Beginning
8 ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಕೋಪಗೊಂಡಿದ್ದರು. ಎಫ್ರಾಯೀಮ್ಯರು ಗಿದ್ಯೋನನನ್ನು ಕಂಡಾಗ, “ನೀನು ನಮ್ಮ ಸಂಗಡ ಹೀಗೇಕೆ ವರ್ತಿಸಿದೆ? ನೀನು ಮಿದ್ಯಾನ್ಯರೊಂದಿಗೆ ಯುದ್ಧಮಾಡಲು ಹೋದಾಗ ನಮ್ಮನ್ನು ಏಕೆ ಕರೆಯಲಿಲ್ಲ?” ಎಂದು ಗಿದ್ಯೋನನನ್ನು ಕೇಳಿದರು.
2 ಗಿದ್ಯೋನನು ಎಫ್ರಾಯೀಮ್ಯರಿಗೆ, “ನೀವು ಮಾಡಿದಷ್ಟು ದೊಡ್ಡ ಕೆಲಸವನ್ನು ನಾನು ಮಾಡಿಲ್ಲ. ನನ್ನ ಅಬೀಯೆಜೆರನ ಕುಟುಂಬದವರಿಗಿಂತ ಎಫ್ರಾಯೀಮ್ಯರಾದ ನಿಮ್ಮ ಸುಗ್ಗಿಯೇ ಬಹಳ ಚೆನ್ನಾಗಿ ಆಗಿದೆಯಲ್ಲವೇ? ಸುಗ್ಗಿಯ ಕಾಲದಲ್ಲಿ ನಮ್ಮ ಕುಟುಂಬದವರು ಕೂಡಿಸುವ ದ್ರಾಕ್ಷಿಗಿಂತ ಹೆಚ್ಚು ದ್ರಾಕ್ಷಿಯನ್ನು ನೀವು ಹೊಲದಲ್ಲಿಯೇ ಬಿಟ್ಟುಬಿಡುತ್ತೀರಿ! ಇದು ನಿಜವಲ್ಲವೇ? 3 ಅದೇ ರೀತಿ ಈಗಲೂ ಕೂಡ ನಿಮ್ಮದೇ ದೊಡ್ಡ ರಾಶಿ. ಮಿದ್ಯಾನ್ಯರ ನಾಯಕರಾದ ಓರೇಬನನ್ನು ಮತ್ತು ಜೇಬನನ್ನು ಸೆರೆಹಿಡಿಯುವಂತೆ ದೇವರು ನಿಮಗೆ ಸಹಾಯ ಮಾಡಿದನು. ನೀವು ಮಾಡಿದ ಕೆಲಸಕ್ಕೆ ನನ್ನ ಜಯವನ್ನು ಹೋಲಿಸಲು ಹೇಗೆ ಸಾಧ್ಯ?” ಎಂದು ಹೇಳಿದನು. ಗಿದ್ಯೋನನ ಉತ್ತರವನ್ನು ಕೇಳಿದ ಮೇಲೆ ಎಫ್ರಾಯೀಮ್ಯರ ಕೋಪ ಕಡಿಮೆಯಾಯಿತು.
ಗಿದ್ಯೋನನು ಮಿದ್ಯಾನ್ಯರ ಇಬ್ಬರು ಅರಸರನ್ನು ಸೆರೆಹಿಡಿದನು
4 ಗಿದ್ಯೋನ ಮತ್ತು ಅವನ ಮುನ್ನೂರು ಜನರು ಜೋರ್ಡನ್ ನದಿಯನ್ನು ದಾಟಿ ಆಚೆದಡಕ್ಕೆ ಹೋದರು. ಅವರು ಬಹಳ ದಣಿದಿದ್ದರು ಮತ್ತು ಹಸಿದಿದ್ದರು.[a] 5 ಗಿದ್ಯೋನನು ಸುಖೋತ್ ನಗರದ ಜನರಿಗೆ, “ನನ್ನ ಸೈನಿಕರಿಗೆ ತಿನ್ನಲು ಏನಾದರೂ ಕೊಡಿ; ಅವರು ಬಹಳ ದಣಿದು ಹೋಗಿದ್ದಾರೆ. ನಾವು ಮಿದ್ಯಾನ್ಯರ ಅರಸನಾದ ಜೆಬಹನನ್ನೂ ಚಲ್ಮುನ್ನನನ್ನೂ ಬೆನ್ನಟ್ಟಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದನು.
6 ಆದರೆ ಸುಖೋತ್ ನಗರದ ನಾಯಕರು ಗಿದ್ಯೋನನಿಗೆ, “ನಾವು ನಿಮ್ಮ ಸೈನಿಕರಿಗೆ ಆಹಾರವನ್ನು ಏಕೆ ಕೊಡಬೇಕು? ನೀವು ಜೆಬಹನನ್ನು ಮತ್ತು ಚಲ್ಮುನ್ನನನ್ನು ಇನ್ನೂ ಬಂಧಿಸಲೇ ಇಲ್ಲ” ಎಂದು ಹೇಳಿದರು.
7 ಅದಕ್ಕೆ ಗಿದ್ಯೋನನು, “ನೀವು ನಮಗೆ ಆಹಾರವನ್ನು ಕೊಡುವುದಿಲ್ಲವಾದರೆ ಜೆಬಹನನ್ನು ಮತ್ತು ಚಲ್ಮುನ್ನನನ್ನು ಬಂಧಿಸಲು ಯೆಹೋವನೇ ನಮಗೆ ಸಹಾಯ ಮಾಡುತ್ತಾನೆ. ಆಮೇಲೆ ನಾನು ಇಲ್ಲಿಗೆ ಬಂದು ನಿಮ್ಮನ್ನು ಮರುಳುಗಾಡಿನ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡಿಸುತ್ತೇನೆ” ಎಂದು ಉತ್ತರಿಸಿದನು.
8 ಗಿದ್ಯೋನನು ಸುಖೋತ್ ಎಂಬ ನಗರವನ್ನು ಬಿಟ್ಟು ಪೆನೂವೇಲ್ ಎಂಬ ನಗರಕ್ಕೆ ಬಂದನು; ಆಹಾರಕ್ಕಾಗಿ ಸುಖೋತ್ ಜನರನ್ನು ಕೇಳಿದಂತೆ ಪೆನೂವೇಲಿನ ಜನರನ್ನೂ ಕೇಳಿದನು. ಆದರೆ ಪೆನೂವೇಲಿನ ಜನರು ಸಹ ಸುಖೋತಿನ ಜನರಂತೆಯೇ ಉತ್ತರಿಸಿದರು. 9 ಪೆನೂವೇಲಿನ ಜನರಿಗೆ ಗಿದ್ಯೋನನು, “ನಾನು ಜಯ ಸಂಪಾದಿಸಿದ ಮೇಲೆ ಇಲ್ಲಿಗೆ ಬಂದು ಈ ಬುರುಜನ್ನು ಕೆಡವಿಬಿಡುತ್ತೇನೆ” ಅಂದನು.
