Beginning
ಮೋಶೆಯಿಂದ ಯಾಜಕರ ಸಿದ್ಧತೆ
8 ಯೆಹೋವನು ಮೋಶೆಗೆ, 2 “ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಅವರೊಂದಿಗೆ ಯಾಜಕ ವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯಿಂದ ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಾ. 3 ಮತ್ತು ಜನರನ್ನು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಿಗೆ ಎದುರಿನಲ್ಲಿ ಸೇರಿಸು” ಎಂದು ಹೇಳಿದನು.
4 ಯೆಹೋವನು ಆಜ್ಞಾಪಿಸಿದ್ದನ್ನು ಮೋಶೆ ಮಾಡಿದನು. ಜನರು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಲ್ಲಿ ಸೇರಿ ಬಂದರು. 5 ಆಗ ಮೋಶೆ ಜನರಿಗೆ, “ನಾನು ಈಗ ಮಾಡುವ ಕಾರ್ಯವನ್ನು ಯೆಹೋವನೇ ಆಜ್ಞಾಪಿಸಿದನು” ಎಂದು ಹೇಳಿದನು.
6 ತರುವಾಯ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದನು. ಅವನು ಅವರಿಗೆ ನೀರಿನಿಂದ ಸ್ನಾನ ಮಾಡಿಸಿದನು; 7 ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು. 8 ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿದನು. 9 ಅವನ ತಲೆಗೆ ಮುಂಡಾಸವನ್ನು ಇಟ್ಟನು; ಮುಂಡಾಸದ ಮುಂಭಾಗದಲ್ಲಿ ಚಿನ್ನದ ಪಟ್ಟಿಯನ್ನು ಕಟ್ಟಿದನು. ಈ ಚಿನ್ನದ ಪಟ್ಟಿಯು ಪವಿತ್ರಕಿರೀಟವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
10 ತರುವಾಯ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು ಪವಿತ್ರಗುಡಾರದ ಮೇಲೆ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಚಿಮಿಕಿಸಿದನು. ಈ ರೀತಿಯಾಗಿ ಮೋಶೆ ಅವುಗಳನ್ನು ಪವಿತ್ರಗೊಳಿಸಿದನು. 11 ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ಈ ರೀತಿಯಾಗಿ ಮೋಶೆ ಅವುಗಳನ್ನು ಪವಿತ್ರಗೊಳಿಸಿದನು. 12 ಬಳಿಕ ಮೋಶೆ ಸ್ವಲ್ಪ ಅಭಿಷೇಕತೈಲವನ್ನು ಆರೋನನ ತಲೆಗೆ ಹೊಯಿದು ಅವನನ್ನು ಪವಿತ್ರಗೊಳಿಸಿದನು. 13 ಬಳಿಕ ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟನ್ನು ಕಟ್ಟಿದನು. ಬಳಿಕ ಅವರ ತಲೆಗಳಿಗೆ ಮುಂಡಾಸಗಳನ್ನು ಇಟ್ಟನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
14 ತರುವಾಯ ಮೋಶೆಯು ಪಾಪಪರಿಹಾರಕ್ಕಾಗಿ ಯಜ್ಞದ ಹೋರಿಯನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಪಾಪಪರಿಹಾರಕ ಯಜ್ಞದ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. 15 ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು. 16 ಮೋಶೆಯು ಹೋರಿಯ ಒಳಗಿನ ಭಾಗಗಳ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಆವರಿಸಿರುವ ಕೊಬ್ಬನ್ನೂ ತೆಗೆದುಕೊಂಡು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. 17 ಹೋರಿಯ ಚರ್ಮ, ಅದರ ಮಾಂಸ ಮತ್ತು ಅದರ ಶರೀರದ ಕಲ್ಮಶವನ್ನು ಅವನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಟ್ಟುಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
