Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 1-3

ಸೌಲನ ಮರಣದ ಬಗ್ಗೆ ದಾವೀದನಿಗೆ ವಾರ್ತೆ

ದಾವೀದನು ಅಮಾಲೇಕ್ಯರನ್ನು ಸೋಲಿಸಿದ ಬಳಿಕ, ಚಿಕ್ಲಗಿಗೆ ಹಿಂದಿರುಗಿಬಂದು, ಅಲ್ಲಿ ಎರಡು ದಿವಸ ಇದ್ದನು. ಸೌಲನ ಮರಣಾನಂತರ ಇದು ಸಂಭವಿಸಿತು. ಮೂರನೆಯ ದಿನ ಒಬ್ಬ ಯುವ ಸೈನಿಕನು ಚಿಕ್ಲಗಿಗೆ ಬಂದನು. ಈ ಮನುಷ್ಯನು ಸೌಲನಿದ್ದ ಪಾಳೆಯದಿಂದ ಬಂದವನು. ಅವನು ಬಟ್ಟೆಗಳೆಲ್ಲವನ್ನು ಹರಿದುಕೊಂಡಿದ್ದನು; ತಲೆಯ ಮೇಲೆ ಧೂಳನ್ನು ಹಾಕಿಕೊಂಡಿದ್ದನು.[a] ಅವನು ದಾವೀದನ ಬಳಿಗೆ ಬಂದು ಅವನ ಮುಂದೆ, ತನ್ನ ತಲೆಯನ್ನು ನೆಲಕ್ಕೆ ಬಾಗಿಸಿ ನಮಸ್ಕರಿಸಿದನು.

ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಅವನನ್ನು ಕೇಳಿದನು.

ಅದಕ್ಕೆ ಅವನು, “ನಾನು ಇಸ್ರೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ” ಎಂದು ಹೇಳಿದನು.

ದಾವೀದನು ಅವನನ್ನು, “ಯುದ್ಧದಲ್ಲಿ ಯಾರು ಗೆದ್ದರು, ನನಗೆ ದಯವಿಟ್ಟು ತಿಳಿಸು?” ಎಂದು ಕೇಳಿದನು.

ಅವನು, “ಇಸ್ರೇಲ್ ಜನರು ಯುದ್ಧರಂಗದಿಂದ ಓಡಿಹೋದರು. ಯುದ್ಧದಲ್ಲಿ ಅನೇಕರು ಸತ್ತುಹೋದರು. ಸೌಲನೂ ಅವನ ಮಗನಾದ ಯೋನಾತಾನನೂ ಸತ್ತರು” ಎಂದು ಹೇಳಿದನು.

ದಾವೀದನು ಆ ಯುವಕನಿಗೆ, “ಸೌಲನು ಮತ್ತು ಅವನ ಮಗನಾದ ಯೋನಾತಾನನು ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಕೇಳಿದನು.

ಅದಕ್ಕೆ ಆ ಯುವಕನು, “ನಾನು ಆಕಸ್ಮಿಕವಾಗಿ ಗಿಲ್ಬೋವದ ಶಿಖರದ ಮೇಲಿದ್ದೆ. ಸೌಲನು ತನ್ನ ಭರ್ಜಿಯ ಮೇಲೆ ಒರಗಿಕೊಂಡಿದ್ದನ್ನು ಅಲ್ಲಿಂದಲೇ ನಾನು ನೋಡಿದೆ. ಫಿಲಿಷ್ಟಿಯರ ರಥಗಳು ಮತ್ತು ಕುದುರೆಸವಾರರು ಸೌಲನ ಹತ್ತಿರಕ್ಕೆ ಬರುತ್ತಿದ್ದರು. ಸೌಲನು ಹಿಂದಿರುಗಿ ನೋಡಿದಾಗ ಅವನಿಗೆ ನಾನು ಕಾಣಿಸಿದೆನು. ಅವನು ನನ್ನನ್ನು ಕರೆದಾಗ, ‘ಇಗೋ ಬಂದೆನು’ ಎಂದು ಉತ್ತರಿಸಿದೆನು. ನಂತರ ಸೌಲನು, ‘ನೀನು ಯಾರು?’ ಎಂದು ಕೇಳಿದನು. ‘ನಾನೊಬ್ಬ ಅಮಾಲೇಕ್ಯನು’ ಎಂದು ನಾನು ಹೇಳಿದೆನು. ಸೌಲನು ನನಗೆ, ‘ದಯವಿಟ್ಟು ನನ್ನನ್ನು ಕೊಂದುಬಿಡು. ನಾನು ಬಹು ಸಂಕಟದಲ್ಲಿದ್ದೇನೆ. ನಾನು ಈಗಾಗಲೇ ಸತ್ತವನಂತಿದ್ದೇನೆ’ ಎಂದನು. 10 ಆದ್ದರಿಂದ ನಾನು ಅವನನ್ನು ಕೊಂದೆನು. ಅವನು ಮತ್ತೆ ಜೀವದಿಂದ ಉಳಿಯಲಾರದಷ್ಟು ಗಾಯಗೊಂಡಿದ್ದಾನೆಂಬುದು ನನಗೆ ತಿಳಿದಿತ್ತು. ನಂತರ ನಾನು ಅವನ ತಲೆಯಿಂದ ಕಿರೀಟವನ್ನೂ ತೋಳಿನ ಕವಚವನ್ನೂ ತೆಗೆದುಕೊಂಡೆನು. ನನ್ನ ಒಡೆಯನೇ, ನಾನು ಆ ಕಿರೀಟವನ್ನು ಮತ್ತು ತೋಳಿನ ಕವಚವನ್ನು ನಿನ್ನ ಬಳಿಗೆ ತಂದಿದ್ದೇನೆ” ಎಂದು ಹೇಳಿದನು.

