Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ರೋಮ್ನಗರದವರಿಗೆ 1-3

ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ.

ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ[a] ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. ದೇವರು ತನ್ನ ಜನರಿಗೆ ಈ ಸುವಾರ್ತೆಯನ್ನು ಕೊಡುವುದಾಗಿ ಬಹುಕಾಲದ ಹಿಂದೆಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ವಾಗ್ದಾನ ಮಾಡಿದ್ದನು. 3-4 ದೇವರ ಮಗನೂ ನಮ್ಮ ಪ್ರಭುವೂ ಆಗಿರುವ ಯೇಸು ಕ್ರಿಸ್ತನ ವಿಷಯವೇ ಆ ಸುವಾರ್ತೆ. ಮನುಷ್ಯತ್ವದ ಮಟ್ಟಿಗೆ ಆತನು ದಾವೀದನ[b] ಕುಟುಂಬದಲ್ಲಿ ಹುಟ್ಟಿದನು. ಆದರೆ ಯೇಸು ಪರಿಶುದ್ಧ ಆತ್ಮನ ಮೂಲಕ ಮಹಾಶಕ್ತಿಯೊಡನೆ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದು ತಾನೇ ದೇವರ ಮಗನೆಂಬುದನ್ನು ತೋರಿಸಿಕೊಟ್ಟನು.

ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. ರೋಮಿನಲ್ಲಿರುವ ನೀವು ಸಹ ಯೇಸು ಕ್ರಿಸ್ತನವರಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೀರಿ.

ರೋಮಿನಲ್ಲಿರುವವರೂ ದೇವರ ಪವಿತ್ರ ಜನರಾಗಿರುವುದಕ್ಕಾಗಿ ದೇವರಿಂದಲೇ ಕರೆಯಲ್ಪಟ್ಟವರೂ ಆಗಿರುವ ನಿಮ್ಮೆಲ್ಲರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರಿಗೆ ಪ್ರಿಯರಾದ ಜನರಾಗಿದ್ದೀರಿ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಕೃತಜ್ಞತಾ ಪ್ರಾರ್ಥನೆ

ಮೊದಲನೆಯದಾಗಿ, ನಾನು ನಿಮ್ಮೆಲ್ಲರ ವಿಷಯದಲ್ಲಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ನಿಮ್ಮ ನಂಬಿಕೆಯು ಲೋಕದಲೆಲ್ಲಾ ಪ್ರಖ್ಯಾತವಾಗಿದೆ. 9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. 11 ನಾನು ನಿಮ್ಮನ್ನು ನೋಡಲು, ನಿಮ್ಮನ್ನು ಬಲಗೊಳಿಸಲು, ನಿಮಗೆ ಆತ್ಮಿಕ ಉಡುಗೊರೆಯನ್ನು ಕೊಡಲು ಅತ್ಯಾಸಕ್ತಿ ಉಳ್ಳವನಾಗಿದ್ದೇನೆ. 12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.

13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ.

14 ನಾನು ಎಲ್ಲಾ ಜನರ ಅಂದರೆ ಗ್ರೀಕರ ಮತ್ತು ಗ್ರೀಕರಲ್ಲದವರ, ಹಾಗೂ ಜ್ಞಾನಿಗಳ ಮತ್ತು ಮೂಢರ ಸೇವೆ ಮಾಡಲೇಬೇಕು. 15 ಆದಕಾರಣ ರೋಮಿನಲ್ಲಿರುವ ನಿಮಗೆ ಸುವಾರ್ತೆಯನ್ನು ತಿಳಿಸಲು ಬಹಳವಾಗಿ ಆಶಿಸುತ್ತೇನೆ.

16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)

ಎಲ್ಲಾ ಜನರು ತಪ್ಪು ಮಾಡಿದ್ದಾರೆ

18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.

20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.

21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.

26 ಅವರು ಆ ರೀತಿ ವರ್ತಿಸಿದ್ದರಿಂದಲೇ, ದೇವರು ಅವರನ್ನು ನಾಚಿಕೆಕರವಾದ ಕಾಮಾಭಿಲಾಷೆಗೆ ಬಿಟ್ಟುಕೊಟ್ಟನು. ಅವರ ಸ್ತ್ರೀಯರು ಪುರಷರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ, ಸಲಿಂಗಕಾಮಿಗಳಾದರು. 27 ಅದೇರೀತಿಯಲ್ಲಿ, ಪುರುಷರು ಸ್ತ್ರೀಯರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ ಉದ್ರೇಕಗೊಂಡ ಸಲಿಂಗಕಾಮಿಗಳಾದರು. ಅವರು ತಮ್ಮ ದುರ್ನಡತೆಗೆ ತಕ್ಕ ದಂಡನೆಯನ್ನು ತಮ್ಮ ದೇಹಗಳಿಗೆ ಬರಮಾಡಿಕೊಂಡರು.

