Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯಾಕೋಬನು 1-5

ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

ನಿಜ ಶ್ರೀಮಂತಿಕೆ

ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.

ಶೋಧನೆಯು ದೇವರಿಂದ ಬರುವುದಿಲ್ಲ

12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.

16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ. 17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.

ಕೇಳುವಿಕೆ ಮತ್ತು ವಿಧೇಯತೆ

19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.

22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.

ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ

26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.

ಜನರೆಲ್ಲರನ್ನೂ ಪ್ರೀತಿಸಿ

ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.

ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.

ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.

10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”(B) ಎಂದು ದೇವರು ಹೇಳಿದನು. “ಕೊಲ್ಲಬಾರದು”(C) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.

12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.

ನಂಬಿಕೆ ಮತ್ತು ಉತ್ತಮ ಕಾರ್ಯಗಳು

14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.

18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.

20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(D) ಅಬ್ರಹಾಮನನ್ನು “ದೇವರ ಸ್ನೇಹಿತ”(E) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.

25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]

26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.

ಹತೋಟಿಮೀರಿ ಮಾತಾಡಬೇಡಿ

ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.

ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ. ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು. ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ. ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.

ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.

ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ. ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ. ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ. 10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು. 11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ! 12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.

ನಿಜವಾದ ಜ್ಞಾನ

13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ

ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.

ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[b] ಎಂದು ಪವಿತ್ರ ಗ್ರಂಥವು ಹೇಳುತ್ತದೆ. ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(F)

ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.

ನೀವು ತೀರ್ಪುಗಾರರಲ್ಲ

11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.

ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ

13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು. 17 ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದರೂ ಒಳ್ಳೆಯದನ್ನು ಮಾಡದಿರುವವನು ಪಾಪವನ್ನು ಮಾಡುವವನಾಗಿದ್ದಾನೆ.

ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು

ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.

ತಾಳ್ಮೆಯಿಂದಿರಿ

ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!

10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.

ಎಚ್ಚರಿಕೆಯಿಂದ ಮಾತಾಡಿರಿ

12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.

ಪ್ರಾರ್ಥನೆಯ ಶಕ್ತಿ

13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು. 14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ಆ ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.

16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ. 17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ಆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ! 18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.

ಆತ್ಮವನ್ನು ರಕ್ಷಿಸಿ

19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. 20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಆ ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International