Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 25-27

ಅಮ್ಮೋನಿಗೆ ವಿರುದ್ಧ ಪ್ರವಾದನೆ

25 ಒಡೆಯನಾದ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೀಗೆ ಹೇಳಿದನು: “ನರಪುತ್ರನೇ, ಅಮ್ಮೋನಿನ ಕಡೆಗೆ ಮುಖಮಾಡಿ, ಅವರಿಗೆ ವಿರುದ್ಧವಾಗಿ ಪ್ರವಾದಿಸು. ಅಮ್ಮೋನಿಯರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನ ಮಾತುಗಳನ್ನು ಕೇಳಿರಿ. ಆತನು ಹೇಳುವುದೇನೆಂದರೆ, ನನ್ನ ಪವಿತ್ರಾಲಯವು ಅಪವಿತ್ರಗೊಂಡಾಗಲೂ ಇಸ್ರೇಲ್ ದೇಶವು ನಾಶವಾದಾಗಲೂ ಯೆಹೂದದ ಜನರು ಸೆರೆ ಒಯ್ಯಲ್ಪಟ್ಟಾಗಲೂ ನೀವು ಸಂತೋಷಪಟ್ಟಿರಿ. ಅದಕ್ಕಾಗಿ ನಾನು ನಿಮ್ಮನ್ನು ಪೂರ್ವದ ಜನರಿಗೆ ಬಿಟ್ಟುಕೊಡುವೆನು. ಅವರು ಬಂದು ನಿಮ್ಮ ದೇಶವನ್ನು ಕಿತ್ತುಕೊಳ್ಳುವರು. ಅವರ ಸೈನ್ಯವು ಬಂದು ನಿಮ್ಮ ದೇಶದೊಳಗೆ ಪಾಳೆಯ ಮಾಡುವದು. ಅವರು ನಿಮ್ಮ ಮಧ್ಯದಲ್ಲಿ ವಾಸಿಸಿ ನಿಮ್ಮ ಹಣ್ಣುಗಳನ್ನು ತಿಂದು ನಿಮ್ಮ ಹಾಲನ್ನು ಕುಡಿಯುವರು.

“‘ನಾನು ರಬ್ಬಾ ನಗರವನ್ನು ಒಂಟೆಗಳು ಮೇಯುವ ಸ್ಥಳವನ್ನಾಗಿಯೂ, ಅಮ್ಮೋನ್ ದೇಶವನ್ನು ಕುರಿಹಟ್ಟಿಯನ್ನಾಗಿಯೂ ಮಾಡುವೆನು. ಆಗ ನಾನು ಯೆಹೋವನೆಂದು ನಿಮಗೆ ಗೊತ್ತಾಗುವದು. ಯೆಹೋವನು ಹೇಳುವುದೇನೆಂದರೆ: ಜೆರುಸಲೇಮ್ ನಾಶವಾಯಿತೆಂದು ನೀವು ಸಂತೋಷಪಟ್ಟಿರಿ. ನೀವು ಚಪ್ಪಾಳೆತಟ್ಟಿ ಕಾಲಿನಿಂದ ನೆಲವನ್ನು ಬಡಿದಿರಿ. ಇಸ್ರೇಲ್ ದೇಶವನ್ನು ಕಡೆಗಣಿಸಿ ನಗಾಡಿದಿರಿ. ಅದಕ್ಕಾಗಿ ನಾನು ನಿಮ್ಮನ್ನು ದಂಡಿಸುವೆನು. ಜನಾಂಗಗಳಿಂದ ನಿಮ್ಮನ್ನು ಕೊಳ್ಳೆ ಹೊಡೆಸಿ ನಿರ್ಮೂಲ ಮಾಡುವೆನು. ದೇಶಗಳೊಳಗಿಂದ ನಿಮ್ಮ ಹೆಸರನ್ನು ಅಳಿಸಿಹಾಕುವೆನು; ನಿಮ್ಮನ್ನು ನಾಶಮಾಡುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.’”

ಮೋವಾಬ್ ಮತ್ತು ಸೇಯೀರ್ ವಿರುದ್ಧ ಪ್ರವಾದನೆ

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಮೋವಾಬ್ ಮತ್ತು ಸೇಯೀರ್, ‘ಯೆಹೂದ ಜನಾಂಗದವರು ಇತರ ಎಲ್ಲಾ ಜನಾಂಗಗಳವರಂತಿದ್ದಾರೆ.’ ಎಂದು ಹೇಳುತ್ತಾರೆ. ಮೋವಾಬಿನ ಗಡಿಯನ್ನು ಸಂರಕ್ಷಿಸುತ್ತಿರುವ ಪಟ್ಟಣಗಳು ಆಕ್ರಮಣಕ್ಕೆ ಗುರಿಯಾಗುವಂತೆ ಮಾಡುತ್ತೇನೆ. ಬೇತ್‌ಯೆಷೀಮೋತ್, ಬಾಳ್‌ಮೆಯೋನ್, ಕಿರ್ಯಾಥಯಿಮ್, ಅದರ ವೈಭವಯುತವಾದ ಸರಹದ್ದಿನ ಪಟ್ಟಣಗಳನ್ನು ನಾನು ತೆಗೆದುಹಾಕುವೆನು. 10 ಪೂರ್ವದಿಕ್ಕಿನ ಜನರು ಮೋವಾಬನ್ನೂ ಅಮ್ಮೋನನ್ನೂ ಗೆದ್ದುಕೊಳ್ಳುವಂತೆ ನಾನು ಮಾಡುವೆನು. ಆಗ ಜನರು ಮೋವಾಬಿನವರನ್ನು ಮರೆತುಬಿಡುವರು. 11 ಹೀಗೆ ನಾನು ಮೋವಾಬನ್ನು ಶಿಕ್ಷಿಸುವೆನು. ಆಗ ನಾನೇ ಯೆಹೋವನೆಂದು ಅವರು ತಿಳಿಯುವರು.”

