Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಕೊರಿಂಥದವರಿಗೆ 5-8

ಸಭೆಯಲ್ಲಿ ನೈತಿಕ ಸಮಸ್ಯೆ

ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ. ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು. ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ. ನಮ್ಮ ಪ್ರಭುವಾದ ಯೇಸುವಿನ ಹೆಸರಿನಲ್ಲಿ ಒಟ್ಟಾಗಿ ಸೇರಿಬನ್ನಿ. ನಾನು ಆತ್ಮದಲ್ಲಿ ನಿಮ್ಮೊಂದಿಗಿರುವೆನು. ನಮ್ಮ ಪ್ರಭುವಾದ ಯೇಸುವಿನ ಶಕ್ತಿಯೂ ನಿಮ್ಮೊಂದಿಗೆ ಇರುವುದು. ಆ ಮನುಷ್ಯನ ಪಾಪಸ್ವಭಾವವು ನಾಶವಾಗುವುದಕ್ಕಾಗಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಿರಿ. ಆಗ ಪ್ರಭುವಿನ ದಿನದಂದು ಅವನ ಜೀವಾತ್ಮವು ರಕ್ಷಣೆಹೊಂದಲು ಸಾಧ್ಯವಾಗುವುದು.

ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ. ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ. ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.

ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ. 11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.

12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ”(A) ಎಂದು ಪವಿತ್ರ ಗ್ರಂಥ ಹೇಳುತ್ತದೆ.

ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು

ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!

ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.

9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.

ದೇವರ ಮಹಿಮೆಗಾಗಿ ನಿಮ್ಮ ದೇಹಗಳನ್ನು ಉಪಯೋಗಿಸಿರಿ

12 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ಪ್ರತಿಯೊಂದೂ ಜನರಿಗೆ ಪ್ರಯೋಜಕವಲ್ಲ. “ಪ್ರತಿಯೊಂದನ್ನೂ ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ನಾನು ಯಾವುದನ್ನೂ ನನ್ನ ಒಡೆಯನನ್ನಾಗಿ ಮಾಡಿಕೊಳ್ಳುವುದಿಲ್ಲ. 13 “ಆಹಾರವು ಹೊಟ್ಟೆಗೋಸ್ಕರವಿದೆ, ಹೊಟ್ಟೆಯು ಆಹಾರಕ್ಕೋಸ್ಕರವಿದೆ.” ಹೌದು, ದೇವರು ಅವೆರಡನ್ನು ನಾಶಮಾಡುವನು. ದೇಹವಿರುವುದು ಲೈಂಗಿಕ ಪಾಪಮಾಡುವುದಕ್ಕಾಗಿಯಲ್ಲ. ದೇಹವು ಪ್ರಭುವಿಗೋಸ್ಕರವಿದೆ, ಪ್ರಭುವು ದೇಹಕ್ಕೋಸ್ಕರವಿದ್ದಾನೆ. 14 ದೇವರು ತನ್ನ ಶಕ್ತಿಯಿಂದ ಪ್ರಭು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ದೇವರು ನಮ್ಮನ್ನು ಸಹ ಜೀವಂತವಾಗಿ ಎಬ್ಬಿಸುವನು. 15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಹೀಗಿರಲಾಗಿ, ನಾನು ಕ್ರಿಸ್ತನ ಅಂಗಗಳನ್ನು ತೆಗೆದುಕೊಂಡು ಅವುಗಳನ್ನು ಸೂಳೆಯ ಅಂಗಗಳನ್ನಾಗಿ ಮಾಡಕೂಡದು. 16 “ಇಬ್ಬರೂ ಒಂದೇ ದೇಹವಾಗುತ್ತಾರೆ”(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ಸೂಳೆಯೊಂದಿಗೆ ಲೈಂಗಿಕ ಸಂಬಂಧವಿರುವವನು ಆಕೆಯೊಂದಿಗೆ ಒಂದೇ ದೇಹವಾಗಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು. 17 ಆದರೆ ಪ್ರಭುವಿನೊಂದಿಗೆ ಸಂಬಂಧವನ್ನು ಹೊಂದಿರುವಂಥವನು ಆತ್ಮದಲ್ಲಿ ಪ್ರಭುವಿನೊಂದಿಗೆ ಒಂದಾಗಿರುತ್ತಾನೆ.

