Beginning
22 ದೇವರಾದ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳು: ಇಸ್ರೇಲರು ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವು ಪರಿಶುದ್ಧವಾದವುಗಳು. ಅವು ನನ್ನವು, ಆದ್ದರಿಂದ ಯಾಜಕರಾದ ನೀವು ಅವುಗಳನ್ನು ತೆಗೆದುಕೊಳ್ಳಬಾರದು. ನೀವು ಆ ಪರಿಶುದ್ಧ ವಸ್ತುಗಳನ್ನು ಉಪಯೋಗಿಸಿದರೆ, ನನ್ನ ಪರಿಶುದ್ಧ ಹೆಸರಿಗೆ ಅವಮಾನವಾಗುವುದು. ನಾನೇ ಯೆಹೋವನು! 3 ನಿಮ್ಮ ಸಂತತಿಯವರೆಲ್ಲರಲ್ಲಿ ಯಾವನಾದರೂ ಅಪವಿತ್ರನಾಗಿರುವಾಗ ಅವುಗಳನ್ನು ಮುಟ್ಟಿದರೆ, ಅವನನ್ನು ನನ್ನ ಸನ್ನಿಧಿ ಸೇವೆಯಿಂದ ತೆಗೆದುಹಾಕಬೇಕು! ಇಸ್ರೇಲರು ಅವುಗಳನ್ನು ನನಗೆ ಕೊಟ್ಟಿದ್ದಾರೆ. ನಾನೇ ಯೆಹೋವನು!
4 “ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕೆಟ್ಟದಾದ ಚರ್ಮರೋಗವಾಗಲಿ ಸ್ರಾವವಾಗಲಿ ಇದ್ದರೆ, ಅವನು ಶುದ್ಧನಾಗುವವರೆಗೆ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಬಾರದು. ಅಶುದ್ಧನಾಗುವ ಪ್ರತಿ ಯಾಜಕನಿಗೂ ಈ ನಿಯಮ ಅನ್ವಯಿಸುತ್ತದೆ. ಆ ಯಾಜಕನು ಹೆಣವನ್ನು ಮುಟ್ಟಿದರೆ, ವೀರ್ಯಸ್ಖಲನ ಮಾಡಿಕೊಂಡರೆ, 5 ಯಾವುದೇ ಅಶುದ್ಧವಾದ ಹರಿದಾಡುವ ಜಂತುಗಳನ್ನು ಮುಟ್ಟಿದರೆ, ಅಶುದ್ಧನಾದ ವ್ಯಕ್ತಿಯನ್ನು ಮುಟ್ಟಿದರೆ ಅಶುದ್ಧನಾಗುವನು. ಯಾವುದು ಅವನನ್ನು ಅಶುದ್ಧಪಡಿಸಿತು ಎಂಬುದು ಪ್ರಾಮುಖ್ಯವಲ್ಲ. 6 ಒಬ್ಬನು ಅವುಗಳಲ್ಲಿ ಯಾವುದನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗುವನು. ಅವನು ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ತನ್ನನ್ನು ನೀರಿನಿಂದ ತೊಳೆದುಕೊಂಡರೂ ಪವಿತ್ರ ಪದಾರ್ಥವನ್ನು ತಿನ್ನಬಾರದು.[a] 7 ಸೂರ್ಯನು ಮುಳುಗಿದ ನಂತರವೇ ಅವನು ಶುದ್ಧನಾಗುವನು. ಬಳಿಕ ಅವನು ನೈವೇದ್ಯ ಪದಾರ್ಥವನ್ನು ತಿನ್ನಬಹುದು. ಯಾಕೆಂದರೆ ಆ ಪದಾರ್ಥವು ಅವನ ಪಾಲಾಗುತ್ತದೆ.
8 “ಯಾಜಕನು ಸತ್ತ ಪ್ರಾಣಿಯನ್ನಾಗಲಿ ಕ್ರೂರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನಾಗಲಿ ತಿನ್ನಬಾರದು. ಅವನು ಅದನ್ನು ತಿಂದರೆ ಅಶುದ್ಧನಾಗುವನು. ನಾನೇ ಯೆಹೋವನು!