ಎದೋಮ್ ವಿರುದ್ಧ ಪ್ರವಾದನೆಗಳು

12 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “ಎದೋಮ್ಯರು ಯೆಹೂದದ ಜನರು ಮೇಲೆ ಕ್ರೂರವಾದ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರ ಮೇಲೆ ಸತತವಾಗಿ ಸೇಡು ತೀರಿಸಿಕೊಳ್ಳುವುದರ ಮೂಲಕ ಎದೋಮ್ಯರು ಮಹಾಪರಾಧ ಮಾಡಿದ ದೋಷಿಗಳಾಗಿದ್ದಾರೆ.” 13 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದೋಮನ್ನು ಶಿಕ್ಷಿಸುವೆನು. ಎದೋಮಿನ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆನು. ತೇಮಾನಿನಿಂದ ಹಿಡಿದು ದೆದಾನ್‌ತನಕ ಆ ದೇಶವನ್ನೆಲ್ಲಾ ನಾಶಮಾಡುವೆನು. ಎದೋಮ್ಯರು ರಣರಂಗದಲ್ಲಿ ಸಾಯುವರು. 14 ನಾನು ನನ್ನ ಇಸ್ರೇಲ್ ಜನರನ್ನು ಉಪಯೋಗಿಸಿ ಎದೋಮ್ಯರಿಗೆ ಮುಯ್ಯಿ ತೀರಿಸುವೆನು. ಈ ರೀತಿಯಾಗಿ ಎದೋಮಿನ ಮೇಲಿರುವ ನನ್ನ ಕೋಪವನ್ನು ಇಸ್ರೇಲರು ಅವರಿಗೆ ತೋರಿಸುವರು. ಆಗ ಎದೋಮ್ಯರು ನಾನು ಅವರನ್ನು ಶಿಕ್ಷಿಸಿದ್ದೇನೆಂದು ತಿಳಿದುಕೊಳ್ಳುವರು.” ಇದು ನನ್ನ ಒಡೆಯನಾದ ಯೆಹೋವನ ವಾಕ್ಯ.

ಫಿಲಿಷ್ಟಿಯರ ವಿರುದ್ಧ ಪ್ರವಾದನೆಗಳು

15 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಫಿಲಿಷ್ಟಿಯರು ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ಆವೇಶದಿಂದ ತಿರಸ್ಕರಿಸಿ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ತಮ್ಮ ದೀರ್ಘಕಾಲದ ದ್ವೇಷದಿಂದ ನಾಶನವು ಬರುವಂತೆ ಮಾಡಿದ್ದಾರೆ.” 16 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನಾನು ಫಿಲಿಷ್ಟಿಯರನ್ನು ಶಿಕ್ಷಿಸುವೆನು, ಹೌದು, ಕೆರೇತದ ಆ ಜನರನ್ನು ನಾಶಮಾಡುವೆನು. ಸಮುದ್ರ ಕರಾವಳಿಯಲ್ಲಿ ವಾಸಿಸುವ ಉಳಿದ ಜನರನ್ನೆಲ್ಲಾ ನಾಶಮಾಡುವೆನು. 17 ನಾನು ಅವರೊಂದಿಗೆ ಮುಯ್ಯಿತೀರಿಸಿಕೊಳ್ಳುವೆನು. ನನ್ನ ಕೋಪವು ಅವರಿಗೆ ಪಾಠ ಕಲಿಸುವದು. ನಾನು ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ತೂರಿನ ಬಗ್ಗೆ ದುಃಖಕರವಾದ ವಾರ್ತೆ

26 ದೇಶ ಭ್ರಷ್ಟರಾಗಿದ್ದ ಹನ್ನೊಂದನೇ ವರ್ಷದ ತಿಂಗಳ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಜೆರುಸಲೇಮ್ ಬಗ್ಗೆ ತೂರ್ ಕೆಟ್ಟ ಮಾತುಗಳನ್ನಾಡಿದೆ. ‘ಜನರನ್ನು ಸುರಕ್ಷಿತವಾಗಿರಿಸುವ ನಗರದ್ವಾರವು ಕೆಡವಲ್ಪಟ್ಟು ದ್ವಾರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”

ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ತೂರೇ, ನಾನು ನಿನಗೆ ಮ್ಯುಯಿತೀರಿಸುವೆನು. ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅನೇಕ ರಾಜ್ಯಗಳನ್ನು ಎಬ್ಬಿಸುತ್ತೇನೆ. ಅವರು ಸಮುದ್ರದ ತೆರೆಯಂತೆ ಮೇಲಿಂದ ಮೇಲೆ ನಿನಗೆ ವಿರುದ್ಧವಾಗಿ ಬರುವರು.”