18 ಆದ್ದರಿಂದ ಲೈಂಗಿಕ ಪಾಪದಿಂದ ಓಡಿಹೋಗಿರಿ. ಒಬ್ಬನು ಮಾಡುವ ಇತರ ಪಾಪಗಳೆಲ್ಲಾ ಅವನ ದೇಹದ ಹೊರಗಾಗಿವೆ. ಆದರೆ ಲೈಂಗಿಕ ಪಾಪ ಮಾಡುವ ವ್ಯಕ್ತಿ ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 19 ನಿಮ್ಮ ದೇಹವು ಪವಿತ್ರಾತ್ಮನಿಗೆ ಆಲಯವಾಗಿದೆ ಎಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮೊಳಗಿದ್ದಾನೆ. ನೀವು ದೇವರಿಂದ ಆತನನ್ನು ಹೊಂದಿಕೊಂಡಿರಿ. ನೀವು ನಿಮ್ಮ ಸ್ವಂತ ಸ್ವತ್ತುಗಳಲ್ಲ. 20 ನೀವು ದೇವರಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು. ಆದ್ದರಿಂದ ನಿಮ್ಮ ದೇಹಗಳಿಂದ ದೇವರನ್ನು ಘನಪಡಿಸಿರಿ.

ಮದುವೆ ಕುರಿತು ಬೋಧನೆ

ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ. ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು. ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ. ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು. ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ. ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ.

ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು. ಆದರೆ ಅವರು ತಮ್ಮ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಅವರು ಮದುವೆಯಾಗಬೇಕು. ಲೈಂಗಿಕ ಆಸೆಯಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಉತ್ತಮವಾಗಿದೆ.

10 ಮದುವೆಯಾಗಿರುವವರಿಗೆ ನಾನು ಈ ಆಜ್ಞೆಯನ್ನು ಕೊಡುತ್ತೇನೆ. (ಈ ಆಜ್ಞೆಯು ನನ್ನದಲ್ಲ. ಪ್ರಭುವಿನದು.) ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಡಬಾರದು. 11 ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಟ್ಟರೆ ಆಕೆಯು ಮತ್ತೆ ಮದುವೆ ಮಾಡಿಕೊಳ್ಳಕೂಡದು, ಇಲ್ಲವಾದರೆ ಆಕೆ ತನ್ನ ಗಂಡನ ಸಂಗಡ ಮತ್ತೆ ಒಂದಾಗಬೇಕು. ಇದೇ ರೀತಿ, ಗಂಡನು, ತನ್ನ ಹೆಂಡತಿಯನ್ನು ಬಿಟ್ಟುಬಿಡಬಾರದು.

12 ಉಳಿದೆಲ್ಲ ಜನರ ವಿಷಯದಲ್ಲಿ ನಾನು ಹೇಳುವುದೇನೆಂದರೆ (ಈ ಸಂಗತಿಗಳನ್ನು ಹೇಳುತ್ತಿರುವವನು ನಾನೇ ಹೊರತು ಪ್ರಭುವಲ್ಲ.) ಕ್ರಿಸ್ತನಲ್ಲಿ ಸಹೋದರನಾದ ಒಬ್ಬನಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯಿದ್ದರೆ ಮತ್ತು ಆಕೆ ಅವನೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಅವನು ಆಕೆಗೆ ವಿವಾಹವಿಚ್ಛೇದನ ಕೊಡಕೂಡದು. 13 ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು. 14 ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ.

