 “ಮನುಷ್ಯನು ಎಷ್ಟರವನು?
    ಅವನು ಪರಿಶುದ್ಧನಾಗಿರಲು ಸಾಧ್ಯವೇ?
    ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಲು ಸಾಧ್ಯವೇ?
15 ದೇವರು ತನ್ನ ದೂತರುಗಳನ್ನು[a] ಸಹ ನಂಬುವುದಿಲ್ಲ.
    ಆತನ ದೃಷ್ಟಿಯಲ್ಲಿ ಆಕಾಶಗಳು ಸಹ ಅಶುದ್ಧವಾಗಿವೆ.
16 ಹೀಗಿರಲು ದುಷ್ಟತನವನ್ನು ನೀರಿನಂತೆ ಕುಡಿಯುತ್ತಾ
    ಅಸಹ್ಯನೂ ಕೆಟ್ಟವನೂ ಆಗಿರುವ ಮನುಷ್ಯನು
    ಎಷ್ಟೋ ಅಶುದ್ಧನಲ್ಲವೇ?

17 “ಯೋಬನೇ, ನನಗೆ ಕಿವಿಗೊಡು, ಆಗ ನಾನು ನಿನಗೆ ಅದನ್ನು ವಿವರಿಸುವೆನು.
    ನಾನು ನೋಡಿರುವುದನ್ನೇ ನಿನಗೆ ತಿಳಿಸುವೆನು.
18 ಜ್ಞಾನಿಗಳು ನನಗೆ ತಿಳಿಸಿದ ಸಂಗತಿಗಳನ್ನು ನಾನು ನಿನಗೆ ಹೇಳುವೆನು.
    ಆ ಜ್ಞಾನಿಗಳಿಗೆ ಅವರ ಪೂರ್ವಿಕರೇ ಈ ಸಂಗತಿಗಳನ್ನು ತಿಳಿಸಿದ್ದಾರೆ.
    ಅವರು ಯಾವ ರಹಸ್ಯಗಳನ್ನೂ ನನಗೆ ಮರೆಮಾಡಲಿಲ್ಲ.
19 ಅವರು ಮಾತ್ರ ತಮ್ಮ ದೇಶದಲ್ಲಿ ವಾಸಿಸಿದರು.
    ಅವರ ಮಧ್ಯದಲ್ಲಿ ಯಾವ ವಿದೇಶಿಯನೂ ಹಾದುಹೋಗುತ್ತಿರಲಿಲ್ಲ.
20 ದುಷ್ಟನು ತನ್ನ ಜೀವಮಾನವೆಲ್ಲಾ ಯಾತನೆಯನ್ನು ಅನುಭವಿಸುವನು.
    ಕ್ರೂರಿಯು ತನಗೆ ನೇಮಕಗೊಂಡಿರುವ ವರ್ಷಗಳಲ್ಲೆಲ್ಲಾ ಕಷ್ಟಪಡುವನು.
21 ಭೀಕರವಾದ ಶಬ್ದಗಳು ಅವನ ಕಿವಿಗಳಲ್ಲೇ ಇರುತ್ತವೆ.
    ತಾನು ಸುರಕ್ಷಿತನಾಗಿರುವುದಾಗಿ ಅವನು ಯೋಚಿಸುವಾಗಲೇ ವೈರಿಯು ಅವನ ಮೇಲೆ ಆಕ್ರಮಣ ಮಾಡುವನು.
22 ದುಷ್ಟನಿಗೆ ಕತ್ತಲೆಯಿಂದ ಪಾರಾಗುತ್ತೇನೆ ಎಂಬ ನಿರೀಕ್ಷೆಯೇ ಇಲ್ಲ.
    ಅವನನ್ನು ಕೊಲ್ಲಲು ಕತ್ತಿಯು ಎಲ್ಲೋ ಕಾದುಕೊಂಡಿದೆ.
23 ಅವನು ಅತ್ತಿತ್ತ ಅಲೆದಾಡುವನು; ಅವನ ದೇಹವು ರಣಹದ್ದುಗಳಿಗೆ ಆಹಾರವಾಗುವುದು.
    ಮರಣವು[b] ತನಗೆ ಬಹು ಸಮೀಪವಾಗಿರುವುದು ಅವನಿಗೆ ಗೊತ್ತೇ ಇದೆ.
24 ಚಿಂತೆಸಂಕಟಗಳು ಅವನನ್ನು ಭಯಗೊಳಿಸುತ್ತವೆ.
    ಅವನನ್ನು ನಾಶಮಾಡಲು ಸಿದ್ಧನಾಗಿರುವ ರಾಜನಂತೆ ಅವು ಅವನ ಮೇಲೆ ಆಕ್ರಮಣ ಮಾಡುತ್ತವೆ.
