Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಇಬ್ರಿಯರಿಗೆ 1-6

ದೇವರು ತನ್ನ ಮಗನ ಮೂಲಕ ಮಾತನಾಡಿದನು

ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.

ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ:

“ನೀನು ನನ್ನ ಮಗ;
    ಈ ದಿನ ನಾನು ನಿನ್ನ ತಂದೆಯಾದೆನು.”(A)

ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ:

“ನಾನು ಅವನ ತಂದೆಯಾಗಿರುವೆನು,
    ಅವನು ನನ್ನ ಮಗನಾಗಿರುವನು.”(B)

ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ,

“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.”[a]

ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ:

“ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು.
    ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.”(C)

ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು:

“ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು.
    ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ.
    ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು
    ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.”(D)

10 ಇದಲ್ಲದೆ ದೇವರು ಹೀಗೆನ್ನುತ್ತಾನೆ:

“ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ.
    ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
11 ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ.
    ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
12 ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ.
    ಅವು ವಸ್ತ್ರಗಳಂತೆ ಬದಲಾಗುತ್ತವೆ.
ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ.
    ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.”(E)

13 ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ:

“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ,
    ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.”(F)

14 ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.

ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು

ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.

ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು

ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:

“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
    ಅವನು ಅಷ್ಟೊಂದು ಮುಖ್ಯನಾದವನೇ?
ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
    ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(G)

ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.

10 ಸಮಸ್ತವನ್ನು ಸೃಷ್ಟಿಸಿದಾತನು ದೇವರೇ. ಸಮಸ್ತವು ಆತನ ಮಹಿಮೆಗಾಗಿಯೇ ಸೃಷ್ಟಿಯಾಯಿತು. ದೇವರು ತನ್ನವರೇ ಆದ ಅನೇಕ ಜನರನ್ನು ಹೊಂದಿಕೊಂಡು ಅವರೊಂದಿಗೆ ತನ್ನ ಮಹಿಮೆಯನ್ನು ಹಂಚಿಕೊಳ್ಳಲು ಬಯಸಿದನು. ಆದ್ದರಿಂದ ಆತನು ಅವರನ್ನು ರಕ್ಷಣೆಗೆ ನಡೆಸಲು ಪರಿಪೂರ್ಣನಾದ ಒಬ್ಬಾತನನ್ನು ನಿರ್ಮಿಸಿದನು. ಆತನೇ ಯೇಸು. ದೇವರು ಆತನನ್ನು ಬಾಧೆಗಳ ಮೂಲಕವೇ ಪರಿಪೂರ್ಣನಾದ ರಕ್ಷಕನನ್ನಾಗಿ ಮಾಡಿದನು.

11 ಜನರನ್ನು ಪರಿಶುದ್ಧರನ್ನಾಗಿ ಮಾಡುವ ಯೇಸುವೂ ಮತ್ತು ಆತನಿಂದ ಪರಿಶುದ್ಧರಾಗುವ ಜನರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಆ ಜನರನ್ನು ಸಹೋದರರೆಂದೂ ಸಹೋದರಿಯರೆಂದೂ ಕರೆಯಲು ಆತನು (ಯೇಸು) ನಾಚಿಕೆಪಡುವುದಿಲ್ಲ. 12 ಯೇಸು ಹೇಳುತ್ತಾನೆ:

“ದೇವರೇ, ನಿನ್ನನ್ನು ಕುರಿತು ನನ್ನ ಸಹೋದರ ಸಹೋದರಿಯರಿಗೆ ತಿಳಿಸುತ್ತೇನೆ;
    ನಿನ್ನ ಜನರೆಲ್ಲರ ಮುಂದೆ ನಿನ್ನ ಸ್ತೋತ್ರಗೀತೆಗಳನ್ನು ಹಾಡುತ್ತೇನೆ.”(H)

13 ಆತನು ಮತ್ತೆ ಹೇಳುತ್ತಾನೆ:

“ನಾನು ದೇವರಲ್ಲಿ ಭರವಸೆ ಇಡುತ್ತೇನೆ.”(I)

ಆತನು ಹೇಳುತ್ತಾನೆ:

“ನಾನಿಲ್ಲಿದ್ದೇನೆ. ದೇವರು ನನಗೆ ದಯಪಾಲಿಸಿರುವ ಮಕ್ಕಳು ನನ್ನೊಂದಿಗಿದ್ದಾರೆ.”(J)

