Beginning
ಯೆಹೂದದ ಅರಸನಾದ ಅಮಚ್ಯ
25 ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್. ಆಕೆ ಜೆರುಸಲೇಮಿನವಳು. 2 ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ಅಮಚ್ಯನು ಮಾಡಿದರೂ ಹೃದಯ ಪೂರ್ವಕವಾಗಿ ಮಾಡಲಿಲ್ಲ. 3 ಅಮಚ್ಯನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡ ನಂತರ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು. 4 ಆದರೆ ಆ ಸೇವಕರ ಮಕ್ಕಳನ್ನು ಕೊಲ್ಲಿಸಲಿಲ್ಲ. ಯಾಕೆಂದರೆ ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು; ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಅವರ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣಶಿಕ್ಷೆಯಾಗಬೇಕು.
5 ಅಮಚ್ಯನು ಯೆಹೂದ ಪ್ರಾಂತ್ಯದ ಜನರನ್ನು ಒಟ್ಟುಗೂಡಿಸಿ ಅವರನ್ನು ಕುಟುಂಬಗಳಿಗನುಸಾರವಾಗಿ ವಿಭಾಗ ಮಾಡಿದನು. ಈ ಗುಂಪುಗಳಿಗೆ ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ಇವರು ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಗಳಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೈನಿಕರನ್ನಾಗಿ ಆರಿಸಿದರು. ಒಟ್ಟು ಮೂರು ಲಕ್ಷ ಸೈನಿಕರು ಬರ್ಜಿ ಗುರಾಣಿಗಳೊಂದಿಗೆ ಯುದ್ಧ ಮಾಡಲು ನುರಿತರಾಗಿದ್ದರು. 6 ಅಮಚ್ಯನು ಒಂದು ಲಕ್ಷ ಸೈನಿಕರನ್ನು ಇಸ್ರೇಲಿನಿಂದ ತರಿಸಿಕೊಂಡನು. ಅವರಿಗೆ ಮೂರು ಮುಕ್ಕಾಲು ಟನ್ ಬೆಳ್ಳಿಯನ್ನು ಸಂಬಳ ರೂಪದಲ್ಲಿ ಕೊಟ್ಟನು. 7 ಆದರೆ ಒಬ್ಬ ದೇವರ ಮನುಷ್ಯನು ಅಮಚ್ಯನ ಬಳಿಗೆ ಬಂದು, “ಅರಸನೇ, ಇಸ್ರೇಲಿನ ಸೈನಿಕರು ನಿನ್ನೊಂದಿಗೆ ಯುದ್ಧಕ್ಕೆ ಹೋಗಲು ಬಿಡಬೇಡ. ಯೆಹೋವನು ಇಸ್ರೇಲರೊಂದಿಗೂ ಎಫ್ರಾಯೀಮಿನ ಜನರೊಂದಿಗೂ ಇರಲಿಲ್ಲ. 8 ನೀನು ನಿನ್ನನ್ನು ಬಲಿಷ್ಠನನ್ನಾಗಿ ಮಾಡಿಕೊಂಡಿದ್ದರೂ ನಿನ್ನ ಸೋಲು ಮತ್ತು ನಿನ್ನ ಜಯ ದೇವರ ಕೈಯಲ್ಲಿವೆ” ಎಂದು ಹೇಳಿದನು. 9 ಅಮಚ್ಯನು ಆ ದೇವರ ಮನುಷ್ಯನಿಗೆ, “ಹಾಗಾದರೆ, ನಾನು ಈಗಾಗಲೇ ಅವರಿಗೆ ಕೊಟ್ಟಿರುವ ಹಣಕ್ಕೇನು ಮಾಡಲಿ?” ಎಂದು ಕೇಳಿದನು. ದೇವರ ಮನುಷ್ಯನು ಉತ್ತರಿಸಿದ್ದೇನೆಂದರೆ, “ಯೆಹೋವನ ಬಳಿಯಲ್ಲಿ ಯಾವ ಕೊರತೆಯೂ ಇಲ್ಲ. ನಿನಗೆ ಅದಕ್ಕಿಂತ ಅಧಿಕವಾಗಿ ಕೊಡಲು ಆತನು ಶಕ್ತನಾಗಿದ್ದಾನೆ” ಎಂದು ಹೇಳಿದನು.
