Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಪ್ರಕಟನೆ 17-19

ಮೃಗದ ಮೇಲಿದ್ದ ಸ್ತ್ರೀ

17 ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿದನು. ಏಳು ಪಾತ್ರೆಗಳನ್ನು ಹೊಂದಿದ್ದವರಲ್ಲಿ ಇವನೂ ಒಬ್ಬನಾಗಿದ್ದನು. ಆ ದೇವದೂತನು, “ಬಾ, ಪ್ರಸಿದ್ಧಳಾದ ವೇಶ್ಯಾಸ್ತ್ರೀಗೆ ನೀಡುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಬಹಳ ನೀರುಗಳ ಮೇಲೆ ಕುಳಿತುಕೊಂಡಿರುವವಳು ಅವಳೇ. ಲೋಕದ ರಾಜರುಗಳು ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಲೋಕದ ಜನರು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ಹೇಳಿದನು.

ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರ ವರ್ಣದ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಳು. ಅವಳು ತಾನು ತೊಟ್ಟಿದ್ದ ಚಿನ್ನ, ರತ್ನ, ಮುತ್ತು, ಮುಂತಾದವುಗಳಿಂದ ಪ್ರಕಾಶಿಸುತ್ತಿದ್ದಳು. ಅವಳು ತನ್ನ ಕೈಯಲ್ಲಿ ಚಿನ್ನದ ಬಟ್ಟಲನ್ನು ಹಿಡಿದಿದ್ದಳು. ಆ ಬಟ್ಟಲು ಅಸಹ್ಯವಾದವುಗಳಿಂದ ಮತ್ತು ಅವಳ ಲೈಂಗಿಕ ಪಾಪಗಳ ಅಶುದ್ಧತೆಯಿಂದ ತುಂಬಿಹೋಗಿತ್ತು. ಅವಳ ಹಣೆಯ ಮೇಲೆ ಒಂದು ಬರಹವನ್ನು ಬರೆದಿತ್ತು. ಆ ಬರಹಕ್ಕೆ ಗೂಢಾರ್ಥವಿತ್ತು. ಅಲ್ಲಿ ಬರೆದಿದ್ದುದು ಹೀಗಿತ್ತು:

ಬಾಬಿಲೋನ್ ಎಂಬ ಮಹಾನಗರಿಯು

ಭೂಮಿಯಲ್ಲಿರುವ ಕೆಟ್ಟಕಾರ್ಯಗಳಿಗೆ

ಮತ್ತು ಜಾರಸ್ತ್ರೀಯರಿಗೆ ತಾಯಿ.

ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು.

ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆಗ ದೇವದೂತನು ನನಗೆ, “ನೀನೇಕೆ ಆಶ್ಚರ್ಯಗೊಂಡೆ? ಈ ಸ್ತ್ರೀಯ ಗೂಢಾರ್ಥವನ್ನು ಮತ್ತು ಈಕೆ ಸವಾರಿ ಮಾಡುತ್ತಿರುವ ಏಳು ತಲೆಗಳನ್ನು ಮತ್ತು ಹತ್ತು ಕೊಂಬುಗಳನ್ನು ಹೊಂದಿರುವ ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ. ನೀನು ನೋಡಿದ ಆ ಮೃಗವು ಒಂದು ಕಾಲದಲ್ಲಿ ಜೀವಿಸಿತ್ತು. ಆದರೆ ಈಗ ಆ ಮೃಗವು ಜೀವಂತವಾಗಿಲ್ಲ. ಆದರೆ ಆ ಮೃಗವು ತಳವಿಲ್ಲದ ಕೂಪದಿಂದ ಜೀವಂತವಾಗಿ ಮೇಲೆದ್ದುಬಂದು ನಾಶವಾಗು ವುದು. ಲೋಕದಲ್ಲಿ ಜೀವಿಸುತ್ತಿರುವ ಜನರು ಆ ಮೃಗವನ್ನು ನೋಡಿ, ಅದು ಒಂದು ಕಾಲದಲ್ಲಿ ಜೀವಂತವಾಗಿತ್ತು, ಈಗ ಇಲ್ಲ, ಆದರೆ ಮತ್ತೆ ಬರುವುದು ಎಂಬುದನ್ನು ತಿಳಿದು ಅವರು ಆಶ್ಚರ್ಯಪಡುವರು. ಲೋಕವು ಸೃಷ್ಟಿಯಾದಂದಿನಿಂದ ಜೀವಬಾಧ್ಯರ ಪುಸ್ತಕದಲ್ಲಿ ಈ ಜನರ ಹೆಸರುಗಳನ್ನು ಬರೆದೇ ಇಲ್ಲ.