14 ಆ ಮಕ್ಕಳು ಭೌತಿಕ ಶರೀರ ಹೊಂದಿದ್ದರು. ಆದ್ದರಿಂದ ಯೇಸು ತಾನೇ ಅವರಂತಾದನು. ಆತನು ತನ್ನ ಸಾವಿನ ಮೂಲಕ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಗೊಳಿಸಿ, 15 ಅವರನ್ನು ಬಿಡುಗಡೆಗೊಳಿಸಬೇಕೆಂದು, ಅವರಂತೆಯೇ ಆಗಿ, ಮರಣ ಹೊಂದಿದನು. ಅವರು ಮರಣಭಯದಿಂದ, ಜೀವಮಾನವೆಲ್ಲ ಗುಲಾಮರಂತೆ ಜೀವಿಸುತ್ತಿದ್ದರು. 16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ. 17 ಈ ಕಾರಣದಿಂದಲೇ ಆತನು ಎಲ್ಲಾ ವಿಧದಲ್ಲಿಯೂ ತನ್ನ ಸಹೋದರ ಸಹೋದರಿಯರಿಗೆ ಸಮಾನನಾಗಬೇಕಾಯಿತು. ದೇವರ ಸೇವೆಯಲ್ಲಿ ಆತನು ಜನರಿಗೆ ಕರುಣೆಯುಳ್ಳವನೂ ನಂಬಿಗಸ್ತನೂ ಆದ ಪ್ರಧಾನ ಯಾಜಕನಾದನು. ಹೀಗೆ ಆತನು ಜನರ ಪಾಪಗಳಿಗೆ ಕ್ಷಮೆಯನ್ನು ತರಲು ಸಾಧ್ಯವಾಯಿತು. 18 ತಾನೇ ಶೋಧಿಸಲ್ಪಟ್ಟು ಸಂಕಟಕ್ಕೆ ಒಳಗಾದುದರಿಂದ, ಶೋಧಿಸಲ್ಪಡುವ ಜನರಿಗೆ ಸಹಾಯ ಮಾಡಲು ಈಗ ಆತನು ಸಮರ್ಥನಾಗಿದ್ದಾನೆ.

ಯೇಸು ಮೋಶೆಗಿಂತ ಶ್ರೇಷ್ಠನು

ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.

ನಾವು ದೇವರನ್ನು ಅನುಸರಿಸಲೇಬೇಕು

ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
    ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
    ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
    ‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
    ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
    ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(K)

12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(L)

16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.

ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:

“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
    ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(M)

ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(N) ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(O) ವೆಂದೂ ಹೇಳಿದ್ದಾನೆ.

ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(P)

ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.

12 ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. 13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.

ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ

14 ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. 15 ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. 16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.

ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.

ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:

“ನೀನು ನನ್ನ ಮಗನು.
    ಈ ದಿನ ನಾನು ನಿನ್ನ ತಂದೆಯಾದೆನು.”(Q)

ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:

“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
    ಪ್ರಧಾನಯಾಜಕನಾಗಿರುವೆ.”(R)

ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.

ಶೋಧನೆಗೆ ಸೋತುಹೋಗದಿರಲು ಎಚ್ಚರಿಕೆ

11 ಈ ವಿಷಯದಲ್ಲಿ ನಾವು ನಿಮಗೆ ಹೇಳಬೇಕಾದ ಅನೇಕ ಸಂಗತಿಗಳಿವೆ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದಿರುವುದರಿಂದ ವಿವರಿಸುವುದು ಕಷ್ಟಕರವಾಗಿದೆ. 12 ನಿಮಗೆ ಕಾಲವು ಬೇಕಾದಷ್ಟಿದ್ದುದರಿಂದ ಈಗಾಗಲೇ ನೀವು ಉಪದೇಶಕರಾಗಿರಬೇಕಿತ್ತು. (ಆದರೆ ನೀವಿನ್ನೂ ಆಗಿಲ್ಲ.) ಹೀಗಿರಲು ದೇವರ ಉಪದೇಶಗಳನ್ನು ಮೊದಲ ಪಾಠದಿಂದ ಮತ್ತೆ ಉಪದೇಶಿಸಲು ನಿಮಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿದೆ. ಹಾಲಿನಂತಿರುವ ಉಪದೇಶವನ್ನು ನಾವು ನಿಮಗೆ ಮಾಡಬೇಕಾಗಿದೆ. ನೀವು ಗಟ್ಟಿ ಆಹಾರವನ್ನು ತಿನ್ನುವವರಾಗಿಲ್ಲ. 13 ನೀವು ಹಾಲು ಕುಡಿಯುವ ಮಕ್ಕಳಂತಿರುವಿರಿ. ನಿಮಗೆ ಯೋಗ್ಯ ಬೋಧನೆಗಳ ಬಗ್ಗೆ ಏನೂ ತಿಳಿದಿಲ್ಲ. 14 ಆದರೆ ಗಟ್ಟಿಯಾದ ಆಹಾರವು ಜ್ಞಾನದಲ್ಲಿ ಬೆಳವಣಿಗೆ ಹೊಂದಿರುವವರಿಗೇ ಹೊರತು ಮಕ್ಕಳಿಗಲ್ಲ. ಇವರು ಅನುಭವದಿಂದ ತಮ್ಮ ಮನಸ್ಸುಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಒಳಿತು ಕೆಡುಕುಗಳಿಗಿರುವ ಭೇದವನ್ನು ತಿಳಿದುಕೊಳ್ಳಬಲ್ಲವರಾಗಿದ್ದಾರೆ.

