Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಗಲಾತ್ಯದವರಿಗೆ 1-3

ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನನ್ನನ್ನು ಅಪೊಸ್ತಲನನ್ನಾಗಿ ಆರಿಸಿದವರು ಮನುಷ್ಯರಲ್ಲ. ನಾನು ಮನುಷ್ಯರಿಂದ ಕಳುಹಿಸಲ್ಪಟ್ಟವನಲ್ಲ. ನನ್ನನ್ನು ಅಪೊಸ್ತಲನನ್ನಾಗಿ ಮಾಡಿದವರು ಯಾರೆಂದರೆ, ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು. ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ದೇವರೇ. ನಾನು ಮತ್ತು ನನ್ನೊಂದಿಗಿರುವ ಎಲ್ಲಾ ಸಹೋದರರು ಈ ಪತ್ರವನ್ನು ಗಲಾತ್ಯದಲ್ಲಿರುವ ಸಭೆಗಳವರಿಗೆ ಬರೆದಿದ್ದೇವೆ.

ನಮ್ಮ ತಂದೆಯಾದ ದೇವರೂ ಪ್ರಭುವಾದ ಯೇಸು ಕ್ರಿಸ್ತನೂ ನಿಮಗೆ ಕೃಪೆ ತೋರಲಿ ಮತ್ತು ಶಾಂತಿಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನಾವು ವಾಸಿಸುತ್ತಿರುವ ಈ ಕೆಟ್ಟ ಲೋಕದೊಳಗಿಂದ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಯೇಸು ನಮ್ಮ ಪಾಪಗಳಿಗಾಗಿ ತನ್ನನ್ನೇ ಕೊಟ್ಟುಬಿಟ್ಟನು. ಇದು ತಂದೆಯಾದ ದೇವರ ಚಿತ್ತವಾಗಿತ್ತು. ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ. ಆಮೆನ್.

ಸತ್ಯಸುವಾರ್ತೆ ಒಂದೇ ಒಂದು

ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ಬೇರೊಂದು ಸತ್ಯಸುವಾರ್ತೆಯು ಇಲ್ಲವೇ ಇಲ್ಲ. ಆದರೆ ಕೆಲವು ಜನರು ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾರೆ. ಅವರು ಕ್ರಿಸ್ತನ ಸುವಾರ್ತೆಯನ್ನು ಬದಲಾಯಿಸಬೇಕೆಂದಿದ್ದಾರೆ. ನಾವು ನಿಮಗೆ ಸತ್ಯಸುವಾರ್ತೆಯನ್ನು ತಿಳಿಸಿದೆವು. ಆದ್ದರಿಂದ ನಾವೇ ಆಗಲಿ, ಪರಲೋಕದ ದೇವದೂತರೇ ಆಗಲಿ ಮತ್ತೊಂದು ಸುವಾರ್ತೆಯನ್ನು ತಿಳಿಸಿದರೆ ಶಾಪಗ್ರಸ್ತರಾಗಲಿ. ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ.

10 ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ.

ಪೌಲನ ಅಧಿಕಾರ ದೇವರಿಂದ ಬಂದದ್ದು

11 ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ. 12 ನನಗೆ ಸುವಾರ್ತೆ ದೊರೆತದ್ದು ಮನುಷ್ಯರಿಂದಲ್ಲ. ಯಾವನೂ ನನಗೆ ಸುವಾರ್ತೆಯನ್ನು ಉಪದೇಶಿಸಲಿಲ್ಲ. ನಾನು ಜನರಿಗೆ ಉಪದೇಶಿಸಬೇಕಾದ ಸುವಾರ್ತೆಯನ್ನು ಯೇಸು ಕ್ರಿಸ್ತನೇ ನನಗೆ ಪ್ರಕಟಿಸಿದನು.

