Beginning
ಕೊರಿಂಥದಲ್ಲಿ ಪೌಲನು
18 ತರುವಾಯ ಪೌಲನು ಅಥೆನ್ಸನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು. 2 ಕೊರಿಂಥದಲ್ಲಿ ಪೌಲನು ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅಕ್ವಿಲನು ಪೊಂತ ಎಂಬ ನಾಡಿನವನು. ಆದರೆ ಅಕ್ವಿಲ ಮತ್ತು ಅವನ ಹೆಂಡತಿ ಪ್ರಿಸ್ಕಿಲ್ಲ ಇಟಲಿಯಿಂದ ಕೊರಿಂಥಕ್ಕೆ ಇತ್ತೀಚಿಗೆ ಬಂದಿದ್ದರು. ಎಲ್ಲಾ ಯೆಹೂದ್ಯರು ರೋಮನ್ನು ಬಿಟ್ಟುಹೋಗಬೇಕೆಂದು ಕ್ಲಾಡಿಯಸನು[a] ಆಜ್ಞಾಪಿಸಿದ್ದರಿಂದ ಅವರು ಇಟಲಿಯನ್ನು ಬಿಟ್ಟುಬಂದಿದ್ದರು. ಪೌಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾಗಲು ಹೋದನು. 3 ಅವರು ಪೌಲನಂತೆ ಗುಡಾರ ತಯಾರಕರಾಗಿದ್ದರು. ಪೌಲನು ಅವರಲ್ಲೇ ತಂಗಿದ್ದು, ಅವರೊಂದಿಗೆ ಕೆಲಸ ಮಾಡುತ್ತಿದ್ದನು.
4 ಪ್ರತಿ ಸಬ್ಬತ್ದಿನದಂದು ಪೌಲನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ಗ್ರೀಕರೊಂದಿಗೂ ಚರ್ಚಿಸುತ್ತಾ ಯೇಸುವಿನಲ್ಲಿ ನಂಬಿಕೆ ಇಡುವಂತೆ ಅವರನ್ನು ಪ್ರೋತ್ಸಾಹಿಸಿದನು. 5 ಕೊರಿಂಥದಲ್ಲಿದ್ದ ಪೌಲನ ಬಳಿಗೆ ಸೀಲ ತಿಮೊಥೆಯರು ಮಕೆದೋನಿಯದಿಂದ ಬಂದರು. ಅನಂತರ, ಜನರಿಗೆ ಸುವಾರ್ತೆಯನ್ನು ತಿಳಿಸುವುದರಲ್ಲೇ ಪೌಲನು ತನ್ನ ಸಮಯವನ್ನೆಲ್ಲ ಕಳೆದನು. ಯೇಸುವೇ ಕ್ರಿಸ್ತನೆಂಬುದನ್ನು ಅವನು ಯೆಹೂದ್ಯರಿಗೆ ತೋರಿಸಿಕೊಟ್ಟನು. 6 ಆದರೆ ಯೆಹೂದ್ಯರು ಪೌಲನ ಉಪದೇಶವನ್ನು ತಿರಸ್ಕರಿಸಿ ದೂಷಣೆ ಮಾಡಿದರು. ಆದ್ದರಿಂದ ಪೌಲನು ತನ್ನ ಬಟ್ಟೆಗಳ ಧೂಳನ್ನು ಝಾಡಿಸಿ ಯೆಹೂದ್ಯರಿಗೆ, “ನೀವು ರಕ್ಷಣೆ ಹೊಂದದಿದ್ದರೆ, ಅದು ನಿಮ್ಮ ಸ್ವಂತ ತಪ್ಪು. ನನ್ನಿಂದ ಸಾಧ್ಯವಾದದ್ದನ್ನೆಲ್ಲ ನಾನು ಮಾಡಿದ್ದೇನೆ. ಇನ್ನು ಮೇಲೆ ನಾನು ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇನೆ!” ಎಂದು ಹೇಳಿದನು.
7 ಪೌಲನು ಸಭಾಮಂದಿರವನ್ನು ಬಿಟ್ಟು ತೀತಯುಸ್ತ ಎಂಬುವನ ಮನೆಗೆ ಹೋದನು. ಈ ಮನುಷ್ಯನು ನಿಜದೇವರನ್ನು ಆರಾಧಿಸುತ್ತಿದ್ದನು. ಇವನ ಮನೆ ಸಭಾಮಂದಿರದ ಪಕ್ಕದಲ್ಲಿತ್ತು. 8 ಕ್ರಿಸ್ಪನು ಸಭಾಮಂದಿರದ ಅಧ್ಯಕ್ಷನಾಗಿದ್ದನು. ಕ್ರಿಸ್ಪನು ಮತ್ತು ಅವನ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ಪ್ರಭುವಿನಲ್ಲಿ ನಂಬಿಕೆಯಿಟ್ಟರು. ಕೊರಿಂಥದಲ್ಲಿ ಇತರ ಅನೇಕ ಜನರು ಪೌಲನಿಗೆ ಕಿವಿಗೊಟ್ಟರು ಮತ್ತು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.
9 ಒಂದು ರಾತ್ರಿ ಪೌಲನಿಗೆ ದರ್ಶನವಾಯಿತು. ಪ್ರಭುವು ಅವನಿಗೆ, “ಭಯಪಡಬೇಡ! ಜನರಿಗೆ ಬೋಧಿಸುತ್ತಲೇ ಇರು, ನಿಲ್ಲಿಸಬೇಡ! 10 ನಾನು ನಿನ್ನೊಂದಿಗಿದ್ದೇನೆ. ನಿನಗೆ ಕೇಡುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಅನೇಕ ಜನರು ಈ ಪಟ್ಟಣದಲ್ಲಿ ಇದ್ದಾರೆ” ಎಂದು ಹೇಳಿದನು. 11 ಪೌಲನು ದೇವರ ಸತ್ಯವನ್ನು ಜನರಿಗೆ ಉಪದೇಶಿಸುತ್ತಾ ಅಲ್ಲಿ ಒಂದೂವರೆ ವರ್ಷದವರೆಗೆ ಇದ್ದನು.
ಗಲ್ಲಿಯೋನನ ಮುಂದೆ ಪೌಲ
12 ಅಖಾಯ ನಾಡಿಗೆ ಗಲ್ಲಿಯೋನನು ರಾಜ್ಯಪಾಲನಾದಾಗ ಕೆಲವು ಯೆಹೂದ್ಯರು ಪೌಲನಿಗೆ ವಿರೋಧವಾಗಿ ಸೇರಿಬಂದರು. ಅವರು ಪೌಲನನ್ನು ನ್ಯಾಯಾಲಯಕ್ಕೆ ಕರದೊಯ್ದು, 13 ರಾಜ್ಯಪಾಲನಿಗೆ, “ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಇವನು ಜನರಿಗೆ ಉಪದೇಶಿಸುತ್ತಿದ್ದಾನೆ!” ಎಂದು ಹೇಳಿದರು.