11 ಆಗ ದಾವೀದನು ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲ ಹರಿದುಕೊಂಡನು. ದಾವೀದನ ಜೊತೆಯಲ್ಲಿದ್ದವರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು. 12 ಅವರು ಬಹಳ ದುಃಖದಿಂದ ಅತ್ತರು. ಅವರು ಸಂಜೆಯ ತನಕ ಏನನ್ನೂ ತಿನ್ನಲಿಲ್ಲ. ಸೌಲನೂ ಅವನ ಮಗನಾದ ಯೋನಾತಾನನೂ ಯೆಹೋವನ ಜನರೂ ಸತ್ತದ್ದಕ್ಕಾಗಿ ಮತ್ತು ಇಸ್ರೇಲಿಗಾಗಿ ದಾವೀದನು ಮತ್ತು ಅವನ ಜನರು ಅತ್ತರು. ಸೌಲನನ್ನೂ ಅವನ ಮಗನಾದ ಯೋನಾತಾನನನ್ನೂ ಮತ್ತು ಅನೇಕ ಮಂದಿ ಇಸ್ರೇಲರನ್ನೂ ಖಡ್ಗಗಳಿಂದ ಇರಿದು ಕೊಂದದ್ದಕ್ಕಾಗಿ ಅವರು ಅತ್ತರು.

ಅಮಾಲೇಕ್ಯನನ್ನು ಕೊಲ್ಲಲು ದಾವೀದನ ಆಜ್ಞೆ

13 ಸೌಲನ ಮರಣದ ಬಗ್ಗೆ ತಿಳಿಸಿದ ಯುವಕನಿಗೆ ದಾವೀದನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.

ಆ ಯುವಕನು, “ನಾನು ಇಸ್ರೇಲ್ ಜನರಲ್ಲಿ ವಾಸಿಸುತ್ತಿರುವ ವಿದೇಶೀಯನ ಮಗ. ನಾನೊಬ್ಬ ಅಮಾಲೇಕ್ಯನು” ಎಂದು ಉತ್ತರಿಸಿದನು.

14 ದಾವೀದನು ಆ ಯುವಕನಿಗೆ, “ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ಕೊಲ್ಲಲು ನೀನು ಹೆದರಲಿಲ್ಲವೇಕೆ?” ಎಂದು ಕೇಳಿದನು.

15-16 ನಂತರ ದಾವೀದನು ತನ್ನ ಗುಂಪಿನ ಯುವಕನೊಬ್ಬನನ್ನು ಕರೆದು, “ನೀನು ಹೋಗಿ ಆ ಅಮಾಲೇಕ್ಯನನ್ನು ಕೊಲ್ಲು” ಎಂದು ಹೇಳಿದನು. ಇಸ್ರೇಲರ ಯುವಕನು ಆ ಅಮಾಲೇಕ್ಯನನ್ನು ಕೊಂದುಬಿಟ್ಟನು. ದಾವೀದನು ಆ ಅಮಾಲೇಕ್ಯನಿಗೆ, “ನಿನ್ನ ಸಾವಿಗೆ ನೀನೇ ಕಾರಣನು.[b] ನೀನು ನಿನ್ನ ವಿರುದ್ಧವೇ ಸಾಕ್ಷಿ ಹೇಳಿದೆ. ‘ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ನಾನು ಕೊಂದೆ’ ಎಂದು ನೀನೇ ಹೇಳಿದೆ” ಎಂದನು.

ಸೌಲನನ್ನು ಮತ್ತು ಯೋನಾತಾನನನ್ನು ಕುರಿತು ದಾವೀದನ ಶೋಕಗೀತೆ

17 ದಾವೀದನು, ಸೌಲನನ್ನು ಮತ್ತು ಅವನ ಮಗನಾದ ಯೋನಾತಾನನನ್ನು ಕುರಿತು ಒಂದು ಶೋಕಗೀತೆಯನ್ನು ಹಾಡಿದನು. 18 ಈ ಶೋಕಗೀತೆಯನ್ನು ಯೆಹೂದದ ಜನರಿಗೆ ಕಲಿಸಬೇಕೆಂದು ಅವನು ತನ್ನ ಜನರಿಗೆ ಹೇಳಿದನು. ಈ ಗೀತೆಗೆ “ಬಿಲ್ಲು” ಎಂದು ಹೆಸರು. ಈ ಗೀತೆಯನ್ನು ಯಾಷಾರ್ ಗ್ರಂಥದಲ್ಲಿ ಬರೆಯಲಾಗಿದೆ.

19 “ಇಸ್ರೇಲೇ, ನಿನ್ನ ಸೌಂದರ್ಯವೆಲ್ಲ ಉನ್ನತಸ್ಥಳಗಳಲ್ಲಿ ನಾಶವಾಯಿತು.
    ಬಲಶಾಲಿಗಳಾದ ಜನರೆಲ್ಲ ಬಿದ್ದು ಹೋದರು.
20 ಗತ್‌ನಲ್ಲಿ ಈ ಸುದ್ದಿಯನ್ನು ಹೇಳದಿರು.
    ಅಷ್ಕೆಲೋನಿನ ಬೀದಿಗಳಲ್ಲಿ ಇದನ್ನು ಸಾರದಿರು.
ಫಿಲಿಷ್ಟಿಯರ ಪಟ್ಟಣಗಳೆಲ್ಲಾ ಸಂತೋಷಪಡುವವು.
    ಆ ವಿದೇಶಿಯರ ಹೆಣ್ಣುಮಕ್ಕಳು ಉಲ್ಲಾಸಪಡುವರು.

21 “ಗಿಲ್ಬೋವದ ಪರ್ವತಗಳಲ್ಲಿ
    ಮಂಜೂ ಮಳೆಯೂ ಸುರಿಯದಿರಲಿ.
ಆ ಹೊಲಗಳಿಂದ ಕಾಣಿಕೆಯ ವಸ್ತುಗಳೂ ಬಾರದಿರಲಿ.
ಅಲ್ಲಿನ ಶಕ್ತಿಸಂಪನ್ನರ ಗುರಾಣಿಗಳೆಲ್ಲ ತುಕ್ಕುಹಿಡಿದಿವೆ.
    ಸೌಲನ ಗುರಾಣಿಯು ಎಣ್ಣೆಯಿಲ್ಲದೆ ಬಿದ್ದಿದೆ.[c]
22 ಯೋನಾತಾನನ ಬಿಲ್ಲು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
    ಸೌಲನ ಖಡ್ಗವು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಈಗ ಸತ್ತುಬಿದ್ದಿರುವ ಸೈನಿಕರ ರಕ್ತವನ್ನು ಅವರ ಆಯುಧಗಳು ಚಿಮ್ಮಿಸಿದವು.
    ಅವರ ಆಯುಧಗಳು ಬಲಿಷ್ಠರ ಕೊಬ್ಬನ್ನು ಕತ್ತರಿಸಿಹಾಕಿದವು.

