Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 31-33

ಅಶ್ಶೂರವು ದೇವದಾರು ಮರದಂತಿರುವದು

31 ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು:

“‘ನೀನು ಅತ್ಯಂತ ಪ್ರಭಾವಶಾಲಿ,
    ನಿನ್ನನ್ನು ಯಾರಿಗೆ ಹೋಲಿಸಲಿ?
ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ,
    ಸುಂದರವಾದ ಕೊಂಬೆಗಳಿಂದಲೂ
    ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ.
ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
ನೀರು ಆ ಮರವನ್ನು ಬೆಳೆಯುವಂತೆ ಮಾಡಿತು.
    ನದಿಯು ಅದನ್ನು ಎತ್ತರವಾಗುವಂತೆ ಮಾಡಿತು.
ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ.
    ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು,
    ಅದು ಅನೇಕ ಕೊಂಬೆಗಳನ್ನು ಬಿಟ್ಟಿತು.
ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ
    ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು.
    ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು.
ಆ ಮರದ ನೆರಳಿನಲ್ಲಿ
    ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
ಆ ಮರವು ಮನೋಹರವಾಗಿತ್ತು.
    ಅದು ದೊಡ್ಡದಾಗಿತ್ತು.
    ಅದರ ಕೊಂಬೆಗಳು ವಿಶಾಲವಾಗಿದ್ದವು.
    ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
ದೇವರ ತೋಟದಲ್ಲಿರುವ ದೇವದಾರು ಮರಗಳೂ
    ಈ ಮರದಷ್ಟು ಎತ್ತರವಾಗಿರಲಿಲ್ಲ.
ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ.
    ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು
    ಅಂದವಾಗಿ ಕಾಣುವಂತೆ ಮಾಡಿದೆನು.
ದೇವರ ತೋಟವಾಗಿರುವ ಏದೆನಿನಲ್ಲಿರುವ
    ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’”

10 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು. 11 ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು. 12 ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು. 13 ಕೆಳಗೆ ಬಿದ್ದ ಮರದ ಮೇಲೆ ಪಕ್ಷಿಗಳು ವಾಸಿಸಿದವು. ಕೆಳಗೆ ಬಿದ್ದ ಅದರ ಕೊಂಬೆಗಳ ಮೇಲೆ ಕಾಡುಪ್ರಾಣಿಗಳು ನಡೆದವು.

14 “ಈಗ ಆ ನೀರಿನ ಬಳಿಯಲ್ಲಿರುವ ಯಾವ ಮರಗಳೂ ಹೆಮ್ಮೆಪಡುವದಿಲ್ಲ. ಅವು ಮುಗಿಲನ್ನು ಮುಟ್ಟಲು ಪ್ರಯತ್ನಿಸುವದಿಲ್ಲ. ಚೆನ್ನಾಗಿ ಬೆಳೆದ ಮರಗಳು ಆ ನೀರನ್ನು ಕುಡಿದು ತಾನು ಉದ್ದವಾಗಿ ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವದಿಲ್ಲ. ಯಾಕೆಂದರೆ ಎಲ್ಲವೂ ಸಾಯುವುದಕ್ಕಾಗಿ ನೇಮಕಗೊಂಡಿವೆ. ಅವುಗಳೆಲ್ಲಾ ಮರಣದ ಸ್ಥಳವನ್ನು ಸೇರುವವು. ಅಲ್ಲಿ ಸತ್ತು, ಮರಣದ ಆ ಸ್ಥಳಕ್ಕೆ ಹೋಗಿ ಪಾತಾಳಕ್ಕೆ ಸೇರಿದವರನ್ನು ಸೇರುವವು.”