15 ಆದರೆ ಕ್ರಿಸ್ತ ವಿಶ್ವಾಸಿಯಲ್ಲದ ವ್ಯಕ್ತಿಯು ಬಿಟ್ಟು ಹೋಗಲು ನಿರ್ಧರಿಸಿದರೆ, ಆ ವ್ಯಕ್ತಿಯು ಬಿಟ್ಟು ಹೋಗಲಿ. ಈ ರೀತಿ ಸಂಭವಿಸಿದರೆ, ಕ್ರೈಸ್ತ ಸಹೋದರನಾಗಲಿ ಕ್ರೈಸ್ತ ಸಹೋದರಿಯಾಗಲಿ ವಿವಾಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ದೇವರು ನಮ್ಮನ್ನು ಸಮಾಧಾನದ ಜೀವಿತಕ್ಕೆ ಕರೆದನು. 16 ಹೆಂಡತಿಯರೇ, ನೀವು ನಿಮ್ಮ ಗಂಡಂದಿರನ್ನು ರಕ್ಷಿಸಬಹುದು. ಗಂಡಂದಿರೇ, ನೀವು ನಿಮ್ಮ ಹೆಂಡತಿಯರನ್ನು ರಕ್ಷಿಸಬಹುದು. ಆದರೆ ಮುಂದೆ ಏನಾಗುವುದೋ ನಮಗೆ ಗೊತ್ತಿಲ್ಲ.

ದೇವರ ಕರೆಗೆ ತಕ್ಕಂತೆ ಜೀವಿಸಿರಿ

17 ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ. 18 ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು. 19 ಸುನ್ನತಿಯನ್ನು ಮಾಡಿಸಿಕೊಳ್ಳುವುದಾಗಲಿ ಮಾಡಿಸಿಕೊಳ್ಳದಿರುವುದಾಗಲಿ ಮುಖ್ಯವಲ್ಲ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ಮುಖ್ಯವಾದದ್ದು. 20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು. 21 ದೇವರು ನಿನ್ನನ್ನು ಕರೆದಾಗ ನೀನು ಗುಲಾಮನಾಗಿದ್ದರೆ, ಚಿಂತಿಸಬೇಡ. ಆದರೆ ನೀನು ಬಿಡುಗಡೆಯಾಗಲು ಸಾಧ್ಯವಿದ್ದರೆ, ಬಿಡುಗಡೆಯಾಗು. 22 ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ. 23 ನಿಮ್ಮನ್ನು ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ. ಆದ್ದರಿಂದ ನೀವು ಮನುಷ್ಯರ ಗುಲಾಮರಾಗಬೇಡಿ. 24 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನಿಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಹೊಸ ಜೀವನದಲ್ಲಿ ಮುಂದುವರಿಯಬೇಕು.

ಮದುವೆ ಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳು

25 ಮದುವೆಯಾಗಿಲ್ಲದ ಜನರ ಬಗ್ಗೆ ಈಗ ನಾನು ಬರೆಯುತ್ತೇನೆ. ಇದರ ಬಗ್ಗೆ ಪ್ರಭುವಿನಿಂದ ಬಂದ ಯಾವ ಆಜ್ಞೆಯೂ ನನ್ನಲ್ಲಿಲ್ಲ. ಆದರೆ ನಾನು ನನ್ನ ಅಭಿಪ್ರಾಯವನ್ನು ನಿಮಗೆ ಕೊಡುತ್ತೇನೆ. ನಾನು ಪ್ರಭುವಿನಿಂದ ಕರುಣೆಯನ್ನು ಹೊಂದಿಕೊಂಡಿರುವುದರಿಂದ ನಂಬಿಕೆಗೆ ಅರ್ಹನಾಗಿದ್ದೇನೆ. 26 ಇದು ಕಷ್ಟಕಾಲವಾಗಿದೆ. ಆದ್ದರಿಂದ, ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿರುವುದು ಒಳ್ಳೆಯದೆಂಬುದು ನನ್ನ ಆಲೋಚನೆ. 27 ನಿನಗೆ ಹೆಂಡತಿಯಿದ್ದರೆ, ಆಕೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬೇಡ. ನಿನಗೆ ಮದುವೆಯಾಗಿಲ್ಲದಿದ್ದರೆ, ಹೆಂಡತಿಯನ್ನು ಹುಡುಕಲು ಪ್ರಯತ್ನಿಸಬೇಡ. 28 ಆದರೆ ನೀನು ಮದುವೆಯಾಗಲು ನಿರ್ಧರಿಸಿದರೆ, ಅದು ಪಾಪವೇನಲ್ಲ. ಮದುವೆಯಾಗಿಲ್ಲದ ಹುಡುಗಿಯು ಮದುವೆಯಾಗುವುದು ಪಾಪವಲ್ಲ. ಆದರೆ ಮದುವೆಯಾಗುವ ಜನರಿಗೆ ಈ ಲೋಕದಲ್ಲಿ ಕಷ್ಟವಿದೆ. ನೀವು ಈ ಕಷ್ಟದಿಂದ ವಿಮುಕ್ತರಾಗಿರಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.