10 ಅಮಚ್ಯನು ಇಸ್ರೇಲಿನ ಸೈನಿಕರನ್ನು ಎಫ್ರಾಯೀಮ್ ಪ್ರಾಂತ್ಯಕ್ಕೆ ಕಳುಹಿಸಿದನು. ಅವರು ಯೆಹೂದದ ಅರಸನ ಮೇಲೆಯೂ ಜನರ ಮೇಲೆಯೂ ಸಿಟ್ಟುಗೊಂಡು ಕೋಪದಿಂದಲೇ ತಮ್ಮ ಮನೆಗಳಿಗೆ ಹಿಂತೆರಳಿದರು.
11 ಅಮಚ್ಯನು ಧೈರ್ಯಗೊಂಡು ತನ್ನ ಸೈನ್ಯವನ್ನು ಎದೋಮ್ ರಾಜ್ಯದ ಉಪ್ಪಿನ ಕಣಿವೆಗೆ ನಡಿಸಿದನು. ಆ ಸ್ಥಳದಲ್ಲಿ ಅವನ ಸೈನಿಕರು ಸೇಯೀರಿನ ಹತ್ತು ಸಾವಿರ ಮಂದಿಯನ್ನು ಕೊಂದರು. 12 ಯೆಹೂದದ ಸೈನಿಕರು ಸೇಯೀರಿನ ಹತ್ತುಸಾವಿರ ಮಂದಿಯನ್ನು ಸೆರೆಹಿಡಿದರು. ಅವರನ್ನು ಒಂದು ಕಡಿದಾದ ಬೆಟ್ಟದ ಬದಿಗೊಯ್ದು ಅಲ್ಲಿಂದ ಅವರನ್ನು ಕೆಳಕ್ಕೆ ದೂಡಿದರು. ಅವರು ಕೆಳಗೆ ಬಂಡೆಗೆ ಅಪ್ಪಳಿಸಿದಾಗ ಅವರ ದೇಹಗಳು ಚೂರುಚೂರಾದವು.
13 ಅದೇ ಸಮಯದಲ್ಲಿ, ಇಸ್ರೇಲರ ಸೈನ್ಯವು ಯೆಹೂದದ ಕೆಲವು ಪಟ್ಟಣಗಳ ಮೇಲೆ ಧಾಳಿಮಾಡಿತು. ಅವರು ಬೇತ್ಹೋರೋನಿನಿಂದ ಹಿಡಿದು ಸಮಾರ್ಯದವರೆಗೆ ಇರುವ ಪಟ್ಟಣಗಳ ಮೇಲೆ ಧಾಳಿ ಮಾಡಿದರು. ಅವರು ಮೂರು ಸಾವಿರ ಜನರನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಅಮಚ್ಯನು ತನ್ನೊಂದಿಗೆ ಯುದ್ಧಕ್ಕೆ ಸೇರಿಸಿಕೊಳ್ಳದೆ ಇದ್ದದರಿಂದ ಆ ಸೈನಿಕರು ಕೋಪಗೊಂಡಿದ್ದರು.
14 ಎದೋಮ್ಯರನ್ನು ಸೋಲಿಸಿ ಅಮಚ್ಯನು ಮನೆಗೆ ಹಿಂದಿರುಗಿ ಬಂದನು. ಸೇಯೀರಿನ ಜನರು ಪೂಜಿಸುತ್ತಿದ್ದ ವಿಗ್ರಹಗಳನ್ನು ತನ್ನೊಂದಿಗೆ ತಂದನು. ಅವನು ಅವುಗಳನ್ನು ಪೂಜಿಸತೊಡಗಿ ಅಡ್ಡಬಿದ್ದು ಧೂಪ ಹಾಕಿದನು. 15 ಯೆಹೋವನು ಅಮಚ್ಯನ ಮೇಲೆ ಸಿಟ್ಟುಗೊಂಡನು. ಅವನ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ಅಮಚ್ಯನೇ, ಆ ಜನರು ಪೂಜಿಸುವ ವಿಗ್ರಹಗಳಿಗೇಕೆ ನೀನು ಪೂಜೆ ಮಾಡುವೆ? ತಮ್ಮನ್ನು ಪೂಜಿಸುವವರನ್ನು ಆ ದೇವರುಗಳು ನಿನ್ನಿಂದ ಕಾಪಾಡಲಾರದೆ ಹೋದವು” ಎಂದು ಹೇಳಿದನು.