10 ಜೆಬಹ ಮತ್ತು ಚಲ್ಮುನ್ನ ಮತ್ತು ಅವರ ಸೈನಿಕರು ಕರ್ಕೋರ ಎಂಬ ನಗರದಲ್ಲಿದ್ದರು. ಅವರ ಸೈನ್ಯದಲ್ಲಿ ಹದಿನೈದು ಸಾವಿರ ಸೈನಿಕರಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಉಳಿದವರು ಇಷ್ಟೇ ಜನ. ಆ ಸೈನ್ಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಈಗಾಗಲೇ ಯುದ್ಧದಲ್ಲಿ ಸತ್ತಿದ್ದರು. 11 ಗಿದ್ಯೋನ ಮತ್ತು ಅವನ ಸೈನಿಕರು ಕಾಡುಗೊಲ್ಲರ ಪ್ರದೇಶದ ಮಾರ್ಗವನ್ನು ಬಳಸಿದರು. ಆ ಮಾರ್ಗವು ನೋಬಹ, ಯೊಗ್ಬೆಹಾ ನಗರಗಳ ಪೂರ್ವಕ್ಕೆ ಇದೆ. ಗಿದ್ಯೋನನು ಕರ್ಕೋರ ನಗರಕ್ಕೆ ಬಂದು ಶತ್ರುಗಳ ಮೇಲೆ ಧಾಳಿ ಮಾಡಿದನು. ಶತ್ರುಸೈನ್ಯವು ಈ ಧಾಳಿಯನ್ನು ನಿರೀಕ್ಷಿಸಿರಲಿಲ್ಲ. 12 ಮಿದ್ಯಾನ್ಯರ ಅರಸರಾದ ಜೆಬಹನೂ ಚಲ್ಮುನ್ನನೂ ಓಡಿಹೋದರು. ಆದರೆ ಗಿದ್ಯೋನನು ಬೆನ್ನಟ್ಟಿ ಆ ಅರಸರನ್ನು ಹಿಡಿದುಕೊಂಡನು. ಗಿದ್ಯೋನ ಮತ್ತು ಅವನ ಸೈನಿಕರು ಶತ್ರುಸೈನ್ಯವನ್ನು ಸೋಲಿಸಿದರು.
13 ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹಿಂದಿರುಗಿದನು. ಗಿದ್ಯೋನ ಮತ್ತು ಅವನ ಸೈನಿಕರು ಹೆರೆಸ್ ಎಂಬ ಒಂದು ಬೆಟ್ಟದ ಕಣಿವೆಯ ಮಾರ್ಗವಾಗಿ ಹಿಂದಿರುಗಿದರು. 14 ಗಿದ್ಯೋನನು ಸುಖೋತ್ ನಗರದ ಒಬ್ಬ ತರುಣನನ್ನು ಹಿಡಿದುಕೊಂಡನು. ಗಿದ್ಯೋನನು ಆ ತರುಣನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. ಆ ತರುಣನು ಗಿದ್ಯೋನನಿಗಾಗಿ ಕೆಲವು ಹೆಸರುಗಳನ್ನು ಬರೆದನು. ಆ ತರುಣನು ಸುಖೋತ್ ನಗರದ ನಾಯಕರ ಮತ್ತು ಹಿರಿಯರ ಹೆಸರುಗಳನ್ನು ಬರೆದನು. ಅವನು ಎಪ್ಪತ್ತೇಳು ಜನರ ಹೆಸರುಗಳನ್ನು ಕೊಟ್ಟನು.
15 ಗಿದ್ಯೋನನು ಸುಖೋತ್ ನಗರಕ್ಕೆ ಬಂದು ಆ ನಗರದ ಜನರಿಗೆ, “ನೋಡಿರಿ, ಜೆಬಹ ಮತ್ತು ಚಲ್ಮುನ್ನ ಇಲ್ಲಿದ್ದಾರೆ. ‘ಜೆಬಹ ಮತ್ತು ಚಲ್ಮುನ್ನರನ್ನು ನೀವು ಇನ್ನೂ ಸೆರೆಹಿಡಿದಿಲ್ಲ. ನಿಮ್ಮ ದಣಿದ ಸೈನಿಕರಿಗೆ ಆಹಾರವನ್ನು ನಾವೇಕೆ ಕೊಡಬೇಕು?’ ಎಂದು ನನ್ನನ್ನು ತಮಾಷೆ ಮಾಡಿದಿರಿ” ಎಂದನು. 16 ಗಿದ್ಯೋನನು ಸುಖೋತ್ ನಗರದ ಹಿರಿಯರಿಗೆ ಮರುಭೂಮಿಯ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡೆಸಿ ಶಿಕ್ಷಿಸಿದನು. 17 ಗಿದ್ಯೋನನು ಪೆನೂವೇಲಿನ ಬುರುಜನ್ನೂ ಸಹ ಕೆಡವಿ ಆ ಪಟ್ಟಣದ ಜನರನ್ನು ಕೊಂದುಹಾಕಿದನು.
18 ಆಮೇಲೆ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನರನ್ನು, “ನೀವು ತಾಬೋರ್ ಪರ್ವತದಲ್ಲಿ ಕೆಲವು ಜನರನ್ನು ಕೊಂದಿರುವಿರಿ. ಅವರು ಹೇಗಿದ್ದರು?” ಎಂದು ಕೇಳಿದನು.
ಅವರು “ನಿನ್ನ ಹಾಗೆಯೇ ಇದ್ದರು. ಅವರಲ್ಲಿ ಪ್ರತಿಯೊಬ್ಬನೂ ಒಬ್ಬ ರಾಜಕುಮಾರನಂತೆ ಕಂಡನು” ಎಂದು ಉತ್ತರಕೊಟ್ಟರು.
19 ಗಿದ್ಯೋನನು, “ಆ ಜನರು ನನ್ನ ಸಹೋದರರಾಗಿದ್ದರು. ಅವರು ನನ್ನ ತಾಯಿಯ ಮಕ್ಕಳು! ಯೆಹೋವನ ಮೇಲೆ ಆಣೆಮಾಡಿ ಹೇಳುತ್ತೇನೆ, ನೀವು ಅವರನ್ನು ಕೊಲ್ಲದೆ ಇದಿದ್ದರೆ ನಾನು ಈಗ ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿದನು.
20 ಗಿದ್ಯೋನನು ಎತೆರನ ಕಡೆಗೆ ತಿರುಗಿದನು. ಎತೆರನು ಗಿದ್ಯೋನನ ಹಿರಿಯ ಮಗ. ಗಿದ್ಯೋನನು ಅವನಿಗೆ, “ಈ ಅರಸರನ್ನು ಕೊಲ್ಲು” ಎಂದು ಹೇಳಿದನು. ಆದರೆ ಎತೆರನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟನು. ಅವನು ತನ್ನ ಕತ್ತಿಯನ್ನು ಹೊರ ತೆಗೆಯಲಿಲ್ಲ.
21 ಆಗ ಜೆಬಹ ಮತ್ತು ಚಲ್ಮುನ್ನರು ಗಿದ್ಯೋನನಿಗೆ, “ನೀನೇ ನಮ್ಮನ್ನು ಕೊಲ್ಲು. ನೀನು ಈ ಕೆಲಸವನ್ನು ಮಾಡುವುದಕ್ಕೆ ಯೋಗ್ಯವಯಸ್ಸಿನವನೂ ಗಟ್ಟಿಗನೂ ಆಗಿರುವೆ” ಎಂದರು. ಗಿದ್ಯೋನನು ಎದ್ದು ಜೆಬಹ ಮತ್ತು ಚಲ್ಮುನ್ನರನ್ನು ಕೊಂದುಹಾಕಿದನು. ಆಮೇಲೆ ಗಿದ್ಯೋನನು ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
ಗಿದ್ಯೋನನು ಒಂದು ಏಫೋದನ್ನು ಮಾಡಿಸಿದನು
22 ಇಸ್ರೇಲಿಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರಿಂದ ರಕ್ಷಿಸಿರುವೆ. ಅದಕ್ಕಾಗಿ ಈಗ ನಮ್ಮ ಮೇಲೆ ಆಳ್ವಿಕೆ ಮಾಡು. ನೀನೂ ನಿನ್ನ ಮಗನೂ ನಿನ್ನ ಮೊಮ್ಮಗನೂ ನಮ್ಮನ್ನು ಆಳಬೇಕೆಂಬುದು ನಮ್ಮ ಆಶೆ” ಎಂದು ಹೇಳಿದರು.