29 ಸಹೋದರ ಸಹೋದರಿಯರೇ, ನನ್ನ ಅಭಿಪ್ರಾಯ ಇದು: ನಮಗೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ, ಹೆಂಡತಿಯರನ್ನು ಹೊಂದಿರುವ ಜನರು ಹೆಂಡತಿಯರಿಲ್ಲದವರಂತೆ ಪ್ರಭುವಿನ ಸೇವೆಗಾಗಿ ತಮ್ಮ ಸಮಯವನ್ನು ಉಪಯೋಗಿಸಬೇಕು. 30 ದುಃಖದಿಂದಿರುವ ಜನರು ದುಃಖವಿಲ್ಲದವರಂತೆ ಜೀವಿಸಬೇಕು. ಸಂತೋಷದಿಂದ ಇರುವ ಜನರು ಸಂತೋಷವಿಲ್ಲದ ಜನರಂತೆ ಜೀವಿಸಬೇಕು. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಏನೂ ಇಲ್ಲದವರಂತೆ ಜೀವಿಸಬೇಕು. 31 ಈ ಲೋಕದ ವಸ್ತುಗಳನ್ನು ಉಪಯೋಗಿಸುವ ಜನರು ತಮಗೆ ಆ ವಸ್ತುಗಳು ಮುಖ್ಯವಲ್ಲವೆಂಬಂತೆ ಜೀವಿಸಬೇಕು. ಏಕೆಂದರೆ, ಈ ಲೋಕದ ಇಂದಿನ ಸ್ಥಿತಿಯು ಬಹು ಬೇಗನೆ ಗತಿಸಿಹೋಗುವುದು.

32 ನೀವು ಚಿಂತೆ ಇಲ್ಲದೆ ಇರಬೇಕೆಂಬುದೇ ನನ್ನ ಬಯಕೆಯಾಗಿದೆ. ಮದುವೆಯಾಗಿಲ್ಲದ ವ್ಯಕ್ತಿಯು ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಅವನು ಪ್ರಭುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 33 ಆದರೆ ಮದುವೆಯಾಗಿರುವ ವ್ಯಕ್ತಿಯು ಈ ಲೋಕದ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಅವನು ತನ್ನ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 34 ಅವನು ತನ್ನ ಹೆಂಡತಿಯನ್ನು ಮತ್ತು ಪ್ರಭುವನ್ನು ಮೆಚ್ಚಿಸುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಮದುವೆಯಾಗಿಲ್ಲದ ಸ್ತ್ರೀಯಾಗಲಿ ಹುಡುಗಿಯಾಗಲಿ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ದೇಹ ಮತ್ತು ಆತ್ಮಗಳನ್ನು ಸಂಪೂರ್ಣವಾಗಿ ಪ್ರಭುವಿಗೆ ಕೊಡಲು ಬಯಸುತ್ತಾಳೆ. ಆದರೆ ಮದುವೆಯಾದ ಸ್ತ್ರೀಯು ಈ ಲೋಕದ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾಳೆ. 35 ನಿಮಗೆ ಸಹಾಯವಾಗಲೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ಆದರೆ ನೀವು ಸರಿಯಾದ ಮಾರ್ಗದಲ್ಲಿ ಜೀವಿಸಬೇಕೆಂಬುದೇ ನನ್ನ ಬಯಕೆಯಾಗಿದೆ. ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.

36 ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. 37 ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ. 38 ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ.[a]

39 ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು. 40 ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ.