25 ಯಾಕೆಂದರೆ ದುಷ್ಟನು ದೇವರಿಗೆ ವಿರುದ್ಧವಾಗಿ ತನ್ನ ಕೈಯನ್ನು ಝಳಪಿಸುತ್ತಾನೆ.
    ದುಷ್ಟನು ಸರ್ವಶಕ್ತನಾದ ದೇವರ ವಿರುದ್ಧವಾಗಿ ಮಹಾಶೂರನಂತೆ ಆಕ್ರಮಣ ಮಾಡುವನು.
26 ಅವನು ಬಹು ಮೊಂಡನಾಗಿದ್ದಾನೆ.
    ದುಷ್ಟನು ಮಹಾಗುರಾಣಿಯನ್ನು ಹಿಡಿದು ದೇವರನ್ನು ಎದುರಿಸಲು ಪ್ರಯತ್ನಿಸುವನು.
27 ದುಷ್ಟನ ಮುಖದಲ್ಲಿ ಕೊಬ್ಬೇರಿದೆ, ಅವನ ಸೊಂಟದಲ್ಲಿ ಬೊಜ್ಜು ಬೆಳೆದುಕೊಂಡಿದೆ.
28     ಪಾಳುಬಿದ್ದಿರುವ ಮನೆಗಳಲ್ಲಿ ದುಷ್ಟನು ವಾಸಿಸುವನು.
ಹಾಳುದಿಬ್ಬಗಳಾಗಬೇಕೆಂಬುದೇ
    ಆ ಮನೆಗಳ ಗತಿಯಾಗಿದೆ.
29 ದುಷ್ಟನು ಬಹುಕಾಲದವರೆಗೆ ಐಶ್ವರ್ಯವಂತನಾಗಿರಲು ಸಾಧ್ಯವಿಲ್ಲ.
    ಅವನ ಐಶ್ವರ್ಯವು ಶಾಶ್ವತವಲ್ಲ;
    ಅವನ ಆಸ್ತಿಗಳು ದೇಶದಲ್ಲಿ ವೃದ್ಧಿಯಾಗುವುದಿಲ್ಲ.
30 ದುಷ್ಟನು ಕತ್ತಲೆಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ.
    ಬೆಂಕಿಯಿಂದ ಸುಟ್ಟುಹೋದ ಕೊಂಬೆಗಳನ್ನು ಹೊಂದಿರುವ ಮರದಂತೆ ಅವನಿರುವನು.
    ದೇವರ ಉಸಿರು ದುಷ್ಟನನ್ನು ಬಡಿದುಕೊಂಡು ಹೋಗುವುದು.
31 ದುಷ್ಟನು ಅಯೋಗ್ಯವಾದವುಗಳ ಮೇಲೆ ನಂಬಿಕೆಯಿಟ್ಟು, ತನ್ನನ್ನು ತಾನೇ ಮೋಸಮಾಡಿಕೊಳ್ಳದಿರಲಿ.
    ಯಾಕೆಂದರೆ ಅದಕ್ಕೆ ಪ್ರತಿಫಲವಾಗಿ ಅವನಿಗೇನೂ ದೊರೆಯುವುದಿಲ್ಲ.
32 ದುಷ್ಟನು ತನ್ನ ಜೀವಿತ ಮುಗಿಯುವುದಕ್ಕಿಂತ ಮೊದಲೇ ಮುದುಕನಾಗುವನು;
    ಒಣಗಿಹೋಗಿ ಇನ್ನೆಂದಿಗೂ ಹಸುರಾಗದ ಬಳ್ಳಿಯಂತಾಗುವನು;
33 ಮಾಗುವುದಕ್ಕಿಂತ ಮೊದಲೇ ತನ್ನ ದ್ರಾಕ್ಷಿಯನ್ನು ಕಳೆದುಕೊಳ್ಳುವ ದ್ರಾಕ್ಷಿಬಳ್ಳಿಯಂತಿರುವನು;
    ಹೂವುಗಳು ಉದುರಿಹೋದ ಆಲಿವ್ ಮರದಂತಿರುವನು.
34 ಯಾಕೆಂದರೆ ದೇವರಿಲ್ಲದ ಜನರು ಫಲ ಕೊಡಲಾರರು.
    ಲಂಚಕೋರರ ಗುಡಾರಗಳು ಬೆಂಕಿಯಿಂದ ಸುಟ್ಟುಹೋಗುತ್ತವೆ.
35 ಅವರು ಗರ್ಭಧರಿಸಿ ಕೆಡುಕನ್ನೇ ಹೆರುವರು.
    ಅವರ ಗರ್ಭದಲ್ಲಿರುವ ಮಗುವು ಮೋಸಕರವಾದದ್ದು.”

