Beginning
ಕ್ಷಾಮ ಮತ್ತು ಸುಳ್ಳುಪ್ರವಾದಿಗಳು
14 ಇದು ಕ್ಷಾಮದ ಬಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:
2 “ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು.
ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಬರ್ಲರಾಗುತ್ತಾರೆ.
ಆ ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ.
ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
3 ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನ್ನು ಕಳುಹಿಸುತ್ತಾರೆ.
ಆ ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ.
ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ.
ಸೇವಕರು ಕೇವಲ ಪಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗಿ ಬರುತ್ತಾರೆ.
ಅವರು ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
4 ಭೂಮಿಗೆ ಮಳೆ ಬೀಳುವದಿಲ್ಲ.
ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ.
ರೈತರು ಎದೆಗುಂದುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
5 ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ
ಜಿಂಕೆಯು ತನ್ನ ಮರಿಯನ್ನು ಬಿಟ್ಟುಹೋಗುವದು.
6 ಕಾಡುಕತ್ತೆಗಳು ಬೋಳುಬೆಟ್ಟಗಳ ಮೇಲೆ ನಿಂತು
ನರಿಗಳಂತೆ[a] ಗಾಳಿಯನ್ನು ಮೂಸುತ್ತವೆ.
ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ.
ಏಕೆಂದರೆ ತಿನ್ನಬಹುದಾದ ಸಸಿಗಳು ಬೆಳೆದಿಲ್ಲ.”
7 “ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
8 ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
9 ನೀನು ಸ್ತಬ್ಧನಾಗಿರುವೆ;
ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
ನಾವು ನಿನ್ನ ಹೆಸರಿನವರಾಗಿದ್ದೇವೆ.
ಆದ್ದರಿಂದ ನಮ್ಮನ್ನು ಕೈಬಿಡಬೇಡ.”
10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”
11 ಆಗ ಯೆಹೋವನು, “ಯೆರೆಮೀಯನೇ, ಯೆಹೂದದ ಜನರ ಒಳಿತಿಗಾಗಿ ಪ್ರಾರ್ಥಿಸಬೇಡ. 12 ಯೆಹೂದದ ಜನರು ಉಪವಾಸ ವ್ರತವನ್ನು ಕೈಕೊಳ್ಳಬಹುದು ಮತ್ತು ನನಗೆ ಪ್ರಾರ್ಥನೆ ಮಾಡಬಹುದು. ಆದರೆ ನಾನು ಅವರ ಪ್ರಾರ್ಥನೆಗಳನ್ನು ಕೇಳುವದಿಲ್ಲ. ಅವರು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ ಸಹ ನಾನು ಅವರನ್ನು ಸ್ವಿಕರಿಸುವದಿಲ್ಲ. ನಾನು ಯುದ್ಧದಿಂದ ಯೆಹೂದದ ಜನರನ್ನು ನಾಶಮಾಡುತ್ತೇನೆ. ನಾನು ಅವರ ಆಹಾರವನ್ನು ಕಿತ್ತುಕೊಳ್ಳುತ್ತೇನೆ; ಯೆಹೂದದ ಜನರು ಉಪವಾಸದಿಂದ ಸಾಯುವಂತೆ ಮಾಡುತ್ತೇನೆ. ನಾನು ಅವರನ್ನು ಭಯಂಕರವಾದ ವ್ಯಾಧಿಗಳಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
13 ಆಗ ನಾನು ಯೆಹೋವನಿಗೆ, “ನನ್ನ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಬೇರೆಯದನ್ನೇ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಬಳಲುವದಿಲ್ಲ, ಯೆಹೋವನು ಈ ದೇಶದಲ್ಲಿ ನಿಮಗೆ ನೆಮ್ಮದಿಯನ್ನು ದಯಪಾಲಿಸುವನು’ ಎಂದು ಹೇಳುತ್ತಿದ್ದರು” ಎಂದೆನು.
14 ಆಗ ಯೆಹೋವನು ನನಗೆ, “ಯೆರೆಮೀಯನೇ, ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳುದರ್ಶನಗಳನ್ನು ನಿಷ್ಪ್ರಯೋಜಕವಾದ ಮಾಟಮಂತ್ರಗಳನ್ನು ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ. 15 ನನ್ನ ಹೆಸರಿನಲ್ಲಿ ಬೋಧನೆ ಮಾಡುತ್ತಿರುವ ಈ ಪ್ರವಾದಿಗಳ ಬಗ್ಗೆ ನಾನು ಹೇಳುವದು ಇಷ್ಟೇ. ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಆ ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ಈ ದೇಶದ ಮೇಲೆ ಧಾಳಿ ಮಾಡುವದಿಲ್ಲ. ಈ ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನ್ನು ಕೊಲ್ಲುತ್ತದೆ. 16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ.
17 “ಯೆರೆಮೀಯನೇ, ಯೆಹೂದದ ಜನರಿಗೆ
ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ[b] ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಿಗೆ ಹೋದರೆ ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ.
ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’”
19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.
15 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಯೆಹೂದದ ಜನರಿಗಾಗಿ ಪ್ರಾರ್ಥಿಸಿ, ಬೇಡಿಕೊಳ್ಳಲು ಮೋಶೆಯೂ ಸಮುವೇಲನೂ ಇದ್ದಿದ್ದರೂ ನಾನು ಈ ಜನರ ಬಗ್ಗೆ ಮರುಕಪಡುತ್ತಿರಲಿಲ್ಲ. ಯೆಹೂದದ ಜನರನ್ನು ನನ್ನಿಂದ ದೂರ ಕಳುಹಿಸು. ಅವರಿಗೆ ಹೋಗಲು ಹೇಳು. 2 ‘ನಾವು ಎಲ್ಲಿಗೆ ಹೋಗಬೇಕು’ ಎಂದು ಅವರು ಕೇಳಬಹುದು. ಯೆಹೋವನು ಹೀಗೆ ಹೇಳಿದ್ದಾನೆ ಎಂದು ನೀನು ಅವರಿಗೆ ಹೇಳು.
“‘ಕೆಲವು ಜನರು ಮರಣಹೊಂದಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಮರಣಹೊಂದುತ್ತಾರೆ.
ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಖಡ್ಗಗಳಿಗೆ ಬಲಿಯಾಗುತ್ತಾರೆ.
ಕೆಲವು ಜನರು ಹೊಟ್ಟೆಗೆ ಅನ್ನವಿಲ್ಲದೆ ಸಾಯಬೇಕು ಎಂದು ನಾನು ಗೊತ್ತುಮಾಡಿದ್ದೇನೆ.
ಅವರು ಹಸಿವಿನಿಂದ ಸಾಯುತ್ತಾರೆ.
