Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಕೊರಿಂಥದವರಿಗೆ 1-4

ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನಾನು ದೇವರ ಚಿತ್ತಾನುಸಾರ ಅಪೊಸ್ತಲನಾಗಿದ್ದೇನೆ. ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಇಡೀ ಅಖಾಯ ಸೀಮೆಯಲ್ಲಿರುವ ದೇವಜನರೆಲ್ಲರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ತಿಮೊಥೆಯನೊಡನೆ ಸೇರಿ ಬರೆಯುತ್ತಿದ್ದೇನೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ

ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ದೇವರು ಕನಿಕರದಿಂದ ತುಂಬಿರುವ ತಂದೆಯಾಗಿದ್ದಾನೆ. ಆತನು ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆ. ನಮಗೆ ಸಂಕಷ್ಟವಿರುವಾಗಲೆಲ್ಲಾ ಆತನು ನಮ್ಮನ್ನು ಸಂತೈಸುತ್ತಾನೆ; ಸಂಕಷ್ಟಗಳಲ್ಲಿರುವ ಇತರ ಜನರನ್ನು ಸಂತೈಸಲು ಇದರ ಮೂಲಕ ನಾವು ಸಹ ಶಕ್ತರಾಗುತ್ತೇವೆ. ದೇವರು ನಮ್ಮನ್ನು ಸಂತೈಸುವಂತೆಯೇ ನಾವು ಸಹ ಅವರನ್ನು ಸಂತೈಸಬಲ್ಲವರಾಗುತ್ತೇವೆ. ನಾವು ಕ್ರಿಸ್ತನ ಅನೇಕ ಬಾಧೆಗಳಲ್ಲಿ ಪಾಲುಗಾರರಾಗುತ್ತೇವೆ. ಅದೇ ರೀತಿಯಲ್ಲಿ, ಕ್ರಿಸ್ತನ ಮೂಲಕ ಹೇರಳವಾದ ಆದರಣೆಯು ನಮಗೆ ಬರುತ್ತದೆ. ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.

ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. ನಿಜವಾಗಿಯೂ ನಾವು ಸಾಯುತ್ತೇವೆಂದು ನಮ್ಮ ಹೃದಯಗಳಲ್ಲಿ ನಂಬಿಕೊಂಡೆವು. ನಾವು ನಮ್ಮಲ್ಲಿ ಭರವಸೆ ಇಡದಂತೆಯೂ ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡಬೇಕೆಂತಲೂ ಇದಾಯಿತು. 10 ಮರಣದ ಈ ಮಹಾ ಅಪಾಯಗಳಿಂದ ದೇವರು ನಮ್ಮನ್ನು ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಆತನಲ್ಲಿ ಭರವಸೆ ಇಟ್ಟಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. 11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.

ಪೌಲನ ಯೋಜನೆಗಳಲ್ಲಿ ಬದಲಾವಣೆ

12 ನಾವು ಈ ವಿಷಯದಲ್ಲಿ ಹೆಮ್ಮೆಪಡುತ್ತೇವೆ ಮತ್ತು ಇದು ಸತ್ಯವೆಂದು ನಾನು ಹೃದಯಪೂರ್ವಕವಾಗಿ ಹೇಳಬಲ್ಲೆನು. ಅದೇನೆಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಡಲ್ಪಟ್ಟ ಯಥಾರ್ಥವಾದ ಮತ್ತು ಪರಿಶುದ್ಧವಾದ ಹೃದಯದಿಂದ ಮಾಡಿದೆವು. ನಾವು ನಿಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳಲ್ಲಂತೂ ಇದು ಮತ್ತಷ್ಟು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಪೆಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ. 13-14 ನೀವು ಓದಿ ಅರ್ಥಮಾಡಿಕೊಳ್ಳಬಲ್ಲ ಸಂಗತಿಗಳನ್ನು ಮಾತ್ರ ನಾನು ನಿಮಗೆ ಬರೆಯುತ್ತೇನೆ. ನಮ್ಮ ವಿಷಯವಾದ ಕೆಲವು ಸಂಗತಿಗಳನ್ನು ನೀವು ಈಗಾಗಲೇ ಸ್ಪಲ್ಪ ಅರ್ಥಮಾಡಿಕೊಂಡಂತೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೀರೆಂಬ ನಿರೀಕ್ಷೆ ನನಗಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಮ್ಮೆಪಡುವಂತೆ ನೀವೂ ನಮ್ಮ ವಿಷಯದಲ್ಲಿ ಹೆಮ್ಮೆಪಡಲಾಗುವಂತೆ ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ.

