Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 11-12

ಶ್ರೇಷ್ಠನಾದ ಸ್ನಾನಿಕ ಯೋಹಾನ

(ಲೂಕ 7:18-35)

11 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಈ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು.

ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು. ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರುನೋಡಬೇಕೋ?” ಎಂದು ಕೇಳಿದರು.

ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ. ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ; ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ” ಎಂದು ಉತ್ತರಕೊಟ್ಟನು.

ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ! ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ. ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. 10 ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ.
ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’(A)

11 “ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 12 ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ. 13 ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕರಾಜ್ಯದ ಕುರಿತಾಗಿ ಮುಂತಿಳಿಸಿದವು. 14 ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಈ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ. 15 ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!

16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:

17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು.
    ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
    ನೀವು ದುಃಖಿಸಲಿಲ್ಲ.’

18 ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.’ 19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”

ನಂಬದ ಜನರಿಗೆ ಯೇಸುವಿನ ಎಚ್ಚರಿಕೆ

(ಲೂಕ 10:13-15)

20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. 21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.

23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”

ಯೇಸು ಜನರಿಗೆ ವಿಶ್ರಾಂತಿದಾಯಕ

(ಲೂಕ 10:21-22)

25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. 26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.

27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.

28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. 29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”

ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ

(ಮಾರ್ಕ 2:23-28; ಲೂಕ 6:1-5)

12 ಅಂದು ಸಬ್ಬತ್ ದಿನ. ಯೇಸು ಧಾನ್ಯದ ಹೊಲಗಳ ಮಾರ್ಗವಾಗಿ ನಡೆದುಹೋಗುತ್ತಿದ್ದನು. ಯೇಸುವಿನ ಶಿಷ್ಯರು ಆತನೊಂದಿಗಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತೆನೆಗಳನ್ನು ಕಿತ್ತುಕೊಂಡು ತಿನ್ನತೊಡಗಿದರು. ಇದನ್ನು ಕಂಡ ಫರಿಸಾಯರು ಯೇಸುವಿಗೆ, “ನೋಡು! ಸಬ್ಬತ್‌ದಿನದಂದು ಮಾಡತಕ್ಕ ಕಾರ್ಯಗಳನ್ನು ಕುರಿತು ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ” ಎಂದು ಹೇಳಿದರು.

ಅದಕ್ಕೆ ಯೇಸು, “ತಾನೂ ತನ್ನೊಂದಿಗಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ? ದಾವೀದನು ದೇವರ ಮಂದಿರದೊಳಗೆ ಹೋದನು. ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ದಾವೀದನು ಮತ್ತು ಅವನೊಂದಿಗಿದ್ದ ಜನರು ತಿಂದರು. ಅವರು ಆ ರೊಟ್ಟಿಯನ್ನು ತಿನ್ನುವುದು ಧರ್ಮಶಾಸ್ತ್ರಕ್ಕೆ ವಿರೋಧವಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು. ಪ್ರತಿಯೊಂದು ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಮೀರಿದರೂ ತಪ್ಪಿತಸ್ಥರಾಗುವುದಿಲ್ಲವೆಂದು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ? ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. ‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’(B) ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.

“ಮನುಷ್ಯಕುಮಾರನು ಸಬ್ಬತ್‌ ದಿನಕ್ಕೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.

ಕೈಬತ್ತಿದವನಿಗೆ ಆರೋಗ್ಯದಾನ

(ಮಾರ್ಕ 3:1-6; ಲೂಕ 6:6-11)

ಯೇಸು ಆ ಸ್ಥಳವನ್ನು ಬಿಟ್ಟು ಅವರ ಸಭಾಮಂದಿರದೊಳಕ್ಕೆ ಹೋದನು. 10 ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು.