ಕೆಲವು ಜನರನ್ನು ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ.
ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
3 ನಾನು ಅವರ ವಿರುದ್ಧ ನಾಲ್ಕು ರೀತಿಯ ವಿನಾಶಕರನ್ನು ಕಳುಹಿಸುತ್ತೇನೆ.’
ಇದು ಯೆಹೋವನ ನುಡಿ.
‘ಅವರನ್ನು ಕೊಲೆಮಾಡಲು ಖಡ್ಗಧಾರಿಗಳಾದ ಶತ್ರುಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ಎಳೆದುಕೊಂಡು ಹೋಗುವುದಕ್ಕಾಗಿ ನಾಯಿಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ತಿನ್ನಲು ಮತ್ತು ನಾಶಮಾಡಲು
ಗಾಳಿಯಲ್ಲಿ ಹಾರಾಡುವ ಪಕ್ಷಿಗಳನ್ನೂ ಕಾಡುಪ್ರಾಣಿಗಳನ್ನೂ ಕಳುಹಿಸುತ್ತೇನೆ.
4 ಯೆಹೂದದ ಜನರನ್ನು ಭೂಲೋಕದ ಎಲ್ಲಾ ಜನರಿಗೆ
ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ.
ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕೃತ್ಯಗಳ ಫಲವಾಗಿ
ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ.
ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು.
ಮನಸ್ಸೆಯು ಯೆಹೂದದ ರಾಜನಾಗಿದ್ದನು.’
5 “ಜೆರುಸಲೇಮ್ ನಗರವೇ, ನಿನಗಾಗಿ ಯಾರೂ ವ್ಯಥೆಪಡುವದಿಲ್ಲ.
ನಿನಗಾಗಿ ದುಃಖಪಡುವುದಿಲ್ಲ ಮತ್ತು ಆಳುವುದಿಲ್ಲ.
ಯಾರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬಿಟ್ಟು ನಿನ್ನ ಯೋಗಕ್ಷೇಮವನ್ನು ವಿಚಾರಿಸಲು ಬರುವುದಿಲ್ಲ.
6 ಜೆರುಸಲೇಮೇ, ನೀನು ನನ್ನನ್ನು ತ್ಯಜಿಸಿದೆ”
ಇದು ಯೆಹೋವನ ನುಡಿ.
“ಮತ್ತೆಮತ್ತೆ ನೀನು ನನ್ನನ್ನು ತ್ಯಜಿಸಿದೆ.
ಆದ್ದರಿಂದ ನಾನು ನಿನ್ನನ್ನು ದಂಡಿಸುತ್ತೇನೆ ಮತ್ತು ನಾಶಮಾಡುತ್ತೇನೆ.
ನಿನಗೆ ಸಲ್ಲಬೇಕಾದ ಶಿಕ್ಷೆಯನ್ನು ಪುನಃ ತಡೆಹಿಡಿದು ನಾನು ದಣಿದಿದ್ದೇನೆ.
7 ಯೆಹೂದದ ಜನರನ್ನು ನಾನು ಕವೆಗೋಲಿನಿಂದ ವಿಂಗಡಿಸಿದ
ದೇಶದ ಎಲ್ಲಾ ನಗರಗಳ ದ್ವಾರದಲ್ಲಿ ಚದರಿಸುತ್ತೇನೆ.
ನನ್ನ ಜನರು ಬದಲಾಗಲಿಲ್ಲ.
ನಾನು ಅವರನ್ನು ನಾಶಮಾಡುತ್ತೇನೆ.
ನಾನು ಅವರ ಮಕ್ಕಳನ್ನು ಕಸಿದುಕೊಳ್ಳುತ್ತೇನೆ.
8 ಅನೇಕ ಹೆಂಗಸರು ತಮ್ಮ ಗಂಡಂದಿರನ್ನು ಕಳೆದುಕೊಳ್ಳುವರು.
ಸಮುದ್ರದಡದಲ್ಲಿದ್ದ ಮರಳು ಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು.
ಮಧ್ಯಾಹ್ನದಲ್ಲಿಯೇ ನಾನು ಬಾತುಕನನ್ನು ತರುವೆನು.
ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು.
ನಾನು ಯೆಹೂದದ ಜನರಿಗೆ ನೋವನ್ನು ಮತ್ತು ಭಯವನ್ನು ತರುವೆನು;
ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
9 ಶತ್ರುಗಳು ಖಡ್ಗಧಾರಿಗಳಾಗಿ ಬಂದು ಜನರ ಮೇಲೆರಗಿ ಕೊಲೆಮಾಡುವರು.
ಯೆಹೂದದಲ್ಲಿ ಜೀವಂತ ಉಳಿದವರನ್ನು ಅವರು ವಧಿಸುವರು.
ಒಬ್ಬ ಸ್ತ್ರೀಗೆ ಏಳು ಜನ ಮಕ್ಕಳಿದ್ದರೂ ಅವರೆಲ್ಲ ಸತ್ತುಹೋಗುವರು.
ಅವಳು ಅತ್ತೂಅತ್ತೂ ಬಳಲಿ ಉಸಿರಾಡದಂತಾಗುವಳು.
ಅವಳು ಕಳವಳಪಡುವಳು ಮತ್ತು ಗಾಬರಿಗೊಳ್ಳುವಳು.
ಪ್ರಕಾಶಮಯವಾದ ದಿನವು ದುಃಖದ ನಿಮಿತ್ತ ಅವಳಿಗೆ ಕತ್ತಲಾಗುವುದು.”
ಯೆರೆಮೀಯನು ಪುನಃ ದೇವರಲ್ಲಿ ದೂರುತ್ತಾನೆ
10 ನನ್ನ ತಾಯೀ, ನೀನು ಜನ್ಮಕೊಟ್ಟಿದ್ದಕ್ಕಾಗಿ
ನನಗೆ ದುಃಖವಾಗುತ್ತದೆ.
ಯೆರೆಮೀಯನಾದ ನಾನು ಇಡೀ ದೇಶದ ಜನರ ವಿರುದ್ಧವಾಗಿ
ವಾದಿಸುತ್ತಾ ನಿಂದಿಸುತ್ತಾ ಇರುವೆ.
ನಾನು ಯಾರಿಗೂ ಸಾಲವನ್ನು ಕೊಟ್ಟಿಲ್ಲ; ಸಾಲವನ್ನು ತೆಗೆದುಕೊಂಡಿಲ್ಲ.
ಆದರೆ ಪ್ರತಿಯೊಬ್ಬರು ನನ್ನನ್ನು ಶಪಿಸುತ್ತಾರೆ.