28 ದೇವರ ನಿಜ ಜ್ಞಾನವನ್ನು ಹೊಂದಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ದೇವರು ಅವರನ್ನು ಅವರ ಅಯೋಗ್ಯ ಭಾವಕ್ಕೆ ಒಪ್ಪಿಸಿಕೊಟ್ಟನು. ಆದ್ದರಿಂದ ಅವರು ತಾವು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. 29 ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ; 30 ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾರೆ; ದೇವರನ್ನು ದ್ವೇಷಿಸುತ್ತಾರೆ. ಅವರು ಸೊಕ್ಕಿನವರೂ ಅಹಂಕಾರಿಗಳೂ ಮತ್ತು ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವವರೂ ಆಗಿದ್ದಾರೆ. ಅವರು ಕೇಡಿನ ಮಾರ್ಗಗಳನ್ನು ಹುಡುಕುವವರೂ ತಂದೆತಾಯಿಗಳಿಗೆ ಅವಿಧೇಯರೂ ಮೂರ್ಖರೂ ಆಗಿದ್ದಾರೆ. 31 ಅವರು ತಾವು ಕೊಟ್ಟ ಮಾತನ್ನು ನೆರವೇರಿಸದವರೂ ಬೇರೆಯವರಿಗೆ ಮಮತೆಯನ್ನಾಗಲಿ ಕರುಣೆಯನ್ನಾಗಲಿ ತೋರದವರೂ ಆಗಿದ್ದಾರೆ. 32 ಇಂಥವರಿಗೆ ಮರಣದಂಡನೆ ಆಗಬೇಕೆಂದು ದೇವರ ಧರ್ಮಶಾಸ್ತ್ರ ಹೇಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೂ ಅವರು ಇಂಥ ಕಾರ್ಯಗಳನ್ನು ಮಾಡುತ್ತಾರೆ ಮತ್ತು ಇಂಥ ಕಾರ್ಯಗಳನ್ನು ಮಾಡುವ ಜನರಿಗೆ ಪ್ರೋತ್ಸಾಹ ನೀಡುತ್ತಾರೆ.

ಯೆಹೂದ್ಯರು ಸಹ ಪಾಪಿಗಳು

“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.

ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[c] ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.

12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.

14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.

16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.