23 ಗಿದ್ಯೋನನು ಇಸ್ರೇಲರಿಗೆ, “ಯೆಹೋವನು ನಿಮ್ಮನ್ನು ಆಳುತ್ತಾನೆ. ನಾನು ನಿಮ್ಮನ್ನು ಆಳುವುದಿಲ್ಲ; ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ” ಎಂದು ಹೇಳಿದನು.
24 ಇಸ್ರೇಲರು ಸೋಲಿಸಿದ ಜನರಲ್ಲಿ ಕೆಲವರು ಇಷ್ಮಾಯೇಲ್ಯರಾಗಿದ್ದರು. ಇಷ್ಮಾಯೇಲ್ಯರು ಕಿವಿಗಳಲ್ಲಿ ಚಿನ್ನದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. ಆದ್ದರಿಂದ ಗಿದ್ಯೋನನು ಇಸ್ರೇಲರಿಗೆ, “ನೀವು ನನಗಾಗಿ ಈ ಒಂದು ಕೆಲಸವನ್ನು ಮಾಡಬೇಕೆಂದು ನನ್ನ ಕೋರಿಕೆ. ನೀವು ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳಿಂದ ಪ್ರತಿಯೊಬ್ಬನು ಒಂದು ಬಂಗಾರದ ಮುರುವನ್ನು ನನಗೆ ಕೊಡಬೇಕು” ಎಂದು ಕೇಳಿದನು.
25 ಇಸ್ರೇಲರು, “ನೀನು ಕೇಳಿದ್ದನ್ನು ಸಂತೋಷದಿಂದ ಕೊಡುತ್ತೇವೆ” ಎಂದು ಹೇಳಿ ನೆಲದ ಮೇಲೆ ಒಂದು ಮೇಲಂಗಿಯನ್ನು ಹಾಸಿದರು. ಪ್ರತಿಯೊಬ್ಬನು ಒಂದೊಂದು ಮುರುವನ್ನು ಆ ಅಂಗಿಯ ಮೇಲೆ ಎಸೆದನು. 26 ಆ ಮುರುವುಗಳನ್ನು ಒಟ್ಟುಗೂಡಿಸಿ ತೂಕ ಹಾಕಿದಾಗ ಅವುಗಳ ತೂಕ ನಲವತ್ತಮೂರು ಪೌಂಡಿನಷ್ಟಿತ್ತು. ಗಿದ್ಯೋನನಿಗೆ ಇಸ್ರೇಲರು ಕೊಟ್ಟ ಬೇರೆ ಕಾಣಿಕೆಗಳು ಇದರಲ್ಲಿ ಸೇರಿಲ್ಲ. ಅವರು ಅರ್ಧಚಂದ್ರಾಕಾರದ ಮತ್ತು ಕಣ್ಣೀರಿನಾಕಾರದ ಆಭರಣಗಳನ್ನು ಸಹ ಕೊಟ್ಟಿದ್ದರು. ಅವರು ಅವನಿಗೆ ನೇರಳೆ ಬಣ್ಣದ ನಿಲುವಂಗಿಗಳನ್ನು ಕೊಟ್ಟಿದ್ದರು. ಈ ವಸ್ತ್ರಗಳನ್ನು ಮಿದ್ಯಾನ್ಯರ ಅರಸರು ಧರಿಸುತ್ತಿದ್ದರು. ಅವರು ಮಿದ್ಯಾನ್ಯರ ಒಂಟೆಗಳ ಸರಗಳನ್ನು ಸಹ ಕೊಟ್ಟರು.
27 ಗಿದ್ಯೋನನು ಈ ಚಿನ್ನವನ್ನು ಒಂದು ಏಫೋದ್ ಮಾಡುವುದಕ್ಕೆ ಬಳಸಿದನು. ಆ ಏಫೋದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಇಸ್ರೇಲರು ಈ ಏಫೋದನ್ನು ಆರಾಧಿಸಿದರು. ಹೀಗಾಗಿ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಗಿದ್ಯೋನನನ್ನು ಮತ್ತು ಅವನ ಕುಟುಂಬದವರನ್ನು ಪಾಪಮಾರ್ಗಕ್ಕೆ ಎಳೆಯಲು ಏಫೋದ್ ಒಂದು ಉರುಲಾಗಿ ಪರಿಣಮಿಸಿತು.
ಗಿದ್ಯೋನನ ಮರಣ
28 ಮಿದ್ಯಾನ್ಯರು ಇಸ್ರೇಲರ ಅಧೀನದಲ್ಲಿರಬೇಕಾಯಿತು. ಮಿದ್ಯಾನ್ಯರು ಯಾವ ಹೆಚ್ಚಿನ ತೊಂದರೆಗಳನ್ನು ಕೊಡಲಿಲ್ಲ. ಗಿದ್ಯೋನನು ಬದುಕಿರುವವರೆಗೆ ನಲವತ್ತು ವರ್ಷ ಆ ದೇಶದಲ್ಲಿ ಶಾಂತಿ ನೆಲೆಸಿತ್ತು.
29 ಯೋವಾಷನ ಮಗ ಯೆರುಬ್ಬಾಳನು (ಗಿದ್ಯೋನನು) ತನ್ನ ಮನೆಯಲ್ಲಿ ವಾಸವಾಗಿದ್ದನು. 30 ಗಿದ್ಯೋನನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವನಿಗೆ ಅನೇಕ ಹೆಂಡತಿಯರಿದ್ದರು. 31 ಗಿದ್ಯೋನನಿಗೆ ಒಬ್ಬ ಉಪಪತ್ನಿಯೂ ಇದ್ದಳು. ಅವಳು ಶೆಕೆಮಿನಲ್ಲಿರುತ್ತಿದ್ದಳು. ಅವಳಲ್ಲಿ ಅವನಿಗೆ ಒಬ್ಬ ಮಗನು ಹುಟ್ಟಿದನು. ಗಿದ್ಯೋನನು ಅವನಿಗೆ ಅಬೀಮೆಲೆಕ ಎಂದು ಹೆಸರಿಟ್ಟನು.