11 ದೇವರೇ, ನಿಜವಾಗಿಯೂ ನಾನು ನಿನ್ನ ಸೇವೆಯನ್ನು ಚೆನ್ನಾಗಿ ಮಾಡಿದ್ದೇನೆ.
ಕಷ್ಟದ ಕಾಲದಲ್ಲಿ ನನ್ನ ವೈರಿಗಳ ಬಗ್ಗೆ ನಾನು ನಿನ್ನಲ್ಲಿ ಪ್ರಾರ್ಥಿಸಿದ್ದೇನೆ.[c]
ಯೆರೆಮೀಯನಿಗೆ ದೇವರ ಉತ್ತರ
12 “ಯೆರೆಮೀಯನೇ, ಕಬ್ಬಿಣದ ತುಂಡನ್ನು ಪುಡಿ ಮಾಡಲು
ಯಾರಿಗೂ ಸಾಧ್ಯವಿಲ್ಲವೆಂಬುದು ನಿನಗೆ ಗೊತ್ತು.
ಉತ್ತರದಿಂದ[d] ಬರುವವನು ಕಬ್ಬಿಣದಂತಿದ್ದಾನೆ.
13 ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ.
ಆ ಭಂಡಾರಗಳನ್ನು ನಾನು ಬೇರೆಯವರಿಗೆ ಒಪ್ಪಿಸುತ್ತೇನೆ.
ಬೇರೆಯವರು ಆ ಭಂಡಾರಗಳನ್ನು ಹಣ ಕೊಟ್ಟು ತೆಗೆದುಕೊಳ್ಳಬೇಕಾಗಿಲ್ಲ.
ನಾನು ಅವರಿಗೆ ಅವುಗಳನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆ.
ಏಕೆಂದರೆ ಯೆಹೂದವು ಅನೇಕ ಪಾಪಗಳನ್ನು ಮಾಡಿದೆ.
ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪಮಾಡಿದೆ.
14 ಯೆಹೂದದ ಜನರೇ, ನಾನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವೆನು.
ಅವರು ನೀವೆಂದೂ ತಿಳಿಯದ ಪ್ರದೇಶದಿಂದ ಬಂದು ನಿಮ್ಮನ್ನು ಅಲ್ಲಿಗೆ ಸಾಗಿಸುವರು.
ನನಗೆ ಅತಿಕೋಪ ಬಂದಿದೆ.
ನನ್ನ ಕೋಪವು ಜ್ವಾಲೆಯಂತಿದೆ.
ಆ ಜ್ವಾಲೆಯಿಂದ ನೀವು ಸುಟ್ಟುಹೋಗುವಿರಿ.”
15 ಯೆಹೋವನೇ, ನನ್ನ ವಿಷಯ ನಿನಗೆ ಗೊತ್ತು.
ನನ್ನನ್ನು ಜ್ಞಾಪಕದಲ್ಲಿಟ್ಟುಕೊಂಡು ರಕ್ಷಿಸು.
ಜನರು ನನ್ನನ್ನು ತೊಂದರೆಗೀಡು ಮಾಡುತ್ತಿದ್ದಾರೆ.
ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು.
ನೀನು ಅವರೊಂದಿಗೆ ಬಹಳ ತಾಳ್ಮೆಯಿಂದ ವರ್ತಿಸುತ್ತಿರುವೆ.
ಅವರೊಂದಿಗೆ ತಾಳ್ಮೆಯಿಂದ ಇದ್ದು ನನ್ನನ್ನು ಹಾಳುಮಾಡಬೇಡ.
ನನ್ನ ಬಗ್ಗೆ ವಿಚಾರ ಮಾಡು.
ಯೆಹೋವನೇ, ನಿನಗಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆ ಎಂಬುದನ್ನು ಯೋಚಿಸು.
16 ನಿನ್ನ ಸಂದೇಶ ನನಗೆ ಬಂದಿತು.
ನಾನು ನಿನ್ನ ಮಾತುಗಳನ್ನು ಆಹಾರವನ್ನಾಗಿ ಮಾಡಿಕೊಂಡೆ.
ನಿನ್ನ ಸಂದೇಶದಿಂದ ನನಗೆ ತುಂಬಾ ಸಂತೋಷವಾಯಿತು.
ನಿನ್ನನ್ನು ಹೆಸರಿಡಿದು ಕರೆಯುವುದರಿಂದ ನನಗೆ ಹೆಚ್ಚಿನ ಸಂತೋಷವಾಗಿತ್ತು.
ನಿನ್ನ ಹೆಸರು ಸರ್ವಶಕ್ತನಾದ ಯೆಹೋವನು.
17 ತಮಾಷೆ ಮಾಡಿಕೊಂಡು ನಗುತ್ತಲಿದ್ದ
ಗುಂಪಿನಲ್ಲಿ ನಾನೆಂದೂ ಸೇರಲಿಲ್ಲ.
ನನ್ನ ಮೇಲೆ ಆದ ನಿನ್ನ ಪ್ರಭಾವದಿಂದ ನಾನೊಬ್ಬನೇ ಕುಳಿತುಕೊಂಡಿರುತ್ತಿದ್ದೆ.
ನನ್ನ ಸುತ್ತಮುತ್ತಲಿನ ದುಷ್ಟತನದ ಮೇಲೆ ನನ್ನಲ್ಲಿ ರೋಷವನ್ನು ತುಂಬಿದೆ.
18 ಹೀಗಿದ್ದರೂ ನನಗೇಕೆ ವ್ಯಥೆ ಉಂಟಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನನ್ನ ಗಾಯ ಏಕೆ ಗುಣವಾಗುತ್ತಿಲ್ಲ? ಏಕೆ ವಾಸಿಯಾಗುತ್ತಿಲ್ಲ ಎಂಬುದು ನನಗೆ ತಿಳಿಯದು.
ಯೆಹೋವನೇ, ನಿನ್ನಲ್ಲಿ ಬದಲಾವಣೆಯಾಗಿದೆ ಎಂದು ನನಗೆ ಅನಿಸುತ್ತಿದೆ.
ನೀನು ಪ್ರವಾಹ ನಿಂತುಹೋದ ನೀರಿನ ಬುಗ್ಗೆಯಂತಿರುವೆ.
19 ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನಾನು ನಿನ್ನನ್ನು ದಂಡಿಸುವುದಿಲ್ಲ.
ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನೀನು ನನ್ನ ಸೇವೆ ಮಾಡಬಹುದು.
ಹುರುಳಿಲ್ಲದ ಮಾತುಗಳನ್ನು ಬಿಟ್ಟು ಮುಖ್ಯವಾದ ವಿಷಯಗಳನ್ನು ಕುರಿತು ಮಾತನಾಡುವದಾದರೆ
ನೀನು ನನ್ನ ಪರವಾಗಿ ಮಾತನಾಡಬಹುದು.