18 ಬಳಿಕ ಮೋಶೆಯು ಸರ್ವಾಂಗಹೋಮದ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು. 19 ಆಗ ಮೋಶೆಯು ಟಗರನ್ನು ವಧಿಸಿ ಅದರ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು. 20-21 ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
22 ಬಳಿಕ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವುದಕ್ಕೆ ವಧಿಸಬೇಕಾದ ಎರಡನೆಯ ಟಗರನ್ನು ತಂದನು. ಆರೋನನೂ ಅವನ ಪುತ್ರರೂ ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು. 23 ಆಗ ಮೋಶೆ ಟಗರನ್ನು ವಧಿಸಿ ಅದರ ಸ್ವಲ್ಪ ರಕ್ತವನ್ನು ಆರೋನನ ಬಲಗಿವಿಯ ತುದಿಗೂ ಅವನ ಬಲಗೈಯ ಹೆಬ್ಬೆರಳಿಗೂ ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು. 24 ಬಳಿಕ ಮೋಶೆಯು ಆರೋನನ ಪುತ್ರರನ್ನು ವೇದಿಕೆಯ ಸಮೀಪಕ್ಕೆ ಕರೆಸಿ ಸ್ವಲ್ಪ ರಕ್ತವನ್ನು ಅವರ ಬಲಗಿವಿಗಳ ತುದಿಗೂ ಅವರ ಬಲಗೈಗಳ ಹೆಬ್ಬೆರಳಿಗೂ ಮತ್ತು ಅವರ ಬಲಗಾಲುಗಳ ಹೆಬ್ಬೆಟ್ಟಿಗೂ ಹಚ್ಚಿದನು; ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು; 25 ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನೂ ಒಳಗಿನ ಭಾಗಗಳ ಮೇಲಿರುವ ಕೊಬ್ಬೆಲ್ಲವನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮತ್ತು ಬಲ ತೊಡೆಯನ್ನೂ ತೆಗೆದುಕೊಂಡನು. 26 ಪ್ರತಿದಿನ ಯೆಹೋವನ ಸನ್ನಿಧಿಯಲ್ಲಿ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯು ಇಡಲ್ಪಡುತ್ತಿತ್ತು. ಮೋಶೆಯು ರೊಟ್ಟಿಯಲ್ಲಿ ಒಂದು ತುಂಡನ್ನೂ ಎಣ್ಣೆ ಬೆರಸಿದ ರೊಟ್ಟಿಯಲ್ಲಿ ಒಂದು ತುಂಡನ್ನೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡನು. ಮೋಶೆಯು ಆ ರೊಟ್ಟಿಯ ತುಂಡುಗಳನ್ನು ಕೊಬ್ಬಿನ ಮತ್ತು ಟಗರಿನ ಬಲ ತೊಡೆಯ ಮೇಲೆ ಇಟ್ಟನು. 27 ಬಳಿಕ ಮೋಶೆ ಅವೆಲ್ಲವುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿ ಇಟ್ಟು, ತುಂಡುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು. 28 ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ಈ ವಸ್ತುಗಳನ್ನು ತೆಗೆದುಕೊಂಡನು. ಮೋಶೆ ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಈ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ. 29 ಮೋಶೆ ಎದೆಯ ಭಾಗವನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿದನು. ಅದು ಯಾಜಕರನ್ನು ನೇಮಿಸುವುದಕ್ಕಾಗಿ ಅರ್ಪಿಸಲ್ಪಟ್ಟ ಟಗರಿನಲ್ಲಿ ಮೋಶೆಯ ಪಾಲಾಗಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