ದೇವರು ಹೇಳಿದ್ದೇನೆಂದರೆ, “ಆ ಶತ್ರು ಸೈನಿಕರು ತೂರಿನ ಗೋಡೆಗಳನ್ನು ಕೆಡವಿ, ಅದರ ಬುರುಜುಗಳನ್ನು ಎಳೆದು ಹಾಕುವರು. ನಾನು ಅದರ ಫಲವತ್ತಾದ ಮಣ್ಣನ್ನು ಕೆರೆದುಹಾಕಿ, ಅದನ್ನು ಬರಿದಾದ ಬಂಡೆಯನ್ನಾಗಿ ಬಿಟ್ಟುಬಿಡುವೆನು. ಬೆಸ್ತರು ತಮ್ಮ ಬಲೆಗಳನ್ನು ಹರಡಿ ಒಣಗಿಸುವ ಸ್ಥಳವನ್ನಾಗಿ ಮಾಡುವೆನು. ಇದು ನನ್ನ ನುಡಿ.” ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಸೈನಿಕರು ಯುದ್ಧದ ಸಮಯದಲ್ಲಿ ಬೆಲೆಬಾಳುವ ವಸ್ತುವನ್ನು ಕೊಳ್ಳೆ ಮಾಡುವಂತೆ ತೂರ್ ಇದೆ. ಆಕೆಯ ಹೆಣ್ಣುಮಕ್ಕಳು (ಚಿಕ್ಕ ಪಟ್ಟಣಗಳು) ಯುದ್ಧದಲ್ಲಿ ಕೊಲ್ಲಲ್ಪಡುವರು. ನಾನು ಯೆಹೋವನೆಂದು ಆಗ ತಿಳಿಯುವರು.”

ನೆಬೂಕದ್ನೆಚ್ಚರನು ತೂರಿನ ಮೇಲೆ ಧಾಳಿ ಮಾಡುವನು

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಉತ್ತರ ದಿಕ್ಕಿನಿಂದ ಒಬ್ಬ ಶತ್ರುವನ್ನು ನಾನು ತೂರಿಗೆ ವಿರುದ್ಧವಾಗಿ ಬರಮಾಡುವೆನು. ಅವನೇ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು. ಅವನು ಲೆಕ್ಕವಿಲ್ಲದಷ್ಟು ಕುದುರೆ ಸವಾರರು, ರಥಗಳು, ಕಾಲ್ಬಲವುಳ್ಳ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಬರುವನು. ಅವನ ಸೈನಿಕರೆಲ್ಲಾ ಬೇರೆಬೇರೆ ಜನಾಂಗದವರು. ನೆಬೂಕದ್ನೆಚ್ಚರನು ನಿನ್ನ ಹೆಣ್ಣುಮಕ್ಕಳನ್ನು (ಚಿಕ್ಕ ಪಟ್ಟಣಗಳನ್ನು) ಕೊಲ್ಲುವನು. ಅವನು ಬುರುಜುಗಳನ್ನು ಕಟ್ಟಿ ನಿನ್ನ ನಗರವನ್ನು ಧಾಳಿ ಮಾಡುವನು. ನಿನ್ನ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನ್ನು ತಯಾರಿಸುವನು. ಅವನು ಮರದ ತೊಲೆಗಳನ್ನು ತಂದು ನಿನ್ನ ಗೋಡೆಗಳನ್ನು ಕೆಡವಿಬಿಡುವನು. ಗುದ್ದಲಿಗಳಿಂದ ನಿನ್ನ ಬುರುಜುಗಳನ್ನು ಕೆಡವಿಹಾಕುವನು. 10 ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನ್ನನ್ನು ಮುಚ್ಚಿಬಿಡುವದು. ಅವರ ರಾಹುತರ, ಚಕ್ಕಡಿಗಳ, ರಥಗಳ ಶಬ್ದದಿಂದ ನಿನ್ನ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು. 11 ಬಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನ್ನ ನಗರದೊಳಗೆ ಪ್ರವೇಶಮಾಡುವನು. ನಿನ್ನ ರಸ್ತೆಗಳ ಮೇಲೆ ಅವನ ಕುದುರೆಯ ಗೊರಸು ಶಬ್ದವೇರಿಸುವದು. ನಿನ್ನನ್ನು ತನ್ನ ಖಡ್ಗದಿಂದ ಸಂಹರಿಸುವನು. ನಿನ್ನ ನಗರದಲ್ಲಿನ ಉನ್ನತಸ್ತಂಭಗಳು ಕೆಡವಲ್ಪಡುವವು, 12 ನೆಬೂಕದ್ನೆಚ್ಚರನ ಸೈನ್ಯವು ನಿನ್ನ ಐಶ್ವರ್ಯವನ್ನು ದೋಚಿಕೊಳ್ಳುವದು. ನೀನು ಮಾರಬೇಕೆಂದಿದ್ದ ವಸ್ತುಗಳನ್ನು ಅವರು ದೋಚಿಕೊಳ್ಳುವರು. ನಿನ್ನ ಗೋಡೆಗಳನ್ನು ಒಡೆದು ಅಂದವಾದ ನಿನ್ನ ಮನೆಗಳನ್ನು ಹಾಳು ಮಾಡುವರು. ನಿನ್ನ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನ್ನು ಕಸದಂತೆ ಸಮುದ್ರಕ್ಕೆ ಎಸೆಯುವರು. 13 ನಿನ್ನ ಸಂತಸದ ಹಾಡುಗಳನ್ನು ನಾನು ನಿಲ್ಲಿಸಿಬಿಡುವೆನು. ನಿನ್ನ ಕಿನ್ನರಿ ಸ್ವರವನ್ನು ಜನರು ಇನ್ನೆಂದೂ ಕೇಳರು. 14 ನಾನು ನಿನ್ನನ್ನು ಬರಿದಾದ ಬಂಡೆಯನ್ನಾಗಿ ಮಾಡುವೆನು. ಸಮುದ್ರದ ತೀರದಲ್ಲಿ ಬಲೆಗಳನ್ನು ಹರಡುವ ಸ್ಥಳವಾಗಿ ನೀನು ಮಾರ್ಪಡುವೆ. ನೀನು ತಿರುಗಿ ಕಟ್ಟಲ್ಪಡುವದಿಲ್ಲ. ಇದು ಒಡೆಯನಾದ ಯೆಹೋವನ ನುಡಿ.” ನನ್ನ ಒಡೆಯನಾದ ಯೆಹೋವನು ಇದನ್ನು ನನಗೆ ತಿಳಿಸಿದನು.