14 ಪೌಲನು ಮಾತಾಡುವುದಕ್ಕೆ ಸಿದ್ಧನಾಗಿದ್ದನು. ಆದರೆ ಗಲ್ಲಿಯೋನ ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧವಾಗಲಿ ದುಷ್ಕೃತ್ಯವಾಗಲಿ ನಡೆದಿದ್ದರೆ ನಾನು ನಿಮ್ಮ ದೂರು ಕೇಳುತ್ತಿದ್ದೆನು. 15 ನಿಮ್ಮ ಅಪವಾದಗಳು ಕೇವಲ ಪದಗಳಿಗೂ ಹೆಸರುಗಳಿಗೂ ಮತ್ತು ನಿಮ್ಮ ಸ್ವಂತ ಧರ್ಮಶಾಸ್ತ್ರಕ್ಕೂ ಸಂಬಂಧಪಟ್ಟಿವೆ. ಆದ್ದರಿಂದ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಂಗತಿಗಳಿಗೆ ನ್ಯಾಯಾಧೀಶನಾಗಿರಲು ನನಗೆ ಇಷ್ಟವಿಲ್ಲ!” ಎಂದು ಹೇಳಿ, 16 ಅವರನ್ನು ನ್ಯಾಯಾಲಯದಿಂದ ಹೊರಡಿಸಿದನು.
17 ಬಳಿಕ ಅವರೆಲ್ಲರೂ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಾಲಯದ ಮುಂದೆಯೇ ಹೊಡೆದರು. (ಸೋಸ್ಥೆನನು ಆಗ ಸಭಾಮಂದಿರದ ಅಧ್ಯಕ್ಷನಾಗಿದ್ದನು.) ಆದರೆ ಗಲ್ಲಿಯೋನ ಅದನ್ನು ತನ್ನ ಗಮನಕ್ಕೆ ತೆಗೆದುಕೊಳ್ಳಲಿಲ್ಲ.
ಅಂತಿಯೋಕ್ಯಕ್ಕೆ ಪೌಲನ ಮರುಪ್ರಯಾಣ
18 ಪೌಲನು ಅನೇಕ ದಿನಗಳವರೆಗೆ ಸಹೋದರರೊಂದಿಗೆ ಇದ್ದನು. ಬಳಿಕ ಅವನು ಅಲ್ಲಿಂದ ಸಿರಿಯಕ್ಕೆ ನೌಕಾಯಾನ ಮಾಡಿದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಅವನೊಂದಿಗಿದ್ದರು. ಕೆಂಖ್ರೆ ಎಂಬ ಸ್ಥಳದಲ್ಲಿ ಪೌಲನು ತನ್ನ ತಲೆಕೂದಲನ್ನು ಕತ್ತರಿಸಿಕೊಂಡನು. ಅವನು ದೇವರಿಗೆ ಹರಕೆಯನ್ನು ಮಾಡಿಕೊಂಡಿದ್ದನೆಂಬುದನ್ನು ಅದು ಸೂಚಿಸುತ್ತಿತ್ತು. 19 ಬಳಿಕ ಅವರು ಎಫೆಸ ಪಟ್ಟಣಕ್ಕೆ ಹೋದರು. ಪ್ರಿಸ್ಕಿಲ್ಲ ಮತ್ತು ಅಕ್ವಿಲರನ್ನು ಪೌಲನು ಬಿಟ್ಟಿಹೋದದ್ದು ಇಲ್ಲಿಯೇ. ಪೌಲನು ಎಫೆಸದಲ್ಲಿದ್ದಾಗ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚಿಸಿದನು. 20 ಆ ಯೆಹೂದ್ಯರು ಇನ್ನೂ ಸ್ವಲ್ಪಕಾಲ ಇರಬೇಕೆಂದು ಪೌಲನನ್ನು ಕೇಳಿಕೊಂಡರು. ಆದರೆ ಅವನು ಒಪ್ಪಲಿಲ್ಲ. 21 ಪೌಲನು ಅವರಿಗೆ, “ದೇವರು ಬಯಸುವುದಾದರೆ, ನಾನು ನಿಮ್ಮ ಬಳಿಗೆ ಮತ್ತೆ ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟನು. ಹೀಗೆ ಪೌಲನು ಎಫೆಸದಿಂದ ನೌಕಾಯಾನ ಮಾಡಿದನು.
22 ಪೌಲನು ಸೆಜರೇಯ ಪಟ್ಟಣಕ್ಕೆ ಹೋದನು. ಅಲ್ಲಿಂದ ಜೆರುಸಲೇಮಿಗೆ ಹೋಗಿ ಸಭೆಯವರನ್ನು ವಂದಿಸಿದನು. ಅನಂತರ ಪೌಲನು ಅಂತಿಯೋಕ್ಯ ಪಟ್ಟಣಕ್ಕೆ ಹೋದನು. 23 ಅಲ್ಲಿ ಅವನು ಸ್ವಲ್ಪಕಾಲವಿದ್ದನು. ಬಳಿಕ ಅಲ್ಲಿಂದ ಹೊರಟು ಗಲಾತ್ಯ ಮತ್ತು ಫ್ರಿಜಿಯ ನಾಡುಗಳಲ್ಲಿ ಸಂಚರಿಸುತ್ತಾ ಯೇಸುವಿನ ಶಿಷ್ಯರೆಲ್ಲರನ್ನು ಬಲಪಡಿಸಿದನು.
ಎಫೆಸದಲ್ಲಿ ಮತ್ತು ಅಖಾಯದಲ್ಲಿ ಅಪೊಲ್ಲೋಸನು
24 ಅಲೆಕ್ಸಾಂಡ್ರಿಯಾ ಪಟ್ಟಣದಿಂದ ಅಪೊಲ್ಲೋಸನೆಂಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಿದ್ಯಾವಂತನಾಗಿದ್ದನು ಮತ್ತು ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದನು. 25 ಅಪೊಲ್ಲೋಸನು ಯಾವಾಗಲೂ ಬಹು ಉತ್ಸುಕತೆಯಿಂದ ಯೇಸುವಿನ ಬಗ್ಗೆ ಜನರಿಗೆ ಉಪದೇಶಿಸುತ್ತಿದ್ದನು. ಯೇಸುವಿನ ಬಗ್ಗೆ ಅಪೊಲ್ಲೋಸನು ಹೇಳಿದ ಸಂಗತಿಗಳು ಸರಿಯಾಗಿದ್ದವು. ಆದರೆ ಸ್ನಾನಿಕ ಯೋಹಾನನ ದೀಕ್ಷಾಸ್ನಾನವೊಂದೇ ಇವನಿಗೆ ಗೊತ್ತಿತ್ತು. 26 ಅಪೊಲ್ಲೋಸನು ಸಭಾಮಂದಿರದಲ್ಲಿ ಬಹು ಧೈರ್ಯವಾಗಿ ಮಾಡಿದ ಉಪದೇಶವನ್ನು ಕೇಳಿದ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ದೇವರ ಮಾರ್ಗವನ್ನು ಆಳವಾಗಿ ಗ್ರಹಿಸಿಕೊಳ್ಳಲು ನೆರವು ನೀಡಿದರು.