30 ಮೋಶೆ ಸ್ವಲ್ಪ ಅಭಿಷೇಕತೈಲವನ್ನು ಮತ್ತು ವೇದಿಕೆಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮೇಲೆ ಮತ್ತು ಅವನ ಯಾಜಕವಸ್ತ್ರದ ಮೇಲೆ ಚಿಮಿಕಿಸಿದನು; ಆರೋನನ ಜೊತೆ ಇದ್ದ ಅವನ ಪುತ್ರರ ಮೇಲೆ ಮತ್ತು ಅವರ ಬಟ್ಟೆಗಳ ಮೇಲೆ ಚಿಮಿಕಿಸಿದನು. ಹೀಗೆ ಮೋಶೆಯು ಆರೋನನನ್ನೂ ಅವನ ಯಾಜಕವಸ್ತ್ರವನ್ನೂ ಅವನ ಪುತ್ರರನ್ನೂ ಅವರ ಯಾಜಕ ವಸ್ತ್ರಗಳನ್ನೂ ಪವಿತ್ರಗೊಳಿಸಿದನು.[a]
31 ತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಆ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ. 32 ಮಾಂಸವಾಗಲಿ ರೊಟ್ಟಿಯಾಗಲಿ ಉಳಿದರೆ ಅದನ್ನು ಸುಟ್ಟುಹಾಕಿರಿ. 33 ಯಾಜಕರಾಗಿ ಪ್ರತಿಷ್ಠಿಸುವ ಆಚಾರವಿಧಿಯು ಏಳು ದಿನಗಳವರೆಗೆ ಇರುವುದು. ಆ ಸಮಯ ಮುಗಿಯುವವರೆಗೆ ನೀವು ದೇವದರ್ಶನಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು. 34 ಈ ದಿನದಲ್ಲಿ ಮಾಡಿದ ಸಕಲಕಾರ್ಯಗಳನ್ನು ಏಳು ದಿನವೂ ಮಾಡಬೇಕು. 35 ನೀವು ಏಳು ದಿನಗಳು ಹಗಲುರಾತ್ರಿ ದೇವದರ್ಶನಗುಡಾರದ ಬಾಗಿಲಿನಲ್ಲಿ ಇರಬೇಕು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗದಿದ್ದರೆ ಸಾಯುವಿರಿ! ಯೆಹೋವನು ಆ ಆಜ್ಞೆಗಳನ್ನು ನನಗೆ ಕೊಟ್ಟನು.”
36 ಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು.
ದೇವರು ಯಾಜಕರನ್ನು ಸ್ವೀಕರಿಸಿದನು
9 ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಇಸ್ರೇಲರ ಹಿರಿಯರನ್ನೂ ಕರೆದನು. 2 ಮೋಶೆಯು ಆರೋನನಿಗೆ ಹೀಗೆಂದನು; “ಒಂದು ಎಳೆಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊ. ಆ ಪಶುಗಳಲ್ಲಿ ಏನೂ ದೋಷವಿರಬಾರದು. ಹೋರಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಟಗರನ್ನು ಸರ್ವಾಂಗಹೋಮವಾಗಿಯೂ ಯೆಹೋವನಿಗೆ ಸಮರ್ಪಿಸು. 3 ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷವಿರಬಾರದು. 4 ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.’”
5 ಆದ್ದರಿಂದ ಜನರೆಲ್ಲರೂ ದೇವದರ್ಶನಗುಡಾರಕ್ಕೆ ಬಂದರು. ಮೋಶೆ ಆಜ್ಞಾಪಿಸಿದ ವಸ್ತುಗಳನ್ನು ಅವರು ತಂದರು. ಎಲ್ಲಾ ಜನರು ಯೆಹೋವನ ಸನ್ನಿಧಿಯಲ್ಲಿ ನಿಂತರು. 6 ಮೋಶೆ, “ಯೆಹೋವನು ಆಜ್ಞಾಪಿಸಿದವುಗಳನ್ನು ನೀವು ಮಾಡಿದರೆ ಯೆಹೋವನ ಮಹಿಮೆಯು ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.
7 ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಆ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.