32 ಯೋವಾಷನ ಮಗನಾದ ಗಿದ್ಯೋನನು ದಿನ ತುಂಬಿದ ಮುದುಕನಾಗಿ ಮರಣಹೊಂದಿದನು. ಗಿದ್ಯೋನನ ಶವವನ್ನು ಅವನ ತಂದೆಯಾದ ಯೋವಾಷನಿಗೆ ಸೇರಿದ್ದ ಒಂದು ಸಮಾಧಿಯಲ್ಲಿ ಹೂಳಿಟ್ಟರು. ಆ ಸಮಾಧಿಯು ಅಬೀಯೆಜೆರ್ ಕುಟುಂಬದವರ ಒಫ್ರದಲ್ಲಿತ್ತು. 33 ಗಿದ್ಯೋನನು ಸತ್ತಮೇಲೆ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರು ಬಾಳನನ್ನು ಪೂಜಿಸಿದರು. ಬಾಳ್ಬೇರಿತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು. 34 ಯೆಹೋವನು ಅವರನ್ನು ಅವರ ಸುತ್ತಮುತ್ತಲಿನ ಎಲ್ಲ ಶತ್ರುಗಳಿಂದ ರಕ್ಷಿಸಿದ್ದರೂ ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಜ್ಞಾಪಿಸಿಕೊಳ್ಳಲಿಲ್ಲ. 35 ಯೆರುಬ್ಬಾಳನು ಅನೇಕ ಸತ್ಕಾರ್ಯಗಳನ್ನು ಮಾಡಿದರೂ ಸಹ ಇಸ್ರೇಲರು ಅವನ ಕುಟುಂಬದವರಿಗೆ ಕೃತಜ್ಞತೆಯುಳ್ಳವರಾಗಿರಲಿಲ್ಲ.
ಅಬೀಮೆಲೆಕನು ಅರಸನಾದನು
9 ಅಬೀಮೆಲೆಕನು ಯೆರುಬ್ಬಾಳನ (ಗಿದ್ಯೋನನ) ಮಗನು. ಅಬೀಮೆಲೆಕನು ಶೆಕೆಮಿನಲ್ಲಿದ್ದ ತನ್ನ ಸೋದರ ಮಾವಂದಿರಲ್ಲಿಗೆ ಹೋದನು. ಅವನು ತನ್ನ ಸೋದರ ಮಾವಂದಿರಿಗೂ ತನ್ನ ತಾಯಿಯ ಕುಟುಂಬದವರೆಲ್ಲರಿಗೂ ಮತ್ತು 2 ಶೆಕೆಮಿನ ಹಿರಿಯರಿಗೆ, “‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳುವುದು ಒಳ್ಳೆಯದೋ ಅಥವಾ ನಾನೊಬ್ಬನೇ ನಿಮ್ಮನ್ನು ಆಳುವುದು ಒಳ್ಳೆಯದೋ’ ಎಂಬ ಪ್ರಶ್ನೆಯನ್ನು ಕೇಳಿದ್ದಲ್ಲದೆ ನಾನು ನಿಮ್ಮ ರಕ್ತಸಂಬಂಧಿ ಎಂಬುದನ್ನು ನೆನಪಿಡಿ” ಎಂದು ಹೇಳಿದನು.
3 ಅಬೀಮೆಲೆಕನ ಸೋದರ ಮಾವಂದಿರು ಶೆಕೆಮಿನ ಹಿರಿಯರ ಜೊತೆ ಮಾತನಾಡಿ ಅವರಿಗೆ ಆ ಪ್ರಶ್ನೆಯನ್ನು ಕೇಳಿದರು. ಶೆಕೆಮಿನ ಹಿರಿಯರು ಅಬೀಮೆಲೆಕನ ಪಕ್ಷವಹಿಸಲು ನಿರ್ಧರಿಸಿದರು. ಆ ಹಿರಿಯರು, “ಎಷ್ಟೇ ಆದರೂ ಅವನು ನಮ್ಮ ಸಹೋದರ” ಎಂದರು. 4 ಶೆಕೆಮಿನ ಹಿರಿಯರು ಅಬೀಮೆಲೆಕನಿಗೆ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ಕೊಟ್ಟರು. ಆ ಬೆಳ್ಳಿಯು ಬಾಳ್ಬೆರೀತನ ಗುಡಿಗೆ ಸೇರಿತ್ತು. ಕೆಲವು ಗಂಡಸರನ್ನು ಕೂಲಿಗೆ ತೆಗೆದುಕೊಳ್ಳಲು ಅವನು ಈ ಬೆಳ್ಳಿಯನ್ನು ಬಳಸಿಕೊಂಡನು. ಈ ಗಂಡಸರು ಅಯೋಗ್ಯರೂ ದುಷ್ಟರೂ ಆಗಿದ್ದರು. ಅವರು ಅಬೀಮೆಲೆಕನ ಹಿಂಬಾಲಕರಾಗಿದ್ದರು.
5 ಅಬೀಮೆಲೆಕನು ಒಫ್ರದಲ್ಲಿದ್ದ ತನ್ನ ತಂದೆಯ ಮನೆಗೆ ಹೋದನು. ಅಬೀಮೆಲೆಕನು ತನ್ನ ಸಹೋದರರ ಕೊಲೆ ಮಾಡಿದನು. ಅಬೀಮೆಲೆಕನು ತನ್ನ ತಂದೆಯಾದ ಯೆರುಬ್ಬಾಳನ ಎಪ್ಪತ್ತು ಮಕ್ಕಳನ್ನು ಕೊಂದನು. ಅವನು ಅವರೆಲ್ಲರನ್ನು ಏಕಕಾಲದಲ್ಲಿ ಕೊಂದನು. ಆದರೆ ಯೆರುಬ್ಬಾಳನ ಕಿರಿಯ ಮಗನು ಅಡಗಿಕೊಂಡಿದ್ದು ತಪ್ಪಿಸಿಕೊಂಡನು. ಆ ಕಿರಿಯ ಮಗನ ಹೆಸರು ಯೋತಾಮ.
6 ತರುವಾಯ ಶೆಕೆಮಿನ ಎಲ್ಲ ಹಿರಿಯರೂ ಮಿಲ್ಲೋ ಕೋಟೆಯವರೂ ಒಂದೆಡೆ ಬಂದರು. ಅವರೆಲ್ಲರೂ ಶೆಕೆಮಿನಲ್ಲಿದ್ದ ಜ್ಞಾಪಕಸ್ತಂಭದ ಬಳಿ ಇರುವ ದೊಡ್ಡ ಮರದ ಕೆಳಗೆ ಸೇರಿ ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿದರು.
ಯೋತಾಮನ ಕಥೆ
7 ಶೆಕೆಮಿನ ಹಿರಿಯರು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ ಸಮಾಚಾರವನ್ನು ಯೋತಾಮನು ಕೇಳಿದನು. ಕೂಡಲೇ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ಯೋತಾಮನು ಜನರಿಗೆ ಈ ಕಥೆಯನ್ನು ಕೂಗಿಕೂಗಿ ಹೇಳಿದನು:
“ಶೆಕೆಮಿನ ಹಿರಿಯರೇ, ನನ್ನ ಮಾತನ್ನು ಕೇಳಿರಿ; ಆಗ ಯೆಹೋವನು ನಿಮ್ಮ ಮಾತನ್ನು ಕೇಳುವನು.
8 “ಒಮ್ಮೆ ಮರಗಳು ತಮ್ಮನ್ನು ಆಳುವುದಕ್ಕೆ ಒಬ್ಬ ಅರಸನನ್ನು ಆರಿಸಬೇಕೆಂದು ನಿರ್ಧರಿಸಿದವು. ಆ ಮರಗಳು ಆಲಿವ್ ಮರಕ್ಕೆ, ‘ನೀನು ನಮ್ಮ ಅರಸನಾಗಿ ಆಳು’ ಎಂದು ಕೇಳಿಕೊಂಡವು.
9 “ಆದರೆ ಆಲಿವ್ ಮರವು, ‘ಜನರು ಮತ್ತು ದೇವತೆಗಳು ನನ್ನ ಎಣ್ಣೆಗಾಗಿ ನನ್ನನ್ನು ತುಂಬ ಹೊಗಳುತ್ತಾರೆ; ಬೇರೆ ಮರಗಳ ಮೇಲೆ ಆಳುವುದಕ್ಕಾಗಿ ನಾನು ಎಣ್ಣೆ ಮಾಡುವುದನ್ನು ಬಿಡಬೇಕೇ?’ ಎಂದು ಕೇಳಿತು.