23 “ಸೌಲನು ಮತ್ತು ಯೋನಾತಾನನು ಒಬ್ಬರನ್ನೊಬ್ಬರು ಪ್ರೀತಿಸಿದರು;
    ತಮ್ಮ ಪರಸ್ಪರ ಜೀವಿತದಲ್ಲಿ ಆನಂದಿಸಿದರು.
    ಸೌಲನು ಮತ್ತು ಯೋನಾತಾನನು ಮರಣದಲ್ಲೂ ಒಂದಾದರು.
ಅವರು ಹದ್ದುಗಳಿಗಿಂತ ವೇಗವಾಗಿ ಹೋದರು;
    ಸಿಂಹಗಳಿಗಿಂತ ಶಕ್ತಿಶಾಲಿಗಳಾಗಿದ್ದರು.
24 ಇಸ್ರೇಲಿನ ಕುವರಿಯರೇ, ಸೌಲನಿಗಾಗಿ ಗೋಳಾಡಿರಿ!
    ಸೌಲನು ನಿಮಗೆ ಕೆಂಪು ಬಟ್ಟೆಗಳನ್ನು ಉಡಿಸಿದನು.
    ಸೌಲನು ಸುವರ್ಣಾಭರಣಗಳನ್ನು ಬಟ್ಟೆಗಳ ಮೇಲೆ ತೊಡಿಸಿದನು.

25 “ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
    ಗಿಲ್ಬೋವ ಪರ್ವತಗಳಲ್ಲಿ ಯೋನಾತಾನನೂ ಮಡಿದನು.
26 ನನ್ನ ಸೋದರನಾದ ಯೋನಾತಾನನೇ, ನಿನಗಾಗಿ ನಾನು ದುಃಖಿಸುವೆ!
    ನಿನ್ನ ಗೆಳೆತನವು ನನಗೆ ಉಲ್ಲಾಸದಾಯಕವಾಗಿತ್ತು.
ನನ್ನ ಮೇಲಿನ ನಿನ್ನ ಪ್ರೀತಿಯು
    ಸ್ತ್ರೀಯರ ಪ್ರೀತಿಗಿಂತಲೂ ಅತಿಶಯವಾಗಿತ್ತು.
27 ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
    ಅವರ ಯುದ್ಧಾಯುಧಗಳೆಲ್ಲ ಹಾಳಾಗಿಹೋದವು.”

ಹೆಬ್ರೋನಿಗೆ ದಾವೀದನ ಆಗಮನ

ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.

“ಹೋಗು” ಎಂಬುದಾಗಿ ಯೆಹೋವನು ಹೇಳಿದನು.

“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.

“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.

ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.

ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.

ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು[d] ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.

ಈಷ್ಬೋಶೆತನು ರಾಜನಾದನು

ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು. ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.

10 ಈಷ್ಬೋಶೆತನು ಸೌಲನ ಮಗ. ಈಷ್ಬೋಶೆತನು ಇಸ್ರೇಲನ್ನು ಆಳಲು ಆರಂಭಿಸಿದಾಗ ನಲವತ್ತು ವರ್ಷ ವಯಸ್ಸಿನವನಾಗಿದ್ದನು. ಅವನು ಎರಡು ವರ್ಷ ಆಳಿದನು. ಆದರೆ ಯೆಹೂದ ಕುಲದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಯೆಹೂದ ಕುಲದವರಿಗೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳುಗಳ ಕಾಲ ರಾಜನಾಗಿದ್ದನು.

ಈಷ್ಬೋಶೆತನ ಜನರು ಮತ್ತು ದಾವೀದನ ಜನರು ಪರಸ್ಪರ ಹೋರಾಡಿದರು

12 ನೇರನ ಮಗನಾದ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಯನ್ನು ಬಿಟ್ಟು ಗಿಬ್ಯೋನಿಗೆ ಹೋದರು. 13 ಚೆರೂಯಳ ಮಗನಾದ ಯೋವಾಬನು ಮತ್ತು ದಾವೀದನ ಸೈನಿಕರು ಸಹ ಗಿಬ್ಯೋನಿಗೆ ಹೋದರು. ಅವರು ಅಬ್ನೇರನನ್ನು ಮತ್ತು ಈಷ್ಬೋಶೆತನ ಸೇವಕರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಅಬ್ನೇರನ ಗುಂಪಿನವರು ಕೆರೆಯ ಒಂದು ಕಡೆ ಕುಳಿತರು. ಯೋವಾಬನ ಗುಂಪಿನವರು ಕೆರೆಯ ಮತ್ತೊಂದು ಕಡೆ ಕುಳಿತರು.

14 ಅಬ್ನೇರನು ಯೋವಾಬನಿಗೆ, “ಯುವಜನರೆಲ್ಲ ಮೇಲೆದ್ದು, ಇಲ್ಲಿ ಹೋರಾಡಲಿ” ಎಂದು ಹೇಳಿದನು.

ಯೋವಾಬನು “ಆಗಲಿ, ಅವರು ಹೋರಾಡಲಿ” ಎಂದನು.

15 ನಂತರ ಯುವಜನರು ಮೇಲೆದ್ದರು. ಎರಡು ಗುಂಪಿನವರೂ ಹೋರಾಡುವುದಕ್ಕಾಗಿ ತಮ್ಮತಮ್ಮ ಜನರನ್ನು ಲೆಕ್ಕ ಹಾಕಿದರು. ಸೌಲನ ಮಗನಾದ ಈಷ್ಬೋಶೆತನಿಗಾಗಿ ಬೆನ್ಯಾಮೀನ್ ಕುಲದ ಹನ್ನೆರಡು ಜನರನ್ನು ಆರಿಸಲಾಯಿತು. ದಾವೀದನ ಸೇವಕರಲ್ಲಿ ಹನ್ನೆರಡು ಜನರನ್ನು ಆರಿಸಲಾಯಿತು. 16 ಪ್ರತಿಯೊಬ್ಬರೂ ತಮ್ಮ ಎದುರಾಳಿಯ ತಲೆಯನ್ನು ಹಿಡಿದುಕೊಂಡರು ಮತ್ತು ಖಡ್ಗದಿಂದ ಅವರ ಪಕ್ಕೆಗಳಿಗೆ ತಿವಿದರು. ಆದ್ದರಿಂದ ಅವರು ಒಟ್ಟಾಗಿ ಕೆಳಕ್ಕೆ ಬಿದ್ದರು. ಆದಕಾರಣವೇ ಆ ಸ್ಥಳವನ್ನು “ಹರಿತ ಕತ್ತಿಯ ಹೊಲ” ಎಂದು ಕರೆಯುತ್ತಾರೆ. ಈ ಸ್ಥಳವು ಗಿಬ್ಯೋನಿನಲ್ಲಿದೆ. 17 ಆ ದಿನ ಘೋರವಾದ ಯುದ್ಧ ಸಂಭವಿಸಿತು. ದಾವೀದನ ಸೇವಕರು ಅಬ್ನೇರನನ್ನು ಮತ್ತು ಇಸ್ರೇಲರನ್ನು ಸೋಲಿಸಿದರು.