8 ಆದ್ದರಿಂದ ಆರೋನನು ಯಜ್ಞವೇದಿಕೆಯ ಬಳಿಗೆ ಹೋದನು. ಅವನು ತನಗೋಸ್ಕರ ಪಾಪಪರಿಹಾರಕ ಯಜ್ಞವಾಗಿ ಎಳೆ ಹೋರಿಯನ್ನು ವಧಿಸಿದನು. 9 ಆರೋನನ ಪುತ್ರರು ಅದರ ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನ ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯಜ್ಞವೇದಿಕೆಯ ಮೂಲೆಗಳಿಗೆ ಹಚ್ಚಿದನು. ಬಳಿಕ ಆರೋನನು ರಕ್ತವನ್ನು ಯಜ್ಞವೇದಿಕೆಯ ಬುಡದಲ್ಲಿ ಸುರಿದನು. 10 ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ಆ ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು. 11 ಬಳಿಕ ಆರೋನನು ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟುಹಾಕಿದನು.
12 ನಂತರ ಆರೋನನು ಸರ್ವಾಂಗಹೋಮದ ಪಶುವನ್ನು ವಧಿಸಿದನು. ಆರೋನನ ಪುತ್ರರು ಅದರ ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು. 13 ಆರೋನನ ಪುತ್ರರು ಸರ್ವಾಂಗಹೋಮದ ಪಶುವಿನ ಮಾಂಸದ ತುಂಡುಗಳನ್ನು ಮತ್ತು ತಲೆಯನ್ನು ಆರೋನನಿಗೆ ಕೊಟ್ಟರು. ಬಳಿಕ ಆರೋನನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. 14 ಆರೋನನು ಸರ್ವಾಂಗಹೋಮದ ಪಶುವಿನ ಒಳಗಿನ ಭಾಗಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
15 ತರುವಾಯ ಆರೋನನು ಜನರು ಅರ್ಪಿಸುವ ಪಶುಗಳನ್ನು ತರಿಸಿದನು. ಅವನು ಜನರಿಗಾಗಿ ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ವಧಿಸಿದನು. ಅವನು ಮೊದಲಿನ ಪಶುವನ್ನು ಸಮರ್ಪಿಸಿದ ರೀತಿಯಲ್ಲಿ ಪಾಪಪರಿಹಾರಕ್ಕಾಗಿ ಹೋತವನ್ನು ಸಮರ್ಪಿಸಿದನು. 16 ಆರೋನನು ಸರ್ವಾಂಗಹೋಮಕ್ಕಾಗಿ ಪಶುವನ್ನು ತರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಅರ್ಪಿಸಿದನು. 17 ಆರೋನನು ಧಾನ್ಯನೈವೇದ್ಯವನ್ನು ಯಜ್ಞವೇದಿಕೆಯ ಬಳಿಗೆ ತಂದನು. ಅವನು ಒಂದು ಹಿಡಿ ಧಾನ್ಯವನ್ನು ತೆಗೆದುಕೊಂಡು ದಿನಂಪ್ರತಿ ಹೊತ್ತಾರೆಯ ವೇಳೆಯಲ್ಲಿ ಅರ್ಪಿಸುವ ಯಜ್ಞವಲ್ಲದೆ ಇದನ್ನೂ ಕೂಡ ಅರ್ಪಿಸಿದನು.
18 ಆರೋನನು ಜನರಿಗಾಗಿ ಸಮಾಧಾನಯಜ್ಞವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಪುತ್ರರು ಅವುಗಳ ರಕ್ತವನ್ನು ಅವನ ಬಳಿಗೆ ತಂದರು. ಆರೋನನು ಈ ರಕ್ತವನ್ನು ಯಜ್ಞವೇದಿಕೆಯ ಸುತ್ತಲೂ ಚಿಮಿಕಿಸಿದನು. 19 ಆರೋನನ ಪುತ್ರರು ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಆರೋನನ ಬಳಿಗೆ ತಂದರು. ಇವರು ಬಾಲದ ಕೊಬ್ಬನ್ನೂ ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತಂದರು. 20 ಅವರು ಈ ಕೊಬ್ಬಿನ ಭಾಗಗಳನ್ನು ಹೋರಿಯ ಮತ್ತು ಟಗರಿನ ಎದೆಯ ಭಾಗಗಳ ಮೇಲೆ ಇಟ್ಟರು. ಆರೋನನು ಅವೆಲ್ಲವನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. 21 ಮೋಶೆ ಆಜ್ಞಾಪಿಸಿದಂತೆ ಎದೆಯ ಭಾಗಗಳನ್ನು ಮತ್ತು ಬಲ ತೊಡೆಯನ್ನು ಆರೋನನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
22 ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
23 ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು. 24 ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.