ಬೇರೆ ದೇಶಗಳವರು ತೂರ್ ದೇಶಕ್ಕಾಗಿ ಅಳುವರು

15 ಒಡೆಯನಾದ ಯೆಹೋವನು ತೂರಿಗೆ ಹೇಳುವುದೇನೆಂದರೆ, “ಭೂಮದ್ಯ ಸಮುದ್ರ ಕರಾವಳಿಯಲ್ಲಿರುವ ದೇಶದವರು ನೀನು ಕೆಳಗೆ ಬೀಳುವ ಶಬ್ದ ಕೇಳಿ ನಡುಗುವರು. ಅದು ನಿನ್ನ ಜನರು ಗಾಯಗೊಂಡು ಸಾಯುವಾಗ ಆಗುವದು. 16 ಆಗ ಸಮುದ್ರ ತೀರದ ದೇಶಗಳ ನಾಯಕರೆಲ್ಲಾ ತಮ್ಮ ಸಿಂಹಾಸನದಿಂದ ಕೆಳಗಿಳಿದು ತಮ್ಮ ಶೋಕವನ್ನು ವ್ಯಕ್ತಪಡಿಸುವರು. ಅವರು ತಮ್ಮ ಸುಂದರವಾದ ರಾಜವಸ್ತ್ರಗಳನ್ನು ತೆಗೆದಿಟ್ಟು ಭಯದ ಬಟ್ಟೆಗಳನ್ನು ಧರಿಸಿಕೊಂಡು ನೆಲದ ಮೇಲೆ ಭಯದಿಂದ ಕುಳಿತುಕೊಳ್ಳುವರು. ನೀನು ಎಷ್ಟು ಬೇಗನೇ ನಾಶವಾದೆ ಎಂದು ಕೇಳಿ ದಂಗುಬಡಿದಂತಾಗುವರು. 17 ಅವರು ನಿನ್ನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು:

“‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ.
    ನಿನ್ನಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಬಂದರು.
ನೀನು ಪ್ರಸಿದ್ಧಳಾಗಿದ್ದೆ,
    ಆದರೆ ನೀನೀಗ ಹೋಗಿಬಿಟ್ಟೆ.
ದ್ವೀಪವಾಗಿರುವ ನೀನು ಮತ್ತು ನಿನ್ನಲ್ಲಿ ವಾಸವಾಗಿದ್ದ ಜನರು
    ಸಮುದ್ರದಿಂದ ದೂರದಲ್ಲಿರುವುದರಿಂದ ಬಲಿಷ್ಠರಾಗಿದ್ದೀರಿ.
ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನ್ನು ನೀವು ಭಯಗೊಳಿಸಿದಿರಿ.
18 ನೀನು ಬಿದ್ದ ದಿವಸ
    ಕರಾವಳಿಯಲ್ಲಿರುವ ದೇಶಗಳೆಲ್ಲಾ ನಡುಗುವವು.
ನೀನು ಕರಾವಳಿಯಲ್ಲಿ ಅನೇಕ ವಸಾಹತುಗಳನ್ನು ನಿರ್ಮಿಸಿದ್ದೀ.
    ನೀನು ಹೋದ ಬಳಿಕ ಅವರು ಭಯಗ್ರಸ್ತರಾಗುವರು.’”