ಅಸಾಹೇಲನನ್ನು ಅಬ್ನೇರನು ಕೊಲ್ಲುವನು

18 ಚೆರೂಯಳಿಗೆ ಯೋವಾಬ್, ಅಬೀಷೈ ಮತ್ತು ಅಸಾಹೇಲ್ ಎಂಬ ಮೂವರು ಮಕ್ಕಳಿದ್ದರು. ಅವರೆಲ್ಲಾ ಅಲ್ಲಿದ್ದರು. ಅಸಾಹೇಲನು ವೇಗದ ಓಟಗಾರ. ಅವನು ಕಾಡಿನ ಜಿಂಕೆಯಂತೆ ವೇಗವಾಗಿ ಓಡಬಲ್ಲವನಾಗಿದ್ದನು. 19 ಅಸಾಹೇಲನು ಯಾವ ಕಡೆಗೂ ತಿರುಗದೆ ನೇರವಾಗಿ ಅಬ್ನೇರನ ಕಡೆಗೆ ಹೋದನು. 20 ಅಬ್ನೇರನು ಹಿಂದಕ್ಕೆ ತಿರುಗಿ, “ನೀನು ಅಸಾಹೇಲನಲ್ಲವೇ?” ಎಂದು ಕೇಳಿದನು.

“ಹೌದು” ಎಂದು ಅಸಾಹೇಲನು ಹೇಳಿದನು.

21 ಆಗ ಅಬ್ನೇರನು ಅವನಿಗೆ, “ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಒಬ್ಬ ಯುವಕನನ್ನು ಹಿಡಿದುಕೊಂಡು ಅವನ ಬಳಿಯಿರುವ ಆಯುಧವನ್ನು ನಿನಗಾಗಿ ತೆಗೆದುಕೊ” ಎಂದು ಹೇಳಿದನು. ಆದರೆ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲಿಲ್ಲ.

22 ಅಬ್ನೇರನು ಮತ್ತೆ ಅಸಾಹೇಲನಿಗೆ, “ನನ್ನನ್ನು ಅಟ್ಟಿಸಿಕೊಂಡು ಬರಬೇಡ; ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. ನಾನು ನಿನ್ನನ್ನು ಕೊಂದುಬಿಟ್ಟರೆ, ನಿನ್ನ ಸೋದರನಾದ ಯೋವಾಬನ ಮುಖವನ್ನು ನಾನು ಮತ್ತೆ ನೋಡಲಾಗುವುದಿಲ್ಲ” ಎಂದು ಹೇಳಿದನು.

23 ಆದರೂ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದನು. ಆದ್ದರಿಂದ ಅಬ್ನೇರನು ತನ್ನ ಬರ್ಜಿಯ ಹಿಡಿಕೆಯನ್ನು ಹಿಡಿದುಕೊಂಡು ಅದನ್ನು ಅಸಾಹೇಲನ ಹೊಟ್ಟೆಗೆ ತಿವಿದನು. ಆ ಬರ್ಜಿಯು ಅಸಾಹೇಲನ ಹೊಟ್ಟೆಯೊಳಗೆ ಆಳವಾಗಿ ಚುಚ್ಚಿಕೊಂಡು ಅವನ ಬೆನ್ನಿನಿಂದ ಹಾಯ್ದು ಬಂದಿತು. ಅಸಾಹೇಲನು ಕೂಡಲೇ ಅಲ್ಲೇ ಸತ್ತುಬಿದ್ದನು.

ಅಬ್ನೇರನನ್ನು ಯೋವಾಬ್ ಮತ್ತು ಅಬೀಷೈ ಅಟ್ಟಿಸಿಕೊಂಡು ಹೋಗುವರು

ಅಸಾಹೇಲನ ದೇಹವು ನೆಲದ ಮೇಲೆ ಬಿದ್ದಿತ್ತು. ಜನರು ಅವನ ಬಳಿಗೆ ಹೋಗಿ ಅಲ್ಲಿಯೇ ನಿಂತರು. 24 ಆದರೆ ಯೋವಾಬ್ ಮತ್ತು ಅಬೀಷೈ ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದರು. ಅವರು “ಅಮ್ಮಾ” ಬೆಟ್ಟಕ್ಕೆ ಬರುವಷ್ಟರಲ್ಲಿ ಸೂರ್ಯನು ಮುಳುಗಿದನು. (ಗಿಬ್ಯೋನಿನ ಮರಳುಗಾಡಿನ ಮಾರ್ಗದಲ್ಲಿರುವ ಗೀಯದ ಎದುರಿಗಿರುವುದೇ “ಅಮ್ಮಾ” ಬೆಟ್ಟ.) 25 ಬೆನ್ಯಾಮೀನ್ ಕುಲದವರೆಲ್ಲರು ಅಬ್ನೇರನ ಹತ್ತಿರಕ್ಕೆ ಬಂದರು. ಅವರೆಲ್ಲ ಬೆಟ್ಟದ ಮೇಲೆ ಒಟ್ಟಾಗಿ ನಿಂತರು.

26 ಅಬ್ನೇರನು ಯೋವಾಬನಿಗೆ, “ನಾವು ಎಂದೆಂದಿಗೂ ಯುದ್ಧ ಮಾಡಿ ಒಬ್ಬರನ್ನೊಬ್ಬರು ಕೊಲ್ಲಬೇಕೇ? ಇದು ಹಗೆತನದಲ್ಲಿ ಅಂತ್ಯಗೊಳ್ಳುತ್ತದೆಂಬುದು ನಿಜವಾಗಿಯೂ ನಿನಗೆ ತಿಳಿದಿದೆ. ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲು ನಿನ್ನ ಜನರಿಗೆ ಹೇಳು” ಎಂದು ಕೂಗಿ ಹೇಳಿದನು.