“ಇದನ್ನು ಅರ್ಥಮಾಡಿಕೊಳ್ಳಲು ನಿನಗೆ ಬುದ್ಧಿ ಬೇಕು. ಆ ಮೃಗದ ಏಳು ತಲೆಗಳೇ ಆ ಸ್ತ್ರೀಯು ಕುಳಿತುಕೊಳ್ಳುವ ಏಳು ಬೆಟ್ಟಗಳಾಗಿವೆ. ಅವು ಏಳು ಮಂದಿ ರಾಜರುಗಳೂ ಆಗಿವೆ. 10 ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ. 11 ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಈ ಮೃಗವು ಎಂಟನೆಯ ರಾಜ. ಈ ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.

12 “ನೀನು ನೋಡಿದ ಹತ್ತು ಕೊಂಬುಗಳೇ ಹತ್ತು ರಾಜರುಗಳಾಗಿವೆ. ಈ ಹತ್ತು ರಾಜರುಗಳು ಇನ್ನೂ ತಮ್ಮ ರಾಜ್ಯವನ್ನು ಪಡೆದಿಲ್ಲ. ಆದರೆ ಅವರು ಆಳುವ ಅಧಿಕಾರವನ್ನು ಮೃಗದ ಸಂಗಡ ಒಂದು ಗಂಟೆ ಪಡೆಯುತ್ತಾರೆ. 13 ಈ ಹತ್ತು ರಾಜರುಗಳೆಲ್ಲರೂ ಒಂದೇ ಉದ್ದೇಶವುಳ್ಳವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ಮತ್ತು ಅಧಿಕಾರವನ್ನು ಮೃಗಕ್ಕೆ ಕೊಡುತ್ತಾರೆ. 14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. 16 ನೀನು ನೋಡಿದ ಆ ಮೃಗ ಮತ್ತು ಅದರ ಹತ್ತು ಕೊಂಬುಗಳು (ರಾಜರುಗಳು) ಆ ವೇಶ್ಯೆಯನ್ನು ದ್ವೇಷಿಸುತ್ತವೆ. ಅವಳಲ್ಲಿರುವುದನ್ನೆಲ್ಲ ಅವರು ಕಿತ್ತುಕೊಂಡು, ಅವಳನ್ನು ನಗ್ನಾವಸ್ಥೆಯಲ್ಲಿ ಬಿಡುತ್ತಾರೆ. ಅವರು ಅವಳ ದೇಹವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. 17 ತನ್ನ ಕಾರ್ಯವನ್ನು ಮಾಡಬೇಕೆಂಬ ಬಯಕೆಯನ್ನು ದೇವರು ಆ ಹತ್ತು ರಾಜರುಗಳಲ್ಲಿ ಉಂಟುಮಾಡಿದ್ದರಿಂದ ಅವರು ಆಳಲು ತಮಗಿದ್ದ ಅಧಿಕಾರವನ್ನು ಮೃಗಕ್ಕೆ ಕೊಡಲು ಸಮ್ಮತಿಸಿದರು. ದೇವರು ಹೇಳಿದ್ದೆಲ್ಲ ಸಂಪೂರ್ಣವಾಗಿ ನೆರವೇರುವ ತನಕ ಅವರು ಆಳುತ್ತಾರೆ. 18 ನೀನು ನೋಡಿದ ಸ್ತ್ರೀಯು ಲೋಕದ ರಾಜರುಗಳನ್ನು ಆಳುವ ಮಹಾನಗರಿಯಾಗಿದ್ದಾಳೆ.”

ಬಾಬಿಲೋನ್ ನಾಶವಾಯಿತು

18 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು. ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು:

“ಅವಳು ನಾಶವಾದಳು!
    ಬಾಬಿಲೋನೆಂಬ ಮಹಾನಗರಿಯು ನಾಶವಾದಳು!
ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು,
    ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು,
    ಅಶುದ್ಧವಾದ ಮತ್ತು ಅಸಹ್ಯವಾದ
    ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು.
    ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.

ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು:

“ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ.
    ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ;
    ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.
ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ.
    ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.
ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ.
    ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ.
ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ
    ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.
ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು.
    ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ.
‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ.
    ನಾನು ವಿಧವೆಯಲ್ಲ,
    ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.
ಆದ್ದರಿಂದ ಅವಳಿಗೆ ಮರಣ, ಗೋಳಾಟ,
    ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ.
ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು
    ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.”

ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು. 10 ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:

‘ಅಯ್ಯೋ, ಅಯ್ಯೋ, ಮಹಾನಗರಿಯೇ,
    ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ,
ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’

11 “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು. 12 ಅವರು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರ ವರ್ಣದ ವಸ್ತ್ರ, ರೇಷ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ದಂತದಿಂದ ಮಾಡಿದ ನಾನಾ ಬಗೆಯ ವಸ್ತುಗಳು, ಬಹು ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ ಇವುಗಳನ್ನು ಮಾರುತ್ತಾರೆ. 13 ಆ ವರ್ತಕರು ದಾಲ್ಚಿನ್ನಿ, ಸಾಂಬಾರ ಪದಾರ್ಥಗಳು, ಧೂಪ, ಪರಿಮಳತೈಲ, ಸಾಂಬ್ರಾಣಿ, ದ್ರಾಕ್ಷಾರಸ ಮತ್ತು ಆಲಿವ್‌ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು, ಕುರಿ, ಕುದುರೆಗಳು, ರಥಗಳು, ಗುಲಾಮರು ಮತ್ತು ಮಾನವ ಪ್ರಾಣಗಳನ್ನು ಮಾರುತ್ತಾರೆ. ವರ್ತಕರು ಅಳುತ್ತಾ ಹೀಗೆ ಹೇಳುವರು:

14 ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು.
ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು.
    ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’

15 “ಆ ವರ್ತಕರು ಅವಳ ಯಾತನೆಯನ್ನು ಕಂಡು ಭಯದಿಂದ ಅವಳಿಂದ ಬಹುದೂರದಲ್ಲಿ ನಿಂತುಕೊಳ್ಳುವರು. ಆ ವಸ್ತುಗಳನ್ನು ಅವಳಿಗೆ ಮಾರಿ ಶ್ರೀಮಂತರಾದ ವರ್ತಕರು ಇವರೇ. 16 ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು:

‘ಅಯ್ಯೋ, ಅಯ್ಯೋ, ಮಹಾನಗರಿಯೇ!
    ಅವಳು ನಯವಾದ ನಾರುಮಡಿಯನ್ನು,
    ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು.
    ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು!
17 ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’

“ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು 18 ಬಾಬಿಲೋನಿನ ದಹನದಿಂದೇರುತ್ತಿದ್ದ ಹೊಗೆಯನ್ನು ನೋಡಿ ಅವರು ಗಟ್ಟಿಯಾದ ಧ್ವನಿಯಲ್ಲಿ, ‘ಈ ಮಹಾನಗರಿಯಂತಹ ನಗರವು ಇರಲೇ ಇಲ್ಲ!’ ಎಂದು ಹೇಳಿದರು. 19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:

‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
    ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
    ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
    ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”

21 ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು:

“ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು.
    ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.
22 ಹಾರ್ಪ್ ಮುಂತಾದ ವಾದ್ಯಗಳನ್ನು ನುಡಿಸುವ ಜನರ ಸಂಗೀತವು, ಕೊಳಲು ಮತ್ತು ತುತೂರಿಗಳನ್ನು ನುಡಿಸುವ ಜನರ ಸಂಗೀತವು
    ನಿನ್ನಲ್ಲಿ ಇನ್ನೆಂದಿಗೂ ಕೇಳಿಬರುವುದಿಲ್ಲ.
ಕುಶಲಕರ್ಮಿಗಳಾರೂ ನಿನ್ನಲ್ಲಿ ಸಿಕ್ಕುವುದಿಲ್ಲ.
    ಬೀಸುವ ಕಲ್ಲಿನ ಶಬ್ದವು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ.
23 ದೀಪದ ಬೆಳಕು ಇನ್ನೆಂದಿಗೂ
    ನಿನ್ನಲ್ಲಿ ಪ್ರಕಾಶಿಸುವುದಿಲ್ಲ.
ವಧೂವರರ ಧ್ವನಿಯು ಇನ್ನೆಂದಿಗೂ
    ನಿನ್ನಲ್ಲಿ ಕೇಳಿಬರುವುದಿಲ್ಲ.
ನಿನ್ನ ವರ್ತಕರು ಪ್ರಪಂಚದ ಮಹಾಪುರುಷರಾಗಿದ್ದರು.
    ನಿನ್ನ ಮಾಟದಿಂದ ಎಲ್ಲಾ ಜನಾಂಗಗಳೂ ಮರುಳಾದರು.
24 ಅವಳು ಪ್ರವಾದಿಗಳ, ದೇವರ ಪರಿಶುದ್ಧಜನರ
    ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವನ್ನು ಸುರಿಸಿ ಅಪರಾಧಿಯಾದಳು.”