19 ಇದು ನನ್ನ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನ್ನನ್ನು ನಾಶಮಾಡುವೆನು. ಆಗ ನೀನು ಬರಿದಾದ ನಗರವಾಗಿರುವೆ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನ್ನ ಮೇಲೆ ಸಮುದ್ರವು ತುಂಬುವಂತೆ ಮಾಡುವೆನು. ಆ ಮಹಾಸಾಗರವು ನಿನ್ನನ್ನು ಮುಚ್ಚಿಬಿಡುವದು. 20 ಆಳವಾದ ಗುಂಡಿಗೆ, ಸತ್ತವರು ಹೋಗುವ ಸ್ಥಳಕ್ಕೆ ನಿನ್ನನ್ನು ಕಳುಹಿಸುವೆನು. ಬೇರೆ ಹಳೇ ನಗರಗಳಂತೆ ನಾನು ಭೂಮಿಯ ಕೆಳಗೆ ನಿನ್ನನ್ನು ಕಳುಹಿಸಿಬಿಡುವೆನು. ಸಮಾಧಿಯೊಳಗಿರುವವರೊಂದಿಗೆ ನೀನು ಇರುವೆ. ನಿನ್ನಲ್ಲಿ ಆಗ ಯಾರೂ ವಾಸ ಮಾಡುವದಿಲ್ಲ. ನೀನು ಎಂದಿಗೂ ಜೀವಿಸುವವರ ಲೋಕದಲ್ಲಿರುವದಿಲ್ಲ. 21 ನಿನಗಾದ ಸ್ಥಿತಿಯನ್ನು ನೋಡಿ ಬೇರೆ ಜನರು ಭಯಗ್ರಸ್ತರಾಗುವರು. ನಿನ್ನ ಅಂತ್ಯವು ಆಯಿತು. ಜನರು ನಿನಗಾಗಿ ಹುಡುಕಾಡುವರು. ಆದರೆ ಅವರು ನಿನ್ನನ್ನು ಕಂಡುಹಿಡಿಯುವುದೇ ಇಲ್ಲ.” ಇವು ಒಡೆಯನಾದ ಯೆಹೋವನ ಮಾತು.

ತೂರ್ ಒಂದು ದೊಡ್ಡ ವಾಣಿಜ್ಯ ಕೇಂದ್ರ

27 ಯೆಹೋವನ ವಾಕ್ಯವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು. ಅದರ ಬಗ್ಗೆ ಈ ರೀತಿಯಾಗಿ ಹೇಳು:

“‘ತೂರೇ, ನೀನು ಸಮುದ್ರಕ್ಕೆ ಬಾಗಿಲು.
    ಅನೇಕ ದೇಶಗಳಿಗೆ ನೀನು ವ್ಯಾಪಾರಿ.
    ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವೆ.’
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ತೂರೇ, ನೀನು ಅತಿ ಸುಂದರಳೆಂದು ಭಾವಿಸಿರುವೆ.
    ನೀನು ಪರಿಪೂರ್ಣ ಸುಂದರಳೆಂದು ತಿಳಿದಿರುವೆ.
ಭೂಮಧ್ಯ ಸಮುದ್ರವು ನಿನ್ನ ಸುತ್ತಲೂ ಮೇರೆಯಂತಿದೆ.
ನಿನ್ನನ್ನು ಕಟ್ಟಿದವರು ಅಂದವಾಗಿಯೇ ಕಟ್ಟಿದರು.
    ನಿನ್ನಿಂದ ಹೊರಡುವ ಹಡಗುಗಳಂತೆ ನೀನು ಸುಂದರವಾಗಿರುವೆ.
ನಿನ್ನನ್ನು ಕಟ್ಟಿದವರು ಸೆನೀರ್ ಬೆಟ್ಟದ
    ತುರಾಯಿ ಮರಗಳನ್ನು ಹಲಗೆಗಳಿಗಾಗಿ ಉಪಯೋಗಿಸಿದರು.
ಲೆಬನೋನಿನ ದೇವದಾರು ಮರವನ್ನು
    ಹಾಯಿ ಮರವನ್ನಾಗಿ ಉಪಯೋಗಿಸಿದರು.
ಬಾಷಾನಿನ ಅಲ್ಲೋನ್ ಮರಗಳಿಂದ
    ಹುಟ್ಟುಗಳನ್ನು ತಯಾರಿಸಿದರು.
ನಿನ್ನ ಮೇಲ್ಮಾಳಿಗೆಯನ್ನು ಕಿತ್ತೀಮ್ ದ್ವೀಪದ ತಿಲಕದ ಮರಗಳಿಂದ ಮಾಡಿದರು.
    ಅದನ್ನು ದಂತಗಳಿಂದ ಶೃಂಗರಿಸಿದರು.
ಈಜಿಪ್ಟಿನಲ್ಲಿ ತಯಾರಿಸಿದ ಬಣ್ಣದ ನಾರುಮಡಿಯನ್ನು
    ನಿನ್ನ ಹಾಯಿಗಳಿಗಾಗಿ ಉಪಯೋಗಿಸಿದರು.
    ಆ ಹಾಯಿಯು ನಿನ್ನ ಧ್ವಜವಾಯಿತು.
ನಿನ್ನ ಮೇಲ್ಮಾಳಿಗೆಯ ಹೊದಿಕೆಯು ನೀಲ ಮತ್ತು ಧೂಮ್ರ ವರ್ಣದವುಗಳಾಗಿದ್ದವು.
    ಅವು ಸೈಪ್ರಸ್ ದ್ವೀಪದಿಂದ ಬಂದವುಗಳಾಗಿದ್ದವು.
ಚೀದೋನ್ ಮತ್ತು ಅರ್ವಾದಿನ ಜನರು ನಿನ್ನ ಹಡಗುಗಳಿಗೆ ಹುಟ್ಟುಹಾಕುವವರಾಗಿದ್ದರು.
    ತೂರೇ, ನಿನ್ನ ಜ್ಞಾನಿಗಳು ಹಡಗುಗಳನ್ನು ನಡಿಸುವವರಾಗಿದ್ದರು.
ಗೆಬಲಿನ ಹಿರಿಯರೂ ಜ್ಞಾನಿಗಳೂ
    ನಿನ್ನ ಹಡಗುಗಳ ಬಿರುಕುಗಳನ್ನು ಸರಿಪಡಿಸುವವರಾಗಿದ್ದರು.
ಸಾಗರದ ಹಡಗುಗಳೂ ಅದರ ನಾವಿಕರೂ
    ನಿನ್ನೊಂದಿಗೆ ವ್ಯಾಪಾರ ಮಾಡಲು ಬಂದರು.