ಆರೋನನ ಪುತ್ರರ ಸಾವು
10 ತರುವಾಯ ಆರೋನನ ಪುತ್ರರಲ್ಲಿ ನಾದಾಬ ಮತ್ತು ಅಬೀಹು ಎಂಬಿಬ್ಬರು ಧೂಪ ಹಾಕಲು ಒಂದೊಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಬೇರೆ ಬೆಂಕಿಯನ್ನಿಟ್ಟು ಯೆಹೋವನ ಮುಂದೆ ಧೂಪಹಾಕಿದರು. ಯೆಹೋವನ ಆಜ್ಞೆಗನುಸಾರವಾದ ಬೆಂಕಿಯನ್ನು ಅವರು ಉಪಯೋಗಿಸಲಿಲ್ಲ. 2 ಆದ್ದರಿಂದ ಯೆಹೋವನಿಂದ ಬೆಂಕಿ ಹೊರಟುಬಂದು ಅವರಿಬ್ಬರನ್ನು ನಾಶಮಾಡಿತು. ಅವರು ಯೆಹೋವನ ಸನ್ನಿಧಿಯಲ್ಲಿ ಸತ್ತರು.
3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳುವುದೇನೆಂದರೆ, ‘ನನ್ನ ಬಳಿಗೆ ಬರುವ ಯಾಜಕರು ನನ್ನನ್ನು ಗೌರವಿಸಬೇಕು. ಯಾಕೆಂದರೆ ನಾನು ಅವರ ಮೂಲಕ ಜನರಿಗೆ ಪ್ರಕಟಿಸಿಕೊಳ್ಳುವೆನು. ನಾನು ಪರಿಶುದ್ಧನೆಂದು ಅವರು ಮತ್ತು ಎಲ್ಲಾ ಜನರು ತಿಳಿದುಕೊಂಡು ನನ್ನನ್ನು ಘನಪಡಿಸಬೇಕು’” ಎಂದು ಹೇಳಿದನು. ಆದ್ದರಿಂದ ಆರೋನನು ತನ್ನ ಪುತ್ರರು ಸತ್ತಿದ್ದರ ಬಗ್ಗೆ ಏನೂ ಹೇಳದೆ ಸುಮ್ಮನಿದ್ದನು.
4 ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರ ಹೆಸರು ಮೀಶಾಯೇಲ್ ಮತ್ತು ಎಲ್ಸಾಫಾನ್. ಮೋಶೆ ಆ ಪುತ್ರರಿಗೆ, “ಪವಿತ್ರಸ್ಥಳದ ಮುಂದೆ ಬಿದ್ದಿರುವ ನಿಮ್ಮ ಸಹೋದರರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿರಿ” ಎಂದು ಹೇಳಿದನು.
5 ಮಿಶಾಯೇಲ ಮತ್ತು ಎಲ್ಸಾಫಾನ ಮೋಶೆಯ ಮಾತಿಗೆ ವಿಧೇಯರಾದರು. ಅವರು ನಾದಾಬ ಮತ್ತು ಅಬೀಹು ಎಂಬವರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋದರು. ನಾದಾಬ ಮತ್ತು ಅಬೀಹು ತೊಟ್ಟುಕೊಂಡಿದ್ದ ವಿಶೇಷವಾದ ಹೆಣೆದ ಅಂಗಿಗಳು ಇನ್ನೂ ಅವರ ಮೃತಶರೀರಗಳ ಮೇಲಿದ್ದವು.