ಎಲೀಫಜನಿಗೆ ಯೋಬನ ಉತ್ತರ

16 ಆಗ ಯೋಬನು ಹೀಗೆ ಉತ್ತರಿಸಿದನು:

“ನಾನು ಈ ಸಂಗತಿಗಳನ್ನು ಮೊದಲೇ ಕೇಳಿದ್ದೇನೆ,
    ನೀವೆಲ್ಲರೂ ಕೀಟಲೆ ಮಾಡುವವರೇ ಹೊರತು ಸಂತೈಸುವವರಲ್ಲ.
ನಿಮ್ಮ ಒಣಮಾತುಗಳಿಗೆ ಕೊನೆಯಿಲ್ಲವೇ?
    ನೀವು ವಾದ ಮಾಡುತ್ತಲೇ ಇರುವುದೇಕೆ?
ನಿಮಗೆ ನನ್ನ ಸ್ಥಿತಿಯು ಬಂದಿದ್ದರೆ
    ನೀವು ಹೇಳಿದ್ದನ್ನೇ ನಾನು ಹೇಳಬಹುದಾಗಿತ್ತು.
ನಿಮಗೆ ವಿರುದ್ಧವಾಗಿ ಜ್ಞಾನದ ಮಾತುಗಳನ್ನು ಹೇಳಿ
    ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
ಆದರೆ ನಾನು ನಿಮ್ಮನ್ನು ನನ್ನ ಮಾತುಗಳಿಂದ ಪ್ರೋತ್ಸಾಹಿಸಿ
    ನಿಮ್ಮಲ್ಲಿ ನಿರೀಕ್ಷೆಯನ್ನು ಹುಟ್ಟಿಸಬಹುದಾಗಿತ್ತು.

“ಆದರೆ ನನ್ನ ಯಾವ ಮಾತೂ ನನ್ನ ನೋವನ್ನು ನಿವಾರಣೆ ಮಾಡಲಾರದು;
    ಮೌನವಾಗಿದ್ದರೂ ಅದರಿಂದ ಪ್ರಯೋಜನವೇನೂ ಇಲ್ಲ.
ದೇವರೇ, ನೀನು ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿರುವೆ.
    ನನ್ನ ಇಡೀ ಕುಟುಂಬವನ್ನು ನಾಶ ಮಾಡಿರುವೆ.
ನೀನು ನನ್ನನ್ನು ಮುದುಡಿಹಾಕಿರುವುದು ಎಲ್ಲರಿಗೂ ಕಾಣುತ್ತಿದೆ, ನನ್ನ ದೇಹ ರೋಗಗ್ರಸ್ತವಾಗಿದೆ;
    ನಾನು ವಿಕಾರವಾಗಿ ಕಾಣುತ್ತಿರುವೆ; ಜನರು ನನ್ನನ್ನು ಅಪರಾಧಿಯೆಂದು ಭಾವಿಸಿಕೊಂಡಿದ್ದಾರೆ.

