Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಇಬ್ರಿಯರಿಗೆ 7-10

ಯಾಜಕ ಮೆಲ್ಕಿಜೆದೇಕ

ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು.

ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ. ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.

ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು. ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.

ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ. ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು. 10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.

11 ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ. 12 ಬೇರೊಬ್ಬ ಯಾಜಕನು ಬಂದರೆ, ಆಗ ಧರ್ಮಶಾಸ್ತ್ರವು ಬದಲಾಗಲೇಬೇಕು. 13 ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ. 14 ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.

ಯೇಸು ಮೆಲ್ಕಿಜೆದೇಕನಂತಹ ಯಾಜಕನು

15 ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ. 16 ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು. 17 ಪವಿತ್ರ ಗ್ರಂಥದಲ್ಲಿ ಆತನನ್ನು ಕುರಿತು ಹೀಗೆ ಹೇಳಿದೆ: “ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ ಯಾಜಕನಾಗಿರುವೆ.”(A)

18 ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು. 19 ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.

20 ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ. 21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ:

“‘ನೀನು ಸದಾಕಾಲವೂ ಯಾಜಕನಾಗಿರುವೆ’
    ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”(B)

22 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.

23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು. 24 ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. 25 ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.

26 ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ. 27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.

ಯೇಸುವೇ ನಮ್ಮ ಪ್ರಧಾನಯಾಜಕನು

ನಾವು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದೇನೆಂದರೆ, ನಿಮಗೆ ಹೇಳಿದಂತೆಯೇ ನಮಗೊಬ್ಬ ಪ್ರಧಾನ ಯಾಜಕನಿದ್ದಾನೆ. ಆತನು ಪರಲೋಕದಲ್ಲಿ ದೇವರ ಸಿಂಹಾಸನದ ಬಲಭಾಗದಲ್ಲಿ ಈಗ ಕುಳಿತುಕೊಂಡಿದ್ದಾನೆ. ಆತನು ಮಹಾ ಪವಿತ್ರಸ್ಥಳದಲ್ಲಿ ಅಂದರೆ ಜನರಿಂದ ನಿರ್ಮಿತವಾಗದೆ, ದೇವರಿಂದಲೇ ನಿರ್ಮಿಸಲ್ಪಟ್ಟಿರುವ ನಿಜವಾದ ದೇವದರ್ಶನ ಗುಡಾರದಲ್ಲಿ ಸೇವೆಮಾಡುತ್ತಿದ್ದಾನೆ.

ಪ್ರತಿಯೊಬ್ಬ ಪ್ರಧಾನಯಾಜಕನೂ ದೇವರಿಗೆ ಯಜ್ಞಗಳನ್ನೂ ಕಾಣಿಕೆಗಳನ್ನೂ ಅರ್ಪಿಸಬೇಕು. ಆದ್ದರಿಂದ ನಮ್ಮ ಪ್ರಧಾನ ಯಾಜಕನೂ ದೇವರಿಗೆ ಏನನ್ನಾದರೂ ಅರ್ಪಿಸಲೇಬೇಕು. ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ. ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು”(C) ಎಂದು ಹೇಳಿದ್ದು ಈ ಕಾರಣದಿಂದಲೇ. ಆದರೆ ಯೇಸುವಿಗೆ ಕೊಡಲ್ಪಟ್ಟ ಕಾರ್ಯವು ಆ ಯಾಜಕರಿಗೆ ಕೊಡಲ್ಪಟ್ಟ ಕಾರ್ಯಕ್ಕಿಂತ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಯೇಸು ತನ್ನ ಜನರಿಗಾಗಿ ದೇವರಿಂದ ತಂದ ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠವಾಗಿದೆ. ಉತ್ತಮ ಸಂಗತಿಗಳ ವಾಗ್ದಾನದ ಆಧಾರದ ಮೇಲೆ ಹೊಸ ಒಡಂಬಡಿಕೆಯು ಸ್ಥಾಪಿತವಾಗಿದೆ.