ಯೆರೆಮೀಯನೇ, ಯೆಹೂದದ ಜನರು
ಬದಲಾವಣೆ ಹೊಂದಿ ನಿನ್ನಲ್ಲಿಗೆ ಬರಬೇಕು.
ಆದರೆ ನೀನು ಬದಲಾವಣೆ ಹೊಂದಿ ಅವರಂತೆ ಆಗಬಾರದು.
20 ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುತ್ತೇನೆ.
ನೀನು ತಾಮ್ರದ ಗೋಡೆಯಂತೆ ಗಟ್ಟಿಯಾಗಿರುವೆ
ಎಂದು ಆ ಜನರು ತಿಳಿದುಕೊಳ್ಳುವರು.
ಯೆಹೂದದ ಜನರು ನಿನ್ನ ವಿರುದ್ಧ ಹೋರಾಡುವರು.
ಆದರೆ ಅವರು ನಿನ್ನನ್ನು ಸೋಲಿಸಲಾರರು.
ಏಕೆಂದರೆ ನಾನೇ ನಿನ್ನ ಜೊತೆಯಲ್ಲಿ ಇದ್ದೇನೆ.
ನಾನು ನಿನಗೆ ಸಹಾಯಮಾಡುತ್ತೇನೆ ಮತ್ತು ನಾನು ನಿನ್ನನ್ನು ರಕ್ಷಿಸುತ್ತೇನೆ.”
ಇದು ಯೆಹೋವನಿಂದ ಬಂದ ನುಡಿ.
21 “ನಾನು ನಿನ್ನನ್ನು ಆ ದುಷ್ಟ ಜನರಿಂದ ರಕ್ಷಿಸುತ್ತೇನೆ.
ಆ ಜನರು ನಿನ್ನನ್ನು ಬೆದರಿಸುತ್ತಾರೆ.
ಆದರೆ ನಾನು ನಿನ್ನನ್ನು ಆ ಜನರಿಂದ ರಕ್ಷಿಸುತ್ತೇನೆ.”
ವಿಪತ್ತಿನ ದಿನ
16 ನನಗೆ ಯೆಹೋವನಿಂದ ಈ ಸಂದೇಶ ಬಂದಿತು: 2 “ಯೆರೆಮೀಯನೇ, ನೀನು ಮದುವೆ ಮಾಡಿಕೊಳ್ಳಬಾರದು. ನೀನು ಇಲ್ಲಿ ಮಕ್ಕಳನ್ನು ಹೊಂದಬಾರದು.”
3 ಯೆಹೂದ ಪ್ರದೇಶದಲ್ಲಿ ಹುಟ್ಟಿದ ಮಕ್ಕಳ ಕುರಿತಾಗಿಯೂ ಅದರ ತಂದೆತಾಯಿಗಳ ಕುರಿತಾಗಿಯೂ ಯೆಹೋವನು ಹೀಗೆ ಹೇಳುತ್ತಾನೆ. 4 “ಅವರು ಒಂದು ಭಯಾನಕವಾದ ರೀತಿಯಲ್ಲಿ ಮರಣಹೊಂದುತ್ತಾರೆ. ಅವರನ್ನು ಯಾರೂ ಹೂಳುವುದಿಲ್ಲ. ಅವರ ದೇಹಗಳು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುತ್ತವೆ. ಅವರು ವೈರಿಗಳ ಖಡ್ಗಗಳಿಂದ ಮಡಿಯುವರು. ಅವರು ಅನ್ನವಿಲ್ಲದೆ ಸಾಯುವರು. ಅವರ ಶವಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೇಲಿನ ಕಾಡುಪ್ರಾಣಿಗಳಿಗೂ ಆಹಾರವಾಗುವವು.”
5 ಯೆಹೋವನು ಹೇಳಿದನು: “ಯೆರೆಮೀಯನೇ, ಜನರು ಶವಸಂಸ್ಕಾರದ ಊಟಮಾಡುತ್ತಿರುವ ಮನೆಯೊಳಗೆ ನೀನು ಹೋಗಬೇಡ. ಸತ್ತವರ ಸಂಗಡ ಅಳುವದಕ್ಕಾಗಲಿ ಅಥವಾ ನಿನ್ನ ದುಃಖವನ್ನು ಸೂಚಿಸುವದಕ್ಕಾಗಲಿ, ನೀನು ಅಲ್ಲಿಗೆ ಹೋಗಬೇಡ. ಏಕೆಂದರೆ ನಾನು ಅವರ ಮೇಲಿನ ನನ್ನ ಕೃಪೆಯನ್ನು ಹಿಂತೆಗೆದುಕೊಂಡಿದ್ದೇನೆ. ನಾನು ಯೆಹೂದದ ಈ ಜನರಿಗೆ ಕರುಣೆಯನ್ನು ತೋರಿಸುವದಿಲ್ಲ. ನಾನು ಅವರಿಗೋಸ್ಕರ ವ್ಯಥೆಪಡುವದಿಲ್ಲ.” ಇದು ಯೆಹೋವನ ನುಡಿ.
6 “ಯೆಹೂದದ ಪ್ರಮುಖರು ಮತ್ತು ಜನಸಾಮಾನ್ಯರು ಸತ್ತುಹೋಗುವರು. ಯಾರೂ ಅವರನ್ನು ಹೂಳುವದಿಲ್ಲ. ಅವರಿಗೋಸ್ಕರ ಗೋಳಾಡುವದಿಲ್ಲ. ಅವರ ಬಗ್ಗೆ ದುಃಖ ಸೂಚಿಸಲು ಯಾರೂ ತಮಗೆ ಗಾಯಗಳನ್ನು ಮಾಡಿಕೊಳ್ಳುವದಿಲ್ಲ; ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವದಿಲ್ಲ. 7 ಸತ್ತವರಿಗಾಗಿ ಗೋಳಾಡುವವರ ಸಲುವಾಗಿ ಯಾರೂ ಆಹಾರವನ್ನು ತರುವದಿಲ್ಲ. ತಾಯಿಯನ್ನಾಗಲಿ ತಂದೆಯನ್ನಾಗಲಿ ಕಳೆದುಕೊಂಡವರಿಗೆ ಯಾರೂ ಸಮಾಧಾನವನ್ನು ಹೇಳುವದಿಲ್ಲ. ಸತ್ತವರಿಗಾಗಿ ಅಳುವವರನ್ನು ಸಮಾಧಾನಪಡಿಸಲು ಯಾರೂ ಪಾನಪಾತ್ರೆಯನ್ನು ನೀಡುವದಿಲ್ಲ.