13 ನನ್ನ ಹಿಂದಿನ ಜೀವಿತದ ಬಗ್ಗೆ ನೀವು ಕೇಳಿದ್ದೀರಿ. ನಾನು ಯೆಹೂದ್ಯಧರ್ಮಕ್ಕೆ ಸೇರಿದವನಾಗಿದ್ದೆನು. ದೇವರ ಸಭೆಯನ್ನು ಬಹಳವಾಗಿ ಹಿಂಸಿಸಿದೆನು. ಕ್ರೈಸ್ತ ಸಭೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೆನು. 14 ಯೆಹೂದ್ಯಧರ್ಮದ ನಾಯಕನಾಗಲು ನನ್ನ ಸಮವಯಸ್ಕರರಿಗಿಂತ ಎಷ್ಟೋ ಕಾರ್ಯಗಳನ್ನು ಮಾಡಿದೆನು. ನಮ್ಮ ಪೂರ್ವಿಕರ ಸಂಪ್ರದಾಯಗಳನ್ನು ಬೇರೆಲ್ಲರಿಗಿಂತಲೂ ಅತ್ಯಧಿಕ ನಿಷ್ಠೆಯಿಂದ ಅನುಸರಿಸಿದೆನು.

15 ಆದರೆ ನಾನು ಹುಟ್ಟುವುದಕ್ಕಿಂತ ಮೊದಲೇ ನನ್ನ ವಿಷಯದಲ್ಲಿ ದೇವರಿಗೆ ವಿಶೇಷವಾದ ಯೋಜನೆಯಿತ್ತು. ಆದ್ದರಿಂದ ದೇವರು ತನ್ನ ಕೃಪೆಯಿಂದ ನನ್ನನ್ನು ಕರೆದನು. 16 ಆತನ ಮಗನ ವಿಷಯವಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂಬುದು ದೇವರ ಚಿತ್ತವಾಗಿತ್ತು. ಆದ್ದರಿಂದ ದೇವರು ತನ್ನ ಮಗನನ್ನು ನನಗೆ ತೋರಿಸಿದನು. ಆತನು ನನ್ನನ್ನು ಕರೆದಾಗ ನಾನು ಯಾರಿಂದಲೂ ಸಲಹೆಯನ್ನಾಗಲಿ ಸಹಾಯವನ್ನಾಗಲಿ ತೆಗೆದುಕೊಳ್ಳಲಿಲ್ಲ. 17 ಅಪೊಸ್ತಲರನ್ನು ನೋಡುವುದಕ್ಕಾಗಿ ಜೆರುಸಲೇಮಿಗೂ ಹೋಗಲಿಲ್ಲ. ಅವರು ನನಗಿಂತ ಮೊದಲೇ ಅಪೊಸ್ತಲರಾಗಿದ್ದರು. ಆದರೆ, ನಾನು ತಡಮಾಡದೆ ಅರೇಬಿಯಾಕ್ಕೆ ಹೋದೆನು. ಆ ಬಳಿಕ ದಮಸ್ಕ ಪಟ್ಟಣಕ್ಕೆ ಹಿಂತಿರುಗಿದೆನು.

18 ಮೂರು ವರ್ಷಗಳ ನಂತರ ಪೇತ್ರನನ್ನು ಭೇಟಿಯಾಗಲು ಜೆರುಸಲೇಮಿಗೆ ಹೋದೆನು. ಅವನೊಂದಿಗೆ ಹದಿನೈದು ದಿನಗಳ ಕಾಲ ಇದ್ದೆನು. 19 ಪ್ರಭುವಿನ (ಯೇಸು) ಸಹೋದರನಾದ ಯಾಕೋಬನನ್ನು ಹೊರತು ಬೇರೆ ಯಾವ ಅಪೊಸ್ತಲರನ್ನೂ ನಾನು ಭೇಟಿಯಾಗಲಿಲ್ಲ. 20 ನಾನು ಬರೆಯುತ್ತಿರುವ ಈ ಸಂಗತಿಗಳು ಸುಳ್ಳಲ್ಲವೆಂದು ದೇವರಿಗೆ ಗೊತ್ತಿದೆ. 21 ತರುವಾಯ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು.