9 “ಯಾಜಕರು ನನ್ನ ಅಗತ್ಯತೆಗಳನ್ನು ಎಚ್ಚರಿಕೆಯಿಂದ ಪೂರೈಸಿದರೆ ಅಪರಾಧಕ್ಕೆ ಒಳಗಾಗುವುದಿಲ್ಲ. ಅವರು ಪವಿತ್ರವಾದವುಗಳನ್ನು ಅಪವಿತ್ರಗೊಳಿಸಿದರೆ ಸಾಯುವರು. ಯೆಹೋವನಾದ ನಾನೇ ಅವರನ್ನು ಪರಿಶುದ್ಧರನ್ನಾಗಿ ಮಾಡಿದ್ದೇನೆ ಮತ್ತು ಈ ವಿಶೇಷ ಸೇವೆಗಾಗಿ ಪ್ರತ್ಯೇಕಿಸಿದ್ದೇನೆ. 10 ಯಾಜಕರ ಕುಟುಂಬದ ಜನರು ಮಾತ್ರವೇ ನೈವೇದ್ಯ ಪದಾರ್ಥಗಳನ್ನು ತಿನ್ನಬಹುದು. ಯಾಜಕನೊಂದಿಗೆ ಇಳಿದುಕೊಂಡವನಾಗಲಿ ಕೂಲಿಯಾಳಾಗಲಿ ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. 11 ಆದರೆ ಯಾಜಕನು ತನ್ನ ಸ್ವಂತ ಹಣದಿಂದ ಒಬ್ಬನನ್ನು ಗುಲಾಮನನ್ನಾಗಿ ಕೊಂಡುಕೊಂಡರೆ, ಆ ಗುಲಾಮನು ನೈವೇದ್ಯ ಪದಾರ್ಥಗಳಲ್ಲಿ ಕೆಲವನ್ನು ತಿನ್ನಬಹುದು. ಯಾಜಕನ ಮನೆಯಲ್ಲಿ ಹುಟ್ಟಿದ ಗುಲಾಮರು ಸಹ ಯಾಜಕನ ಆಹಾರದಲ್ಲಿ ಕೆಲವನ್ನು ತಿನ್ನಬಹುದು. 12 ಯಾಜಕನ ಮಗಳು ಯಾಜಕನಲ್ಲದವನನ್ನು ಮದುವೆಯಾದರೆ ಅವಳು ನೈವೇದ್ಯ ಸಮರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. 13 ಯಾಜಕನ ಮಗಳು ವಿಧವೆಯಾಗಿದ್ದರೆ ಅಥವಾ ಗಂಡ ಬಿಟ್ಟವಳಾಗಿದ್ದರೆ ಅಲ್ಲದೆ ಅವಳಿಗೆ ಆಧಾರ ನೀಡುವಂಥ ಮಕ್ಕಳೂ ಇಲ್ಲದಿದ್ದರೆ ಮತ್ತು ಅವಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದರೆ, ಆಗ ಅವಳು ತಂದೆಯ ಆಹಾರದಲ್ಲಿ ಸ್ವಲ್ಪ ತಿನ್ನಬಹುದು. ಆದರೆ ಯಾಜಕನ ಕುಟುಂಬದವರು ಮಾತ್ರವೇ ಈ ಆಹಾರವನ್ನು ತಿನ್ನಬಹುದು.
14 “ಒಬ್ಬನು ತಿಳಿಯದೆ ನೈವೇದ್ಯ ಪದಾರ್ಥವನ್ನು ತಿಂದರೆ ಅವನು ಆ ಪದಾರ್ಥವನ್ನೂ ಪದಾರ್ಥದ ಬೆಲೆಯ ಐದನೆಯ ಒಂದಂಶವನ್ನೂ ಅದಕ್ಕೆ ಸೇರಿಸಿ ಯಾಜಕನಿಗೆ ಕೊಡಬೇಕು.
15 “ಇಸ್ರೇಲರು ಯೆಹೋವನಿಗೆ ಕೊಡುವ ಕಾಣಿಕೆಗಳು ಪರಿಶುದ್ಧವಾಗಿವೆ. ಆದ್ದರಿಂದ ಯಾಜಕರು ಆ ಪರಿಶುದ್ಧ ವಸ್ತುಗಳನ್ನು ಅಶುದ್ಧಮಾಡಬಾರದು. 16 ಯಾಜಕರು ಅವುಗಳನ್ನು ಪರಿಶುದ್ಧವಾದವುಗಳೆಂದು ಪರಿಗಣಿಸದೆ ನೈವೇದ್ಯ ಪದಾರ್ಥಗಳನ್ನು ತಿಂದರೆ ಪಾಪಕ್ಕೆ ಒಳಗಾಗುವರು. ಯೆಹೋವನಾದ ನಾನೇ ಅವುಗಳನ್ನು ಪವಿತ್ರಗೊಳಿಸಿದ್ದೇನೆ.”