ಆದ್ದರಿಂದ ಕ್ರಿಸ್ತನನ್ನು ಕುರಿತ ಆರಂಭದ ಪಾಠಗಳನ್ನು ನಾವು ಮುಗಿಸಿದವರಾಗಿರಬೇಕು. ನಾವು ಆರಂಭಿಸಿದ ಪಾಠಗಳಿಗೆ ಮತ್ತೆ ಹೋಗಬಾರದು. ನಮ್ಮ ಮೊದಲಿನ ದುಷ್ಕೃತ್ಯಗಳನ್ನು ತೊರೆದುಬಿಟ್ಟು ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನಲ್ಲಿ ನಮ್ಮ ಜೀವನವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ. ದೇವರ ಚಿತ್ತವಾದರೆ ಹೀಗೆ ಮುಂದಕ್ಕೆ ಸಾಗುತ್ತಾ ಹೋಗುವೆವು.

4-6 ಕ್ರಿಸ್ತನ ಮಾರ್ಗವನ್ನು ಜನರು ಬಿಟ್ಟುಹೋದ ನಂತರ, ನೀವು ಅವರ ಜೀವನವನ್ನು ಮತ್ತೆ ಪರಿವರ್ತಿಸಲು ಸಾಧ್ಯವೇ? ನಾನು ಸತ್ಯವನ್ನು ತಿಳಿದುಕೊಂಡ ಜನರನ್ನು ಕುರಿತು ಮಾತಾಡುತ್ತಿದ್ದೇನೆ. ಅವರು ದೇವರ ವರಗಳನ್ನು ಪಡೆದವರೂ ಪವಿತ್ರಾತ್ಮನಲ್ಲಿ ಪಾಲುಗಾರರೂ ಆಗಿದ್ದಾರೆ. ದೇವರು ಹೇಳಿದ ಸಂಗತಿಗಳನ್ನು ಅವರು ಕೇಳಿದವರೂ ದೇವರ ಹೊಸಲೋಕದ ಮಹಾಶಕ್ತಿಗಳನ್ನು ನೋಡಿದವರೂ ಆಗಿದ್ದಾರೆ. ಅವುಗಳೆಲ್ಲ ಉತ್ತಮವಾದವುಗಳೆಂಬುದನ್ನು ಅವರು ಕಲಿತುಕೊಂಡಿದ್ದಾರೆ. ಆದರೂ ಅವರು ಕ್ರಿಸ್ತನ ಮಾರ್ಗವನ್ನು ಬಿಟ್ಟುಹೋದರು. ಅವರ ಜೀವಿತವನ್ನು ಮತ್ತೆ ಪರಿವರ್ತಿಸಿ ಕ್ರಿಸ್ತನ ಬಳಿಗೆ ಬರಮಾಡಲು ಸಾಧ್ಯವಿಲ್ಲ. ಏಕೆಂದರೆ ಕ್ರಿಸ್ತನನ್ನು ಬಿಟ್ಟುಹೋದ ಅವರು ಕ್ರಿಸ್ತನನ್ನು ಮತ್ತೆ ಶಿಲುಬೆಗೇರಿಸಿ ಮೊಳೆಗಳನ್ನು ಹೊಡೆಯುವವರೂ ಜನರೆಲ್ಲರ ಮುಂದೆ ಕ್ರಿಸ್ತನಿಗೆ ಅವಮಾನ ಮಾಡುವವರೂ ಆಗಿದ್ದಾರೆ.