11 ಯೇಸು, “ನಿಮ್ಮಲ್ಲಿ ಯಾರ ಬಳಿಯಾದರೂ ಒಂದು ಕುರಿಯಿದ್ದು, ಆ ಕುರಿಯು ಸಬ್ಬತ್ ದಿನದಂದು ಕುಣಿಯೊಳಕ್ಕೆ ಬಿದ್ದರೆ, ನೀವು ಆ ಕುರಿಯನ್ನು ಕುಣಿಯಿಂದ ಮೇಲಕ್ಕೆ ಎತ್ತುವಿರಿ. 12 ಮನುಷ್ಯನು ಕುರಿಗಿಂತ ಎಷ್ಟೋ ಬೆಲೆಯುಳ್ಳವನಾಗಿದ್ದಾನೆ. ಆದ್ದರಿಂದ ಸಬ್ಬತ್‌ದಿನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾದದ್ದು” ಎಂದು ಉತ್ತರಕೊಟ್ಟನು.

13 ನಂತರ ಯೇಸು ಕೈ ಊನವಾಗಿದ್ದ ಮನುಷ್ಯನಿಗೆ, “ನಿನ್ನ ಕೈ ತೋರಿಸು” ಎಂದನು. ಅವನು ತನ್ನ ಕೈಯನ್ನು ಆತನ ಕಡೆಗೆ ಚಾಚಿದನು. ಕೂಡಲೇ, ಅವನ ಕೈ ಮತ್ತೊಂದು ಕೈಯಂತೆ ಸರಿಯಾಯಿತು. 14 ಆದರೆ ಫರಿಸಾಯರು ಹೊರಟುಹೋಗಿ, ಯೇಸುವನ್ನು ಕೊಲ್ಲಲು ಉಪಾಯಗಳನ್ನು ಮಾಡಿಕೊಂಡರು.

ಯೇಸು ದೇವರಿಂದ ಆರಿಸಲ್ಪಟ್ಟ ಸೇವಕ

15 ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು. 16 ಆದರೆ ತಾನು ಯಾರೆಂಬುದನ್ನು ಬೇರೆ ಜನರಿಗೆ ಹೇಳಬಾರದೆಂದು ಆತನು ಜನರನ್ನು ಎಚ್ಚರಿಸಿದನು. 17 ಪ್ರವಾದಿಯಾದ ಯೆಶಾಯನು ಹೇಳಿದ್ದನ್ನು ನೆರವೇರಿಸುವುದಕ್ಕಾಗಿ ಯೇಸು ಇವುಗಳನ್ನು ಮಾಡಿದನು. ಯೆಶಾಯನು ಹೇಳಿದ್ದೇನೆಂದರೆ:

18 “ಇಗೋ, ನನ್ನ ಸೇವಕನು.
    ನಾನು ಆತನನ್ನು ಆರಿಸಿಕೊಂಡಿದ್ದೇನೆ.
ಆತನನ್ನು ಪ್ರೀತಿಸುತ್ತೇನೆ,
    ಆತನನ್ನು ಮೆಚ್ಚಿದ್ದೇನೆ.
ಆತನ ಮೇಲೆ ನನ್ನ ಆತ್ಮವನ್ನು ಇರಿಸುವೆನು.
    ಆತನು ಜನಾಂಗಗಳಿಗೆ ನ್ಯಾಯವಾದ ತೀರ್ಪು ಮಾಡುವನು.
19 ಆತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ.
    ಬೀದಿಗಳಲ್ಲಿ ಆತನ ಶಬ್ದ ಕೇಳಿಸುವುದಿಲ್ಲ.
20 ಬಾಗಿಹೋದ ದಂಟನ್ನು ಆತನು ಮುರಿಯುವುದಿಲ್ಲ;
    ಆರಿಹೋಗುತ್ತಿರುವ ದೀಪವನ್ನು ಆತನು ನಂದಿಸುವುದಿಲ್ಲ.
    ನ್ಯಾಯವಾದ ತೀರ್ಪು ಜಯಗಳಿಸುವಂತೆ ಆತನು ಮಾಡುವನು.
21 ಎಲ್ಲಾ ಜನರು ಆತನಲ್ಲಿ ಭರವಸೆ ಇಡುವರು.”(C)