27 ಅಪೊಲ್ಲೋಸನು ಅಖಾಯ ಪ್ರಾಂತ್ಯಕ್ಕೆ ಹೋಗಲು ಅಪೇಕ್ಷಿಸಿದಾಗ ಎಫೆಸದ ಸಹೋದರರು ಅವನನ್ನು ಪ್ರೋತ್ಸಾಹಿಸಿದರು. ಅಲ್ಲದೆ ಅಖಾಯದಲ್ಲಿದ್ದ ಯೇಸುವಿನ ಶಿಷ್ಯರಿಗೆ ಅವರು ಪತ್ರವನ್ನು ಬರೆದು, ಅಪೊಲ್ಲೋಸನನ್ನು ಸ್ವೀಕರಿಸಿಕೊಳ್ಳಬೇಕೆಂದು ಅವರನ್ನು ಕೇಳಿಕೊಂಡರು. ಅಖಾಯದಲ್ಲಿ ಈ ಶಿಷ್ಯರು ದೇವರ ಕೃಪೆಯಿಂದಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. ಅಪೊಲ್ಲೋಸನು ಅಲ್ಲಿಗೆ ಹೋಗಿ ಅವರಿಗೆ ಬಹಳ ನೆರವು ನೀಡಿದನು. 28 ಅವನು ಜನರೆಲ್ಲರ ಮುಂದೆ ಯೆಹೂದ್ಯರ ವಿರುದ್ಧ ಬಹು ಬಲವಾಗಿ ವಾದಿಸಿ, ಪವಿತ್ರ ಗ್ರಂಥವನ್ನು ಆಧಾರವಾಗಿ ತೆಗೆದುಕೊಂಡು ಯೇಸುವೇ ಕ್ರಿಸ್ತನೆಂಬುದನ್ನು ಸ್ಪಷ್ಟವಾಗಿ ನಿರೂಪಿಸಿದನು.
ಪೌಲ ಎಫೆಸದಲ್ಲಿ
19 ಅಪೊಲ್ಲೋಸನು ಕೊರಿಂಥ ಪಟ್ಟಣದಲ್ಲಿದ್ದಾಗ ಪೌಲನು ಎಫೆಸ ಪಟ್ಟಣಕ್ಕೆ ಪ್ರಯಾಣ ಮಾಡುತ್ತಾ ದಾರಿಯಲ್ಲಿ ಸಿಕ್ಕಿದ ಕೆಲವು ಊರುಗಳನ್ನು ಸಂದರ್ಶಿಸಿದನು. ಅವನು ಎಫೆಸ ಪಟ್ಟಣವನ್ನು ತಲುಪಿದಾಗ, ಕೆಲವು ಮಂದಿ ಶಿಷ್ಯರನ್ನು ಕಂಡು, 2 “ನೀವು ನಂಬಿಕೊಂಡಾಗ ಪವಿತ್ರಾತ್ಮನನ್ನು ಹೊಂದಿಕೊಂಡಿರಾ?” ಎಂದು ಕೇಳಿದನು.
ಆ ಶಿಷ್ಯರು ಅವನಿಗೆ, “ಪವಿತ್ರಾತ್ಮನು ಇದ್ದಾನೆ ಎಂಬುದನ್ನು ನಾವು ಇದುವರೆಗೆ ಕೇಳಿಯೂ ಇಲ್ಲ!” ಎಂದರು.
3 ಪೌಲನು ಅವರಿಗೆ, “ನೀವು ಯಾವ ಬಗೆಯ ದೀಕ್ಷಾಸ್ನಾನ ಪಡೆದಿರಿ?” ಎಂದು ಕೇಳಿದನು.
ಅವರು, “ಯೋಹಾನನು ಬೋಧಿಸಿದ ದೀಕ್ಷಾಸ್ನಾನವನ್ನು ನಾವು ಮಾಡಿಸಿಕೊಂಡೆವು” ಎಂದು ಹೇಳಿದರು.
4 ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು.
5 ಇದನ್ನು ಕೇಳಿದಾಗ ಆ ಶಿಷ್ಯರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. 6 ಬಳಿಕ ಪೌಲನು ಅವರ ಮೇಲೆ ತನ್ನ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮಭರಿತರಾದರು. ಅವರು ವಿವಿಧ ಭಾಷೆಗಳಲ್ಲಿ ಮಾತಾಡಿದರು ಮತ್ತು ಪ್ರವಾದನೆ ಮಾಡಿದರು. 7 ಈ ಗುಂಪಿನಲ್ಲಿ ಸುಮಾರು ಹನ್ನೆರಡು ಮಂದಿ ಇದ್ದರು.
8 ಅನಂತರ ಮೂರು ತಿಂಗಳ ಕಾಲ ಪೌಲನು ಸಭಾಮಂದಿರಕ್ಕೆ ಹೋಗಿ ಬಹು ಧೈರ್ಯದಿಂದ ಮಾತಾಡಿದನು. ಅವನು ಯೆಹೂದ್ಯರಿಗೆ ದೇವರ ರಾಜ್ಯದ ಸಂಗತಿಗಳನ್ನು ತಿಳಿಸಿ ಅವರನ್ನು ಒಡಂಬಡಿಸಲು ಪ್ರಯತ್ನಿಸಿದನು. 9 ಆದರೆ ಆ ಯೆಹೂದ್ಯರಲ್ಲಿ ಕೆಲವರು ಮೊಂಡರಾದರು. ಅವರು ನಂಬದೆ ದೇವರ ಮಾರ್ಗವನ್ನು ಜನರೆಲ್ಲರ ಎದುರಿನಲ್ಲಿ ದೂಷಿಸಿದರು. ಆದ್ದರಿಂದ ಪೌಲನು ಏಷ್ಯಾ ಪ್ರಾಂತ್ಯದ ಆ ಯೆಹೂದ್ಯರನ್ನೆಲ್ಲ ಬಿಟ್ಟು, ಯೇಸುವಿನ ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ತುರನ್ನನ ಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸಿದನು. 10 ಹೀಗೆ ಎರಡು ವರ್ಷಗಳು ಕಳೆದವು. ಇದರಿಂದಾಗಿ, ಏಷ್ಯಾದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರು ಮತ್ತು ಗ್ರೀಕರು ಪ್ರಭುವಿನ ವಾಕ್ಯವನ್ನು ಕೇಳಿದರು.