27 ಆಗ ಯೋವಾಬನು, “ನೀನು ಒಳ್ಳೆಯ ಮಾತನ್ನೇ ಆಡಿರುವೆ. ನೀನು ಹೀಗೆ ಹೇಳದೆ ಇದ್ದಿದ್ದರೆ, ಯೆಹೋವನಾಣೆಗೂ ಜನರು ನಾಳೆ ಮುಂಜಾನೆವರೆಗೂ ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುತ್ತಿದ್ದರು” ಎಂದು ಹೇಳಿದನು. 28 ಆಗ ಯೋವಾಬನು ತುತ್ತೂರಿಯನ್ನು ಊದಿದನು. ಅವನ ಜನರು ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದರು. ಅವರು ಇಸ್ರೇಲರ ವಿರುದ್ಧ ಹೋರಾಡಲು ಪ್ರಯತ್ನಿಸಲೇ ಇಲ್ಲ.

29 ಅಬ್ನೇರನು ತನ್ನ ಜನರೊಂದಿಗೆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ಪ್ರಯಾಣಮಾಡಿ, ಜೋರ್ಡನ್ ನದಿಯನ್ನು ದಾಟಿ ಮಹನಯಿಮಿಗೆ ಬಂದನು.

30 ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದ ನಂತರ ಯೋವಾಬನು ಹಿಂತಿರುಗಿ ಬಂದನು. ಯೋವಾಬನು ತನ್ನ ಜನರನ್ನೆಲ್ಲ ಒಟ್ಟಾಗಿ ಸೇರಿಸಿದಾಗ, ದಾವೀದನ ಭಟರಲ್ಲಿ ಹತ್ತೊಂಭತ್ತು ಮಂದಿ ಕಾಣಲಿಲ್ಲ. ಅಸಾಹೇಲನು ಸಹ ಕಾಣಲಿಲ್ಲ. 31 ಆದರೆ ಅಬ್ನೇರನ ಹಿಂಬಾಲಕರೂ ಬೆನ್ಯಾಮೀನ್ ಕುಟುಂಬದ ಗುಂಪಿನವರೂ ಆದ ಮುನ್ನೂರೈವತ್ತು ಜನರನ್ನು ದಾವೀದನ ಭಟರು ಕೊಂದಿದ್ದರು. 32 ದಾವೀದನ ಭಟರು ಅಸಾಹೇಲನ ಶವವನ್ನು ಬೆತ್ಲೆಹೇಮಿಗೆ ತಂದು, ಅವನ ತಂದೆಯ ಶ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು.

ಯೋವಾಬನು ತನ್ನ ಜನರೊಂದಿಗೆ ರಾತ್ರಿಯೆಲ್ಲ ಪ್ರಯಾಣಮಾಡಿ ಹೆಬ್ರೋನನ್ನು ತಲುಪಿದಾಗ ಸೂರ್ಯೋದಯವಾಯಿತು.

ಇಸ್ರೇಲರ ಮತ್ತು ಯೆಹೂದದವರ ಮಧ್ಯೆ ನಡೆದ ಯುದ್ಧ

ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು.

ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದ ಗಂಡುಮಕ್ಕಳು

ದಾವೀದನಿಗೆ ಹೆಬ್ರೋನಿನಲ್ಲಿ ಆರು ಮಂದಿ ಗಂಡುಮಕ್ಕಳು ಹುಟ್ಟಿದರು.

ಅಮ್ನೋನನು ಮೊದಲನೆಯ ಮಗ. ಇಜ್ರೇಲಿನವಳಾದ ಅಹೀನೋವಮಳು ಅಮ್ನೋನನ ತಾಯಿ.

ಕಿಲಾಬನು ಎರಡನೆಯ ಮಗ. ಕರ್ಮೆಲ್ಯನಾದ ನಾಬಾಲನ ವಿಧವೆಯಾದ ಅಬೀಗೈಲಳು ಕಿಲಾಬನ ತಾಯಿ.

ಅಬ್ಷಾಲೋಮನು ಮೂರನೆಯ ಮಗ. ಗೆಷೂರಿನ ರಾಜ ತಲ್ಮೈನ ಮಗಳಾದ ಮಾಕಳು ಅಬ್ಷಾಲೋಮನ ತಾಯಿ.

ಅದೋನೀಯನು ನಾಲ್ಕನೆಯ ಮಗ. ಹಗ್ಗೀತಳು ಅದೋನೀಯನ ತಾಯಿ. ಶೆಫಟ್ಯನು

ಐದನೆಯ ಮಗ. ಅಬೀಟಲಳು ಶೆಫಟ್ಯನ ತಾಯಿ.

ಇತ್ರಾಮನು ಆರನೆಯ ಮಗ. ದಾವೀದನ ಹೆಂಡತಿಯಾದ ಎಗ್ಲಳು ಇತ್ರಾಮನ ತಾಯಿ.

ದಾವೀದನಿಗೆ ಹೆಬ್ರೋನಿನಲ್ಲಿ ಆರುಮಂದಿ ಗಂಡುಮಕ್ಕಳಿದ್ದರು.

ಅಬ್ನೇರನು ದಾವೀದನ ಜೊತೆ ಸೇರಲು ತೀರ್ಮಾನಿಸಿದನು

ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧವು ನಡೆಯುತ್ತಿದ್ದಾಗ ಸೌಲನ ಸೈನ್ಯದಲ್ಲಿ ಅಬ್ನೇರನೇ ಬಲಶಾಲಿಯಾದನು. ಸೌಲನಿಗೆ ರಿಚ್ಪಳೆಂಬ ಹೆಸರಿನ ದಾಸಿಯಿದ್ದಳು. ಅವಳು ಅವನಿಗೆ ಹೆಂಡತಿಯಂತೆ ಇದ್ದಳು. ರಿಚ್ಪಳು ಅಯಾಹನ ಮಗಳು. ಈಷ್ಬೋಶೆತನು ಅಬ್ನೇರನಿಗೆ, “ನನ್ನ ತಂದೆಯ ಸೇವಕಿಯೊಡನೆ ಲೈಂಗಿಕ ಸಂಬಂಧವನ್ನು ಏಕೆ ಮಾಡುತ್ತಿರುವೆ?” ಎಂದು ಕೇಳಿದನು.