17 ಯೆಹೋವನು ಮೋಶೆಗೆ ಹೀಗೆಂದನು: 18 “ಆರೋನನಿಗೆ, ಅವನ ಪುತ್ರರಿಗೆ ಮತ್ತು ಇಸ್ರೇಲರೆಲ್ಲರಿಗೆ ಹೀಗೆ ಹೇಳು: ಒಂದುವೇಳೆ ಇಸ್ರೇಲನಾಗಲಿ ಅಥವಾ ಪರದೇಶಸ್ಥನಾಗಲಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ಸರ್ವಾಂಗಹೋಮ ಮಾಡುವಾಗ, 19-20 ಅದು ಸ್ವೀಕೃತವಾಗುವಂತೆ ಪೂರ್ಣಾಂಗವಾದ ಹೋರಿಯನ್ನಾಗಲಿ ಟಗರನ್ನಾಗಲಿ ಹೋತವನ್ನಾಗಲಿ ಅರ್ಪಿಸಬೇಕು. ಅಂಗದೋಷವುಳ್ಳ ಯಾವುದನ್ನೂ ನೀವು ಸಮರ್ಪಿಸಬಾರದು. ಅಂಗದೋಷವುಳ್ಳವುಗಳನ್ನು ನಾನು ಸ್ವೀಕರಿಸುವುದಿಲ್ಲ.
21 “ಒಬ್ಬನು ಸಮಾಧಾನಯಜ್ಞವನ್ನು ಹರಕೆಯಾಗಿ ಅಥವಾ ಕಾಣಿಕೆಯಾಗಿ ಅರ್ಪಿಸುವಾಗ ಹೋರಿಯನ್ನಾಗಲಿ ಟಗರನ್ನಾಗಲಿ ಅರ್ಪಿಸಬೇಕು; ಅದು ಅಂಗದೋಷವಿಲ್ಲದ್ದಾಗಿರಬೇಕು; ಆರೋಗ್ಯವುಳ್ಳದ್ದಾಗಿರಬೇಕು. ಆಗ ಅದು ಸ್ವೀಕೃತವಾಗುವುದು. 22 ಕುರುಡಾದದ್ದನ್ನಾಗಲಿ ಮೂಳೆ ಮುರಿದುಕೊಂಡದ್ದನ್ನಾಗಲಿ ಕುಂಟಾದದ್ದನ್ನಾಗಲಿ ಸ್ರಾವವುಳ್ಳದ್ದನ್ನಾಗಲಿ ಕೆಟ್ಟದಾದ ಚರ್ಮರೋಗವುಳ್ಳದ್ದನ್ನಾಗಲಿ ನೀವು ಯೆಹೋವನಿಗೆ ಅರ್ಪಿಸಬಾರದು. ಯೆಹೋವನ ಯಜ್ಞವೇದಿಕೆಯ ಬೆಂಕಿಯಲ್ಲಿ ಅನಾರೋಗ್ಯವಾದ ಪ್ರಾಣಿಗಳನ್ನು ಅರ್ಪಿಸಬಾರದು.
23 “ಕಾಲು ಉದ್ದವಾಗಿರುವ ಅಥವಾ ಮೊಂಡಾಗಿರುವ ಹೋರಿಯನ್ನಾಗಲಿ ಕುರಿಯನ್ನಾಗಲಿ ಒಬ್ಬನು ಯೆಹೋವನಿಗೆ ಕಾಣಿಕೆಯಾಗಿ ಕೊಡಲು ಬಯಸಿದರೆ, ಆಗ ಅದು ಸ್ವೀಕೃತವಾಗುವುದು. ಆದರೆ, ಅವನು ಮಾಡಿದ ವಿಶೇಷ ಹರಕೆಯಾಗಿ ಅದು ಸ್ವೀಕೃತವಾಗುವುದಿಲ್ಲ. ಅದು ಸ್ವಇಚ್ಛೆಯಿಂದ ಅರ್ಪಿಸಿದ ಕಾಣಿಕೆಯಾಗಿ ಸ್ವೀಕರಿಸಲ್ಪಡುವುದು.
24 “ಗಾಯಗೊಂಡ, ಜಜ್ಜಿದ ಅಥವಾ ಒಡೆದ ಬೀಜವುಳ್ಳ ಪಶುವನ್ನು ಯೆಹೋವನಿಗೆ ಅರ್ಪಿಸಬಾರದು. ಇದನ್ನು ನಿಮ್ಮ ಸ್ವಂತ ನಾಡಿನಲ್ಲಿ ಮಾಡಬಾರದು.
25 “ಪರದೇಶಸ್ಥರಿಂದ ಯೆಹೋವನಿಗೆ ಬಲಿಪಶುಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಆ ಪಶುಗಳಿಗೆ ಒಂದುವೇಳೆ ಪೆಟ್ಟಾಗಿರಬಹುದು. ಅವುಗಳಲ್ಲಿ ಏನಾದರೂ ದೋಷವಿರಬಹುದು. ಅವುಗಳು ಸಮರ್ಪಕವಾಗುವುದಿಲ್ಲ.”