8 “ಯೆರೆಮೀಯನೇ, ಔತಣವನ್ನು ಏರ್ಪಡಿಸಿದ ಮನೆಗೆ ಹೋಗಬೇಡ. ಆ ಮನೆಗೆ ಹೋಗಿ ಊಟಮಾಡುತ್ತಾ ಪಾನಮಾಡುತ್ತಾ ಕುಳಿತುಕೊಳ್ಳಬೇಡ. 9 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ಉಲ್ಲಾಸಪಡುತ್ತಿದ್ದ ಜನರ ಧ್ವನಿಯನ್ನು ನಾನು ಬೇಗನೆ ನಿಲ್ಲಿಸಿಬಿಡುತ್ತೇನೆ. ಮದುವೆಯ ಸಮಾರಂಭಗಳಲ್ಲಿ ಜನರು ಮಾಡುವ ಸಂತೋಷ ಸಂಭ್ರಮದ ಧ್ವನಿಯನ್ನು ನಾನು ನಿಲ್ಲಿಸಿಬಿಡುತ್ತೇನೆ. ಇದು ನಿನ್ನ ಜೀವನಕಾಲದಲ್ಲಿಯೇ ಸಂಭವಿಸುತ್ತದೆ. ಇದೆಲ್ಲವನ್ನು ನಾನು ಬೇಗ ಮಾಡುತ್ತೇನೆ.’
10 “ಯೆರೆಮೀಯನೇ, ನೀನು ಈ ವಿಷಯವನ್ನು ಯೆಹೂದದ ಜನರಿಗೆ ಹೇಳಿದಾಗ ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ನಿರ್ಣಯಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಅವರು ಕೇಳುತ್ತಾರೆ. 11 ನೀನು ಅವರಿಗೆ ಹೀಗೆ ಹೇಳಬೇಕು: ‘ನಿಮ್ಮ ಪೂರ್ವಿಕರು ನನ್ನ ಉಪದೇಶದಂತೆ ನಡೆಯುವದನ್ನು ಬಿಟ್ಟುಬಿಟ್ಟರು’ ಎಂದು ದೇವರು ಹೇಳುತ್ತಾನೆ. ‘ಅವರು ನನ್ನ ಅನುಸರಣೆಯನ್ನು ಬಿಟ್ಟು ಬೇರೆ ದೇವರುಗಳನ್ನು ಅನುಸರಿಸಲು ಮತ್ತು ಸೇವಿಸಲು ಪ್ರಾರಂಭಿಸಿದರು. ಅವರು ಅನ್ಯದೇವರುಗಳನ್ನು ಪೂಜಿಸಿದರು. ನಿಮ್ಮ ಪೂರ್ವಿಕರು ನನ್ನನ್ನು ತ್ಯಜಿಸಿ ನನ್ನ ಧರ್ಮವಿಧಿಗಳನ್ನು ಮೀರಿದರು. 12 ನೀವು ನಿಮ್ಮ ಪೂರ್ವಿಕರಿಗಿಂತ ಭಯಂಕರವಾದ ಪಾಪವನ್ನು ಮಾಡಿದ್ದೀರಿ. ನೀವು ಬಹಳ ಮೊಂಡರಾಗಿದ್ದೀರಿ. ನೀವು ನಿಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದೀರಿ. ನೀವು ನನ್ನ ಆಜ್ಞೆಯನ್ನು ಪಾಲಿಸುತ್ತಿಲ್ಲ. 13 ಆದ್ದರಿಂದ ನಾನು ನಿಮ್ಮನ್ನು ಈ ದೇಶದ ಹೊರಗೆ ಎಸೆಯುತ್ತೇನೆ. ನೀವು ಪರದೇಶಕ್ಕೆ ಸೆರೆಹೋಗುವಂತೆ ಮಾಡುತ್ತೇನೆ. ನೀವು ಮತ್ತು ನಿಮ್ಮ ಪೂರ್ವಿಕರು ಎಂದೂ ನೋಡದ ಪ್ರದೇಶಕ್ಕೆ ನೀವು ಹೋಗುವಿರಿ. ಆ ಪ್ರದೇಶದಲ್ಲಿ ನೀವು ನಿಮ್ಮ ಮನಸ್ಸಿಗೆ ಬಂದಷ್ಟು ಸುಳ್ಳುದೇವತೆಗಳ ಸೇವೆಮಾಡಬಹುದು. ನಾನು ನಿಮಗೆ ಸಹಾಯವನ್ನೂ ಮಾಡುವದಿಲ್ಲ, ಯಾವ ರೀತಿಯ ಒಲವನ್ನೂ ತೋರುವದಿಲ್ಲ.’”
14 ಯೆಹೋವನು ಹೇಳಿದನು: “ಪ್ರಮಾಣ ಮಾಡಬೇಕಾದರೆ ಜನರು ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಜೀವದಾಣೆ’ ಎಂದು ಹೇಳುತ್ತಾರೆ. ಒಂದು ಕಾಲ ಬರಲಿದೆ. 15 ಆಗ ಅವರು ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಎಲ್ಲಾ ದೇಶಗಳಿಂದಲೂ ಹೊರತಂದ ಯೆಹೋವನ ಜೀವದಾಣೆ.’ ಇಸ್ರೇಲರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ದೇಶಕ್ಕೆ ಮತ್ತೆ ಕರೆದುಕೊಂಡು ಬರುವೆನು. ಆದ್ದರಿಂದಲೇ ಜನರು ಹೀಗೆ ಹೇಳುವರು.”
