Beginning
ಯೆಹೋವನ ಆಲಯದಲ್ಲಿ ಯೆರೆಮೀಯನ ಧರ್ಮೋಪದೇಶ
7 ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನ್ನು ಸಾರು:
“‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ಈ ದ್ವಾರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನ್ನು ಕೇಳಿರಿ. 3 ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನ್ನು ಬದಲಾಯಿಸಿರಿ; ಒಳ್ಳೆಯದನ್ನು ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ. 4 ಕೆಲವರು ಹೇಳುವ ಸುಳ್ಳುಗಳನ್ನು ನಂಬಬೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ. 5 ನೀವು ನಿಮ್ಮ ನಡತೆಯನ್ನು ಬದಲಾಯಿಸಿ ಸತ್ಕಾರ್ಯಗಳನ್ನು ಮಾಡಿದರೆ ನಾನು ನಿಮಗೆ ಈ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಬ್ಬರಿಗೊಬ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಬೇಕು. 6 ಅಪರಿಚಿತರೊಂದಿಗೂ ನೀವು ನ್ಯಾಯಬದ್ಧವಾಗಿ ವರ್ತಿಸಬೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನ್ನು ಮಾಡಬೇಕು. ನಿರ್ದೋಷಿಗಳ ಕೊಲೆ ಮಾಡಬಾರದು; ಅನ್ಯ ದೇವರುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. 7 ನೀವು ನನ್ನ ಆಜ್ಞೆಯನ್ನು ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಈ ಪ್ರದೇಶವನ್ನು ನಿಮ್ಮ ಪೂರ್ವಿಕರಿಗೆ ಶಾಶ್ವತವಾದ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ.
8 “‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ. 9 ನೀವು ಕದಿಯುವುದಿಲ್ಲವೇ? ಕೊಲೆಗಳನ್ನು ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ? 10 ನೀವು ಈ ಪಾಪಗಳನ್ನು ಮಾಡುತ್ತಿದ್ದರೂ ನನ್ನ ಹೆಸರಿನಿಂದ ಕರೆಯಲ್ಪಡುವ ಈ ಆಲಯದಲ್ಲಿ ನನ್ನ ಎದುರಿಗೆ ನಿಲ್ಲಬಹುದೆಂದು ಭಾವಿಸಿರುವಿರಾ? ನೀವು ನನ್ನ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನ್ನು ಮುಂದುವರಿಸಬಹುದೆಂದು ಭಾವಿಸಿರುವಿರಾ? 11 ಈ ಪವಿತ್ರ ಆಲಯವನ್ನು ನನ್ನ ಹೆಸರಿನಿಂದ ಕರೆಯಲಾಗಿದೆ. ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನ್ನೆಲ್ಲಾ ನೋಡುತ್ತಿದ್ದೇನೆ’” ಎಂಬುದು ಯೆಹೋವನಾದ ನನ್ನ ನುಡಿ.
12 “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ. 13 ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ. 14 ಆದ್ದರಿಂದ ನನ್ನ ಹೆಸರನ್ನು ಹೊಂದಿರುವ ಆಲಯವನ್ನೂ ನೀವು ನಂಬಿರುವ ಆಲಯವನ್ನೂ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನ್ನೂ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು. 15 ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನಿಂದ ದೂರ ಎಸೆದುಬಿಡುವೆನು.”
16 “ಯೆರೆಮೀಯನೇ, ನೀನು ಈ ಯೆಹೂದದ ಜನರಿಗಾಗಿ ಪ್ರಾರ್ಥಿಸಬೇಡ; ಇವರಿಗಾಗಿ ಮೊರೆಯಿಡಬೇಡ; ಇವರಿಗಾಗಿ ಬೇಡಿಕೊಳ್ಳಬೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನ್ನು ನಾನು ಕೇಳುವದಿಲ್ಲ. 17 ಆ ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತು. 18 ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌದೆಯನ್ನು ಆರಿಸುತ್ತಾರೆ. ತಂದೆಗಳು ಆ ಸೌಧೆಯಿಂದ ಬೆಂಕಿಯನ್ನು ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದಿ ಸ್ವರ್ಗದ ರಾಣಿಗಾಗಿ ಹೋಳಿಗೆಗಳನ್ನು ಮಾಡುತ್ತಾರೆ. ಈ ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ. ಅವರು ನನ್ನನ್ನು ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ. 19 ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡುಮಾಡುತ್ತಿಲ್ಲ, ಅವರು ತಮಗೇ ಕೇಡುಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು.