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಕರುವಾಗಲಿ ಕುರಿಮರಿಯಾಗಲಿ ಅಥವಾ ಆಡಾಗಲಿ ಹುಟ್ಟಿದ ಬಳಿಕ ತನ್ನ ತಾಯಿಯೊಂದಿಗೆ ಏಳು ದಿನಗಳವರೆಗೆ ಇರಲೇಬೇಕು. ಎಂಟನೆಯ ದಿನದಲ್ಲಿ ಮತ್ತು ಅದರ ನಂತರ, ಆ ಪಶುವು ಸರ್ವಾಂಗಹೋಮಕ್ಕೆ ಯೋಗ್ಯವಾಗಿರುತ್ತದೆ. 28 ಆದರೆ ನೀವು ಆ ಪಶುವನ್ನೂ ಅದರ ತಾಯಿಯನ್ನೂ ಒಂದೇ ದಿನದಲ್ಲಿ ವಧಿಸಬಾರದು. ಇದೇ ನಿಯಮ ದನಗಳಿಗೂ ಕುರಿಗಳಿಗೂ ಅನ್ವಯಿಸುತ್ತದೆ.
29 “ಯೆಹೋವನಿಗೆ ವಿಶೇಷ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸಲು ಬಯಸಿದರೆ, ಆ ಕಾಣಿಕೆಯನ್ನು ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಅರ್ಪಿಸಬೇಕು. 30 ನೀವು ಇಡೀ ಪಶುವನ್ನು ಅದೇ ದಿನದಲ್ಲಿ ತಿನ್ನಬೇಕು. ಮರುದಿನ ಮುಂಜಾನೆಯವರೆಗೆ ಮಾಂಸದಲ್ಲಿ ಸ್ವಲ್ಪವನ್ನೂ ಉಳಿಸಬಾರದು. ನಾನೇ ಯೆಹೋವನು!
31 “ನನ್ನ ಆಜ್ಞೆಗಳನ್ನು ಜ್ಞಾಪಕ ಮಾಡಿಕೊಂಡು ಅವುಗಳಿಗೆ ವಿಧೇಯರಾಗಿರಿ. ನಾನೇ ಯೆಹೋವನು! 32 ನನ್ನ ಪವಿತ್ರ ನಾಮವನ್ನು ಗೌರವಿಸಬೇಕು. ನಾನು ಇಸ್ರೇಲರಿಗೆ ಬಹಳ ವಿಶೇಷವಾದವನಾಗಿರಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ. 33 ನಿಮ್ಮ ದೇವರಾಗಿರುವುದಕ್ಕಾಗಿ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನಾನೇ ಯೆಹೋವನು!”
ವಿಶೇಷ ಹಬ್ಬದ ದಿನಗಳು
23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ಯೆಹೋವನಿಂದ ಆರಿಸಲ್ಪಟ್ಟ ಹಬ್ಬದದಿನಗಳಲ್ಲಿ ಪವಿತ್ರಸಭೆ ಕೂಡಬೇಕೆಂಬುದಾಗಿ ಪ್ರಕಟಿಸಬೇಕು. ಇವು ನನ್ನ ವಿಶೇಷ ಹಬ್ಬದ ದಿನಗಳು.
ಸಬ್ಬತ್ತು
3 “ಆರು ದಿನಗಳಲ್ಲಿ ನೀವು ಕೆಲಸಮಾಡಿರಿ. ಆದರೆ ಏಳನೆಯ ದಿನವು ವಿಶೇಷವಾದ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆ ದಿನದಲ್ಲಿ ಪವಿತ್ರಸಭೆ ಕೂಡಬೇಕು. ನೀವು ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಅದು ಯೆಹೋವನಿಗೆ ಮೀಸಲಾದ ಸಬ್ಬತ್ತಾಗಿದೆ.
ಪಸ್ಕಹಬ್ಬ
4 “ಇವುಗಳು ಯೆಹೋವನಿಂದ ಆರಿಸಲ್ಪಟ್ಟ ಹಬ್ಬದ ದಿನಗಳು. ಆ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಕೂಟಗಳು ನಡೆಸಲ್ಪಡಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಿಸಬೇಕು. 5 ಯೆಹೋವನ ಪಸ್ಕಹಬ್ಬವು ಮೊದಲನೆ ತಿಂಗಳ ಹದಿನಾಲ್ಕನೆಯ ದಿನದ ಸಾಯಂಕಾಲ ಅಂದರೆ ಸೂರ್ಯಸ್ತಮಾನವಾದ ಸಮಯದಲ್ಲಿ ನಡೆಯುತ್ತದೆ.