ಈಷ್ಬೋಶೆತನ ಮಾತುಗಳಿಂದ ಅಬ್ನೇರನು ಬಹಳ ಕೋಪಗೊಂಡನು. ಅಬ್ನೇರನು, “ನಾನು ಸೌಲನಿಗೂ ಅವನ ವಂಶದವರಿಗೂ ನಂಬಿಗಸ್ತನಾಗಿದ್ದೆನು. ನಾನು ನಿನ್ನನ್ನು ದಾವೀದನಿಗೆ ಒಪ್ಪಿಸಲಿಲ್ಲ ಹಾಗೂ ಅವನಿಂದ ನೀನು ಸೋಲುವಂತೆ ಮಾಡಲಿಲ್ಲ. ನಾನು ಯೆಹೂದಕ್ಕಾಗಿ ಕೆಲಸ ಮಾಡುವ ದ್ರೋಹಿಯಲ್ಲ. ಆದರೆ ಈಗ ನಾನು ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂದು ಹೇಳುತ್ತಿರುವೆ. 9-10 ಯೆಹೋವನು ಹೇಳಿರುವ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಸೌಲನ ವಂಶದವರಿಂದ ರಾಜ್ಯಾಧಿಕಾರವನ್ನು ಕಿತ್ತುಕೊಂಡು ದಾವೀದನಿಗೆ ಕೊಡುವುದಾಗಿ ಯೆಹೋವನು ಹೇಳಿದ್ದಾನೆ. ಯೆಹೋವನು ಇಸ್ರೇಲಿಗೂ ಯೆಹೂದಕ್ಕೂ ದಾವೀದನನ್ನು ರಾಜನನ್ನಾಗಿ ಮಾಡುತ್ತಾನೆ. ಅವನು ದಾನಿನಿಂದ ಬೇರ್ಷೆಬದವರೆಗೆ[e] ಆಳುತ್ತಾನೆ. ಈ ಸಂಗತಿಗಳು ನೆರವೇರುವುದಕ್ಕೆ ನಾನು ಸಹಾಯ ಮಾಡದಿದ್ದರೆ ದೇವರು ನನಗೆ ಕೆಟ್ಟದ್ದನ್ನು ಮಾಡಲಿ” ಎಂದು ಹೇಳಿದನು. 11 ಈಷ್ಬೋಶೆತನು ಅಬ್ನೇರನಿಗೆ ಏನನ್ನೂ ಹೇಳಿಲಿಲ್ಲ. ಈಷ್ಬೋಶೆತನು ಅವನಿಗೆ ಬಹಳ ಭಯಪಟ್ಟನು.

12 ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.

13 ಅದಕ್ಕೆ ದಾವೀದನು, “ಒಳ್ಳೆಯದು! ನಾನು ನಿನ್ನೊಡನೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ ನೀನು ನನಗಾಗಿ ಒಂದು ಕೆಲಸ ಮಾಡಬೇಕು. ಸೌಲನ ಮಗಳಾದ ಮೀಕಲಳನ್ನು ನನ್ನ ಬಳಿಗೆ ಕರೆತರುವ ತನಕ ನಾನು ನಿನ್ನನ್ನು ಸಂಧಿಸುವುದಿಲ್ಲ” ಎಂದು ಹೇಳಿದನು.

14 ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಹೆಂಡತಿಯಾದ ಮೀಕಲಳನ್ನು ನನ್ನ ಬಳಿಗೆ ಕಳುಹಿಸು. ಅವಳನ್ನು ನನಗೆ ಕೊಡುವುದಾಗಿ ಮಾತುಕತೆಯಾಗಿತ್ತು. ಅವಳನ್ನು ಪಡೆಯಲು ನಾನು ನೂರು ಜನ ಫಿಲಿಷ್ಟಿಯರನ್ನು ಕೊಂದಿದ್ದೇನೆ”[f] ಎಂದು ಹೇಳಿದನು.

15 ಆಗ ಈಷ್ಬೋಶೆತನು, ಲಯಿಷನ ಮಗನಾದ ಪಲ್ಟೀಯೇಲನ ಬಳಿಯಿಂದ ಮೀಕಲಳನ್ನು ಕರೆತರುವಂತೆ ತನ್ನ ಜನರಿಗೆ ಹೇಳಿದನು. 16 ಮೀಕಲಳ ಗಂಡನಾದ ಪಲ್ಟೀಯೇಲನೂ ಅವಳ ಜೊತೆಗೆ ಬಂದನು. ಮೀಕಲಳ ಜೊತೆಯಲ್ಲಿ ಬಹುರೀಮಿಗೆ ಬರುವಾಗ ಪಲ್ಟೀಯೇಲನು ಆಳುತ್ತಿದ್ದನು. ಆದರೆ ಅಬ್ನೇರನು, “ನಿನ್ನ ಮನೆಗೆ ಹಿಂದಿರುಗಿ ಹೋಗು” ಎಂದು ಪಲ್ಟೀಯೇಲನಿಗೆ ಹೇಳಿದನು. ಆದ್ದರಿಂದ ಪಲ್ಟೀಯೇಲನು ಮನೆಗೆ ಹಿಂದಿರುಗಿದನು.

17 ಅಬ್ನೇರನು ಇಸ್ರೇಲಿನ ನಾಯಕರಿಗೆ ಸಂದೇಶವೊಂದನ್ನು ಕಳುಹಿಸಿ, “ದಾವೀದನನ್ನು ನಿಮ್ಮ ರಾಜನನ್ನಾಗಿ ಮಾಡಲು ನೀವು ಕಾಯುತ್ತಿದ್ದೀರಿ. 18 ಅದನ್ನು ಈಗಲೇ ಮಾಡಿರಿ! ಯೆಹೋವನು ದಾವೀದನ ಬಗ್ಗೆ ಮಾತಾಡುತ್ತಾ, ‘ನನ್ನ ಜನರಾದ ಇಸ್ರೇಲರನ್ನು ಫಿಲಿಷ್ಟಿಯರಿಂದಲೂ ಬೇರೆಲ್ಲಾ ಶತ್ರುಗಳಿಂದಲೂ ನನ್ನ ಸೇವಕನಾದ ದಾವೀದನ ಮೂಲಕ ಸಂರಕ್ಷಿಸುತ್ತೇನೆ’” ಎಂದು ಹೇಳಿದ್ದಾನೆ.

