Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಕೊರಿಂಥದವರಿಗೆ 9-11

ಪೌಲನು ಉಪಯೋಗಿಸಿಲ್ಲದ ಹಕ್ಕುಗಳು

ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ. ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.

ಕೆಲವು ಜನರು ನಮ್ಮನ್ನು ವಿಚಾರಣೆ ಮಾಡಲು ಬಯಸುತ್ತಾರೆ. ನಾನು ಅವರಿಗೆ ಕೊಡುವ ಉತ್ತರ ಇಂತಿದೆ: ಊಟಮಾಡುವುದಕ್ಕೆ ಮತ್ತು ಪಾನೀಯಗಳನ್ನು ಕುಡಿಯುವುದಕ್ಕೆ ನಮಗೆ ಹಕ್ಕಿಲ್ಲವೇ? ಕ್ರಿಸ್ತ ವಿಶ್ವಾಸಿಯಾದ ಹೆಂಡತಿಯನ್ನು ನಮ್ಮೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಲು ಉಳಿದ ಅಪೊಸ್ತಲರಂತೆ, ಪ್ರಭುವಿನ ಸಹೋದರರಂತೆ ಮತ್ತು ಕೇಫನಂತೆ ನಮಗೆ ಹಕ್ಕಿಲ್ಲವೇ? ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ? ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.

ಇವುಗಳು ಕೇವಲ ಮಾನುಷ ಉದಾಹರಣೆಗಳಲ್ಲ. ದೇವರ ಧರ್ಮಶಾಸ್ತ್ರವೂ ಈ ಸಂಗತಿಗಳನ್ನು ತಿಳಿಸುತ್ತದೆ. “ಕಣ ತುಳಿಯುವ ಎತ್ತು ಧಾನ್ಯ ತಿನ್ನದಂತೆ ಅದರ ಬಾಯನ್ನು ಕಟ್ಟಬೇಡಿ”(A) ಎಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಹೀಗೆ ಹೇಳಿದಾಗ, ಕಣತುಳಿಯುವ ಎತ್ತಿನ ಬಗ್ಗೆ ಮಾತ್ರ ಆತನು ಆಲೋಚಿಸುತ್ತಿದ್ದನೇ? ಇಲ್ಲ! 10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. 11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ. 12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ. 13 ದೇವಾಲಯದಲ್ಲಿ ಸೇವೆಮಾಡುವ ಜನರು ದೇವಾಲಯದಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಯಜ್ಞವೇದಿಕೆಯ ಬಳಿ ಸೇವೆ ಮಾಡುವವರು ಯಜ್ಞವೇದಿಕೆಯ ಮೇಲೆ ಅರ್ಪಿತವಾದದ್ದರಲ್ಲಿ ಸ್ವಲ್ಪಭಾಗವನ್ನು ಪಡೆದುಕೊಳ್ಳುವರು. 14 ಸುವಾರ್ತೆಯನ್ನು ಬೋಧಿಸುವ ಜನರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸುವಾರ್ತೆಯನ್ನು ಬೋಧಿಸುವವರು ತಮಗೆ ಅಗತ್ಯವಾದುವುಗಳನ್ನು ಈ ಸೇವೆಯ ಮೂಲಕ ಪಡೆದುಕೊಳ್ಳಬೇಕೆಂದು ಪ್ರಭುವು ಆಜ್ಞಾಪಿಸಿದ್ದಾನೆ.

15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು. 16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ! 17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. 18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.

19 ನಾನು ಸ್ವತಂತ್ರನಾಗಿದ್ದೇನೆ; ಯಾರ ಅಧೀನದಲ್ಲಿಯೂ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣಾ ಮಾರ್ಗಕ್ಕೆ ನಡೆಸಲು ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ. 20 ಯೆಹೂದ್ಯರನ್ನು ರಕ್ಷಣಾಮಾರ್ಗಕ್ಕೆ ತರಲು ಅವರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಾಗಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಜನರನ್ನು ರಕ್ಷಣಾಮಾರ್ಗಕ್ಕೆ ತರಬೇಕೆಂದು ಧರ್ಮಶಾಸ್ತ್ರಕ್ಕೆ ಅಧೀನನಾದೆನು. 21 ಧರ್ಮಶಾಸ್ತ್ರವಿಲ್ಲದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಧರ್ಮಶಾಸ್ತ್ರವಿಲ್ಲದ ವ್ಯಕ್ತಿಯಂತಾದೆನು. (ಆದರೆ ನಿಜವಾಗಿಯೂ, ನಾನು ಧರ್ಮಶಾಸ್ತ್ರವಿಲ್ಲದವನಲ್ಲ. ನಾನು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದೇನೆ.) 22 ಬಲಹೀನರಾದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಬಲಹೀನನಂತಾದೆನು. ಯಾವ ರೀತಿಯಲ್ಲಾದರೂ ರಕ್ಷಣಾ ಮಾರ್ಗಕ್ಕೆ ನಡೆಸಬೇಕೆಂದು ಯಾರ್ಯಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದೆನು. 23 ಇವುಗಳನ್ನೆಲ್ಲ ಮಾಡುವುದು ಸುವಾರ್ತೆಗಾಗಿಯೇ. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇವುಗಳನ್ನೆಲ್ಲ ಮಾಡುತ್ತೇನೆ.