ಹುಳಿಯಿಲ್ಲದ ರೊಟ್ಟಿಯ ಹಬ್ಬ
6 “ಅದೇ ತಿಂಗಳ ಹದಿನೈದನೆಯ ದಿನದಲ್ಲಿ ಯೆಹೋವನ ಹುಳಿಯಿಲ್ಲದ ರೊಟ್ಟಿಯ ಹಬ್ಬವಿರುತ್ತದೆ. ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನುವಿರಿ. 7 ಈ ಹಬ್ಬದ ದಿನದ ಮೊದಲನೆಯ ದಿನದಲ್ಲಿ ನೀವು ವಿಶೇಷ ಸಭೆಯಾಗಿ ಸೇರಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. 8 ಏಳು ದಿನಗಳವರೆಗೆ ನೀವು ಯೆಹೋವನಿಗೆ ಹೋಮವನ್ನು ಅರ್ಪಿಸಬೇಕು. ಏಳನೆಯ ದಿನದಲ್ಲಿ ನೀವು ಇನ್ನೊಂದು ಬಾರಿ ವಿಶೇಷ ಸಭೆಯಾಗಿ ಸೇರಬೇಕು. ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು.”
ಪ್ರಥಮ ಬೆಳೆಗಳ ಹಬ್ಬ
9 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುವ ದೇಶದಲ್ಲಿ ನೀವು ನೆಲೆಸಿದ ನಂತರ ಅಲ್ಲಿ ಬೆಳೆಯನ್ನು ಕೊಯ್ಯುವಿರಿ. ಆ ಸಮಯದಲ್ಲಿ ನಿಮ್ಮ ಬೆಳೆಯ ಪ್ರಥಮ ಸಿವುಡನ್ನು ಯಾಜಕನ ಬಳಿಗೆ ತರಬೇಕು. 11 ಯಾಜಕನು ಸಿವುಡನ್ನು ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಆಗ ನೀವು ಸ್ವೀಕೃತರಾಗಲು ಯೋಗ್ಯರಾಗುವಿರಿ. ಸಬ್ಬತ್ತಾದ ನಂತರ ಯಾಜಕನು ಸಿವುಡನ್ನು ಯೆಹೋವನಿಗೆ ನಿವಾಳಿಸುವನು.
12 “ನೀವು ಸಿವುಡನ್ನು ನಿವಾಳಿಸುವ ದಿನದಲ್ಲಿ ಒಂದು ವರ್ಷದ ಗಂಡು ಕುರಿಮರಿಯನ್ನು ಅರ್ಪಿಸಬೇಕು. ಆ ಕುರಿಮರಿಯಲ್ಲಿ ಯಾವ ದೋಷವೂ ಇರಬಾರದು. ಅದು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿತವಾಗುವುದಕ್ಕಾಗಿ ನೇಮಿತವಾಗಿರುವುದು. 13 ನೀವು ಎಣ್ಣೆ ಬೆರೆಸಿದ ಹದಿನಾರು ಬಟ್ಟಲು[b] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯಸಮರ್ಪಣೆಗಾಗಿ ಅರ್ಪಿಸಬೇಕು. ನೀವು ಕಾಲುಭಾಗ[c] ದ್ರಾಕ್ಷಾರಸವನ್ನು ಅರ್ಪಿಸಬೇಕು. ಆ ಯಜ್ಞದ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿರುತ್ತದೆ. 14 ನೀವು ಯಾವ ಹೊಸ ಧಾನ್ಯವನ್ನಾಗಲಿ ಹಣ್ಣನ್ನಾಗಲಿ ಹೊಸ ಧಾನ್ಯದಿಂದ ಮಾಡಿದ ರೊಟ್ಟಿಯನ್ನಾಗಲಿ ದೇವರಿಗೆ ಅರ್ಪಿಸುವ ಮೊದಲು ತಿನ್ನಬಾರದು. ಈ ನಿಯಮವು ನಿಮ್ಮ ಎಲ್ಲಾ ಸಂತತಿಯವರಿಗೂ ನಿಮ್ಮ ಎಲ್ಲಾ ನಿವಾಸ ಸ್ಥಾನಗಳಲ್ಲಿಯೂ ಶಾಶ್ವತವಾಗಿದೆ.