15 ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು. 16 ನಾನು ಆ ಮರವನ್ನು ಬೀಳಿಸಿದೆನು. ಬೀಳುವ ಅದರ ಶಬ್ದವನ್ನು ಕೇಳಿ ರಾಜ್ಯಗಳೆಲ್ಲಾ ಭಯದಿಂದ ನಡುಗಿದವು. ನಾನು ಆ ಮರವನ್ನು ಪಾತಾಳಕ್ಕೆ ಕಳುಹಿಸಿದೆನು. ಅದು ಹೋಗಿ ಅದಕ್ಕಿಂತ ಮೊದಲೇ ಆ ಆಳವಾದ ಗುಂಡಿಗೆ ಹೋಗಿರುವವರೊಂದಿಗೆ ಸೇರಿಕೊಂಡಿತು. ಗತಿಸಿದ ದಿವಸಗಳಲ್ಲಿ ಏದೆನಿನಲ್ಲಿದ್ದ ಎಲ್ಲಾ ಮರಗಳು, ಲೆಬನೋನಿನ ಉತ್ಕೃಷ್ಟ ಮರಗಳು ಆ ನೀರನ್ನು ಕುಡಿದಿದ್ದವು. ಅವೆಲ್ಲವೂ ಪಾತಾಳದಲ್ಲಿ ಸಂತೈಸಿಕೊಂಡವು. 17 ಹೌದು, ಆ ಮರವೂ ಅದರ ನೆರಳಿನ ಆಶ್ರಯವನ್ನು ಪಡೆದುಕೊಂಡಿದ್ದ ಅದರ ಎಲ್ಲಾ ಸಂತತಿಗಳವರೂ ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರೊಂದಿಗೆ ಇರುವದಕ್ಕಾಗಿ ಪಾತಾಳಕ್ಕೆ ಇಳಿದು ಹೋಗಿದ್ದವು.

18 “ಈಜಿಪ್ಟೇ, ಏದೆನಿನಲ್ಲಿ ಎಷ್ಟೋ ದೊಡ್ಡ, ಬಲಶಾಲಿಯಾಗಿರುವ ಮರಗಳಿವೆ. ಅದರ ಯಾವ ಮರಕ್ಕೆ ನಿನ್ನನ್ನು ಹೋಲಿಸಲಿ? ಅವೆಲ್ಲವೂ ಭೂಮಿಯ ಕೆಳಗೆ ಪಾತಾಳವನ್ನು ಸೇರಿದವು. ನೀನು ಕೂಡಾ ಆ ಪರದೇಶಸ್ಥರೊಂದಿಗೆ ಆ ಸ್ಥಳಕ್ಕೆ ಸೇರುವೆ. ರಣರಂಗದಲ್ಲಿ ಸತ್ತವರೊಂದಿಗೆ ನೀನು ಬಿದ್ದುಕೊಳ್ಳುವೆ.

“ಹೌದು, ಈ ರೀತಿಯಾಗಿ ಫರೋಹನಿಗೂ ಅವನೊಂದಿಗಿರುವ ಜನರ ಗುಂಪಿಗೂ ಆಗುವದು.” ಇದು ಒಡೆಯನಾದ ಯೆಹೋವನ ನುಡಿ.

ಫರೋಹನು ಮೃಗರಾಜನೋ, ಪೇರ್ಮೊಸಳೆಯೋ?

32 ಸೆರೆಹಿಡಿದ ಹನ್ನೆರಡನೇ ವರ್ಷದ, ಹನ್ನೆರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು:

“‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ.
    ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ.
ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ.
    ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ.
    ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ.
    ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು.
    ಆಗ ಅವರು ನಿನ್ನನ್ನು ಒಳಸೆಳೆಯುವರು.
ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು.
    ಹೊಲದ ಮೇಲೆ ನಿನ್ನನ್ನು ಬಿಸಾಡುವೆನು.
ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು.
    ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.
ಪರ್ವತಗಳ ಮೇಲೆ ನಿನ್ನ ದೇಹವನ್ನು ಬಿಸಾಡುವೆನು.
    ಬಯಲು ಪ್ರದೇಶವನ್ನು ನಿನ್ನ ಹೆಣಗಳಿಂದ ತುಂಬಿಸುವೆನು.
ನಿನ್ನ ರಕ್ತವನ್ನು ಪರ್ವತಗಳ ಮೇಲೆ ಚೆಲ್ಲುವೆನು,
    ಅದು ನೆಲವನ್ನು ಒದ್ದೆ ಮಾಡುವದು.
    ಹೊಳೆಗಳಲ್ಲಿ ನೀನು ತುಂಬಿರುವಿ.
ನೀನು ಕಾಣೆಯಾಗುವಂತೆ ನಾನು ಮಾಡುವೆನು.
    ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು.
ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು.
    ಚಂದ್ರನು ಪ್ರಕಾಶಿಸದಂತೆ ಮಾಡುವೆನು.
ನಿನ್ನ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನ್ನು ಮಂಕುಗೊಳಿಸುವೆನು;
    ನಿನ್ನ ದೇಶದಲ್ಲಿ ಕತ್ತಲನ್ನು ಬರಮಾಡುವೆನು”
ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.

“ನಿನ್ನನ್ನು ನಾಶಮಾಡಲು ನಾನು ನಿನ್ನ ಶತ್ರುವನ್ನು ಬರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನ್ನನ್ನು ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು. 10 ಅನೇಕ ಮಂದಿ ನಿನಗೆ ಸಂಭವಿಸಿದ್ದನ್ನು ನೋಡಿ ಚಕಿತರಾಗುವರು. ನಾನು ನಿನ್ನ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಬಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಬ್ಬ ರಾಜನು ತನ್ನ ಜೀವವನ್ನು ಉಳಿಸಿಕೊಳ್ಳಲು ಆತುರಪಡುವನು.”

11 ಯಾಕೆಂದರೆ ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಬಾಬಿಲೋನಿನ ರಾಜನ ಖಡ್ಗವು ನಿನ್ನೊಂದಿಗೆ ಯುದ್ಧಮಾಡಲು ಬರುವದು. 12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು. 13 ಈಜಿಪ್ಟಿನ ಹೊಳೆಯ ತೀರದಲ್ಲಿ ಅನೇಕ ಪ್ರಾಣಿಗಳಿವೆ. ನಾನು ಅವುಗಳನ್ನು ನಾಶಮಾಡುವೆನು. ಜನರು ಹೊಳೆಯ ನೀರನ್ನು ತಮ್ಮ ಕಾಲುಗಳಿಂದ ಕೆಸರಾಗಿ ಇನ್ನು ಮಾಡಲಾರರು. ದನಗಳ ಗೊರಸುಗಳು ನೀರನ್ನು ಕೆಸರನ್ನಾಗಿ ಮಾಡುವದಿಲ್ಲ. 14 ನಾನು ಈಜಿಪ್ಟಿನ ನೀರನ್ನು ತಿಳಿಗೊಳಿಸುವೆನು; ಅದರ ನದಿಗಳು ಎಣ್ಣೆಯಷ್ಟೇ ನಯವಾಗಿ ಹರಿಯುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು. 15 “ಈಜಿಪ್ಟ್ ದೇಶವನ್ನು ನಾನು ಬರಿದುಮಾಡುವೆನು. ಆ ದೇಶವು ಎಲ್ಲವನ್ನು ಕಳೆದುಕೊಳ್ಳುವದು. ಈಜಿಪ್ಟಿನಲ್ಲಿ ವಾಸಿಸುವ ಎಲ್ಲಾ ಜನರನ್ನು ನಾನು ಶಿಕ್ಷಿಸುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ತಿಳುಕೊಳ್ಳುವರು.

16 “ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

ಈಜಿಪ್ಟ್ ನಾಶವಾಗಲಿದೆ

17 ಸೆರೆಹಿಡಿಯಲ್ಪಟ್ಟ ಹನ್ನೆರಡನೆ ವರ್ಷದ, ಹನ್ನೆರಡನೆ ತಿಂಗಳಿನ, ಹದಿನೈದನೆಯ ದಿನದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು[a] ಸಮಾಧಿಗೆ ಕಳುಹಿಸು.