ಯೇಸುವಿನ ಅಧಿಕಾರ ದೇವರದೇ

(ಮಾರ್ಕ 3:20-30; ಲೂಕ 11:14-23; 12:10)

22 ಆಗ ಕೆಲವು ಜನರು ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಕುರುಡನಾಗಿದ್ದನು ಮತ್ತು ಮೂಕನಾಗಿದ್ದನು. ಯೇಸು ಆ ಮನುಷ್ಯನನ್ನು ಗುಣಪಡಿಸಿದ್ದರಿಂದ ಮಾತನಾಡುವುದಕ್ಕೂ ನೋಡುವುದಕ್ಕೂ ಸಾಧ್ಯವಾಯಿತು. 23 ಜನರೆಲ್ಲರೂ ಬೆರಗಾದರು. “ದೇವರು ಕಳುಹಿಸಿಕೊಡುವುದಾಗಿ ನಮಗೆ ವಾಗ್ದಾನಮಾಡಿದ್ದ ದಾವೀದನ ಕುಮಾರನು ಈತನೇ (ಯೇಸು) ಆಗಿರಬಹುದು” ಎಂದು ಮಾತಾಡಿಕೊಂಡರು.

24 ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.

25 ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ. 26 ಹೀಗಿರಲು ಸೈತಾನನು ತನ್ನ ಸ್ವಂತ ದೆವ್ವಗಳನ್ನೇ ಹೊರಗೆ ಓಡಿಸಿದರೆ ಅವನು ತನ್ನಲ್ಲಿಯೇ ಒಡಕನ್ನು ಮಾಡಿದಂತಾಯಿತು. ಆಗ ಅವನು ಮತ್ತು ಅವನ ರಾಜ್ಯವು ಸ್ಥಿರವಾಗಿರಲು ಹೇಗೆ ಸಾಧ್ಯ? 27 ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. ಅದು ನಿಜವಾದರೆ, ನಿಮ್ಮ ಜನರು ಯಾವ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನ್ನು ತಪ್ಪಿತಸ್ಥರೆಂದು ನಿರೂಪಿಸುತ್ತಾರೆ. 28 ಆದರೆ ನಾನು ದೇವರಾತ್ಮನ ಶಕ್ತಿಯ ಮೂಲಕ ದೆವ್ವಗಳನ್ನು ಬಿಡಿಸುತ್ತೇನೆ. ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 29 ಒಬ್ಬ ವ್ಯಕ್ತಿಯು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಅವನ ಸ್ವತ್ತನ್ನು ಕದಿಯಬೇಕಿದ್ದರೆ, ಮೊದಲು ಅವನು ಆ ಬಲಿಷ್ಠನನ್ನು ಕಟ್ಟಿಹಾಕಬೇಕು. ಆಗ ಆ ಬಲಿಷ್ಠನ ಮನೆಯ ಸ್ವತ್ತನ್ನು ಕದಿಯಲು ಅವನಿಗೆ ಸಾಧ್ಯವಾಗುವುದು. 30 ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

31 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಪ್ರತಿಯೊಂದು ಪಾಪಕ್ಕೂ ಹೇಳುವ ಪ್ರತಿಯೊಂದು ದೂಷಣೆ ಮಾತಿಗೂ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆ ಇಲ್ಲವೇ ಇಲ್ಲ. 32 ಮನುಷ್ಯಕುಮಾರನಿಗೆ ವಿರೋಧವಾಗಿ ಮಾತನಾಡಿದರೂ ಅದಕ್ಕೆ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ ಅದಕ್ಕೆ ಕ್ಷಮಾಪಣೆಯು ಇಹದಲ್ಲಾಗಲಿ ಪರದಲ್ಲಾಗಲಿ ಇಲ್ಲವೇ ಇಲ್ಲ.