ಪಂಚಾಶತ್ತಮ ಹಬ್ಬ
15 “ಆ ಭಾನುವಾರ ಬೆಳಿಗ್ಗೆ ಮೊದಲುಗೊಂಡು ಅಂದರೆ ನೈವೇದ್ಯವಾಗಿ ನಿವಾಳಿಸುವುದಕ್ಕಾಗಿ ಸಿವುಡನ್ನು ತಂದ ದಿನದಿಂದ ಹಿಡಿದು ಏಳು ವಾರಗಳನ್ನು ಲೆಕ್ಕಿಸಿರಿ. 16 ಏಳು ವಾರಗಳು ಮುಗಿದ ಭಾನುವಾರ ಅಂದರೆ ಐವತ್ತು ದಿನಗಳ ನಂತರ ನೀವು ಯೆಹೋವನಿಗೆ ಹೊಸಬೆಳೆಯನ್ನು ಸಮರ್ಪಿಸುವಿರಿ. 17 ಆ ದಿನದಲ್ಲಿ ನಿಮ್ಮ ಮನೆಗಳಿಂದ ಎರಡು ರೊಟ್ಟಿಗಳನ್ನು ತನ್ನಿರಿ. ಆ ರೊಟ್ಟಿಗಳು ನೈವೇದ್ಯವಾಗಿ ನಿವಾಳಿಸಲ್ಪಡುವುದಕ್ಕಾಗಿದೆಯಷ್ಟೆ. ಹುಳಿಯನ್ನು ಉಪಯೋಗಿಸಿ ಹದಿನಾರು ಬಟ್ಟಲು[d] ಗೋಧಿಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಿರಿ. ಅದು ನಿಮ್ಮ ಪ್ರಥಮ ಬೆಳೆಯಿಂದ ಯೆಹೋವನಿಗೆ ಸಮರ್ಪಿಸುವ ಕಾಣಿಕೆಯಾಗಿರುವುದು.
18 “ಜನರು ಸಮರ್ಪಿಸುವ ರೊಟ್ಟಿ, ಧಾನ್ಯ ಮತ್ತು ದ್ರಾಕ್ಷಾರಸಗಳೊಂದಿಗೆ ಒಂದು ಹೋರಿ, ಎರಡು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳನ್ನು ಅರ್ಪಿಸಲಾಗುವುದು. ಆ ಪಶುಗಳಲ್ಲಿ ಯಾವ ದೋಷವು ಇರಬಾರದು. ಅವುಗಳು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿತವಾಗಲಿರುವ ಸಮರ್ಪಣೆಗಳಾಗಿವೆ. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿದೆ. 19 ನೀವು ಪಾಪಪರಿಹಾರಕ ಸಮರ್ಪಣೆಯಾಗಿ ಒಂದು ಹೋತವನ್ನೂ ಸಮಾಧಾನಯಜ್ಞವಾಗಿ ಒಂದು ವರ್ಷದ ಎರಡು ಟಗರುಗಳನ್ನೂ ಅರ್ಪಿಸಬೇಕು.
20 “ಯಾಜಕನು ಅವುಗಳನ್ನು ಪ್ರಥಮ ಬೆಳೆಯಿಂದ ಮಾಡಿದ ರೊಟ್ಟಿಯೊಂದಿಗೆ ನೈವೇದ್ಯವಾಗಿ ಎರಡು ಕುರಿಮರಿಗಳೊಂದಿಗೆ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಅವು ಯೆಹೋವನಿಗೆ ಪವಿತ್ರವಾಗಿರುತ್ತವೆ. ಅವು ಯಾಜಕರಿಗೆ ಸಲ್ಲುತ್ತವೆ. 21 ಅದೇ ದಿನದಲ್ಲಿ ನೀವು ಪವಿತ್ರಸಭೆಯಾಗಿ ಕೂಡಬೇಕು. ನೀವು ಯಾವ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಈ ನಿಯಮವು ಶಾಶ್ವತವಾಗಿರುವುದು.
22 “ಅಲ್ಲದೆ ನಿಮ್ಮ ದೇಶದಲ್ಲಿ ಪೈರುಗಳನ್ನು ಕೊಯ್ಯುವಾಗ ಹೊಲದ ಮೂಲೆಗಳವರೆಗೆ ಇರುವುದನ್ನೆಲ್ಲಾ ಕೊಯ್ಯಬೇಡಿರಿ. ನೆಲದ ಮೇಲೆ ಬೀಳುವ ಧಾನ್ಯಗಳನ್ನು ಹಕ್ಕಲಾಯಬಾರದು. ಬಡವರಿಗಾಗಿಯೂ ನಿಮ್ಮ ದೇಶದ ಮೂಲಕ ಪ್ರಯಾಣಮಾಡುವ ಪರದೇಶಸ್ಥರಿಗಾಗಿಯೂ ಅವುಗಳನ್ನು ಬಿಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!”
ತುತ್ತೂರಿಗಳ ಹಬ್ಬ
23 ಯೆಹೋವನು ತಿರುಗಿ ಮೋಶೆಗೆ ಹೇಳಿದ್ದೇನೆಂದರೆ: 24 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಮೊದಲಿನ ದಿನವು ನಿಮಗೆ ವಿಶ್ರಾಂತಿಯ ವಿಶೇಷ ದಿನವಾಗಿರಬೇಕು. ಆಗ ನೀವು ಪವಿತ್ರಸಭೆಯಾಗಿ ಸೇರಬೇಕು. ಜ್ಞಾಪಕಮಾಡುವ ವಿಶೇಷ ಸಮಯಕ್ಕಾಗಿ ನೀವು ತುತ್ತೂರಿಯನ್ನು ಊದಿಸಬೇಕು. 25 ನೀವು ಯಾವ ಕೆಲಸವನ್ನೂ ಮಾಡಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯನ್ನು ಸಲ್ಲಿಸುವಿರಿ.”