6 ಬಳಿಕ ಮೋಶೆ ಆರೋನನೊಡನೆ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್ ಇವರೊಡನೆ ಮಾತಾಡಿದನು. ಮೋಶೆ ಅವರಿಗೆ, “ನೀವು ದುಃಖದಿಂದ ನಿಮ್ಮ ತಲೆಕೂದಲನ್ನು ಕೆದರಿಕೊಳ್ಳಬೇಡಿರಿ; ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಇಲ್ಲವಾದರೆ ನೀವೂ ಕೊಲ್ಲಲ್ಪಡುವಿರಿ. ಅಲ್ಲದೆ ಯೆಹೋವನು ಜನರೆಲ್ಲರ ಮೇಲೆ ಕೋಪಗೊಳ್ಳುವನು. ಆದರೆ ಯೆಹೋವನು ಬೆಂಕಿಯಿಂದ ನಾಶಮಾಡಿದವರ ಬಗ್ಗೆ ಇಸ್ರೇಲರೆಲ್ಲರು ಮತ್ತು ನಿಮ್ಮ ಬಂಧುಗಳು ದುಃಖಿಸಬಹುದು. 7 ಆದರೆ ನೀವು ದೇವದರ್ಶನಗುಡಾರದ ಬಾಗಿಲನ್ನು ಸಹ ಬಿಟ್ಟುಹೋಗಬಾರದು. ಇಲ್ಲವಾದರೆ ನೀವು ಸಾಯುವಿರಿ! ಯಾಕೆಂದರೆ, ಯೆಹೋವನ ಅಭಿಷೇಕತೈಲವು ನಿಮ್ಮ ಮೇಲಿದೆ” ಎಂದು ಹೇಳಿದನು. ಆದ್ದರಿಂದ ಆರೋನ, ಎಲ್ಲಾಜಾರ್ ಮತ್ತು ಈತಾಮಾರ್ ಮೋಶೆಯ ಮಾತಿಗೆ ವಿಧೇಯರಾದರು.
8 ಬಳಿಕ ಯೆಹೋವನು ಆರೋನನಿಗೆ, 9 “ನೀನು ಮತ್ತು ನಿನ್ನ ಪುತ್ರರು ದೇವದರ್ಶನದ ಗುಡಾರದೊಳಗೆ ಬರುವಾಗ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು. ನೀವು ಅವುಗಳನ್ನು ಕುಡಿದರೆ ಸಾಯುವಿರಿ. ಈ ಕಟ್ಟಳೆಯು ನಿಮ್ಮ ಸಂತತಿಯವರಿಗೆ ಶಾಶ್ವತವಾಗಿದೆ. 10 ನೀವು ಪವಿತ್ರವಾದವುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಕುರಿತಾಗಿಯೂ ಶುದ್ಧವಾದವುಗಳ ಮತ್ತು ಅಶುದ್ಧವಾದವುಗಳ ಕುರಿತಾಗಿಯೂ ಸ್ಪಷ್ಟವಾಗಿ ವಿವೇಚನೆಯುಳ್ಳವರಾಗಿರಬೇಕು. 11 ಯೆಹೋವನು ಮೋಶೆಯ ಮೂಲಕ ಇಸ್ರೇಲ್ ಜನರಿಗೆ ಕೊಟ್ಟ ಎಲ್ಲಾ ಕಟ್ಟಳೆಗಳನ್ನು ಅವರಿಗೆ ಬೋಧಿಸುವುದು ನಿನ್ನ ಜವಾಬ್ದಾರಿಯಾಗಿದೆ” ಎಂದು ಹೇಳಿದನು.