16 ಆ ಪ್ರವಾದಿಯು ಈ ಮಾತುಗಳನ್ನು ಹೇಳಿದಾಗ ಅಮಚ್ಯನು, “ನಾವು ನಿನ್ನನ್ನು ಅರಸನ ಸಲಹೆಗಾರನನ್ನಾಗಿ ಮಾಡಲಿಲ್ಲವಲ್ಲಾ. ಆದ್ದರಿಂದ ಬಾಯಿಮುಚ್ಚಿಕೊಂಡು ಸುಮ್ಮನಿರು. ಇಲ್ಲದಿದ್ದರೆ ನೀನು ಸಾಯುವೆ” ಅಂದನು. ಆದರೆ ಅವನು, “ದೇವರು ನಿನ್ನನ್ನು ನಾಶಮಾಡಲು ನಿರ್ಧರಿಸಿದ್ದಾನೆ; ಯಾಕೆಂದರೆ ನೀನು ನನ್ನ ಸಲಹೆಯನ್ನು ಕೇಳದೆ ದುಷ್ಟತನ ಮಾಡುತ್ತಿರುವೆ?” ಎಂದು ಹೇಳಿದನು.
17 ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, “ನಾವು ಮುಖಾಮುಖಿಯಾಗಿ ಸಂಧಿಸೋಣ” ಎಂಬ ಸಂದೇಶವನ್ನು ಕಳುಹಿಸಿದನು.
18 ಯೋವಾಷನು ಇಸ್ರೇಲಿನ ಅರಸನಾಗಿದ್ದನು. ಅವನು, “ಲೆಬನೋನಿನ ಒಂದು ಚಿಕ್ಕ ಮುಳ್ಳುಗಿಡವು ಲೆಬನೋನಿನ ದೇವದಾರು ಮರಕ್ಕೆ ಸಂದೇಶವನ್ನು ಕಳುಹಿಸಿತು. ಮುಳ್ಳುಗಿಡವು ಹೀಗೆ ಹೇಳಿತು: ‘ನಿನ್ನ ಮಗಳು ನನ್ನ ಮಗನನ್ನು ಮದುವೆ ಮಾಡಿಕೊಳ್ಳಲಿ.’ ಆದರೆ ಒಂದು ಕಾಡುಮೃಗ ಬಂದು ಮುಳ್ಳುಗಿಡವನ್ನು ತುಳಿದು ನಾಶಮಾಡಿತು. 19 ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಎದೋಮನನ್ನು ಸೋಲಿಸಿದ್ದೇನೆ’ ಎಂದು ನೆನಸಿಕೊಂಡಿರಬಹುದು. ನೀನು ತುಂಬಾ ಹೆಮ್ಮೆಯುಳ್ಳವನಾಗಿ ಜಂಬ ಕೊಚ್ಚಿಕೊಳ್ಳುತ್ತಿರುವೆ. ಆದರೆ ನೀನು ಮನೆಯಲ್ಲಿಯೇ ಕುಳಿತುಕೊಳ್ಳುವುದು ಒಳ್ಳೆದು. ಸುಮ್ಮನೆ ತೊಂದರೆಗೆ ಸಿಕ್ಕಿಕೊಳ್ಳಬೇಡ. ನನ್ನೊಂದಿಗೆ ಯುದ್ಧ ಮಾಡಿದರೆ ಇಡೀ ಯೆಹೂದ ದೇಶವೇ ನಾಶವಾಗುವದು.” ಎಂದು ಬರೆದು ಕಳುಹಿಸಿದನು.