10 “‘ಪರ್ಶಿಯ, ಲೂದ್ ಮತ್ತು ಪೂಟ್‌ನ ಜನರು ನಿನ್ನ ಸೈನ್ಯದಲ್ಲಿರುವರು. ಅವರು ಯುದ್ಧವೀರರು. ಅವರು ನಿನ್ನ ಗೋಡೆಗಳಲ್ಲಿ ತಮ್ಮ ಗುರಾಣಿ ಮತ್ತು ಶಿರಸ್ತ್ರಾಣಗಳನ್ನು ತೂಗು ಹಾಕಿದರು. ನಿನ್ನ ನಗರಕ್ಕೆ ಘನತೆಯನ್ನು ಅವರು ತಂದರು. 11 ಅರ್ವಾದ್ ಮತ್ತು ಸಿಲಿಸಿಯಾದ ಜನರು ನಿನ್ನ ಕೋಟೆಗೋಡೆಗಳಲ್ಲಿ ಕಾವಲಿಗಿರುವರು. ಗಮ್ಮಾದಿನಿಂದ ಬಂದ ಜನರು ನಿನ್ನ ಬುರುಜುಗಳಲ್ಲಿರುವರು. ನಿನ್ನ ಸೌಂದರ್ಯವನ್ನು ಅವರು ಪರಿಪೂರ್ಣ ಮಾಡಿದರು.

12 “‘ತಾರ್ಷೀಷ್ ನಿನ್ನ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸ ಲೋಹಗಳನ್ನು ಕೊಟ್ಟು ನಿನ್ನಿಂದ ವಸ್ತುಗಳನ್ನು ಕೊಂಡುಕೊಂಡರು. 13 ಗ್ರೀಸ್, ತುರ್ಕಿ ಮತ್ತು ಕಪ್ಪು ಸಮುದ್ರದ ಸುತ್ತಲಿರುವ ದೇಶಗಳವರು ನಿನ್ನಲ್ಲಿಗೆ ವ್ಯಾಪಾರಕ್ಕಾಗಿ ಬಂದರು. ಅವರು ನಿನ್ನ ವಸ್ತುಗಳಿಗೆ ಬದಲಾಗಿ ಗುಲಾಮರನ್ನೂ ತಾಮ್ರವನ್ನೂ ಕೊಟ್ಟರು. 14 ತೋಗರ್ಮ ದೇಶದ ಜನರು ನೀನು ಮಾರುವ ವಸ್ತುಗಳಿಗೆ ಕುದುರೆ, ಯುದ್ಧದ ಕುದುರೆಗಳು, ಹೇಸರಕತ್ತೆಗಳನ್ನು ಬದಲಿಕೊಟ್ಟರು. 15 ರೋಧೆ ದ್ವೀಪದ ಜನರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ನೀನು ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡಿದಿ. ಜನರು ದಂತವನ್ನೂ ಬೀಟೆ ಮರಗಳನ್ನೂ ತಂದು ನಿನ್ನೊಂದಿಗೆ ವ್ಯಾಪಾರ ಮಾಡಿದರು. 16 ನಿನ್ನಲ್ಲಿ ಅನೇಕ ಬೆಲೆಬಾಳುವ ವಸ್ತುಗಳಿದ್ದುದರಿಂದ ಅರಾಮ್ ನಿನ್ನೊಂದಿಗೆ ವ್ಯಾಪಾರ ಮಾಡಿತು. ಅವರು ಇಂದ್ರನೀಲ, ಧೂಮ್ರ ಬಣ್ಣದ ಬಟ್ಟೆ, ಕಸೂತಿ ಕೆಲಸ, ನಯವಾದ ಬಟ್ಟೆ, ಹವಳ, ಕೆಂಪು ಹರಳು ಇತ್ಯಾದಿಗಳನ್ನು ಕೊಟ್ಟು ವಸ್ತುಗಳನ್ನು ನಿನ್ನಿಂದ ಕೊಂಡುಕೊಂಡರು.