ಸ್ಕೇವನ ಗಂಡುಮಕ್ಕಳು
11 ದೇವರು ಪೌಲನ ಕೈಯಿಂದ ಬಹು ವಿಶೇಷವಾದ ಮಹತ್ಕಾರ್ಯಗಳನ್ನು ಮಾಡಿಸುತ್ತಿದ್ದನು. 12 ಪೌಲನ ಕರವಸ್ತ್ರಗಳನ್ನು ಮತ್ತು ಬಟ್ಟೆಗಳನ್ನು ಕೆಲವರು ತೆಗೆದುಕೊಂಡು ಹೋಗಿ ರೋಗಿಗಳ ಮೇಲೆ ಹಾಕುತ್ತಿದ್ದರು. ಆ ಕೂಡಲೇ ರೋಗಿಗಳು ಗುಣಹೊಂದುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ದೆವ್ವಗಳು ಬಿಟ್ಟುಹೋಗುತ್ತಿದ್ದವು.
13-14 ಕೆಲವು ಯೆಹೂದ್ಯರು ಸಹ ಊರೂರುಗಳಿಗೆ ಸಂಚರಿಸುತ್ತಾ ದೆವ್ವದಿಂದ ಪೀಡಿತರಾಗಿದ್ದ ಜನರೊಳಗಿಂದ ದೆವ್ವಗಳನ್ನು ಯೇಸುವಿನ ಹೆಸರಿನ ಮೂಲಕ ಹೊರಡಿಸುತ್ತಿದ್ದರು. ಸ್ಕೇವ ಎಂಬವನ ಏಳು ಮಂದಿ ಗಂಡುಮಕ್ಕಳೂ ಹೀಗೇ ಮಾಡುತ್ತಿದ್ದರು. (ಸ್ಕೇವನು ಪ್ರಧಾನಯಾಜಕನಾಗಿದ್ದನು.) ಅವರೆಲ್ಲರೂ, “ಪೌಲನು ಯಾವ ಯೇಸುವಿನ ಬಗ್ಗೆ ಹೇಳುತ್ತಿದ್ದಾನೋ ಆ ಯೇಸುವಿನ ಹೆಸರಿನಿಂದಲೇ ನೀನು ಹೊರಗೆ ಬರಬೇಕೆಂದು ನಾವು ಆಜ್ಞಾಪಿಸುತ್ತೇವೆ” ಎಂದು ಹೇಳುತ್ತಿದ್ದರು.
15 ಆದರೆ ಒಂದು ಸಲ ದೆವ್ವವೊಂದು ಅವರಿಗೆ, “ನನಗೆ ಯೇಸುವೂ ಗೊತ್ತು ಪೌಲನೂ ಗೊತ್ತು. ಆದರೆ ನೀವು ಯಾರು?” ಎಂದು ಪ್ರತ್ಯುತ್ತರ ಕೊಟ್ಟಿತು.
16 ಬಳಿಕ ದೆವ್ವಪೀಡಿತನಾಗಿದ್ದ ಆ ಮನುಷ್ಯನು ಈ ಯೆಹೂದ್ಯರ ಮೇಲೆ ಹಾರಿಬಿದ್ದನು. ಅವನು ಅವರಿಗಿಂತ ಹೆಚ್ಚು ಬಲವುಳ್ಳವನಾಗಿದ್ದನು. ಅವನು ಅವರಿಗೆ ಹೊಡೆದು ಅವರ ಬಟ್ಟೆಗಳನ್ನು ಹರಿದು ಹಾಕಿದನು. ಅವರು ಆ ಮನೆಯಿಂದ ಓಡಿಹೋದರು.
17 ಎಫೆಸದಲ್ಲಿದ್ದ ಯೆಹೂದ್ಯರು ಮತ್ತು ಗ್ರೀಕರು ಇದನ್ನು ಕೇಳಿ ಭಯಗ್ರಸ್ತರಾದರು ಮತ್ತು ಪ್ರಭು ಯೇಸುವಿನ ಹೆಸರನ್ನು ಸನ್ಮಾನಿಸಿದರು. 18 ವಿಶ್ವಾಸಿಗಳಲ್ಲಿ ಅನೇಕರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡತೊಡಗಿದರು. 19 ವಿಶ್ವಾಸಿಗಳಲ್ಲಿ ಕೆಲವರು ಮಂತ್ರಗಳನ್ನು ಮಾಡುತ್ತಿದ್ದರು. ಈ ವಿಶ್ವಾಸಿಗಳು ತಮ್ಮ ಮಂತ್ರ ಪುಸ್ತಕಗಳನ್ನು ತೆಗೆದುಕೊಂಡು ಬಂದು ಜನರೆಲ್ಲರ ಮುಂದೆ ಅವುಗಳನ್ನು ಸುಟ್ಟುಹಾಕಿದರು. ಈ ಪುಸ್ತಕಗಳ ಬೆಲೆಯು ಸುಮಾರು ಐವತ್ತು ಸಾವಿರ ಬೆಳ್ಳಿನಾಣ್ಯಗಳು. 20 ಹೀಗೆ ಪ್ರಭುವಿನ ವಾಕ್ಯವು ಶಕ್ತಿಯುತವಾದ ರೀತಿಯಲ್ಲಿ ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದಾಗಿ ಹೆಚ್ಚುಹೆಚ್ಚು ಜನರು ನಂಬಿಕೊಂಡರು.
ಪ್ರಯಾಣಕ್ಕೆ ಪೌಲನ ಯೋಜನೆ
21 ಈ ಘಟನೆಗಳ ನಂತರ ಪೌಲನು ಮಕೆದೋನಿಯ ಮತ್ತು ಅಖಾಯ ದೇಶಗಳ ಮೂಲಕ ಜೆರುಸಲೇಮಿಗೆ ಹೋಗಲು ಯೋಜನೆ ಮಾಡಿದನು. “ನಾನು ಜೆರುಸಲೇಮನ್ನು ಸಂದರ್ಶಿಸಿದ ಮೇಲೆ ರೋಮ್ ನಗರವನ್ನು ಸಹ ಸಂದರ್ಶಿಸಬೇಕು” ಎಂದು ಪೌಲನು ಯೋಚಿಸಿಕೊಂಡನು. 22 ತಿಮೊಥೆ ಮತ್ತು ಎರಸ್ತ ಎಂಬುವರು ಪೌಲನ ಸಹಾಯಕರಾಗಿದ್ದರು. ಪೌಲನು ಅವರನ್ನು ಮಕೆದೋನಿಯ ದೇಶಕ್ಕೆ ಮುಂಚಿತವಾಗಿಯೇ ಕಳುಹಿಸಿದನು. ಪೌಲನು ಇನ್ನೂ ಸ್ವಲ್ಪಕಾಲ ಏಷ್ಯಾದಲ್ಲಿ ತಂಗಿದನು.