20 ಯೆಹೋವನು ಹೀಗೆಂದನು: “ನಾನು ಈ ಸ್ಥಳಕ್ಕೆ ವಿರೋಧವಾಗಿ ನನ್ನ ಕೋಪವನ್ನು ತೋರಿಸುವೆನು. ನಾನು ಜನರನ್ನೂ ಪ್ರಾಣಿಗಳನ್ನೂ ದಂಡಿಸುವೆನು. ಕಾಡಿನ ಮರಗಳನ್ನೂ ಹೊಲದ ಬೆಳೆಗಳನ್ನೂ ದಂಡಿಸುವೆನು. ನನ್ನ ಕೋಪವು ಉರಿಯುವ ಬೆಂಕಿಯಂತಿರುವದು; ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.”
ಯೆಹೋವನು ಯಜ್ಞಗಳಿಗಿಂತ ಹೆಚ್ಚಾಗಿ ವಿಧೇಯತೆಯನ್ನು ಅಪೇಕ್ಷಿಸುವನು
21 ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಬಂದಷ್ಟು ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಅರ್ಪಿಸಿರಿ. ಆ ಯಜ್ಞಗಳ ಮಾಂಸವನ್ನು ನೀವೇ ತಿನ್ನಿರಿ. 22 ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಬಗ್ಗೆಯಾಗಲಿ ಯಜ್ಞಗಳ ಬಗ್ಗೆಯಾಗಲಿ ಯಾವ ಆಜ್ಞೆಯನ್ನೂ ಕೊಟ್ಟಿಲ್ಲ. 23 ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.
24 “ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನ್ನೂ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಬರಲಿಲ್ಲ. 25 ನಿಮ್ಮ ಪೂರ್ವಿಕರು ಈಜಿಪ್ಟನ್ನು ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನ್ನ ಸೇವಕರನ್ನು ಕಳುಹಿಸಿದ್ದೇನೆ. ನನ್ನ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ. 26 ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನ್ನು ಮಾಡಿದರು.
27 “ಯೆರೆಮೀಯನೇ, ನೀನು ಈ ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.
ಸಂಹಾರದ ತಗ್ಗು
29 “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ[a] ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು. 30 ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ. 31 ಯೆಹೂದದ ಜನರು ಬೆನ್‌ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ. 32 ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು. 33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ. 34 ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಈ ಪ್ರದೇಶವು ಬರಿದಾದ ಮರಳುಗಾಡಾಗುವದು.”
8 ಯೆಹೋವನು ಹೀಗೆನ್ನುತ್ತಾನೆ: “ಆಗ ಜನರು ಯೆಹೂದದ ರಾಜರ ಮತ್ತು ಪ್ರಮುಖ ಅಧಿಪತಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಯಾಜಕರ ಮತ್ತು ಪ್ರವಾದಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಜೆರುಸಲೇಮಿನ ಎಲ್ಲಾ ಜನರ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. 2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.
3 “ಯೆಹೂದದ ಜನರು ತಮ್ಮ ಮನೆಗಳನ್ನು ಮತ್ತು ಪ್ರದೇಶವನ್ನು ಬಿಡುವಂತೆ ಮಾಡುತ್ತೇನೆ. ಆ ಜನರನ್ನು ಪರದೇಶಕ್ಕೆ ಒಯ್ಯಲಾಗುವುದು. ಯುದ್ಧದಲ್ಲಿ ಮರಣ ಹೊಂದದೆ ಅಳಿದುಳಿದ ಕೆಲವು ಮಂದಿ ಯೆಹೂದಿಯರು ತಾವು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವರು.” ಇದು ಯೆಹೋವನ ನುಡಿ.
ಪಾಪ ಮತ್ತು ಶಿಕ್ಷೆ
4 “ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.
“‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
5 ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
6 ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
7 ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.
8 “‘“ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ.
ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ.
ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
9 ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ.
ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’”
ಯೆಹೋವನ ನುಡಿಗಳಿವು.
13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ.
ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.
14 “ನಾವು ಇಲ್ಲಿ ಸುಮ್ಮನೆ ಕುಳಿತುಕೊಂಡಿರುವುದೇಕೆ?
ಬನ್ನಿ, ನಾವು ಭದ್ರವಾದ ಪಟ್ಟಣಗಳಿಗೆ ಓಡಿಹೋಗೋಣ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಸಾಯುವಂತೆ ಮಾಡಿದರೆ ಅಲ್ಲಿಯೇ ಸತ್ತುಹೋಗೋಣ.
ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ.
ಆದ್ದರಿಂದ ಆತನು ನಮಗೆ ಕುಡಿಯಲು ವಿಷಮಿಶ್ರಿತ ನೀರನ್ನು ಕೊಟ್ಟಿದ್ದಾನೆ.
15 ನಾವು ಶಾಂತಿಯನ್ನು ನಿರೀಕ್ಷಿಸಿದ್ದೆವು.
ಆದರೆ ಒಳ್ಳೆಯದೇನೂ ಆಗಲಿಲ್ಲ.
ಅವನು ನಮ್ಮನ್ನು ಗುಣಪಡಿಸುವ ಸಮಯಕ್ಕಾಗಿ ಕಾದುಕೊಂಡಿದ್ದೆವು.
ಆದರೆ ಕೇವಲ ವಿನಾಶ ಮಾತ್ರ ಬಂದಿತು.
16 ದಾನ್‌ಕುಲದವರ ಪ್ರದೇಶದಿಂದ
ನಾವು ಶತ್ರುಗಳ ಕುದುರೆಗಳ ಕೆನೆತವನ್ನು ಕೇಳುತ್ತಿದ್ದೇವೆ.
ಅವುಗಳ ಪಾದಗಳ ಬಡಿತದಿಂದ ಭೂಮಿ ನಡುಗುತ್ತಿದೆ.
ಅವರು ನಮ್ಮ ಪ್ರದೇಶವನ್ನು
ಮತ್ತು ಅಲ್ಲಿದ್ದ ಎಲ್ಲವನ್ನು ಹಾಳುಮಾಡಲು ಬಂದಿದ್ದಾರೆ.
ಅವರು ನಗರವನ್ನು ಮತ್ತು ಅಲ್ಲಿದ್ದ ಎಲ್ಲಾ ಜನರನ್ನು
ಹಾಳುಮಾಡಲು ಬಂದಿದ್ದಾರೆ.
17 “ಯೆಹೂದದ ಜನರೇ, ನಿಮ್ಮನ್ನು ಕಚ್ಚುವದಕ್ಕಾಗಿ ವಿಷಪೂರಿತ ಹಾವುಗಳನ್ನು ಕಳಿಸುತ್ತಿದ್ದೇನೆ.
ಆ ಹಾವುಗಳನ್ನು ತಡೆಯಲಾಗದು.
ಅವುಗಳು ನಿಮ್ಮನ್ನು ಕಚ್ಚುವವು.”
ಇದು ಯೆಹೋವನ ನುಡಿ.
18 ದೇವರೇ, ನಾನು ದುಃಖಿತನಾಗಿದ್ದೇನೆ, ಭಯಭೀತನಾಗಿದ್ದೇನೆ.
19 ನನ್ನ ಜನರ ಮೊರೆಯನ್ನು ಆಲಿಸು.
ದೇಶದ ಎಲ್ಲೆಡೆಯಲ್ಲಿಯೂ ಅವರು ಸಹಾಯಕ್ಕಾಗಿ ಕೂಗುತ್ತಿದ್ದಾರೆ.
“ಈಗಲೂ ಯೆಹೋವನು ಚೀಯೋನಿನಲ್ಲಿದ್ದಾನೆಯೇ?
ಚೀಯೋನಿನ ರಾಜನು ಈಗಲೂ ಅಲ್ಲಿದ್ದಾನೆಯೇ?” ಎಂದು ಅವರು ಕೇಳುತ್ತಾರೆ.
ದೇವರು ಹೀಗೆನ್ನುತ್ತಾನೆ: “ಯೆಹೂದದ ಜನರು ತಮ್ಮ ವಿಗ್ರಹಗಳನ್ನು ಪೂಜಿಸಿ ನನ್ನ ಕೋಪವನ್ನು ಏಕೆ ಕೆರಳಿಸುತ್ತಾರೆ?
ಅವರು ನಿಷ್ಪ್ರಯೋಜಕವಾದ ಅನ್ಯದೇವರ ವಿಗ್ರಹಗಳನ್ನು ಪೂಜಿಸಿದರು.”
20 “ಸುಗ್ಗಿಯ ಕಾಲ ಮುಗಿಯಿತು,
ಬೇಸಿಗೆ ಕಾಲ ಹೋಯಿತು,
ಆದರೆ ನಮಗಿನ್ನೂ ರಕ್ಷಣೆ ಆಗಲಿಲ್ಲ” ಎಂದು ಜನರು ಅನ್ನುತ್ತಾರೆ.