ವಿಗ್ರಹಗಳಿಗೆ ಅರ್ಪಿತವಾದ ಆಹಾರದ ಬಗ್ಗೆ ಚರ್ಚೆ

ವಿಗ್ರಹಗಳಿಗೆ ಯಜ್ಞ ಮಾಡಿದ ಪಶುವಿನ ಮಾಂಸದ ಬಗ್ಗೆ ಈಗ ನಾನು ಬರೆಯುತ್ತೇನೆ. “ನಮಗೆಲ್ಲರಿಗೂ ಜ್ಞಾನವಿದೆ” ಎಂಬುದು ನಮಗೆ ಗೊತ್ತಿದೆ. “ಜ್ಞಾನವು” ನಮ್ಮನ್ನು ಅಹಂಕಾರದಿಂದ ತುಂಬಿಸುತ್ತದೆ. ಆದರೆ ಪ್ರೀತಿಯು ಬೇರೆಯವರಲ್ಲಿ ಭಕ್ತಿವೃದ್ಧಿಯನ್ನು ಮಾಡುತ್ತದೆ. ಇಂಥಿಂಥದ್ದನ್ನು ತಿಳಿದುಕೊಂಡಿದ್ದೇನೆಂದು ಭಾವಿಸುವವನು ತಾನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿಲ್ಲ. ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನು ದೇವರು ತಿಳಿದುಕೊಂಡಿದ್ದಾನೆ.

ಹೀಗಿರಲಾಗಿ, ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ತಿನ್ನುವುದರ ಬಗ್ಗೆ ನಾನು ಹೇಳುವುದೇನೆಂದರೆ: ಜಗತ್ತಿನಲ್ಲಿ ವಿಗ್ರಹವು ಕ್ಷುಲ್ಲಕವಾದದ್ದೆಂದು ನಮಗೆ ಗೊತ್ತಿದೆ. ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ನಮಗೆ ಗೊತ್ತಿದೆ. ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ ದೇವರುಗಳೆಂದು ಕರೆಯಲ್ಪಡುವ ವಸ್ತುಗಳಿದ್ದರೆ ಅವು ನಿಜವಾಗಿಯೂ ನಮಗೆ ಮುಖ್ಯವಲ್ಲ. (ಅನೇಕ ವಸ್ತುಗಳನ್ನು ಜನರು “ದೇವರು”ಗಳೆಂತಲೂ “ಪ್ರಭು”ಗಳೆಂತಲೂ ಕರೆಯುತ್ತಾರೆ.) ನಮಗಾದರೋ ಒಬ್ಬನೇ ಒಬ್ಬ ದೇವರಿದ್ದಾನೆ. ಆತನು ನಮ್ಮ ತಂದೆ. ಸಮಸ್ತವನ್ನು ಆತನೇ ಸೃಷ್ಟಿ ಮಾಡಿದನು. ನಾವು ಆತನಿಗೋಸ್ಕರ ಜೀವಿಸುತ್ತೇವೆ. ಒಬ್ಬನೇ ಒಬ್ಬ ಪ್ರಭುವಿದ್ದಾನೆ. ಆತನೇ ಯೇಸು ಕ್ರಿಸ್ತನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು. ಆತನ ಮೂಲಕವಾಗಿ ನಾವು ಜೀವವನ್ನು ಹೊಂದಿದ್ದೇವೆ.

ಆದರೆ ಎಲ್ಲಾ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಕೆಲವು ಜನರು ಇಂದಿನವರೆಗೂ ವಿಗ್ರಹಗಳನ್ನು ಆರಾಧಿಸುವ ರೂಢಿಯಲ್ಲಿದ್ದಾರೆ. ಹೀಗಿರಲಾಗಿ, ಆ ಜನರು ಮಾಂಸವನ್ನು ತಿನ್ನುವಾಗ ಅದು ವಿಗ್ರಹಕ್ಕೆ ಅರ್ಪಿತವಾದದ್ದೆಂದು ಆಲೋಚಿಸುತ್ತಾರೆ. ಆದರೆ ಈ ಮಾಂಸವನ್ನು ತಿನ್ನುವುದು ತಪ್ಪಲ್ಲ ಎಂಬ ದೃಢನಂಬಿಕೆ ಅವರಲ್ಲಿಲ್ಲ. ಆದ್ದರಿಂದ, ಅವರು ಮಾಂಸವನ್ನು ತಿನ್ನುವಾಗ ತಮ್ಮನ್ನು ದೋಷಿಗಳೆಂದು ಭಾವಿಸಿಕೊಳ್ಳುತ್ತಾರೆ. ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ತರಲಾರದು. ನಾವು ಮಾಂಸವನ್ನು ತಿನ್ನದಿದ್ದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಕಡಿಮೆಯೇನೂ ಆಗುವುದಿಲ್ಲ. ಅದೇ ರೀತಿ, ಮಾಂಸವನ್ನು ತಿಂದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಹೆಚ್ಚೇನೂ ಆಗುವುದಿಲ್ಲ.