16 ಯೆಹೋವನು, “ನಾನು ಅನೇಕ ಮೀನುಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಮೀನುಗಾರರು ಯೆಹೂದದ ಜನರನ್ನು ಬಂಧಿಸುವರು. ಇದಾದ ಮೇಲೆ ನಾನು ಹಲವಾರು ಜನ ಬೇಟೆಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಬೇಟೆಗಾರರು[e] ಪ್ರತಿಯೊಂದು ಪರ್ವತ, ಬೆಟ್ಟ ಮತ್ತು ಬಂಡೆಗಳ ಸಂದುಗೊಂದುಗಳಲ್ಲಿ ಯೆಹೂದ್ಯರನ್ನು ಬೇಟೆಯಾಡುವರು. 17 ಅವರು ಮಾಡುವ ಪಾಪಕೃತ್ಯಗಳು ನನಗೆ ಕಾಣಿಸುತ್ತಿವೆ. ಯೆಹೂದದ ಜನರು ತಾವು ಮಾಡುವದನ್ನು ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವರ ಪಾಪವು ನನಗೆ ಗೊತ್ತಾಗುವುದು. 18 ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಯೆಹೂದದ ಜನರನ್ನು ಶಿಕ್ಷಿಸುತ್ತೇನೆ. ಪ್ರತಿಯೊಂದು ಪಾಪಕ್ಕಾಗಿ ನಾನು ಅವರನ್ನು ಎರಡು ಸಲ ಶಿಕ್ಷಿಸುತ್ತೇನೆ. ಅವರು ನನ್ನ ದೇಶವನ್ನು ‘ಹೊಲಸು’ ಮಾಡಿದ್ದಕ್ಕಾಗಿ ನಾನು ಹೀಗೆ ಮಾಡುತ್ತೇನೆ. ಅವರು ತಮ್ಮ ಭಯಂಕರವಾದ ವಿಗ್ರಹಗಳಿಂದ ನನ್ನ ಪ್ರದೇಶವನ್ನು ‘ಹೊಲಸು’ ಮಾಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ಆದರೆ ಅವರು ತಮ್ಮ ವಿಗ್ರಹಗಳಿಂದ ನನ್ನ ದೇಶವನ್ನು ತುಂಬಿಸಿಬಿಟ್ಟಿದ್ದಾರೆ.”
19 ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ.
ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ.
ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು.
ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು.
ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು.
ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.
20 ಜನರು ನಿಜವಾದ ದೇವರುಗಳನ್ನು ಮಾಡಬಲ್ಲರೇ?
ಇಲ್ಲ, ಅವರು ವಿಗ್ರಹಗಳನ್ನು ಮಾಡಬಹುದು.
ಆದರೆ ಆ ವಿಗ್ರಹಗಳು ನಿಜವಾದ ದೇವರುಗಳಲ್ಲ.
21 “ವಿಗ್ರಹಗಳನ್ನು ಮಾಡುವ ಜನರಿಗೆ ನಾನು ಪಾಠ ಕಲಿಸುತ್ತೇನೆ.
ಈಗಲೇ ನಾನು ಅವರಿಗೆ ನನ್ನ ಶಕ್ತಿಯ ಬಗ್ಗೆ ಮತ್ತು ನನ್ನ ಬಲದ ಬಗ್ಗೆ ಕಲಿಸುವೆನು.
ಆಗ ನಾನು ದೇವರೆಂಬುದು ಅವರಿಗೆ ತಿಳಿಯುವುದು.
ನಾನೇ ಯೆಹೋವನು ಎಂಬುದು ಅವರಿಗೆ ಗೊತ್ತಾಗುವುದು.
ಹೃದಯದ ಮೇಲೆ ಬರೆದ ಅಪರಾಧ
17 “ಯೆಹೂದದ ಜನರ ಅಪರಾಧ
ಅಳಿಸಲಾಗದ ಸ್ಥಳದಲ್ಲಿ ಬರೆಯಲಾಗಿದೆ.
ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಹೃದಯವೇ ಆ ಕಲ್ಲು,
ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಬುಗಳಲ್ಲಿ ಕೆತ್ತಿವೆ.
2 ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ
ಯಜ್ಞವೇದಿಕೆಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಅಶೇರಳಿಗೆ ಅರ್ಪಿಸಿದ
ಮರದ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಸೊಂಪಾಗಿ ಬೆಳೆದ ಮರದ ಕೆಳಗೆ
ಮತ್ತು ಬೆಟ್ಟಗಳ ಮೇಲೆ ಆ ವಸ್ತುಗಳನ್ನು ಜ್ಞಾಪಿಸಿಕೊಳ್ಳುವರು.
3 ಅವರು ಆ ವಸ್ತುಗಳನ್ನು ಬೆಟ್ಟಗಳ ಮೇಲೆಯೂ
ಬಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು.
ಯೆಹೂದದ ಜನರಲ್ಲಿ ಭಂಡಾರಗಳಿವೆ.
ನಾನು ಅವುಗಳನ್ನು ಬೇರೆಯವರಿಗೆ ಒಪ್ಪಿಸುತ್ತೇನೆ.
ನಿಮ್ಮ ದೇಶದಲ್ಲಿದ್ದ ಎಲ್ಲಾ ಉನ್ನತಸ್ಥಳಗಳನ್ನು ಜನರು ನಾಶಮಾಡುವರು.
ಆ ಸ್ಥಳಗಳಲ್ಲಿ ಪೂಜೆಮಾಡಿ
ನೀವು ಪಾಪಕ್ಕೆ ಗುರಿಯಾಗಿರುವಿರಿ.
4 ನಾನು ನಿಮಗೆ ಕೊಟ್ಟ ಭೂಮಿಯನ್ನು ನೀವು ಕಳೆದುಕೊಳ್ಳುವಿರಿ.
ನಿಮ್ಮನ್ನು ನಿಮಗೆ ತಿಳಿಯದ ನಾಡಿನಲ್ಲಿ ನಿಮ್ಮ ಶತ್ರುಗಳ ದಾಸರನ್ನಾಗಿ ಮಾಡುವೆನು.
ಏಕೆಂದರೆ ನನಗೆ ತುಂಬಾ ಕೋಪ ಬಂದಿದೆ.
ನನ್ನ ಕೋಪವು ಉರಿಯುವ ಜ್ವಾಲೆಯಂತಿದೆ; ನೀವು ಅದರಲ್ಲಿ ಭಸ್ಮವಾಗಿ ಹೋಗುವಿರಿ.”
ಜನರಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ
5 ಯೆಹೋವನು ಹೀಗೆ ಹೇಳಿದನು:
“ಕೇವಲ ಜನರನ್ನು ನಂಬಿದವರಿಗೆ ಕೇಡಾಗುವುದು.
ಮನುಷ್ಯರ ಬಲವನ್ನು ಆತುಕೊಂಡವರಿಗೆ ಕೇಡಾಗುವುದು.
ಯಾಕೆಂದರೆ ಅಂಥವರು ಯೆಹೋವನಲ್ಲಿ ನಂಬಿಕೆ ಇಡುವದನ್ನು ಬಿಟ್ಟುಬಿಟ್ಟಿರುತ್ತಾರೆ.
6 ಆ ಜನರು ನಿರ್ಜನವಾದ ಪ್ರದೇಶದಲ್ಲಿದ್ದ,
ಸುಡುವ ಬರಡು ಭೂಮಿಯಲ್ಲಿದ್ದ, ಬಂಜರು ಭೂಮಿಯಲ್ಲಿ ಬೆಳೆದ,
ದೇವರು ನೀಡಬಹುದಾದ ಒಳ್ಳೆಯ ವಸ್ತುಗಳ ಬಗ್ಗೆ
ಏನೂ ಅರಿಯದ ಒಂದು ಪೊದೆಯಂತಿರುತ್ತಾರೆ.