21 ನನ್ನ ಜನರು ಗಾಯಗೊಂಡಿದ್ದಾರೆ. ಆದ್ದರಿಂದ ನಾನೂ ಗಾಯಗೊಂಡಿದ್ದೇನೆ.
ಈಗ ಗಾಯಗೊಂಡ ಜನರ ಬಗ್ಗೆ ಯೋಚಿಸುತ್ತ ನಾನು ದುಃಖದಿಂದ ಮೌನವಾಗಿದ್ದೇನೆ.
22 ಗಿಲ್ಯಾದಿನಲ್ಲಿ ಖಂಡಿತವಾಗಿಯೂ ಔಷಧವಿದೆ.
ಖಂಡಿತವಾಗಿಯೂ ಅಲ್ಲಿ ಒಬ್ಬ ವೈದ್ಯನಿದ್ದಾನೆ.
ಆದರೆ ನನ್ನ ಜನರ ಗಾಯಗಳು ಗುಣವಾಗಲಿಲ್ಲವೇಕೆ?
9 ನನ್ನ ತಲೆಯಲ್ಲೆಲ್ಲ ನೀರು ತುಂಬಿಕೊಂಡಿದ್ದು,
ನನ್ನ ಕಣ್ಣುಗಳು ನೀರಿನ ಬುಗ್ಗೆಗಳಾಗಿದ್ದರೆ,
ನಾಶಮಾಡಲ್ಪಟ್ಟ ನನ್ನ ಜನರಿಗಾಗಿ ಹಗಲಿರುಳು ಗೋಳಾಡುತ್ತಿದ್ದೆ.
2 ಮರಳುಗಾಡಿನಲ್ಲಿ ನನಗೊಂದು ಸ್ಥಳವಿದ್ದಿದ್ದರೆ,
ಪ್ರಯಾಣಿಕರು ರಾತ್ರಿಯಲ್ಲಿ ತಂಗುವ ಮನೆ ಇದ್ದಿದ್ದರೆ,
ನಾನು ನನ್ನ ಜನರನ್ನು ಅಲ್ಲಿ ಬಿಟ್ಟು,
ಅವರಿಂದ ದೂರ ಹೋಗಬಹುದಾಗಿತ್ತು.
ಏಕೆಂದರೆ ಅವರೆಲ್ಲರೂ ದೇವರಿಗೆ ದ್ರೋಹ ಮಾಡುತ್ತಿದ್ದಾರೆ,
ಅವರೆಲ್ಲರೂ ಆತನಿಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
3 “ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಉಪಯೋಗಿಸುತ್ತಿದ್ದಾರೆ.
ಅವರ ಬಾಯಿಂದ ಬಾಣಗಳಂತೆ ಸುಳ್ಳುಗಳು ಬರುತ್ತಿವೆ.
ಈ ನಾಡಿನಲ್ಲಿ ಸತ್ಯವಲ್ಲ, ‘ಅಸತ್ಯ’ ಪ್ರಬಲವಾಗುತ್ತಿದೆ.
ಅವರು ಒಂದು ಪಾಪದಿಂದ ಮತ್ತೊಂದು ಪಾಪಕ್ಕೆ ಹೋಗುತ್ತಿದ್ದಾರೆ.
ಅವರು ನನ್ನನ್ನು ಅರಿತಿಲ್ಲ.”
ಯೆಹೋವನು ಈ ಮಾತನ್ನು ಹೇಳಿದನು.
4 “ನಿಮ್ಮ ನೆರೆಮನೆಯವರ ಬಗ್ಗೆ ಎಚ್ಚರವಹಿಸಿರಿ;
ನಿಮ್ಮ ಸ್ವಂತ ಸಹೋದರನನ್ನೂ ನಂಬಬೇಡಿ.
ಏಕೆಂದರೆ ಪ್ರತಿಯೊಬ್ಬ ಸಹೋದರನೂ ಮೋಸಗಾರನಾಗಿದ್ದಾನೆ.
ಪ್ರತಿಯೊಬ್ಬ ನೆರೆಯವನೂ ನಿಮ್ಮ ಮರೆಯಲ್ಲಿ ನಿಮ್ಮನ್ನು ನಿಂದಿಸುತ್ತಾನೆ.