ಎಫೆಸದಲ್ಲಿ ಗಲಭೆ
23 ಆದರೆ ಆ ಸಮಯದಲ್ಲಿ ದೇವರ ಮಾರ್ಗದ ಬಗ್ಗೆ ತೀವ್ರ ಗಲಭೆಯೊಂದು ಎಫೆಸದಲ್ಲಿ ಉಂಟಾಯಿತು. ಅದು ನಡೆದ ರೀತಿ ಇಂತಿದೆ: 24 ಅಲ್ಲಿ ದೇಮೇತ್ರಿಯನೆಂಬ ಒಬ್ಬ ವ್ಯಕ್ತಿಯಿದ್ದನು. ಅವನು ಅಕ್ಕಸಾಲಿಗನಾಗಿದ್ದನು. ಅರ್ತೆಮಿ[b] ದೇವತೆಯ ಗುಡಿಯಾಕಾರದಲ್ಲಿ ಬೆಳ್ಳಿಯಿಂದ ಚಿಕ್ಕಚಿಕ್ಕ ಗುಡಿಗಳನ್ನು ಅವನು ತಯಾರಿಸುತ್ತಿದ್ದನು. ಈ ಕಸುಬನ್ನು ಮಾಡುತ್ತಿದ್ದ ಜನರು ಬಹಳವಾಗಿ ಹಣ ಸಂಪಾದಿಸಿದರು.
25 ದೇಮೇತ್ರಿಯನು ಈ ಜನರನ್ನು ಮತ್ತು ಇದೇ ರೀತಿಯ ಕಸುಬನ್ನು ಮಾಡುತ್ತಿದ್ದ ಇತರ ಜನರನ್ನು ಸಭೆಸೇರಿಸಿ ಅವರಿಗೆ, “ಜನರೇ, ನಮ್ಮ ಈ ಕಸುಬಿನಿಂದ ನಾವು ಬಹಳ ಹಣವನ್ನು ಗಳಿಸುತ್ತಿದ್ದೇವೆ ಎಂಬುದು ನಿಮಗೆ ಗೊತ್ತೇ ಇದೆ. 26 ಆದರೆ ಪೌಲ ಎಂಬುವನು ಏನು ಮಾಡುತ್ತಿದ್ದಾನೆಂಬುದನ್ನು ನೋಡಿರಿ! ಅವನು ಏನು ಹೇಳುತ್ತಿದ್ದಾನೆಂಬುದನ್ನು ಕೇಳಿರಿ! ಪೌಲನು ಅನೇಕ ಜನರ ಮೇಲೆ ಪ್ರಭಾವಬೀರಿ ಅವರನ್ನು ಪರಿವರ್ತಿಸಿದ್ದಾನೆ. ಅವನು ಎಫೆಸದಲ್ಲಿಯೂ ಏಷ್ಯಾ ದೇಶದ ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಮಾಡಿದ್ದಾನೆ. ಮನುಷ್ಯರು ತಯಾರಿಸುವ ದೇವರುಗಳು ನಿಜವಾದ ದೇವರುಗಳಲ್ಲ ಎಂದು ಹೇಳುತ್ತಿದ್ದಾನೆ. 27 ಇದರಿಂದಾಗಿ ಜನರು ನಮ್ಮ ಕೆಲಸದ ವಿರುದ್ಧ ರೊಚ್ಚಿಗೇಳಬಹುದು. ಅಷ್ಟೇ ಅಲ್ಲ, ಮಹಾದೇವತೆಯಾದ ಅರ್ತೆಮಿಯ ಗುಡಿಯನ್ನು ಜನರು ಕಡೆಗಣಿಸುವ ಸಾಧ್ಯತೆಯೂ ಇದೆ. ಆಗ, ಏಷ್ಯಾದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ಪೂಜಿಸಲ್ಪಡುತ್ತಿರುವ ಅರ್ತೆಮಿಯ ದೇವತೆಯ ವೈಭವ ಅಳಿದುಹೋಗುವುದು” ಎಂದನು.
28 ಈ ಮಾತುಗಳನ್ನು ಕೇಳಿದ ಜನರು ಬಹು ಕೋಪಗೊಂಡು, “ಎಫೆಸದ ಅರ್ತೆಮಿದೇವಿಯೇ ಮಹಾದೇವಿ!” ಎಂದು ಕೂಗಿದರು. 29 ಪಟ್ಟಣದಲ್ಲಿದ್ದ ಜನರೆಲ್ಲಾ ಗಲಿಬಿಲಿಗೊಂಡರು. ಜನರು ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದುಕೊಂಡರು. (ಇವರಿಬ್ಬರು ಮಕೆದೋನಿಯದವರು ಮತ್ತು ಪೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು.) ಬಳಿಕ ಜನರೆಲ್ಲರು ಕ್ರೀಡಾಂಗಣಕ್ಕೆ ಓಡಿಹೋದರು. 30 ಇದನ್ನು ತಿಳಿದ ಪೌಲನು ಒಳಗೆ ಹೋಗಿ ಜನರೊಂದಿಗೆ ಮಾತಾಡಬೇಕೆಂದಿದ್ದನು. ಆದರೆ ಯೇಸುವಿನ ಶಿಷ್ಯರು ಅವನನ್ನು ಹೋಗಗೊಡಿಸಲಿಲ್ಲ. 31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು.
32 ಕೆಲವು ಜನರು ಒಂದು ವಿಷಯದ ಬಗ್ಗೆ ಬೊಬ್ಬೆ ಹಾಕುತ್ತಿದ್ದರೆ, ಉಳಿದ ಜನರು ಬೇರೆ ವಿಷಯಗಳ ಬಗ್ಗೆ ಕೂಗಾಡುತ್ತಿದ್ದರು. ಸಭೆಯು ಬಹಳ ಗಲಿಬಿಲಿಗೊಳಗಾಯಿತು. ತಾವು ಅಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದೇ ಅನೇಕ ಜನರಿಗೆ ತಿಳಿದಿರಲಿಲ್ಲ. 33 ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಜನರ ಮುಂದೆ ನೂಕಿ ಮಾತಾಡಲು ಪುಸಲಾಯಿಸಿದರು. ಅವನು ಜನರಿಗೆ ಮೌನವಾಗಿರುವಂತೆ ಕೈಸನ್ನೆಮಾಡಿ ಜನರ ಪರವಾಗಿ ವಾದಿಸಬೇಕೆಂದಿದ್ದನು. 34 ಆದರೆ ಅಲೆಕ್ಸಾಂಡರನು ಯೆಹೂದ್ಯನೆಂದು ತಿಳಿದಾಗ ಜನರೆಲ್ಲರು, “ಎಫೆಸದ ಅರ್ತೆಮಿಯು ಮಹಾದೇವಿ! ಎಫೆಸದ ಅರ್ತೆಮಿಯು ಮಹಾದೇವಿ! ಅರ್ತೆಮಿಯು ಮಹಾದೇವಿ…!” ಎಂದು ಒಂದೇಸಮನೆ ಎರಡು ತಾಸುಗಳವರೆಗೆ ಕೂಗಿದರು.