20 ಅಮಚ್ಯನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ. ಇದು ದೇವರಿಂದಲೇ ಆಯಿತು. ಇಸ್ರೇಲ್ ಯೆಹೂದವನ್ನು ಸೋಲಿಸಬೇಕೆಂದು ದೇವರ ಇಚ್ಛೆಯಾಗಿತ್ತು. ಯಾಕೆಂದರೆ ಯೆಹೂದದ ಜನರು ಎದೋಮ್ಯರ ದೇವರುಗಳನ್ನು ಆರಾಧಿಸುತ್ತಿದ್ದರು. 21 ಹೀಗೆ ಯೆಹೂದದ ಅರಸನಾದ ಅಮಚ್ಯನು ಇಸ್ರೇಲರ ಅರಸನನ್ನು ಮುಖಾಮುಖಿಯಾಗಿ ಬೇತ್ಷೆಮೆಷಿನಲ್ಲಿ ಸಂಧಿಸಿದನು. ಬೇತ್ಷೆಮೆಷ್ ಯೆಹೂದ ರಾಜ್ಯದ ಪಟ್ಟಣ. 22 ಇಸ್ರೇಲ್ ಯೆಹೂದವನ್ನು ಸೋಲಿಸಿಬಿಟ್ಟಿತು. ಯೆಹೂದದ ಸೈನಿಕರೆಲ್ಲಾ ತಮ್ಮತಮ್ಮ ಮನೆಗಳಿಗೆ ಓಡಿಹೋದರು. 23 ಯೋವಾಷನು ಬೇತ್ಷೆಮೆಷಿನಲ್ಲಿ ಅಮಚ್ಯನನ್ನು ಹಿಡಿದು ಜೆರುಸಲೇಮಿಗೆ ಕೊಂಡೊಯ್ದನು. ಅಮಚ್ಯನ ತಂದೆ ಯೆಹೋವಾಷನು. ಇವನು ಯೆಹೋವಹಾಜನ ಮಗ. ಯೋವಾಷನು ಜೆರುಸಲೇಮಿನ ಪೌಳಿಗೋಡೆಯಲ್ಲಿ ಆರುನೂರು ಅಡಿ ಗೋಡೆಯನ್ನು ಅಂದರೆ ಎಫ್ರಾಯೀಮ್ ಬಾಗಿಲಿನಿಂದ ಹಿಡಿದು ಮೂಲೆಬಾಗಿಲಿನವರೆಗೆ ಗೋಡೆಯನ್ನು ಕೆಡವಿಹಾಕಿದನು. 24 ದೇವಾಲಯದೊಳಗೆ ಬೆಳ್ಳಿಬಂಗಾರಗಳು ಮತ್ತು ಬೆಲೆಯುಳ್ಳ ವಸ್ತುಗಳಿದ್ದವು. ಓಬೇದೆದೋಮನು ಅವುಗಳ ಮೇಲ್ವಿಚಾರಕನಾಗಿದ್ದನು. ಯೋವಾಷಾನು ಅವೆಲ್ಲವನ್ನೂ ಅರಮನೆಯಲ್ಲಿದ್ದ ನಿಕ್ಷೇಪವನ್ನೂ ಸೂರೆಮಾಡಿ ಕೆಲಜನರನ್ನು ಸೆರೆಹಿಡಿದು ಎಲ್ಲವನ್ನು ಸಮಾರ್ಯಕ್ಕೊಯ್ದನು.
25 ಇಸ್ರೇಲಿನ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತಮೇಲೆ ಅಮಚ್ಯನು ಹದಿನೈದು ವರ್ಷ ಜೀವಿಸಿದನು. ಅಮಚ್ಯನ ತಂದೆಯ ಹೆಸರು ಯೆಹೋವಾಷ; ಅವನು ಯೆಹೂದದ ಅರಸನಾಗಿದ್ದನು. 26 ಅಮಚ್ಯನ ಬೇರೆ ಕಾರ್ಯಗಳು ಅಂದರೆ ಆರಂಭದಿಂದ ಕೊನೆಯವರೆಗಿನ ಕಾರ್ಯಗಳನ್ನು ಯೆಹೂದದ ಮತ್ತು ಇಸ್ರೇಲಿನ ರಾಜರ ಗ್ರಂಥದಲ್ಲಿ ಬರೆಯಲಾಗಿದೆ. 27 ಅಮಚ್ಯನು ದೇವರಾದ ಯೆಹೋವನನ್ನು ಆರಾಧಿಸುವದನ್ನು ಬಿಟ್ಟದ್ದಕ್ಕಾಗಿ ಜೆರುಸಲೇಮಿನ ಜನರು ಅವನನ್ನು ಕೊಲ್ಲಲು ಸಂಚುಮಾಡಿದರು. ಆಗ ಅವನು ಲಾಕೀಷಿಗೆ ಓಡಿಹೋದನು. ಆದರೆ ಜನರು ಕೆಲವರನ್ನು ಕಳುಹಿಸಿ ಅಲ್ಲಿಯೇ ಅವನನ್ನು ಕೊಲ್ಲಿಸಿದರು. 28 ಅವನ ಜನರು ಆ ಶವವನ್ನು ಕುದುರೆಯ ಬೆನ್ನಿನ ಮೇಲೆ ಹೊರಿಸಿ ತಂದು ಯೆಹೂದದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.