12 ಆರೋನನಿಗೆ ಇನ್ನೂ ಜೀವಂತವಾಗಿದ್ದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಇಬ್ಬರು ಪುತ್ರರು ಇದ್ದರು. ಮೋಶೆಯು ಆರೋನನಿಗೆ ಮತ್ತು ಅವನ ಇಬ್ಬರು ಗಂಡುಮಕ್ಕಳಿಗೆ, “ಯಜ್ಞವೇದಿಕೆಯ ಮೇಲೆ ಅರ್ಪಿಸಿದ ಯಜ್ಞಗಳಲ್ಲಿಯೂ ಧಾನ್ಯನೈವೇದ್ಯದಲ್ಲಿಯೂ ಉಳಿದ ಭಾಗವನ್ನು ತೆಗೆದುಕೊಂಡು ನೀವು ತಿನ್ನಬೇಕು. ಆದರೆ ನೀವು ಅದಕ್ಕೆ ಹುಳಿಯನ್ನು ಸೇರಿಸದೆ ಯಜ್ಞವೇದಿಕೆಯ ಸಮೀಪದಲ್ಲಿಯೇ ತಿನ್ನಬೇಕು. ಯಾಕೆಂದರೆ ಆ ಸಮರ್ಪಣೆಯು ಬಹಳ ಪವಿತ್ರವಾಗಿದೆ. 13 ಅದನ್ನು ಪವಿತ್ರವಾದ ಸ್ಥಳದಲ್ಲಿ ಮಾತ್ರ ತಿನ್ನಬೇಕು. ಅದು ಯೆಹೋವನಿಗಾಗಿ ಅಗ್ನಿಯಲ್ಲಿ ಹೋಮವಾದ ಸಮರ್ಪಣೆಗಳಲ್ಲಿ ಒಂದು ಭಾಗವಾಗಿದೆ. ಯೆಹೋವನಿಗಾಗಿ ಬೆಂಕಿಯ ಮೂಲಕ ಸಮರ್ಪಿಸಿದವುಗಳಲ್ಲಿ ನಿನಗೂ ನಿನ್ನ ಗಂಡುಮಕ್ಕಳಿಗೂ ಇದು ಸೇರತಕ್ಕ ಪಾಲಾಗಿದೆ. ನಿಮಗೆ ಈ ಕಟ್ಟಳೆಯನ್ನು ಕೊಡಲು ನನಗೆ ಆಜ್ಞಾಪಿಸಲಾಗಿದೆ.
14 “ಮಾತ್ರವಲ್ಲದೆ ನೀನು, ನಿನ್ನ ಪುತ್ರರು ಮತ್ತು ನಿನ್ನ ಹೆಣ್ಣುಮಕ್ಕಳು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನು ಮತ್ತು ಅರ್ಪಿಸಲ್ಪಟ್ಟ ತೊಡೆಯನ್ನು ತಿನ್ನಬೇಕು. ನೀವು ಅವುಗಳನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿಲ್ಲ. ಆದರೆ ನೀವು ಅವುಗಳನ್ನು ಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಯಾಕೆಂದರೆ ಅವುಗಳು ಸಮಾಧಾನಯಜ್ಞಗಳಿಂದ ಬಂದವುಗಳಾಗಿವೆ. ಇಸ್ರೇಲರು ಆ ಕಾಣಿಕೆಗಳನ್ನು ದೇವರಿಗಾಗಿ ಕೊಡುತ್ತಾರೆ. ಜನರು ಆ ಪಶುಗಳಲ್ಲಿ ಕೆಲವು ಭಾಗಗಳನ್ನು ತಿನ್ನುತ್ತಾರೆ. ಆದರೆ ಎದೆಯ ಭಾಗವು ನಿಮ್ಮ ಪಾಲಾಗಿರುತ್ತದೆ. 15 ಜನರು ಪ್ರಾಣಿಗಳ ಕೊಬ್ಬನ್ನು ಅಗ್ನಿಯ ಮೂಲಕ ಹೋಮಮಾಡುವಾಗ, ಯಾಜಕರಿಗಾಗಿ ತೆಗೆದಿಟ್ಟ ತೊಡೆಯ ಭಾಗವನ್ನು ಮತ್ತು ನೈವೇದ್ಯವಾಗಿ ನಿವಾಳಿಸಬೇಕಾದ ಎದೆಯ ಭಾಗವನ್ನು ಯೆಹೋವನ ಸನ್ನಿಧಿಗೆ ತರಬೇಕು. ಅದು ನಿಮ್ಮ ಪಾಲಾಗಿರುವುದು. ಅದು ನಿನಗೂ ನಿನ್ನ ಮಕ್ಕಳಿಗೂ ಸೇರಿದ್ದು. ಯೆಹೋವನು ಆಜ್ಞಾಪಿಸಿದಂತೆ ಯಜ್ಞಗಳ ಆ ಭಾಗವು ಎಂದೆಂದೂ ನಿಮ್ಮ ಪಾಲಾಗಿರುತ್ತದೆ” ಎಂದು ಹೇಳಿದನು.