35 ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯ ಪವಿತ್ರ ಕಲ್ಲನ್ನು[c] ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ. 36 ಇದು ಸತ್ಯವಲ್ಲವೆಂದು ಯಾರೂ ಹೇಳಲಾಗದು. ಆದ್ದರಿಂದ ಮೌನದಿಂದಿರಬೇಕು. ನೀವು ಏನನ್ನೇ ಮಾಡುವುದಕ್ಕಿಂತ ಮೊದಲು ಸಮಾಧಾನದಿಂದ ಯೋಚಿಸಬೇಕು.
37 “ನೀವು ಈ ಜನರನ್ನು ಹಿಡಿದುಕೊಂಡು ಬಂದಿದ್ದೀರಿ. ಆದರೆ ಇವರು ನಮ್ಮ ದೇವತೆಯ ವಿರೋಧವಾಗಿ ಯಾವ ಕೆಟ್ಟದ್ದನ್ನೂ ಹೇಳಿಲ್ಲ. ಅವರು ಆಕೆಯ ಗುಡಿಯಿಂದ ಏನನ್ನೂ ಕದ್ದುಕೊಂಡಿಲ್ಲ. 38 ನಮ್ಮಲ್ಲಿ ನ್ಯಾಯಾಲಯಗಳಿವೆ ಮತ್ತು ನ್ಯಾಯಾಧೀಶರುಗಳು ಇದ್ದಾರೆ. ದೇಮೇತ್ರಿಯನಿಗಾಗಲಿ ಮತ್ತು ಅವನೊಂದಿಗೆ ಕೆಲಸ ಮಾಡುವ ಜನರಿಗಾಗಲಿ ಯಾರ ಮೇಲಾದರೂ ದೂರುಗಳಿವೆಯೇ? ದೂರುಗಳಿದ್ದರೆ, ಅವರು ನ್ಯಾಯಾಲಯಗಳಿಗೆ ಹೋಗಬೇಕು! ಅವರು ಪರಸ್ಪರ ವಾದ ಮಾಡಲು ಅದೇ ತಕ್ಕ ಸ್ಥಳ!
39 “ನೀವು ಬೇರೆ ಏನನ್ನಾದರೂ ಕುರಿತು ಮಾತಾಡಬೇಕೆಂದಿದ್ದೀರಾ? ಮಾತಾಡಬೇಕೆಂದಿದ್ದರೆ, ಕಾನೂನುಬದ್ಧವಾದ ನಗರಸಭೆಗೆ ಬನ್ನಿರಿ. ಅಲ್ಲಿ ಅದನ್ನು ನಿರ್ಧರಿಸಬಹುದು. 40 ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇಂದಿನ ಗಲಭೆಯನ್ನು ಕಂಡ ಕೆಲವು ಜನರು ನಾವು ದಂಗೆ ಏಳುತ್ತಿದ್ದೇವೆಂದು ಹೇಳುವ ಸಾಧ್ಯತೆಯಿದೆ. ನಾವು ಈ ಗಲಭೆಯನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಯಾಕೆಂದರೆ ಈ ಸಭೆಗೆ ಸರಿಯಾದ ಕಾರಣವೇ ಇಲ್ಲ” ಎಂದು ಹೇಳಿದನು. 41 ಪಟ್ಟಣದ ಅಧಿಕಾರಿಯು ಈ ಸಂಗತಿಗಳನ್ನು ಹೇಳಿದ ಬಳಿಕ ಮನೆಗೆ ಹೋಗಬೇಕೆಂದು ಜನರಿಗೆ ತಿಳಿಸಿದನು. ಆಗ ಅವರೆಲ್ಲರು ಹೊರಟುಹೋದರು.
ಮಕೆದೋನಿಯಕ್ಕೆ ಮತ್ತು ಗ್ರೀಸಿಗೆ ಪೌಲನ ಪ್ರಯಾಣ
20 ಗಲಭೆಯು ನಿಂತುಹೋದ ಮೇಲೆ, ಪೌಲನು ಯೇಸುವಿನ ಶಿಷ್ಯರನ್ನು ಕರೆಯಿಸಿ ಅವರನ್ನು ಧೈರ್ಯಪಡಿಸಿದನು. ಬಳಿಕ ಪೌಲನು ಅಲ್ಲಿಂದ ಹೊರಟು ಮಕೆದೋನಿಯಾಕ್ಕೆ ಹೋದನು. 2 ಅವನು ಆ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಾ ಅನೇಕ ಊರುಗಳಿಗೆ ಭೇಟಿನೀಡಿ, ಯೇಸುವಿನ ಶಿಷ್ಯರಿಗೆ ಅನೇಕ ಸಂಗತಿಗಳನ್ನು ತಿಳಿಸಿ ಬಲಪಡಿಸಿದನು. ಬಳಿಕ ಪೌಲನು ಗ್ರೀಸಿಗೆ (ಅಖಾಯ) ಹೋದನು. 3 ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು.
ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು. 4 ಕೆಲವು ಜನರು ಅವನೊಂದಿಗಿದ್ದರು. ಅವರು ಯಾರೆಂದರೆ: ಬೆರೋಯ ಪಟ್ಟಣದ ಪುರ್ರನ ಮಗನಾದ ಸೋಪತ್ರನು, ಥೆಸಲೋನಿಕ ಪಟ್ಟಣದ ಆರಿಸ್ತಾರ್ಕ ಮತ್ತು ಸೆಕುಂದ, ದರ್ಬೆ ಪಟ್ಟಣದ ಗಾಯ ಮತ್ತು ತಿಮೊಥೆಯ, ಅಲ್ಲದೆ ಏಷ್ಯಾದ ತುಖಿಕ ಹಾಗು ತ್ರೊಫಿಮ. 5 ಇವರು ಪೌಲನಿಗಿಂತ ಮುಂಚಿತವಾಗಿಯೇ ಹೋದರು. ಅವರು ನಮಗಾಗಿ ತ್ರೋವ ಪಟ್ಟಣದಲ್ಲಿ ಕಾಯುತ್ತಿದ್ದರು. 6 ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.