ನಿಮ್ಮ ನಿಜಸ್ಥಿತಿಗೆ ನಿಮ್ಮ ಕಾರ್ಯಗಳೇ ಸಾಕ್ಷಿ

(ಲೂಕ 6:43-45)

33 “ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು. 34 ನೀವು ಹಾವುಗಳು! ನೀವು ದುಷ್ಟರು! ಒಳ್ಳೆಯದನ್ನು ನೀವು ಹೇಗೆ ಹೇಳುವಿರಿ? ನಿಮ್ಮ ಹೃದಯದಲ್ಲಿ ತುಂಬಿರುವುದನ್ನೇ ನಿಮ್ಮ ಬಾಯಿ ಮಾತಾಡುತ್ತದೆ. 35 ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ. 36 ಜನರು ನಿರ್ಲಕ್ಷ್ಯಭಾವದಿಂದ ಆಡಿದ ಪ್ರತಿಯೊಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು. 37 ನಿಮ್ಮ ಮಾತುಗಳಿಂದಲೇ ನಿಮಗೆ ನೀತಿವಂತರೆಂದಾಗಲಿ ಅಪರಾಧಿಗಳೆಂದಾಗಲಿ ತೀರ್ಪು ನೀಡಲಾಗುವುದು” ಎಂದನು.

ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ

(ಮಾರ್ಕ 8:11-12; ಲೂಕ 11:29-32)

38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.

39 ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ. 40 ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ. 41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.

42 “ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.

ಇಂದಿನ ದುಷ್ಟಜನರ ಸ್ಥಿತಿ

(ಲೂಕ 11:24-26)

43 “ದುರಾತ್ಮವು ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದರೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಕ್ಕುವುದಿಲ್ಲ. 44 ಆಗ ಅದು, ‘ನಾನು ಬಿಟ್ಟುಬಂದ ಮನೆಗೇ ಹಿಂತಿರುಗಿ ಹೋಗುತ್ತೇನೆ’ ಎಂದು ಅಂದುಕೊಳ್ಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೆಯು ಇನ್ನೂ ಬರಿದಾಗಿರುತ್ತದೆ. ಚೊಕ್ಕಟವಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುತ್ತದೆ. 45 ಆಗ ಅದು ಹೊರಗೆ ಹೋಗಿ ತನಗಿಂತಲೂ ಹೆಚ್ಚು ದುಷ್ಟರಾದ ಏಳು ದುರಾತ್ಮಗಳನ್ನು ಕರೆದುಕೊಂಡು ಬರುತ್ತದೆ. ಆ ದುರಾತ್ಮಗಳೆಲ್ಲಾ ಆ ಮನುಷ್ಯನೊಳಗೆ ಸೇರಿಕೊಂಡು ವಾಸಮಾಡಲಾರಂಭಿಸುತ್ತವೆ. ಆಗ ಆ ಮನುಷ್ಯನಿಗೆ ಮೊದಲಿಗಿಂತಲೂ ಹೆಚ್ಚಿನ ಕಷ್ಟಗಳು ಉಂಟಾಗುತ್ತವೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವುದು” ಎಂದನು.

ಯೇಸುವಿನ ಶಿಷ್ಯರೇ ಆತನ ಕುಟುಂಬ

(ಮಾರ್ಕ 3:31-35; ಲೂಕ 8:19-21)

46 ಯೇಸುವು ಜನರೊಂದಿಗೆ ಮಾತಾಡುತ್ತಿರುವಾಗ, ಆತನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡರು. ಅವರು ಆತನೊಂದಿಗೆ ಮಾತಾಡಬೇಕೆಂದಿದ್ದರು. 47 ಒಬ್ಬನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನೊಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.

48 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು, 49 ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು. 50 ಪರಲೋಕದಲ್ಲಿರುವ ನನ್ನ ತಂದೆ ಇಚ್ಛಿಸುವಂಥವುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International