19 “ಈಜಿಪ್ಟೇ, ನೀನು ಬೇರೆಯವರಿಗಿಂತ ಉತ್ತಮಳೇನೂ ಅಲ್ಲ. ಮರಣದ ಸ್ಥಳಕ್ಕೆ ಹೋಗು. ಅಲ್ಲಿ ಪರದೇಶದವರೊಂದಿಗೆ ಹೋಗಿ ಬಿದ್ದುಕೊ. 20 ರಣರಂಗದಲ್ಲಿ ಮಡಿದ ಜನರೊಂದಿಗೆ ಈಜಿಪ್ಟ್ ಹೋಗುವದು. ಶತ್ರುಗಳು ಆಕೆಯನ್ನೂ ಆಕೆಯ ಜನರನ್ನೂ ಎಳೆದುಬಿಟ್ಟಿದ್ದಾರೆ.

21 “ಶೂರರು, ಬಲಶಾಲಿಗಳು ಯುದ್ಧದಲ್ಲಿ ಮಡಿದಿದ್ದಾರೆ, ಆ ಪರದೇಶಿಗಳು ಮರಣದ ಸ್ಥಳಕ್ಕೆ ಹೋದರು. ಅವರು ಅಲ್ಲಿದ್ದುಕೊಂಡು ಈಜಿಪ್ಟಿನವರೊಂದಿಗೆ ಮತ್ತು ಅದರ ಸಹಾಯಕರೊಂದಿಗೆ ಮಾತನಾಡುವರು.

22-23 “ಅಶ್ಶೂರವೂ ಅದರ ಎಲ್ಲಾ ಸೈನ್ಯವೂ ಆ ಪಾತಾಳದಲ್ಲಿರುವದು. ಅವರ ಸ್ಥಳವು ಆಳವಾದ ಗುಂಡಿಯಲ್ಲಿರುವದು. ಆ ಅಶ್ಶೂರದ ಸೈನಿಕರೆಲ್ಲಾ ರಣರಂಗದಲ್ಲಿ ಮಡಿದವರೇ. ಅವರ ಸಮಾಧಿಗಳು ಅಶ್ಶೂರದ ಸಮಾಧಿಯ ಸುತ್ತಮುತ್ತ ಇವೆ. ಅವರು ಜೀವಂತರಾಗಿರುವಾಗ ಜನರನ್ನು ಭೀತಿಗೊಳಿಸುತ್ತಿದ್ದರು. ಆದರೆ ಈಗ ಮೌನವಾಗಿದ್ದಾರೆ. ಅವರೆಲ್ಲಾ ಯುದ್ಧದಲ್ಲಿ ಸತ್ತರು.

24 “ಏಲಾಮು ಕೂಡಾ ಅಲ್ಲಿದೆ. ಆಕೆಯ ಸೈನ್ಯವೆಲ್ಲಾ ಆಕೆಯ ಸಮಾಧಿಯ ಸುತ್ತಲಿದೆ. ಅವರೆಲ್ಲಾ ಯುದ್ಧದಲ್ಲಿ ಮಡಿದರು. ಆ ಪರದೇಶದವರು ಪಾತಾಳವನ್ನು ಸೇರಿದರು. ಅವರು ಜೀವಿಸಿದ್ದಾಗ ಜನರನ್ನು ಭಯಗೊಳಿಸಿದರು. ಆದರೆ ಈಗ ನಾಚಿಕೆಯೊಂದಿಗೆ ಅವರು ಪಾತಾಳವನ್ನು ಸೇರಿದರು. 25 ಏಲಾಮ್ ಮತ್ತು ಯುದ್ಧದಲ್ಲಿ ಮಡಿದ ಅದರ ಎಲ್ಲಾ ಸೈನಿಕರಿಗೂ ಅಲ್ಲಿ ಅವರು ಹಾಸಿಗೆಯನ್ನು ಸಿದ್ಧಮಾಡಿದರು. ಏಲಾಮಿನ ಸೈನ್ಯವು ಅದರ ಸಮಾಧಿಯ ಸುತ್ತಲೂ ಇವೆ. ಅವರೆಲ್ಲಾ ರಣರಂಗದಲ್ಲಿ ಸತ್ತವರು. ಅವರು ಜೀವದಿಂದಿರುವಾಗ ಜನರನ್ನು ಹೆದರಿಸಿದ್ದರು. ಆದರೆ ಅವರೀಗ ತಮ್ಮ ನಾಚಿಕೆಯೊಂದಿಗೆ ಪಾತಾಳ ಸೇರಿದ್ದಾರೆ. ಅವರು ಸತ್ತವರೊಂದಿಗೆ ಸೇರಿರುತ್ತಾರೆ.