17 “‘ಇಸ್ರೇಲ್ ಮತ್ತು ಯೆಹೂದ ದೇಶದವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನ್ನ ವಸ್ತುಗಳಿಗೆ ಗೋಧಿ, ಆಲೀವ್, ಅಂಜೂರ, ಜೇನು, ಎಣ್ಣೆ ಮತ್ತು ಮುಲಾಮುಗಳನ್ನು ಕೊಟ್ಟರು. 18 ದಮಸ್ಕವೂ ನಿನ್ನ ಒಳ್ಳೆಯ ಗಿರಾಕಿಯಾಗಿತ್ತು. ನೀನು ಸಂಪಾದಿಸಿಕೊಂಡಿದ್ದ ಅನೇಕ ಒಳ್ಳೆಯ ವಸ್ತುಗಳಿಗಾಗಿ ಅವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ಹೆಲ್ಬೋನಿನ ದ್ರಾಕ್ಷಾರಸವನ್ನು ಮತ್ತು ಉಣ್ಣೆಯನ್ನು ಆ ವಸ್ತುಗಳಿಗಾಗಿ ಮಾರಿದರು. 19 ಅಲ್ಲದೆ ಊಜಾಲಿನ ದ್ರಾಕ್ಷಾರಸವನ್ನು, ಉಕ್ಕನ್ನು, ದಾಲ್ಚಿನ್ನಿ ಮತ್ತು ಕಬ್ಬನ್ನು ಆ ವಸ್ತುಗಳಿಗಾಗಿ ವ್ಯಾಪಾರ ಮಾಡಿದರು. 20 ದೆದಾನಿನ ನಿನ್ನ ಜನರು ಒಳ್ಳೆಯ ವ್ಯಾಪಾರಸ್ಥರು. ಅವರು ಸವಾರಿ ಕುದುರೆಗಳನ್ನೂ ಜೇನನ್ನೂ ಬಟ್ಟೆಗಳನ್ನೂ ಕೊಟ್ಟು ಕೊಂಡುಕೊಂಡರು. 21 ಅರಾಬ್ಯರು ಮತ್ತು ಕೇದಾರಿನವರು ಕುರಿಮರಿಗಳನ್ನು, ಟಗರು ಮತ್ತು ಆಡುಗಳನ್ನು ಕೊಟ್ಟು ವ್ಯಾಪಾರ ಮಾಡಿದರು. 22 ಶೆಬ ಮತ್ತು ರಗ್ಮದ ವ್ಯಾಪಾರಿಗಳು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನಗೆ ಸಂಬಾರ ಜೀನಸು, ರತ್ನಗಳು ಮತ್ತು ಚಿನ್ನವನ್ನು ಬದಲಿಕೊಟ್ಟರು. 23 ಮತ್ತು ಹಾರಾನ್‌ಕನ್ನೆ, ಎದೆನ್, ಶೆಬದ ವ್ಯಾಪಾರಿಗಳು, ಅಶ್ಶೂರ್ ಮತ್ತು ಕಿಲ್ಮದ್ ಊರಿನವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. 24 ಅವರು ನಿನ್ನೊಂದಿಗೆ ಉತ್ತಮ ಬಟ್ಟೆಗಳು, ಕಸೂತಿ ಕೆಲಸಗಳು, ಬಣ್ಣಬಣ್ಣದ ಜಮಖಾನೆಗಳು, ಹುರಿದ ಹಗ್ಗಗಳು, ದೇವದಾರು ಮರಗಳಿಂದ ಮಾಡಿದ ವಸ್ತುಗಳು ಇವುಗಳೊಂದಿಗೆ ವ್ಯಾಪಾರ ನಡಿಸಿದರು. 25 ತಾರ್ಷೀಷಿನ ಹಡಗುಗಳು ನೀನು ಮಾರಿದ ವಸ್ತುಗಳನ್ನು ಕೊಂಡೊಯ್ದವು.