16 ಮೋಶೆಯು ಪಾಪಪರಿಹಾರಕ್ಕಾಗಿ ಸಮರ್ಪಿತವಾದ ಹೋತದ ಕುರಿತು ವಿಚಾರಿಸಿದಾಗ, ಅದನ್ನು ಸುಟ್ಟುಬಿಟ್ಟರೆಂದು ಕೇಳಿ ಆರೋನನ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್‌ರವರ ಮೇಲೆ ಬಹುಕೋಪಗೊಂಡನು. 17 ಮೋಶೆ, “ನೀವು ಹೋತದ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು. ಅದು ಬಹಳ ಪವಿತ್ರವಾದದ್ದಲ್ಲವೇ? ನೀವು ಯಾಕೆ ಅದನ್ನು ಯೆಹೋವನ ಸನ್ನಿಧಿಯಲ್ಲಿ ತಿನ್ನಲಿಲ್ಲ? ನೀವು ಜನರ ಪಾಪಪರಿಹಾರ ಮಾಡುವಂತೆಯೂ ಜನರ ದೋಷವನ್ನು ಪರಿಹಾರಮಾಡುವಂತೆಯೂ ಯೆಹೋವನು ಅದನ್ನು ನಿಮಗೆ ಕೊಟ್ಟನು. 18 ಆ ಹೋತದ ರಕ್ತವನ್ನು ಪವಿತ್ರಸ್ಥಳದ ಒಳಗಡೆ ತರಲಿಲ್ಲ. ನಾನು ಆಜ್ಞಾಪಿಸಿದಂತೆ ನೀವು ಅದರ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು” ಅಂದನು.
19 ಆದರೆ ಆರೋನನು ಮೋಶೆಗೆ, “ನೋಡು ಈ ದಿನ ಇವರು ಯೆಹೋವನ ಸನ್ನಿಧಿಗೆ ಪಾಪಪರಿಹಾರಕ ಮತ್ತು ಸರ್ವಾಂಗಹೋಮಗಳನ್ನು ತಂದಿದ್ದರೂ ನನಗೆ ಈ ಆಪತ್ತು ಸಂಭವಿಸಿತು. ಹೀಗಿರುವಾಗ ನಾನು ಪಾಪಪರಿಹಾರಕ ಸಮರ್ಪಣೆಯ ಪಶುವಿನ ಮಾಂಸವನ್ನು ಈ ದಿನದಲ್ಲಿ ತಿಂದಿದ್ದರೆ ಯೆಹೋವನಿಗೆ ಒಳ್ಳೆಯದಾಗಿ ತೋರುತ್ತಿತ್ತೋ? ಇಲ್ಲ!” ಎಂದು ಹೇಳಿದನು.
20 ಮೋಶೆ ಆ ಮಾತನ್ನು ಕೇಳಿ ಒಪ್ಪಿಕೊಂಡನು.
Kannada Holy Bible: Easy-to-Read Version. All rights reserved. © 1997 Bible League International