26 “ಮೆಷಕ್, ತೂಬಲ್ ಮತ್ತು ಅವರ ಎಲ್ಲಾ ಸೈನ್ಯದವರು ಅಲ್ಲಿದ್ದಾರೆ. ಅವರ ಸಮಾಧಿಗಳು ಸುತ್ತಲೂ ಇವೆ. ಅವರೆಲ್ಲಾ ಯುದ್ಧದಲ್ಲಿ ಸತ್ತವರು. ಅವರು ಜೀವಿಸಿದ್ದಾಗ ಜನರಿಗೆ ಹೆದರಿಕೆಯನ್ನು ಉಂಟುಮಾಡಿದ್ದರು. 27 ಈಗ ಅವರು ಬಹಳ ಕಾಲದ ಹಿಂದೆ ಸತ್ತ ವೀರರೊಂದಿಗೆ ಬಿದ್ದುಕೊಂಡಿದ್ದಾರೆ. ಅವರು ತಮ್ಮ ಆಯುಧಗಳೊಂದಿಗೆ ಹೂಣಿಡಲ್ಪಟ್ಟರು. ಅವರ ತಲೆಯ ಕೆಳಗೆ ಅವರ ಕತ್ತಿಯು ಇಡಲ್ಪಟ್ಟಿತ್ತು. ಆದರೆ ಅವರ ಪಾಪವು ಅವರ ಎಲುಬುಗಳಲ್ಲಿವೆ. ಯಾಕೆಂದರೆ ಅವರು ಜೀವಿಸಿದ್ದಾಗ ಜನರನ್ನು ಭಯಪಡಿಸಿದರು.

28 “ಈಜಿಪ್ಟೇ, ನೀನೂ ಸಹ ನಾಶಮಾಡಲ್ಪಡುವೆ. ನೀನೂ ಆ ಪರದೇಶದವರೊಂದಿಗೆ ಬಿದ್ದುಕೊಂಡಿರುವೆ. ಯುದ್ಧದಲ್ಲಿ ಸತ್ತ ಸೈನಿಕರೊಂದಿಗೆ ನೀನು ಮಲಗುವೆ.

29 “ಎದೋಮನೂ ಅಲ್ಲಿರುವನು. ಅವನ ರಾಜರೂ ಹಿರಿಯರೂ ಅಲ್ಲಿರುವರು. ಅವರೆಲ್ಲಾ ವೀರರಾಗಿದ್ದರೂ ಈ ಬೇರೆ ಜನರೊಂದಿಗೆ ಮಲಗಿದ್ದಾರೆ; ಆ ಪರದೇಶದವರೊಂದಿಗೆ ಪಾತಾಳದಲ್ಲಿ ಬಿದ್ದುಕೊಂಡಿದ್ದಾರೆ.

30 “ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಬಲವು ಜನರನ್ನು ಭಯಗ್ರಸ್ತರನ್ನಾಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನ್ನು ಸೇರಿದ್ದಾರೆ.