15 ನಾನು ಈ ಎಲ್ಲಾ ವಿಷಯಗಳಲ್ಲಿ ಬಹು ಭರವಸೆ ಉಳ್ಳವನಾಗಿದ್ದೆನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಎರಡು ಸಲ ಆಶೀರ್ವಾದವಾಗಬಹುದಿತ್ತು. 16 ನಾನು ಮಕೆದೋನಿಯಕ್ಕೆ ಹೋಗುವಾಗಲೂ ಬಳಿಕ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಜುದೇಯಕ್ಕೆ ಪ್ರವಾಸ ಕೈಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ. 17 ನಾನು ಆ ಯೋಜನೆಗಳನ್ನು ಮಾಡಿದಾಗ ನಿಮ್ಮ ಬಳಿಗೆ ಬರುವ ಉದ್ದೇಶ ನಿಜವಾಗಿಯೂ ನನಗಿರಲಿಲ್ಲವೆಂದು ಯೋಚಿಸುತ್ತೀರಾ? ನಾನು ಪ್ರಾಪಂಚಿಕರಂತೆ ಯೋಜನೆಗಳನ್ನು ಮಾಡಿದೆನೋ? ಅವರಾದರೋ ಯೋಜನೆಗಳನ್ನು ಮಾಡುವಾಗ “ಹೌದು, ಹೌದು” ಎಂತಲೂ ಅದೇ ಸಮಯದಲ್ಲಿ “ಇಲ್ಲ, ಇಲ್ಲ” ಎಂತಲೂ ಹೇಳುತ್ತಾರೆ.

18 ನೀವು ದೇವರನ್ನು ನಂಬಬಲ್ಲವರಾಗಿದ್ದರೆ, ನಾವು ನಿಮಗೆ ಏಕಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಲಿಲ್ಲವೆಂದು ನೀವು ನಂಬಬಲ್ಲಿರಿ. 19 ಸೀಲನು, ತಿಮೊಥೆಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೇಸುಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ರೀತಿಯಲ್ಲಿರಲಿಲ್ಲ. ಕ್ರಿಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ. 20 ದೇವರು ಮಾಡಿದ ವಾಗ್ದಾನಗಳಿಗೆಲ್ಲ “ಹೌದು” ಎಂಬ ಉತ್ತರ ಕ್ರಿಸ್ತನೇ ಆಗಿದ್ದಾನೆ. ಆದ್ದರಿಂದಲೇ ನಾವು ದೇವರ ಮಹಿಮೆಗಾಗಿ ಕ್ರಿಸ್ತನ ಮೂಲಕ “ಆಮೆನ್” ಎಂದು ಹೇಳುತ್ತೇವೆ. 21 ನಿಮ್ಮನ್ನು ಮತ್ತು ನಮ್ಮನ್ನು ಕ್ರಿಸ್ತನಲ್ಲಿ ದೃಢಗೊಳಿಸುವಾತನು ದೇವರೇ. ದೇವರು ತನ್ನ ವಿಶೇಷವಾದ ಆಶೀರ್ವಾದವನ್ನು ನಮಗೆ ಕೊಟ್ಟಿದ್ದಾನೆ. 22 ನಾವು ಆತನವರೆಂಬುದನ್ನು ತೋರಿಸುವುದಕ್ಕಾಗಿ ಆತನು ನಮ್ಮ ಮೇಲೆ ಮುದ್ರೆಯನ್ನು ಹಾಕಿದ್ದಾನೆ. ಆತನು ತನ್ನ ಪವಿತ್ರಾತ್ಮನನ್ನು ನಮ್ಮ ಹೃದಯಗಳಲ್ಲಿ ನೆಲೆಗೊಳಿಸಿದ್ದಾನೆ. ಆತನು ನಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಪವಿತ್ರಾತ್ಮನೇ ನಮಗೆ ಆಧಾರವಾಗಿದ್ದಾನೆ.

23 ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿಸುವುದಕ್ಕಾಗಲಿ ನನಗೆ ಇಷ್ಟವಿರಲಿಲ್ಲ. ಆದಕಾರಣ ನಾನು ನಿಮ್ಮ ಬಳಿಗೆ ಹಿಂತಿರುಗಿ ಬರಲಿಲ್ಲ. ಇದು ಸತ್ಯ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಂದು ನಾನು ಹೇಳುತ್ತಿಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿದ್ದೀರಿ. ಆದರೆ ನಾವು ನಿಮ್ಮ ಸಂತೋಷಕ್ಕಾಗಿ ನಿಮ್ಮ ಜೊತೆಕೆಲಸದವರಾಗಿದ್ದೇವೆ.

ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು. ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂತೋಷಗೊಳಿಸುವವರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂತೋಷಪಡಿಸಬಲ್ಲಿರಿ. ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು. ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.