22 ಕ್ರಿಸ್ತನಲ್ಲಿರುವ ಜುದೇಯದ ಸಭೆಗಳವರು ನನ್ನನ್ನು ಹಿಂದೆಂದೂ ಭೇಟಿಯಾಗಿರಲಿಲ್ಲ. 23 “ಈ ಮನುಷ್ಯನು ನಮ್ಮನ್ನು ಹಿಂಸಿಸುತ್ತಿದ್ದನು. ಆದರೆ ಈಗ ಇವನು ತಾನು ಮೊದಲೊಮ್ಮೆ ನಾಶಮಾಡಲು ಪ್ರಯತ್ನಿಸಿದ ನಂಬಿಕೆಯ ಬಗ್ಗೆ ಜನರಿಗೆ ಹೇಳುತ್ತಿದ್ದಾನೆ” ಎಂಬುದನ್ನು ಮಾತ್ರ ಅವರು ಕೇಳಿದ್ದರು. 24 ಅವರು ನನ್ನ ನಿಮಿತ್ತ ದೇವರನ್ನು ಕೊಂಡಾಡಿದರು.

ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು

ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.

3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.

ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.

ಪೇತ್ರನ ತಪ್ಪನ್ನು ಪೌಲನು ತೋರಿಸಿದನು

11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.

15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.

17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.

ನಂಬಿಕೆಯ ಮೂಲಕ ದೇವರಾಶೀರ್ವಾದ

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದ್ದರ ಬಗ್ಗೆ ಗಲಾತ್ಯದಲ್ಲಿರುವ ನಿಮಗೆ ಬಹು ಸ್ಪಷ್ಟವಾಗಿ ತಿಳಿಸಲಾಯಿತು. ಆದರೆ ನೀವು ಬಹು ಬುದ್ಧಿಹೀನರಾಗಿದ್ದೀರಿ. ನಿಮ್ಮನ್ನು ಮೋಸಗೊಳಿಸಲು ಬೇರೊಬ್ಬನಿಗೆ ಅವಕಾಶ ಮಾಡಿಕೊಟ್ಟಿರಿ. ಈ ವಿಷಯವೊಂದನ್ನು ನನಗೆ ತಿಳಿಸಿರಿ: ನೀವು ಪವಿತ್ರಾತ್ಮನನ್ನು ಹೊಂದಿಕೊಂಡದ್ದು ಹೇಗೆ? ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದ ಹೊಂದಿಕೊಂಡಿರೊ? ಇಲ್ಲ! ಸುವಾರ್ತೆಯನ್ನು ಕೇಳಿ ಅದರಲ್ಲಿ ನಂಬಿಕೆಯಿಟ್ಟದ್ದರಿಂದಲೇ ಪವಿತ್ರಾತ್ಮನನ್ನು ಹೊಂದಿಕೊಂಡಿರಿ. ಕ್ರಿಸ್ತನಲ್ಲಿಯ ನಿಮ್ಮ ಜೀವಿತವನ್ನು ಪವಿತ್ರಾತ್ಮನೊಂದಿಗೆ ಆರಂಭಿಸಿದಿರಿ. ಈಗ ಅದನ್ನು ನಿಮ್ಮ ಸ್ವಂತ ಶಕ್ತಿಯೊಂದಿಗೆ ಮುಂದುವರಿಸಲು ಪ್ರಯತ್ನಿಸುತ್ತೀರೋ? ಅದು ಬುದ್ಧಿಹೀನತೆ! ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ? ದೇವರು ಪವಿತ್ರಾತ್ಮನನ್ನು ಕೊಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ದೇವರು ಮಹತ್ಕಾರ್ಯಗಳನ್ನು ಮಾಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ಇಲ್ಲ! ಸುವಾರ್ತೆಯನ್ನು ಕೇಳಿ ಅದನ್ನು ನಂಬಿಕೊಂಡದ್ದರಿಂದ ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ ಮತ್ತು ಮಹತ್ಕಾರ್ಯಗಳನ್ನು ಮಾಡುತ್ತಾನೆ.

ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.

10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(C) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(D) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.

ಧರ್ಮಶಾಸ್ತ್ರ ಮತ್ತು ವಾಗ್ದಾನ

15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[b] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.

18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.

19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.

ಮೋಶೆಯ ಧರ್ಮಶಾಸ್ತ್ರದ ಉದ್ದೇಶ

21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International