ಮೊದಲನೆ ಒಡಂಬಡಿಕೆ ಏನೂ ದೋಷವಿಲ್ಲದ್ದಾಗಿದ್ದರೆ, ಎರಡನೆ ಒಡಂಬಡಿಕೆಯ ಅಗತ್ಯವೇ ಇರಲಿಲ್ಲ. ಆದರೆ ದೇವರು ಜನರಲ್ಲಿ ಯಾವುದೋ ದೋಷವನ್ನು ಕಂಡು ಹೇಳಿದ್ದೇನೆಂದರೆ:

“ಇಸ್ರೇಲರೊಡನೆಯೂ ಯೆಹೂದ್ಯರೊಡನೆಯೂ
    ನಾನು ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕಾಲ ಬರುತ್ತಿದೆ ಎಂದು ಪ್ರಭು ಹೇಳುತ್ತಾನೆ.
ಅದು, ಅವರ ಪಿತೃಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಯಂತಿರುವುದಿಲ್ಲ.
    ಅವರನ್ನು ಈಜಿಪ್ಟಿನಿಂದ ಕೈಹಿಡಿದು ಹೊರಗೆ ಕರೆದುಕೊಂಡು ಬಂದ ಕಾಲದಲ್ಲಿ ಅವರೊಡನೆ ಆ ಒಡಂಬಡಿಕೆಯನ್ನೂ ಮಾಡಿಕೊಂಡೆನು.
ಆದರೆ ಅವರು ಅದನ್ನು ಅನುಸರಿಸಲಿಲ್ಲವಾದ್ದರಿಂದ
    ಅವರಿಗೆ ವಿಮುಖನಾದೆನು ಎಂದು ಪ್ರಭು ಹೇಳುತ್ತಾನೆ.
10 ನಾನು ಇಸ್ರೇಲರೊಡನೆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ
    ಹೊಸ ಒಡಂಬಡಿಕೆಯು ಇಂತಿದೆ:
ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇರಿಸುವೆನು;
    ಅವರ ಹೃದಯದ ಮೇಲೆ ಬರೆಯುವೆನು;
ನಾನು ಅವರ ದೇವರಾಗಿರುವೆನು;
    ಅವರು ನನ್ನ ಜನರಾಗಿರುವರು.
11 ಒಬ್ಬನು ಸಹೋದರನಿಗಾಗಲಿ, ಬೇರೆಯವರಿಗಾಗಲಿ ಬೋಧಿಸಬೇಕಾಗಿರುವುದಿಲ್ಲ;
ದೇವರನ್ನು ತಿಳಿದುಕೊಳ್ಳಿ ಎಂದು ಹೇಳಬೇಕಾಗಿರುವುದಿಲ್ಲ. ಏಕೆಂದರೆ ಅತ್ಯಂತ ಪ್ರಮುಖರನ್ನು ಮೊದಲುಗೊಂಡು ಅತ್ಯಂತ ಅಲ್ಪರಾದವರೆಲ್ಲರೂ ನನ್ನನ್ನು ತಿಳಿದುಕೊಂಡಿರುವರು.
12 ಅವರು ನನ್ನ ವಿರುದ್ಧವಾಗಿ ಮಾಡುವ ಎಲ್ಲಾ ಕೆಟ್ಟಕಾರ್ಯಗಳನ್ನು ಕ್ಷಮಿಸುವೆನು;
    ಅವರ ಪಾಪಗಳನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.”(D)

13 ದೇವರು ಇದನ್ನು ಹೊಸ ಒಡಂಬಡಿಕೆ ಎಂದು ಕರೆದನು. ಆದ್ದರಿಂದ ಮೊದಲನೆ ಒಡಂಬಡಿಕೆಯನ್ನು ದೇವರು ಹಳೆಯದಾಗಿ ಮಾಡಿದನು. ಯಾವುದು ಹಳೆಯದಾಗಿ ಉಪಯೋಗಕ್ಕೆ ಬಾರದಾಗುತ್ತದೋ ಅದು ಅದೃಶ್ಯವಾಗುವುದು.

ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ

ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.

ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.

ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.

ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ

11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.

15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.