ಯೆಹೂದ್ಯರು ಮತ್ತು ಧರ್ಮಶಾಸ್ತ್ರ

17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರದಲ್ಲಿ ನಂಬಿಕೆಯಿಟ್ಟು ದೇವರಿಗೆ ಸಮೀಪವಾಗಿರುವುದಾಗಿ ನೀನು ಹೆಮ್ಮೆಪಡುವೆ. 18 ದೇವರ ಚಿತ್ತಕ್ಕನುಸಾರವಾದ ಕಾರ್ಯಗಳನ್ನು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ನೀನು ಹೇಳಿಕೊಳ್ಳುವೆ. 19 ಸರಿಯಾದ ಮಾರ್ಗವನ್ನು ತಿಳಿದಿಲ್ಲದ ಜನರಿಗೆ ಮಾರ್ಗದರ್ಶಕನಾಗಿಯೂ ಕತ್ತಲೆಯಲ್ಲಿರುವ ಜನರಿಗೆ ಬೆಳಕಾಗಿಯೂ ಇರುವುದಾಗಿ ನಿನ್ನ ಕುರಿತು ಭಾವಿಸಿಕೊಂಡಿರುವೆ. 20 ಮೂಢರಿಗೆ ಶಿಕ್ಷಕನೆಂತಲೂ ಕಲಿಯಬೇಕಾದವರಿಗೆ ಉಪಾಧ್ಯಾಯನೆಂತಲೂ ನೀನು ನಿನ್ನ ಬಗ್ಗೆ ಆಲೋಚಿಸಿಕೊಂಡಿರುವೆ. ನಿನ್ನಲ್ಲಿ ಧರ್ಮಶಾಸ್ತ್ರವಿದೆ, ಆದ್ದರಿಂದ ಪ್ರತಿಯೊಂದನ್ನೂ ತಿಳಿದುಕೊಂಡಿರುವುದಾಗಿಯೂ ಎಲ್ಲಾ ಸತ್ಯವನ್ನು ಹೊಂದಿಕೊಂಡಿರುವುದಾಗಿಯೂ ನೀನು ಭಾವಿಸಿಕೊಂಡಿರುವೆ. 21 ನೀನು ಬೇರೆಯವರಿಗೆ ಉಪದೇಶಿಸುವೆ. ಹೀಗಿರಲು ನೀನು ನಿನಗೇ ಉಪದೇಶ ಮಾಡಿಕೊಳ್ಳಬಾರದೇಕೆ? ಕದಿಯಬಾರದೆಂದು ನೀನು ಜನರಿಗೆ ಹೇಳುವೆ, ಆದರೆ ನೀನೇ ಕದಿಯುವೆ. 22 ಜನರು ವ್ಯಭಿಚಾರವೆಂಬ ಪಾಪವನ್ನು ಮಾಡಕೂಡದೆಂದು ನೀನು ಹೇಳುವೆ, ಆದರೆ ನೀನೇ ಆ ಪಾಪಮಾಡಿ ಅಪರಾಧಿಯಾಗಿರುವೆ. ನೀನು ವಿಗ್ರಹಗಳನ್ನು ದ್ವೇಷಿಸುವೆ, ಆದರೆ ನೀನೇ ಅವುಗಳನ್ನು ಗುಡಿಗಳಿಂದ ಕದಿಯುವೆ. 23 ನೀನು ದೇವರ ಧರ್ಮಶಾಸ್ತ್ರದ ಬಗ್ಗೆ ಹೆಮ್ಮೆಪಡುವೆ. ಆದರೆ ಆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೇವರಿಗೆ ಅವಮಾನ ಮಾಡುವೆ. 24 “ಯೆಹೂದ್ಯರಾದ ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದ ಜನರು ದೇವರ ಹೆಸರಿಗೆ ವಿರೋಧವಾಗಿ ಮಾತಾಡುತ್ತಾರೆ”(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು. 26 ಯೆಹೂದ್ಯರಲ್ಲದ ಜನರಿಗೆ ಸುನ್ನತಿಯಾಗಿಲ್ಲ, ಆದರೆ ಧರ್ಮಶಾಸ್ತ್ರವು ಹೇಳುವುದನ್ನು ಅವರು ಮಾಡುವುದಾದರೆ, ಅವರು ಸುನ್ನತಿಯನ್ನು ಹೊಂದಿದಂಥವರಾದರು. 27 ಯೆಹೂದ್ಯರಾದ ನಿಮಗೆ ಲಿಖಿತ ಧರ್ಮಶಾಸ್ತ್ರವಿದೆ ಮತ್ತು ಸುನ್ನತಿಯಾಗಿದೆ. ಆದರೆ ನೀವು ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತೀರಿ. ಹೀಗಿರಲು, ದೇಹದಲ್ಲಿ ಸುನ್ನತಿಯನ್ನು ಹೊಂದಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಜನರು ನಿಮ್ಮನ್ನು ಅಪರಾಧಿಗಳೆಂದು ತೋರ್ಪಡಿಸುತ್ತಾರೆ.

28 ಕೇವಲ ಬಾಹ್ಯ ದೇಹದಲ್ಲಿ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಕೇವಲ ದೇಹದ ಹೊರಭಾಗದ ಸುನ್ನತಿಯು ನಿಜವಾದ ಸುನ್ನತಿಯಲ್ಲ. 29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.

ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:

“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
    ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(C)

ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.

“ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.

ಎಲ್ಲಾ ಜನರು ಅಪರಾಧಿಗಳಾಗಿದ್ದಾರೆ

ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ. 10 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!
11     ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ.
ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.
12 ಎಲ್ಲಾ ಜನರು ದಾರಿ ತಪ್ಪಿದ್ದಾರೆ.
    ಎಲ್ಲಾ ಜನರು ಅಯೋಗ್ಯರಾಗಿದ್ದಾರೆ.
ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”(D)

13 “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ.
    ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.”(E)

“ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.”(F)

14 “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.”(G)

15 “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.
16     ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.
17 ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.”(H)

18 “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.”(I)

19 ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ. 20 ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.

ದೇವರು ಜನರನ್ನು ನೀತಿವಂತರನ್ನಾಗಿ ಮಾಡುವ ಬಗೆ

21 ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ. 22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.

27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ. 29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International