31 “ಪಾತಾಳಕ್ಕೆ ಸೇರಿದ ಜನರನ್ನು ಫರೋಹನು ನೋಡುವನು. ಅವನೂ ಅವನೊಂದಿಗಿರುವ ಜನರೂ ಸಮಾಧಾನ ಹೊಂದುವರು. ಹೌದು, ಫರೋಹನೂ ಅವನ ಎಲ್ಲಾ ಸೈನಿಕರೂ ಯುದ್ಧದಲ್ಲಿ ಸಾಯುವರು.” ಇದು ಒಡೆಯನಾದ ಯೆಹೋವನ ನುಡಿ.

32 “ಫರೋಹನು ತನ್ನ ಕಾಲದಲ್ಲಿ ಜನರನ್ನು ಭಯಗೊಳಿಸಿದ್ದನು. ಈಗಲಾದರೋ, ಫರೋಹನೂ ಅವನ ಸೈನಿಕರೂ ಪರದೇಶದವರೊಂದಿಗೆ ಮತ್ತು ಯುದ್ಧದಲ್ಲಿ ಹತರಾದವರೊಂದಿಗೆ ಬಿದ್ದುಕೊಳ್ಳುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

ಇಸ್ರೇಲಿನ ಕಾವಲುಗಾರನಾಗಿ ದೇವರು ಯೆಹೆಜ್ಕೇಲನನ್ನು ಆರಿಸಿದ್ದು

33 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನಿನ್ನ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನ್ನು ಬರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಬ್ಬ ಕಾವಲುಗಾರನನ್ನು ಆರಿಸುವರು. ಈತನು ಶತ್ರು ಸೈನ್ಯವನ್ನು ನೋಡಿದಾಕ್ಷಣ ತನ್ನ ತುತ್ತೂರಿಯನ್ನೂದಿ ಜನರನ್ನು ಎಚ್ಚರಿಸುವನು. ಜನರು ಅದನ್ನು ಕೇಳಿದರೂ ಅಲಕ್ಷ್ಯ ಮಾಡಿದಾಗ ಶತ್ರುವು ಬಂದು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆಗ ಅವರ ಮರಣಕ್ಕೆ ಅವರೇ ಕಾರಣರಾಗುವರು. ಅವನು ತುತ್ತೂರಿಯ ಶಬ್ದ ಕೇಳಿದನು. ಆದರೆ ಅದನ್ನು ಅಲಕ್ಷಿಸಿದನು. ಆದ್ದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಆ ಎಚ್ಚರಿಕೆಯ ಶಬ್ದಕ್ಕೆ ಗಮನವನ್ನು ಕೊಟ್ಟಿದ್ದರೆ ಅವನು ಬದುಕುತ್ತಿದ್ದನು.

“‘ಆದರೆ ವೈರಿಯು ಬರುವಂತದ್ದನ್ನು ಆ ಕಾವಲುಗಾರನು ಕಂಡರೂ, ಜನರನ್ನು ಎಚ್ಚರಿಸಲು ತುತ್ತೂರಿಯನ್ನು ಊದದಿದ್ದರೆ ವೈರಿಯು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆ ಮನುಷ್ಯನು ಪಾಪಮಾಡಿದ್ದರಿಂದ ಆ ಶಿಕ್ಷೆಯು ಅವನಿಗೆ ದೊರಕಿತು. ಆದರೆ, ಕಾವಲುಗಾರನು ಕೂಡಾ ಅವನ ಮರಣಕ್ಕೆ ಕಾರಣನಾಗುವನು.’

“ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.

ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ

10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.

11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’

12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’

13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.

14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.

17 “ಆದರೆ ನಿನ್ನ ಜನರು, ‘ಅದು ನ್ಯಾಯವಲ್ಲ. ನನ್ನ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು.