16 ಒಬ್ಬನು ಸಾಯುವ ಮೊದಲೇ ಉಯಿಲನ್ನು[a] ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು. 17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ. 18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು. 19 ಮೊದಲನೆಯದಾಗಿ, ಮೋಶೆಯು ಧರ್ಮಶಾಸ್ತ್ರದ ಪ್ರತಿಯೊಂದು ಆಜ್ಞೆಯನ್ನೂ ಜನರಿಗೆಲ್ಲ ತಿಳಿಸಿದನು. ನಂತರ ಅವನು ಕರುಗಳ ರಕ್ತವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿದನು. ಬಳಿಕ ನೀರು ಮತ್ತು ರಕ್ತವನ್ನು ಧರ್ಮಶಾಸ್ತ್ರದ ಮೇಲೆ ಮತ್ತು ಜನರೆಲ್ಲರ ಮೇಲೆ ಚಿಮುಕಿಸಲು ಕೆಂಪು ಉಣ್ಣೆಯನ್ನೂ ಹಿಸ್ಸೋಪ್ ಗಿಡದ[b] ಕವಲನ್ನು ಉಪಯೋಗಿಸಿದನು. 20 ಚಿಮುಕಿಸುವಾಗ, “ನೀವು ಅನುಸರಿಸಬೇಕೆಂದು ದೇವರು ಆಜ್ಞಾಪಿಸಿದ ಒಡಂಬಡಿಕೆಯನ್ನು ಈ ರಕ್ತ ದೃಢಪಡಿಸುತ್ತದೆ”(E) ಎಂದು ಹೇಳಿದನು. 21 ಅದೇರೀತಿ, ಮೋಶೆಯು ರಕ್ತವನ್ನು ಗುಡಾರದ ಮೇಲೆಯೂ ಆರಾಧನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಮೇಲೆಯೂ ಚಿಮುಕಿಸಿದನು. 22 ಬಹುಮಟ್ಟಿಗೆ ಪ್ರತಿಯೊಂದೂ ರಕ್ತದಿಂದ ಪರಿಶುದ್ಧವಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ರಕ್ತವಿಲ್ಲದೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿಲ್ಲ.

ಕ್ರಿಸ್ತನ ಯಜ್ಞವು ಪಾಪಗಳನ್ನು ದೂರತಳ್ಳಿತು

23 ಈ ವಸ್ತುಗಳು ಪರಲೋಕದಲ್ಲಿರುವ ವಸ್ತುಗಳ ಪ್ರತಿರೂಪಗಳಾಗಿವೆ. ಇವುಗಳನ್ನು ಪ್ರಾಣಿಗಳ ಯಜ್ಞಗಳಿಂದ ಪರಿಶುದ್ಧಗೊಳಿಸಬೇಕಾಗಿದೆ. ಆದರೆ ಪರಲೋಕದಲ್ಲಿರುವ ನಿಜರೂಪಗಳಿಗಾಗಿ ಉತ್ತಮವಾದ ಯಜ್ಞಗಳನ್ನು ಅರ್ಪಿಸಬೇಕಾಗಿದೆ. 24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.

25 ಪ್ರಧಾನಯಾಜಕನು ವರ್ಷಕ್ಕೊಮ್ಮೆ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವಾಗ ಅರ್ಪಿಸುವುದಕ್ಕಾಗಿ ಪಶುರಕ್ತವನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಿದ್ದನು. ಆದರೆ ಅವನು ತನ್ನ ಸ್ವಂತ ರಕ್ತವನ್ನು ಅರ್ಪಿಸುತ್ತಿರಲಿಲ್ಲ. ಕ್ರಿಸ್ತನು ಪರಲೋಕಕ್ಕೆ ಹೋದದ್ದು, ಪ್ರಧಾನ ಯಾಜಕನು ಮತ್ತೆಮತ್ತೆ ರಕ್ತವನ್ನು ಅರ್ಪಿಸಿದಂತೆ ತನ್ನನ್ನು ಮತ್ತೆಮತ್ತೆ ಅರ್ಪಿಸಿಕೊಳ್ಳುವುದಕ್ಕಾಗಿಯಲ್ಲ. 26 ಕ್ರಿಸ್ತನು ಅನೇಕ ಸಲ ತನ್ನನ್ನು ಅರ್ಪಿಸಿಕೊಂಡಿದ್ದರೆ, ಈ ಲೋಕವು ಸೃಷ್ಟಿಯಾದಂದಿನಿಂದ ಆತನು ಅನೇಕ ಸಲ ಸಂಕಟವನ್ನು ಅನಭವಿಸ ಬೇಕಾಗುತ್ತಿತ್ತು. ಆದರೆ ಕ್ರಿಸ್ತನು ಯುಗಾಂತ್ಯದಲ್ಲಿ ಪಾಪನಿವಾರಣೆ ಮಾಡುವುದಕ್ಕಾಗಿ ಬಂದು ಒಂದೇ ಸಲ ತನ್ನನ್ನು ಅರ್ಪಿಸಿಕೊಂಡನು.