ತ್ರೋವಕ್ಕೆ ಪೌಲನ ಕೊನೆಯ ಭೇಟಿ
7 ಭಾನುವಾರದಂದು, ನಾವೆಲ್ಲರು ಪ್ರಭುವಿನ ರಾತ್ರಿ ಭೋಜನಕ್ಕೆ ಒಟ್ಟಾಗಿ ಸೇರಿದೆವು. ಸಭೆ ಸೇರಿಬಂದಿದ್ದ ಜನರೊಂದಿಗೆ ಪೌಲನು ಮಾತಾಡಿದನು. ಅವನು ಮರುದಿನ ಅಲ್ಲಿಂದ ಹೊರಡಬೇಕೆಂದು ಅಲೋಚಿಸಿಕೊಂಡಿದ್ದನು. ಪೌಲನು ಮಧ್ಯರಾತ್ರಿಯವರೆಗೂ ಮಾತಾಡುತ್ತಲೇ ಇದ್ದನು. 8 ನಾವೆಲ್ಲರೂ ಮೇಲಂತಸ್ತಿನ ಕೊಠಡಿಯೊಂದರಲ್ಲಿ ಸೇರಿ ಬಂದಿದ್ದೆವು. ಆ ಕೊಠಡಿಯಲ್ಲಿ ಅನೇಕ ದೀಪಗಳಿದ್ದವು. 9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.
10 ಪೌಲನು ಕೆಳಗಿಳಿದು ಅವನ ಬಳಿಗೆ ಹೋಗಿ, ಮೊಣಕಾಲೂರಿ ಅವನನ್ನು ಅಪ್ಪಿಕೊಂಡು, ಅಲ್ಲಿದ್ದ ವಿಶ್ವಾಸಿಗಳಿಗೆ, “ಚಿಂತಿಸಬೇಡಿ. ಇವನು ಮತ್ತೆ ಜೀವಂತನಾದನು” ಎಂದು ಹೇಳಿದನು. 11 ಪೌಲನು ಮತ್ತೆ ಮೇಲಂತಸ್ತಿಗೆ ಹೋಗಿ ರೊಟ್ಟಿಯನ್ನು ಮುರಿದು ಊಟಮಾಡಿದನು. ಪೌಲನು ಅವರೊಂದಿಗೆ ದೀರ್ಘಕಾಲ ಮಾತಾಡಿದನು. ಅಷ್ಟರಲ್ಲಿಯೇ ಮುಂಜಾನೆಯಾಗಿತ್ತು. ಬಳಿಕ ಪೌಲನು ಹೊರಟುಹೋದನು. 12 ಜನರು ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡು ಹೋದರು. ಇದರಿಂದ ಜನರಿಗೆ ಬಹಳ ಆದರಣೆಯಾಯಿತು.
ತ್ರೋವದಿಂದ ಮಿಲೇತಕ್ಕೆ ಪ್ರಯಾಣ
13 ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು. 14 ಅಂತೆಯೇ ನಾವು ಪೌಲನನ್ನು ಅಸ್ಸೊಸಿನಲ್ಲಿ ಸಂಧಿಸಿದೆವು. ಅಲ್ಲಿಂದ ಅವನು ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿದನು. ನಾವೆಲ್ಲರೂ ಮಿತಿಲೇನಿ ಪಟ್ಟಣಕ್ಕೆ ಹೋದೆವು. 15 ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು. 16 ಎಫೆಸದಲ್ಲಿ ತಂಗಬಾರದೆಂದು ಪೌಲನು ಆಗಲೇ ನಿರ್ಧಾರ ಮಾಡಿದ್ದನು. ಏಷ್ಯಾದಲ್ಲಿ ದೀರ್ಘಕಾಲ ತಂಗಲು ಅವನಿಗೆ ಇಷ್ಟವಿರಲಿಲ್ಲ. ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂದು ಅವನು ತನ್ನ ಪ್ರಯಾಣವನ್ನು ತ್ವರಿತಗೊಳಿಸಿದನು.
ಎಫೆಸದ ಹಿರಿಯರಿಗೆ ಪೌಲನ ಬುದ್ಧಿಮಾತು
17 ಪೌಲನು ಮಿಲೇತದಿಂದ ಒಂದು ಸಂದೇಶವನ್ನು ಎಫೆಸಕ್ಕೆ ಕಳುಹಿಸಿ ಅಲ್ಲಿನ ಸಭೆಯ ಹಿರಿಯರನ್ನು ತನ್ನ ಬಳಿಗೆ ಬರಮಾಡಿಕೊಂಡನು.
18 ಆ ಹಿರಿಯರು ಬಂದಾಗ ಪೌಲನು ಅವರಿಗೆ, “ನಾನು ಏಷ್ಯಾ ಪ್ರಾಂತ್ಯಕ್ಕೆ ಬಂದ ಮೊದಲನೆಯ ದಿನದಿಂದಲೂ ನೀವು ನನ್ನ ಜೀವಿತದ ಬಗ್ಗೆ ತಿಳಿದಿದ್ದೀರಿ. ನಾನು ನಿಮ್ಮೊಂದಿಗೆ ಇದ್ದ ಕಾಲದಲ್ಲೆಲ್ಲಾ ನಾನು ಯಾವ ರೀತಿಯಲ್ಲಿ ಜೀವಿಸಿದೆನೆಂಬುದು ನಿಮಗೆ ಗೊತ್ತಿದೆ. 19 ಯೆಹೂದ್ಯರು ನನಗೆ ವಿರೋಧವಾಗಿ ಮಾಡಿದ ಒಳಸಂಚುಗಳಿಂದ ನಾನು ಬಹಳ ಕಷ್ಟಪಡಬೇಕಾಯಿತು. ಅನೇಕ ಸಲ ಕಣ್ಣೀರಿಡಬೇಕಾಯಿತು. ಆದರೆ ನಾನು ಯಾವಾಗಲೂ ಪ್ರಭುವಿನ ಸೇವೆ ಮಾಡಿದೆನೆಂಬುದು ನಿಮಗೆ ಗೊತ್ತಿದೆ. ನಾನು ನನ್ನ ಬಗ್ಗೆ ಚಿಂತಿಸದೆ, 20 ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು. 21 ನಿಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಾನು ಎಲ್ಲಾ ಜನಾಂಗಗಳವರಿಗೆ ಅಂದರೆ ಯೆಹೂದ್ಯರಿಗೂ ಮತ್ತು ಗ್ರೀಕರಿಗೂ ತಿಳಿಸಿದೆನು. ನಮ್ಮ ಪ್ರಭುವಾದ ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ನಾನು ಅವರೆಲ್ಲರಿಗೂ ತಿಳಿಸಿದೆನು.