5 ಪ್ರತಿಯೊಬ್ಬನೂ ತನ್ನ ನೆರೆಯವನಿಗೆ ಸುಳ್ಳು ಹೇಳುತ್ತಾನೆ.
ಒಬ್ಬನೂ ಸತ್ಯವನ್ನು ನುಡಿಯುವದಿಲ್ಲ.
ಯೆಹೂದದ ಜನರು ತಮ್ಮ ನಾಲಿಗೆಗಳಿಗೆ
ಸುಳ್ಳು ಹೇಳುವದನ್ನು ಕಲಿಸಿದ್ದಾರೆ.
ಅವರು ಹಿಂತಿರುಗಿ ಬರಲು
ಆಯಾಸವಾಗುವಷ್ಟು ಪಾಪಗಳನ್ನು ಮಾಡಿದ್ದಾರೆ.
6 ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನ್ನು ಹಿಂಬಾಲಿಸಿ ಬಂದಿತು.
ಒಂದು ಸುಳ್ಳು ಇನ್ನೊಂದು ಸುಳ್ಳನ್ನು ಹಿಂಬಾಲಿಸಿತು.
ಜನರು ನನ್ನನ್ನು ಅರಿತುಕೊಳ್ಳಲಿಲ್ಲ.”
ಯೆಹೋವನು ಆ ಮಾತುಗಳನ್ನು ಹೇಳಿದನು.
7 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಜನರು ಲೋಹವನ್ನು ಪುಟಕ್ಕಿಟ್ಟು ಪರೀಕ್ಷಿಸುವಂತೆ
ನಾನು ಯೆಹೂದದ ಜನರನ್ನು ಪರೀಕ್ಷಿಸುತ್ತೇನೆ.
ನನಗೆ ಬೇರೆ ಮಾರ್ಗವೇ ಇಲ್ಲ.
ನನ್ನ ಜನರು ಪಾಪವನ್ನು ಮಾಡಿದ್ದಾರೆ.
8 ಯೆಹೂದದ ಜನರ ನಾಲಿಗೆಗಳು ಚೂಪಾದ ಬಾಣಗಳಂತಿವೆ.
ಅವರ ಬಾಯಿಗಳು ಸುಳ್ಳಾಡುತ್ತವೆ.
ಪ್ರತಿಯೊಬ್ಬನು ತನ್ನ ನೆರೆಮನೆಯವನೊಂದಿಗೆ ನಯವಾಗಿ ಮಾತನಾಡುತ್ತಾನೆ.
ರಹಸ್ಯವಾಗಿ ತನ್ನ ನೆರೆಮನೆಯವನನ್ನು ಆಕ್ರಮಣಮಾಡಲು ಯುಕ್ತಿ ಮಾಡುತ್ತಿರುತ್ತಾನೆ.
9 ಹೀಗಿರಲು ನಾನು ಯೆಹೂದದ ಜನರನ್ನು ಶಿಕ್ಷಿಸಬಾರದೇ?”
ಇದು ದೇವರಿಂದ ಬಂದ ಮಾತು.
“ಅಂಥಾ ಜನರನ್ನು ನಾನು ಶಿಕ್ಷಿಸಬೇಕೆಂಬುದು ನಿನಗೆ ಗೊತ್ತು.
ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.”
10 ನಾನು ಪರ್ವತಗಳಿಗಾಗಿ ಗಟ್ಟಿಯಾಗಿ ಅಳುವೆನು;
ಬರಿದಾದ ಹೊಲಗಳಿಗಾಗಿ ಶೋಕಗೀತೆಯನ್ನು ಹಾಡುವೆನು.
ಏಕೆಂದರೆ ಅಲ್ಲಿ ಸಜೀವ ವಸ್ತುಗಳಿಲ್ಲ.
ಯಾರೂ ಅಲ್ಲಿ ತಿರುಗಾಡುವದಿಲ್ಲ.
ಆ ಸ್ಥಳಗಳಲ್ಲಿ ದನಗಳ ಸದ್ದು ಕೇಳಿಸುವದಿಲ್ಲ.
ಪಕ್ಷಿಗಳು ಹಾರಿಹೋಗಿವೆ;
ಪ್ರಾಣಿಗಳು ಓಡಿಹೋಗಿವೆ.
11 “ನಾನು (ಯೆಹೋವನು) ಜೆರುಸಲೇಮ್ ನಗರವನ್ನು ಕಸದ ರಾಶಿಯನ್ನಾಗಿ ಮಾಡುವೆನು.