27 ಪ್ರತಿಯೊಬ್ಬರೂ ಒಂದೇಸಾರಿ ಸಾಯುವರು. ಅನಂತರ ಅವರಿಗೆ ನ್ಯಾಯತೀರ್ಪಾಗುವುದು. 28 ಅದರಂತೆಯೇ ಕ್ರಿಸ್ತನು ಅನೇಕ ಜನರ ಪಾಪಗಳನ್ನು ತೆಗೆದುಹಾಕಲು ಒಂದು ಸಲ ಮಾತ್ರ ತನ್ನನ್ನು ಯಜ್ಞವನ್ನಾಗಿ ಅರ್ಪಿಸಿಕೊಂಡನು. ಕ್ರಿಸ್ತನು ಎರಡನೆ ಸಲ ಪ್ರತ್ಯಕ್ಷನಾಗುವುದು ಜನರ ಪಾಪನಿವಾರಣೆಗೋಸ್ಕರವಲ್ಲ. ತನಗಾಗಿ ಕಾಯುತ್ತಿರುವ ಜನರನ್ನು ಬಿಡುಗಡೆ ಮಾಡುವುದಕ್ಕಾಗಿಯಷ್ಟೇ.

ಕ್ರಿಸ್ತನ ಯಜ್ಞವು ನಮ್ಮನ್ನು ನಿಷ್ಕಳಂಕರನ್ನಾಗಿ ಮಾಡುವುದು

10 ಧರ್ಮಶಾಸ್ತ್ರವು ಮುಂದೆ ಬರುವ ಉತ್ತಮ ಸಂಗತಿಗಳ ಅಸ್ಪಷ್ಟ ಚಿತ್ರಣವಾಗಿದೆ. ಅದು ನಿಜವಾದ ಸಂಗತಿಗಳ ಸ್ಪಷ್ಟ ಚಿತ್ರಣವಲ್ಲ. ಪ್ರತಿ ವರ್ಷವೂ ಒಂದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕೆಂದು ಅದು ಜನರಿಗೆ ತಿಳಿಸಿತು. ದೇವರನ್ನು ಆರಾಧಿಸಲು ಬರುವ ಜನರು ಅದೇ ರೀತಿಯ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಆ ಜನರನ್ನು ಧರ್ಮಶಾಸ್ತ್ರವು ಎಂದಿಗೂ ನಿಷ್ಕಳಂಕರನ್ನಾಗಿ ಮಾಡಲಿಲ್ಲ. ಅದು ಜನರನ್ನು ನಿಷ್ಕಳಂಕರನ್ನಾಗಿ ಮಾಡಿದ್ದರೆ, ಆ ಯಜ್ಞಗಳು ಈಗಾಗಲೇ ನಿಂತುಹೋಗುತ್ತಿದ್ದವು. ಆ ಜನರು ಆಗಲೇ ತಮ್ಮ ಪಾಪಗಳಿಂದ ಬಿಡುಗಡೆ ಹೊಂದಿ ಪರಿಶುದ್ಧರಾಗುತ್ತಿದ್ದರು. ತಾವು ಪಾಪಿಗಳೆಂಬ ಅರಿವು ಅವರಿಗಿರುತ್ತಿರಲಿಲ್ಲ. ಆ ಜನರು ಪ್ರತಿವರ್ಷ ಅರ್ಪಿಸುತ್ತಿದ್ದ ಯಜ್ಞಗಳು ಅವರ ಪಾಪಗಳನ್ನು ನೆನಪಿಗೆ ತರುತ್ತಿದ್ದವು. ಏಕೆಂದರೆ ಅವರ ಪಾಪಗಳನ್ನು ತೆಗೆದುಹಾಕಲು ಹೋರಿಗಳ ಮತ್ತು ಹೋತಗಳ ರಕ್ತಕ್ಕೆ ಸಾಧ್ಯವಿರಲಿಲ್ಲ.