ಪರಲೋಕದಲ್ಲಿ ದೇವರಿಗೆ ಸ್ತೋತ್ರ

19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:

“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
    ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”

ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:

“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”

ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,

“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.

ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,

“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.

ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:

“ಹಲ್ಲೆಲೂಯಾ!
    ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
    ಆತನು ಸರ್ವಶಕ್ತನಾಗಿದ್ದಾನೆ.
ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
    ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
    ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”

(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)

ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.

10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.

ಬಿಳಿ ಕುದುರೆಯ ಮೇಲಿನ ಸವಾರನು

11 ನಂತರ ಪರಲೋಕವು ತೆರೆದಿರುವುದನ್ನು ನಾನು ನೋಡಿದೆನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನ ಹೆಸರು ನಂಬಿಗಸ್ತ ಮತ್ತು ಸತ್ಯವಂತ. ಆತನು ತನ್ನ ತೀರ್ಪುಗಳಲ್ಲಿಯೂ ಯುದ್ಧಗಳಲ್ಲಿಯೂ ನ್ಯಾಯವಂತನಾಗಿದ್ದನು. 12 ಆತನ ಕಣ್ಣುಗಳು ಉರಿಯುವ ಕೆಂಡಗಳಂತಿದ್ದವು. ಆತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಮೇಲೆ ಒಂದು ಹೆಸರನ್ನು ಬರೆಯಲಾಗಿತ್ತು, ಆದರೆ ಆ ಹೆಸರಿನ ಅರ್ಥ ಆತನೊಬ್ಬನಿಗೆ ಮಾತ್ರ ತಿಳಿದಿತ್ತೇ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. 13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ. 14 ಪರಲೋಕದ ಸೈನ್ಯಗಳು ಬಿಳಿ ಕುದುರೆಗಳ ಮೇಲೆ ಆತನನ್ನು ಹಿಂಬಾಲಿಸುತ್ತಿದ್ದವು. ಅವರು ಬಿಳುಪಾಗಿಯೂ ಶುಭ್ರವಾಗಿಯೂ ಇದ್ದ ನಯವಾದ ನಾರಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ. 16 ಆತನ ನಿಲುವಂಗಿಯ ಮೇಲೆಯೂ ಆತನ ಕಾಲಿನ ಮೇಲೆಯೂ,

ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು

ಎಂಬ ಹೆಸರನ್ನು ಬರೆಯಲಾಗಿತ್ತು.

17 ನಂತರ ಒಬ್ಬ ದೇವದೂತನು ಸೂರ್ಯನ ಮೇಲೆ ನಿಂತಿರುವುದನ್ನು ನಾನು ನೋಡಿದೆನು. ಆ ದೇವದೂತನು ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿ ಬನ್ನಿರಿ. 18 ನೀವು ರಾಜರುಗಳ ಮತ್ತು ಸಹಸ್ರಾಧಿಪತಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬನ್ನಿರಿ. ಕುದುರೆಗಳ, ಕುದುರೆ ಸವಾರರ, ಸ್ವತಂತ್ರರಾದವರ, ಗುಲಾಮರ, ಚಿಕ್ಕವರ ಮತ್ತು ದೊಡ್ಡವರ ದೇಹಗಳನ್ನು ತಿನ್ನಲು ಬನ್ನಿರಿ.”

19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು. 20 ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸೈನ್ಯಗಳನ್ನು ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಹೊರಬಂದ ಕತ್ತಿಯಿಂದ ಕೊಲ್ಲಲಾಯಿತು. ಈ ದೇಹಗಳನ್ನು ಪಕ್ಷಿಗಳೆಲ್ಲ ಹೊಟ್ಟೆ ತುಂಬುವವರೆಗೆ ತಿಂದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International