10 “ಆಗ ಆ ಮರಗಳು ಅಂಜೂರದ ಮರದ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.
11 “ಆದರೆ ಅಂಜೂರದ ಮರವು, ‘ನಾನು ಕೇವಲ ಬೇರೆ ಮರಗಳ ಮೇಲೆ ಆಳ್ವಿಕೆ ಮಾಡುವುದಕ್ಕಾಗಿ ಉತ್ತಮವಾದ ಮತ್ತು ರುಚಿಕರವಾದ ಹಣ್ಣುಗಳು ಫಲಿಸುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.
12 “ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು’ ಎಂದವು.
13 “ಆದರೆ ದ್ರಾಕ್ಷಾಲತೆಯು, ‘ನನ್ನ ರಸವು ಎಲ್ಲ ಜನರಿಗೂ ಮತ್ತು ರಾಜರುಗಳಿಗೂ ಸಂತೋಷವನ್ನು ಉಂಟುಮಾಡುತ್ತದೆ. ಕೇವಲ ಬೇರೆ ಮರಗಳ ಮೇಲೆ ಅಧಿಕಾರ ನಡೆಸುವುದಕ್ಕಾಗಿ ನಾನು ನನ್ನ ರಸ ಕೊಡುವುದನ್ನು ನಿಲ್ಲಿಸಬೇಕೇ?’ ಎಂದು ಕೇಳಿತು.
14 “ಕೊನೆಗೆ ಎಲ್ಲ ಮರಗಳು ಮುಳ್ಳುಪೊದೆಗೆ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.
15 “ಆ ಮುಳ್ಳುಪೊದೆಯು, ‘ನೀವು ನಿಜವಾಗಿಯೂ ನನ್ನನ್ನು ನಿಮ್ಮ ಅರಸನನ್ನಾಗಿ ಮಾಡಬೇಕೆಂದು ಇಚ್ಛೆಪಟ್ಟರೆ, ನೀವು ಬಂದು ನನ್ನ ನೆರಳಿನಲ್ಲಿ ಆಶ್ರಯಪಡೆಯಿರಿ; ನೀವು ಹೀಗೆ ಮಾಡಲು ಒಪ್ಪದಿದ್ದರೆ ನನ್ನಿಂದ ಬೆಂಕಿ ಹೊರಡಲಿ. ಆ ಬೆಂಕಿಯು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡಲಿ’ ಎಂದಿತು.
16 “ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡುವಾಗ ಪ್ರಾಮಾಣಿಕರಾಗಿದ್ದರೆ, ಅವನ ಸಂಗಡ ಸಂತೋಷದಿಂದಿರಿ. ನೀವು ಯೆರುಬ್ಬಾಳ ಮತ್ತು ಅವನ ಕುಟುಂಬದವರೊಡನೆ ನ್ಯಾಯದಿಂದ ನಡೆದುಕೊಂಡಿದ್ದರೆ ಒಳ್ಳೆಯದೇ ಸರಿ. ನೀವು ಯೆರುಬ್ಬಾಳನಿಗೋಸ್ಕರ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದರೆ ಒಳ್ಳೆಯದು. 17 ಆದರೆ ನಿಮಗೆ ನಮ್ಮ ತಂದೆಯು ಏನು ಮಾಡಿದನೆಂಬುದನ್ನು ಯೋಚಿಸಿರಿ. ನಮ್ಮ ತಂದೆಯು ನಿಮಗೋಸ್ಕರ ಯುದ್ಧ ಮಾಡಿದನು. ಅವನು ಮಿದ್ಯಾನ್ಯರಿಂದ ನಿಮ್ಮನ್ನು ರಕ್ಷಿಸಲು ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿದನು. 18 ಆದರೆ ನೀವು ಈಗ ನಮ್ಮ ತಂದೆಯ ಕುಟುಂಬದವರನ್ನು ವಿರೋಧಿಸುತ್ತಿದ್ದೀರಿ. ನೀವು ನಮ್ಮ ತಂದೆಯ ಎಪ್ಪತ್ತು ಮಕ್ಕಳನ್ನು ಏಕಕಾಲದಲ್ಲಿ ಕೊಲೆಮಾಡಿದ್ದೀರಿ. ನೀವು ಅಬೀಮೆಲೆಕನನ್ನು ಶೆಕೆಮಿನ ಅರಸನನ್ನಾಗಿ ಮಾಡಿದ್ದೀರಿ. ಅವನು ನಿಮ್ಮ ರಕ್ತ ಸಂಬಂಧಿ ಎಂಬ ಕಾರಣದಿಂದ ಅವನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ಅವನು ಕೇವಲ ನಮ್ಮ ತಂದೆಯ ದಾಸಿ ಪುತ್ರ. 19 ನೀವು ಇಂದು ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ ಧರ್ಮವೂ ಆಗಿದ್ದರೆ ನೀವು ಅಬೀಮೆಲೆಕನನ್ನು ನಿಮ್ಮ ಅರಸನೆಂದು ಒಪ್ಪಿ ಸಂತೋಷದಿಂದ ಇದ್ದುಬಿಡಿ. ಅವನೂ ನಿಮ್ಮ ಜೊತೆ ಸಂತೋಷದಿಂದ ಇರಲಿ. 20 ಆದರೆ ನೀವು ಮಾಡಿದ್ದು ಸರಿಯಾಗಿರದ ಪಕ್ಷದಲ್ಲಿ ಶೆಕೆಮಿನ ಹಿರಿಯರಾದ ನಿಮ್ಮನ್ನೂ ಮಿಲ್ಲೋ ಕೋಟೆಯವರನ್ನೂ ಅಬೀಮೆಲೆಕನು ನಾಶಮಾಡಲಿ. ಅಬೀಮೆಲೆಕನು ಕೂಡ ನಾಶಹೊಂದಲಿ” ಎಂದನು.
21 ಇದನ್ನೆಲ್ಲಾ ಹೇಳಿ ಯೋತಾಮನು ಬೇರ ಎಂಬ ನಗರಕ್ಕೆ ಓಡಿಹೋದನು. ಯೋತಾಮನು ತನ್ನ ಸಹೋದರನಾದ ಅಬೀಮೆಲೆಕನಿಗೆ ಹೆದರಿ ಅದೇ ನಗರದಲ್ಲಿ ಉಳಿದುಕೊಂಡನು.