19 ಅಬ್ನೇರನು ಹೆಬ್ರೋನಿನಲ್ಲಿ ದಾವೀದನಿಗೆ ಈ ಮಾತುಗಳನ್ನು ಹೇಳಿದನು. ಬೆನ್ಯಾಮೀನ್ ವಂಶದವರಿಗೂ ಅವನು ಈ ಮಾತುಗಳನ್ನು ಹೇಳಿದನು. ಅಬ್ನೇರನ ಮಾತುಗಳು ಬೆನ್ಯಾಮೀನ್ ವಂಶದವರಿಗೆ ಮತ್ತು ಇಸ್ರೇಲಿನ ಜನರಿಗೆಲ್ಲರಿಗೂ ಒಳ್ಳೆಯ ಮಾತುಗಳೆಂದು ಕಂಡುಬಂದವು.

20 ನಂತರ ಅಬ್ನೇರನು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದನು. ಅಬ್ನೇರನು ಇಪ್ಪತ್ತು ಜನರನ್ನು ತನ್ನ ಸಂಗಡ ಕರೆದು ತಂದನು. ಅಬ್ನೇರನಿಗೂ ಅವನ ಸಂಗಡಿಗರಿಗೂ ದಾವೀದನು ಔತಣಕೂಟವನ್ನು ಏರ್ಪಡಿಸಿದ್ದನು.

21 ಅಬ್ನೇರನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ನಾನು ಹೋಗಿ ಎಲ್ಲಾ ಇಸ್ರೇಲರನ್ನೂ ನಿನ್ನ ಬಳಿಗೆ ಕರೆತರುತ್ತೇನೆ; ನಂತರ ಅವರು ನಿನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ನೀನು ನಿನ್ನ ಇಷ್ಟದಂತೆ ಸಮಸ್ತ ಇಸ್ರೇಲನ್ನು ಆಳಬಹುದು” ಎಂದು ಹೇಳಿದನು.

ದಾವೀದನು ಅಬ್ನೇರನನ್ನು ಕಳುಹಿಸಿದನು. ಅಬ್ನೇರನು ಸಮಾಧಾನದಿಂದ ಹೋದನು.

ಅಬ್ನೇರನ ಮರಣ

22 ಯೋವಾಬನೂ ದಾವೀದನ ಅಧಿಕಾರಿಗಳೂ ಯುದ್ಧರಂಗದಿಂದ ಹಿಂದಿರುಗಿದರು. ಶತ್ರುಗಳಿಂದ ವಶಪಡಿಸಿಕೊಂಡ ಅನೇಕ ಬೆಲೆಬಾಳುವ ವಸ್ತುಗಳು ಅವರ ಹತ್ತಿರವಿದ್ದವು. ದಾವೀದನು ಅಬ್ನೇರನನ್ನು ಆಗಲೇ ಸಮಾಧಾನದಿಂದ ಕಳುಹಿಸಿಕೊಟ್ಟಿದ್ದರಿಂದ ಯೋವಾಬನು ಬಂದಾಗ ಅವನು ಹೆಬ್ರೋನಿನಲ್ಲಿರಲಿಲ್ಲ. 23 ಯೋವಾಬನು ತನ್ನ ಎಲ್ಲಾ ಸೈನ್ಯದೊಂದಿಗೆ ಹೆಬ್ರೋನಿಗೆ ಬಂದನು. ಸೈನಿಕರು ಯೋವಾಬನಿಗೆ, “ನೇರನ ಮಗನಾದ ಅಬ್ನೇರನು ರಾಜನಾದ ದಾವೀದನ ಹತ್ತಿರಕ್ಕೆ ಬಂದಿದ್ದನು. ದಾವೀದನು ಅಬ್ನೇರನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು” ಎಂದು ಹೇಳಿದರು.

24 ಯೋವಾಬನು ರಾಜನ ಬಳಿಗೆ ಬಂದು, “ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದರೂ ಅವನನ್ನು ದಂಡಿಸದೆ ಯಾಕೆ ಕಳುಹಿಸಿಬಿಟ್ಟೆ? 25 ಅಬ್ನೇರನು ನೇರನ ಮಗನೆಂಬುದು ನಿನಗೆ ತಿಳಿದಿದೆ. ಅವನು ನಿನ್ನನ್ನು ವಂಚಿಸಲು ಬಂದಿದ್ದನು. ನೀನು ಮಾಡುತ್ತಿರುವುದನ್ನೆಲ್ಲಾ ತಿಳಿದುಕೊಳ್ಳಲು ಅವನು ಬಂದಿದ್ದನು” ಎಂದು ಹೇಳಿದನು.

26 ಯೋವಾಬನು ದಾವೀದನನ್ನು ಬಿಟ್ಟು, ಅಬ್ನೇರನನ್ನು ಸಿರಾ ಬಾವಿಯ ಬಳಿಯಿಂದ ಕರೆತರಲು ದೂತರನ್ನು ಕಳುಹಿಸಿದನು. ಅಬ್ನೇರನನ್ನು ದೂತರು ಹಿಂದಕ್ಕೆ ಕರೆತಂದರು. ಈ ಸಂಗತಿಯು ದಾವೀದನಿಗೆ ತಿಳಿದಿರಲಿಲ್ಲ. 27 ಅಬ್ನೇರನು ಹೆಬ್ರೋನಿಗೆ ಬಂದಾಗ, ಯೋವಾಬನು ಅವನ ಜೊತೆಯಲ್ಲಿ ಪ್ರತ್ಯೇಕವಾಗಿ ಮಾತನಾಡುವುದಕ್ಕಾಗಿ ಊರಬಾಗಿಲಿನ ಒಂದು ಪಕ್ಕಕ್ಕೆ ಕರೆದುಕೊಂಡು ಹೋದನು. ಆದರೆ ಯೋವಾಬನು ಅಬ್ನೇರನ ಹೊಟ್ಟೆಗೆ ತಿವಿದಿದ್ದರಿಂದ ಅವನು ಸತ್ತನು. ಹಿಂದೆ, ಅಬ್ನೇರನು ಯೋವಾಬನ ಸೋದರನಾದ ಅಸಾಹೇಲನನ್ನು ಕೊಂದಿದ್ದನು. ಆದ್ದರಿಂದ ಯೋವಾಬನು ಅಬ್ನೇರನನ್ನು ಕೊಂದನು.