ಯೆಹೂದದ ಅರಸನಾದ ಉಜ್ಜೀಯ
26 ಆ ಬಳಿಕ ಯೆಹೂದದ ಜನರು ಅಮಚ್ಯನ ಮಗನಾದ ಉಜ್ಜೀಯನನ್ನು ತಮ್ಮ ಅರಸನನ್ನಾಗಿ ಆರಿಸಿಕೊಂಡರು. ಆಗ ಅವನಿಗೆ ಹದಿನಾರು ವರ್ಷ. 2 ಉಜ್ಜೀಯನು ಏಲೋತ್ ಪಟ್ಟಣವನ್ನು ಮತ್ತೆ ಕಟ್ಟಿಸಿ ಯೆಹೂದ ರಾಜ್ಯಕ್ಕೆ ಸೇರಿಸಿದನು. ಅಮಚ್ಯನು ಸತ್ತಾಗ ಉಜ್ಜೀಯನು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದನು.
3 ಉಜ್ಜೀಯನು ಪಟ್ಟಕ್ಕೆ ಬಂದಾಗ ಹದಿನಾರು ವರ್ಷದವನಾಗಿದ್ದನು. ಅವನು ಐವತ್ತೆರಡು ವರ್ಷ ಕಾಲ ಜೆರುಸಲೇಮಿನಲ್ಲಿ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಕೊಲ್ಯ. ಆಕೆ ಜೆರುಸಲೇಮಿನವಳು. 4 ಉಜ್ಜೀಯನು ತನ್ನ ತಂದೆಯಾದ ಅಮಚ್ಯನಂತೆ ದೇವರ ಮುಂದೆ ಯೋಗ್ಯನಾಗಿ ನಡೆದುಕೊಂಡನು. 5 ಜೆಕರ್ಯನು ಜೀವಿಸುತ್ತಿದ್ದಾಗ ಉಜ್ಜೀಯನು ದೇವರನ್ನು ಅನುಸರಿಸಿದನು. ಅವನು ಉಜ್ಜೀಯನಿಗೆ ದೇವರಿಗೆ ಹೇಗೆ ಭಯಪಡಬೇಕು, ದೇವರನ್ನು ಹೇಗೆ ಗೌರವಿಸಬೇಕೆಂದು ಕಲಿಸಿಕೊಟ್ಟನು. ಉಜ್ಜೀಯನು ದೇವರಿಗೆ ವಿಧೇಯನಾಗಿ ಬಾಳಿದಾಗ ಯೆಹೋವ ದೇವರು ಅವನಿಗೆ ಯಶಸ್ಸನ್ನು ದಯಪಾಲಿಸಿದನು.
6 ಉಜ್ಜೀಯನು ಫಿಲಿಷ್ಟಿಯರೊಂದಿಗೆ ಯುದ್ಧಮಾಡಿ ಅವರ ಪಟ್ಟಣಗಳಾದ ಗತ್, ಯೆಬ್ನೆ ಮತ್ತು ಅಷ್ಡೋದ್‌ಗಳ ಪೌಳಿಗೋಡೆಗಳನ್ನು ಕೆಡವಿಹಾಕಿದನು. ಅವನು ಅಷ್ಡೋದಿನ ಮತ್ತು ಇತರ ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. 7 ಫಿಲಿಷ್ಟಿಯರೊಂದಿಗೂ ಗೂರ್‌ಬಾಳಿನಲ್ಲಿ ವಾಸಿಸುತ್ತಿದ್ದ ಅರಬಿಯರೊಂದಿಗೂ ಹಾಗೂ ಮೆಗೂನ್ಯರೊಡನೆಯೂ ಯುದ್ಧಮಾಡಲು ದೇವರು ಅವನಿಗೆ ಸಹಾಯ ಮಾಡಿದನು. 8 ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪಕಾಣಿಕೆಯನ್ನು ತಂದುಕೊಟ್ಟರು. ಉಜ್ಜೀಯನು ಬಲಿಷ್ಠನಾಗಿದ್ದುದರಿಂದ ಅವನ ಹೆಸರು ಎಲ್ಲಾ ಕಡೆಗಳಲ್ಲಿ ಈಜಿಪ್ಟಿನ ಮೇರೆಯ ತನಕ ಪ್ರಸಿದ್ಧಿ ಹೊಂದಿತು.