7 ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು.
ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿಕೊಡುವನು.
8 ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ,
ಆಳವಾಗಿ ಬೇರೂರಿ ನೀರಿನ ಸೆಲೆಗಳನ್ನು ತಲುಪಿರುವ,
ಉಷ್ಣಕ್ಕೆ ಹೆದರದ, ಯಾವಾಗಲೂ
ಹಸಿರೆಲೆಗಳಿಂದ ಸೊಂಪಾದ,
ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ,
ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.
9 “ಮನುಷ್ಯನ ಬುದ್ಧಿಯು ವಂಚನೆ ಮಾಡುತ್ತದೆ.
ಆ ಬುದ್ಧಿಯು ಅತೀ ವ್ಯಾಧಿಗ್ರಸ್ತವಾಗಿರಬಹುದು,
ಯಾರಿಂದಲೂ ಬುದ್ಧಿಯ ನಿಜವಾದ ಸ್ವರೂಪವನ್ನರಿಯಲಾಗುವದಿಲ್ಲ.
10 ನಾನೇ ಯೆಹೋವನು,
ನಾನು ಮನುಷ್ಯನ ಹೃದಯದ ಆಳವನ್ನು ನೋಡಬಲ್ಲೆ,
ಮನುಷ್ಯನ ಬುದ್ಧಿಯನ್ನು ಪರೀಕ್ಷಿಸಬಲ್ಲೆ.
ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನ್ನು ನಾನು ನಿರ್ಧರಿಸಬಲ್ಲೆ.
ಪ್ರತಿಯೊಬ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನ್ನು ಕೊಡುವೆನು.
11 ಕೆಲವು ಸಲ ಪಕ್ಷಿಯು
ತಾನು ಇಡದ ಮೊಟ್ಟೆಗೆ ಕಾವು ಕೊಡುತ್ತದೆ.
ಹಣಕ್ಕಾಗಿ ಮೋಸಮಾಡುವ ಮನುಷ್ಯನು
ಆ ಪಕ್ಷಿಯಂತಿರುವನು,
ಅವನು ತನ್ನ ಮಧ್ಯಪ್ರಾಯದಲ್ಲಿ
ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು.
ಅವನು ತನ್ನ ಅಂತ್ಯಕಾಲದಲ್ಲಿ
ಮೂರ್ಖನಾಗಿ ಕಂಡುಬರುವನು.”
12 ಆದಿಯಿಂದ ನಮ್ಮ ಪವಿತ್ರಾಲಯವು[f]
ಯೆಹೋವನ ಮಹತ್ವದ ಸಿಂಹಾಸವಾಗಿದೆ.
ಅದೊಂದು ಬಹಳ ಪ್ರಮುಖವಾದ ಸ್ಥಳವಾಗಿದೆ.
13 ಯೆಹೋವನೇ, ನೀನು ಇಸ್ರೇಲಿನ ಆಶಾಕಿರಣ,
ಯೆಹೋವನೇ, ನೀನು ಜೀವಜಲದ ಬುಗ್ಗೆಯಂತಿರುವೆ,
ಯಾರಾದರೂ ಯೆಹೋವನ ಅನುಸರಣೆಯನ್ನು ತ್ಯಜಿಸಿದರೆ
ಅವರ ಜೀವನ ಬಹಳ ಮೊಟಕಾಗುತ್ತದೆ.
ಯೆರೆಮೀಯನ ಮೂರನೆ ದೂರು
14 ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ
ನಿಜವಾಗಿಯೂ ನಾನು ಗುಣಹೊಂದುತ್ತೇನೆ.
ನನ್ನನ್ನು ರಕ್ಷಿಸು,
ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು.
ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.
15 ಯೆಹೂದದ ಜನರು ನನಗೆ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
“ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ?
ಆ ಸಂದೇಶವು ಸತ್ಯವಾಗುವುದನ್ನು ನಾವು ಈಗಲೇ ನೋಡೋಣ” ಎಂದು ಅವರನ್ನುತ್ತಾರೆ.
16 ಯೆಹೋವನೇ, ನಾನು ನಿನ್ನನ್ನು ಬಿಟ್ಟು ಓಡಿಹೋಗಲಿಲ್ಲ,
ನಾನು ನಿನ್ನನ್ನು ಅನುಸರಿಸಿದೆನು.
ನೀನು ಹೇಳಿದಂತೆ ನಾನು ಕುರುಬನಾದೆ.[g]
ಆ ಭಯಂಕರ ದಿನವು ಬರಲೆಂದು ನಾನು ಬಯಸಲಿಲ್ಲ.[h]
ಯೆಹೋವನೇ, ನಾನು ಹೇಳಿದ್ದೆಲ್ಲ ನಿನಗೆ ಗೊತ್ತಿದೆ.
ಈಗ ನಡೆಯುತ್ತಿರುವುದನ್ನೆಲ್ಲಾ ನೀನು ನೋಡುತ್ತಿರುವೆ.
17 ಯೆಹೋವನೇ, ನನ್ನನ್ನು ಹಾಳುಮಾಡಬೇಡ.
ಕಷ್ಟ ಕಾಲದಲ್ಲಿ ನಾನು ನಿನ್ನನ್ನೇ ಅವಲಂಭಿಸಿರುತ್ತೇನೆ.
18 ಜನರು ನನ್ನನ್ನು ಹಿಂಸಿಸುತ್ತಿದ್ದಾರೆ.
ಆ ಜನರು ಲಜ್ಜೆಪಡುವಂತೆ ಮಾಡು.
ನನ್ನನ್ನು ನಿರಾಶೆಗೊಳಿಸಬೇಡ.
ಆ ಜನರಿಗೆ ಭೀತಿಯುಂಟಾಗಲಿ,
ಆದರೆ ನನಗೆ ಭಯವಾಗುವಂತೆ ಮಾಡಬೇಡ.
ನನ್ನ ವೈರಿಗಳಿಗೆ ಭಯಂಕರವಾದ ವಿನಾಶದ ದಿನವು ಬರುವಂತೆ ಮಾಡು.
ಅವರನ್ನು ಮುರಿದುಬಿಡು, ಮತ್ತೆಮತ್ತೆ ಮುರಿದುಬಿಡು.