ದೋಷಪರಿಹಾರಕ ದಿನ
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಏಳನೆಯ ತಿಂಗಳಿನ ಹತ್ತನೆಯ ದಿನವು ದೋಷಪರಿಹಾರಕ ದಿನವಾಗಿರುವುದು. ಆಗ ಪವಿತ್ರ ಸಭೆಯಾಗಿ ಸೇರಬೇಕು. ನೀವು ಆಹಾರವನ್ನು ತಿನ್ನಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಕಾಣಿಕೆಯನ್ನು ಸಲ್ಲಿಸಬೇಕು. 28 ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಯಾಕೆಂದರೆ ಅದು ದೋಷಪರಿಹಾರಕ ದಿನವಾಗಿರುತ್ತದೆ. ಆ ದಿನದಲ್ಲಿ ಯಾಜಕರು ಯೆಹೋವನ ಸನ್ನಿಧಿಗೆ ಹೋಗಿ ಆಚಾರವಿಧಿಗಳ ಪ್ರಕಾರ ನಿಮಗಾಗಿ ಪ್ರಾಯಶ್ಚಿತ್ತ ಮಾಡುವರು.
29 “ಈ ದಿನದಲ್ಲಿ ಯಾವನಾದರೂ ಉಪವಾಸ ಮಾಡದಿದ್ದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು. 30 ಈ ದಿನದಲ್ಲಿ ಕೆಲಸಮಾಡುವವನನ್ನು ಇಸ್ರೇಲರೊಂದಿಗೆ ಇರದಂತೆ ನಾಶಮಾಡುವೆ. 31 ನೀವು ಅಂದು ಯಾವ ಕೆಲಸವನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ ಈ ಕಟ್ಟಳೆ ನಿಮಗೆ ಶಾಶ್ವತವಾಗಿದೆ. 32 ಅದು ನಿಮಗಾಗಿ ವಿಶ್ರಾಂತಿಯ ವಿಶೇಷ ದಿನವಾಗಿರುವುದು. ನೀವು ಆಹಾರವನ್ನು ತಿನ್ನಬಾರದು.[e] ತಿಂಗಳಿನ ಒಂಭತ್ತನೆಯ ದಿನದ ನಂತರ ಸಾಯಂಕಾಲದಲ್ಲಿ ಈ ವಿಶ್ರಾಂತಿಯ ವಿಶೇಷ ದಿನವನ್ನು ಪ್ರಾರಂಭಿಸುವಿರಿ. ಈ ವಿಶ್ರಾಂತಿಯ ವಿಶೇಷ ದಿನವು ಆ ಸಾಯಂಕಾಲದಿಂದ ಹಿಡಿದು ಮರುದಿನ ಸಾಯಂಕಾಲದವರೆಗೆ ಮುಂದುವರಿಯುವುದು.”
ಪರ್ಣಶಾಲೆಗಳ ಹಬ್ಬ
33 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 34 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಹದಿನೈದನೆಯ ದಿನವು ಪರ್ಣಶಾಲೆಗಳ ಹಬ್ಬವಾಗಿರುತ್ತದೆ. ಯೆಹೋವನ ಈ ಹಬ್ಬದ ಕಾಲವು ಏಳು ದಿನಗಳವರೆಗೆ ಮುಂದುವರಿಯುವುದು. 35 ಮೊದಲನೆಯ ದಿನದಲ್ಲಿ ಪವಿತ್ರಸಭೆಯಾಗಿ ಸೇರಬೇಕು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. 36 ನೀವು ಏಳು ದಿನಗಳವರೆಗೆ ಅಗ್ನಿಯ ಮೂಲಕ ಯೆಹೋವನಿಗೆ ಯಜ್ಞವನ್ನು ಅರ್ಪಿಸಬೇಕು. ಎಂಟನೆಯ ದಿನದಲ್ಲಿ ಇನ್ನೊಂದು ಬಾರಿ ಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯಜ್ಞವನ್ನು ಅರ್ಪಿಸಬೇಕು. ಇದು ಪವಿತ್ರಸಭೆಯಾಗಿರುವುದು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು.