“ದೇವರು ಕೋಪದಿಂದ
    ನನ್ನ ದೇಹವನ್ನು ಸೀಳಿಹಾಕುತ್ತಿದ್ದಾನೆ.
ಆತನು ನನ್ನ ಮೇಲೆ ಹಲ್ಲು ಕಡಿಯುತ್ತಿದ್ದಾನೆ;
    ನನ್ನ ಶತ್ರುವು ದ್ವೇಷದಿಂದ ನನ್ನನ್ನು ನೋಡುತ್ತಿದ್ದಾನೆ.
10 ಜನರು ನನ್ನ ಸುತ್ತಲೂ ಗುಂಪುಕೂಡಿದ್ದಾರೆ;
    ಅವರು ನನ್ನ ಮುಖಕ್ಕೆ ಹೊಡೆದು ಗೇಲಿ ಮಾಡುತ್ತಿದ್ದಾರೆ.
11 ದೇವರು ನನ್ನನ್ನು ದುಷ್ಟರಿಗೆ ಕೊಟ್ಟುಬಿಟ್ಟಿದ್ದಾನೆ.
    ನನಗೆ ಕೇಡುಮಾಡಲು ಕೆಡುಕರಿಗೆ ಬಿಟ್ಟುಕೊಟ್ಟಿದ್ದಾನೆ.
12 ನಾನು ಸುಖದಿಂದಿದ್ದಾಗ
    ದೇವರು ನನ್ನನ್ನು ಜಜ್ಜಿಹಾಕಿದನು;
ನನ್ನ ಕತ್ತು ಹಿಡಿದು
    ನನ್ನನ್ನು ಚೂರುಚೂರು ಮಾಡಿದನು!
ದೇವರು ನನ್ನನ್ನು ತನ್ನ ಗುರಿ ಅಭ್ಯಾಸಕ್ಕಾಗಿ ಉಪಯೋಗಿಸುತ್ತಿದ್ದಾನೆ.
13     ಆತನ ಬಿಲ್ಲುಗಾರರು ನನ್ನ ಸುತ್ತಲೆಲ್ಲಾ ಇದ್ದಾರೆ.
ಆತನು ನಿಷ್ಕರುಣೆಯಿಂದ ನನ್ನ ಅಂತರಂಗಗಳಿಗೆ ಬಾಣವನ್ನು ಎಸೆಯುತ್ತಾನೆ;
    ನೆಲದ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
14 ನನ್ನ ಮೇಲೆ ಎಡಬಿಡದೆ ಆಕ್ರಮಣ ಮಾಡಿ
    ಯುದ್ಧ ವೀರನಂತೆ ನನ್ನ ಮೇಲೆ ಓಡಿಬರುವನು.

15 “ನಾನು ಬಹು ದುಃಖಿತನಾಗಿದ್ದೇನೆ;
    ಗೋಣಿತಟ್ಟನ್ನು ಸುತ್ತಿಕೊಂಡಿದ್ದೇನೆ;
ಸೋತುಹೋದೆನೆಂದು ಧೂಳಿನಲ್ಲಿಯೂ
    ಬೂದಿಯಲ್ಲಿಯೂ ಕುಳಿತುಕೊಂಡಿದ್ದೇನೆ.
16 ಅತ್ತತ್ತು ನನ್ನ ಮುಖವು ಕೆಂಪಾಗಿದೆ,
    ನನ್ನ ಕಣ್ಣುಗಳ ಸುತ್ತಲೂ ಸುಕ್ಕುಗಟ್ಟಿ ಕಡುಕಪ್ಪಾಗಿದೆ.
17 ನಾನು ಯಾರೊಡನೆಯೂ ಕ್ರೂರವಾಗಿ ವರ್ತಿಸಲಿಲ್ಲ.
    ನನ್ನ ವಿಜ್ಞಾಪನೆಯು ನಿರ್ಮಲವಾಗಿತ್ತು.

18 “ಭೂಮಿಯೇ, ನನಗಾಗಿರುವ ಕೆಡುಕುಗಳನ್ನು ಮರೆಮಾಡಬೇಡ.
    ನ್ಯಾಯಕ್ಕಾಗಿ ನಾನಿಡುವ ಮೊರೆ ನಿಂತುಹೋಗಲು ಅವಕಾಶ ಕೊಡಬೇಡ.
19 ಈಗಲೂ ಸಹ, ನನಗೆ ಸಾಕ್ಷಿ ನೀಡುವಾತನು ಪರಲೋಕದಲ್ಲಿದ್ದಾನೆ.
    ನನಗೆ ಬೆಂಬಲ ನೀಡುವಾತನು ಮೇಲೋಕದಲ್ಲಿದ್ದಾನೆ.
20 ನನ್ನ ಕಣ್ಣೀರೇ ನನ್ನ ಪ್ರತಿನಿಧಿಯಾಗಿದೆ.
    ನನ್ನ ಕಣ್ಣು ದೇವರ ಉತ್ತರಕ್ಕಾಗಿ ಆಕಾಂಕ್ಷೆಯಿಂದ ಎದುರುನೋಡುತ್ತಿದೆ.
21 ಒಬ್ಬನು ತನ್ನ ಸ್ನೇಹಿತನಿಗಾಗಿ ಬೇಡಿಕೊಳ್ಳುವಂತೆ
    ನನ್ನ ಕಣ್ಣೀರು ನನ್ನ ಪರವಾಗಿ ದೇವರ ಮುಂದೆ ವಾದ ಮಾಡುತ್ತದೆ.

22 “ಯಾಕೆಂದರೆ ನಾನು ಮರಳಿ ಬರಲಾಗದ ಸ್ಥಳಕ್ಕೆ
    ಇನ್ನು ಕೆಲವೇ ವರ್ಷಗಳಲ್ಲಿ ಹೊರಟುಹೋಗುವೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International