ಆದರೆ ನಿಮ್ಮ ಸ್ವತಂತ್ರದ ಬಗ್ಗೆ ಎಚ್ಚರಿಕೆಯಿಂದಿರಿ. ನಂಬಿಕೆಯಲ್ಲಿ ಬಲಹೀನರಾಗಿರುವ ಜನರನ್ನು ನಿಮ್ಮ ಸ್ವಾತಂತ್ರ್ಯವು ಪಾಪಕ್ಕೆ ಬೀಳಿಸುವ ಸಾಧ್ಯತೆಯಿದೆ. 10 ನಿಮಗೆ ತಿಳುವಳಿಕೆ ಇರುವುದರಿಂದ ನೀವು ವಿಗ್ರಹದ ಗುಡಿಯೊಂದರಲ್ಲಿ ಸಂಕೋಚವಿಲ್ಲದೆ ಊಟ ಮಾಡಬಹುದು. ನೀವು ಅಲ್ಲಿ ಊಟ ಮಾಡುವುದನ್ನು ನಂಬಿಕೆಯಲ್ಲಿ ಬಲಹೀನನಾದ ವ್ಯಕ್ತಿಯೊಬ್ಬನು ನೋಡಿ, ವಿಗ್ರಹಗಳಿಗೆ ಅರ್ಪಿತವಾದ ಮಾಂಸವನ್ನು ತಿನ್ನಲು ಪ್ರೋತ್ಸಾಹಗೊಳ್ಳಬಹುದು. ಆದರೆ ಅದನ್ನು ತಿನ್ನಕೊಡದೆಂಬ ಭಾವನೆ ಅವನಲ್ಲಿ ಆಳವಾಗಿ ಬೇರೂರಿದೆ. 11 ಹೀಗಿರಲಾಗಿ, ಈ ಬಲಹೀನ ಸಹೋದರನು ನಿಮ್ಮ ತಿಳುವಳಿಕೆಯ ದೆಸೆಯಿಂದ ಹಾಳಾದನು. ಕ್ರಿಸ್ತನು ಈ ಸಹೋದರನಿಗೋಸ್ಕರವಾಗಿ ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. 12 ಹೀಗೆ ನಿಮ್ಮ ಸಹೋದರ ಸಹೋದರಿಯರಿಗೆ ವಿರೋಧವಾಗಿ ಪಾಪ ಮಾಡುವಾಗ ಮತ್ತು ಅವರು ತಪ್ಪೆಂದು ಭಾವಿಸುವ ಕಾರ್ಯಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಕೇಡನ್ನು ಉಂಟುಮಾಡುವಾಗ ನೀವು ಕ್ರಿಸ್ತನಿಗೆ ವಿರೋಧವಾಗಿಯೂ ಪಾಪ ಮಾಡುವವರಾಗಿದ್ದೀರಿ. 13 ಹೀಗಿರಲಾಗಿ, ನಾನು ತಿನ್ನುವ ಆಹಾರವು ನನ್ನ ಸಹೋದರನನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ. ನನ್ನ ಸಹೋದರನ ಪಾಪಕ್ಕೆ ನಾನು ಕಾರಣನಾಗಬಾರದೆಂದು ನಾನು ಮಾಂಸ ತಿನ್ನುವುದನ್ನು ನಿಲ್ಲಿಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International