ಸಬ್ಬತ್‌ದಿನವನ್ನು ಪವಿತ್ರವಾಗಿಡಬೇಕು
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ನೀನು ಹೋಗಿ ಯೆಹೂದದ ರಾಜರು ಸಂಚರಿಸುವ ಜೆರುಸಲೇಮಿನ ಜನರ ದ್ವಾರದಲ್ಲಿ[i] ನಿಲ್ಲು. ಜನರಿಗೆ ನನ್ನ ಸಂದೇಶವನ್ನು ಹೇಳು. ಆಮೇಲೆ ಜೆರುಸಲೇಮಿನ ಎಲ್ಲಾ ದ್ವಾರಗಳಿಗೆ ಹೋಗಿ ಹಾಗೆಯೇ ಮಾಡು.
20 “ಆ ಜನರಿಗೆ ಹೇಳು, ‘ಯೆಹೋವನ ಸಂದೇಶವನ್ನು ಕೇಳಿರಿ. ಯೆಹೂದದ ರಾಜರೇ, ಕೇಳಿರಿ. ಯೆಹೂದದ ಎಲ್ಲಾ ಜನರೇ ಕೇಳಿರಿ. ಈ ದ್ವಾರಗಳಿಂದ ಜೆರುಸಲೇಮಿಗೆ ಬರುವ ಜನರೇ, ನಾನು ಹೇಳುವದನ್ನು ಕೇಳಿರಿ! 21 ಯೆಹೋವನು ಹೀಗೆ ಹೇಳುತ್ತಾನೆ, ಸಬ್ಬತ್ ದಿನದಂದು ನೀವು ಯಾವ ಹೊರೆಯನ್ನೂ ಹೊತ್ತುಕೊಂಡು ಹೋಗದಂತೆ ಎಚ್ಚರವಹಿಸಿರಿ. ಸಬ್ಬತ್‌ದಿನದಂದು ಯಾವ ಹೊರೆಯನ್ನೂ ಜೆರುಸಲೇಮಿನ ದ್ವಾರಗಳ ಮೂಲಕ ತರಬೇಡಿರಿ. 22 ಸಬ್ಬತ್‌ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ. ಆ ದಿನ ಯಾವ ಕೆಲಸವನ್ನೂ ಮಾಡಬೇಡಿರಿ. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನ್ನು ಕೊಟ್ಟೆ. 23 ಆದರೆ ನಿಮ್ಮ ಪೂರ್ವಿಕರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಅವರು ನನಗೆ ಗಮನಕೊಡಲಿಲ್ಲ. ನಿಮ್ಮ ಪೂರ್ವಿಕರು ತುಂಬಾ ಮೊಂಡರಾಗಿದ್ದರು. ನಾನು ಅವರನ್ನು ದಂಡಿಸಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ನನ್ನ ಮಾತನ್ನು ಕೇಳಲಿಲ್ಲ. 24 ಆದರೆ ನೀವು ಎಚ್ಚರಿಕೆಯಿಂದ ನನ್ನ ಆಜ್ಞೆಯನ್ನು ಪಾಲಿಸಬೇಕು.’” ಇದು ಯೆಹೋವನ ನುಡಿ. “‘ನೀವು ಸಬ್ಬತ್‌ದಿನದಂದು ಜೆರುಸಲೇಮಿನ ದ್ವಾರಗಳ ಮೂಲಕ ಯಾವ ಭಾರವನ್ನೂ ತರಬಾರದು. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ಆ ದಿನ ನೀವು ಯಾವ ಕೆಲಸವನ್ನೂ ಮಾಡಬಾರದು.
25 “‘ನೀವು ಈ ಆಜ್ಞೆಯನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಜೆರುಸಲೇಮಿನ ದ್ವಾರಗಳಿಂದ ಬರುತ್ತಾರೆ. ಆ ರಾಜರು ರಥಗಳಲ್ಲಿಯೂ ಅಶ್ವಾರೂಢರಾಗಿಯೂ ಬರುವರು. ಯೆಹೂದದ ಮತ್ತು ಜೆರುಸಲೇಮಿನ ಜನನಾಯಕರುಗಳು ಆ ರಾಜರ ಜೊತೆಯಲ್ಲಿ ಬರುವರು. ಜೆರುಸಲೇಮ್ ಪಟ್ಟಣದಲ್ಲಿ ಜನರು ಯಾವಾಗಲೂ ವಾಸವಾಗಿರುವರು. 26 ಜೆರುಸಲೇಮಿಗೆ ಯೆಹೂದದ ಪಟ್ಟಣಗಳಿಂದ ಜನರು ಬರುವರು. ಅದರ ಸುತ್ತಲೂ ಇದ್ದ ಸಣ್ಣಸಣ್ಣ ಹಳ್ಳಿಗಳಿಂದ ಜನರು ಜೆರುಸಲೇಮಿಗೆ ಬರುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಿಂದ ಜನರು ಬರುವರು. ಪಶ್ಚಿಮ ಬೆಟ್ಟಗಳ ಇಳಿಜಾರು ಪ್ರದೇಶದಿಂದ ಮತ್ತು ಬೆಟ್ಟಪ್ರದೇಶದಿಂದ ಜನರು ಬರುವರು. ನೆಗೆವ್ ಪ್ರದೇಶದಿಂದ ಜನರು ಬರುವರು. ಆ ಜನರೆಲ್ಲರು ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ಧಾನ್ಯನೈವೇದ್ಯಗಳನ್ನು, ಧೂಪವನ್ನು ಮತ್ತು ಕೃತಜ್ಞತಾಯಜ್ಞಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಬರುವರು.
27 “‘ನೀವು ನನ್ನ ಮಾತನ್ನು ಕೇಳದಿದ್ದರೆ ಮತ್ತು ನನ್ನ ಆಜ್ಞೆಯನ್ನು ಪಾಲಿಸದಿದ್ದರೆ ಕೇಡಾಗುವುದು. ಸಬ್ಬತ್‌ದಿನದಲ್ಲಿ ಹೊರೆಗಳನ್ನು ಹೊತ್ತುಕೊಂಡು ಜೆರುಸಲೇಮಿಗೆ ಹೋದರೆ ನೀವು ಆ ದಿನವನ್ನು ಪವಿತ್ರದಿನವೆಂದು ಆಚರಿಸಿದಂತೆ ಆಗುವುದಿಲ್ಲ. ಆಗ ನಾನು ನಂದಿಸಲಾಗದ ಬೆಂಕಿಯನ್ನು ಹೊತ್ತಿಸುತ್ತೇನೆ. ಆ ಬೆಂಕಿಯು ಜೆರುಸಲೇಮಿನ ದ್ವಾರಗಳಲ್ಲಿ ಪ್ರಾರಂಭವಾಗಿ ಅರಮನೆಗಳನ್ನು ಸುಡುವವರೆಗೂ ಉರಿಯುತ್ತಿರುವುದು.’”
Kannada Holy Bible: Easy-to-Read Version. All rights reserved. © 1997 Bible League International