9 ಉಜ್ಜೀಯನು ಜೆರುಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನಬಾಗಿಲು ಮತ್ತು ಪೌಳಿಗೋಡೆ ತಿರುಗುವ ಭಾಗ ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿದನು. 10 ಮರುಭೂಮಿಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು; ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ಬಯಲಿನಲ್ಲಿಯೂ ಬೆಟ್ಟಪ್ರದೇಶಗಳಲ್ಲಿಯೂ ಅಸಂಖ್ಯಾತ ಪಶುಗಳಿದ್ದವು. ಪರ್ವತ ಪ್ರಾಂತ್ಯಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಹುಲುಸಾದ ಬೆಳೆಯನ್ನು ಬೆಳೆಯಿಸಿದನು. ಬಯಲುಗಳಲ್ಲಿ ಕೆಲಸಮಾಡಲು ಅವನು ರೈತರನ್ನು ಕೂಲಿಗೆ ನೇಮಿಸಿಕೊಂಡನು; ಬೆಟ್ಟಗಳಲ್ಲಿಯೂ ಕಾರ್ಮೆಲಿನಲ್ಲಿಯೂ ಇದ್ದ ತನ್ನ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ಕೆಲಸಗಾರರನ್ನು ಕೂಲಿಗೆ ತೆಗೆದುಕೊಂಡನು.
11 ಉಜ್ಜೀಯನ ಬಳಿ ಒಳ್ಳೆಯ ತರಬೇತಿ ಹೊಂದಿದ ಸೈನ್ಯವಿತ್ತು. ಕಾರ್ಯದರ್ಶಿಯಾದ ಯೆಗೀಯೇಲ್ ಮತ್ತು ಅಧಿಕಾರಿಯಾದ ಮಾಸೇಯರು ಅವರನ್ನು ಗುಂಪುಗುಂಪಾಗಿ ವಿಂಗಡಿಸಿದರು. ಹನನ್ಯನು ರಾಜನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. 12 ಸೈನ್ಯಕ್ಕೆ ಒಟ್ಟು ಎರಡು ಸಾವಿರದ ಆರುನೂರು ಮಂದಿ ಸೇನಾಪತಿಗಳಿದ್ದರು. 13 ಅವರು ಕುಟುಂಬದ ನಾಯಕರಾಗಿದ್ದು ಅವರ ಅಧೀನದಲ್ಲಿ ಯುದ್ಧವೀರರಾದ ಮೂರು ಲಕ್ಷದ ಏಳು ಸಾವಿರದ ಐನೂರು ಸೈನಿಕರಿದ್ದರು. ಇವರು ವೈರಿಯೊಂದಿಗೆ ಕಾದಾಡಿ ಅರಸನಿಗೆ ಜಯಗಳಿಸಿದರು. 14 ಉಜ್ಜೀಯನು ಸೈನಿಕರಿಗೆ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು ಮತ್ತು ಕವಣೆಗೆ ಕಲ್ಲುಗಳನ್ನು ಒದಗಿಸಿದನು. 15 ಜೆರುಸಲೇಮಿನಲ್ಲಿ ವಿಜ್ಞಾನಿಗಳು ರೂಪಿಸಿದ ಯಂತ್ರಗಳನ್ನು ಉಜ್ಜೀಯನು ತಯಾರಿಸಿದನು. ಇವುಗಳನ್ನು ಪೌಳಿಗೋಡೆಯ ಮೇಲೆ ಇರಿಸಿದನು. ಇವು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ವೈರಿಗಳ ಮೇಲೆ ಹಾರಿಸಬಲ್ಲವಾಗಿದ್ದವು. ಉಜ್ಜೀಯನು ತುಂಬಾ ಪ್ರಸಿದ್ಧಿ ಹೊಂದಿದ್ದನು. ಬಹುದೂರದ ತನಕ ಅವನ ಹೆಸರು ಹಬ್ಬಿತು. ಅವನು ದೇವರ ವಿಶೇಷ ಸಹಾಯ ಪಡೆದುಕೊಂಡು ಬಲಿಷ್ಠನಾದನು.