ಶೆಕೆಮಿನ ಜನರ ವಿರುದ್ಧ ಅಬೀಮೆಲೆಕನ ಯುದ್ಧ
22 ಅಬೀಮೆಲೆಕನು ಇಸ್ರೇಲರನ್ನು ಮೂರು ವರ್ಷ ಆಳಿದನು. 23-24 ಅಬೀಮೆಲೆಕನು ಯೆರುಬ್ಬಾಳನ ಎಪ್ಪತ್ತು ಮಕ್ಕಳನ್ನು ಕೊಂದಿದ್ದನು. ಅವರು ಅವನ ಸ್ವಂತ ಸಹೋದರರಾಗಿದ್ದರು. ಶೆಕೆಮಿನ ಹಿರಿಯರು ಈ ದುಷ್ಕೃತ್ಯದಲ್ಲಿ ಅವನಿಗೆ ಬೆಂಬಲ ಕೊಟ್ಟಿದ್ದರು. ಆದ್ದರಿಂದ ಯೆಹೋವನು ಅಬೀಮೆಲೆಕನ ಮತ್ತು ಶೆಕೆಮಿನ ಹಿರಿಯರ ಮಧ್ಯೆ ಮನಸ್ತಾಪ ಹುಟ್ಟುವಂತೆ ಮಾಡಿದನು. ಶೆಕೆಮಿನ ಹಿರಿಯರು ಅಬೀಮೆಲೆಕನಿಗೆ ಕಷ್ಟ ಕೊಡಲು ಯೋಚಿಸುತ್ತಿದ್ದರು. 25 ಶೆಕೆಮಿನ ಹಿರಿಯರಿಗೆ ಅಬೀಮೆಲೆಕನ ಮೇಲಿದ್ದ ಅಭಿಮಾನ ಇಲ್ಲವಾಯಿತು. ಅವರು ಅಲ್ಲಿ ಸಂಚರಿಸುವ ಜನರ ಮೇಲೆ ಧಾಳಿ ಮಾಡಿ ಲೂಟಿಮಾಡಲು ಬೆಟ್ಟಗಳ ಮೇಲೆ ಜನರನ್ನು ಇಟ್ಟರು. ಅಬೀಮೆಲೆಕನಿಗೆ ಈ ಧಾಳಿಗಳ ವಿಷಯ ತಿಳಿದುಬಂತು.
26 ಎಬೆದನ ಮಗನಾದ ಗಾಳನೆಂಬವನು ತನ್ನ ಸಹೋದರರ ಸಮೇತ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಗಾಳನನ್ನು ನಂಬಿ ಅವನನ್ನು ಅನುಸರಿಸಲು ನಿರ್ಧರಿಸಿದರು.
27 ಶೆಕೆಮಿನ ಜನರು ದ್ರಾಕ್ಷಿಯನ್ನು ಕೊಯಿದುಕೊಂಡು ಬರಲು ತಮ್ಮ ಹೊಲಗಳಿಗೆ ಹೋದರು. ಆ ದ್ರಾಕ್ಷಿಯನ್ನು ಹಿಂಡಿ ದ್ರಾಕ್ಷಾರಸ ಮಾಡಿದರು. ಆಮೇಲೆ ತಮ್ಮ ದೇವರ ಮಂದಿರದಲ್ಲಿ ಒಂದು ಉತ್ಸವನ್ನು ಮಾಡಿದರು. ಆ ಜನರು ತಿಂದು ಕುಡಿದು, ಅಬೀಮೆಲೆಕನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದರು.
28 ಆಗ ಎಬೆದನ ಮಗನಾದ ಗಾಳನು, “ನಾವು ಶೆಕೆಮಿನ ಜನರು. ನಾವು ಅಬೀಮೆಲೆಕನ ಆಜ್ಞೆಗಳನ್ನು ಏಕೆ ಪಾಲಿಸಬೇಕು? ಅವನು ತನ್ನನ್ನು ಯಾರೆಂದು ತಿಳಿದುಕೊಂಡಿದ್ದಾನೆ? ಅಬೀಮೆಲೆಕನು ಯೆರುಬ್ಬಾಳನ ಮಕ್ಕಳಲ್ಲಿ ಒಬ್ಬನು. ಅದು ಸರಿಯಲ್ಲವೇ? ಅಬೀಮೆಲೆಕನು ಜೆಬುಲನನ್ನು ತನ್ನ ಪುರಾಧಿಕಾರಿಯನ್ನಾಗಿ ನೇಮಿಸಿರುವುದೂ ನಿಜವಲ್ಲವೇ? ನಾವು ಅಬೀಮೆಲೆಕನ ಆಜ್ಞೆ ಪಾಲಿಸುವುದು ಬೇಡ. ನಾವು ನಮ್ಮ ಜನರಾದ ಹಮೋರನ ಸಂತತಿಯವರ ಆಜ್ಞೆಯನ್ನೇ ಪಾಲಿಸೋಣ. (ಹಮೋರನು ಶೆಕೆಮನ ತಂದೆ.) 29 ನೀವು ನನಗೆ ಈ ಜನರ ಅಧಿಕಾರಿಯನ್ನಾಗಿ ಮಾಡಿದರೆ, ನಾನು ಅಬೀಮೆಲೆಕನನ್ನು ನಾಶಮಾಡುತ್ತೇನೆ. ನಾನು ಅವನಿಗೆ, ‘ನಿನ್ನ ಸೈನ್ಯವನ್ನು ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಬಾ’ ಎಂದು ಕರೆಯುತ್ತೇನೆ” ಎಂದನು.
30 ಜೆಬುಲನು ಶೆಕೆಮ್ ನಗರದ ಪುರಾಧಿಕಾರಿಯಾಗಿದ್ದನು. ಎಬೆದನ ಮಗನಾದ ಗಾಳನ ಮಾತುಗಳನ್ನು ಜೆಬುಲನು ಕೇಳಿ ಬಹಳ ಕೋಪಗೊಂಡನು. 31 ಜೆಬುಲನು ಅರೂಮ ನಗರದಲ್ಲಿದ್ದ[b] ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿದನು. ಅವನು ಕಳುಹಿಸಿದ ಸಂದೇಶ ಹೀಗಿದೆ:
“ಎಬೆದನ ಮಗನಾದ ಗಾಳನು ಮತ್ತು ಅವನ ಸಹೋದರರು ಶೆಕೆಮ್ ನಗರಕ್ಕೆ ಬಂದಿದ್ದಾರೆ. ಅವರು ನಿನಗೆ ತೊಂದರೆಯನ್ನು ಉಂಟುಮಾಡುತ್ತಿದ್ದಾರೆ. ಗಾಳನು ಇಡೀ ನಗರವನ್ನು ನಿನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾನೆ. 32 ಅದಕ್ಕಾಗಿ ನೀನು ಮತ್ತು ನಿನ್ನ ಜನರು ಈ ರಾತ್ರಿ ಬಂದು ನಗರದ ಹೊರಗಡೆ ಹೊಲಗಳಲ್ಲಿ ಅಡಗಿಕೊಂಡಿರಬೇಕು. 33 ಬೆಳಗಾಗಿ ಸೂರ್ಯನು ಮೇಲೇರಿದ ತರುವಾಯ ನಗರದ ಮೇಲೆ ಧಾಳಿಮಾಡಬೇಕು. ಗಾಳ ಮತ್ತು ಅವನ ಜನರು ನಿನ್ನ ಸಂಗಡ ಯುದ್ಧ ಮಾಡುವುದಕ್ಕೆ ನಗರದಿಂದ ಹೊರಗೆ ಬರುತ್ತಾರೆ. ಅವರು ಹೊರಗೆ ಬಂದಾಗ ನಿನಗೆ ತೋರಿದಂತೆ ಅವರಿಗೆ ಮಾಡು.”
34 ಅಬೀಮೆಲೆಕ ಮತ್ತು ಅವನ ಸೈನಿಕರು ರಾತ್ರಿಯಲ್ಲಿ ಎದ್ದು ನಗರಕ್ಕೆ ಹೋದರು. ಆ ಸೈನಿಕರು ತಮ್ಮನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಶೆಕೆಮ್ ನಗರದ ಹತ್ತಿರ ಅಡಗಿಕೊಂಡರು. 35 ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಶೆಕೆಮ್ ನಗರದ ಪ್ರವೇಶದ್ವಾರದಲ್ಲಿ ನಿಂತಿದ್ದನು. ಗಾಳನು ಅಲ್ಲಿ ನಿಂತಿದ್ದಾಗ ಅಬೀಮೆಲೆಕ ಮತ್ತು ಅವನ ಸೈನಿಕರು ತಾವು ಅಡಗಿದ್ದ ಸ್ಥಳಗಳನ್ನು ಬಿಟ್ಟು ಹೊರಗೆ ಬಂದರು.