ಕ್ರಿಸ್ತನು ಈ ಲೋಕದಲ್ಲಿ ಪ್ರತ್ಯಕ್ಷನಾದಾಗ ಹೇಳಿದ್ದೇನೆಂದರೆ:

“ದೇವರೇ, ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ.
    ಆದರೆ ನೀನು ನನಗಾಗಿ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ.
ನೀನು ಸರ್ವಾಂಗಹೋಮಗಳಲ್ಲಿಯೂ
    ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.
ಆಗ ನಾನು, ‘ದೇವರೇ, ನಾನು ಇಲ್ಲಿದ್ದೇನೆ.
    ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ
    ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ’ ಎಂದು ಹೇಳಿದೆ.”(F)

ಈ ಪವಿತ್ರ ಗ್ರಂಥದಲ್ಲಿ ಕ್ರಿಸ್ತನು ಮೊದಲನೆಯದಾಗಿ ಹೇಳಿದ್ದೇನೆಂದರೆ: “ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ನೀನು ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.” (ಇವುಗಳೆಲ್ಲ ಧರ್ಮಶಾಸ್ತ್ರವು ಆಜ್ಞಾಪಿಸುವ ಯಜ್ಞಗಳು.) ನಂತರ ಕ್ರಿಸ್ತನು ಹೇಳಿದ್ದೇನೆಂದರೆ, “ದೇವರೇ, ನಾನು ಇಲ್ಲಿದ್ದೇನೆ. ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ.”(G) ಆದ್ದರಿಂದ ದೇವರು ಯಜ್ಞಗಳ ಮೊದಲನೆ ವ್ಯವಸ್ಥೆಯನ್ನು ಕೊನೆಗೊಳಿಸಿ, ತನ್ನ ಹೊಸ ಮಾರ್ಗವನ್ನು ಆರಂಭಿಸಿದ್ದಾನೆ. 10 ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಯೇಸು ಕ್ರಿಸ್ತನು ಮಾಡಿದನು. ಆ ಕಾರಣದಿಂದಲೇ, ಯಜ್ಞವಾಗಿ ಅರ್ಪಿತವಾದ ಆತನ ದೇಹದ ಮೂಲಕ ನಾವು ಪರಿಶುದ್ಧರಾದೆವು. ಆತನು ಶಾಶ್ವತವಾದ ಯಜ್ಞವನ್ನು ಒಂದೇ ಸಲ ಅರ್ಪಿಸಿದನು.

11 ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ. 12 ಆದರೆ ಕ್ರಿಸ್ತನು ಪಾಪಗಳಿಗಾಗಿ ಶಾಶ್ವತವಾದ ಒಂದೇ ಯಜ್ಞವನ್ನು ಅರ್ಪಿಸಿದನು. ನಂತರ ಆತನು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ. 14 ಒಂದೇ ಯಜ್ಞದ ಮೂಲಕ ಆತನು ತನ್ನ ಜನರನ್ನು ಎಂದೆಂದಿಗೂ ನಿಷ್ಕಳಂಕರನ್ನಾಗಿ ಮಾಡಿದನು. ಪರಿಶುದ್ಧರಾಗಿ ಮಾಡಲ್ಪಡುತ್ತಿರುವ ಜನರೇ ಇವರು.

15 ಪವಿತ್ರಾತ್ಮನು ನಮಗೆ ಇದರ ಬಗ್ಗೆ ತಿಳಿಸಿದ್ದಾನೆ. ಮೊದಲನೆಯದಾಗಿ ಆತನು ಹೇಳುವುದೇನೆಂದರೆ:

16 “ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ:
ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು;
    ಅವರ ಮನಸ್ಸಿನ ಮೇಲೆ ಬರೆಯುವೆನು.”(H)

17 ನಂತರ ಆತನು ಹೇಳುವುದೇನೆಂದರೆ:

“ನಾನು ಅವರ ಪಾಪಗಳನ್ನು ಮತ್ತು ಅವರ ಕೆಟ್ಟಕಾರ್ಯಗಳನ್ನು ಕ್ಷಮಿಸುತ್ತೇನೆ.
    ಅವುಗಳನ್ನು ಮತ್ತೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ.”(I)

18 ಈ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟ ಮೇಲೆ, ಅವುಗಳಿಗಾಗಿ ಮತ್ತೆ ಯಜ್ಞಗಳನ್ನು ಅರ್ಪಿಸುವುದು ಅಗತ್ಯವಿಲ್ಲ.

ಸಮೀಪಕ್ಕೆ ಬನ್ನಿರಿ

19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.

ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ

24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[c] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.

ಕ್ರಿಸ್ತನಿಂದ ದೂರ ಸರಿಯದಿರಿ

26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(J) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(K)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International