ಆ ಜನರು ತನ್ನ ಮೇಲೆ ಪದೇಪದೇ ಸುರಿಯುವ ಮಳೆಯನ್ನು ಹೀರಿಕೊಳ್ಳುವ ಭೂಮಿಯಂತಿದ್ದಾರೆ. ಅದು ಜನರಿಗೆ ಆಹಾರವನ್ನು ಕೊಡಲೆಂದು ರೈತನು ಅದರಲ್ಲಿ ಸಸಿಯನ್ನು ನೆಟ್ಟು ಬೆಳೆಸುತ್ತಾನೆ. ಅದು ಜನರಿಗೆ ಉಪಯುಕ್ತವಾದ ಬೆಳೆಗಳನ್ನು ಬೆಳೆಸಿದರೆ, ಅದಕ್ಕೆ ದೇವರಿಂದ ಆಶೀರ್ವಾದ ದೊರೆಯುತ್ತದೆ. ಆದರೆ ಅದು ಮುಳ್ಳುಗಿಡಗಳನ್ನೂ ಕಳೆಯನ್ನೂ ಬೆಳೆಸಿದರೆ ನಿಷ್ಪ್ರಯೋಜಕವಾಗಿ ದೇವರ ಶಾಪಕ್ಕೆ ಗುರಿಯಾಗುತ್ತದೆ. ಆ ಭೂಮಿಯನ್ನು ಬೆಂಕಿಯಿಂದ ಸುಟ್ಟು ನಾಶಮಾಡಲಾಗುವುದು.

ಪ್ರಿಯ ಸ್ನೇಹಿತರೇ, ನಾವು ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದರೂ ನಿಮ್ಮಿಂದ ಇದಕ್ಕಿಂತಲೂ ಉತ್ತಮವಾದ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ. ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಮಾಡುತ್ತೀರೆಂದು ನಾವು ದೃಢವಾಗಿ ನಂಬಿದ್ದೇವೆ. 10 ದೇವರು ನ್ಯಾಯವಂತನಾಗಿದ್ದಾನೆ. ನೀವು ಮಾಡಿದ ಉಪಕಾರವನ್ನು ಮತ್ತು ದೇವಜನರಿಗೆ ಸಹಾಯ ಮಾಡಿದ್ದರ ಮೂಲಕ ಮತ್ತು ಸಹಾಯ ಮಾಡುತ್ತಲೇ ಇರುವುದರ ಮೂಲಕ ನೀವು ಆತನಿಗೆ ತೋರಿದ ಪ್ರೀತಿಯನ್ನು ಆತನು ಮರೆತುಬಿಡುವುದಿಲ್ಲ. 11 ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಇಡೀ ಜೀವನದಲ್ಲಿ ಇದೇ ಆಸಕ್ತಿಯುಳ್ಳವರಾಗಿ ನಿಮ್ಮ ನಿರೀಕ್ಷೆಯನ್ನು ದೃಢಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. 12 ನೀವು ಸೋಮಾರಿಗಳಾಗಿರಬೇಕೆಂಬುದು ನಮ್ಮ ಅಪೇಕ್ಷೆಯಲ್ಲ. ದೇವರ ವಾಗ್ದಾನದ ಫಲಗಳನ್ನು ಪಡೆಯುವ ಜನರಂತೆ ನೀವಿರಬೇಕೆಂಬುದು ನಮ್ಮ ಅಪೇಕ್ಷೆ. ಆ ಜನರಿಗೆ ನಂಬಿಕೆ ಮತ್ತು ತಾಳ್ಮೆಯಿದ್ದುದರಿಂದ ಅವರು ದೇವರ ವಾಗ್ದಾನದಂತೆ ಫಲವನ್ನು ಪಡೆದರು.

13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು. 14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು”(S) ಎಂದು ಹೇಳಿದನು. 15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.

16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ. 17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.

ಇದರಿಂದಾಗಿ, ದೇವರ ರಕ್ಷಣೆಗಾಗಿ ಓಡಿ ಬಂದಿರುವ ನಾವು ನಮ್ಮ ನಿರೀಕ್ಷೆಯಲ್ಲಿ ಸ್ಥಿರವಾಗಿರಲು ಬಲವಾದ ಪ್ರೋತ್ಸಾಹ ಉಂಟಾಯಿತು. 19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ. 20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International