36 ಗಾಳನು ಸೈನಿಕರನ್ನು ನೋಡಿದನು. ಗಾಳನು ಜೆಬುಲನಿಗೆ, “ಅಲ್ಲಿ ನೋಡು, ಬೆಟ್ಟ ಇಳಿದು ಜನರು ಬರುತ್ತಿದ್ದಾರೆ” ಎಂದನು.
ಆದರೆ ಜೆಬುಲನು, “ನೀನು ಕೇವಲ ಬೆಟ್ಟದ ನೆರಳನ್ನು ನೋಡುತ್ತಿರುವೆ; ನೆರಳು ಜನರಂತೆ ಕಾಣಿಸುತ್ತಿದೆ” ಎಂದನು.
37 ಆದರೆ ಪುನಃ ಗಾಳನು, “ಅಲ್ಲಿ ನೋಡು! ಕೆಲವು ಜನರು ಭೂಮಿಯ ಮಧ್ಯದಿಂದ ಬರುತ್ತಿದ್ದಾರೆ. ಅಲ್ಲಿ ಆ ಮಾಟಗಾರರ ಮರದ ಹತ್ತಿರ ಒಂದು ತಲೆಯನ್ನು ನೋಡಿದೆ” ಎಂದನು. 38 ಆಗ ಜೆಬುಲನು ಗಾಳನಿಗೆ, “ನೀನು ಈಗೇಕೆ ಬಡಾಯಿ ಕೊಚ್ಚುತ್ತಾ ಇಲ್ಲ? ‘ಅಬೀಮೆಲೆಕನು ಯಾರು? ನಾವು ಅವನ ಆಜ್ಞೆಯನ್ನು ಏಕೆ ಪಾಲಿಸಬೇಕು?’ ಎಂದು ನೀನು ಕೇಳಿದೆ. ನೀನು ಈ ಜನರನ್ನು ತಮಾಷೆಮಾಡಿದೆ. ಈಗ ಹೊರಗೆ ಹೋಗಿ ಅವರೊಂದಿಗೆ ಯುದ್ಧಮಾಡು” ಅಂದನು.
39 ಅಬೀಮೆಲೆಕನೊಂದಿಗೆ ಯುದ್ಧಮಾಡಲು ಗಾಳನು ಶೆಕೆಮಿನ ಹಿರಿಯರನ್ನು ನಗರದ ಹೊರಗಡೆ ಕರೆದುಕೊಂಡು ಹೋದನು. 40 ಅಬೀಮೆಲೆಕನು ಮತ್ತು ಅವನ ಜನರು ಗಾಳ ಮತ್ತು ಅವನ ಜನರನ್ನು ಬೆನ್ನಟ್ಟಿದರು. ಗಾಳನ ಜನರು ಹಿಂದಿರುಗಿ ಶೆಕೆಮ್ ನಗರದ ದ್ವಾರದ ಕಡೆಗೆ ಓಡಿದರು. ದ್ವಾರಕ್ಕೆ ಮುಟ್ಟುವ ಮೊದಲೇ ಗಾಳನ ಹಲವಾರು ಜನ ಹತರಾದರು.
41 ಅನಂತರ ಅಬೀಮೆಲೆಕನು ಅರೂಮ ನಗರಕ್ಕೆ ಹಿಂದಿರುಗಿದನು. ಜೆಬುಲನು ಗಾಳನನ್ನು ಮತ್ತು ಅವನ ಸಹೋದರರನ್ನು ಶೆಕೆಮ್ ನಗರದಿಂದ ಓಡಿಸಿಬಿಟ್ಟನು.
42 ಮರುದಿನ ಶೆಕೆಮಿನ ಜನರು ಹೊಲಗಳಲ್ಲಿ ಕೆಲಸ ಮಾಡಲು ಹೋದರು. ಅಬೀಮೆಲೆಕನಿಗೆ ಅದು ಗೊತ್ತಾಯಿತು. 43 ಅಬೀಮೆಲೆಕನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಅವನು ಶೆಕೆಮಿನ ಜನರ ಮೇಲೆ ಹಠಾತ್ತನೆ ಧಾಳಿ ಮಾಡಬಯಸಿದ್ದನು. ಆದ್ದರಿಂದ ಅವನು ತನ್ನ ಜನರನ್ನು ಹೊಲಗಳಲ್ಲಿ ಅಡಗಿಸಿಟ್ಟನು. ನಗರದಿಂದ ಜನರು ಹೊರಗೆ ಬರುವುದನ್ನು ನೋಡಿದ ತಕ್ಷಣ ಅವನು ನೆಗೆದೆದ್ದು ಅವರ ಮೇಲೆ ಧಾಳಿಮಾಡಿದನು. 44 ಅಬೀಮೆಲೆಕ ಮತ್ತು ಅವನ ಗುಂಪಿನವರು ಓಡಿಕೊಂಡು ಶೆಕೆಮ್ ನಗರದ ಬಾಗಿಲಿನ ಹತ್ತಿರ ಒಂದು ಸ್ಥಳಕ್ಕೆ ಬಂದರು. ಉಳಿದ ಎರಡು ಗುಂಪಿನವರು ಹೊಲಗಳಲ್ಲಿದ್ದ ಜನರ ಕಡೆಗೆ ಓಡಿಹೋಗಿ ಅವರನ್ನು ಕೊಂದುಹಾಕಿದರು. 45 ಆ ಇಡೀ ದಿವಸ ಅಬೀಮೆಲೆಕ ಮತ್ತು ಅವನ ಜನರು ಶೆಕೆಮಿನ ಜನರೊಂದಿಗೆ ಯುದ್ಧ ಮಾಡಿದರು. ಅಬೀಮೆಲೆಕ ಮತ್ತು ಅವನ ಜನರು ಶೆಕೆಮ್ ನಗರವನ್ನು ಸ್ವಾಧೀನಪಡಿಸಿಕೊಂಡರು; ಆ ನಗರದ ಜನರನ್ನು ಕೊಂದುಹಾಕಿದರು. ಅಬೀಮೆಲೆಕನು ಊರನ್ನು ಕೆಡವಿ ಹಾಕಿ ಉಪ್ಪನ್ನು ಚೆಲ್ಲಿದನು.
46 ಶೆಕೆಮಿನ ಬುರುಜಿನ ಮೇಲೆ ಕೆಲವು ಜನರು ವಾಸಮಾಡುತ್ತಿದ್ದರು. ಶೆಕೆಮಿನಲ್ಲಿ ನಡೆದ ಘಟನೆಯ ಬಗ್ಗೆ ಕೇಳಿ ಅವರು ಏಲ್ಬೆರೀತ್ ದೇವರಗುಡಿಯ ಅತಿ ಸುರಕ್ಷಿತವಾದ ಕೋಣೆಯಲ್ಲಿ ಒಟ್ಟುಗೂಡಿದರು.