16 ಬಲಶಾಲಿಯಾದ ಉಜ್ಜೀಯನಲ್ಲಿ ನಾಶಕರವಾದ ಗರ್ವವು ಸೇರಿತು. ಅವನು ತನ್ನ ದೇವರಾದ ಯೆಹೋವನಿಗೆ ದ್ರೋಹ ಮಾಡಿದನು. ಅವನು ದೇವಾಲಯದೊಳಗೆ ಧೂಪವೇದಿಕೆಯಲ್ಲಿ ತಾನೇ ಧೂಪವನ್ನು ಹಾಕಲು ಹೋದನು. 17 ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಸೇವೆಮಾಡುವ ಯಾಜಕರೂ ಉಜ್ಜೀಯನಿಗೆ, 18 “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕುವದು ನಿನ್ನ ಕೆಲಸವಲ್ಲ. ನೀನು ಹೀಗೆ ಮಾಡುವದು ಸರಿಯಲ್ಲ. ಆರೋನನ ಸಂತತಿಯವರಾದ ಯಾಜಕರೇ ಧೂಪ ಹಾಕಬೇಕಾದದ್ದು. ಅವರು ಪವಿತ್ರ ಸೇವೆಗೆ ನೇಮಿಸಲ್ಪಟ್ಟಿದ್ದಾರೆ. ನೀನು ಈ ಮಹಾ ಪವಿತ್ರಸ್ಥಾನದಿಂದ ಹೊರಗೆ ಹೋಗು. ನೀನು ದೇವರಾದ ಯೆಹೋವನಿಗೆ ವಿಧೇಯನಾಗಿಲ್ಲ. ಈ ಕಾರ್ಯವನ್ನು ಮಾಡಿದ್ದರಿಂದ ದೇವರು ನಿನ್ನನ್ನು ಮೆಚ್ಚುವದಿಲ್ಲ” ಎಂದು ಹೇಳಿದರು.
19 ಇದನ್ನು ಕೇಳಿ ಉಜ್ಜೀಯನು ಕೋಪಗೊಂಡನು. ಅವನು ಧೂಪ ಹಾಕಲು ಧೂಪಾರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಅವನು ಯಾಜಕರ ಮೇಲೆ ಕೋಪಿಸಿಕೊಂಡಾಗ ಕುಷ್ಠರೋಗವು ಅವನ ಹಣೆಯಲ್ಲಿ ಕಾಣಿಸಿಕೊಂಡಿತು. ಇದು ಯಾಜಕರ ಮುಂದೆ ದೇವಾಲಯದೊಳಗೆ ಧೂಪವೇದಿಕೆಯ ಬಳಿಯಲ್ಲೇ ಆಯಿತು. 20 ಮಹಾಯಾಜಕನಾದ ಅಜರ್ಯನೂ ಇತರ ಯಾಜಕರೂ ಉಜ್ಜೀಯನನ್ನು ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಾಣಿಸಿದ್ದರಿಂದ ಅವನನ್ನು ಕೂಡಲೇ ದೇವಾಲಯದಿಂದ ಹೊರಕ್ಕೆ ಹಾಕಿದರು. ಯೆಹೋವನು ಅವನನ್ನು ಶಿಕ್ಷಿಸಿದುದರಿಂದ ಉಜ್ಜೀಯನು ತಾನಾಗಿಯೇ ದೇವಾಲಯದೊಳಗಿಂದ ಅವಸರದಿಂದ ಹೊರಬಂದನು. 21 ಅರಸನಾದ ಉಜ್ಜೀಯನು ಕುಷ್ಠರೋಗಿಯಾದುದರಿಂದ ಅವನು ಯೆಹೋವನ ಆಲಯವನ್ನು ಪ್ರವೇಶಿಸಲಾಗಲಿಲ್ಲ. ಅವನು ದೂರದಲ್ಲಿದ್ದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಿದನು. ಅವನ ಮಗನಾದ ಯೋತಾಮನು ಪ್ರಜಾಪಾಲನೆ ಮಾಡಿದನು.