“‘ತೂರೇ, ನೀನು ಆ ಸರಕು ಸಾಗಾಣಿಕೆಯ ಹಡಗುಗಳಂತಿರುವೆ.
ಸಮುದ್ರಮಧ್ಯದಲ್ಲಿ ಅನೇಕ ಐಶ್ವರ್ಯಗಳಿಂದ ತುಂಬಿದವಳಾಗಿದ್ದೀ.
26 ನಿನ್ನನ್ನು ಹುಟ್ಟುಹಾಕುವವರು ಸಮುದ್ರದ ಬಹುದೂರ ನಿನ್ನನ್ನು ನಡಿಸಿದರು.
    ಆದರೆ ಪೂರ್ವದಿಂದ ಬಂದ ಬಲವುಳ್ಳ ಗಾಳಿಯು ನಿನ್ನನ್ನು ಮುರಿಯುವದು.
27 ನಿನ್ನ ಎಲ್ಲಾ ಐಶ್ವರ್ಯವು, ನಿನ್ನ ದಿನಸುಗಳು,
    ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಿಂಡಿಗಳನ್ನು ಭದ್ರಪಡಿಸುವವರು,
ನಿನ್ನ ವ್ಯಾಪಾರಿಗಳು, ನಿನ್ನ ಎಲ್ಲಾ ಸೈನಿಕರು, ನಿನ್ನ ಎಲ್ಲಾ ಸಿಬ್ಬಂದಿ ವರ್ಗದವರು
    ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿಹೋಗುವರು.

28 “‘ನಿನ್ನ ವ್ಯಾಪಾರಿಗಳನ್ನು ನೀನು ಬಹುದೂರ ಕಳುಹಿಸುವೆ.
    ಆ ಸ್ಥಳಗಳು ನಿನ್ನ ಹಡಗಿನ ನಾವಿಕನ ಕೂಗಾಟವನ್ನು ಕೇಳಿ ಭಯದಿಂದ ತತ್ತರಿಸುವವು.
29 ಹಡಗಿನ ಎಲ್ಲಾ ನಾವಿಕರು ನೀರಿಗೆ
    ಧುಮುಕಿ ಈಜುತ್ತಾ ದಡ ಸೇರುವರು.
30 ನಿನಗೋಸ್ಕರ ಅವರು ದುಃಖಿಸುತ್ತಾ ಅಳುವರು;
    ತಲೆಯ ಮೇಲೆ ಧೂಳನ್ನು ತೂರಿಕೊಂಡು ಬೂದಿರಾಶಿಯ ಮೇಲೆ ಹೊರಳಾಡುವರು.
31 ನಿನಗಾಗಿ ಶೋಕದಿಂದ ತಮ್ಮ ತಲೆಗಳನ್ನು ಬೋಳಿಸುವರು.
    ಶೋಕದ ಬಟ್ಟೆಗಳನ್ನು ಧರಿಸುವರು.
ತಮ್ಮ ಪ್ರಿಯರು ಸತ್ತಾಗ ಅಳುವಂತೆ ನಿನಗಾಗಿ ಅಳುವರು.

32 “‘ಅಳುತ್ತಾ ನಿನಗೆ ಈ ಶೋಕಗೀತೆಯನ್ನು ಹಾಡುವರು:

“‘ತೂರಿನಂತೆ ಯಾರಿಲ್ಲ.
    ಆದರೆ ತೂರ್ ಹಾಳಾಗಿಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.
33 ನಿನ್ನ ವ್ಯಾಪಾರಿಗಳು ಸಮುದ್ರದಾಚೆ ಹೋದರು;
ನೀನು ಅನೇಕರನ್ನು ತೃಪ್ತಿಗೊಳಿಸಿದಿ.
ನಿನ್ನ ಐಶ್ವರ್ಯದಿಂದಲೂ ನೀನು ಮಾರಿದ ಸರಕುಗಳಿಂದಲೂ
    ನೀನು ಲೋಕದ ರಾಜರನ್ನು ಐಶ್ವರ್ಯವಂತರನ್ನಾಗಿ ಮಾಡಿದಿ.
34 ನೀನು ಈಗ ಸಮುದ್ರದ ನೀರಿನಿಂದ ಮುರಿದುಬಿದ್ದಿರುವೆ.
    ಆಳವಾದ ನೀರಿನಲ್ಲಿ ಮುಳುಗಿಸಲ್ಪಟ್ಟಿರುವೆ.
ನೀನು ಮಾರುವ ಸರಕುಗಳೂ
    ನಿನ್ನ ಜನರೂ ಬಿದ್ದುಹೋದರು.
35 ಕರಾವಳಿಯಲ್ಲಿ ವಾಸಿಸುವ ಜನರೆಲ್ಲರೂ
    ನಿನ್ನ ವಾರ್ತೆಯನ್ನು ಕೇಳಿ ಚಕಿತರಾದರು.
ಅವರ ರಾಜರು ದಂಗುಬಡಿದವರಾಗಿ ಭಯಭೀತರಾಗುವರು.
36 ಬೇರೆ ದೇಶಗಳಲ್ಲಿರುವ ವ್ಯಾಪಾರಿಗಳು
    ಆಶ್ಚರ್ಯದಿಂದ ಸಿಳ್ಳು ಹಾಕಿದರು.
ನಿನಗೆ ಸಂಭವಿಸಿದ ವಿಷಯಗಳು ಜನರಿಗೆ ಭೀತಿಯನ್ನುಂಟುಮಾಡಿತು.
    ಯಾಕೆಂದರೆ ನಿನ್ನ ಕಥೆ ಮುಗಿಯಿತು.
    ನಿನಗೆ ಅಂತ್ಯವಾಯಿತು. ಇನ್ನು ನೀನು ಕಾಣುವದಿಲ್ಲ.’”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International