22 “ಆದರೆ ಈಗ ನಾನು ಪವಿತ್ರಾತ್ಮನಿಗೆ ವಿಧೇಯನಾಗಿ ಜೆರುಸಲೇಮಿಗೆ ಹೋಗಬೇಕು. ಅಲ್ಲಿ ನನಗೆ ಏನು ಸಂಭವಿಸುವುದೋ ತಿಳಿಯದು. 23 ಜೆರುಸಲೇಮಿನಲ್ಲಿ ತೊಂದರೆಗಳು ಮತ್ತು ಸೆರೆವಾಸವು ನನಗಾಗಿ ಕಾದಿವೆಯೆಂದು ಪವಿತ್ರಾತ್ಮನು ಪ್ರತಿಯೊಂದು ಪಟ್ಟಣದಲ್ಲಿಯೂ ನನಗೆ ಹೇಳುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. 24 ನಾನು ನನ್ನ ಸ್ವಂತ ಪ್ರಾಣದ ಬಗ್ಗೆ ಚಿಂತಿಸುವುದಿಲ್ಲ. ಪ್ರಭುವಾದ ಯೇಸು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿದೆ. ದೇವರ ಕೃಪೆಯ ವಿಷಯವಾದ ಸುವಾರ್ತೆಯ ಬಗ್ಗೆ ಸಾಕ್ಷಿ ನೀಡುವುದೇ ನನ್ನ ಕೆಲಸವಾಗಿದೆ. ಆ ಕೆಲಸವನ್ನು ಮಾಡಿ ಪೂರೈಸುವುದೇ ನನ್ನ ಅಪೇಕ್ಷೆಯಾಗಿದೆ.
25 “ಈಗ ನನಗೆ ಕಿವಿಗೊಡಿ. ನಿಮ್ಮಲ್ಲಿ ಒಬ್ಬರಾಗಲಿ ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲವೆಂದು ನನಗೆ ಗೊತ್ತಿದೆ. ನಿಮ್ಮೊಂದಿಗೆ ಇದ್ದ ಸಮಯದಲ್ಲೆಲ್ಲಾ ದೇವರ ರಾಜ್ಯದ ವಿಷಯವಾದ ಸುವಾರ್ತೆಯನ್ನು ನಾನು ನಿಮಗೆ ತಿಳಿಸಿದೆನು. 26 ಆದ್ದರಿಂದ ಇಂದು ನಾನು ನಿಮಗೆ ದೃಢವಾಗಿ ಹೇಳಬಹುದಾದ ಒಂದು ಸಂಗತಿಯೇನೆಂದರೆ, ನಿಮ್ಮಲ್ಲಿ ಯಾರಾದರೂ ರಕ್ಷಣೆ ಹೊಂದಿಲ್ಲದಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 27 ಯಾಕೆಂದರೆ ದೇವರ ಅಪೇಕ್ಷೆಗನುಸಾರವಾಗಿ ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದನ್ನೂ ನಾನು ನಿಮಗೆ ನಿಶ್ಚಯವಾಗಿ ತಿಳಿಸಿದ್ದೇನೆ. 28 ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ. 29 ನಾನು ಹೊರಟುಹೋದ ಮೇಲೆ ಬೇರೆಯವರು ನಿಮ್ಮ ಸಭೆಗೆ ಬರುತ್ತಾರೆಂದು ನನಗೆ ಗೊತ್ತಿದೆ. ಕ್ರೂರವಾದ ತೋಳಗಳಂತಿರುವ ಅವರು ಮಂದೆಯನ್ನು ನಾಶಮಾಡಲು ಪ್ರಯತ್ನಿಸುವರು. 30 ಅಲ್ಲದೆ, ನಿಮ್ಮ ಸಭೆಯ ಕೆಲವು ಜನರೇ ದುರ್ಬೋಧಕರಾಗಿ ಯೇಸುವಿನ ಶಿಷ್ಯರಲ್ಲಿ ಕೆಲವರನ್ನು ಸತ್ಯದಿಂದ ದೂರಕ್ಕೆ ನಡೆಸುವರು. 31 ಆದ್ದರಿಂದ ಎಚ್ಚರಿಕೆಯಿಂದಿರಿ! ನಾನು ಮೂರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದೆನು. ಈ ಕಾಲಾವಧಿಯಲ್ಲಿ ನಾನು ನಿಮಗೆ ಹಗಲಿರುಳು ಉಪದೇಶಿಸುತ್ತಾ ನಿಮಗಾಗಿ ಕಣ್ಣೀರಿಡುತ್ತಾ ನಿಮ್ಮನ್ನು ಎಚ್ಚರಿಸಿದ್ದನ್ನು ಮರೆಯದಿರಿ.
32 “ಈಗ ನಾನು ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತಿದ್ದೇನೆ. ಆತನ ಕೃಪಾವಾಕ್ಯವು ನಿಮ್ಮ ಭಕ್ತಿಯನ್ನು ವೃದ್ಧಿಪಡಿಸಿ ಪರಿಶುದ್ಧರ ಬಾಧ್ಯತೆಯಲ್ಲಿ ಪಾಲುಗಾರರನ್ನಾಗಿ ಮಾಡುವುದು. 33 ನಾನು ನಿಮ್ಮೊಂದಿಗೆ ಇದ್ದಾಗ, ಯಾರ ಹಣವನ್ನಾಗಲಿ ಒಳ್ಳೆಯ ಬಟ್ಟೆಗಳನ್ನಾಗಲಿ ಎಂದೂ ಬಯಸಲಿಲ್ಲ. 34 ನಾನು ಯಾವಾಗಲೂ ನನ್ನ ಅಗತ್ಯತೆಗಳನ್ನು ಮತ್ತು ನನ್ನೊಂದಿಗಿರುವವರ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ದುಡಿಯುತ್ತಿದ್ದೆನು ಎಂಬುದು ನಿಮಗೆ ಗೊತ್ತಿದೆ. 35 ಕಷ್ಟಪಟ್ಟು ದುಡಿದು ದುರ್ಬಲರಿಗೆ ನೆರವಾಗಬೇಕೆಂದು ನಾನೇ ನಿಮಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದೇನೆ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂಬ ಯೇಸುವಿನ ಮಾತನ್ನು ನಾವು ಮರೆಯಕೂಡದೆಂದು ನಿಮಗೆ ಉಪದೇಶಿಸಿದೆನು” ಎಂದು ಹೇಳಿದನು.
36 ಪೌಲನು ಈ ಸಂಗತಿಗಳನ್ನು ಹೇಳಿ ಮುಗಿಸಿದ ಮೇಲೆ ಮೊಣಕಾಲೂರಿ ಅವರೆಲ್ಲರೊಡನೆ ಪ್ರಾರ್ಥಿಸಿದನು. 37-38 ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International