ಅದು ನರಿಗಳ ನಿವಾಸವಾಗುವದು.
ನಾನು ಯೆಹೂದ ಪ್ರಾಂತದ ನಗರಗಳನ್ನು ನಾಶಮಾಡುವೆನು.
ಅಲ್ಲಿ ಒಬ್ಬರೂ ವಾಸಮಾಡಲಾರರು.”
12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು?
ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು?
ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?
13 ಯೆಹೋವನು ಈ ಪ್ರಶ್ನೆಗಳಿಗೆ ಉತ್ತರಕೊಟ್ಟನು:
“ಏಕೆಂದರೆ ಯೆಹೂದದ ಜನರು ನನ್ನ ಉಪದೇಶವನ್ನು ಅನುಸರಿಸಲಿಲ್ಲ.
ನಾನು ಅವರಿಗೆ ಧರ್ಮೋಪದೇಶವನ್ನು ಕೊಟ್ಟರೂ
ಅವರು ನನ್ನ ಮಾತನ್ನು ಕೇಳಲು ಒಪ್ಪಲಿಲ್ಲ.
ಅವರು ನನ್ನ ಧರ್ಮೋಪದೇಶಗಳನ್ನು ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು.
ಅವರು ಹಟಮಾರಿಗಳಾಗಿದ್ದರು.
ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು.
ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”
15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು:
“ಯೆಹೂದದ ಜನರು ಕಹಿಯಾದ ಆಹಾರವನ್ನು ತಿನ್ನುವಂತೆ ನಾನು ಬೇಗನೆ ಮಾಡುವೆನು;
ಅವರು ವಿಷಮಿಶ್ರಿತ ನೀರನ್ನು ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನ್ನು ಬೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ.
ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ
ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು.
ನಾನು ಖಡ್ಗಧಾರಿಗಳಾದ ಜನರನ್ನು ಕಳುಹಿಸುತ್ತೇನೆ.
ಅವರು ಯೆಹೂದದ ಜನರನ್ನು ನಿರ್ಮೂಲವಾಗುವವರೆಗೆ ಕೊಲ್ಲುವರು.”
17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ,
ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.
18 ‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ.
ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು;
ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.
19 “ಚೀಯೋನಿನಿಂದ ಮಹಾಗೋಳಾಟವು ಕೇಳಿಸುತ್ತಿದೆ:
‘ನಿಜವಾಗಿಯೂ ನಾವು ಹಾಳಾಗಿಹೋದೆವು.
ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ.
ನಾವು ನಮ್ಮ ನಾಡನ್ನು ಬಿಡಬೇಕು,
ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.’”
20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ.
ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ.
ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ.
ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.
21 ಮೃತ್ಯುವು ಬಂದು ನಮ್ಮ ಕಿಟಕಿಗಳಿಂದ ಇಳಿದಿದೆ.
ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ.
ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.”
22 ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು:
“‘ಹೊಲಗಳಲ್ಲಿ ಗೊಬ್ಬರ ಬಿದ್ದಂತೆ ಹೆಣಗಳು ಬೀಳುವವು.
ಆ ಶವಗಳು ಹೊಲ ಕೊಯ್ಯುವವನ ಹಿಂದೆ
ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.’”
23 ಯೆಹೋವನು ಹೇಳುತ್ತಾನೆ,
“ಜ್ಞಾನಿಗಳು ತಮ್ಮ ಜ್ಞಾನದ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
ಬಲಶಾಲಿಗಳು ತಮ್ಮ ಬಲದ ಬಗ್ಗೆ
ಬಡಾಯಿಕೊಚ್ಚಿಕೊಳ್ಳಬಾರದು.
ಶ್ರೀಮಂತರು ತಮ್ಮ ಸಂಪತ್ತಿನ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
24 ಯಾವನಾದರೂ ಜಂಬಕೊಚ್ಚಿಕೊಳ್ಳಬೇಕಾದರೆ, ಅವನು ನನ್ನನ್ನು ಅರಿತಿರುವುದಾಗಿಯೂ
ನನ್ನನ್ನು ತಿಳಿದುಕೊಂಡಿರುವುದಾಗಿಯೂ ಜಂಬಪಡಲಿ.
ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಬಪಡಲಿ.
ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ,
ನಾನು ಭೂಲೋಕದಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ.
ಆಗ ನನಗೆ ಸಂತೋಷವಾಗುವುದು.”
ಇದು ಯೆಹೋವನ ನುಡಿ.
25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ. 26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International