37 “ಯೆಹೋವನಿಗೆ ವಿಶೇಷ ಹಬ್ಬದ ದಿನಗಳು ಇವುಗಳೇ. ಈ ವಿಶೇಷ ದಿನಗಳಲ್ಲಿ ನೀವು ಪವಿತ್ರಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾಗುವ ಸರ್ವಾಂಗಹೋಮ, ಧಾನ್ಯಸಮರ್ಪಣೆ, ಯಜ್ಞಗಳು ಮತ್ತು ಪಾನದ್ರವ್ಯಗಳನ್ನು ಅರ್ಪಿಸಬೇಕು. ನೀವು ಆ ಕಾಣಿಕೆಗಳನ್ನು ಸರಿಯಾದ ಸಮಯದಲ್ಲಿ ಅರ್ಪಿಸಬೇಕು. 38 ಯೆಹೋವನನ್ನು ಜ್ಞಾಪಕಮಾಡುವ ಸಬ್ಬತ್ ದಿನಗಳ ಜೊತೆಗೆ ನೀವು ಆ ಹಬ್ಬದ ದಿನಗಳನ್ನು ಆಚರಿಸಬೇಕು. ನೀವು ಆ ಕಾಣಿಕೆಗಳನ್ನು ನಿಮ್ಮ ಇತರ ಕಾಣಿಕೆಗಳ ಜೊತೆಗೆ ಅರ್ಪಿಸಬೇಕು. ನೀವು ಮಾಡಿದ ಹರಕೆಗಳನ್ನು ನೆರವೇರಿಸುವುದಕ್ಕಾಗಿ ಯೆಹೋವನಿಗೆ ಅರ್ಪಿಸುವ ಕಾಣಿಕೆಗಳ ಜೊತೆಗೆ ಅವುಗಳನ್ನು ಅರ್ಪಿಸಬೇಕು. ನೀವು ಯೆಹೋವನಿಗೆ ಅರ್ಪಿಸುವ ಯಾವುದೇ ವಿಶೇಷ ಸಮರ್ಪಣೆಗಳೊಂದಿಗೆ ಅವುಗಳನ್ನು ಸಮರ್ಪಿಸಬೇಕು.
39 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ನಿಮ್ಮ ದೇಶದಲ್ಲಿ ಪೈರುಗಳನ್ನು ಸಂಗ್ರಹಿಸಿದ ನಂತರ, ಏಳು ದಿನಗಳವರೆಗೆ ನೀವು ಯೆಹೋವನ ಹಬ್ಬವನ್ನು ಆಚರಿಸಬೇಕು. ನೀವು ಮೊದಲನೆಯ ಮತ್ತು ಎಂಟನೆಯ ದಿನದಲ್ಲಿ ವಿಶ್ರಮಿಸಬೇಕು. 40 ಪ್ರಥಮ ದಿನದಲ್ಲಿ ನೀವು ಮರಗಳಿಂದ ಉತ್ತಮ ಹಣ್ಣುಗಳನ್ನೂ ಖರ್ಜೂರಮರದ ಗರಿಗಳನ್ನೂ ಎಲೆತುಂಬಿದ ಕೊಂಬೆಗಳನ್ನೂ ವಿಲೋಸಸ್ಯಗಳನ್ನೂ ತೆಗೆದುಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈ ಹಬ್ಬದ ದಿನವನ್ನು ಏಳು ದಿನಗಳವರೆಗೆ ಆಚರಿಸಬೇಕು. 41 ನೀವು ಪ್ರತಿ ವರ್ಷ ಏಳು ದಿನಗಳವರೆಗೆ ಈ ಹಬ್ಬದ ದಿನವನ್ನು ಆಚರಿಸಬೇಕು. ಈ ನಿಯಮ ಶಾಶ್ವತವಾಗಿದೆ. ಏಳನೆಯ ತಿಂಗಳಲ್ಲಿ ಈ ಹಬ್ಬದ ದಿನವನ್ನು ನೀವು ಆಚರಿಸಬೇಕು. 42 ನೀವು ಏಳು ದಿನಗಳವರೆಗೆ ಪರ್ಣಶಾಲೆಗಳಲ್ಲಿ ವಾಸಿಸಬೇಕು. ಇಸ್ರೇಲರಲ್ಲಿ ಹುಟ್ಟಿದವರೆಲ್ಲರೂ ಆ ಪರ್ಣಶಾಲೆಗಳಲ್ಲಿ ವಾಸಿಸುವರು. 43 ನಾನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ಕರೆದು ತಂದಾಗ, ಈ ಪರ್ಣಶಾಲೆಗಳಲ್ಲಿ ವಾಸಿಸುವಂತೆ ಮಾಡಿದವನು ನಾನೇ ಎಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಾನೇ ನಿಮ್ಮ ದೇವರಾದ ಯೆಹೋವನು!”
44 ಆದ್ದರಿಂದ ಮೋಶೆಯು ಯೆಹೋವನನ್ನು ಸನ್ಮಾನಿಸುವುದಕ್ಕಾಗಿ ಸೇರಿಬರುವ ವಿಶೇಷ ಸಭೆಗಳ ಕುರಿತು ಜನರಿಗೆ ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International