24 ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. 25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. 26 ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ. 27 ನಾನು ಗುದ್ದುವುದು ನನ್ನ ಸ್ವಂತ ದೇಹವನ್ನೇ. ಇತರ ಜನರಿಗೆ ಬೋಧಿಸಿದ ಮೇಲೆ ಸ್ವತಃ ನಾನೇ ತಿರಸ್ಕೃತನಾಗದಂತೆ ಅದನ್ನು ನನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ.

ಯೆಹೂದ್ಯರಂತಿರಬೇಡಿ

10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು. ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.

ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು. ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು. 10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.

11 ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ. 12 ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು. 13 ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ.

14 ಆದ್ದರಿಂದ, ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಗಳ ಪೂಜೆಯ ಬಗ್ಗೆ ಯೋಚಿಸಲೂಬೇಡಿ. 15 ನೀವು ಬುದ್ಧಿವಂತರೆಂದು ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾನು ಹೇಳುವುದನ್ನು ಸ್ವತಃ ನೀವೇ ವಿಚಾರಣೆ ಮಾಡಿ. 16 ನಾವು ದ್ರಾಕ್ಷಾರಸದ ಪಾತ್ರೆಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಕುಡಿಯುವಾಗ ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಲಿಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಲಿಲ್ಲವೇ? 17 ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ.

18 ಇಸ್ರೇಲ್ ಜನರ ಬಗ್ಗೆ ಯೋಚಿಸಿ. ಯಜ್ಞವಾಗಿ ಅರ್ಪಿತವಾದುದನ್ನು ತಿನ್ನುವ ಆ ಜನರು ಯಜ್ಞವೇದಿಕೆಯಲ್ಲಿ ಪಾಲುಗಾರರಾಗಿಲ್ಲವೇ? 19 ವಿಗ್ರಹಕ್ಕೆ ಅರ್ಪಿತವಾದ ಆಹಾರಪದಾರ್ಥವು ಮುಖ್ಯವಾದದ್ದೆಂದು ನಾನು ಹೇಳುತ್ತಿಲ್ಲ. ಅಲ್ಲದೆ ವಿಗ್ರಹವು ಮುಖ್ಯವಾದದ್ದು ಎಂಬ ಅಭಿಪ್ರಾಯವೂ ನನಗಿಲ್ಲ. 20 ನಾನು ಹೇಳುತ್ತಿರುವುದೇನೆಂದರೆ, ಜನರು ವಿಗ್ರಹಗಳಿಗೆ ಅರ್ಪಿಸಿದ ಪದಾರ್ಥಗಳು ದೆವ್ವಗಳಿಗೆ ಅರ್ಪಿತವಾದುವುಗಳೇ ಹೊರತು ದೇವರಿಗಲ್ಲ. ನೀವು ದೆವ್ವಗಳೊಂದಿಗೆ ಯಾವ ವಿಷಯದಲ್ಲಿಯೂ ಪಾಲು ಹೊಂದಬಾರದೆಂಬುದು ನನ್ನ ಆಸೆ. 21 ನೀವು ಪ್ರಭುವಿನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾಗದು. ಪ್ರಭುವಿನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟ ಮಾಡಲಾರಿರಿ. 22 ಪ್ರಭುವಿಗೆ ಅಸೂಯೆಯನ್ನು ಉಂಟುಮಾಡಬೇಕೆಂದಿದ್ದೀರೋ? ಆತನಿಗಿಂತಲೂ ನಾವು ಬಲಿಷ್ಠರಾಗಿದ್ದೇವೋ? ಇಲ್ಲ!

ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ

23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.

25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(C)

27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.

31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.

11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.

ಅಧಿಕಾರಕ್ಕೆ ಅಧೀನರಾಗಿರಿ

ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ. ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರುಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ.

ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ. ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ. ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.

ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಏಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ. ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು. ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು. 10 ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.

11 ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ. 12 ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.

13 ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ. 14 ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ. 15 ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ. 16 ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.

ಪ್ರಭುವಿನ ರಾತ್ರಿಭೋಜನ

17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)

20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.

23 ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು, 24 ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು. 25 ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು. 26 ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.

33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International