ತಪ್ಪು ಮಾಡಿದ ಆ ವ್ಯಕ್ತಿಯನ್ನು ಕ್ಷಮಿಸಿರಿ

ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.) ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ. ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಅವನನ್ನು ಪ್ರೀತಿಸುತ್ತೀರೆಂಬುದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರೆದೆನು. 10 ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು. 11 ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.

ತ್ರೋವದಲ್ಲಿ ಪೌಲನ ಉದ್ವೇಗ

12 ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು. 13 ಆದರೆ ನನ್ನ ಸಹೋದರನಾದ ತೀತನನ್ನು ನಾನು ಅಲ್ಲಿ ಕಾಣಲಿಲ್ಲವಾದ್ದರಿಂದ ನನಗೆ ಸಮಾಧಾನವಿರಲಿಲ್ಲ. ಆದ್ದರಿಂದ ನಾನು ಅವರನ್ನು ವಂದಿಸಿ ಮಕೆದೋನಿಯಕ್ಕೆ ಹೊರಟೆನು.

14 ದೇವರಿಗೆ ಸ್ತೋತ್ರವಾಗಲಿ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜ್ಞಾನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಮ್ಮನ್ನು ಉಪಯೋಗಿಸುತ್ತಿದ್ದಾನೆ. 15 ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ. 16 ನಾಶನಮಾರ್ಗದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಾಮಾರ್ಗದಲ್ಲಿರುವ ಜನರಿಗೆ ಜೀವವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹೀಗಿರಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ? 17 ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.

ದೇವರ ಸೇವಕರ ಹೊಸ ಒಪ್ಪಂದ

ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ. ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.

ನಾವು ಈ ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ. ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ. ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.

ಹೊಸ ಒಡಂಬಡಿಕೆಯು ಹೆಚ್ಚಿನ ಮಹಿಮೆಯನ್ನು ತರುತ್ತದೆ

ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು. ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ. ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ. 10 ಆ ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು. 11 ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

12 ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ. 13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. 14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ. 15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ. 16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು. 17 ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ. 18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

ಮಡಕೆಗಳಲ್ಲಿರುವ ಆತ್ಮಿಕ ಭಂಡಾರ

ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು. ನಾವು ಬೋಧಿಸುವ ಸುವಾರ್ತೆಯು ಮರೆಯಾಗಿರಬಹುದು. ಆದರೆ ನಾಶನದ ಮಾರ್ಗದಲ್ಲಿರುವವರಿಗೆ ಮಾತ್ರ ಅದು ಮರೆಯಾಗಿದೆ. ಈ ಲೋಕದ ಅಧಿಪತಿಯು (ಸೈತಾನನು) ನಂಬದವರ ಮನಸ್ಸುಗಳನ್ನು ಕುರುಡುಗೊಳಿಸಿದ್ದಾನೆ. ಕ್ರಿಸ್ತನ ಮಹಿಮೆಯ ವಿಷಯವಾದ ಸುವಾರ್ತೆಯ ಬೆಳಕನ್ನು (ಸತ್ಯವನ್ನು) ಅವರು ಕಾಣಲಾರರು. ಕ್ರಿಸ್ತನೊಬ್ಬನೇ ದೇವರಿಗೆ ಪ್ರತಿರೂಪವಾಗಿದ್ದಾನೆ. ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.

ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.

13 “ನಾನು ನಂಬಿದ್ದರಿಂದಲೇ ಮಾತಾಡಿದೆನು.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನಮ್ಮ ನಂಬಿಕೆಯು ಸಹ ಅದೇ ರೀತಿಯಲ್ಲಿದೆ. ನಾವು ನಂಬುವುದರಿಂದಲೇ ಮಾತಾಡುತ್ತೇವೆ. 14 ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರು ನಮ್ಮನ್ನು ಸಹ ಕ್ರಿಸ್ತನೊಂದಿಗೆ ಎಬ್ಬಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ದೇವರು ನಮ್ಮನ್ನು ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನು. 15 ಇವುಗಳೆಲ್ಲ ನಿಮಗೋಸ್ಕರವಾಗಿಯೇ. ಹೀಗೆ ದೇವರ ಕೃಪೆಯು ಹೆಚ್ಚುಹೆಚ್ಚು ಜನರಿಗೆ ಕೊಡಲ್ಪಡುವುದು. ಇದರಿಂದಾಗಿ, ಹೆಚ್ಚುಹೆಚ್ಚು ಜನರು ದೇವರ ಮಹಿಮೆಗಾಗಿ ಕೃತಜ್ಞತಾಸುತ್ತಿ ಸಲ್ಲಿಸುವರು.

ನಂಬಿಕೆಯ ಜೀವನ

16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International