22 ಪ್ರಾರಂಭದಿಂದ ಕೊನೆಯವರೆಗೆ ಉಜ್ಜೀಯನು ಮಾಡಿದ ಕಾರ್ಯಗಳನ್ನೆಲ್ಲಾ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ತನ್ನ ಪುಸ್ತಕದಲ್ಲಿ ಬರೆದಿರುವನು. 23 ಉಜ್ಜೀಯನು ಸತ್ತು ತನ್ನ ಪೂರ್ವಿಕರನ್ನು ಸೇರಿದಾಗ, ಅವನ ಕುಷ್ಠದ ನಿಮಿತ್ತ ಅವನ ಶವವನ್ನು ರಾಜಕುಟುಂಬ ಸ್ಮಶಾನವಿದ್ದ ಹೊಲದಲ್ಲಿ ಹೂಳಿಟ್ಟರು. ಉಜ್ಜೀಯನ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
ಯೆಹೂದದ ಅರಸನಾದ ಯೋತಾಮ
27 ಯೋತಾಮನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನ ತಾಯಿ ಚಾದೋಕನ ಮಗಳಾದ ಯೆರೂಷ. 2 ಯೋತಾಮನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಉಜ್ಜೀಯನಂತೆ ಅವನೂ ದೇವರಿಗೆ ವಿಧೇಯನಾಗಿ ನಡೆದುಕೊಂಡನು. ಆದರೆ ತನ್ನ ತಂದೆಯು ದೇವಾಲಯವನ್ನು ಪ್ರವೇಶಿಸಿ ಧೂಪಹಾಕಿದಂತೆ ಇವನು ಮಾಡಲಿಲ್ಲ. ಜನರು ಮಾತ್ರ ಕೆಟ್ಟಕಾರ್ಯಗಳಲ್ಲಿಯೇ ಮುಂದುವರೆದರು. 3 ಯೋತಾಮನು ದೇವಾಲಯದ ಮೇಲಿನ ಬಾಗಿಲನ್ನು ತಿರುಗಿ ಕಟ್ಟಿಸಿದನು. ಪೌಳಿಗೋಡೆಯ ಮೇಲೆ ಓಫೇಲ್ ಎಂಬ ಸ್ಥಳದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 4 ಯೋತಾಮನು ಯೆಹೂದದ ಬೆಟ್ಟಪ್ರದೇಶಗಳಲ್ಲಿ ಪಟ್ಟಣಗಳನ್ನು ಮತ್ತು ಕಾಡಿನೊಳಗೆ ಗೋಪುರಗಳನ್ನು ಕಟ್ಟಿಸಿದನು. 5 ಯೋತಾಮನು ಅಮ್ಮೋನಿಯರ ಸೈನ್ಯದೊಡನೆ ಕಾದಾಡಿ ಜಯಗಳಿಸಿದನು. ಅವರು ಪ್ರತಿ ವರ್ಷ ಮೂರು ವರ್ಷಗಳ ಕಾಲ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿ, ಅರವತ್ತೆರಡು ಸಾವಿರ ಬುಷೆಲ್ ಗೋಧಿಯನ್ನೂ, ಅರವತ್ತೆರಡು ಸಾವಿರ ಬುಷೆಲ್ ಜವೆಗೋಧಿಯನ್ನೂ ಯೋತಾಮನಿಗೆ ಕಾಣಿಕೆಯಾಗಿ ಕೊಟ್ಟರು.
6 ಯೋತಾಮನು ದೇವರಿಗೆ ವಿಧೇಯನಾಗಿ ಜೀವಿಸಿದ್ದ ಕಾರಣ ಬಲಿಷ್ಠನಾದ ರಾಜನಾದನು. 7 ಅವನು ಮಾಡಿದ ಬೇರೆ ಕಾರ್ಯಗಳು ಮತ್ತು ನಡಿಸಿದ ಯುದ್ಧಗಳ ವಿಷಯ ಇಸ್ರೇಲರ ಮತ್ತು ಯೆಹೂದದ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 8 ಯೋತಾಮನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಅರಸನಾದನು. ಅವನು ಹದಿನಾರು ವರ್ಷ ಜೆರುಸಲೇಮಿನಲ್ಲಿ ಆಳಿದನು. 9 ಯೋತಾಮನು ಸತ್ತಾಗ ಅವನ ಪೂರ್ವಿಕರೊಂದಿಗೆ ಸಮಾಧಿಮಾಡಿದರು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಯೋತಾಮನ ಮಗನಾದ ಆಹಾಜನು ತನ್ನ ತಂದೆಯ ನಂತರ ರಾಜನಾದನು.
Kannada Holy Bible: Easy-to-Read Version. All rights reserved. © 1997 Bible League International