“ಅಂಥ ಜನರೇ ನ್ಯಾಯವಂತರಲ್ಲ. ಅವರೇ ಬದಲಾಗಬೇಕು. 18 ಒಬ್ಬ ಒಳ್ಳೆಯ ಮನುಷ್ಯನು ತನ್ನ ಶಿಷ್ಟತ್ವವನ್ನು ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು. 19 ಆದರೆ ಒಬ್ಬ ಪಾಪಿ ತನ್ನ ದುಷ್ಟತನವನ್ನು ಬಿಟ್ಟು ನೀತಿವಂತನಾಗಿ ಬಾಳಿದರೆ ಅವನು ಜೀವಿಸುವನು. 20 ಆದರೆ ನಾನು ನ್ಯಾಯವಂತನಲ್ಲ, ಎಂದು ನೀವು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಬ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”

ಜೆರುಸಲೇಮ್ ವಶಮಾಡಲ್ಪಟ್ಟಿತು

21 ಸೆರೆಯ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೇ ದಿವಸದಲ್ಲಿ ಜೆರುಸಲೇಮಿನಿಂದ ಒಬ್ಬನು ನನ್ನ ಬಳಿಗೆ ಬಂದನು. ಅವನು ರಣರಂಗದಿಂದ ತಪ್ಪಿಸಿಕೊಂಡು ಬಂದಾತನು. ಅವನು, “ನಗರವು ಪರಾಧೀನವಾಯಿತು” ಎಂದು ಹೇಳಿದನು.

22 ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು. 23 ಆಗ ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 24 “ನರಪುತ್ರನೇ, ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳಲ್ಲಿ ಇಸ್ರೇಲ್ ಜನರು ವಾಸಿಸುತ್ತಿದ್ದಾರೆ. ಅವರು ಹೇಳುವುದೇನೆಂದರೆ, ‘ಅಬ್ರಹಾಮನು ಒಬ್ಬನೇ. ಈ ದೇಶವನ್ನೆಲ್ಲಾ ದೇವರು ಅವನಿಗೆ ಕೊಟ್ಟನು. ನಾವು ಈಗ ಬಹಳ ಮಂದಿ ಇದ್ದೇವೆ. ಆದ್ದರಿಂದ ಖಂಡಿತವಾಗಿ ಈ ದೇಶ ನಮಗೇ ಸೇರಿದ್ದಾಗಿದೆ.’

25 “ನೀನು ಅವರಿಗೆ ಹೀಗೆ ಹೇಳಬೇಕು. ನಿಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ರಕ್ತವಿರುವ ಮಾಂಸವನ್ನು ತಿನ್ನುತ್ತೀರಿ. ನಿಮ್ಮ ಸಹಾಯಕ್ಕಾಗಿ ನೀವು ವಿಗ್ರಹಗಳಿಗೆ ಮೊರೆಯಿಡುತ್ತೀರಿ. ನೀವು ನರಹತ್ಯೆ ಮಾಡುತ್ತೀರಿ. ಹೀಗೆ ಇರುವದರಿಂದ ನಾನು ಈ ದೇಶವನ್ನು ನಿಮಗೆ ಹೇಗೆ ಕೊಡಲಿ? 26 ನೀವು ನಿಮ್ಮ ಕತ್ತಿಯ ಮೇಲೆ ಭರವಸೆಯಿಡುತ್ತೀರಿ. ಪ್ರತಿಯೊಬ್ಬನು ಭಯಂಕರವಾದ ಕೃತ್ಯಗಳನ್ನು ನಡಿಸುತ್ತಾನೆ. ನಿಮ್ಮ ನೆರೆಯವನ ಹೆಂಡತಿಯೊಂದಿಗೆ ಸಂಭೋಗಿಸುವಿರಿ. ಆದ್ದರಿಂದ ನೀವು ಈ ದೇಶವನ್ನು ಹೊಂದಲಾರಿರಿ.’