ದಾವೀದನು ಅಬ್ನೇರನಿಗಾಗಿ ಗೋಳಾಡಿದನು

28 ತರುವಾಯ ದಾವೀದನಿಗೆ ಸುದ್ದಿಯು ತಿಳಿಯಿತು. ದಾವೀದನು, “ನನ್ನ ರಾಜ್ಯವಾಗಲಿ ನಾನಾಗಲಿ ನೇರನ ಮಗನಾದ ಅಬ್ನೇರನ ಸಾವಿಗೆ ಕಾರಣರಲ್ಲ. ಯೆಹೋವನಿಗೆ ಇದು ತಿಳಿದಿದೆ. 29 ಯೋವಾಬನು ಮತ್ತು ಅವನ ವಂಶದವರು ಇದಕ್ಕೆ ಜವಾಬ್ದಾರರು. ಅವನ ವಂಶದವರನ್ನು ಇದಕ್ಕಾಗಿ ದೂಷಿಸಬೇಕು. ಯೋವಾಬನ ವಂಶಕ್ಕೆ ಅನೇಕ ಕಷ್ಟಗಳು ಬರಲಿ. ಅವನ ವಂಶದವರಲ್ಲಿ ಕುಷ್ಠರೋಗಿಗಳು, ಊರುಗೋಲು ಬಳಸುವವರು. ಕತ್ತಿಯಿಂದ ಸಾಯುವವರು, ಭಿಕ್ಷೆ ಬೇಡುವವರು ಇದ್ದೇ ಇರಲಿ” ಎಂದು ಹೇಳಿದನು.

30 ಅಸಾಹೇಲನನ್ನು ಗಿಬ್ಯೋನ್ ಯುದ್ಧದಲ್ಲಿ ಅಬ್ನೇರನು ಕೊಂದುಹಾಕಿದನು. ಆದ್ದರಿಂದ ಅಸಾಹೇಲನ ಸಹೋದರರಾದ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದರು.

31-32 ದಾವೀದನು ಯೋವಾಬನಿಗೆ ಮತ್ತು ಅವನ ಜೊತೆಯಲ್ಲಿದ್ದ ಜನರಿಗೆಲ್ಲ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು ಮತ್ತು ಶೋಕಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಅಬ್ನೇರನಿಗಾಗಿ ಶೋಕಿಸಿ” ಎಂದು ಹೇಳಿದನು. ರಾಜನಾದ ದಾವೀದನೂ ಶವಸಂಸ್ಕಾರಕ್ಕೆ ಹೋದನು. ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಸಮಾಧಿ ಮಾಡಿದರು. ಅಬ್ನೇರನ ಸಮಾಧಿಯ ಹತ್ತಿರ ರಾಜನಾದ ದಾವೀದನೂ ಇತರ ಜನರೂ ಗೋಳಾಡಿದರು.

33 ರಾಜನಾದ ದಾವೀದನು ಅಬ್ನೇರನಿಗಾಗಿ ಈ ಶೋಕಗೀತೆಯನ್ನು ಹಾಡಿದನು:

“ಅಬ್ನೇರನು ಮೂರ್ಖ ಅಪರಾಧಿಯಂತೆ ಸತ್ತನೇ?
34     ಅಬ್ನೇರನೇ, ನಿನ್ನ ಕೈಗಳನ್ನು ಹಗ್ಗದಿಂದ ಬಿಗಿದಿರಲಿಲ್ಲ.
    ನಿನ್ನ ಪಾದಗಳಿಗೆ ಸಂಕೋಲೆಯನ್ನು ತೊಡಿಸಿರಲಿಲ್ಲ.
ದುಷ್ಟಜನರೆದುರು ನೀನು ಬಿದ್ದೆಯಲ್ಲ, ನೀನು ಬಿದ್ದು ಸತ್ತೆಯಲ್ಲ.”

ಆಗ ಜನರೆಲ್ಲರೂ ಅಬ್ನೇರನಿಗಾಗಿ ಮತ್ತೆ ಗೋಳಾಡಿದರು. 35 ಅಂದು ಹೊತ್ತು ಇಳಿಯುವ ಮೊದಲೇ ಜನರು ದಾವೀದನಿಗೆ ಊಟ ಮಾಡುವಂತೆ ಒತ್ತಾಯಿಸಿದರು. ಆದರೆ ದಾವೀದನು, “ಸೂರ್ಯನು ಮುಳುಗುವುದಕ್ಕೆ ಮುಂಚಿತವಾಗಿ ನಾನು ರೊಟ್ಟಿಯನ್ನಾಗಲಿ ಇತರ ಆಹಾರವನ್ನಾಗಲಿ ತಿಂದರೆ, ದೇವರು ನನ್ನನ್ನು ದಂಡಿಸಲಿ ಅಥವಾ ನನಗೆ ಕೇಡು ಬರಮಾಡಲಿ” ಎಂದು ಪ್ರತಿಜ್ಞೆ ಮಾಡಿದನು. 36 ಇದನ್ನು ಕೇಳಿದ ಜನರೆಲ್ಲರೂ ರಾಜನಾದ ದಾವೀದನ ಈ ಕಾರ್ಯವನ್ನು ಮೆಚ್ಚಿಕೊಂಡರು. 37 ನೇರನ ಮಗನಾದ ಅಬ್ನೇರನನ್ನು ಕೊಲ್ಲಲು ರಾಜನಾದ ದಾವೀದನು ಆಜ್ಞಾಪಿಸಿರಲಿಲ್ಲವೆಂದು ಯೆಹೂದ್ಯರು ಮತ್ತು ಇಸ್ರೇಲಿನ ಜನರೆಲ್ಲರೂ ಅಂದು ಅರ್ಥಮಾಡಿಕೊಂಡರು.

38 ರಾಜನಾದ ದಾವೀದನು ತನ್ನ ಸೇವಕರಿಗೆ, “ಇಸ್ರೇಲಿನಲ್ಲಿ ಇಂದು ಮಹಾಪುರುಷನಾದ ನಾಯಕನೊಬ್ಬನು ಸತ್ತನೆಂಬುದು ನಿಮಗೆಲ್ಲ ತಿಳಿದಿದೆ. 39 ನಾನು ರಾಜನಾಗಿದ್ದರೂ ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇನೆ. ಚೆರೂಯಳ ಗಂಡುಮಕ್ಕಳಾದ ಇವರು ನನಗೆ ಬಹಳ ಕೇಡನ್ನು ಮಾಡಿದರು. ಯೆಹೋವನು ಈ ಜನರಿಗೆ ತಕ್ಕ ದಂಡನೆಯನ್ನು ನೀಡಲಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International