47 ಶೆಕೆಮ್ ಬುರುಜಿನ ಎಲ್ಲ ಹಿರಿಯರು ಒಟ್ಟಿಗೆ ಸೇರಿದ್ದಾರೆ ಎಂಬ ಸಂಗತಿಯನ್ನು ಅಬೀಮೆಲೆಕನು ಕೇಳಿದನು. 48 ಆದ್ದರಿಂದ ಅಬೀಮೆಲೆಕ ಮತ್ತು ಅವನ ಜನರು ಚಲ್ಮೋನ್ ಬೆಟ್ಟವನ್ನು ಹತ್ತಿಹೋದರು. ಅಬೀಮೆಲೆಕನು ಒಂದು ಕೊಡಲಿಯನ್ನು ತೆಗೆದುಕೊಂಡು ಕೆಲವು ಕೊಂಬೆಗಳನ್ನು ಕಡಿದನು. ಅವನು ಆ ಕೊಂಬೆಗಳನ್ನು ಹೊತ್ತುಕೊಂಡು ಹೊರಟನು. ಅಬೀಮೆಲೆಕನು ತನ್ನ ಸಂಗಡಿಗರಿಗೆ, “ನಾನು ಮಾಡಿದಂತೆಯೇ ನೀವು ಬೇಗನೆ ಮಾಡಿರಿ” ಎಂದನು. 49 ಆದ್ದರಿಂದ ಅವರೆಲ್ಲರೂ ಕೊಂಬೆಗಳನ್ನು ಕಡಿದುಕೊಂಡು ಅವನನ್ನು ಹಿಂಬಾಲಿಸಿದರು. ಅವರು ಏಲ್ಬೆರೀತ್ ದೇವರಗುಡಿಯ ಅತೀ ಸುರಕ್ಷಿತವಾದ ಕೋಣೆಯ ಸುತ್ತಲೂ ಆ ಕೊಂಬೆಗಳನ್ನು ಇಟ್ಟರು. ತರುವಾಯ ಆ ಕೊಂಬೆಗಳಿಗೆ ಬೆಂಕಿ ಹಚ್ಚಿ ಆ ಕೋಣೆಯಲ್ಲಿದ್ದ ಎಲ್ಲರನ್ನು ಸುಟ್ಟುಬಿಟ್ಟರು. ಶೆಕೆಮಿನ ಬುರುಜಿನಲ್ಲಿದ್ದ ಒಂದು ಸಾವಿರ ಗಂಡಸರು ಮತ್ತು ಹೆಂಗಸರು ಸತ್ತುಹೋದರು.
ಅಬೀಮೆಲೆಕನ ಮರಣ
50 ಅನಂತರ ಅಬೀಮೆಲೆಕನು ಮತ್ತು ಅವನ ಜನರು ತೇಬೇಚ ನಗರಕ್ಕೆ ಹೋಗಿ ಅದನ್ನು ಸ್ವಾಧೀನಪಡಿಸಿಕೊಂಡರು. 51 ಆದರೆ ಆ ನಗರದ ಒಳಭಾಗದಲ್ಲಿ ಒಂದು ಭದ್ರವಾದ ಗೋಪುರವಿತ್ತು. ಆ ನಗರದ ಎಲ್ಲ ಹಿರಿಯರು ಮತ್ತು ಉಳಿದ ಗಂಡಸರು ಮತ್ತು ಹೆಂಗಸರು ಅಲ್ಲಿಗೆ ಓಡಿಹೋದರು. ಅವರು ಗೋಪುರದೊಳಗೆ ಹೋಗಿ ಒಳಗಿನಿಂದ ಬೀಗ ಹಾಕಿಕೊಂಡರು; ಬಳಿಕ ಗೋಪುರದ ಮಾಳಿಗೆಯ ಮೇಲೆ ಹತ್ತಿದರು. 52 ಅಬೀಮೆಲೆಕನು ಮತ್ತು ಅವನ ಜನರು ಅದರ ಮೇಲೆ ಧಾಳಿಮಾಡಲು ಗೋಪುರದ ಬಳಿ ಬಂದರು. ಅಬೀಮೆಲೆಕನು ಆ ಗೋಪುರದ ಬಾಗಿಲಿನವರೆಗೆ ಹೋದನು. ಅವನು ಆ ಗೋಪುರವನ್ನು ಸುಡಬೇಕೆಂದಿದ್ದನು. 53 ಆದರೆ ಅಬೀಮೆಲೆಕನು ಆ ಗೋಪುರದ ಬಾಗಿಲಿನ ಹತ್ತಿರ ನಿಂತಿದ್ದಾಗ ಮಾಳಿಗೆಯ ಮೇಲಿದ್ದ ಒಬ್ಬ ಸ್ತ್ರೀಯು ಅವನ ತಲೆಯ ಮೇಲೆ ಒಂದು ಬೀಸುವ ಕಲ್ಲನ್ನು ಹಾಕಿದಳು. ಆ ಬೀಸುವ ಕಲ್ಲು ಅಬೀಮೆಲೆಕನ ತಲೆಬುರುಡೆಯನ್ನು ಒಡೆಯಿತು. 54 ಕೂಡಲೆ ಅಬೀಮೆಲೆಕನು ತನ್ನ ಆಯುಧವಾಹಕನಿಗೆ, “ನಿನ್ನ ಖಡ್ಗವನ್ನು ಹೊರತೆಗೆದು ನನ್ನನ್ನು ಕೊಂದುಬಿಡು. ‘ಒಬ್ಬ ಹೆಂಗಸು ಅಬೀಮೆಲೆಕನನ್ನು ಕೊಂದಳು’ ಎಂದು ಜನರು ಹೇಳಬಾರದು. ಅದಕ್ಕಾಗಿ ನೀನು ನನ್ನನ್ನು ಕೊಲ್ಲಬೇಕೆಂದು ನನ್ನ ಇಚ್ಛೆ” ಎಂದನು. ಆದ್ದರಿಂದ ಆ ಸೇವಕನು ಅಬೀಮೆಲೆಕನನ್ನು ತನ್ನ ಕತ್ತಿಯಿಂದ ಇರಿದನು; ಅಬೀಮೆಲೆಕನು ಸತ್ತನು. 55 ಅಬೀಮೆಲೆಕನು ಸತ್ತಿದ್ದನ್ನು ಇಸ್ರೇಲರು ನೋಡಿದರು. ಆದ್ದರಿಂದ ಅವರೆಲ್ಲರೂ ತಮ್ಮತಮ್ಮ ಸ್ಥಳಗಳಿಗೆ ಹಿಂದಿರುಗಿದರು.
56 ಅಬೀಮೆಲೆಕನು ತನ್ನ ತಂದೆಗೆ ವಿರೋಧವಾಗಿ ಮಾಡಿದ್ದ ಎಲ್ಲ ದುಷ್ಕೃತ್ಯಗಳಿಗಾಗಿ ಅಂದರೆ ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದು ಹಾಕಿದ್ದರಿಂದ ದೇವರು ಅವನನ್ನು ಹೀಗೆ ದಂಡಿಸಿದನು. 57 ದೇವರು ಶೆಕೆಮ್ ನಗರದ ಜನರನ್ನೂ ಸಹ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದಂಡಿಸಿದನು. ಹೀಗೆ ಯೆರುಬ್ಬಾಳನ (ಗಿದ್ಯೋನ) ಕಿರಿಯ ಮಗನಾದ ಯೋತಾಮನು ನುಡಿದಂತೆಯೇ ಆಯಿತು.
Kannada Holy Bible: Easy-to-Read Version. All rights reserved. © 1997 Bible League International