27 “‘ನೀನು ಅವರಿಗೆ ನಿಮ್ಮ ಒಡೆಯನಾದ ಯೆಹೋವನು ಹೀಗೆ ಹೇಳಿದನೆಂದು ತಿಳಿಸಬೇಕು, “ನನ್ನ ಜೀವದಾಣೆ, ಕೆಡವಲ್ಪಟ್ಟ ಪಟ್ಟಣಗಳಲ್ಲಿ ವಾಸಿಸುವ ಜನರು ಕೊಲ್ಲಲ್ಪಡುವರು. ಯಾರಾದರೂ ಪಟ್ಟಣದ ಹೊರಗೆ ಹೋಗಿದ್ದಲ್ಲಿ ಅವರನ್ನು ಕಾಡುಪ್ರಾಣಿಗಳು ತಿನ್ನುವಂತೆ ಮಾಡುವೆನು. ಯಾರಾದರೂ ಕೋಟೆಯೊಳಗಾಗಲಿ ಗುಹೆಯೊಳಗಾಗಲಿ ಸೇರಿಕೊಂಡರೆ ಅವರು ರೋಗದಿಂದ ಸಾಯುವರು. 28 ನಾನು ಈ ದೇಶವನ್ನು ಬರಿದಾಗಿಯೂ ಬಂಜರು ಭೂಮಿಯನ್ನಾಗಿಯೂ ಮಾಡುವೆನು. ಈ ದೇಶವು ಹೆಮ್ಮೆಪಟ್ಟುಕೊಳ್ಳುತ್ತಿದ್ದ ವಿಷಯಗಳನ್ನೆಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಬೋಳುಗುಡ್ಡಗಳಾಗುವವು. ಯಾರೂ ಅದನ್ನು ದಾಟಿ ಹೋಗಲಾರರು. 29 ಅವರು ಅನೇಕ ಭಯಂಕರ ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ರಾಜ್ಯವನ್ನು ಬಂಜರು ಭೂಮಿಯನ್ನಾಗಿ ಮಾಡುವೆನು. ಆಗ ಈ ಜನರು ನಾನು ಯೆಹೋವನೆಂದು ತಿಳಿದುಕೊಳ್ಳುವರು.”

30 “‘ನರಪುತ್ರನೇ, ನಿನ್ನ ವಿಷಯದಲ್ಲಿ ನಿನ್ನ ಜನರು ಗೋಡೆಗೆ ಒರಗಿಕೊಂಡೂ ಬಾಗಿಲಿನ ನಡುವೆ ನಿಂತುಕೊಂಡೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು, “ಬನ್ನಿ, ಯೆಹೋವನು ಹೇಳುವುದನ್ನು ನಾವು ಹೋಗಿ ಕೇಳೋಣ” 31 ಎಂದು ಹೇಳುತ್ತಾ ನಿನ್ನ ಬಳಿಗೆ ನನ್ನ ಜನರಂತೆ ಬರುವರು. ನನ್ನ ಜನರಂತೆ ನಿನ್ನ ಎದುರಿನಲ್ಲಿ ಬಂದು ಕುಳಿತುಕೊಳ್ಳುವರು. ನಿನ್ನ ಮಾತುಗಳನ್ನು ಅವರು ಕೇಳಿದರೂ ಅವುಗಳಿಗೆ ವಿಧೇಯರಾಗದೆ ಇಷ್ಟಪಡುವದನ್ನೆ ಮಾಡುವರು. ಇತರರಿಗೆ ಮೋಸ ಮಾಡಿ ಹಣಗಳಿಸುವದೇ ಅವರ ಕೆಲಸ.

32 “‘ನೀನು ಅವರಿಗೆ ಏನೂ ಅಲ್ಲ. ಒಬ್ಬ ಪ್ರೇಮಗೀತೆಯನ್ನು ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನ್ನು ಚೆನ್ನಾಗಿ ಬಾರಿಸುವಿ. ಅವರು ನಿನ್ನ ಮಾತುಗಳನ್ನು ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ. 33 ಆದರೆ ನೀನು ಹಾಡುವ ವಿಷಯಗಳು ಸಂಭವಿಸುವವು. ಆಗ ಜನರೂ, “ನಿಜವಾಗಿಯೂ ನಮ್ಮ ಮಧ್ಯೆ ಒಬ್ಬ ಪ್ರವಾದಿಯು ವಾಸಿಸಿದನಲ್ಲಾ?” ಎಂದು ಅನ್ನುವರು.’”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International